ವ್ಯಸನ: ಆಯ್ಕೆಯ ವಿಚಾರವೇ?

ವ್ಯಸನ: ಆಯ್ಕೆಯ ವಿಚಾರವೇ?

ವ್ಯಸನ (addiction) ಎನ್ನುವುದು ಒಂದು ಸಂಕೀರ್ಣವಾದ ಸಮಸ್ಯೆ. ಇದು ದೈಹಿಕ, ಮಾನಸಿಕ, ಹಾಗು ಸಾಮಾಜಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ

ರೋಹಿತ್ ಕಾಲೇಜಿಗೆ ಸೇರಿದಾಗಿನಿಂದ ಧೂಮಪಾನ ಮಾಡಲು ಆರಂಭಿಸಿದ್ದ. ಅವನಿಗೆ ಹದಿಹರೆಯದ ಸ್ನೇಹಿತರ ಒಂದು ಬಳಗವಿತ್ತು, ಅವರೆಲ್ಲರೂ ಧೂಮಪಾನ ಮಾಡುತ್ತಿದ್ದರು. ರೋಹಿತ್ ಆ ಗೆಳೆಯರ ಗುಂಪಿನಲ್ಲೊಬ್ಬನಾಗಲು ಬಯಸಿ, ದಿನದಲ್ಲಿ ಒಂದು ಅಥವಾ ಎರಡು ಸಿಗರೇಟ್ ಸೇದಲು ಪ್ರಾರಂಭಿಸಿದ. ಆರು ತಿಂಗಳು ಕಳೆಯುವಷ್ಟರಲ್ಲಿ ಅವನು ಪ್ರತಿದಿನ ಒಂದು ಇಡೀ ಪ್ಯಾಕ್ ಸಿಗರೇಟ್ ಸೇದಲು ಆರಂಭಿಸಿದ್ದ. ಕ್ರಮೇಣ ಆತ ತರಗತಿಗಳಿಗೆ ಹಾಜರಾಗುವುದರಲ್ಲಿ, ಕಾಲೇಜಿನ ಅಸೈನ್ಮೆಂಟುಗಳಲ್ಲಿ ಮತ್ತು ಪರೀಕ್ಷೆಗಳ ಫಲಿತಾಂಶಗಳ ಕುರಿತಾದ ಆಸಕ್ತಿ, ಉತ್ಸಾಹಗಳನ್ನು ಕಳೆದುಕೊಂಡ.

ರಜಾದಿನಗಳಲ್ಲಿ ಮನೆಗೆ ಹೋದಾಗ ಅವನು ಬಯಸಿದಷ್ಟು ಸಿಗರೇಟ್ ಸೇದಲು ಸಾಧ್ಯವಾಗುತ್ತಿರಲಿಲ್ಲ. ಆಗ ಅವನಲ್ಲಿ ಕಿರಿಕಿರಿ, ಜಿಗುಪ್ಸೆ ಹಾಗೂ ಅಶಾಂತತೆಯ ಭಾವನೆಗಳು ಉಂಟಾಗುತ್ತಿದ್ದವು. ಸುಮ್ಮನೆ ಆಚೀಚೆ ಸುತ್ತುತ್ತಲಿದ್ದ. ಇದರಿಂದಾಗಿ ಅವನಿಗೆ ಸರಳವಾದ ಕೆಲಸಗಳತ್ತ ಕೂಡ ಗಮನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇವುಗಳಿಂದ ಹೊರಬರುವ ಸಲುವಾಗಿ ಮನೆಯಿಂದ ಗುಟ್ಟಾಗಿ ಹೊರಬಂದು ಸಿಗರೇಟ್ ಸೇದಲು ಪ್ರಯತ್ನಿಸುತ್ತಿದ್ದ.

ರಜಾದಿನಗಳ ಮಜವನ್ನು ಸವಿಯುವದಾಗಲಿ, ಮನೆಮಂದಿಯೊಂದಿಗೆ ಖುಷಿಯಾಗಿ ಸಮಯ ಕಳೆಯುವುದಾಗಲಿ ಅವನಿಂದ ಸಾಧ್ಯವಾಗುತ್ತಿರಲಿಲ್ಲ. ಮನೆಯವರ ಕಣ್ಣುತಪ್ಪಿಸಿ ಸಿಕ್ಕಿಬೀಳದ ಹಾಗೆ ಸಿಗರೇಟ್ ಸೇದುವುದು ಹೇಗೆ? ಕಾಲೇಜಿಗೆ ವಾಪಾಸ್ ಹೋಗಿ ಯಾವ ಕಟ್ಟುಪಾಡುಗಳಿಲ್ಲದೆ ಹೇಗೆ ಸಿಗರೇಟ್ ಸೇದುವುದು? ಮುಂತಾದ ಯೋಚನೆಗಳು ಆತನ ತಲೆಯಲ್ಲಿ ತುಂಬಿಕೊಂಡಿದ್ದವು. ಪಾಲಕರಿಗಂತೂ ತಮ್ಮ ಮಗ ಸಿಗರೇಟ್ ಚಟಕ್ಕೆ ಬಲಿಯಾಗಿದ್ದಾನೆ ಎಂಬ ಅರಿವೇ ಇರಲಿಲ್ಲ. ಹಾಜರಾತಿ (attendance) ಕಡಿಮೆ ಇದ್ದ ಕಾರಣ ಕಾಲೇಜಿನವರು ವರ್ಷದ ಕೊನೆಯಲ್ಲಿ ಪಾಲಕರನ್ನು ಕರೆಸಿ, ರೋಹಿತ್ ಗೆ ಅಟೆಂಡೆನ್ಸ್ ಕೊರತೆಯಿರುವುದರಿಂದ ಅವನು ಈ ವರ್ಷವನ್ನು ಮತ್ತೆ ಅದೇ ತರಗತಿಯಲ್ಲಿದ್ದು ಓದಬೇಕಾಗುತ್ತದೆ ಎಂದು ತಿಳಿಸಿದಾಗಲೇ ಪಾಲಕರಿಗೆ ಅವನು ಸಿಗರೇಟ್ ಚಟಕ್ಕೆ ಒಳಗಾಗಿದ್ದಾನೆ ಎಂದು ತಿಳಿದು ಆಘಾತವಾಗಿತ್ತು.

ನಿಜ ಜೀವನದಲ್ಲಿ ರೀತಿಯ ಸಮಸ್ಯೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದರ ಸಲುವಾಗಿ ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ.

ವ್ಯಸನಒಂದು ಮಾನಸಿಕ ಅಸ್ವಸ್ಥತೆ

ತಾತ್ಕಾಲಿಕ ಆನಂದ ನೀಡುವ ಮಾದಕ ದ್ರವ್ಯಗಳ (ಮದ್ಯ, ಸಿಗರೇಟ್, ಡ್ರಗ್ ಇತ್ಯಾದಿ) ಅವಲಂಬನೆಗೆ ಒಳಗಾಗುವುದನ್ನು ವ್ಯಸನ ಎನ್ನಬಹುದು. ಯಾವಾಗ ವ್ಯಕ್ತಿಗಳು ಮಾದಕ ವಸ್ತುಗಳಿಗೆ ದಾಸರಾಗುತ್ತಾರೋ ಆಗ ಅವರಿಗೆ ಬದುಕಿನ ಉಳಿದ ಅವಿಭಾಜ್ಯ ಅಂಗಗಳಾದ ಕುಟುಂಬ, ಸ್ನೇಹಿತರು ಮತ್ತು ಕೆಲಸದ ಜವಾಬ್ದಾರಿಗಳ ಬಗ್ಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಇದು ಅಂತಹ ವ್ಯಕ್ತಿಗಳಿಗೆ ಹಾಗೂ ಅವರ ಸುತ್ತಮುತ್ತಲಿನವರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ವ್ಯಸನವು ಜೀವವಿಜ್ಞಾನಕ್ಕೆ ಸಂಬಂಧಿಸಿದ ಮಿದುಳಿನ ಅಸ್ವಸ್ಥತೆ. ಇದರ ಮೇಲೆ ಮಾನಸಿಕ ಹಾಗು
ಸಾಮಾಜಿಕ ಅಂಶಗಳ ಪ್ರಭಾವ ಇರುತ್ತದೆ.

ಗಮನಿಸಿ: ವ್ಯಸನಕ್ಕೆ ಒಳಗಾದ ವ್ಯಕ್ತಿಗೆ ಜೀವನ ಮೌಲ್ಯಗಳಿರುವುದಿಲ್ಲ ಎಂಬ ಕಲ್ಪನೆಗಳು ತಪ್ಪು. ವ್ಯಸನವು ವಂಶವಾಹಿ ಮತ್ತು ಪರಿಸರದ ಕಾರಣದಿಂದಲೂ ಅಂಟಿಕೊಳ್ಳಬಹುದು. ಅದು ವ್ಯಕ್ತಿಯೊಬ್ಬನ ಆಯ್ಕೆ ಅಷ್ಟೇ ಅಲ್ಲ.

ವ್ಯಕ್ತಿಯೊಬ್ಬ ಯಾವ್ಯಾವ ರೀತಿಯಲ್ಲಿ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಬಹುದು?

ಮದ್ಯ, ನಿಕೋಟಿನ್ ಅಂಶವಿರುವ ಸಿಗರೇಟ್, ಡ್ರಗ್ಸ್ ರೀತಿಯ ಮಾದಕ ವಸ್ತುಗಳು ಮಾನವ ದೇಹಕ್ಕೆ ಹಾನಿ ಮಾಡುವ ರಾಸಾಯನಿಕ ಗುಣಗಳನ್ನು ಹೊಂದಿವೆ. ಈ ಮಾದಕ ವಸ್ತುಗಳನ್ನು ಸೇವನೆ ಮಾಡಿದಾಗ ಮಿದುಳು ಆನಂದದ ಭಾವನೆ ಉಂಟುಮಾಡುವ ಡೋಪಮಿನ್ ನರವಾಹಕವನ್ನು ಬಿಡುಗಡೆ ಮಾಡುತ್ತದೆ. ಇದರ ಪರಿಣಾಮವಾಗಿ ಸಿಗುವ ತಕ್ಷಣದ ಖುಷಿಗಾಗಿ ವ್ಯಕ್ತಿಯು ಮತ್ತೆ ಮತ್ತೆ ಮಾದಕ ವಸ್ತುಗಳನ್ನು ಸೇವಿಸುವಂತಾಗುತ್ತದೆ. ಯಾವಾಗ ವ್ಯಕ್ತಿಯು ಅವುಗಳಿಂದ ದೂರವಿರುತ್ತಾನೋ ಆಗ ಅದರೆಡೆಗಿನ ಸೆಳೆತ ಇನ್ನೂ ಅಧಿಕವಾಗುತ್ತದೆ. ಅಂತಹ ಸಂದರ್ಭದಲ್ಲಿ ಅದಕ್ಕಾಗಿ ಹಾತೊರೆಯಲಾರಂಭಿಸುತ್ತಾನೆ.

ವ್ಯಕ್ತಿಯು ಮಾದಕವಸ್ತುವನ್ನು ಬಳಸುತ್ತಹೋದಂತೆಲ್ಲ ಆ ಮಾದಕವಸ್ತುವಿಗೆ ಅವರ ದೇಹದ ಸಹನಾಶಕ್ತಿಯು ಹೆಚ್ಚುತ್ತಾ ಹೋಗುತ್ತದೆ. ಅದನ್ನು ಬಿಟ್ಟುಬಿಡಬೇಕೆಂಬ ಭಾವನೆಯ ಲಕ್ಷಣಗಳು ಅಧಿಕವಾದಂತೆಲ್ಲ ಅದನ್ನು ಸೇವಿಸಬೇಕೆಂಬ ಆಸೆ ಅಧಿಕವಾಗುತ್ತದೆ. ಮಾದಕ ವಸ್ತುವಿನ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎಂದು ಅವರು ಯೋಚಿಸ ತೊಡಗುತ್ತಾರೆ. ಆಹಾರ, ನೀರು ಮತ್ತು ಗಾಳಿಯಂತೆ ಮಾದಕ ದ್ರವ್ಯ ಬದುಕಿಗೆ ಅತ್ಯವಶ್ಯಕ ಎಂದು ಭಾವಿಸತೊಡಗುತ್ತಾರೆ. ಮಾದಕ ವಸ್ತುವಿನ ಬಗ್ಗೆ ಹೆಚ್ಚು ಧ್ಯಾನಿಸುತ್ತ, ಕೊನೆಗೆ ಕೆಲಸ, ಜವಾಬ್ದಾರಿ, ಕುಟುಂಬ ಹಾಗೂ ಸ್ನೇಹಿತರನ್ನು ನಿರ್ಲಕ್ಷಿಸುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಸಲಹಾಸೂತ್ರಗಳ ಪ್ರಕಾರ, ಮಾದಕ ವ್ಯಸನಕ್ಕೆ ಬಲಿಯಾದವರ ಬಗ್ಗೆ ಈ ರೀತಿಯಾಗಿ ಹೇಳಲಾಗುತ್ತದೆ:

  • ಮಾದಕ ವಸ್ತು ಸೇವಿಸಲೇಬೇಕೆಂಬ ಒತ್ತಡ ಅನುಭವಿಸುತ್ತಾರೆ.
  • ಅವರು ತಾವಾಗಿಯೇ ಮಾದಕ ವಸ್ತುಗಳ ಬಳಕೆಯನ್ನು ನಿಲ್ಲಿಸಲಾರರು (ಅಥವಾ ಬಳಕೆಯನ್ನು ಕಡಿಮೆ ಮಾಡಲಾರರು)
  • ಮುಂದಿನ ಡೋಸನ್ನು ಹೇಗೆ ಪಡೆಯುವುದು ಎನ್ನುವುದರ ಕುರಿತಾಗಿಯೇ ಯಾವಾಗಲೂ ಯೋಚಿಸುತ್ತಿರುತ್ತಾರೆ.

ವ್ಯಸನವನ್ನು ಹಾಗೂ ವ್ಯಸನದ ತೊಂದರೆಗಳನ್ನು ಉಲ್ಲೇಖಿಸಲು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಕೆಲವು ಮಾಹಿತಿಗಳು ಇಲ್ಲಿವೆ.

ವ್ಯಸನವು, ನಿರಂತರವಾದ ಹಾಗೂ ಮತ್ತೆ ಮತ್ತೆ ಮರುಕಳಿಸಬಹುದಾದ ಸ್ಥಿತಿಯಾಗಿದ್ದು, ಮಧುಮೇಹದಂತಹ ದೀರ್ಘಕಾಲೀನ ಅಸ್ವಸ್ಥತೆಯಂತೆ. ಇದನ್ನು ಪರಿಹರಿಸಲು ಮಧ್ಯಸ್ಥಿಕೆ ಮತ್ತು ನಿಯಂತ್ರಣ ರೂಪದ ಚಿಕಿತ್ಸೆ ಅತ್ಯಗತ್ಯ. ಒಂದು ಬಾರಿ ಚಿಕಿತ್ಸೆ ನೀಡುವುದರಿಂದ ವ್ಯಕ್ತಿಯು ಗುಣಮುಖರಾಗುತ್ತಾರೆ ಎಂದು ಪರಿಗಣಿಸಬಾರದು. ವ್ಯಸನ ಮರುಕಳಿಸುವ ಸಾಧ್ಯತೆಗಳಿವೆ. ವ್ಯಸನ ಮರುಕಳಿಸಿತು ಎಂದರೆ ಚಿಕಿತ್ಸೆ ವಿಫಲವಾಯಿತೆಂದಲ್ಲ; ಬದಲಿಗೆ ಆ ವ್ಯಕ್ತಿಗೆ ಮಾದಕ ವಸ್ತುವಿನ ವ್ಯಸನದಿಂದ ಹೊರಬರಲು ಹೆಚ್ಚಿನ ಸಹಾಯದ ಅಗತ್ಯವಿದೆ ಎಂದರ್ಥ.

ಸಾಮಾನ್ಯವಾದ ಮಾದಕ ವ್ಯಸನ ದ್ರವ್ಯಗಳು

ಭಾರತದಲ್ಲಿ ಮಾದಕ ದ್ರವ್ಯಗಳನ್ನು ಮೂರು ವಿಭಾಗಗಳಲ್ಲಿ ವರ್ಗೀಕರಿಸಬಹುದು.

  • ಕಾನೂನು ಬದ್ಧ ಮಾದಕ ವಸ್ತುಗಳು – ಮದ್ಯ ಮತ್ತು ತಂಬಾಕು/ಸಿಗರೇಟ್
  • ಅಕ್ರಮ ಮಾದಕ ವಸ್ತುಗಳು ಮತ್ತು ವಿನೋದ ಉಂಟು ಮಾಡುವ ಡ್ರಗ್ಸ್  
  • ಅಂಗಡಿಗಳಲ್ಲಿ ದೊರೆಯುವ ಅಥವಾ ವೈದ್ಯರು ಸೂಚಿಸಿದ ಔಷಧಗಳು

ಹವ್ಯಾಸ ಮತ್ತು ವ್ಯಸನದ ನಡುವಿನ ವ್ಯತ್ಯಾಸ

ವ್ಯಸನಶೀಲ ವ್ಯಕ್ತಿಯೊಬ್ಬ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಒಂದು ಮಾದಕ ವಸ್ತುವನ್ನು ಬಳಸಿ, ನಿಶೆಯ ಅನುಭವವನ್ನು ಪಡೆದುಕೊಳ್ಳಲು ಹಾತೊರೆಯುತ್ತಿದ್ದರೆ ಅವನು ಅದರ ಮೇಲೆ 'ಅವಲಂಬಿತನಾಗಿದ್ದಾನೆ' ಎಂದು ವೈದ್ಯರು ಹೇಳುತ್ತಾರೆ. ಮೊದಮೊದಲು ವ್ಯಕ್ತಿಯು ನಶೆ ಏರಲು ಒಂದು ಗ್ಲಾಸ್ ಮದ್ಯ ಕುಡಿಯುತ್ತಿದ್ದರೆ, ಕ್ರಮೇಣವಾಗಿ, ತಿಂಗಳುಗಳು ಕಳೆದಂತೆ, ಅಷ್ಟೇ ಪ್ರಮಾಣದ ನಶೆಗಾಗಿ ಮೂರು ಗ್ಲಾಸ್ ಮದ್ಯವನ್ನು ಸೇವಿಸಬೇಕಾಗಬಹುದು. ಅವಲಂಬನೆಯು (ಸಹಿಷ್ಣುತಾ ಸಾಮರ್ಥ್ಯದ ಹೆಚ್ಚಳ) ಹವ್ಯಾಸವೊಂದು ವ್ಯಸನವಾಗಿ ಬದಲಾಗುವ ಬಗ್ಗೆ ಎಚ್ಚರಿಕೆಯ ಮುನ್ಸೂಚನೆ.

ವ್ಯಸನವನ್ನು ಸೂಚಿಸುವ ಇನ್ನಿತರ ಕೆಲವು ಸೂಚಕಗಳು:

  • ವ್ಯಕ್ತಿಯು ಮಾದಕ ವಸ್ತುವಿನ ಬಗ್ಗೆ ಯಾವಾಗಲು ಯೋಚಿಸುತ್ತಿದ್ದರೆ- (ನಾನು ಮತ್ತೆ ಯಾವಾಗ ಕುಡಿಯುತ್ತೇನೆ/ಧೂಮಪಾನಮಾಡುತ್ತೇನೆ, ಇದರ ಬದಲಿಗೆ ಏನನ್ನು ತೆಗೆದುಕೊಳ್ಳಲಿ, ಅದನ್ನು ಎಲ್ಲಿಂದ ಪಡೆಯಲಿ, ಹೇಗೆ ಪಡೆಯಲಿ? ಇತ್ಯಾದಿ ಚಿಂತನೆಗಳು)

  • ವಿತ್ಡ್ರಾಯಲ್ ಸಿಂಪ್ಟಮ್ಸ್(withdrawal symptoms)- ವ್ಯಕ್ತಿಯು ಒಂದಷ್ಟು ದಿನ ಮಾದಕ ವಸ್ತುಗಳನ್ನು ಸೇವಿಸದೇ ಇದ್ದಾಗ ಅವರಲ್ಲಿ ನಡುಕ, ಕಿರಿಕಿರಿ, ತೀವ್ರ ಬಯಕೆ ಉಂಟಾಗಿ, ಮಾನಸಿಕ ಹಾಗು ಭಾವನಾತ್ಮಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ.

  •  ನಿಯಂತ್ರಣದ ಕೊರತೆ-  ಇಡೀ ದಿನ ಮಾದಕ ವಸ್ತುಗಳನ್ನು ತೆಗೆದುಕೊಳ್ಳದೇ ಇರಬೇಕೆಂದು ನಿರ್ಧರಿಸಿ, ಅದಕ್ಕೆ ಬದ್ಧರಾಗದೆ ವಿಫಲವಾಗುವುದು.

  • ಬಯಕೆ- ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ತೀವ್ರವಾದ ಬಯಕೆ

  • ನಿರಂತರ ಸೇವನೆಯಿಂದ ತನಗೆ ಹಾಗು ಸುತ್ತಮುತ್ತಲಿನವರಿಗೆ ತೊಂದರೆಯಾಗುವುದನ್ನು ತಿಳಿದಿದ್ದೂ ಅದನ್ನು ಮುಂದುವರಿಸುವುದು.

ಮಾದಕ ವಸ್ತುಗಳದುರುಪಯೋಗ’ ಮತ್ತು ವ್ಯಸನದ ನಡುವಿನ ವ್ಯತ್ಯಾಸವೇನು?

ದಿನಬಳಕೆಯ ಮಾತಿನಲ್ಲಿ ಹೇಳುವುದಾದರೆ, ವ್ಯಕ್ತಿಯು ಮಾದಕ ವಸ್ತುಗಳನ್ನು ವಿವೇಚನೆಯಿಲ್ಲದೆ ಬಳಸುವ ಕ್ರಮವನ್ನು ‘ಮಾದಕ ವಸ್ತುಗಳ ದುರುಪಯೋಗ’ ಎನ್ನಬಹುದು. ವ್ಯಕ್ತಿಯು ಒಂದು ನಿರ್ದಿಷ್ಟ ಮಾದಕವಸ್ತುವನ್ನು ಮಿತಿ ಮೀರಿದ ಪ್ರಮಾಣದಲ್ಲಿ ಅಥವಾ ಯಾವಾಗ ಬೇಕೆಂದರಾವಾಗ, ಎಲ್ಲಿಬೇಕೆಂದರಲ್ಲಿ ಸೇವಿಸುತ್ತಿರಬಹುದು.

ಒಂದು ನಿರ್ದಿಷ್ಟ ಮಾದಕವಸ್ತುವನ್ನು ದುರುಪಯೋಗ ಪಡಿಸಿಕೊಳ್ಳುವ ವ್ಯಕ್ತಿಯು ಅದರ ವ್ಯಸನಿಯಾಗಿರಬಹುದು ಅಥವಾ ಆಗಿಲ್ಲದೆಯೂ ಇರಬಹುದು. ಅಂತಹವರು ಎಷ್ಟು ಪ್ರಮಾಣದಲ್ಲಿ ಅದನ್ನು ಬಳಸಬೇಕು? ಯಾವಾಗ ಅದರ ಸೇವನೆಯನ್ನು ನಿಲ್ಲಿಸಬೇಕು? ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿರುತ್ತಾರೆ. ಮಾದಕ ವಸ್ತುಗಳ ಸೇವನೆ ಇಲ್ಲದೆಯೂ ಸಹಜವಾಗಿ ಕಾರ್ಯನಿರ್ವಹಿಸಲು ಸಮರ್ಥರಾಗಿರುತ್ತಾರೆ. ಹಾಗೆಂದ ಮಾತ್ರಕ್ಕೆ, ಮಾದಕ ವಸ್ತುಗಳನ್ನು ಉಪಯೋಗಿಸಬಹುದು, ಇದರಿಂದ ದೇಹಕ್ಕೆ, ಮನಸ್ಸಿಗೆ, ಕುಟುಂಬದವರಿಗೆ, ಯಾವ ತೊಂದರೆಯೂ ಆಗುವುದಿಲ್ಲ ಎಂದು ಭಾವಿಸಬಾರದು.

ವ್ಯಕ್ತಿಯು ಒಂದು ನಿರ್ದಿಷ್ಟ ಮಾದಕ ವಸ್ತುವಿನ ಮೇಲೆ ಅವಲಂಬಿತನಾದರೆ ವ್ಯಸನ ಎಂದು ಹೇಳುತ್ತಾರೆ. ವ್ಯಸನವು ದೀರ್ಘ ಕಾಲದ, ಮತ್ತೆ ಮತ್ತೆ ಮರುಕಳಿಸುವ ಒಂದು ಅಸ್ವಸ್ಥತೆ. ಮಾದಕದ್ರವ್ಯದ ಬಳಕೆಯು ಮಿದುಳಿನಲ್ಲಿ ಬದಲಾವಣೆಗಳನ್ನು ಉಂಟುಮಾಡಿ, ವ್ಯಕ್ತಿಯು ಅದರಿಂದ ಹೊರಬರಲು ಕಷ್ಟಪಡುತ್ತಾರೆ.

ಗಮನಿಸಿ: ಮಾದಕವಸ್ತುಗಳ ದುರುಪಯೋಗ ಮತ್ತು ವ್ಯಸನ, ಇವೆರಡೂ ಕೂಡ ವ್ಯಕ್ತಿಗೆ ತೊಂದರೆಯನ್ನು ಉಂಟುಮಾಡುತ್ತದೆ.

ವ್ಯಸನವನ್ನು ಮಾನಸಿಕ ಅಸ್ವಸ್ಥತೆ ಎಂದು ಏಕೆ ಪರಿಗಣಿಸಲಾಗುತ್ತದೆ?

ಮಾದಕ ದ್ರವ್ಯಗಳನ್ನು ಮತ್ತೆ ಮತ್ತೆ ಬಳಸುವುದರಿಂದ ಅಂತಹವರ ಮಿದುಳಿನ ಕಾರ್ಯಕ್ಷಮತೆಯಲ್ಲಿ ಬದಲಾವಣೆ ಉಂಟಾಗುತ್ತದೆ. ವ್ಯಕ್ತಿಯು ಮಾದಕ ವಸ್ತುವೊಂದರ ವ್ಯಸನಕ್ಕೆ ಬಲಿಬಿದ್ದಾಗ ತನ್ನ ಅಗತ್ಯಗಳು ಬದಲಾಗುತ್ತಿರುವ ಅರಿವು ಕೂಡ ಬಾರದಿರಬಹುದು. ಅಂತಹವರು ಮಾದಕ ವಸ್ತುವಿಗೆ ತಮ್ಮ ಬದುಕಿನಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರು ತಮ್ಮ ಭಾವನೆ ಹಾಗೂ ನಿರ್ಧಾರಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ.

ಈ ಕಾರಣಕ್ಕಾಗಿಯೇ ಅವರು ಮಾದಕ ಸೇವನೆಯನ್ನು ಪದೇ ಪದೇ ಬಯಸುತ್ತಾರೆ. ಬಿಡಬೇಕೆಂದು ಅಂದುಕೊಂಡರೂ ಅದು ಸಾಧ್ಯವಾಗುವುದಿಲ್ಲ. ಡ್ರಗ್, ಮದ್ಯ ಅಥವಾ ಸಿಗರೇಟ್ ಸೇವನೆಯು ಬರಬರುತ್ತಾ ಅತಿ ಮುಖ್ಯವೆನಿಸಿ, ಕೆಲಸ, ಕುಟುಂಬ, ಸ್ನೇಹಿತರು ಅಥವಾ ಉಳಿದ ಜವಾಬ್ದಾರಿಗಳ ಕುರಿತು ಗಮನ ನೀಡಲು ಅಸಮರ್ಥರಾಗುತ್ತಾರೆ. 

ಮಾದಕ ವಸ್ತುವಿನ ಚಟದಿಂದ ಮಿದುಳಿನಲ್ಲಿ ಬದಲಾವಣೆಗಳಾಗಿ ಖಿನ್ನತೆ, ತೀವ್ರ ತರದ ಆತಂಕ ಮತ್ತು ಸ್ಕಿಜೋಫ್ರೇನಿಯ ಮುಂತಾದ ಮನೋವ್ಯಾಧಿಗಳಿಗೆ ಕಾರಣವಾಗಬಹುದು.

ವ್ಯಸನವು ಆಯ್ಕೆಯೇ?

ಕುತೂಹಲ, ಸ್ನೇಹಿತರ ಒತ್ತಾಯ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕೆಂಬ ಭಾವನೆ, ಮನೆಯ ವಾತಾವರಣ, ಮನೆಯವರ ವಿರುದ್ಧ ಸಿಡಿದೇಳುವ ಅಥವಾ ತಿರುಗಿ ಬೀಳುವ ಒಂದು ಕೃತ್ಯವೆಂದು ಭಾವಿಸಿ, ಹೀಗೆ ಅನೇಕ ಕಾರಣಗಳಿಗಾಗಿ ಜನರು ಮಾದಕ ವಸ್ತುಗಳ ಸೇವನೆ ಆರಂಭಿಸುತ್ತಾರೆ. ಹಾಗಿದ್ದರೆ ಕೆಲವು ಜನರು ಮಾತ್ರ ಯಾಕೆ ಚಟಕ್ಕೆ ಬಲಿಯಾಗುತ್ತಾರೆ? 

ವ್ಯಕ್ತಿ ಮೊದಲು ಕುತೂಹಲಕ್ಕಾಗಿ, ಸ್ನೇಹಿತರ ಒತ್ತಾಯದಿಂದ ಅಥವಾ ವಾತಾವರಣದ ಪ್ರಭಾವದಿಂದ ಮಾದಕ ವಸ್ತುವನ್ನು ಬಳಸಲು ಆರಂಭಿಸುತ್ತಾರೆ. ಅದು ವ್ಯಸನವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಅವರಿಗೆ ಆರಂಭದಲ್ಲಿ ತಿಳಿದಿರುವುದಿಲ್ಲ. ಯಾರು ವ್ಯಸನಕ್ಕೆ ಈಡಾಗುವ ಮನಸ್ಥಿತಿ ಹೊಂದಿರುತ್ತಾರೊ ಅವರಿಗೆ ಕೂಡ ತಾವು ‘ಸುರಕ್ಷಿತ’ ಮಟ್ಟ ಮೀರಿರುವುದರ ಪರಿವೆ ಇರುವುದಿಲ್ಲ.

ಯಾವಾಗ ಸೇವನೆಯನ್ನು ನಿಲ್ಲಿಸಬೇಕೆಂದು ತಿಳಿಹೇಳಬಲ್ಲ ಆಲೋಚನಾಶಕ್ತಿ ಅವರಿಗಿರುವುದಿಲ್ಲ. ಹಾಗಾಗಿ ಎಚ್ಚರಿಕೆಯ ಲಕ್ಷಣಗಳು (ಕೆಲ ಪೆಗ್ಗುಗಳನ್ನು ಕುಡಿದ ನಂತರ ತೊದಲುವ ಅಥವಾ ತೂರಾಡುವಂತಾಗುವ) ಅಲ್ಲಿ ಕಾಣಿಸದೇ ಇರಬಹುದು. ಈ ರೀತಿಯ ಸ್ವಭಾವ ವ್ಯಕ್ತಿಗಳು ಹೆಚ್ಚೆಚ್ಚು ಮಾದಕ ವಸ್ತುಗಳನ್ನು ಬಳಸುವಂತೆ ಹಾಗೂ ತಮಗೆ ತಾವೇ ತೊಂದರೆ ತಂದುಕೊಳ್ಳುವಂತೆ ಮಾಡುತ್ತದೆ.

ನಿಮ್ಹಾನ್ಸ್ ನ ಸೆಂಟರ್ ಫಾರ್ ಅಡಿಕ್ಷನ್ ಮೆಡಿಸಿನ್‌ನ (center for addiction medicine) ಡಾ. ಪ್ರತಿಮಾ ಮೂರ್ತಿ ಅವರ ಅಭಿಪ್ರಾಯದಂತೆ, “ಅತಿರೇಕದ ದುಡುಕಿನ ಪ್ರವೃತ್ತಿಯನ್ನು ಹೊಂದಿದ, ಸುಲಭವಾಗಿ ಕೋಪಕ್ಕೆ ತುತ್ತಾಗುವ, ವಿರೋಧಿಸುವ ಅಥವಾ ಬಂಡಾಯದ ಪ್ರವೃತ್ತಿ ಹೊಂದಿರುವ ವ್ಯಕ್ತಿಗಳು ಅಥವಾ ಅತಿಯಾಗಿ ಆತಂಕಗೊಳ್ಳುವ ಮತ್ತು ಆತ್ಮಗೌರವ ಕಡಿಮೆಯುಳ್ಳ ವ್ಯಕ್ತಿಗಳು ಬಲುಬೇಗ ವ್ಯಸನಕ್ಕೆ ಈಡಾಗುತ್ತಾರೆ’’. ತಮ್ಮ ಕುಟುಂಬದಲ್ಲಿ ಯಾರಾದರು ವ್ಯಸನಕ್ಕೆ ತುತ್ತಾದವರು ಇದ್ದರೆ, ಅವರೂ ಕೂಡ ವ್ಯಸನಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org