ಪದೇ ಪದೇ ದೌರ್ಜನ್ಯಕ್ಕೆ ಒಳಗಾಗಿದ್ದು ನನ್ನದೇ ತಪ್ಪೆಂದು ಎಲ್ಲರಿಂದ ದೂರ ಉಳಿದೆ

​ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಒಬ್ಬರು ತಮ್ಮ ಅನುಭವವನ್ನೂ, ಅದು ತಮ್ಮ ಮೇಲೆ ಬೀರಿದ ಪರಿಣಾಮಗಳನ್ನೂ ಹಂಚಿಕೊಂಡಿದ್ದಾರೆ.

​ಇದು ನಡೆದದ್ದು ಸುಮಾರು 35 ವರ್ಷಗಳ ಹಿಂದೆ. ಆದರೆ, ಆ ದಿನದ ವಿವರಗಳು ನನಗೆ ಸ್ಪಷ್ಟವಾಗಿ ನೆನಪಿವೆ.

ನಾನಾಗ 9 ವರ್ಷ ವಯಸ್ಸಿನ ವಿದ್ಯಾರ್ಥಿ. ಆ ದಿನದ ಮಧ್ಯಾಹ್ನ ನಾನು ಊಟದ ಡಬ್ಬಿ ಹಿಡಿದು ಮೆಟ್ಟಿಲಿಳಿಯುತ್ತಿದ್ದಾಗ ಅದು ಕೈಜಾರಿ ಬಿದ್ದುಬಿಟ್ಟಿತು. ಶಿಸ್ತಿನ ಸಿಪಾಯಿಯಂತಿದ್ದ ನಮ್ಮ ಶಾಲೆಯ ಹೆಡ್ ಮಾಸ್ಟರ್ ಡಬ್ಬಿಯ ಆಹಾರವೆಲ್ಲ ನೆಲದ ಮೇಲೆ ಬಿದ್ದಿದ್ದು ನೋಡಿ ಕೋಪಗೊಂಡರು. ನಿನಗೆ ಆಹಾರದ ಮೇಲೆ ಸ್ವಲ್ಪವೂ ಗೌರವ ಇಲ್ಲ, ನಿನಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ ಎಂದು ಬೈದು ತಮ್ಮ ಆಫೀಸಿಗೆ ಕರೆದೊಯ್ದರು. ನನಗೆ ಮೊದಲ ಬಾರಿ ಅವರು ಲೈಂಗಿಕ ಕಿರುಕುಳ ನೀಡಿದ್ದು ಆಗಲೇ.

ಅಂದಿನಿಂದ ಮುಂದೆ ಈ ದೌರ್ಜನ್ಯ 6 ವರ್ಷಗಳ ಕಾಲ ನಡೆಯಿತು. ಹೌದು. ಸತತ 6 ವರ್ಷಗಳ ಕಾಲ!

ನನಗೆ ಎಲ್ಲವೂ ನೆನಪಿದೆ. ಆತ ನನ್ನನ್ನು ಅಂಗಾತ ಮಲಗಿಸುತ್ತಿದ್ದ ಡೆಸ್ಕ್, ಅದರ ಮೇಲಿರುತ್ತಿದ್ದ ಪೆನ್ ಸ್ಟ್ಯಾಂಡ್, ಆತನ ಕೋಣೆಯ ಒಪ್ಪ ಓರಣಗಳೆಲ್ಲವೂ ನೆನಪಿದೆ. ಒಮ್ಮೆ ನಾನು ನನ್ನೆಲ್ಲ ಧೈರ್ಯ ಒಗ್ಗೂಡಿಸಿ ಟೀಚರ್ ಒಬ್ಬರ ಬಳಿಗೋಡಿ ನನ್ನ ಮೇಲೇನು ನಡೆಯುತ್ತಿದೆ ಎಂದು ವಿವರಿಸಲು ಯತ್ನಿಸಿದ್ದೆ. ಆಕೆ ನನ್ನನ್ನೇ ಗದರಿ, ಆತ ಬಹಳ ಒಳ್ಳೆಯ – ಕಾಳಜಿಯುಳ್ಳ ಮನುಷ್ಯ. ಅವರು ಹಾಗೆಲ್ಲ ಮಾಡಲು ಸಾಧ್ಯವೇ ಇಲ್ಲ. ನೀನೇ ಸುಳ್ಳು ಕತೆ ಕಟ್ಟುತ್ತಿದ್ದೀಯ ಅಂದುಬಿಟ್ಟಿದ್ದರು.

ಅಲ್ಲಿಂದ ಮುಂದೆ 6 ವರ್ಷಗಳ ಕಾಲ ನಾನು ಯಾರ ಬಳಿಯೆಲ್ಲ ಇದನ್ನು ಹೇಳಿದೆನೋ ಅವರೆಲ್ಲರ ಮಾತು ಅಥವಾ ಮಾತಿನ ಅರ್ಥ ಈ ಮೇಲಿನಂತೆಯೇ ಇತ್ತು. ನಾನು ನನ್ನ ಮನೆಯಲ್ಲಿ ಇದನ್ನು ಹೇಳಿಕೊಳ್ಳಲು ಹೆದರಿದೆ. ಆ ಹೆಡ್ ಮಾಸ್ಟರ್ ನಮ್ಮ ಕುಟುಂಬದ ಗೆಳೆಯರಾಗಿದ್ದರು ಮತ್ತು ಅವರಿಗೆ ಬಹಳ ದೊಡ್ಡ ಗೌರವವೂ ಇತ್ತು. ಅದೇ ಶಾಲೆಯಲ್ಲಿ ಓದುತ್ತಿದ್ದ ನನ್ನ ಅಣ್ಣ ನನ್ನ ಕುರಿತಾದ ಗಾಳಿ ಸುದ್ದಿಗಳನ್ನು ಕೇಳಿ ನನ್ನಿಂದ ದೂರವಾಗಿಬಿಟ್ಟಿದ್ದ. ಶಾಲೆಯಲ್ಲಿ ಅವನು ನನ್ನನ್ನು ಕಣ್ಣೆತ್ತಿ ನೋಡುತ್ತಲೂ ಇರಲಿಲ್ಲ. ನಾನು ಅಕ್ಷರಶಃ ಒಂಟಿಯಾಗಿ ಬಿಟ್ಟಿದ್ದೆ.

ಮುಂದೆ ನಾನು ಈ ಕುರಿತು ಮಾತನಾಡುವುದನ್ನೆ ಬಿಟ್ಟುಬಿಟ್ಟೆ. ಏಕೆಂದರೆ ನನ್ನ ಸುತ್ತಲಿನ ಜನರಿಗೆ ಇಂಥದೊಂದು ಸಂಗತಿ ನಡೆಯಲೂಬಹುದು ಅನ್ನುವ ಯೋಚನೆಯೂ ಇರಲಿಲ್ಲ. ಇಂಥದೆಲ್ಲ ಅವರು ಕೇಳರಿಯದ ವಿಷಯಗಳಾಗಿದ್ದವು. ನಾನು ಕೂಡ ಕಾಲಕ್ರಮೇಣ ಈ ಬಗ್ಗೆ ಮಾತನಾಡುವುದನ್ನು, ಯೋಚಿಸುವುದನ್ನು ಬಿಟ್ಟರೆ ಎಲ್ಲವೂ ಮರೆತುಹೋಗುತ್ತದೆ ಅಂದುಕೊಂಡಿದ್ದೆ. ಆದರೆ ಅದು ಇವತ್ತಿಗೂ ಸಾಧ್ಯವಾಗಲೇ ಇಲ್ಲ.

ಅದೇ ವೇಳೆಗೆ ಹೆಡ್ ಮಾಸ್ಟರ್ ನನ್ನ ಮೇಲೊಂದು ಕತೆ ಹೆಣೆದಿದ್ದರು. ನಾನು ಕಲಿಕೆಯಲ್ಲಿ ತುಂಬಾ ನಿಧಾನವಾಗಿದ್ದೇನೆ, ನನಗೆ ಹೆಚ್ಚುವರಿ ತರಬೇತಿಯ ಅಗತ್ಯವಿದೆಯೆಂದೂ ನನ್ನ ಪೋಷಕರ ಬಳಿ ಹೇಳಿದರು. ಮತ್ತು ನನಗೆ ತಾವೇ ಟೂಷನ್ ನೀಡುವುದಾಗಿಯೂ ಪೋಷಕರ ಮನ ಒಲಿಸಿದರು. ನನ್ನ ಅಪ್ಪ, ಅಮ್ಮ ಅವರ ಮಾತನ್ನು ನಂಬಿದರು. ನಾನು ಯಾಕೆ ಶಾಲೆಗೆ ಹೋಗುವುದನ್ನು ಇಷ್ಟಪಡುತ್ತಿಲ್ಲ, ನಾನು ಯಾಕೆ ಹೆಡ್ ಮಾಸ್ಟರನ್ನು ಕಂಡರೆ ದೂರ ಓಡುತ್ತೇನೆ ಎಂದು ಅವರು ಯೋಚಿಸುವ ಗೋಜಿಗೇ ಹೋಗಲಿಲ್ಲ.

ಹೀಗೆ 6 ವರ್ಷಗಳ ಕಾಲ ನಾನು ಆತನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದೆ. ನಂತರ ಒಂದು ದಿನ ಮತ್ತೊಮ್ಮೆ ನನ್ನೆಲ್ಲ ಧೈರ್ಯವನ್ನು ಒಗ್ಗೂಡಿಸಿ ಮಾತಾಡಿದೆ. ಈ ಬಾರಿ ನನ್ನ ಕುಟುಂಬದ ಗೆಳೆಯರೊಬ್ಬರು ನನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಂಡರು. ನಾನು ಅವರ ಬಳಿ ಎಲ್ಲವನ್ನೂ ಹೇಳಿಕೊಂಡೆ. ಅವರು ಅದನ್ನು ಗಂಭೀರವಾಗಿ ಪರಿಗಣಿಸಿದರು ಮತ್ತು ಹೆಡ್ ಮಾಸ್ಟರನಿಗೆ ಸರಿಯಾದ ಶಿಕ್ಷೆ ಕೊಡಿಸುವುದಾಗಿ ಹೇಳಿದರು. ಅದರಂತೆ ಮುಂದೆ ಆತ ಶಾಲೆಯಿಂದ ಅಮಾನತುಗೊಂಡ. ಆತನನ್ನು ನಾನು ಮತ್ತೆಂದೂ ನೋಡಲಿಲ್ಲ.

ಇನ್ನು ಮುಂದೆ ನಾನು ಆ ಕಠಿಣ ಪರೀಕ್ಷೆಯನ್ನು ಎದುರಿಸಬೇಕಿಲ್ಲವೆಂದು ತಿಳಿದು ಸಮಾಧಾನವಾಯಿತಾದರೂ ನನ್ನೊಳಗೆ ಅದು ಕೊರೆಯುತ್ತಲೇ ಇತ್ತು. ನಂತರದಲ್ಲಿ ಬಂದ ಹೆಡ್ ಮೇಡಮ್ ನನ್ನನ್ನು ಅವರ ಕೋಣೆಗೆ ಕರೆಸಿಕೊಂಡರು. ಅವರಿಗೆ ನನ್ನ ಪ್ರಕರಣದ ಬಗ್ಗೆ ಹೇಳಲಾಗಿತ್ತು. ಅವರು ನಾನು ಅನುಭವಿಸಿದ್ದೆಲ್ಲವನ್ನೂ ಒಂದು ಹಾಳೆಯಲ್ಲಿ ಬರೆಯಲು ತಿಳಿಸಿದರು. ನಾನು ಬರೆದೆ. ನಂತರ ನನ್ನನ್ನು ಪ್ಲೇಗ್ರೌಂಡಿಗೆ ಕರೆದೊಯ್ದು ಆ ಹಾಳೆಯನ್ನು ಸುಟ್ಟುಹಾಕಲು ಹೇಳಿದರು. ನಾನು ಹಾಗೆಯೇ ಮಾಡಿದೆ.

ಅದರೊಂದಿಗೆ ನನ್ನೊಳಗೆ ಕೊರೆಯುತ್ತಿದ್ದುದೆಲ್ಲವೂ ಸುಟ್ಟುಹೋದಂತೆ ಅನ್ನಿಸಿ ನಿರಾಳವಾಯ್ತು. ನನ್ನೆಲ್ಲ ಹತಾಶೆ, ಕೋಪ, ದುಃಖಗಳನ್ನು ನಾನು ಹೊರಹಾಕಿ ಹಗುರವಾದಂತೆ ಅನ್ನಿಸಿತು. ಕೊನೆಗೂ ನನ್ನನ್ನು ಅರ್ಥ ಮಾಡಿಕೊಂಡು ಸಹಾಯ ಮಾಡಬಲ್ಲವರೊಬ್ಬರು ದೊರಕಿದರು ಎಂದು ಸಮಾಧಾನಪಟ್ಟೆ.  

ನಾನು ಏಕಾಂತದಲ್ಲಿದ್ದಾಗ

ಈ ಅನುಭವದಿಂದ ನಾನು ಅದೆಷ್ಟು ಹತಾಶನಾಗಿದ್ದೆ ಅಂದರೆ, ನನ್ನೊಳಗೇ ಹುದುಗಿ ಅಂತರ್ಮುಖಿಯಾಗಿಬಿಟ್ಟಿದ್ದೆ. ನನ್ನೊಂದಿಗೆ ಈ ಬಗ್ಗೆ ಯಾರಾದರೂ ಮಾತನಾಡಬಹುದು, ಸಮಾಧಾನ ಹೇಳಬಹುದು ಅನ್ನುವ ನಿರೀಕ್ಷೆಗಳೆಲ್ಲ ಸುಳ್ಳಾಗಿತ್ತು. ನಾನು ದೌರ್ಜನ್ಯದ ಬಗ್ಗೆ ಹೇಳಿಕೊಂಡಾಗೆಲ್ಲ ನನ್ನನ್ನು ಅನುಮಾನದಿಂದ ನೋಡಲಾಗುತ್ತಿತ್ತು. ನನ್ನನ್ನೇ ದೂಷಿಸಲಾಗುತ್ತಿತ್ತು. ಆ ಎಲ್ಲವನ್ನೂ ನನ್ನೊಳಗೆ ಆಳವಾಗಿ ಉಳಿದುಹೋಯಿತು.

ನಾನು ಬೆಳೆಯುತ್ತ ಹೋದಂತೆಲ್ಲ ನನ್ನಲ್ಲಿ ಕೀಳರಿಮೆಯೂ ಬೆಳೆಯತೊಡಗಿತು. ನನ್ನನ್ನು ಯಾರಾದರೂ ಮುಟ್ಟಿದರೆ ಅಸಹ್ಯ ಅನ್ನಿಸುತ್ತಿತ್ತು. ಆಗೆಲ್ಲ ಮೈಮೇಲೆ ಹುಳು ಹರಿದಂತೆ ಭಾವಿಸುತ್ತಿದ್ದೆ. ಗೆಳೆಯರ ಜೊತೆ, ಕುಟುಂಬದವರ ಜೊತೆ ಬೆರೆಯುವುದನ್ನು ಕಡಿಮೆ ಮಾಡತೊಡಗಿದೆ. ತಿಂಗಳಲ್ಲಿ ಮೂರು ವಾರ ಹೊರಗಿರುವಂಥ ಕೆಲಸ ಸಿಕ್ಕಿದ್ದು ನನಗೆ ಖುಷಿಯೇ ಆಯಿತು. ನಾನು ಮನೆಗೆ ಬರುತ್ತಿದ್ದುದು ಲಗೇಜ್ ಬದಲಾಯಿಸಲು ಮಾತ್ರ ಅನ್ನುವಂತಾಯಿತು. ಕ್ರಮೇಣ ಕುಡಿತಕ್ಕೆ ಅಂಟಿಕೊಂಡೆ. ನನ್ನ ಪೋಷಕರಿಗೆ ಚಿಂತೆ ಶುರುವಾಯ್ತು. ಆ ದಿನಗಳಲ್ಲಿ ನಾನದೆಷ್ಟು ಖಿನ್ನನಾಗಿದ್ದೆನೆಂದು ನನಗೇ ಗೊತ್ತಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಹಲವು ಬಾರಿ ಯತ್ನಿಸಿದೆನಾದರೂ ಪ್ರತಿ ಬಾರಿ ವಿಫಲಗೊಂಡೆ.

ಕೆಲವು ವರ್ಷಗಳ ನಂತರ ನನ್ನ ಆತ್ಮಹತ್ಯೆ ಪ್ರಯತ್ನ ಗಂಭೀರ ಸ್ವರೂಪ ಪಡೆಯಿತು. ಪೊಲೀಸರು ನನ್ನನ್ನು ಪಾರುಮಾಡಿ ಆಪ್ತ ಸಮಾಲೋಚಕರ ಬಳಿ ಹೋಗುವಂತೆ ಶಿಫಾರಸು ಮಾಡಿದರು. ನಾನು ಅವರ ಬಳಿ ಹೋಗಿ ನನ್ನ ಮೇಲೆ ನಡೆದದ್ದನ್ನು ಹೇಳಿಕೊಂಡೆ. ಅವರು ಕೂಡ ನನ್ನನ್ನೇ ದೂಷಿಸಿದರು. “ನೀನು ಅವರನ್ನು ತಡೆಯಲಿಲ್ಲ. ಆದ್ದರಿಂದಲೇ ನಿನ್ನ ಮೇಲೆ ಅವರು ಲೈಂಗಿಕ ದೌರ್ಜನ್ಯ ನಡೆಸಿದರು” ಅಂದುಬಿಟ್ಟರು. ಮತ್ತೂ ಬೇಸರದ ಸಂಗತಿ ಅಂದರೆ, “ನೀನು ಮತ್ತೆ ಮತ್ತೆ ಅದಕ್ಕೆ ಅವಕಾಶ ಕೊಟ್ಟಿದ್ದಕ್ಕೇ ನಿನ್ನ ಮೇಲೆ ಮತ್ತೆಮತ್ತೆ ಲೈಂಗಿಕ ದೌರ್ಜನ್ಯ ನಡೆದಿದ್ದು” ಎಂದು ನನ್ನನ್ನೇ ದೂಷಿಸಿದರು.

ಇದು ನನ್ನನ್ನು ಮತ್ತಷ್ಟು ಕುಗ್ಗಿಸಿತು. ಇದನ್ನೇ ಕೌನ್ಸೆಲಿಂಗ್ ಅನ್ನುವುದಾದರೆ, ನನಗೆ ಅದು ಬೇಡವೇ ಬೇಡ ಎಂದು ನಿರ್ಧರಿಸಿದೆ. ನಾನು ಅಷ್ಟೂ ವರ್ಷ ಅದೇ ಬಗೆಯ ಪ್ರತಿಕ್ರಿಯೆಗಳನ್ನು ಕೇಳುತ್ತಾ ಬಂದಿದ್ದೆ. ಮತ್ತೆ ಈ ಕೌನ್ಸೆಲರ್ ಕೂಡ ಅದನ್ನೇ ಹೇಳಿದ್ದು ನನ್ನೆಲ್ಲ ಭರವಸೆಯನ್ನೂ ನಾಶಮಾಡಿತ್ತು.

ನನ್ನ 23ನೇ ವಯಸ್ಸಿನಲ್ಲಿ ನನಗೆ ಸಿಕ್ಕ ಗೆಳೆಯರೊಬ್ಬರು ಸಹಾಯಕ್ಕೆ ಒದಗಿದರು. ಅವರು ನನ್ನನ್ನು ಪ್ರತಿ ದಿನವೂ ಭೇಟಿಯಾಗಿ ಮಾತನಾಡುತ್ತಿದ್ದರು. ನನ್ನ ಮೇಲೆ ನಡೆದ ದೌರ್ಜನ್ಯ, ನನ್ನ ಯೋಚನೆಗಳು, ಯಾತನೆಗಳು, ಕುಡಿತದ ವ್ಯಸನ ಎಲ್ಲವನ್ನೂ ವಿಚಾರಿಸುತ್ತಿದ್ದರು. ನನ್ನ ಮೇಲೆ ನಡೆದಿದ್ದ ದೌರ್ಜನ್ಯದ ಘೋರತೆಯನ್ನು ಮೊದಲ ಬಾರಿಗೆ ಅರ್ಥ ಮಾಡಿಕೊಂಡಿದ್ದು ಅವರೇ. ನನ್ನ ಅನುಭವವನ್ನು ಕೇಳಿದ ಅವರು “ನಿನ್ನನ್ನು ಆತ ರೇಪ್ ಮಾಡಿದ್ದ ಹಾಗಾದರೆ” ಅಂದಿದ್ದು ನನ್ನ ಕಿವಿಯಲ್ಲಿ ಈಗಲೂ ಗುಂಯ್’ಗುಡುತ್ತದೆ. ಅವರು ನನ್ನ ಮೇಲಿನ ದೌರ್ಜನ್ಯವನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದರು. ಅದರಿಂದ ನಾನು ಅನುಭವಿಸಿದ ಯಾತನೆಯನ್ನು ಗ್ರಹಿಸಿದ್ದರು. ಅದು ನನಗೆ ಸಮಾಧಾನ ತಂದಿತು. ಕೆಲವು ಕಾಲದವರೆಗೆ ನಾನು ಈ ಕೆಟ್ಟ ಅನುಭವದ ಭಾರ ಕೆಳಗಿಳಿಸಲು ಇದು ಸಹಕಾರಿಯಾಯಿತು.  

ದುರದೃಷ್ಟವಶಾತ್ ಈ ಸಹಾಯವೂ ಬಹಳ ದಿನ ದೊರೆಯಲಿಲ್ಲ. ಈ ನನ್ನ ಮೆಂಟರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರ ಭೇಟಿಯೂ ನಿಂತು ಹೋಯಿತು; ಜೊತೆಗೆ ನನಗಿದ್ದ ಏಕೈಕ ಆಸರೆಯೂ. ಮುಂದೆ ನಾನು ನನ್ನ ಉದ್ಯೋಗ ಸ್ಥಳದಲ್ಲಿಯೇ ಒಬ್ಬ ಕೌನ್ಸೆಲರ್ ಅನ್ನು ಭೇಟಿ ಮಾಡಿದೆ. ಕ್ರಮೇಣ ಉತ್ತಮ ಫಲಿತಾಂಶ ದೊರೆಯಲಾರಂಭಿಸಿತು. ನಾನು ನೆಮ್ಮದಿ ಪಡೆಯಲಾರಂಭಿಸಿದೆನಾದರೂ ಕಹಿ ಅನುಭವದ ನೆನಪುಗಳು ಹಾಗೆಯೇ ಉಳಿದವು.

ನಂತರದ ಬದುಕು

ನನಗೆ ಮದುವೆಯಾಯಿತು. ಇಬ್ಬರು ಮಕ್ಕಳೂ ಆದರು. ನಾನು ಹಲವು ಬಾರಿ ಎಡವಿದೆ. ಕೆಲವು ಬಾರಿ ಕೌನ್ಸೆಲಿಂಗ್ ತಪ್ಪಿಸಿಕೊಂಡೆ. ಅದರಿಂದಾಗಿ ಹಿನ್ನಡೆಯನ್ನೂ ಅನುಭವಿಸಿದೆ. ಪರಿಣಾಮ, ಖಿನ್ನತೆ ಮತ್ತಷ್ಟು ಹೆಚ್ಚಾಯ್ತು. ಮತ್ತೆ ಆತ್ಮಹತ್ಯೆಗೆ ಯತ್ನಿಸಿದೆ. ಏನು ಮಾಡಿದರೂ ಬದುಕು ಸಾಗುತ್ತದೆ ಅನ್ನುವುದನ್ನು ನಾನು ದುರುಪಯೋಗ ಪಡಿಸಿಕೊಂಡೆ.

ನಾನು ದೋಣಿಯ ಹುಟ್ಟಿನಂತೆ ಹಿಂದೆ ಚಲಿಸುತ್ತಿದ್ದೆ. ನಾನು ಎಲ್ಲಿದ್ದೇನೆಂದು ನನಗೆ ಕಾಣುತ್ತಿತ್ತು. ಆದರೆ ನಾನು ಎಲ್ಲಿಗೆ ಹೋಗುತ್ತಿದ್ದೇನೆಂದು ಅರಿಯದಾಗಿದ್ದೆ.

ನಾನು ಕೊನೆಯ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು 2016ರ ಜನವರಿ ತಿಂಗಳಲ್ಲಿ. ಆದರೆ ಆಗಲೂ ನಾನು ಬದುಕುಳಿದೆ. ನಂತರ ನನಗೆ ಸೇಂಟ್ ಜಾನ್ಸ್ ಹಾಸ್ಪಿಟಲ್’ನ ಕೌನ್ಸೆಲರ್ ಹಾಗೂ ಸೈಕಿಯಾಟ್ರಿಸ್ಟ್ ಅವರನ್ನು ಭೇಟಿಯಾಗುವಂತೆ ಶಿಫಾರಸು ಮಾಡಲಾಯಿತು. ಇವರ ಭೇಟಿ ನನಗೆ ಹೊಸತೊಂದು ಸಾಧ್ಯತೆಯನ್ನು ತೋರಿಸಿದೆ. ನನ್ನ 43ನೇ ವಯಸ್ಸಿನಲ್ಲಿ ನಾನು ವಿಭಿನ್ನ ಅನುಭವವನ್ನು ಪಡೆದೆ. ನನ್ನೆಲ್ಲ ಭಯ ಹಾಗೂ ಅಭದ್ರತೆಗಳಿಂದ ಹೊರಬರುವುದನ್ನು ಕಲಿಯತೊಡಗಿದೆ. ನಾನು ಏನೇ ಮಾಡಿದರೂ ಭರವಸೆಯನ್ನು ಕೈಬಿಟ್ಟಿರಲಿಲ್ಲ ಅನ್ನುವ ನನ್ನದೇ ಸಕಾರಾತ್ಮಕ ನಿಲುವನ್ನು ಅವರು ನನಗೆ ಮನದಟ್ಟು ಮಾಡಿಕೊಟ್ಟರು. ನನ್ನ ಕುಟುಂಬ, ನನ್ನ ಜವಾಬ್ದಾರಿಗಳ ಅರಿವಾಯಿತು. ಕುಟುಂಬದ ಸಹಕಾರದಿಂದ ಮತ್ತೆ ಸರಿಯಾದ ದಾರಿಯಲ್ಲಿ ಚಲಿಸತೊಡಗಿದೆ.

ಮದುವೆಯಾದ 14 ವರ್ಷಗಳ ನಂತರ ನನ್ನ ಹೆಂಡತಿಯೊಂದಿಗೆ ನನ್ನ ಮೇಲಿನ ದೌರ್ಜನ್ಯದ ಕಥೆಯನ್ನು ಹಂಚಿಕೊಂಡೆ. ಆಕೆ ಅತ್ತುಬಿಟ್ಟಳು. ಆಕೆಯೊಡನೆ ಮುಕ್ತವಾಗಿ ಮಾತನಾಡಿದ ನಂತರ ನಾವಿಬ್ಬರೂ ಹಗುರಾದೆವು. ಅವಳು ಕೂಡ ಯಾವುದೇ ತೀರ್ಪು ನೀಡದಂತೆ ನನ್ನ ನೋವಿನ ನೆನಪುಗಳನ್ನು ಕೇಳಿಸಿಕೊಳ್ಳತೊಡಗಿದಳು. ನಾನು ಸಹಜ ಜೀವನಕ್ಕೆ ಮರಳಿದೆ.

ಈಗಲೂ ನನ್ನ ಹೃದಯದಲ್ಲೊಂದು ಖಾಲಿತನ ಇದೆ. ಆದರೆ ಅಲ್ಲಿ ಕ್ರೋಧವಿಲ್ಲ. ನನ್ನ ಬದುಕಲ್ಲಿ ಏನು ನಡೆಯಿತೋ ಅದಕ್ಕೆ ನಾನು ಜವಾಬ್ದಾರನಾಗಿರಲಿಲ್ಲ, ಅದು ನನ್ನ ತಪ್ಪಾಗಿರಲಿಲ್ಲ ಎಂದು ಅರ್ಥ ಮಾಡಿಕೊಳ್ಳಲು ಇಷ್ಟು ವರ್ಷಗಳು ಬೇಕಾದವು.

ಕೆಲವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದಿಲ್ಲ ಎಂದು ಹೇಳುತ್ತಾರೆ. ಅದು ನಿಜವಲ್ಲ. ಆ ದಿನಗಳಲ್ಲಿ ನಾನು ಅನುಭವಿಸಿದಂಥದ್ದೇ ದೌರ್ಜನ್ಯ ಅನುಭವಿಸಿದವರ ಕಥನಗಳು ಕೇಳಿದ್ದರೆ, ಬಹುಶಃ ನಾನು ಮತ್ತಷ್ಟು ಗಟ್ಟಿಯಾಗಿ ಮಾತನಾಡುವ ಧೈರ್ಯ ಮಾಡುತ್ತಿದ್ದೆ. ಆ ದಿನಗಳಲ್ಲಿ ಯಾರಾದರೂ ನನ್ನ ಮೇಲೆ ಏನು ನಡೆಯಿತೋ ಅದು ನನ್ನ ತಪ್ಪಾಗಿರಲಿಲ್ಲ ಎಂದು ಹೇಳಿದ್ದರೆ, ನನ್ನ ಮಾತು ಕೇಳಿದ್ದರೆ, ನನ್ನ ಬೆಂಬಲಕ್ಕೆ ನಿಂತಿದ್ದರೆ, ಬಹುಶಃ ನನ್ನ ಬದುಕು ಬಹಳ ಮೊದಲೇ ಸುಧಾರಿಸುತ್ತಿತ್ತು. ನಾನು ಯಾರಲ್ಲಿ ನಂಬಿಕೆಯಿಟ್ಟು ನನ್ನ ಅನುಭವವನ್ನು ಹೇಳಿಕೊಂಡಿದ್ದೆನೋ ಆ ಟೀಚರ್, ಆ ಗೆಳೆಯರು, ಪೋಷಕರು ನನಗೆ ಬೆಂಬಲವಾಗಿ ನಿಂತಿದ್ದರೆ ನಾನು ಇಷ್ಟು ಏಕಾಕಿತನದ ನೋವು ಉಣ್ಣಬೇಕಾಗುತ್ತಿರಲಿಲ್ಲ.

ಆದರೆ ಈಗ ನಾನು ಹೇಗೆ ಬದುಕುತ್ತಿದ್ದೇನೋ ಅದರ ಬಗ್ಗೆ ನನಗೆ ತೃಪ್ತಿಯಿದೆ.

(ವೈಟ್ ಸ್ವಾನ್ ಫೌಂಡೇಷನ್ ಜೊತೆ ಸಂತ್ರಸ್ತರೊಬ್ಬರು ಹಂಚಿಕೊಂಡ ಅನುಭವ. ಕೋರಿಕೆಯ ಮೇರೆಗೆ ಹೆಸರನ್ನು ಗೌಪ್ಯವಾಗಿಡಲಾಗಿದೆ)

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org