ಉದ್ಯೋಗ ಸ್ಥಳದಲ್ಲಿ ತಾಯಿ ಹಾಗೂ ಶಿಶುವಿಗೆ ಸೌಕರ್ಯ

ಉದ್ಯೋಗಸ್ಥ ಮಹಿಳೆಯ ಜೀವನದಲ್ಲಿ ತಾಯ್ತನದ ಅವಧಿಯು ಬಹಳ ಮಹತ್ವದ ಸಮಯವಾಗಿರುತ್ತದೆ. ಪೂರ್ಣಾವಧಿಯ ಕೆಲಸದಲ್ಲಿರುವ ಭಾವೀ ತಾಯಂದಿರಿಗೆ ತಮ್ಮ ಸಂಸ್ಥೆಯಿಂದ ಹೆರಿಗೆ ರಜೆ (maternity leave) ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಬೆಂಬಲದ ಅವಶ್ಯಕತೆಯಿರುತ್ತದೆ. ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗದ ಕಾರ್ಯನೀತಿಗಳಿಗೆ ಅನುಗುಣವಾಗಿ ಬೇರೆ ಬೇರೆ ಸಂಸ್ಥೆಗಳಲ್ಲಿ ವಿಭಿನ್ನ ರೀತಿಯ ಸೌಲಭ್ಯಗಳು ಲಭ್ಯವಿರಬಹುದು. ಆದರೆ ಕೆಲವು ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ.

ದಿ ಮ್ಯಾಟರ್ನಿಟಿ ಬೆನೆಫಿಟ್ಸ್ ಆಕ್ಟ್ (The Maternity Benefit Act), 1961

ಈ ಕಾನೂನಿನ ಪ್ರಕಾರ ಭಾವೀ ತಾಯಂದಿರಿಗೆ 12 ವಾರಗಳ ಸಂಬಳ ಸಹಿತ ಹೆರಿಗೆ ರಜೆಯನ್ನು ನೀಡಬೇಕಾಗುತ್ತದೆ: ಹೆರಿಗೆಗೆ ಮೊದಲು 6 ವಾರ ಮತ್ತು ಹೆರಿಗೆಯ ನಂತರ 6 ವಾರಗಳು. ಈ ಕಾನೂನಿನ ಪ್ರಕಾರ ಸಂಸ್ಥೆಗಳು ಗರ್ಭಿಣಿ ಮಹಿಳೆಯರಿಗೆ ಯಾವುದೇ ರೀತಿಯ ತಾರತಮ್ಯ ತೋರಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಸಂಸ್ಥೆಯು ಗರ್ಭಿಣಿಯೆಂಬ ಕಾರಣಕ್ಕೆ ಮಹಿಳಾ ನೌಕರರನ್ನು ಕೆಲಸದಿಂದ ತೆಗೆದುಹಾಕುವಂತಿಲ್ಲ. ಗರ್ಭಿಣಿ ಮಹಿಳೆಯು ತನ್ನ ಹೆರಿಗೆ ರಜೆಯ ಅವಧಿಯನ್ನು ಲಿಖಿತವಾಗಿ ಬರೆದು ಸಂಸ್ಥೆಗೆ ಸೂಚಿಸಬೇಕಾಗುತ್ತದೆ.

ಜೊತೆಗೆ, ಗರ್ಭಿಣಿಯರು ತಮ್ಮ ತಾಯ್ತನದ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಸೂಕ್ತವಾದ ದಾಖಲೆಗಳನ್ನು ಒದಗಿಸಿ, ಒಂದು ತಿಂಗಳು ಹೆಚ್ಚಿನ ಅನಾರೋಗ್ಯದ ರಜೆಯನ್ನು ಪಡೆಯಬಹುದು. ಗರ್ಭಪಾತದಂತಹ ಸಂದರ್ಭದಲ್ಲಿ ಮಹಿಳೆಯರು ಗರ್ಭಪಾತವಾದ ದಿನದಿಂದ 6 ವಾರಗಳವರೆಗೆ ರಜೆಯನ್ನು ಪಡೆಯಬಹುದು.

ಮಾನವ ಸಂಪನ್ಮೂಲ ವಿಭಾಗದ ಕಾರ್ಯನೀತಿಗಳು

ಈ ಕಡ್ಡಾಯ ಸೌಲಭ್ಯಗಳ ಜೊತೆಗೆ ಮಾನವ ಸಂಪನ್ಮೂಲ ವಿಭಾಗವು, ತನ್ನ ಸಂಸ್ಥೆಯು ಅನುಮೋದಿಸಿದಂತೆ, ತನ್ನದೇ ಆದ ಉದಾರವಾದ ನೀತಿಗಳನ್ನು ಹೊಂದಿರಬಹುದು. ಗರ್ಭಿಣಿ ಮಹಿಳೆಯರಲ್ಲಿ ಉಂಟಾಗುವ ಒತ್ತಡವು ಕಾಲಾಂತರದಲ್ಲಿ ತಾಯಿ ಹಾಗೂ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಈಗೀಗ ಎಲ್ಲಾ ಕಡೆ ಜಾಗೃತಿ ಮೂಡುತ್ತಿದೆ. ಇದರಿಂದಾಗಿ ಹಲವು ಸಂಸ್ಥೆಗಳು, ಭಾವಿ ತಾಯಂದಿರ ವಿಷಯದಲ್ಲಿ ಮೃದು ನೀತಿಯನ್ನು ಅನುಸರಿಸುತ್ತಿವೆ. ಹೆಚ್ಚಿನ ಹೆರಿಗೆ ರಜೆಯ ಜೊತೆಗೆ, ಮೆಟರ್ನಿಟಿ ಕ್ಲೇಮ್ ಮತ್ತು ಪ್ರಯಾಣ ಭತ್ಯೆ, ಅನುಕೂಲಕರ ಕೆಲಸದ ಅವಧಿ ಹಾಗೂ ಡೇ-ಕೇರ್ ನಂತಹ ಸೌಲಭ್ಯಗಳನ್ನು ಒದಗಿಸುತ್ತಿವೆ.

ಇತ್ತೀಚಿನ ಬದಲಾವಣೆಗಳು

ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಮಹಿಳಾ ನೌಕರರಿಗೆ ಅತ್ಯಾಕರ್ಷಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಗೂಗಲ್, ಫ್ಲಿಪ್ ಕಾರ್ಟ್, ಇನ್ ಮೊಬಿ, ಆಕ್ಸೆಂಚರ್ ನಂತಹ ಸಂಸ್ಥೆಗಳು 5 ರಿಂದ 6 ತಿಂಗಳು ಹೆರಿಗೆ ರಜೆಯನ್ನು ನೀಡುತ್ತಿವೆ. ಇದರ ಜೊತೆಗೆ ಅನುಕೂಲಕರ ಕೆಲಸದ ಅವಧಿಯನ್ನು ಒದಗಿಸಲಾಗುತ್ತಿದೆ. ಮಹಿಳೆಯರು ಮನೆಯಿಂದಲೇ ಕೆಲಸ ಮಾಡಬಹುದು ಅಥವಾ ತಮಗೆ ಅನುಕೂಲವೆನಿಸಿದ ಅವಧಿಯಲ್ಲಿ ಕೆಲಸ ಮಾಡಬಹುದು. ಹೆರಿಗೆ ರಜೆಯ ಅವಧಿಯಲ್ಲಿ ಅವರಿಗೆ ಪ್ರಯಾಣ ಭತ್ಯೆ ಮತ್ತು ಹೆರಿಗೆ ವಿಮೆಯ ಸೌಲಭ್ಯಗಳೂ ದೊರೆಯುತ್ತಿವೆ.

ಕೆಲಸದ ಸ್ಥಳಗಳಲ್ಲಿ ಕ್ರೆಶ್ (creche) ಸೌಲಭ್ಯವಿರುತ್ತದೆ , ಕೆಲವು ಕ್ರೆಶ್ನಲ್ಲಿ ಮಹಿಳೆಯರು ತಮ್ಮ ಮಗುವಿನ ಜೊತೆಯಲ್ಲಿಯೇ ಇದ್ದು ಕೆಲಸ ಮಾಡಲು ಅನುಕೂಲವಾಗುವಂತೆ ವರ್ಕ್ ಸ್ಟೇಶನ್ ಸೌಲಭ್ಯಗಳನ್ನು ಹೊಂದಿರುತ್ತವೆ. ಕೆಲವು ಸಂಸ್ಥೆಗಳು ಡೇ-ಕೇರ್ ಕೇಂದ್ರಗಳ ಜೊತೆ ಒಪ್ಪಂದ ಮಾಡಿಕೊಂಡು, ತಮ್ಮ ನೌಕರರು ಅವುಗಳ ಸಹಾಯ ಪಡೆಯಲು ನೆರವಾಗುತ್ತವೆ. ಕೆಲವು ಸಂಸ್ಥೆಗಳು ನರ್ಸಿಂಗ್ ರೂಮ್ ಸೌಲಭ್ಯ ಒದಗಿಸುತ್ತವೆ.

ಈ ಎಲ್ಲಾ ನೀತಿಗಳಿಂದಾಗಿ ನೂತನ ತಾಯಂದಿರು ತಮ್ಮ ಹೆರಿಗೆ ಅವಧಿಯಲ್ಲಿ ಮಗುವಿಗೆ ಸಂಪೂರ್ಣ ಗಮನ ನೀಡಿ, ಯಾವುದೇ ಒತ್ತಡವಿಲ್ಲದೇ ಕೆಲಸಕ್ಕೆ ಮರಳಲು ಸಾಧ್ಯವಾಗುತ್ತದೆ. ಒತ್ತಡವು ಕಡಿಮೆಯಾಗುವುದರಿಂದ ಹೆರಿಗೆಗೆ ಮುಂಚೆ ಮತ್ತು ಹೆರಿಗೆಯ ನಂತರ ಮಹಿಳೆಯು ಮಾನಸಿಕ ಅನಾರೋಗ್ಯಕ್ಕೆ ಒಳಗಾಗುವುದು ಕಡಿಮೆಯಾಗುತ್ತದೆ.

ಪೆಟೆರ್ನಿಟಿ ರಜೆ (paternity leave)

ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರಿಗೆ 15 ದಿನಗಳ ಪೆಟೆರ್ನಿಟಿ ರಜೆಯ ಸೌಲಭ್ಯವನ್ನು ನೀಡಲಾಗುತ್ತಿದ್ದರೂ ಖಾಸಗಿ ವಲಯದ ನೌಕರರಿಗೆ ಈ ಸೌಲಭ್ಯವು ದೊರೆಯುತ್ತಿಲ್ಲ. ಆದರೆ ಈಗೀಗ ಹಲವು ಸಂಸ್ಥೆಗಳು ಗರ್ಭಧಾರಣೆ ಮತ್ತು ಹೆರಿಗೆಯ ಸಮಯದಲ್ಲಿ ತಂದೆಯ ಉಪಸ್ಥಿತಿಯ ಮಹತ್ವವನ್ನು ಅರಿತುಕೊಂಡಿವೆ. ತಂದೆಗೆ ತನ್ನ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಲು ನೆರವಾಗುವ ನಿಟ್ಟಿನಲ್ಲಿ ಫೇಸ್ ಬುಕ್ ನಂತಹ ಸಂಸ್ಥೆಗಳು, 4 ತಿಂಗಳುಗಳವೆರೆಗೆ ವಿಸ್ತರಿಸಬಹುದಾದ ಸಂಬಳ ಸಹಿತ ಪ್ಯಾಟರ್ನಿಟಿ ರಜೆಯನ್ನು ನೀಡಲು ಆರಂಭಿಸಿವೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org