ನೆಲೆ ಬದಲಾಯಿಸುವ ಕಷ್ಟಸುಖ: ಬದುಕು ಆದ್ಯತೆಯಾದಾಗ ಯಾವುದೂ ಕಷ್ಟವಲ್ಲ!

ಬದುಕಲೇಬೇಕು ಎಂದು ನಿರ್ಧಾರ ಮಾಡಿಕೊಂಡರೆ ಯಾವುದೂ ಕಷ್ಟವಲ್ಲ. ಊರು ಬದಲಾಯಿಸುವುದು ಎಂದರೆ, ಅವಕಾಶಗಳ ಹೊಸ ದಾರಿಯನ್ನು ಹಿಡಿಯುವುದು ಎಂದೇ ಅರ್ಥ.

ಚಿಕ್ಕ ಪಟ್ಟಣದಲ್ಲಿ, ತಂದೆತಾಯಿಯ ಕಣ್ಣ ಕಾಳಜಿಯಲ್ಲಿ ಬೆಳೆದ; ಹೆಚ್ಚು ಓದಿಲ್ಲದ, ಚಿಕ್ಕ ವಯಸ್ಸಿಗೇ ಡಿವೋರ್ಸ್ ಪಡೆದು ಮನೆಯಿಂದ ಹೊರ ಬಂದ 24ರ ಹುಡುಗಿ ಬೆಂಗಳೂರು ಮಹಾನಗರದಲ್ಲಿ ಬದುಕನ್ನೂ ಗುರುತನ್ನೂ ಕಟ್ಟಿಕೊಳ್ಳುವುದು ಸುಲಭವೇ? ಸುಲಭವಲ್ಲದೆ ಇರಬಹುದು. ಆದರೆ ಅಸಾಧ್ಯವಂತೂ ಅಲ್ಲ. ಈ ಮಾತಿಗೆ ನಾನೇ ಸಾಕ್ಷಿಯಾಗಿದ್ದೇನೆ. 

ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ತೀರ್ಥಹಳ್ಳಿಯ ತಣ್ಣನೆಯ ಪರಿಸರದಲ್ಲಿ. ಯಾವ ಬಗೆಯ ಮಾಲಿನ್ಯವೂ ಇಲ್ಲದ ಪುಟ್ಟ ಊರು ಅದು. ಶಾಲಾ ಕಾಲೇಜು ದಿನಗಳಲ್ಲಿ ಪದ್ಯ ಬರೆದುಕೊಂಡು, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿಕೊಂಡು, ಪ್ರತಿಭಟನೆಗಳ ಮೆರವಣಿಗೆಯಲ್ಲಿ ಸೇರಿಕೊಂಡು – ಹೀಗೆ ಏನೆಲ್ಲ ಮಾಡುತ್ತಿದ್ದರೂ ನಾನು ಜನರೊಂದಿಗೆ ಬೆರೆಯುತ್ತಿದ್ದುದು ಬಹಳ ಕಡಿಮೆ. ಸ್ಪರ್ಧೆಗಳಿಗೆ ಬೇರೆ ಊರಿಗೆ ಹೋಗಬೇಕಾದಾಗ ನನ್ನ ಅಪ್ಪ ಜೊತೆಯಲ್ಲಿ ಬಂದು, ಪರಿಚಿತರ ಮನೆಯಲ್ಲಿ ಉಳಿದುಕೊಂಡು, ನನ್ನದೆಲ್ಲ ಮುಗಿದ ಮೇಲೆ ವಾಪಸ್ ಕರೆದೊಯ್ಯುತ್ತಿದ್ದರು. ಮೊದಮೊದಲು ನಾನಿದನ್ನು ಅವರ ಕಾಳಜಿ ಅಂತಲೇ ತಿಳಿದಿದ್ದೆ. ಆಮೇಲೆ ಗೊತ್ತಾಯ್ತು, ಅದು ಅವರ ಅನುಮಾನ ಪ್ರವೃತ್ತಿಯ ಫಲ ಎಂದು!

ನನಗೆ 17ನೇ ವಯಸಿಗೆಲ್ಲಾ ಮದುವೆ ಮಾಡಿಬಿಟ್ಟರು. ಅದು ತೀರ್ಥಹಳ್ಳಿ ಸಮೀಪವೇ ನಾಲ್ಕೈದು ಮನೆ – ತೋಟವಿದ್ದ ಚಿಕ್ಕ ಹಳ್ಳಿ. 11 ಕಿ.ಮೀ ದೂರವಿದ್ದ ಈ ಹಳ್ಳಿ ಮತ್ತು ತವರು ಮನೆಗೆ ನಾನು ಓಡಾಡಲು ಬಸ್ ಹತ್ತಿದ್ದೇ ಇಲ್ಲ. ಮನೆಯಲ್ಲಿ ಯಾರಾದರೂ ಕಾರ್ ಇಲ್ಲವೇ ಬೈಕ್’ನಲ್ಲಿ ಕರೆದೊಯ್ಯಬೇಕಿತ್ತು; ಇಲ್ಲವೇ ಅಮ್ಮ ಅಲ್ಲಿಂದ ಆಟೋ ಕಳಿಸಿ ನನ್ನನ್ನು ಕರೆಸಿಕೊಳ್ತಿದ್ದಳು. ಹೀಗೆ, ಓಡಾಡುವಾಗಲೂ ಸುತ್ತ ಗೋಡೆಗಳನ್ನಿಟ್ಟುಕೊಂಡು ಬೆಳೆದವಳು ನಾನು.

ಹಾಗಂತ ನನಗೆ ನಗರ ಜೀವನ ಗೊತ್ತೇ ಇರಲಿಲ್ಲ ಎಂದಲ್ಲ. ನನ್ನ ಅಜ್ಜನ ಮನೆ ಇದ್ದುದು ಬೆಂಗಳೂರಲ್ಲಿ. ಪ್ರತಿ ಬೇಸಿಗೆ ರಜೆಗೆ ಅಪ್ಪ – ಅಮ್ಮ ನಮ್ಮನ್ನು ಕಟ್ಟಿಕೊಂಡು ಇಲ್ಲಿಗೆ ಬರುತ್ತಿದ್ದರು. ಆದರೆ ಮರದ ಮೇಲೆ ಕುಳಿತುಕೊಂಡು ಪುಸ್ತಕ ಓದುವ ಸುಖದ ರುಚಿ ಉಂಡಿದ್ದ ನನಗೆ ಬೆಂಗಳೂರಿನ ಶಬ್ದವೇ ಹಿಡಿಸುತ್ತಿರಲಿಲ್ಲ. ಒಂದು ಸುತ್ತು ಹೊರಗೆ ಹೋಗಿ ಬಂದರೆ ವಾಹನಗಳ ಸದ್ದಿಗೆ ತಲೆ ಹಿಡಿದು ಕೂತುಬಿಡುತ್ತಿದ್ದೆ. ಇಲ್ಲಿಯ ನೀರೂ ಸೇರುತ್ತಿರಲಿಲ್ಲ. ಮನೆ ಮುಂದೆ ಜಾಗವೇ ಇಲ್ಲ, ಗಿಡಗಳಿಲ್ಲದೆ ಮನೆ ಹೇಗಾದೀತು? – ಅನ್ನುವ ತಾತ್ಸಾರ ಜೊತೆಗೆ. ಒಟ್ಟಾರೆ, ಬೆಂಗಳೂರಿಗೆ ಕಾಲಿಟ್ಟಾಗೆಲ್ಲ ಮರಳಿ ಊರಿಗೆ ಓಡುವುದು ಯಾವಾಗ ಅನ್ನುವುದೊಂದೇ ಯೋಚನೆ. ಅಷ್ಟರಮಟ್ಟಿಗೆ ತೀರ್ಥಹಳ್ಳಿ ನನ್ನೊಳಗೆ ಬೆರೆತುಹೋಗಿತ್ತು.

ಮುಂದೆ, ನಾನು 24ನೇ ವಯಸ್ಸಿನವಳಾದಾಗ ಅನಿವಾರ್ಯವಾಗಿ ಮದುವೆಯನ್ನು ಮುರಿದುಕೊಂಡು, ಮನೆಬಿಟ್ಟು ಬಂದೆ. ಚಿಕ್ಕ ಪಟ್ಟಣಗಳ ಹೆಣ್ಣುಮಕ್ಕಳು ಮನೆ ಬಿಟ್ಟರೆ, ಅವರಿಗೆ ಬೆಂಗಳೂರೇ ಆಸರೆ. ಆದರೆ ನಾನು ಹೆಚ್ಚು ಓದಿದವಳಲ್ಲ. ಕೇವಲ ಸೆಕೆಂಡ್ ಪಿಯುಸಿ, ಅದೂ ಜಸ್ಟ್ ಪಾಸ್. ಇಂಥಾ ನನಗೆ ಪತ್ರಿಕೆಯೊಂದರಲ್ಲಿ ಉಪ ಸಂಪಾದಕಿಯ ಕೆಲಸ ಸಿಕ್ಕಿತ್ತು! ನಾನು ಚಿಕ್ಕ ವಯಸ್ಸಿನಲ್ಲೇ ಬರಹಗಾರ್ತಿಯಾಗಿ ಸಾಹಿತ್ಯ – ಪತ್ರಿಕಾವಲಯಕ್ಕೆ ಪರಿಚಿತವಾಗಿದ್ದುದು ಇದಕ್ಕೆ ಕಾರಣವಾಗಿತ್ತು.

ಈ ಕೆಲಸದ ಧೈರ್ಯದ ಮೇಲೆ ನಾನು ಬೆಂಗಳೂರಿಗೆ ಕಾಲಿಟ್ಟೆ. ಇಲ್ಲಿಗೆ ಬಂದವಳೇ ನಾನು ಮಾಡಿದ ಕೆಲಸ, ನನ್ನ ಹೆಸರು ಬದಲಿಸಿಕೊಂಡಿದ್ದು. ಹೊಸ ಹೆಸರಿನ ಜೊತೆಗೆ, ಜೀವದಂತಿದ್ದ ನನ್ನೂರಿನ ಹೆಸರೂ ತಗುಲಿಸಿಕೊಂಡೆ. ಶುರುವಿನಲ್ಲಿ ಇಲ್ಲಿಯ ಮಾಲಿನ್ಯ ನನ್ನನ್ನು ಬಹಳವಾಗಿ ಕಾಡಿತು. ಹಗಲು – ರಾತ್ರಿ ಹಕ್ಕಿಗಳ, ಜೀರುಂಡೆಗಳ, ದನಕರುಗಳ ಸದ್ದು ಕೇಳುತ್ತ ಬಾಳಿದವಳಿಗೆ ವಾಹನಗಳ ಸದ್ದು ಮೆದುಳು ಕೊರೆದಂತೆ ಅನ್ನಿಸುತ್ತಿತ್ತು. ವಾಯು ಮಾಲಿನ್ಯಕ್ಕೆ ಸೈನಸ್ ಬಿಗಡಾಯಿಸಿ ವಾರಗಟ್ಟಲೆ ರಜೆ ಪಡೆದು ಮಲಗಿ ಬಿಡುತ್ತಿದ್ದೆ.

ಇದರ ಜೊತೆಗೆ ಇನ್ನೊಂದು ಸಮಸ್ಯೆ. ಹುಟ್ಟಿ ಬೆಳೆದ ಊರಲ್ಲೇ ಒಬ್ಬಳೇ ಓಡಾಡಿ ಅಭ್ಯಾಸವಿಲ್ಲದ ನನಗೆ ಬೆಂಗಳೂರಲ್ಲಿ ಆಫೀಸ್ ಬಿಟ್ಟು ಎಲ್ಲಿಗೆ ಹೋಗಲು ಜೊತೆಗೊಬ್ಬರು ಬೇಕಿತ್ತು. ಹಾಗೆ ಜೊತೆಯಿಲ್ಲವೆಂದೇ ನಾನು ತಪ್ಪಿಸಿಕೊಂಡ ಕವಿಗೋಷ್ಠಿಗಳೆಷ್ಟೋ… ಕಾರ್ಯಕ್ರಮಗಳೆಷ್ಟೋ… ಅವುಗಳಿಂದ ನಷ್ಟವಾದ ಅವಕಾಶಗಳೆಷ್ಟೋ….

ಕ್ರಮೇಣ ನಾನು ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ಹೋದೆ. ರಾಮಕೃಷ್ಣಾಶ್ರಮದಲ್ಲಿ ಪ್ರತಿ ಸಂಜೆ ಕುಳಿತು ಮನಸ್ಸನ್ನು ಶಾಂತಗೊಳಿಸಿಕೊಳ್ಳುತ್ತಿದ್ದೆ. ಈ ನಡುವೆ ನಾನು ಮೇಲಿಂದ ಮೇಲೆ ಕೆಲಸಗಳನ್ನು ಬದಲಾಯಿಸಿದೆ. ಕೆಲಸ ಚೆನ್ನಾಗಿ ಮಾಡುತ್ತಿದ್ದುದರಿಂದ ಪ್ರಮೋಶನ್’ಗಳೂ ಸಿಕ್ಕವು. ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಾಲ್ಕನೇ ವರ್ಷಕ್ಕೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಚೀಫ್ ಸಬ್ ಎಡಿಟರ್ ಹುದ್ದೆಯನ್ನೂ ಪಡೆದೆ. ನನ್ನ ವಿದ್ಯಾರ್ಹತೆಗೆ ಆ ಹುದ್ದೆಯನ್ನು ಅಷ್ಟು ಬೇಗ ಪಡೆದವರು ವಿರಳವೇನೋ! ಇದು ನನ್ನಲ್ಲಿ ಆತ್ಮವಿಶ್ವಾಸ ತುಂಬಿತ್ತು. ಅಷ್ಟೇ ಅಲ್ಲ, ಈ ಅವಧಿಯಲ್ಲಿ ನಾನು 10 ಪುಸ್ತಕಗಳನ್ನೂ ಪ್ರಕಟಿಸಿದೆ. 

ಅಷ್ಟಾದರೂ ಒಬ್ಬಳೇ ಊರಿಂದೂರಿಗೆ ಹೋಗುವುದು,  ಕಾರ್ಯಕ್ರಮ – ಸಿನೆಮಾ – ಹೋಟೆಲ್ ಎಂದೆಲ್ಲ ಸುತ್ತುವುದು ನನಗೆ ಸಾಧ್ಯವಾಗಲಿಲ್ಲ. ಹೀಗೇ ಉಳಿದರೆ ಕೆಲಸ ಮಾಡಲಿಕ್ಕಾಗಲೀ ಬೆಳವಣಿಗೆಯಾಗಲೀ ಸಾಧ್ಯವಿಲ್ಲ ಅನ್ನಿಸಿತು. ಒಬ್ಬೊಬ್ಬಳೇ ಓಡಾಡಲು ಶುರು ಮಾಡಿದೆ. ಕ್ರಮೇಣ ರೂಢಿಯೂ ಆಯಿತು. ಆದರೆ ಇದಕ್ಕೆ ತಗುಲಿದ್ದು 8 ಸುದೀರ್ಘ ವರ್ಷಗಳು!

ಈಗ ನಾನು ಬೆಂಗಳೂರಿನ ಯಾವುದೇ ಮೂಲೆಗೆ ಓಡಾಡಬಲ್ಲೆ. ಬಿಎಂಟಿಸಿ ಹತ್ತುವುದಿಲ್ಲವಾದರೂ ಮೊದಲಿನಂತೆ ಹಿಂಜರಿಯುವುದಿಲ್ಲ. ಊರೊಳಗೆ ಮಾತ್ರವಲ್ಲ, ಪರವೂರುಗಳಿಗೂ ಓಡಾಡಬಲ್ಲೆ. ಒಬ್ಬಳೇ ಏರ್ ಪೋರ್ಟಿಗೆ ಹೋಗಿ ವಿಮಾನ ಹತ್ತಿ ಬೇರೆ ರಾಜ್ಯಗಳಿಗೂ ಸುತ್ತಾಡಿ ಬರುವುದು ನನಗೀಗ ರೂಢಿಯಾಗಿದೆ. ಇಲ್ಲಿಗೆ ಬಂದ ಶುರುವಲ್ಲಿ ಇಂಗ್ಲೀಷ್ ಬಾರದ ಕೀಳರಿಮೆ ಅನುಭವಿಸುತ್ತಿದ್ದ ನಾನು, ಈಗ ಆ ಭಾಷೆಯಲ್ಲಿ ಭಾಷಣ ಮಾಡುವಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇನೆ.

ನನ್ನ ಪರಿಚಿತ ವಲಯದಿಂದ ಹೊರಬಂದು ಹೊಸ ಗೆಳೆಯರನ್ನು ಮಾಡಿಕೊಂಡಿದ್ದು, ಅಪರಿಚಿತ ವಲಯಗಳಲ್ಲಿ ಓಡಾಡಿ ಹೊಸ ಕಲಿಕೆಗೆ ತೆರೆದುಕೊಂಡಿದ್ದು, ಹಿಂಜರಿಕೆ ಬಿಟ್ಟು ಧೈರ್ಯದಿಂದ ಮುನ್ನುಗ್ಗಿದ್ದು… ಇವೆಲ್ಲವೂ ನಾನು ಇಂದು ಏನಾಗಿದ್ದೇನೋ ಅದಕ್ಕೆ ಕಾರಣವಾಗಿವೆ. ನನ್ನದೇ ಆದ ಗುರುತು ನನಗೆ ದಕ್ಕಿದೆ.

ನಾನು ಹಳ್ಳಿಯಿಂದ ನಗರಕ್ಕೆ ಬಂದಾಗ ನನ್ನೆದುರು ಬದುಕಿನ ಆಯ್ಕೆಗಳಿರಲಿಲ್ಲ, ಬದಲಿಗೆ ಬದುಕುವುದೇ ಏಕೈಕ ಆಯ್ಕೆಯಾಗಿತ್ತು. ನಾನು ಅದನ್ನು ಆಯ್ದುಕೊಂಡೆ ಮತ್ತು ಬದುಕು ಕಟ್ಟಿಕೊಂಡೆ. ನನ್ನ ಈ ಜೀವನ ಯಾನವನ್ನು ಬಹಳಷ್ಟು ಸಲ, ಬಹಳಷ್ಟು ವೇದಿಕೆಗಳಲ್ಲಿ ಹಂಚಿಕೊಂಡಿದ್ದೇನೆ. ಕೆಲವರು ಎಲ್ಲ ಅನುಕೂಲತೆಗಳಿದ್ದರೂ ಹಿಂಜರಿಕೆಯಿಂದ ಬಾಳು ಹಾಳು ಮಾಡಿಕೊಳ್ಳುತ್ತಾರೆ. ಅಂಥವರಿಗೆ ಹುರುಪು ನೀಡಲಿ ಅನ್ನುವ ಉದ್ದೇಶದಿಂದ ನನ್ನ ಕಥೆಯನ್ನು ಹೇಳಿಕೊಳ್ಳುತ್ತೇನೆ. ನನ್ನ ಈ 13 ವರ್ಷಗಳ ಜೀವನ ಹೂವಿನ ದಾರಿಯಲ್ಲಿ ನಡೆದು ಬಂದಿದ್ದಲ್ಲ. ಹಸಿವು, ಹಣದ ಕೊರತೆ, ಒಂಟಿ ಹೆಣ್ಣಿನ ಸಂಕಷ್ಟಗಳು, ಸ್ಪರ್ಧೆ ಎಲ್ಲವನ್ನೂ ಎದುರಿಸಿದ್ದೇನೆ. ಖಿನ್ನತೆ, ಒತ್ತಡ, ಸ್ವಾನುಕಂಪ, ಉದ್ವೇಗಗಳ ಕಾಯಿಲೆಗೂ ತುತ್ತಾಗಿ – ಪಾರಾಗಿದ್ದೇನೆ. ಆತ್ಮಹತ್ಯೆಗೆ ಪ್ರಯತ್ನಿಸಿ ಪಾರಾಗಿಬಂದಿದ್ದೇನೆ.

ಈಗ ಯಾರಾದರೂ ಊರಿಂದೂರಿಗೆ ಬಂದು ನೆಲೆ ನಿಲ್ಲುವುದು ಕಷ್ಟ ಅಂದಾಗ ಆಶ್ಚರ್ಯವಾಗುತ್ತದೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org