ಬುಲಿಮಿಯಾದೊಂದಿಗಿನ ನನ್ನ ಹೋರಾಟ

ಕೆಲವೊಮ್ಮೆ ಇನ್ನೂ ಮುಂಚಿತವಾಗಿ ಸಹಾಯ ಪಡೆದಿದ್ದರೆ ಚೆನ್ನಾಗಿತ್ತು ಎಂದು ಯೋಚಿಸುತ್ತೇನೆ.

ಇಲ್ಲಿ ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳು ತನ್ನ ದೈಹಿಕ ಆಕೃತಿಯ ಬಗೆಗಿನ ಯೋಚನೆ ಹಾಗೂ ಅದರಿಂದ ಉಂಟಾದ ತಿನ್ನುವ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.

ನನ್ನ ತಾಯಿ ತಂದೆಗೆ ಒಬ್ಬಳೇ ಮಗಳು. ನಾನು ದಪ್ಪಗಿದ್ದೆ, ನಾನು ಓದಿನಲ್ಲಿ ಎಲ್ಲರಿಗಿಂತ ಮುಂದೆ ಇದ್ದ ಕಾರಣ ದಪ್ಪಗಿರುವ ಬಗ್ಗೆ ಯೋಚಿಸುತ್ತಿರಲಿಲ್ಲ. 10ನೆಯ ತರಗತಿಯಲ್ಲಿರುವಾಗ ನನಗೆ ತಿನ್ನುವ ಸಮಸ್ಯೆಯಿರುವ ಬಗ್ಗೆ ತಿಳಿಯಿತು. ಆದರೆ ಈ ಸಮಸ್ಯೆಯು ಮೂರು ವರ್ಷದ ಮೊದಲು ನಾನು ವಸತಿ ಶಾಲೆಗೆ ಸೇರಿಕೊಂಡಾಗಲೇ ಆರಂಭವಾಗಿತ್ತು. 

ನಾನು ಹಾಸ್ಟೆಲ್ ಸೇರಿಕೊಂಡ ಮೇಲೆ ಎಲ್ಲವೂ ಬದಲಾಯಿತು. ಅಲ್ಲಿ ನನಗೆ ಹೊಂದಿಕೆಯಾಗಿಲ್ಲ. ಏಕಾಂಗಿತನ ಕಾಡುತ್ತಿತ್ತು ಮತ್ತು ಮನೆಯಿಂದ ದೂರವಿರುವುದು ಕಷ್ಟವಾಯಿತು. ನಂತರದ ಮೂರು ವರ್ಷಗಳು ಬಹಳ ಕಷ್ಟ ಪಟ್ಟೆ . ಎಲ್ಲವೂ ನನ್ನ ನಿಯಂತ್ರಣ ಮೀರಿವೆ ಎನಿಸಿತು. ನನ್ನ ವಿದ್ಯಾಭ್ಯಾಸದಲ್ಲಿ ಕಡಿಮೆ ಶ್ರೇಣಿ ಗಳಿಸಿದೆ. ಮನಸ್ಸಿಗೆ ಸಮಾಧಾನವಿಲ್ಲದೆ ಸಂಕಟಪಟ್ಟೆ, ಇದರಿಂದ ನನ್ನ ಒತ್ತಡ ಹೆಚ್ಚಾಯಿತು, ನಾನು ಅಸಹಾಯಕಳಾದೆ.

ನನ್ನ ಕಳವಳ  ಮತ್ತು ನಿರೀಕ್ಷೆಯ ಅತಿಭಾರವನ್ನು ಹೊತ್ತುಕೊಂಡು10ನೆಯ ತರಗತಿ   ಪ್ರವೇಶಿಸಿದೆ. ಆ ವರ್ಷ ಬೋರ್ಡ್ ಎಕ್ಸಾಮ್ ಇತ್ತು. ನಾನು ಆತಂಕಕ್ಕೆ ಒಳಗಾಗಿ ತುಂಬಾ ಕಿರಿಕಿರಿಗೊಂಡೆ ಮತ್ತು ಓದುವುದರ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ

ಅದೃಷ್ಟವಶಾತ್ ನನ್ನ ಶಿಕ್ಷಕರು ಈ ಲಕ್ಷಣಗಳನ್ನು ನೋಡಿ ಸಹಾಯಕ್ಕೆ ಬಂದರು. ನಂತರದ ಕೆಲ ತಿಂಗಳು ನಾನು ಮನೆಯಿಂದಲೇ ಶಾಲೆಗೆ ಬರುತ್ತಿದ್ದೆ. ನಾನು ನಿಧಾನವಾಗಿ ಚೇತರಿಸಿಕೊಂಡು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದೆ. ಆದರೆ ರಜೆಯಲ್ಲಿ ದೇಹದಾಕೃತಿಯ ಬಗೆಗಿನ ಯೋಚನೆ ತೀವ್ರವಾಯಿತು.

ಈಗ ಮನೆಯಲ್ಲಿ ಸುಮ್ಮನೆ ಕುಳಿತು ಏನೂ  ಚಟುವಟಿಕೆ ಮಾಡದೆ ಇದ್ದ ಕಾರ ಣ  ತೂಕ ಹೆಚ್ಚಾಯಿತು. ಎಷ್ಟೋ ವಿಷಯಗಳು ನನ್ನ ನಿಯಂತ್ರಣದ ಹೊರಗಿದ್ದವು- ಆದರೆ ನನ್ನ ದೇಹ, ತೂಕ ಮತ್ತು ಆಕೃತಿ ನನ್ನ ನಿಯಂತ್ರಣದಲ್ಲಿರಬೇಕೆಂದು ಯೋಚಿಸಿದೆ. ನಾನು ಜಿಮ್ ಗೆ ಅಥವಾ ಈಜಲು ಹೋಗಲು ನನ್ನ ಪಾಲಕರು ಒಪ್ಪಿಗೆ ನೀಡಲಿಲ್ಲ. ಅವರಿಗೆ ನನ್ನ ಪರಿಸ್ಥಿತಿ ಅರ್ಥವಾಗಲಿಲ್ಲ; ಅವರಿಗೆ ಹೇಗೆ ಅರ್ಥವಾಗಬೇಕು?

ಈ ಮಧ್ಯೆ ನಾನು ನನ್ನ ಆಹಾರವನ್ನು ಮಿತಗೊಳಿಸಿದೆ. ಒಮ್ಮೆ ಕಡಿಮೆ ತಿಂದರೆ ಇನ್ನೊಮ್ಮೆ ಅತಿಯಾಗಿ ತಿನ್ನುತ್ತಿದ್ದೆ . ಇದರಿಂದ ನನ್ನ ದೇಹದ ತೂಕ ಕಡಿಮೆಯಾಗಲಿಲ್ಲ

ಒಂದು ದಿನ ಒತ್ತಡ ಜಾಸ್ತಿಯಾಗಿ, ತಿಂದದ್ದನ್ನೆಲ್ಲಾ ಹೊರಹಾಕಲು ನಿರ್ಧರಿಸಿದೆ. ಬಲವಂತದಿಂದ ವಾಂತಿ ಮಾಡಿದೆ. ಆಗ ನನಗೆ ಆರಾಮವೆನಿಸಿತು.

ಬಹಳ ದಿನಗಳ ನಂತರ ನಾನು ಅಂದುಕೊಂಡಿದ್ದನ್ನು ಸಾಧಿಸಿದಂತೆ ಎನಿಸಿತು. ನನಗೆ ಬೇಕಾದ್ದನ್ನೆಲ್ಲಾ ತಿನ್ನ ಬಹುದು, ಆನಂತರ ಎಲ್ಲವನ್ನೂ ಹೊರಹಾಕಬಹುದು ಎಂದು ತೀರ್ಮಾನಿಸಿದೆ. ಕ್ರಮೇಣ ಇದು ಅಭ್ಯಾಸವಾಗಿಬಿಟ್ಟಿತು . ಈ ಅಭ್ಯಾಸ ಹಾನಿಕಾರಕ ಎಂದು ನನಗೆ ತಿಳಿಯಲೇ ಇಲ್ಲ. ಹೆಚ್ಚಾಗಿ ತಿಂದು ವಾಂತಿ ಮಾಡಿದರೆ ನನ್ನ ದೇಹದ ತೂಕ ಕಂಟ್ರೋಲ್ ಮಾಡಬಹುದು ಎಂದು ಭಾವಿಸಿದೆ.

ನನ್ನ ಪಾಲಕರಿಗೆ ಈ ವಿಷಯ ಗೊತ್ತಾಗಿ ತುಂಬಾ ಕಳವಳಗೊಂಡರು. ನನ್ನ ಪರಿಸ್ಥಿತಿ ಅವರಿಗೆ ಅರ್ಥವಾಗಲಿಲ್ಲ. ನಾನು ಅವರೊಂದಿಗೆ ಜಗಳ ಮಾಡಿದೆ ಮತ್ತು ನನ್ನ ವರ್ತನೆ ಸರಿ ಎಂದು ಸಾಧಿಸಲು ಪ್ರಯತ್ನಿಸಿದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ನನ್ನ ಸಮಸ್ಯೆಯ ಬಗ್ಗೆ ಚಿಂತೆಯಾಯಿತು.

12ನೆಯ ತರಗತಿಯ ನಂತರ ನನಗೆ ಇಂಟರ್ನೆಟ್ ಬಳಸಲು ಅವಕಾಶ ದೊರೆಯಿತು. ನನ್ನ ನಡವಳಿಕೆಯ ಲಕ್ಷಣಗಳನ್ನು ಅರಿಯಲು ಪ್ರಯತ್ನಿಸಿದೆ. ನಾನು ಬುಲಿಮಿಯಾ (ನರ್ವೋಸಾ)ದ ಬಗ್ಗೆ ಓದಿ ನನ್ನ ತಾಯಿಗೆ ತಿಳಿಸಿದೆ . ನಾವು ಇದರ ಬಗ್ಗೆ ಪ್ರತಿದಿನವೂ ವಾದಿಸಿದೆವು. ನನಗೆ ಸಹಾಯ ಬೇಕೆಂಬುದು ನನಗೆ ತಿಳಿದಿತ್ತು ಆದರೆ ನಾನಾಗಿಯೇ ಹೋಗಿ ಅದನ್ನು ಪಡೆಯುವಷ್ಷು ಧೈರ್ಯ ವಿರಲಿಲ್ಲ. ನನ್ನ ಪಾಲಕರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಹಲವು ಬಾರಿಯ ವಾದ ಮತ್ತು ಅಳುವ ಘಟನೆಗಳ ನಂತರ ಅವರು ನನ್ನ ಬೇಡಿಕೆಗೆ ಸ್ಪಂದಿಸಿದರು. ಅವರು ನಗರದ ಕೆಲವು ವೈದ್ಯರ ಬಳಿ ಕರೆದುಕೊಂಡು ಹೋದರು. ಆದರೆ, ಅವರು ನನ್ನ ಸಮಸ್ಯೆಗೆ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅಥವಾ ನಾನು ಹಾಗೆ ಭಾವಿಸಿದ್ದರಿಂದ ಮುಕ್ತವಾಗಿ ಎಲ್ಲವನ್ನೂ ಹೇಳಲು ಸಾಧ್ಯವಾಗಲಿಲ್ಲ. ನನಗೆ ಬೆಂಗಳೂರಿನ ನಿಮ್ಹಾನ್ಸ್ ಗೆ ಹೋಗಬೇಕೆಂದು ಅನಿಸುತ್ತಿತ್ತು. ಚಿಕ್ಕವಳಿದ್ದಾಗ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಯನ್ನು ನೋಡಲು ನಾನು ಅಲ್ಲಿಗೆ ಹೋಗಿದ್ದೆ. ನನ್ನ ತರಹದ ಮಾನಸಿಕ ಖಾಯಿಲೆಗೆ ಅಲ್ಲಿ ಜಾಗತಿಕ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಎಂದು ತಿಳಿದಿದ್ದೆ. ಅಲ್ಲಿ ನನ್ನ ಬುಲಿಮಿಯಾ ಚಿಕಿತ್ಸೆಯು ಆರಂಭವಾಯಿತು.- ಆ ಮೂರು ತಿಂಗಳ ಅವಧಿಯಲ್ಲಿ ನನ್ನ ತಿನ್ನುವ ಸಮಸ್ಯೆಯು ಹಲವು ಭಾವನಾತ್ಮಕ ಅಂಶಗಳ ಪರಿಣಾಮವೆಂದು ತಿಳಿಯಿತು.

ನನ್ನ ಚಿಕಿತ್ಸೆಯು ಕೆಲವು ಔಷಧ ಮತ್ತು ಹಲವಾರು ಥೆರಪಿಗಳಿಂದ ಕೂಡಿತ್ತು. ಇದರಿಂದ ನನ್ನ ಪಾಲಕರಿಗೆ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ನಾನು ಬೇಕೆಂದೇ ಆ ರೀತಿ ವರ್ತಿಸುತ್ತಿಲ್ಲವೆಂದು ತಿಳಿಯಿತು. ಕೆಲವೇ ದಿನಗಳಲ್ಲಿ ನಾನು ಸುಧಾರಿಸಿಕೊಂಡೆ. ಮುಂಬರುವ ದಿನಗಳಲ್ಲಿ ಇದು ನನ್ನ ಹೋರಾಟದ ಆರಂಭ ಎಂದು ತಿಳಿಯಿತು.

ತಿನ್ನುವ ಸಮಸ್ಯೆಯಿಂದ ಬಳಲುತ್ತಿದ್ದರೆ ಮಾನಸಿಕ ಆರೋಗ್ಯ ತಜ್ಞರನ್ನು ಕಂಡು ಚಿಕಿತ್ಸೆ ಪಡೆಯಬೇಕು ಚಿಕಿತ್ಸೆಯೊಂದಿಗೆ ಚೇತರಿಕೆಗೆ ಸ್ವಲ್ಪ ಸಮಯ ಬೇಕು. ಆದ ಕಾರಣ ನಾವು ತಾಳ್ಮೆಯಿಂದಿರಬೇಕು.

ಬುಲಿಮಿಯಾ ನನ್ನ ಸಮಸ್ಯೆಯಾಗಿರಲಿಲ್ಲ- ಜೀವನದ ಕಷ್ಟಕರ ಸಂದರ್ಭಗಳನ್ನು ನಿಭಾಯಿಸಲು ಅಸಮರ್ಥಳಾದದ್ದು ನನ್ನ ಸಮಸ್ಯೆಯಾಗಿತ್ತು. ಬುಲಿಮಿಯಾ ಕೇವಲ ಅದರ ಅಡ್ಡಪರಿಣಾಮವಾಗಿತ್ತು. ಈ ಸತ್ಯಾಂಶವನ್ನು ಥೆರಪೀ ಯಿಂದ ಕಲಿತೆ ಅಲ್ಲಿಯವರೆಗೆ ವಸತಿ ಶಾಲೆಯು ಒಂದು ಸಮಸ್ಯೆಯಾಗಿತ್ತೆಂದು, ನನ್ನ ಮತ್ತು ಪಾಲಕರ ಶೈಕ್ಷಣಿಕ ನಿರೀಕ್ಷೆಗಳು ಅತಿಯಾಗಿ ಹೊರೆಯಾಗಿದ್ದವು ಎಂಬುದು ನನಗೆ ತಿಳಿದಿರಲಿಲ್ಲ.

ಪರಿಸ್ಥಿತಿಗಳನ್ನು ಚೆನ್ನಾಗಿ ನಿಭಾಯಿಸುವ ವಿಧಾನಗಳನ್ನು ಕಲಿಯುವುದು ಮತ್ತು ನಾವು ನಿರ್ಧರಿಸಿದಂತೆ ನಡೆಯುವುದರತ್ತ ಗಮನ ನೀಡುವುದೇ ಚೇತರಿಕೆ ಎಂಬುದನ್ನು ನಾನು ಕಲಿತೆ. ನಾಲ್ಕು ವರ್ಷಗಳ ಮೊದಲು ನಾನು ಚಿಕಿತ್ಸೆಯನ್ನು ಆರಂಭಿಸಿದ್ದೆ. ಮತ್ತು ಈಗಲೂ ನಿಯಮಿತವಾಗಿ ಹೋಗುತ್ತೇನೆ. ನನ್ನ ದೇಹದ ಆಕೃತಿಯನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮಾಡುತ್ತೇನೆ ಮತ್ತು ಯೋಗಾಭ್ಯಾಸದ ಮೂಲಕ ನನ್ನ ಸಾಮರ್ಥ್ಯವನ್ನು ಸರಿಯಾದ ದಿಕ್ಕಿನೆಡೆ ಹರಿಸುತ್ತೇನೆ. ಮುಂಚಿನ ಭಾವನೆಗಳು ಕೆಲವೊಮ್ಮೆ ಮರುಕಳಿಸುತ್ತವೆ. ಆದರೆ, ನಾನು ಅವುಗಳನ್ನು ನಿಭಾಯಿಸುವ ಸಾಮರ್ಥ್ಯ ಪಡೆದಿದ್ದೇನೆ. ಕೆಲವೊಮ್ಮೆ ಹತಾಶೆಯು ಹೆಚ್ಚಾಗಿ ಜಾರುವುದೂ ಉಂಟು.

ನಾನು ಈಗ ಬಹಳ ಚೇತರಿಸಿಕೊಂಡಿದ್ದೇನೆ ಮತ್ತು ಕೆಲವೊಮ್ಮೆ ಇನ್ನೂ ಮುಂಚಿತವಾಗಿ ಸಹಾಯ ಪಡೆದಿದ್ದರೆ ಚೆನ್ನಾಗಿತ್ತು ಎಂದು ಯೋಚಿಸುತ್ತೇನೆ. ನಿಮಗೆ ಪರಿಚಯದವರಲ್ಲಿ ಯಾರಿಗಾದರೂ ತಿನ್ನುವ ಸಮಸ್ಯೆ ಇದ್ದರೆ ಕೂಡಲೇ ಸಹಾಯ ಪಡೆಯಿರಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org