ಉದ್ಯೋಗಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ

ಒಂದು ಸಂಸ್ಥೆಯು ಆತ್ಮಹತ್ಯೆಯೆಂಬ ಬಿಕ್ಕಟ್ಟಿನ ಸನ್ನಿವೇಶವನ್ನು ಮತ್ತು ನೋವಿನಲ್ಲಿರುವ ತನ್ನ ಉದ್ಯೋಗಿಗಳನ್ನು ಹೇಗೆ ನಿಭಾಯಿಸಬೇಕು ?

ನಮ್ಮ ದಿನ ನಿತ್ಯದ ಬದುಕಿನಲ್ಲಿ ಏರುತ್ತಿರುವ ಒತ್ತಡಗಳ ನಡುವೆ, ಆತ್ಮಹತ್ಯೆ ತಡೆಗಟ್ಟುವಿಕೆಯಲ್ಲಿ ನಾವು ಕೆಲಸ ಮಾಡುವ ಸ್ಥಳ ನಿರ್ಧಾರಕ ಪಾತ್ರವನ್ನು ವಹಿಸುತ್ತದೆ. 'ಕೆಲಸ ಮಾಡುವ ಸ್ಥಳದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ' ಲೇಖನ ಸರಣಿಯ ನಾಲ್ಕನೇ ಭಾಗವಾದ ಈ ಲೇಖನದಲ್ಲಿ ಶ್ರೀರಂಜಿತಾ ಜೋರ್ಕರ್ ರವರು ,ಒಂದು ಸಂಸ್ಥೆಯು, ಉದ್ಯೋಗಿಗಳಿಗೆ ಧೈರ್ಯ ತುಂಬುವಲ್ಲಿ ಯಾವ ರೀತಿ ಕ್ರಮ ತೆಗೆದು ಕೊಳ್ಳಬಹುದು ಎನ್ನುವುದರ ಬಗ್ಗೆ ವಿವರಿಸಿದ್ದಾರೆ.

35ರ ಹರೆಯದ ಅಜಯ್, ಐದು ವರ್ಷಗಳಿಂದ ಬಹುದೊಡ್ಡ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ.ತನ್ನ ಕಾರ್ಯಕ್ಷಮತೆಗೆ ಮತ್ತು ತನ್ನ ಜೊತೆಗಾರರ ನಡುವೆ ಹೆಸರುವಾಸಿಯಾಗಿದ್ದಂತಹ ವ್ಯಕ್ತಿ. ಇದ್ದಕ್ಕಿದ್ದಂತೆ ಒಂದು ವಾರ ಕೆಲಸಕ್ಕೆ ಗೈರಾದಾಗ ಅಜಯ್ನ ಸಹೋದ್ಯೋಗಿಗಳು,ಅವನಿಗೆ ಆರೋಗ್ಯ ಸರಿಯಿಲ್ಲವೆಂದು ಊಹಿಸಿದ್ದರು.

ಇಷ್ಟು ದಿನಗಳಾದರೂ ಕೆಲಸಕ್ಕೆ ಅವನು ಗೈರಾಗಿರುವ ಬಗ್ಗೆ ಇರಬಹುದಾದ ಬೇರೆ ಕಾರಣಗಳ ಕಲ್ಪನೆಯೂ ಅವರಿಗಿರಲಿಲ್ಲ. ಅಜಯ್ ಕೆಲಸ ಮಾಡುತ್ತಿದ್ದ ಸಂಸ್ಥೆಯು , ಆತನ ಅನಿಗಧಿತ ಗೈರುಹಾಜರಿಯ ಬಗ್ಗೆ ಕಾರಣ ತಿಳಿಯಲು ಅವನನ್ನು ಸಂಪರ್ಕಿಸಿದಾಗ ಅವನ ಕುಟುಂಬದವರ ಮೂಲಕ ಅಜಯ್ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯಿತು.

ಅಜಯ್ ಸಾವಿನ ಬಗ್ಗೆ ಅವನ ಸಹೋದ್ಯೋಗಿಗಳಿಗೆ ವಿಷಯ ತಿಳಿದ ನಂತರ ಬೆಚ್ಚಿಬಿದ್ದರು. ಅವರಿಗೆ ಕೆಲಸದ ಕಡೆ ಗಮನಹರಿಸಲು ತುಂಬಾ ಕಷ್ಟವಾಯಿತು. ಅಜಯ್ ಆತ್ಮಹತ್ಯೆ ಬಗ್ಗೆ ಹಲವಾರು ವದಂತಿಗಳು ಹಬ್ಬಿದವು. ಕೆಲವರು, ಅಜಯ್ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಿದರೆ, ಮತ್ತೆ ಕೆಲವರು ಸಂಬಂಧದಲ್ಲಿ ಸಮಸ್ಯೆಯಿರಬಹುದೆಂಬ ಕಾರಣ ಕೊಟ್ಟರು. ಪರಿಸ್ಥಿತಿ ಕೈ ಜಾರುವ ಮುನ್ನ ಈ ಘಟನೆಯನ್ನು ಹೇಗೆ ನಿಭಾಯಿಸುವುದು ಎಂದು ಆಡಳಿತ ವರ್ಗಕ್ಕೆ ದಿಕ್ಕು ತೋಚದಾಯಿತು.

ನಿಜ ಜೀವನದಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ ಇಂತಹ ಘಟನೆಯ ಅರಿವು ಮೂಡಿಸಲು ಸಹಾಯವಾಗಲೆಂದು ನುರಿತ ತಜ್ಞರ ಸಲಹೆ ಪಡೆದು ಈ ಕಾಲ್ಪನಿಕ ಕಥೆಯನ್ನು ರಚಿಸಲಾಗಿದೆ.

 ಒಬ್ಬ ಉದ್ಯೋಗಿಯ ಆತ್ಮಹತ್ಯೆಯು ಸಂಸ್ಥೆಯ ಒಳಗೆ-ಹೊರಗೆ ಹಲವಾರು ಏರಿಳಿತಗಳಿಗೆ ಕಾರಣವಾಗುತ್ತದೆ. ಸಹೋದ್ಯೋಗಿಗಳು ,ವ್ಯವಸ್ಥಾಪಕರು, ಮಾನವ ಸಂಪನ್ಮೂಲ ಇಲಾಖೆಯ ಸಿಬ್ಬಂದಿ ಮತ್ತು ಆಡಳಿತ ವರ್ಗದವರನ್ನು ಭಾಧಿಸುತ್ತದೆ. ಸಹೋದ್ಯೋಗಿಗಳು ಮತ್ತು ಆಡಳಿತ ವರ್ಗದವರಿಗೆ, ತಮ್ಮ ಆತ್ಮೀಯ ಜೊತೆಗಾರನೊಬ್ಬನನ್ನು ಕಳೆದುಕೊಂಡ ದುಃಖವಿರಬಹುದು. ಜೊತೆಗೆ ತಮ್ಮ ಅಸಹಾಕತೆಯ ಬಗ್ಗೆ ಪಾಪಪ್ರಜ್ಞೆ ಕಾಡಬಹುದು.( "ನಾನು ಸಹಾಯ ಮಾಡಬೇಕಿತ್ತು...” ) ಅಥವ ಕೋಪ (ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುವಂತೆ ದೂಡಿದ ಆ ಸಂದರ್ಭದ ಮೇಲೆ ) ಬರಬಹುದು.

ಒಂದು ವೇಳೆ ಆ ವ್ಯಕ್ತಿಯು ಕೆಲಸದ ಒತ್ತಡದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದರ ಪರಿಣಾಮಗಳು ಮತ್ತಷ್ಟು ತೀರ್ವವಾಗಬಹುದು.ಅವನ ಸಹೋದ್ಯೋಗಿಗಳು ಮತ್ತು ಉಳಿದ ಜೊತೆಗಾರರು ತುಂಬಾ ವೇದನೆಯನ್ನು ಅನುಭವಿಸಬಹುದು ಮತ್ತು ಇದರಿಂದ ಅವರ ಕೆಲಸವನ್ನು ನಿರ್ವಹಿಸಲು ಅಡ್ಡಿಯುಂಟಾಗಬಹುದು. ಹಲವಾರು ಪ್ರಕರಣಗಳಲ್ಲಿ, ಈ ರೀತಿಯ ಅಸ್ವಾಭಾವಿಕ ಸಾವು ಸುಳ್ಳುವದಂತಿಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ನೆಡೆದ ಘಟನೆಯ ಬಗ್ಗೆ ತೀರ್ವ ಕುತೂಹಲವನ್ನುಂಟುಮಾಡುತ್ತದೆ. ಈ ಎಲ್ಲಾ ಕಾರಣಗಳು ಉದ್ಯೋಗಿಗಳ ಸ್ಥೈರ್ಯ ಮತ್ತು ಸಂಸ್ಥೆಯ ಘನತೆಯ ಮೇಲೆ ಪ್ರಭಾವ ಬೀರುತ್ತದೆ.

ಆತ್ಮಹತ್ಯಾ ಪೋಸ್ಟ್ ವೆನ್ಷನ್ ಯೋಜನೆ ಎಂದರೆ ಏನು ?

ಆತ್ಮಹತ್ಯಾ ಪೋಸ್ಟ್ ವೆನ್ಷನ್ ಯೋಜನೆ ಎಂದರೆ ಆತ್ಮಹತ್ಯೆಯಿಂದ ನೊಂದಿರುವ ವ್ಯಕ್ತಿಗಳಿಗೆ ಭಾವನಾತ್ಮಕ ಬೆಂಬಲ ಸೂಚಿಸುವುದು. ಸಾಮಾನ್ಯವಾಗಿ ಈ ಯೋಜನೆಯು ಮೃತರ ಕುಟುಂಬ ಹಾಗೂ ಅವನ ಸ್ನೇಹಿತರ ಸಾಂತ್ವನದ ಗುರಿ ಹೊಂದಿರುತ್ತದೆ. ಅದಾಗ್ಯೂ ಸಹೋದ್ಯೋಗಿಗಳ ಮೇಲೆ ಕೂಡ ತೀವ್ರವಾದ ಪರಿಣಾಮ ಬೀರಬಹುದು.

ಆತ್ಮಹತ್ಯಾ ಪೋಸ್ಟ್ ವೆನ್ಷನ್ ಯೋಜನೆಯ ಮುಖ್ಯ ಉದ್ದೇಶಗಳು :

  1. ಉದ್ಯೋಗಿಯ ಸಾವಿನ ಬಗ್ಗೆ ಖಚಿತವಾದ ಮಾಹಿತಿ ನೀಡುವುದು ಮತ್ತು ಪರಿಸ್ಥಿತಿ ಹತೋಟಿ ಮೀರಿ ಸುಳ್ಳು ವದಂತಿಗಳು ಹರಡದಂತೆ ತಡೆಗಟ್ಟುವುದು.

  2. ಆತ್ಮಹತ್ಯೆಯಿಂದ ದುಃಖತಪ್ತರಾದ ಉದ್ಯೋಗಿಗಳಿಗೆ ಭಾವನಾತ್ಮಕ ಬೆಂಬಲ ನೀಡುವುದು, ಮತ್ತು ಆಘಾತವನ್ನು ನಿಭಾಯಿಸಲು ಅವರಿಗೆ ಸಹಕಾರ ಮಾಡುವುದು. ಇದರಿಂದ ಮುಂದಾಗುವ ಆತ್ಮಹತ್ಯೆಯನ್ನು ತಡೆಗಟ್ಟಲು ಸಂಸ್ಥೆಗೆ ಅನುಕೂಲವಾಗುತ್ತದೆ.

  3. ಆತ್ಮಹತ್ಯೆಗೆ ಸಂಬಂಧಿಸಿದ ಕಳಂಕಗಳ ಬಗ್ಗೆ ಗಮನ ತರುವುದು.

  4. ಉದ್ಯೋಗಿಗಳು ಯಥಾಸ್ಥಿತಿಗೆ ಹಿಂದಿರುಗಲು ಸಹಕಾರ ನೀಡುವುದು, ಅವರು ಆರೋಗ್ಯದಿಂದಿರಲು ಮತ್ತು ತಮ್ಮ ಜವಾಬ್ದಾರಿಗೆ ಮರಳಲು ಅನುವು ಮಾಡಿಕೊಡುವುದು.

ಒಂದು ಆತ್ಮಹತ್ಯೆ ಜರುಗುವ ಮುನ್ನವೇ, ಸಂಸ್ಥೆಯಲ್ಲಿ ಪೋಸ್ಟ್ ವೆನ್ಷನ್ ಯೋಜನೆಯು ಜಾರಿಯಲ್ಲಿರಬೇಕು. ಸಂಸ್ಥೆಯ ಆಡಳಿತ ವರ್ಗ ಮತ್ತು ಮಾನವ ಸಂಪನ್ಮೂಲ ವ್ಯಕ್ತಿಗಳು ,ನುರಿತ ಮಾನಸಿಕ ಆರೋಗ್ಯ ತಜ್ಙರುಗಳೊಂದಿಗೆ ಸೇರಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿಡಬೇಕು. ಇದರಿಂದ ಯಾರಾದರೂ ಆತ್ಮಹತ್ಯೆ ಪ್ರಯತ್ನಿಸಿದಾಗ ಅಥವ ಆತ್ಮಹತ್ಯೆ ಜರುಗಿದಾಗ ತಾವು ಮಾಡಬೇಕಾದ ಕಾರ್ಯವೇನು ? ಎಂಬುದರ ಬಗ್ಗೆ ಸ್ಪಷ್ಟ ಅರಿವು ಸಿಗುತ್ತದೆ.

ಈ ಮಾಹಿತಿ ಸಂಗ್ರಹವು ಸಂಸ್ಥೆಯ ಉಪಯೋಗಕ್ಕೆ ಬರಲಿ ಅಥವ, ಬರದೇ ಇರಲಿ ಅಥವ, ಕಡಿಮೆ ಉಪಯೋಗಕ್ಕೆ ಬರಲಿ, ಇದನ್ನು ಬರವಣಿಗೆಯ ರೂಪದಲ್ಲಿ ಅವಶ್ಯಕವಾಗಿ ಸಂಗ್ರಹಿಸಿಡಬೇಕು. ಇದರಿಂದ ಆತ್ಮಹತ್ಯೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ತಿಳುವಳಿಕೆ ಸಿಗುತ್ತದೆ. ಈ ಮೂಲಕ ಆಘಾತವನ್ನು ನಿಭಾಯಿಸಲು ಸಹಾಯವಾಗುತ್ತದೆ.

ಬಿಕ್ಕಟ್ಟನ್ನು ನಿಭಾಯಿಸುವುದು

ಪೋಸ್ಟ್ ವೆನ್ಷನ್ ಯೋಜನೆಯ ಪ್ರಕಾರ, ಸಂಸ್ಥೆಯು ಬಿಕ್ಕಟ್ಟಿನ ಸ್ಥಿತಿಯನ್ನು ತಕ್ಷಣ ನಿಭಾಯಿಸಲು ಒಂದು ತುರ್ತು ಪ್ರತಿಕ್ರಿಯಾ ತಂಡವನ್ನು ಹೊಂದಿರಬೇಕು. ಈ ತಂಡದ ಸದಸ್ಯರುಗಳಿಗೆ (ಮಾನವ ಸಂಪನ್ಮೂಲ ವ್ಯಕ್ತಿಗಳು, ಆಡಳಿತ ವರ್ಗ ಅಥವ ಬೇರೆ ಇಲಾಖೆಯ ಸಿಬ್ಬಂದಿಗಳಾಗಿರಬಹುದು) ತಮ್ಮ ಪಾತ್ರ ಮತ್ತು ಜವಾಬ್ದಾರಿಯ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಹೀಗೆ ಸರಿಯಾದ ಮಾರ್ಗಸೂಚಿಗಳ ದಾಖಲಾತಿಯಿದ್ದಾಗ, ಆತ್ಮಹತ್ಯೆಯ ಸುದ್ದಿ ತಲುಪಿದ ತಕ್ಷಣ ಪ್ರತಿಕ್ರಿಯಿಸಲು ಅನುಕೂಲವಾಗುತ್ತದೆ. ಪೋಸ್ಟ್ ವೆನ್ಷನ್ ಯೋಜನೆಯು ಕೆಲವು ಅಂಶಗಳನ್ನು ಹೊಂದಿರುತ್ತದೆ.

  • ಮೃತರ ಕುಟುಂಬದವರೊಂದಿಗೆ ಸಂಪರ್ಕಿಸುವ ವ್ಯಕ್ತಿ ಯಾರು ಎಂದು ಗುರುತಿಸುವುದು

  • ಘಟನೆಯ ಬಗ್ಗೆ ಉದ್ಯೋಗಿಗಳಿಗೆ, ಆಪ್ತ ಸ್ನೇಹಿತರಿಗೆ, ಅದರಲ್ಲಿಯೂ ಮೃತ ಪಟ್ಟ ವ್ಯಕ್ತಿಯ ಜೊತೆಗಾರರಿಗೆ ಮಾಹಿತಿ ನೀಡುವವರು ಯಾರು ಎಂದು ಗುರುತಿಸುವುದು

  • ಮಾಧ್ಯಮದವರೊಂದಿಗೆ ಸಂಪರ್ಕಿಸಿ ಅಗತ್ಯ ಮಾಹಿತಿ ನೀಡುವವರು ಯಾರೆಂದು ಗುರುತಿಸುವುದು.

  • ಸಂಸ್ಥೆಯ ಎಲ್ಲಾ ಸದಸ್ಯರಿಗೆ ಜಾಗರೂಕತೆಯಿಂದ ವಿಷಯವನ್ನು ತಿಳಿಸುವ ಮತ್ತು ಸ್ಥೈರ್ಯ ತುಂಬುವ ಬಗ್ಗೆ ಯೋಜಿಸುವುದು ( ಆಪ್ತ ಸಲಹೆಗಾರರು, ಅಥವಾ ಬೇರೊಬ್ಬ ವೃತ್ತಿಪರ ಮಾನಸಿಕ ಆರೋಗ್ಯ ತಜ್ಞರ ಪ್ರವೇಶ )

ಸಾಮಾನ್ಯವಾಗಿ ಮೃತನ ಕುಟುಂಬದವರು ಸಮಾಜದಲ್ಲಿ ಎದುರಿಸುವ ಅವಮಾನಗಳಿಂದಾಗಿ, ಸಾವಿನ ಕಾರಣವನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕುಟುಂಬದವರ ಆಶಯಗಳನ್ನು ಕಾಪಾಡುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ಕುಟುಂಬದವರ ಜೊತೆ ಸಮಾಲೋಚನೆ ನೆಡೆಸಿದ ನಂತರ ಸಾವಿಗೆ ಸಂಬಂಧಿಸಿದ ವಿವರಗಳನ್ನು ಎಷ್ಟು ಹಂಚಿಕೊಳ್ಳಬೇಕು ಎಂದು ನಿರ್ಧರಿಸಬೇಕಾಗುತ್ತದೆ.  ಬಲವಾದ ಸಂದರ್ಭಗಳನ್ನು ಹೊರತುಪಡಿಸಿ ಉಳಿದಂತೆ ಸಾವಿನ ವಿವರಗಳನ್ನು ಗೌಪ್ಯವಾಗಿರಿಸಿ.

ಆತ್ಮಹತ್ಯೆಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ತಜ್ಞರು ಸೂಚಿಸುತ್ತಾರೆ.

  • ಆತ್ಮಹತ್ಯೆಯನ್ನು ಭಾವೋದ್ರೇಕಗೊಳಿಸುವ ಅಥವ ಅದೊಂದು ಸಮಸ್ಯೆಗೆ ಪರಿಹಾರವೆಂಬಂತೆ ಸೂಚಿಸುವ ಮಾತುಗಳನ್ನು ಬಳಸಬೇಡಿ.

  • ಆತ್ಮಹತ್ಯೆ ಘಟಿಸಿದ ವಿಧಾನ, ಕಾರಣಗಳನ್ನು ವಿವರಣಾತ್ಮಕವಾಗಿ ಹೇಳಬೇಡಿ.

  • ಫೋಟೋ ಮತ್ತು ವಿಡಿಯೋಗಳನ್ನು ಉಪಯೋಗಿಸದಿರಿ.

  • ಆತ್ಮಹತ್ಯೆಯಿಂದ ನೊಂದವರ ಬಗ್ಗೆ ಹೆಚ್ಚು ಕಾಳಜಿ ತೋರಿಸಿ.

  • ಸನ್ನಿವೇಶವನ್ನು, ಆತ್ಮಹತ್ಯೆಯ ಸೂಕ್ಷ್ಮತೆಗಳ ಬಗ್ಗೆ ಅರಿಯಲು ಉಪಯೋಗಿಸಿಕೊಳ್ಳಿ.

  • ನೌಕರರು ಎಲ್ಲಿ ಸಹಾಯವನ್ನು ಪಡೆಯಬಹುದು ಎಂಬ ಮಾಹಿತಿಯನ್ನು ನೀಡಿ.

ಶೋಕಾಚರಣೆ

ವ್ಯಕ್ತಿಯ ಸಹೋದ್ಯೋಗಿಗಳೊಂದಿಗೆ ಮತ್ತು ವ್ಯವಸ್ಥಾಪಕರೊಂದಿಗೆ ವಿಷಯವನ್ನು ಹಂಚಿಕೊಂಡ ನಂತರ, ಸಂಸ್ಥೆಯು ಅಂತ್ಯಕ್ರಿಯೆಯಲ್ಲಿ ಅಥವಾ ಸ್ಮರಿಸುವ ದಿನದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವುದು. ಇದರಿಂದ ಉದ್ಯೋಗಿಗಳಿಗೆ ತಮ್ಮ ದುಃಖವನ್ನು ಹೊರಹಾಕಲು ಅವಕಾಶ ಸಿಗುತ್ತದೆ. ಉದ್ಯೋಗಿಯ ಸಾವಿನ ಬಗ್ಗೆ ಅಧಿಕೃತವಾಗಿ ಚರ್ಚಿಸುವಾಗ ಯಾವುದೇ ಕಾರಣಕ್ಕೂ ಆತನನ್ನು ನಿಂದಿಸಿ ಮಾತನಾಡದಂತೆ ಅಥವಾ, ಸಾವಿನ ಸುದ್ದಿಯನ್ನು ಭಾವೋದ್ರೇಕಗೊಳಿಸದಂತೆ ಎಚ್ಚರಿಕೆ ನೀಡುವುದು.ಸಂಸ್ಥೆಯು ಬೇರೆಯವರೊಂದಿಗೆ ಮಾತನಾಡುವಾಗ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಬೇಕೆ ಹೊರತು, ಮೃತನು ತನ್ನ ಜೀವನವನ್ನು ತಾನೆ ಅಂತ್ಯಗೊಳಿಸಿಕೊಂಡ ಎನ್ನುವಂತಹ ನಿರ್ಧರಿತ ಹೇಳಿಕೆಯನ್ನು ನೀಡಬಾರದು.

ಹೀಗೆ ಸಂಸ್ಥೆಯು ಸನ್ನಿವೇಶವನ್ನು ಸೂಕ್ಷ್ಮವಾಗಿ ನಿಭಾಯಿಸುವುದರಿಂದ, ಉದ್ಯೋಗಿಗಳಿಗೆ ತಮ್ಮ ಯಾತನೆಯಿಂದ ಹೊರಗೆ ಬರಲು ಸುಲಭವಾಗುತ್ತದೆ. ಈ ಹಂತದಲ್ಲಿ ವ್ಯಕ್ತಿಯ ಜೊತೆಗಾರರಿಗೆ ಆಪ್ತ ಸಲಹೆಯ ಅವಶ್ಯಕತೆಯಿದೆಯೇ ಎಂದು ಗಮನಿಸಿ, ಗೌಪ್ಯತೆ ಕಾಪಾಡುವ ಬಗ್ಗೆ ಭರವಸೆ ನೀಡಿ ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕಾಗಿರುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ.

ಯೋಗಕ್ಷೇಮದ ಭರವಸೆ

ಸಂಸ್ಥೆಗೆ ಬಿಕ್ಕಟ್ಟಿನ ತರುವಾಯ ಸುಲಭವಾಗಿ ತನ್ನ ಸಹಜ ಸ್ಥಿತಿಗೆ ಮರಳಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರೂ ದುಃಖವನ್ನು ಮರೆಯಲು ತಮ್ಮದೇ ಆದ ಸಮಯ ತೆಗೆದುಕೊಳ್ಳುತ್ತಾರೆ; ಕೆಲವರು ಒಂದು ವಾರದಲ್ಲಿ ಸಹಜ ಸ್ಥಿತಿಗೆ ಹಿಂದಿರುಗಿದರೆ, ಮತ್ತೆ ಕೆಲವರು ತಿಂಗಳುಗಳನ್ನೇ ತೆಗೆದುಕೊಳ್ಳಬಹುದು. ಇಂತಹ ವೇಳೆಯಲ್ಲಿ ಪೋಸ್ಟ್ ವೆನ್ಷನ್ ತಂಡದವರು ನೌಕರರ ಮನಸ್ಥಿತಿಯನ್ನು ಗಮನಿಸಿ, ಸೂಕ್ತ ಸಹಾಯ ಮಾಡಬಹುದು.

ನಿಮ್ಮ ಸಂಸ್ಥೆಯಲ್ಲಿ ಪೋಸ್ಟ್ ವೆನ್ಷನ್ ಯೋಜನೆ ಅಳವಡಿಸಲು ಹೆಚ್ಚಿನ ಮಾಹಿತಿಗಾಗಿ- ಉದ್ಯೋಗಿ ನೆರವು ಕಾರ್ಯಕ್ರಮ , ಯೋಗಕ್ಷೇಮ ಮತ್ತು ವೈದ್ಯಕೀಯ ಮನಶ್ಯಾಸ್ತ್ರಇಲಾಖೆ, ನಿಮ್ಹಾನ್ಸ್ ಕೇಂದ್ರ, ಇವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ workshops.nimhans@gmail.com ಗೆ ಸಂಪರ್ಕಿಸಿ.

ಈ ಲೇಖನ ಮಾಲಿಕೆಯು ವೈಟ್ ಸ್ವಾನ್ ಫೌಂಡೇಷನ್ಸ್ ಸಂಸ್ಥೆಯಿಂದ ರಚಿತವಾಗಿದೆ.

ಹರಿವು :ಡಾ.ಗುರುರಾಜ್ ಗೋಪಾಲಕೃಷ್ಣ, ಮುಖ್ಯಸ್ಥರು, ಎಪಿಡೆಮಾಲಜಿ ಇಲಾಖೆ; ಡಾ. ಪ್ರಭಾ ಚಂದ್ರ , ಮನೋ ವೈದ್ಯಶಾಸ್ತ್ರ ಪ್ರಾಧ್ಯಾಪಕರು, ನಿಮ್ಹಾನ್ಸ್; ಡಾ.ಸೀಮಾ ಮಲ್ಹೋತ್ರ, ಹೆಚ್ಚುವರಿ ಪ್ರಾಧ್ಯಾಪಕರು,ವೈದ್ಯಕೀಯ ಮನಶ್ಯಾಸ್ತ್ರ ವಿಭಾಗ, ನಿಮ್ಹಾನ್ಸ್; ಡಾ. ಪೂರ್ಣಿಮಾ ಭೋಲಾ, ಸಹ ಪ್ರಾಧ್ಯಾಪಕರು, ವೈದ್ಯಕೀಯ ಮನಶ್ಯಾಸ್ತ್ರ ಇಲಾಖೆ, ನಿಮ್ಹಾನ್ಸ್; ಮತ್ತು ಡಾ. ಸೆಂದಿಲ್ ಕುಮಾರ್ ರೆಡ್ಡಿ, ಪ್ರಾದ್ಯಾಪಕರು, ಮನೋ ವೈದ್ಯಶಾಸ್ತ್ರ ವಿಭಾಗ, ನಿಮ್ಹಾನ್ಸ್.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org