ಖಿನ್ನತೆ : ನಿಮ್ಮ ಮಗು ಹೇಳದೇ ಇರುವುದನ್ನು ಆಲಿಸಲು ಯತ್ನಿಸಿ

ಬಾಲ್ಯದ ಖಿನ್ನತೆಯೊಂದು ಸತ್ಯ. ಪೋಷಕರು ಮಗುವಿಗೆ ಅದನ್ನು ಅರ್ಥ ಮಾಡಿಸಿ, ತಮ್ಮ ಕಾಳಜಿಯನ್ನು ತಾವೇ ತೆಗೆದುಕೊಳ್ಳಲು ಎಲ್ಲಾ ಬಗೆಯ ಸಹಕಾರ ನೀಡಬೇಕು.

ಖಿನ್ನತೆ ಒಂದು ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಮನೋರೋಗ. ವಯಸ್ಕರಲ್ಲಿ ಮಾತ್ರವಲ್ಲ, ಇದು ಮಕ್ಕಳು ಹಾಗೂ ಹದಿಹರೆಯದವರಲ್ಲೂ ಕಂಡು ಬರುವುದುಂಟು.

ವಿಶ್ವ ಆರೋಗ್ಯ ಸಂಸ್ಥೆ (WHO)ಯ ‘Health for the World's Adolescents’ ಅಧ್ಯಯನ ವರದಿಯು 10ರಿಂದ 19ರ ವಯಸ್ಸಿನ ಮಕ್ಕಳಲ್ಲಿ ಅನಾರೋಗ್ಯ ಹಾಗೂ ಅಂಗವಿಕಲತೆಗೆ ಖಿನ್ನತೆಯು ಮುಖ್ಯ ಕಾರಣವೆಂದು ಹೇಳುತ್ತದೆ. ಇದು ಇತ್ತೀಚೆಗೆ ಗುರುತಿಸಲ್ಪಟ್ಟ ಸಂಗತಿ. ಆದರೆ ಎರಡು ದಶಕಗಳ ಹಿಂದೆ ಖಿನ್ನತೆ ಮತ್ತಿತರ ಮಾನಸಿಕ ಕಾಯಿಲೆಗಳು ಮಕ್ಕಳಿಗೂ ಉಂಟಾಗುತ್ತವೆ ಅನ್ನುವುದು ಬಹುತೇಕರಿಗೆ ಗೊತ್ತೇ ಇಲ್ಲದ ವಿಷಯವಾಗಿತ್ತು. ಆದ್ದರಿಂದ ಇದಕ್ಕೆ ಪರಿಹಾರ ಹುಡುಕುವುದು ಸಮಾಜಕ್ಕೂ ವೈದ್ಯಕೀಯ ಲೋಕಕ್ಕೂ ಒಂದು ಸವಾಲಾಗಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ನಿರ್ದಿಷ್ಟ ನಡವಳಿಕೆಯನ್ನು ತೋರುವ ಮಕ್ಕಳಲ್ಲಿ ಖಿನ್ನತೆ ಇರುವುದನ್ನು ಗುರುತಿಸಲಾಗುತ್ತದೆ. ಕೆಲವು ಮಕ್ಕಳಲ್ಲಿ ಇದು ಅವರ ವಯಸ್ಸಿನೊಂದಿಗೇ ಬೆಳೆಯುತ್ತಾ ಹೋಗುವ ಅಪಾಯವೂ ಇರುತ್ತದೆ. ಹಾಗಿದ್ದರೂ ಕೂಡ ಕೆಲವರಲ್ಲಿ ಮಕ್ಕಳಿಗೆ ಖಿನ್ನತೆ ಉಂಟಾಗಲು ಕಾರಣಗಳೇ ಇಲ್ಲ ಎಂಬ ನಂಬಿಕೆ ಇದೆ. ಅವರ ಪ್ರಕಾರ ಹತ್ತು ಹಲವು ಜವಾಬ್ದಾರಿಗಳನ್ನು ಹೊತ್ತವರಿಗೆ ಮಾತ್ರ ಖಿನ್ನತೆ ಉಂಟಾಗುವುದು; ಉಳಿದಂತೆ ಮಕ್ಕಳ ಮನಸ್ಥಿತಿ ಅವರ ಬೆಳವಣಿಗೆಯ ಒಂದು ಭಾಗವಾಗಿರುತ್ತದೆ ಎಂದು. ಆದರೆ ಅದು ಸರಿಯಲ್ಲ. ಮಕ್ಕಳಲ್ಲಿ ಕಂಡುಬರುವ ದುಃಖ ಖಿನ್ನತೆಯೇ ಆಗಿದೆ.

ಮಕ್ಕಳ ಖಿನ್ನತೆಯು ನಿಜವಾದದು

ಬಾಲ್ಯದ ಖಿನ್ನತೆಯು ನಿಜವಾಗಿಯೂ ಉಂಟಾಗುವಂಥದ್ದು. ಪೋಷಕರು ಮಗುವಿಗೆ ಅದನ್ನು ಅರ್ಥ ಮಾಡಿಸಿ, ತಮ್ಮ ಕಾಳಜಿಯನ್ನು ತಾವೇ ವಹಿಸಲು ಎಲ್ಲ ಬಗೆಯ ಸಹಕಾರ ನೀಡಬೇಕು.

ಆರಂಭದ ದಿನಗಳಲ್ಲಿ ನನ್ನ ಬಳಿ ಮಕ್ಕಳ ವೈದ್ಯರೊಬ್ಬರು 10 ವರ್ಷದ ಮಗುವನ್ನು ಕಳುಹಿಸಿದ್ದರು. ಆ ಮಗು ಓದಿನಲ್ಲಿ ಆಸಕ್ತಿಯನ್ನೇ ತೋರುತ್ತಿಲ್ಲ ಅನ್ನುವುದು ಅದಕ್ಕೆ ಕಾರಣವಾಗಿತ್ತು. ಮಗುವಿನೊಟ್ಟಿಗೆ ಮಾತನಾಡುವಾಗ ಅದು ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸದೆ ಮೌನವಾಗಿ ಉಳಿದು ಬಿಡುತ್ತಿತ್ತು. ಇಂಥ ಸಂದರ್ಭಗಳಲ್ಲಿ ನಾವು ಪ್ರಾಯೋಗಿಕ ಪರೀಕ್ಷೆಗಳನ್ನು ಮಾಡುತ್ತೇವೆ. ಮಗುವು ತನ್ನನ್ನು ತಾನು ಹೇಗೆ ಕಾಣುತ್ತದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ಪರೀಕ್ಷೆ.

ಅದರಂತೆ, ಮೊದಲು ಮಗುವಿನ ಬಳಿ ಅದರ ಮೂರು ಬಯಕೆಗಳನ್ನು ಹೇಳುವಂತೆ ಕೇಳಲಾಯಿತು. ಇದರಿಂದ ನಮ್ಮ ತಪಾಸಣೆಗೆ ಬೇಕಾದ ಉತ್ತರ ಸಿಗುವುದೆಂದು ಖಾತ್ರಿ ಇತ್ತು. ನನ್ನ ಪ್ರಶ್ನೆಗೆ ಮಗು, ಎಲ್ಲಕ್ಕಿಂತ ಮೊದಲು ತಾನು ಈ ಆಸ್ಪತ್ರೆಯಿಂದ ಹೊರಗೆ ಹೋಗಲು ಬಯಸುವುದಾಗಿ ಹೇಳಿತು. ಮತ್ತು ತನ್ನನ್ನು ಯಾವುದಾದರೂ ಬಸ್ ಬಂದು ಕುಟ್ಟಬೇಕೆಂದು, ತಾನು ಮನೆಗೆ ಅಥವಾ ಶಾಲೆಗೆ ಹೋಗಲು ಸಾಧ್ಯವಾಗದಂತೆ ಸತ್ತು ಹೋಗಬೇಕೆಂದೂ ಹೇಳಿತು. ಆ ಮಗುವಿಗೆ ಬೆಳಗ್ಗೆ ಹಾಸಿಗೆಯಿಂದ ಏಳಲು ಇಷ್ಟವೇ ಇರಲಿಲ್ಲ. ಆ ಮಗುವಿಗೆ ದೈನಂದಿನ ಬದುಕಿನ ಸವಾಲುಗಳನ್ನು ಎದುರಿಸಲು ಉತ್ಸಾಹವೇ ಇರಲಿಲ್ಲ. ಅದು ತನ್ನನ್ನು ತಾನು ಕೊಂದುಕೊಳ್ಳುವುದು ಹೇಗೆಂದೇ ಯೋಚಿಸುತ್ತಿತ್ತು.

ನಾವು ಮಗುವಿನ ತಾಯ್ತಂದೆಯರಿಗೆ ಮಗುವಿನ ಸಮಸ್ಯೆಯನ್ನೂ ಅದರ ತೀವ್ರತೆಯನ್ನು  ವಿವರಿಸಲು ಪ್ರಯತ್ನಿಸಿದೆವು. ಆದರೆ ಅವರು ತಮ್ಮ ಮಗುವಿಗೆ ಖಿನ್ನತೆಯ ಕಾಯಿಲೆಯಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ತಮ್ಮ ಮಗನಿಗೆ ಔಷಧದ ಅಗತ್ಯವಿಲ್ಲವೆಂದೂ ತಮ್ಮ ಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಕರೆದೊಯ್ದರೆ ಆತ ಸಹಜ ಸ್ಥಿತಿಗೆ ಮರಳುತ್ತಾನೆಂದೂ ನಂಬಿದ್ದರು. ತಾವು ಬಹಳ ವರ್ಷದಿಂದ ಮಾಡಿಸಬೇಕಿದ್ದ ಪೂಜೆಯೊಂದನ್ನು ಬಹಳ ಕಾಲದಿಂದ ಮಾಡದೆ ಉಳಿಸಿದ್ದರಿಂದ ಮಗನಿಗೆ ಹೀಗಾಗಿದೆ ಎಂದು ಅವರು ಭಾವಿಸಿದ್ದರು. ಅವರು ನೇರವಾಗಿ ಹೇಳದಿದ್ದರೂ “ಇವೆಲ್ಲಾ ವಿಧಿ ಲಿಖಿತ” ಎಂಬ ನಿರ್ಧಾರಕ್ಕೆ ಅವರು ಬಂದಿದ್ದರು.

ಜೈವಿಕ ಮತ್ತು ಆನುವಂಶಿಕ ಅಂಶಗಳು

ಖಿನ್ನತೆಗೆ ಹಲವು ಜೈವಿಕ ಹಾಗೂ ಆನುವಂಶಿಕ ಸಂಗತಿಗಳು ಮೂಲವಾಗುತ್ತವೆ. ಕುಟುಂಬದಲ್ಲಿ ಯಾರಿಗಾದರೂ ಖಿನ್ನತೆಯ ಸಮಸ್ಯೆ ಇದ್ದರೆ, ಅಂಥ ಕುಟುಂಬದ ಮಗು ಕೂಡಾ ಖಿನ್ನತೆಯ ಕಾಯಿಲೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಮಗುವಿನ ದೇಹ ಸ್ಥಿತಿ ಸೂಕ್ಷ್ಮವಾಗಿದ್ದು, ಸಮಸ್ಯೆಗಳಿದ್ದರೆ ಅದು ಖಿನ್ನತೆಗೆ ಒಳಗಾಗಬಹುದು. ಕೌಟುಂಬಿಕ ಹಾಗೂ ಸಾಮಾಜಿಕ ಒತ್ತಡಗಳಿಂದಲೂ ಮಕ್ಕಳಿಗೆ ಖಿನ್ನತೆ ಆವರಿಸಬಹುದು. ಆದರೆ ಮಕ್ಕಳಲ್ಲಿ ಈ ಕಾಯಿಲೆಯು ದೊಡ್ಡವರಲ್ಲಿ ಕಂಡುಬರುವ ಲಕ್ಷಣಗಳನ್ನು ಹೊಂದಿಲ್ಲದೆ ಇರಬಹುದು. ಮಗು ಕಿರಿಕಿರಿ ಉಂಟು ಮಾಡುವ ವರ್ತನೆ ತೋರಬಹುದು. ಮನೆಯಲ್ಲಿ ಮಾತ್ರವಲ್ಲ, ಶಾಲೆಯಲ್ಲೂ ಮಕ್ಕಳು ಇಂಥ ವರ್ತನೆ ತೋರಬಹುದು. ಮನೆಯಲ್ಲಿ ಮಗು ಯಾವುದೇ ಚಟುವಟಿಕೆಯಲ್ಲಾಗಲೀ ಹವ್ಯಾಸದಲ್ಲಾಗಲೀ ಉತ್ಸಾಹ ತೋರದೆ ಹೋಗಬಹುದು. ಪೋಷಕರೊಡನೆ, ಸಹೋದರ – ಸಹೋದರಿಯರೊಡನೆ ಮಾತಾಡದೆ ಇರಬಹುದು. ಸಾಕುಪ್ರಾಣಿಗಳೊಂದಿಗೂ ಒಡನಾಡದೆ ಇರಬಹುದು. ಶಾಲೆಯಲ್ಲಿ ಮಗು ತನ್ನ ಕೆಲಸವನ್ನಾಗಲೀ ಕಲಿಕೆಯನ್ನಾಗಲೀ ಸರಿಯಾಗಿ ಮಾಡಲು ಸಾಧ್ಯವಾಗದೆ ಹೋಗಬಹುದು. ಪದೇಪದೇ ಶಾಲೆಗೆ ಗೈರುಹಾಜರಾಗಬಹುದು. ಅಶಿಸ್ತಿನ ವರ್ತನೆ ತೋರಬಹುದು.

ನಿಮ್ಮ  ದೇಹಕ್ಕೆ ಗಾಯವಾದಾಗ, ಅದು ಕ್ರಮೇಣ ವಾಸಿಯಾಗುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ. ಆದರೆ ಖಿನ್ನತೆ ಕಾಣುವುದೂ ಇಲ್ಲ, ಸ್ಪಷ್ಟವಾಗಿ ಗಮನಕ್ಕೂ ಬರುವುದಿಲ್ಲ. ಆದ್ದರಿಂದ ನಿಮಗೆ ಅದು ಉಲ್ಬಣವಾಗುತ್ತಿದೆಯೇ ಗುಣವಾಗುತ್ತಿದೆಯೇ ಎಂಬುದನ್ನು ಕಂಡುಕೊಳ್ಳುವುದು ಕಷ್ಟ. ಹದಿಹರೆಯದ ಮಕ್ಕಳಿಗೆ ಈ ಕಾಯಿಲೆಯೊಂದು ಆತಂಕದ ಸಂಗತಿ. ಇನ್ನು ಮಕ್ಕಳಿಗಂತೂ ಇದು ಭಯಾನಕ ಸಮಸ್ಯೆಯಾಗಿ ಕಾಡುತ್ತದೆ.

ಎಲ್ಲಾ ಮಕ್ಕಳಿಗೂ ಔಷಧದ ಅಗತ್ಯವಿರುತ್ತದೆಯೇ?

ಖಿನ್ನತೆಗೆ ಔಷಧಿಯ ಚಿಕಿತ್ಸೆ ನೀಡಬೇಕು ಅಂದಾಕ್ಷಣ, ಈ ಸಮಸ್ಯೆಯನ್ನು ಹೊಂದಿರುವ ಎಲ್ಲ ಮಕ್ಕಳಿಗೂ ಆ್ಯಂಟಿ ಡಿಪ್ರೆಸ್ಸೆಂಟ್ಸ್ (ಖಿನ್ನತೆ ನಿರೋಧಕ ಔಷಧಿ)  ಅಗತ್ಯವಿದೆಯೇ ಎಂಬ ಪ್ರಶ್ನೆ ಹೊಮ್ಮುತ್ತದೆ. ಖಿನ್ನತೆ ಹೊಂದಿರುವ ಎಲ್ಲಾ ಮಕ್ಕಳಿಗೂ ಖಿನ್ನತೆ ನಿರೋಧಕ ಔಷಧವನ್ನು ಕೊಡಬೇಕಿಲ್ಲ. ಖಿನ್ನತೆಯ ಲಕ್ಷಣಗಳು ತೀವ್ರವಾಗಿದ್ದರೆ ಅಥವಾ ತೀವ್ರವಾಗುವ ಲಕ್ಷಣಗಳು ಕಂಡುಬಂದರೆ ಮಾತ್ರ ಔಷಧದ ಅಗತ್ಯವಿದೆ. ಸಮಸ್ಯೆಯು ಅಷ್ಟೇನೂ ತೀವ್ರವಾಗಿಲ್ಲದೆ ಇದ್ದಲ್ಲಿ, ಸೈಕೋಥೆರಪಿಯ ಮೂಲಕವೂ ಖಿನ್ನತೆಗೆ ಚಿಕಿತ್ಸೆ ನೀಡಬಹುದಾಗಿದೆ.

ದುರದೃಷ್ಟವಶಾತ್, ಖಿನ್ನತೆಯನ್ನು ಹೊಂದಿರುವ ಐವರಲ್ಲಿ ಒಂದು ಮಗು ಮಾತ್ರ ಇಂಥ ಚಿಕಿತ್ಸೆಗಳನ್ನು ಪಡೆಯುತ್ತದೆ. ಉಳಿದಂತೆ, ಬಹುತೇಕವಾಗಿ ಖಿನ್ನತೆಯನ್ನು ಹೊಂದಿರುವ ಮಕ್ಕಳಲ್ಲಿ ಅದು ಬೆಳೆಯುತ್ತಾ ಹದಿಹರೆಯ ತಲುಪುವ ಹೊತ್ತಿಗೆ ಉಲ್ಬಣಗೊಳ್ಳುತ್ತದೆ.

WHO ಊಹೆಯಂತೆ, 20130ರ ವೇಳೆಗೆ ಬಹುದೊಡ್ಡ ಸಂಖ್ಯೆಯ ಜನರು ಇತರ ಯಾವುದೇ ಕಾಯಿಲೆಗಿಂತ ಹೆಚ್ಚಾಗಿ ಖಿನ್ನತೆಯ ಕಾಯಿಲೆಯಿಂದ ಬಳಲುತ್ತಾರೆ. ಹಾಗಾಗದೆ ಇರುವಂತೆ ಮಾಡಬೇಕೆಂದರೆ ಇಂದಿನ ಪೋಷಕರಿಗೆ ಮಕ್ಕಳ ಖಿನ್ನತೆಯ ಕುರಿತಾದ ಸತ್ಯ – ಮಿಥ್ಯೆಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ.

ಖಿನ್ನತೆ ಹೊಂದಿರುವ ಮಕ್ಕಳ ಜೊತೆ ಮಾತನಾಡುವುದು ಕಷ್ಟವೇನಲ್ಲ. ಆದರೆ ಮಕ್ಕಳ ತಾಯ್ತಂದೆಯರು ತಮ್ಮ ಮಗುವಿಗೆ ಖಿನ್ನತೆ ಇರುವುದನ್ನು ಗುರುತಿಸಿದರೆ ಮಾತುಕಥೆ ಮತ್ತಷ್ಟು ಸುಲಭವಾಗುತ್ತದೆ. ಮತ್ತು ಮಗುವಿನಲ್ಲಿ ನೀವು ಬಯಸಿದ ಬದಲಾವಣೆಗಳನ್ನು ಗಮನಿಸಿದ್ದೀರೆಂದು ಗೊತ್ತುಪಡಿಸುವುದು ಕೂಡಾ ಸುಲಭವಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಮಕ್ಕಳು ಮುಕ್ತವಾಗಿ ಮಾತಾಡಲು ಹಿಂಜರಿಯುತ್ತಾರೆ. ಆದರೆ ಸತತ ಸಂಪರ್ಕದಿಂದ ಕ್ರಮೇಣ ಅವು ಮಾತನಾಡಲು ಶುರುಮಾಡುತ್ತವೆ ಮತ್ತು ನಿಮ್ಮೊಂದಿಗೆ ಸ್ಪಂದಿಸತೊಡಗುತ್ತವೆ.

ಡಾ. ಸುಹಾಸ್ ಚಂದ್ರನ್ ಸೈಕಿಯಾಟ್ರಿ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು; ಜೆ.ಎಸ್.ಎಸ್. ಆಸ್ಪತ್ರೆ, ಮೈಸೂರು

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org