ಹಾರ್ಮೋನುಗಳಿಂದ ಭಾವನೆಗಳಲ್ಲಿ ವ್ಯತ್ಯಾಸ

ಹಾರ್ಮೋನುಗಳು ಎಂದರೇನು?

ಹಾರ್ಮೋನುಗಳು ಎಂದರೆ ಮೆದುಳಿನಿಂದ ದೇಹದ ಅಂಗಾಂಗಗಳಿಗೆ ಸಂದೇಶ ರವಾನಿಸುವ ರಾಸಾಯನಿಕಗಳು. ಅಂಗಾಂಗಗಳು ಕೆಲಸ ಮಾಡಲು, ಹಸಿವು, ಬೆಳವಣಿಗೆ, ಬುದ್ದಿಶಕ್ತಿ, ಇತ್ಯಾದಿಯಿಂದ ಹಿಡಿದು, ಲೈಂಗಿಕ ಆಸಕ್ತಿ, ಸಂತಾನೋತ್ಪತ್ತಿಯಂತಹ ಸಂಕೀರ್ಣ ಚಟುವಟಿಕೆಗಳಿಗೆ ಹಾರ್ಮೋನುಗಳ ಸಹಾಯವಿರುತ್ತದೆ. ನಮ್ಮ ಭಾವನೆ ಮತ್ತು ಮೂಡ್ ಸಹ ಹಾರ್ಮೋನುಗಳ ಮೇಲೆ ನಿರ್ಧಾರವಾಗುತ್ತದೆ. 

ಹಾರ್ಮೋನುಗಳು ಹೇಗೆ ಉತ್ಪತ್ತಿಯಾಗುತ್ತವೆ ?

ಎಂಡೋಕ್ರೈನ್ ವ್ಯವಸ್ಥೆಯಲ್ಲಿ ಅನೇಕ ಗ್ರಂಥಿಗಳಿರುತ್ತವೆ (glands). ಪ್ರತಿ ಗ್ರಂಥಿಯೂ ನಿರ್ಧಿಷ್ಟ ಹಾರ್ಮೋನನ್ನು ಉತ್ಪತ್ತಿ ಮಾಡುತ್ತದೆ. ಉದಾಹರಣೆಗೆ ಪಿಟ್ಯುಟರಿ ಗ್ಲಾಂಡ್  ಬೆಳವಣಿಗೆಯ ಹಾರ್ಮೋನನ್ನು, ಪ್ಯಾನ್ಕ್ರಿಯಾಸ್  ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಇನ್ಸುಲಿನ್ ಹಾರ್ಮೋನನ್ನು ಉತ್ಪತ್ತಿ ಮಾಡುತ್ತವೆ. ಓವರಿ ಮತ್ತು ಟೆಸ್ಟೀಸ್ ಎಂಬ ಗ್ರಂಥಿಗಳು ಲೈಂಗಿಕ ಹಾರ್ಮೋನ್ಗಳನ್ನು ಉತ್ಪತ್ತಿ ಮಾಡುತ್ತವೆ. ಈ ಹಾರ್ಮೋನ್ಗಳು  ರಕ್ತನಾಳಗಳ ಮೂಲಕ ದೇಹದ ಎಲ್ಲಾ ಅಂಗಗಳನ್ನು ತಲುಪಿ, ಅವುಗಳ ಚಟುವಟಿಕೆಗೆ ಸಹಾಯ ಮಾಡುತ್ತವೆ.

ಕೆಲವು ಹಾರ್ಮೋನುಗಳು:

  • ಥೈರಾಯಿಡ್: ಥೈರಾಯ್ಡ್ ಹಾರ್ಮೋನ್  ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ. ಥೈರಾಯಿಡ್ ಗ್ರಂಥಿಗಳಲ್ಲಿ ಹಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾದಾಗ, ವ್ಯಕ್ತಿಯಲ್ಲಿ ಆಲಸ್ಯ, ಜಡ, ಆಯಾಸ, ಭಾವನಾತ್ಮಕ ಕುಸಿತ ಕಾಣಿಸಿಕೊಳ್ಳುವುದು. ಥೈರಾಯಿಡ್ ಕಡಿಮೆ ಇರುವ ವ್ಯಕ್ತಿಯು ( ಹೈಪೋ ಥೈರಾಯಿಡಿಸಂ) ಕುಸಿದ ಮನಸ್ಥಿತಿ, ಖಿನ್ನತೆಗೆ ಸಿಲುಕುವ ಸಾಧ್ಯತೆ ಇರುತ್ತದೆ.  
  • ಕೋರ್ಟಿಸೊಲ್: ಇದನ್ನು ಸ್ಟ್ರೆಸ್ ಹಾರ್ಮೋನು ಎನ್ನುವರು. ಕೋರ್ಟಿಸಾಲ್ ಹಾರ್ಮೋನು, ರಕ್ತದೊತ್ತಡವನ್ನು ನಿಭಾಯಿಸುತ್ತದೆ. ಗರ್ಭಾವಸ್ಥೆಯಲ್ಲಿ ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತವೆ.ಇದು ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾದರೆ  ದೇಹದ ತೂಕ ಹೆಚ್ಚಾಗಬಹುದು ಮತ್ತು ರಕ್ತದೊತ್ತಡ ಹೆಚ್ಚಾಗಬಹುದು. ಇದರಿಂದ ಮೂಡ್ ಸ್ವಿಂಗ್, ಖಿನ್ನತೆ ಕಾಣಿಸುವ ಸಾಧ್ಯತೆ ಇರುತ್ತದೆ.
  • ಆಕ್ಸಿಟೋಸಿನ್: ಇದನ್ನು ಲವ್ ಹಾರ್ಮೋನು ಎನ್ನುವರು. ಇದರ  ಉತ್ಪತ್ತಿಯಿಂದ  ಪ್ರಸೂತಿಯ ಸಮಯದಲ್ಲಿ  ಮತ್ತು ಸ್ತನಪಾನಕ್ಕೆ ಸಹಾಯವಾಗುವುದಲ್ಲದೇ , ತಾಯಿ  ಮಗುವಿನ ಬಾಂಧವ್ಯ ಹೆಚ್ಚಿಸುತ್ತದೆ.  ಜೊತೆಗೆ ವ್ಯಕ್ತಿಯ ಸಾಮಾಜಿಕ ಸಂವಹನಕ್ಕೆ ಮತ್ತು ಲೈಂಗಿಕತೆಯನ್ನು ಉತ್ತೇಜಿಸುತ್ತದೆ. ದೇಹದಲ್ಲಿ ಆಕ್ಸಿಟೋಸಿನ್ ಅಂಶ ಕಡಿಮೆಯಾದರೆ  ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ.    
  • ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರೋನ್: ಈ ಹಾರ್ಮೋನು ಗರ್ಭಾವಸ್ಥೆಯಲ್ಲಿ ಹೆಚ್ಚಾಗಿ ಉತ್ಪತ್ತಿಯಾಗುತ್ತವೆ. ಈಸ್ಟ್ರೋಜನ್ ಎಂಬ ಹಾರ್ಮೋನು, ಗರ್ಭಕೋಶ ಮತ್ತು ಹೊಕ್ಕಳುಬಳ್ಳಿಯ ಮೂಲಕ ಪೌಷ್ಠಿಕಾಂಶವನ್ನು ಭ್ರೂಣಕ್ಕೆ ಸಾಗಿಸಿ, ಫೀಟಸ್ನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಗರ್ಭಾವಧಿಯ ಕಡೆಯ ಮೂರು ತಿಂಗಳಲ್ಲಿ ಹಾಲಿನ ನಾಳಗಳ ಬೆಳವಣಿಗೆಗೆ ಈಸ್ಟ್ರೋಜನ್ ಸಹಾಯಕಾರಿ. ಅದಾಗ್ಯೂ ಈ ಸಮಯದಲ್ಲಿ ಈಸ್ಟ್ರೋಜನ್ ಹೆಚ್ಚು ಉತ್ಪತ್ತಿಯಾದರೆ ಗರ್ಭಿಣಿ ಮಹಿಳೆಗೆ  ವಾಂತಿ/ ವಾಕರಿಕೆಯಾಗುತ್ತದೆ.

    ಗರ್ಭಾವಸ್ಥೆಯ ವೇಳೆಯಲ್ಲಿ ಪ್ರೊಜೆಸ್ಟೆರೋನ್ ಹಾರ್ಮೋನು, ಗರ್ಭವತಿಯ ಕೈಕಾಲುಗಳು ಮತ್ತು ಅಸ್ಥಿರಜ್ಜುಗಳನ್ನು ಸಡಿಲವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಗರ್ಭಧಾರಣೆಯ ಕಡೆಯ ಮೂರು ತಿಂಗಳ ಅವಧಿಯಲ್ಲಿ ಗರ್ಭಾಶಯ ದೊಡ್ಡದಾಗಲು ಸಹಾಯ ಮಾಡುತ್ತದೆ. ಹೆರಿಗೆ ಸಮಯದಲ್ಲಿ ಬಿಡುಗಡೆಯಾಗುವ ಆಕ್ಸಿಟೋಸಿನ್ ಸ್ತ್ರೀ ಜನನಾಂಗ ಸಹಜಸ್ಥಿತಿಗೆ ಬರಲು ಸಹಾಯ ಮಾಡುತ್ತದೆ. ಮತ್ತು ಪ್ರೋಲ್ಯಾಕ್ಟಿನ್ ಹಾರ್ಮೋನು, ಎದೆಹಾಲು ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.                           

ಹಾರ್ಮೋನುಗಳಿಗೂ ನಮ್ಮ ಭಾವನೆಗಳಿಗೂ ಏನು ಸಂಬಂಧ ?

ಕೆಲವೊಮ್ಮೆ ಒಂದು ಅಥವಾ ಒಂದಕ್ಕಿಂಥ ಹೆಚ್ಚು ಹಾರ್ಮೋನುಗಳು ಹೆಚ್ಚುಕಾಲ ಕೆಲಸ ಮಾಡಿದಾಗ, ಬೇರೆ ಹಾರ್ಮೋನುಗಳು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಅದರಲ್ಲೂ ಮೂಡ್ ನಿಯಂತ್ರಿಸುವ ಸೆರೋಟೋನಿನ್ ಮತ್ತು ಎಂಡೋರ್ಫಿನ್  ಹಾರ್ಮೋನು, ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ಮೂಡ್ ನಲ್ಲಿ ಬದಲಾವಣೆಯಾಗುತ್ತದೆ.   

ಹದಿಹರೆಯದವರು ಮೂಡಿ ಮತ್ತು ದುಡುಕು ಸ್ವಭಾವದವಾರಾಗಿರುತ್ತಾರೆ. ಏಕೆ ?

ಪ್ರಾಯದ ಸಮಯದಲ್ಲಿ, ಪಿಟ್ಯುಟರಿ ಗ್ರಂಥಿ ಈಸ್ಟ್ರೋಜನ್ ಹಾರ್ಮೋನನ್ನು ಉತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಮೆದುಳು ಬೆಳವಣಿಗೆಯ ಹಂತದಲ್ಲಿರುತ್ತದೆ. ಈ ಕಾರಣದಿಂದ  ಆಲೋಚನೆ, ತರ್ಕ, ವಿವೇಚನೆ ಮಾಡುವ ಸಾಮರ್ಥ್ಯ ಹದಿಹರೆಯದವರಿಗೆ ಇನ್ನೂ ಇರುವುದಿಲ್ಲ. ಹಾಗಾಗಿ ಹದಿಹರೆಯದವರು ಯಾವುದೇ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಅರಿವು ಅವರಿಗೆ  ಇರುವುದಿಲ್ಲ.

ಹೆಣ್ಣು ಮಕ್ಕಳಲ್ಲಿ ಹಾರ್ಮೋನ್ನಿಂದ ಆಗುವ ಬದಲಾವಣೆ

ಪ್ರಿಮೆನ್ಸ್ಟ್ರುವಲ್ ಸಿಂಡ್ರೋಮ್ (PMS) :  ಹೆಣ್ಣುಮಕ್ಕಳ ಮುಟ್ಟಿನ ದಿನ ಸಮೀಪವಾದಂತೆ ದೇಹದಲ್ಲಿ ನೋವು ಕಾಣಿಸಬಹುದು.ಇದನ್ನು ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಎನ್ನುವರು. ಈ ಸಮಯದಲ್ಲಿ ಕೆಲವು ಮಹಿಳೆಯರಲ್ಲಿ ಸುಸ್ತು, ಕಿರಿಕಿರಿ ಅಥವಾ ಆಯಾಸ ಕಂಡುಬರುತ್ತದೆ. ಮುಟ್ಟಾದ ನಂತರ ಕ್ರಮೇಣ ಇದು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಇದನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತಾರೆ. ವಿಶ್ರಾಂತಿ, ಡಯಟ್ ಅಥವ ವ್ಯಾಮಾಮ ಮಾಡಿ PMS ಸಮಸ್ಯೆ ನಿಭಾಯಿಸಲು ಸಾಧ್ಯ.   

ಪ್ರಿಮೆನ್ಸ್ಟ್ರುವಲ್ ಡಿಸ್ಫೋರಿಕ್ ಡಿಸಾರ್ಡರ್ (PMDD) : ಹೆಣ್ಣುಮಕ್ಕಳಿಗೆ PMDD ಸಮಸ್ಯೆ ಇದ್ದರೆ ಲಕ್ಷಣಗಳು ಈ ರೀತಿ ಇರುತ್ತವೆ:

  • ತೀರ್ವ ಆಯಾಸ, ಸುಸ್ತು
  • ನಿರುತ್ಸಾಹ, ಯಾವ ಕೆಲಸ ಮಾಡಲು ಬೇಜಾರು
  • ತೀರ್ವ ಹೊಟ್ಟೆ ನೋವು, ಗರ್ಭಕೋಶದಲ್ಲಿ ನೋವು

ಋತುಚಕ್ರದಲ್ಲಿ ವ್ಯತ್ಯಾಸ: ಡಿಸ್ ಮ್ಯಾನೋರಿಯಾ ಇರುವ ಹೆಣ್ಣುಮಕ್ಕಳು ಋತುಚಕ್ರದ ದಿನಗಳಲ್ಲಿ ತೀರ್ವ ಹೊಟ್ಟೆನೋವು ಅನುಭವಿಸಬಹುದು

ಮೆನೋಪಾಸ್ ಹಂತ: ಸಾಮಾನ್ಯವಾಗಿ ಮಹಿಳೆಯರು ತಮ್ಮ 45 ನೇ ವರ್ಷದ ಆಸುಪಾಸಿನಲ್ಲಿ ಮೆನೋಪಾಸ್ ತಲುಪುತ್ತಾರೆ. ಈ ಹಂತದಲ್ಲಿ ಈಸ್ಟ್ರೋಜನ್ ಕಡಿಮೆಯಾಗುತ್ತದೆ. ಹಾರ್ಮೋನುಗಳ ವ್ಯತ್ಯಾಸದಿಂದ, ನಿದ್ರೆಯಲ್ಲಿ ವ್ಯತ್ಯಾಸ, ಕಿರಿಕಿರಿ, ಏಕಾಗ್ರತೆ ಕೊರತೆ, ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಈ ಹಂತದಲ್ಲಿ ಕೆಲವರು ತಮ್ಮ ಪೋಷಕರನ್ನು/ ಸಂಗಾತಿಯನ್ನು ಕಳೆದುಕೊಂಡಿರುತ್ತಾರೆ/ ಮಕ್ಕಳು ಓದಲು ಅಥವ ಕೆಲಸ ಮಾಡಲು ಬೇರೆ ಊರಿಗೆ ಹೋಗಿರುತ್ತಾರೆ. ಈ ಎಲ್ಲಾ ಕಾರಣಗಳಿಂದ ಬೇಜಾರು ಮತ್ತು ಒತ್ತಡ ಹೆಚ್ಚಾಗಬಹುದು.

ಮಾಹಿತಿ ಕೊಡುಗೆ : ಡಾ.ಅರುಣಾ ಮುರಳೀಧರ್,ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಫೋರ್ಟಿಸ್ ಲಾ ಫೇಮ್ಮ್, ಬೆಂಗಳೂರು ; ಡಾ. ಆಶ್ಲೇಷಾ ಬಗಾಡಿಯಾ, ಪೆರಿನಟಾಲ್ ಸೈಕಿಯಾಟ್ರಿಸ್ಟ್, ಬೆಂಗಳೂರು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org