ಗುರಿಯನ್ನು ರೂಪಿಸಿ, ಅದರಂತೆ ಸಾಗಿ

“ಓದೋದಕ್ಕೆ ಎಷ್ಟೊಂದು ಇದೆ. ಹೇಗೆ ಮುಗಿಸುತ್ತೀನೋ?”

“ಈ ಸಿಲಬಸ್ ನೋಡಿದರೆ ಹಾಸಿಗೆಯಲ್ಲೇ ಇದ್ದುಬಿಡೋಣ ಎನಿಸುತ್ತಿದೆ”

ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಓದುವುದನ್ನು ಮುಂದೂಡುವುದು, ಸಿಲಬಸ್ ಬಗ್ಗೆ ಆತಂಕ ಪಡುವುದೇ ಹೆಚ್ಚು. ಬದಲಾಗಿ ಸಿಲಬಸ್ ಅನ್ನು ಚಿಕ್ಕ ಭಾಗಗಳಾಗಿ ಮಾಡಿ, ದಿನಕ್ಕೆ ಇಷ್ಟು ಎಂಬಂತೆ ಗುರಿ ಇಟ್ಟುಕೊಂಡು ಓದಬೇಕು.

ಗುರಿಯನ್ನು ನಿರ್ಧರಿಸುವುದು ಏಕೆ ಅಗತ್ಯ?

ನೀವು ಬೆಟ್ಟ ಹತ್ತಬೇಕೆಂದಿದ್ದರೆ, ಬೆಟ್ಟ ನೋಡಿದ ಕೂಡಲೇ ಭಯ ಪಡಬಹುದು. ಆದರೆ ಎಲ್ಲಿಯವರೆಗೆ ತಲುಪಬೇಕೆಂಬ ಗುರಿ ಇಟ್ಟು, ಹತ್ತುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಸಾಗಿದರೆ, ಗುರಿ ತಲುಪಿದ ಖುಷಿ ಸಿಗುತ್ತದೆ. ಹಾಗೆಯೇ ಪರೀಕ್ಷೆಯ ಸಮಯದಲ್ಲಿ ಎಲ್ಲವೂ ಕಷ್ಟ ಎನಿಸಬಹುದು. ಆದರೆ ಸಣ್ಣ ಸಣ್ಣ ಹೆಜ್ಜೆಗಳಿಡುತ್ತಾ ತಯಾರಾದಾಗ ಸುಲಭವಾಗಿ ಗುರಿ ತಲುಪುತ್ತೀರಿ. 

ಗುರಿಯ ವಿಧಗಳು:

ನಿಮಗೆ ಯಾವಾಗ ಫಲಿತಾಂಶ ಬೇಕು ಎಂಬ ಆಧಾರದ ಮೇಲೆ ಗುರಿಗಳನ್ನು ಹೀಗೆ ವಿಂಗಡಿಸಬಹುದು.

ದೀರ್ಘ ಕಾಲದ ಗುರಿಗಳು: 

  • ನೀವು ಬಯಸುವ ಸ್ಕೂಲ್/ಕಾಲೇಜು ಸೇರುವುದು.
  • ನಿಮ್ಮ ಕೋರ್ಸನ್ನು ಯಶಸ್ವಿಯಾಗಿ ಮುಗಿಸುವುದು.
  • ಚೆನ್ನಾಗಿ ಪರೀಕ್ಷೆ ನೀಡುವುದು.

ತಕ್ಷಣದ ಗುರಿಗಳು: ಇವು ದೀರ್ಘ ಕಾಲದ ಗುರಿಗಳನ್ನು ಸಾಧಿಸಲು ಸಹಾಯಕ. ಉದಾಹರಣೆಗೆ,

  • ನೀವು ಬಯಸುವ ಸ್ಕೂಲ್/ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬೇಕಾದ ಅಂಕಗಳನ್ನು ಗಳಿಸುವುದು.
  • ಕೋರ್ಸನ್ನು ಮುಗಿಸಲು ಉತ್ತಮ ಗ್ರೇಡ್ ಅಥವಾ ಅಂಕ ಪಡೆಯುವುದು.
  • ಪರೀಕ್ಷೆಗೆ ಚೆನ್ನಾಗಿ ತಯಾರಿ ಮಾಡುವುದು.

ಸಣ್ಣ ಗುರಿಗಳು: ಇದು ಒಂದು ದಿನ, ವಾರ ಅಥವಾ ತಿಂಗಳಲ್ಲಿ ಪೂರ್ತಿಗೊಳಿಸಬೇಕಾದ ಕೆಲಸಗಳು. ನಿಮ್ಮ ತಕ್ಷಣದ  ಗುರಿಗಳನ್ನು ತಲುಪಲು ಇವು ಸಹಾಯ ಮಾಡುತ್ತವೆ. ಉದಾಹರಣೆಗೆ:

  • ವಿಷಯಗಳನ್ನು ಒಂದು ದಿನ, ವಾರ ಅಥವಾ ತಿಂಗಳಲ್ಲಿ ಮುಗಿಸುವಂತೆ ಭಾಗ ಮಾಡಿಕೊಳ್ಳುವುದು.
  • ಪ್ರತಿ ವಿಷಯದಲ್ಲೂ ಅಭ್ಯಾಸ ಮಾಡಬೇಕಾದ ಪಾಠಗಳನ್ನು ಗುರುತಿಸಿ ಆ ವಾರದಲ್ಲಿ ಓದಿ ಮುಗಿಸುವುದು.
  • ಪ್ರತಿದಿನ ಓದುವ ಪಾಠ ಯಾವುದೆಂದು ಗುರುತಿಸುವುದು.

ನೀವು ಗುರಿಯನ್ನು ಹೇಗೆ ರೂಪಿಸಿಕೊಳ್ಳಬಹುದು?

ಪ್ರತಿಯೊಬ್ಬರು ಓದುವ ವಿಧಾನವೂ ಬೇರೆಯಾಗಿರುತ್ತದೆ. ಗುರಿಯನ್ನು ರೂಪಿಸಿಕೊಳ್ಳಲು ಈ ಅಂಶಗಳು ಮುಖ್ಯ-

  • ತಯಾರಿಗೆ ಬೇಕಾದ ಸಮಯ ಎಷ್ಟು ಎಂದು ಯೋಚಿಸಿ ಅದಕ್ಕೆ ತಕ್ಕಂತೆ ಗುರಿಯನ್ನು ರೂಪಿಸಿ.
  • ಮಾಡಲು ಸಾಧ್ಯವಿರುವ, ನಿಗದಿತ ಸಮಯದಲ್ಲಿ ಮುಗಿಸಬಹುದಾದ, ಸ್ಪಷ್ಟವಾದ ಗುರಿಗಳನ್ನು ರೂಪಿಸಿ.
  • ಗುರಿಯನ್ನು ತಲುಪಲು ಉತ್ಸಾಹ ಮತ್ತು ಆತ್ಮವಿಶ್ವಾಸ ಇರಬೇಕು.
  • ಗುರಿಯನ್ನು ನಿರ್ಧರಿಸುವಾಗ, ವಿಶ್ರಾಂತಿ ಪಡೆಯಲು, ಸ್ನೇಹಿತರೊಂದಿಗೆ ಬೆರೆಯಲು ಬೇಕಾದ ಸಮಯವನ್ನು ನೀಡಬೇಕು.
  • ಅಲ್ಲದೆ, ನಿಮಗೆ ಬೇಕಾದ ಬದಲಾವಣೆ ಮಾಡಿಕೊಳ್ಳುವಷ್ಟು ಅವಕಾಶ ಇರುವಂತೆ ಗುರಿಯನ್ನು ರೂಪಿಸಿಕೊಳ್ಳಿ.  

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org