ನೀವು ಮಗುವನ್ನು ಪಡೆಯಲು ಸಿದ್ಧವಾಗಿದ್ದೀರಾ?

ಮಗುವನ್ನು ಪಡೆಯಲು ಸಿದ್ಧವಾಗುವ ಪ್ರಕ್ರಿಯೆಯು 3 ವಿಷಯಗಳನ್ನು ಒಳಗೊಂಡಿದೆ. ಅವು: ಜೈವಿಕ ಗಡಿಯಾರ, ವೃತ್ತಿ ಗಡಿಯಾರ ಮತ್ತು ಭಾವನಾತ್ಮಕ ಗಡಿಯಾರ.
ನಾನು ಬೆಳೆಯುತ್ತಿರುವಾಗ, ಮುಂದೆ ನಾನು 27 ವರ್ಷಕ್ಕೆ ಮದುವೆಯಾಗುತ್ತೇನೆ, ಏಕೆಂದರೆ ಆಗ ನನಗೆ ಸೂಕ್ತವಾದ ಹುಡುಗ ದೊರೆಯುತ್ತಾನೆ, ಅಷ್ಟರವರೆಗೆ ನನ್ನ ಕನಸಿನ ಉದ್ಯೋಗವೂ ದೊರೆತಿರುತ್ತದೆ ಎಂದು ಯೋಚಿಸುತ್ತಿದ್ದೆ. ಅಲ್ಲದೇ 30 ವರ್ಷಕ್ಕೆ ಮಗುವನ್ನು ಪಡೆಯುತ್ತೇನೆ ಮತ್ತು 35 ವರ್ಷಕ್ಕೆ ಮತ್ತೆ ಉದ್ಯೋಗಕ್ಕೆ ಮರಳುತ್ತೇನೆ ಎಂದೆಲ್ಲಾ ವಿಚಾರ ಮಾಡುತ್ತಿದ್ದೆ.
ನನಗೆ 30 ವರ್ಷಕಳೆದರೂ ನನ್ನ ಕನಸಿನ ಕೆಲಸವೂ ಸಿಗಲಿಲ್ಲ ಹುಡುಗನೂ ದೊರೆಯಲಿಲ್ಲ. ಹಾಗಿರುವಾಗ ಮಗುವಿನ ಸಂಗತಿ ದೂರವೇ ಸರಿ. ನನ್ನ ಪ್ರತಿ ಜನ್ಮದಿನ ಬಂದಾಗಲೂ ನನ್ನ ತಾಯಿ ಗಾಬರಿಯಾಗುತ್ತಿದ್ದರು. ಈ ನಡುವೆ ಸಂಬಂಧಿಕರೂ ಕೂಡ ನಾನು ಯಾವಾಗ ಉದ್ಯೋಗವನ್ನು ಹಿಡಿದು ಮದುವೆಯಾಗುತ್ತೇನೆ ಎಂದು ಕೇಳುವುದನ್ನೇ ನಿಲ್ಲಿಸಿದರು. ನನ್ನ ಉಳಿದ ಸ್ನೇಹಿತರು ಈ ವೇಳೆಗೆ ಮದುವೆಯಾಗಿ ಮಕ್ಕಳನ್ನು ಹೆರುವುದರಲ್ಲಿ ಬ್ಯುಸಿಯಾಗಿದ್ದರು. ನಾನು ಮಾತ್ರ ಎಂದಿನಂತೆ ಶಾಂತಿಯಿಂದ ಅವರಿಗಾಗಿ ಪುಸ್ತಕಗಳನ್ನು ಖರೀದಿಸಿ ನೀಡುತ್ತಿದ್ದೆ. 
ಒಂದು ದಿನ ನನಗೆ 35 ವರ್ಷವೂ ಆಯಿತು. ಆದರೂ ನನ್ನ ಹುಡುಗ ಮತ್ತು ಮಗುವಿನ ಕನಸು ಅಪೂರ್ಣವಾಗಿಯೇ ಉಳಿದಿತ್ತು. 
ನಂತರದ 5 ವರ್ಷಗಳಲ್ಲಿ ನನ್ನ ಕನಸಿನ ಉದ್ಯೋಗ, ಹುಡುಗ, ಮಗು ಎಲ್ಲವೂ ಆಯಿತು. ಆದರೆ ನಾನು ಅವುಗಳನ್ನೆಲ್ಲಾ ಈ ರೀತಿ ನಿರೀಕ್ಷಿಸಿರಲಿಲ್ಲ. ನಾನು ಆ ವೇಳೆಗಾಗಲೇ ಈ ವಿಷಯಗಳನ್ನೆಲ್ಲಾ ಯೋಚಿಸುವುದನ್ನೇ ಬಿಟ್ಟು ಬಿಟ್ಟಿದ್ದೆ.
ಆದರೆ ನಾನು ಸಿದ್ಧಳಿದ್ದೆನೆ? ಖಂಡಿತಾ ಇಲ್ಲ. ಅಲ್ಲಿಯವರೆಗೆ ಮಕ್ಕಳಿಗೆ ಆಂಟಿಯಾಗಿ, ಅವರಿಗೆ ಬಟ್ಟೆ, ಪುಸ್ತಕಗಳು, ಆಟಿಕೆಗಳನ್ನು ಖರೀದಿಸಿ ಅವರೊಂದಿಗೆ ಆಟವಾಡಿದ್ದೆಲ್ಲಾ ಅರ್ಹತೆಯಾಗಿರಲಿಲ್ಲ. ಒಂದು ಪುಟ್ಟ ಮಗುವು ನಮ್ಮ ಜೀವನವನ್ನು ಮತ್ತೆಂದೂ ಮುಂಚಿನ ತರಹ ಆಗದ ರೀತಿ ಹೇಗೆ ತಲೆಕೆಳಗು ಮಾಡಬಹುದು ಎಂದು ನಾನು ತಿಳಿದಿರಲಿಲ್ಲ. ಇಂದಿಗೂ ನಾನು ರಾತ್ರಿ ಮಲಗುವಾಗ ಒಂದು ದಿನದ ಮಟ್ಟಿಗೆ ನಾನು ಸಿಂಗಲ್ ಆಗಿ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಯೋಚಿಸುತ್ತೇನೆ. ಆದರೆ ಆಶ್ಚರ್ಯದ ವಿಷಯವೆಂದರೆ ನನಗೆ ಒಳ್ಳೆಯ ಮಗುವಿದ್ದು, ಹೆಚ್ಚಿನ ಸಮಯ ಅವನೊಂದಿಗಿರುವುದು ಮೋಜಿನ ವಿಷಯವಾಗಿರುತ್ತದೆ. ಅವನು ಹತ್ತಿರವಿಲ್ಲದಿದ್ದರೆ ನಾನು ಯಾವ ರೀತಿಯ ವ್ಯಕ್ತಿಯಾಗಿರುತ್ತಿದ್ದೆ ಎಂದು ನಾನು ಯೋಚಿಸಲೂ ಸಾಧ್ಯವಿಲ್ಲ. ಆದರೆ ನಾನು ಅವನನ್ನು ಪಡೆಯಲು ಸಿದ್ಧಳಿದ್ದೆನೆ? ಇಲ್ಲ. 
ನನ್ನ ಸ್ನೇಹಿತೆ "A" ಯ ಮಗನ ಮತ್ತು ನನ್ನ ಮಗನ ಹೆಸರು ಒಂದೇ. ಅವಳ ಮಗನಿಗೆ 18, ನನ್ನ ಮಗನಿಗೆ 6. ನಾನು ಮತ್ತು ಅವಳು ಒಂದೇ ವಯಸ್ಸಿನವರು. ಬೇಗ ಮಕ್ಕಳನ್ನು ಪಡೆಯುವುದು ಬಹುಶಃ ಒಳ್ಳೆಯ ಸಂಗತಿ. ಇದರಿಂದ ನಿಮ್ಮ ಉಳಿದ ಜೀವನವನ್ನು ಆರಾಮಾಗಿ ಕಳೆಯಬಹುದು. ಆಕೆಯು ತನ್ನ ಉದ್ಯೋಗದ ಎರಡನೆಯ ಹಂತಕ್ಕೆ ಕಾಲಿರಿಸಿದ್ದಾಳೆ ಮತ್ತು ಬಹಳ ಉತ್ಸಾಹದಿಂದ ಆಕೆಯ ಹೊಸ ಉದ್ದಿಮೆಯನ್ನು ನಡೆಸುತ್ತಿದ್ದಾಳೆ. ನಾವು ಕಳೆದ ವರ್ಷ ಭೇಟಿಯಾಗಿದ್ದೆವು. ಆಕೆಯು ಹೇಗೆ ತನ್ನ ಜೀವನದ ಕಳೆದ 20 ವರ್ಷಗಳು ಕಪ್ಪು ರಂಧ್ರದಂತಾಗಿದೆಯೆಂದು ತಿಳಿಸಿದಳು. ಆಗ ನನಗೆ, ಅವಳು ಎರಡು ಮಕ್ಕಳನ್ನು ಆರೈಕೆ ಮಾಡುತ್ತಾ ತನ್ನ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ಹೊಸ ಪದವಿಗಳನ್ನು ಪಡೆಯುತ್ತಾ, ಮನೆಯನ್ನು ಕೂಡ ನಿರ್ವಹಿಸುತ್ತಿರುವಾಗ ನಾನು ಬೇರೆ ಬೇರೆ ಪ್ರದೇಶಗಳನ್ನು ಸುತ್ತುತ್ತಾ ಬಾಯ್ ಫ್ರೆಂಡ್ ಗಳನ್ನು ಬದಲಾಯಿಸುತ್ತಾ ಆರಾಮಾಗಿ ಇದ್ದೆ ಎಂಬುದು ನೆನನಪಾಯಿತು.
ಯಾರಾದರೂ ನಿಮಗೆ ಮಗುವನ್ನು ಪಡೆಯಲು ಸೂಕ್ತವಾದ ಸಮಯ ಯಾವುದೆಂದು ಹೇಳುತ್ತಿದ್ದರೆ ಅವರು ನಿಜವಾಗಿ ದೇಹದ ಸಮಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಇದು ಕೂಡ ವಸ್ತುನಿಷ್ಠವಲ್ಲ, ಏಕೆಂದರೆ ನೀವು ಕಡಿಮೆ ವಯಸ್ಸಿನವರಾದರೆ ನೀವು ಶಕ್ತರು ಎಂದು ಅಥವಾ ಹೆಚ್ಚು ವಯಸ್ಸಾಗಿದ್ದರೆ ನೀವು ಕಡಿಮೆ ಶಕ್ತರು ಎಂದು ಅರ್ಥವಲ್ಲ. ನಾನು ಇದನ್ನು ಈ ರೀತಿಯಾಗಿ ವಿಶ್ಲೇಷಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಮಗುವನ್ನು ಪಡೆಯಲು ಸಿದ್ಧವಾಗುವ ಪ್ರಕ್ರಿಯೆಯು 3 ಬಹಳ ಹತ್ತಿರದ ವಿಷಯಗಳನ್ನು ಒಳಗೊಂಡಿದೆ. ಅವು: ಜೈವಿಕ ಗಡಿಯಾರ, ವೃತ್ತಿ ಗಡಿಯಾರ ಮತ್ತು ಭಾವನಾತ್ಮಕ ಗಡಿಯಾರ. ಅನುಕೂಲತೆಗಾಗಿ ನಾನು ಈ 3 ಸಮಯದ ವಲಯಗಳನ್ನು, ಮಗುವನ್ನು ಸಾಮಾನ್ಯವಾಗಿ ಪಡೆಯುವ ರೀತಿಗೆ ಅನುಸಾರವಾಗಿ ವಿಂಗಡಿಸುತ್ತೇನೆ: ಇಪ್ಪತ್ತರ ಅವಧಿ, ಮೂವತ್ತರ ಅವಧಿ ಮತ್ತು ನಲವತ್ತರ ಅವಧಿ. ಈ ಮೂವರಲ್ಲಿ ಮಧ್ಯದಲ್ಲಿರುವವರು ಹೆಚ್ಚಾಗಿ ಬಾಧಿತರಾಗುತ್ತಾರೆ. ದುರಾದೃಷ್ಠವಶಾತ್, ಹೆಚ್ಚಿನ ಮಹಿಳೆಯರು ಮೂವತ್ತರ ಆದಿ ಭಾಗದಲ್ಲಿಯೇ ಮಕ್ಕಳನ್ನು ಪಡೆಯಲು ಬಯಸುತ್ತಾರೆ.
ಇದರಿಂದಾಗುವ ಅನಾನುಕೂಲಗಳೆಂದರೆ: 20ರಲ್ಲಿ ಮಕ್ಕಳನ್ನು ಪಡೆಯುವ ಮಹಿಳೆಯರು ನಲವತ್ತರಲ್ಲಿ ಜೀವನವನ್ನು ಮತ್ತೆ ಸವಿಯಲು ಸಿದ್ಧರಾಗುತ್ತಾರೆ. ಇದಕ್ಕೆ ವಿರುದ್ಧವಾಗಿ, ತಡವಾಗಿ ಮಕ್ಕಳನ್ನು ಪಡೆದ ಮಹಿಳೆಯರೂ ಇರುತ್ತಾರೆ. ತಮ್ಮ ಅ ನೇಕ ಆಸೆ ಆಕಾಂಕ್ಷೆಗಳನ್ನು ಅವರು ಕೈಬಿಟ್ಟಿರುತ್ತಾರೆ. ಆದರೆ, ನೀವೆಷ್ಟೇ ಯೋಚಿಸಿದರೂ, ಎಷ್ಟರ ಮಟ್ಟಿಗೆ ಅ, ಆ ಮತ್ತು Z ಎಂಬಿತ್ಯಾದಿ ಪ್ಲ್ಯಾನುಗಳನ್ನು ಮಾಡಿದರೂ, ಮಗು ಎನ್ನುವುದು ಎಲ್ಲವನ್ನೂ ತಲೆಕೆಳಗು ಮಾಡಿಬಿಡುತ್ತದೆ ಮತ್ತು ಆಶ್ಚರ್ಯಚಕಿತರನ್ನಾಗಿ ಮಾಡಿಬಿಡುತ್ತದೆ! ಇವೆಲ್ಲಕ್ಕಾಗಿ ನಾನು ಇಷ್ಟೆಲ್ಲ ಮಾಡಿದೆನೇ? ಎನಿಸಿಬಿಡುವಷ್ಟು! ನೀವು ನಿಮ್ಮ ಪರಿಸ್ಥಿತಿಯನ್ನು ಒಂದು ಪದವಿಯಾಗಿ ಅನುಭವಿಸಲು ತೊಡಗುತ್ತೀರಿ ಯಾಕೆಂದರೆ, ಇತರರು ನಿಮ್ಮನ್ನು ಆ ಪರಿಸ್ಥಿತಿಗೆ ತಳ್ಳಿದರು ಎಂಬ ಕಾರಣಕ್ಕಾಗಿ. ಅವರನ್ನು ನೀವು ಎಂದಿಗೂ ಕ್ಷಮಿಸಲಾರಿರಿ.
ತಾಯ್ತನವು ನಿಮ್ಮ ಜೀವನದಲ್ಲಿ ಸಂಭವಿಸುವ ಎಂದೂ ಬದಲಾಗದ ಸಂಗತಿಯಾಗಿದೆ. ಆದರೆ ಅದರ ಬಗ್ಗೆ ಅತ್ಯಂತ ಕಡಿಮೆ ಯೋಚಿಸಲಾಗುತ್ತದೆ. ಹೆಚ್ಚಿನ ಮಹಿಳೆಯರು ಅವರ ಜೀವನದಲ್ಲಿ ಏನಾಗುತ್ತಿದೆ ಎಂಬ ಅರಿವಾಗುವ ಮೊದಲೇ ಮಕ್ಕಳನ್ನು ಪಡೆದಿರುತ್ತಾರೆ ಅಥವಾ ಯೋಚಿಸುವ ಅವಕಾಶ ದೊರೆಯದಷ್ಟು ತಡ ಮಾಡಿಕೊಂಡಿರುತ್ತಾರೆ. 
ಆದರೆ ನಾನು “ಸಿದ್ಧರಾಗುವವರೆಗೆ ಕಾಯುವ” ವಿಚಾರವನ್ನು ಅಲ್ಲಗಳೆಯುತ್ತೇನೆ. ಯಾಕೆಂದರೆ ಇದು ಜನರು ಪಾಲಕತ್ವದ ಜವಾಬ್ಧಾರಿಗೆ ಮುಂಚಿತವಾಗಿಯೇ ಸಿದ್ಧವಾಗಬಹುದು ಎಂಬ ತತ್ವದ ಮೇಲೆ ಆಧರಿತವಾಗಿದೆ. ಆದರೆ ಮಗುವು ಒಂದು ಊಹಿಸಲಾಗದ ಸಂಗತಿಯಾಗಿದೆ. ನನ್ನ ಪ್ರಕಾರ: ನೀವು ನಿಮಗಾಗಿ ಸಿದ್ಧರಾದಾಗ ಮಗುವನ್ನು ಪಡೆಯಲು ಕೂಡ ಸಿದ್ಧರಾಗುತ್ತೀರಿ. ಏಕೆಂದರೆ ನೀವು ಯಾರು? ಮತ್ತು ನೀವು ಏನನ್ನು ಮಾಡಬಹುದು? ಮಾಡಲು ಸಾಧ್ಯವಿಲ್ಲ? ಎಂಬ ವಿಷಯಗಳೆಲ್ಲಾ ತಾಯ್ತನದ ವೇಳೆ ಬದಲಾಗಿ ಬಿಡುತ್ತದೆ. ಆದರೆ ಎಲ್ಲರ ಪಾಲಿಗೂ ಇದು ಸಂತೋಷವನ್ನೇ ನೀಡುವುದಿಲ್ಲ. ಏಕೆಂದರೆ ಅಲ್ಲಿ ಏನಾಗಬಹುದೆಂದು ನಿಮಗೂ ತಿಳಿದಿರುವುದಿಲ್ಲ. ಆದರೆ ನೀವು ನಿಜವಾಗಿ ಮಗುವನ್ನು ಪಡೆಯಲು ಬಯಸಿದರೆ  ಅದೇ ಸರಿಯಾದ ಸಮಯ.
ನೀವು ಯಾವಾಗ ತಾಯ್ತನದ ಜವಾಬ್ದಾರಿಗೆ ಸಿದ್ಧರಿದ್ದೀರಿ ಎಂದು ನಾನು ಹೇಳಲಾರೆ ಆದರೆ ನೀವು ಯಾವಾಗ ತಯಾರಾಗಿಲ್ಲ ಎಂದು ಹೇಳಬಲ್ಲೆ:
  1. ನೀವು ಬಹಳವಾಗಿ ಇಷ್ಟ ಪಡುವ ಸ್ಥಿರವಾದ ಉದ್ಯೋಗವನ್ನು ಹೊಂದಿದ್ದಲ್ಲಿ ನೀವು ಸಿದ್ಧರಾಗಿಲ್ಲ: ಮಗುವನ್ನು ಹೊಂದಲು ಸ್ಥಿರ ಕೆಲಸವು ಒಂದು ತಡೆಯಾಗಿರುತ್ತದೆ. ಯಾಕೆಂದರೆ, ಅದು ನಿಮ್ಮ ವೈಚಾರಿಕ ಭಾಗವನ್ನು ಬೇಡುತ್ತದೆ. ಆದರೆ ಅದು ಯಾವಾಗಲೂ ಕೊರತೆಯಿಂದ ಕೂಡಿರುತ್ತದೆ. ಜೊತೆಗೆ ನೀವು ರಾತ್ರಿ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂದು ಯೋಜಿಸುವ ಕಾರ್ಯದಲ್ಲಿ ಬ್ಯುಸಿಯಾಗಿರುವಾಗ ನಿಮಗಿಂತಲೂ ಸಮರ್ಥರಾದ, ಕಡಿಮೆ ವಜ್ಜೆಯನ್ನು ಹೊಂದಿದ ಅನೇಕ ಕೆಲಸಗಾರರು ನಿಮ್ಮ ಜಾಗವನ್ನು ಆಕ್ರಮಿಸಲು ಸನ್ನದ್ಧರಾಗಿರುತ್ತಾರೆ.
  2. ನಿಮ್ಮ ಸಂಗಾತಿಯು ಸಿದ್ಧರಿದ್ದಾರೆಂಬ ಮಾತ್ರಕ್ಕೆ ನೀವು ಸಿದ್ಧರಿಲ್ಲ: ಒಮ್ಮೆ ಗರ್ಭಧಾರಣೆಯು ಖಚಿತವಾದರೆ, ನಿಮ್ಮ ಸಂಗಾತಿಯು ಅವರ ವೃತ್ತಿಯಲ್ಲಿ ಬ್ಯುಸಿಯಾಗಬಹುದು ಮತ್ತು ಅವರು ಮನೆಗೆ ನೀಡುವ ಸಮಯವು ಕಡಿಮೆಯಾಗಬಹುದು. ಈ ವಿಷಯದಲ್ಲಿ ನೀವು ಏನೂ ಮಾಡಲು ಸಾಧ್ಯವಿಲ್ಲವಾದರೆ ಗರ್ಭಧಾರಣೆಗೆ ಮುನ್ನ ಯೋಚಿಸಿ.
  3. ಮಕ್ಕಳಿಂದ ಜೀವನವು ಪೂರ್ಣವಾಗುತ್ತದೆ ಎಂದು ನೀವು ಅಂದುಕೊಂಡಿದ್ದಲ್ಲಿ ನೀವು ತಯಾರಾಗಿಲ್ಲ: ನೀವು ಕ್ರೀಡೆಗಳಲ್ಲಿ ಮೆಡಲುಗಳನ್ನು ಗೆಲ್ಲುವಲ್ಲಿ ಅಥವಾ ಸೇಲ್ಸ್ ಟಾರ್ಗೆಟ್ ರೀಚ್ ಆಗುವಲ್ಲಿ ಬಹಳ ಜಾಣರಿರಬಹುದು. ಒಂದೊಮ್ಮೆ ನೀವು ಚೆನ್ನಾಗಿದ್ದರೆ, ಸಮರ್ಥರಿದ್ದರೆ, ಯಾವಾಗಲೂ ಮಾಡಬಹುದು ಎಂಬುದಕ್ಕೆ ಪರಿಪೂರ್ಣತೆ ಎಂಬುದಿಲ್ಲ. 
  4. ಮಗುವನ್ನು ಪಡೆಯುವುದರಿಂದ ನಿಮ್ಮ ದಾಂಪತ್ಯವು ಇನ್ನಷ್ಟು ಬಲವಾಗುತ್ತದೆ ಎಂಬ ಯೋಚನೆಯಿದ್ದರೆ ನೀವು ಸಿದ್ಧರಾಗಿಲ್ಲ: ಬದಲಿಗೆ, ಇದು ನಿಮ್ಮ ದಾಂಪತ್ಯದ ಬಹು ಕಠಿಣ ಸಮಯವಾಗಿರುತ್ತದೆ. ಆದರೆ ಯಾರೂ ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಸಂತಾನೋತ್ಪತ್ತಿಯಿಂದ ಇನ್ನೂ ಹೆಚ್ಚಿನ ಕಂಪನಿಗಳು ನಿಮ್ಮ ಜೀವನದುದ್ದಕ್ಕೂ ಮತ್ತಷ್ಟು ಉತ್ಪನ್ನಗಳನ್ನು ಮಾರಬಹುದು. ಅದರಿಂದ ಅವರು ಹೆಚ್ಚಿನ ಲಾಭಗಳಿಸಬಹುದು. 
  5. ಮಗುವಿಗೆ ಎರಡೂ ಕಡೆಯ ಅಜ್ಜ ಅಜ್ಜಿಯರ ಸಾಂಗತ್ಯ ದೊರೆಯುತ್ತದೆ ಎಂದು ಅಂದುಕೊಂಡಿದ್ದರೆ ನೀವು ಸಿದ್ಧರಿಲ್ಲ: ಮೊದಲ ಕೆಲವು ವಾರಗಳ ನಂತರ ಅಜ್ಜ ಅಜ್ಜಿಯರು ನಿಮ್ಮ ಬಳಿ ಇರುವುದಿಲ್ಲ. ಮತ್ತು ಭಾವನಾತ್ಮಕವಾಗಿ ನಿಮ್ಮನ್ನು ಕಟ್ಟಿಹಾಕುತ್ತಾರೆ. 
  6. ನಿಮ್ಮ ಸ್ನೇಹಿತರಿಗೆ ಮಕ್ಕಳಿವೆ ಎಂದು ನೀವು ಮಗುವನ್ನು ಪಡೆಯಲು ಬಯಸಿದರೆ ನೀವು ಸಿದ್ಧರಿಲ್ಲ:ಅವರ ಮಕ್ಕಳು ಅವರಿಗೆ ವಿರಾಮವನ್ನು ನೀಡುತ್ತಾರೆ ಎಂಬುದರ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. 
  7. ನೀವೊಂದು ಬೆಕ್ಕನ್ನು ಸಾಕಿದ್ದಿರಿ ಎಂದ ಮಾತ್ರಕ್ಕೆ ನೀವು ಸಿದ್ಧರಾಗಿರುವುದಿಲ್ಲ. ಅಂತಹ ಹಲವು ಬೆಕ್ಕುಗಳನ್ನು ಸಾಕಿ: ಬೆಕ್ಕುಗಳು ಮಾತನಾಡುವುದಿಲ್ಲ ಅಥವಾ ಗೋಳುಗರೆಯುವುದಿಲ್ಲ. ಅಥವಾ ಅದೇ ಪುಸ್ತಕದ ಅದೇ ಸಂಗತಿಯನ್ನು 29 ಸಾರೆ ಓದುವಂತೆ ಕೇಳುವುದಿಲ್ಲ!
  8. ನಿಮ್ಮ ಸ್ನೇಹಿತರ ಮಕ್ಕಳನ್ನು ನೀವು ಚೆನ್ನಾಗಿ ನೋಡಿಕೊಂಡಿದ್ದೀರೆಂಬ ಕಾರಣಕ್ಕೆ ನೀವು ಮಗುವನ್ನು ಪಡೆಯಲು ಬಯಸಿದರೆ ನೀವು ಸಿದ್ಧರಿಲ್ಲ: ಬೇರೆಯವರ ಮಕ್ಕಳನ್ನು ಕೆಲ ಸಮಯದವರೆಗೆ ಮಾತ್ರ ನೋಡಿಕೊಳ್ಳುತ್ತೇವೆ ಆದರೆ ನಮ್ಮ ಮಕ್ಕಳ ವಿಷಯದಲ್ಲಿ ಅದು ಸಾಧ್ಯವಿಲ್ಲ. 
  9. ನೀವು ಮಕ್ಕಳನ್ನು ಇಷ್ಟಪಡುತ್ತೀರೆಂಬ ಕಾರಣಕ್ಕೆ ಮಗುವನ್ನು ಪಡೆಯಲು ಬಯಸಿದರೆ ನೀವು ಸಿದ್ಧರಿಲ್ಲ: ಮನರಂಜನೆಗೆ ಮತ್ತು ಆಡಲು ಮಕ್ಕಳ ಜೊತೆಗಿರುವುದು ಮತ್ತು 24x7x365 ಅವಧಿಯು ಆರೈಕೆ ಮಾಡಲು ಮಗುವನ್ನು ಹೊಂದುವುದೇ ಬೇರೆಯ ವಿಷಯ. 
  10. ನಿಮ್ಮ ಬಳಿ ಸಾಕಷ್ಟು ಹಣವಿದೆ ಎಂದ ಮಾತ್ರಕ್ಕೆ ನೀವು ಸಿದ್ದರಾಗುವುದಿಲ್ಲ: ಇದು ಎಂದಿಗೂ ಸಾಕಗುವುದಿಲ್ಲ. ಕಪ್ಪುರಂಧ್ರದ ವಿಷಯ ನೆನಪಿದೆ ತಾನೇ?
  11. ಏನು ಮಾಡಬೇಕು, ಮಕ್ಕಳಿಗೆ ಯಾವ ರೀತಿ ರೋಲ್ ಮಾಡೆಲ್ ಆಗಿರಬೇಕು, ಹಾಗೂ ಸದಾ ಪ್ರಶ್ನೆಗಳನ್ನು ಕೇಳುತ್ತಲೇ ಇರುವ, ಅದರಿಂದ ಎಂದೂ ಸುಸ್ತಾಗದ ಮುಗ್ಧ ಮಗುವಿಗೆ ಭರವಸೆಯನ್ನು ಮತ್ತು ಮಾರ್ಗದರ್ಶನವನ್ನು ಮಾಡಲು ನೀವು ಪ್ರಬುದ್ಧರಾಗಿ ಬೆಳೆದಿದ್ದೀರಿ ಎಂದು ಯಾವತ್ತಿಗೂ ಅಂದುಕೊಳ್ಳಲಾರಿರಿ.
  12. ನಿಮಗೆ ಎಂದಿಗೂ ಸ್ಥಿರವಾದ, ಒಂದೇ ರೀತಿಯ ದಾಂಪತ್ಯ ಜೀವನ ಸಾಧ್ಯವಿಲ್ಲ. ಅಂತಹ ಸಂಗತಿಯೇ ಅಸ್ತಿತ್ವದಲ್ಲಿಲ್ಲ.
ಮಗುವನ್ನು ಹಡೆಯುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಅಮೂಲಾಗ್ರವಾಗಿ ಬದಲಾಗುತ್ತದೆ. ನಿಮ್ಮ ದೇಹವು ಬದಲಾವಣೆಗೆ ಹೊಂದಿಕೊಳ್ಳುತ್ತದೆ: ಸ್ತನ್ಯಪಾನ, ತೇಗಿಸುವುದು, ಸ್ವಚ್ಛಗೊಳಿಸುವುದು, ನ್ಯಾಪಿಯನ್ನು ತೊಳೆಯುವುದು, ಸ್ನಾನ ಮಾಡುವುದು, ಮಗುವನ್ನು ಸ್ನಾನ ಮಾಡಿಸುವುದು, ಸ್ತನ್ಯಪಾನ ಮತ್ತೆ ಮಗುವನ್ನು ಸ್ವಚ್ಛಗೊಳಿಸುವುದು, ನ್ಯಾಪಿಯನ್ನು ಬದಲಾಯಿಸುವುದು, ಮೂತ್ರ ವಿಸರ್ಜನೆಗೆ ತೆರಳುವುದು, ಮತ್ತೆ ಸ್ತನ್ಯಪಾನ, ತೇಗಿಸುವುದು, ಹಾಡುವುದು, ಮಗುವಿನ ಭಾಷೆಯಲ್ಲಿ ಮಾತನಾಡುವುದು, ಮಗುವನ್ನು ಸ್ವಚ್ಛಗೊಳಿಸುವುದು.
ಆದರೆ ಈ ಎಲ್ಲ ಕಾರ್ಯಗಳಿಗೆ ಹೊಂದಿಕೊಳ್ಳಲು ಮನಸ್ಸಿಗೆ ಕಷ್ಟವಾಗುತ್ತದೆ. ಹೆರಿಗೆಯ ನಂತರದ ತಕ್ಷಣಕ್ಕೆ ನಿಮ್ಮ ಮನಸ್ಸು ತಾಯ್ತನದ ಹೊಣೆಯನ್ನು ಸ್ವೀಕರಿಸುವುದಿಲ್ಲ -  ಅಲ್ಲಿ ಕೋಪ, ಸಂಘರ್ಷ, ಗೊಂದಲಗಳಿಂದ ಕೆಲವೊಮ್ಮೆ ಖಿನ್ನತೆಯು ಉಂಟಾಗಬಹುದು- ಇವೆಲ್ಲವನ್ನು ಪ್ರಸವಾನಂತರದ ಖಿನ್ನತೆ ಎನ್ನುತ್ತಾರೆ. ಆದರೆ ನೀವು ಗರ್ಭಾವಸ್ಥೆಯಲ್ಲಿ ಓದಿದ ಪುಸ್ತಕಗಳು ನಿಮಗೆ ನ್ಯಾಪಿಯನ್ನು ಹೇಗೆ ಸಿದ್ಧಗೊಳಿಸಬೇಕು ಅಥವಾ ಆಸ್ಪತ್ರೆಯ ಬ್ಯಾಗಿನಲ್ಲಿ ಏನನನ್ನು ತುಂಬಬೇಕು ಎಂಬುದನ್ನು ತಿಳಿಸುತ್ತವೆಯೇ ಹೊರತು ಪ್ರಸವಾನಂತರದ ಖಿನ್ನತೆಯ ಬಗ್ಗೆ ತಿಳಿಸುವುದಿಲ್ಲ. 
ನಮ್ಮಲ್ಲಿ ಹಲವರು ಉಳಿದವರೊಂದಿಗೆ, ಮುಖ್ಯವಾಗಿ ಈ ಹಂತವನ್ನು ದಾಟಿದ ಮಹಿಳೆಯರೊಂದಿಗೆ ಮಾತನಾಡಿ ಸಮಾಧಾನ ಪಡೆಯುತ್ತೇವೆ. ಆದರೆ ಉಳಿದವರು ಎಲ್ಲವನ್ನೂ ತಮ್ಮಲ್ಲಿಯೇ ಇಟ್ಟುಕೊಂಡು ಖಿನ್ನತೆಗೆ ಒಳಗಾಗಬಹುದು. ಕೆಲವು ಮಹಿಳೆಯರು ಪ್ರಸವಾ ನಂತರದ  ಮನಸ್ಥಿತಿಯನ್ನು ಯಾರೊಂದಿಗೂ ಹೇಳಿಕೊಳ್ಳದೆಯೇ ಒಂದು ದೊಡ್ಡಹೊರೆಯಂತೆ ಉಳಿಸಿಕೊಳ್ಳುತ್ತಾರೆ.
ನನ್ನ ಸಲಹೆಯೆಂದರೆ: ಅದರ ಬಗ್ಗೆ ಮಾತನಾಡಿ. ನಿಮ್ಮ ಯಾವುದೇ ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಅವರು ನಿಮ್ಮ ಸಂಗಾತಿ, ತಾಯಿ, ಸ್ನೇಹಿತರು, ಚಿಕಿತ್ಸಕರು ಯಾರಾದರೂ ಆಗಬಹುದು. ಮಗುವಿನ ಜನನದ ನಂತರ ಆಪ್ತಸಮಾಲೋಚನೆ ಪಡೆಯುವುದರ ಬಗ್ಗೆ ಎಲ್ಲರೂ ನಿರ್ಲಕ್ಷಿಸುತ್ತಾರೆ ಆದರೆ ಹೆಚ್ಚಿನ ಮಹಿಳೆಯರಿಗೆ ಇದರ ಅವಶ್ಯಕತೆಯಿದೆ. ಆದರೆ ನೀವು ಸೂಕ್ತ ಸಹಾಯ ಪಡೆಯದಿದ್ದರೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗಬಹುದು. ಇದರಿಂದ ನಿಮಗೂ ನಿಮ್ಮ ಮಗುವಿಗೂ ತೊಂದರೆಯಾಗುತ್ತದೆ. ಹೆರಿಗೆಯ ನಂತರ ಕ್ಲಿನಿಕಲ್ ಡಿಪ್ರೆಷನ್ ಸಮಸ್ಯೆಯಿಂದ ಬಳಲುವ ಹೆಚ್ಚಿನ ಮಹಿಳೆಯರಿಗೆ ತಮಗೇನಾಗಿದೆಯೆಂದು ತಿಳಿದಿರುವುದೇ ಇಲ್ಲ. ಮಗುವಿನ ಬಗ್ಗೆ ಸಿದ್ಧವಾಗುವ ಎಲ್ಲಾ ವಿಷಯಗಳಿಗಿಂತ ಈ ವಿಷಯವು ನನನ್ನನ್ನು ಭಯಗೊಳಿಸುತ್ತದೆ.
ಲಲಿತಾ ಐಯ್ಯರ್ ಅವರು ಅಂಕಣಕಾರ್ತಿಯಾಗಿದ್ದು, ಐ ಯಾಮ್ ಪ್ರಗ್ನೆಂಟ್, ನಾಟ್ ಟರ್ಮಿನಲಿ ಇಲ್, ಯು ಈಡಿಯಟ್! ಎಂಬ ಪುಸ್ತಕ ರಚಿಸಿದ್ದಾರೆ. ಅವರು 6 ವರ್ಷದ ಮಗನನ್ನು ಹಾಗೂ ಹಲವು ಬೆಕ್ಕುಗಳನ್ನು ಸಾಕಿ ಸಲಹುತ್ತಿದ್ದಾರೆ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org