ಪ್ರಾಯದ ಮಗಳಿಗೆ ಯಾವ ರೀತಿ ಸಹಾಯ ಮಾಡಬಹುದು?

​ನಿಮಗೆ ಈಗಷ್ಟೇ ಪ್ರಾಯಕ್ಕೆ ಬಂದ ಮಗಳಿದ್ದಾಳೆಯೇ?  ಅವಳೊಂದಿಗೆ ಏನಾದರೂ ಮಾತಾಡಲು ಅಥವಾ ಅವಳ ವರ್ತನೆಗೆ ಪ್ರತಿಕ್ರಿಯಿಸಲು ಕಷ್ಟ ಅನ್ನಿಸುತ್ತಿದೆಯೇ? ವಯಸ್ಸಿಗೆ ಬಂದ ಮಗಳನ್ನು ಅರ್ಥ ಮಾಡಿಕೊಂಡು, ಆಕೆಗೆ ಬೆಂಬಲ ನೀಡುವುದು, ಪ್ರತಿಯೊಬ್ಬ ಪೋಷಕರಿಗೂ ಒಂದು ದೊಡ್ಡ ಸವಾಲಿನ ವಿಷಯ. ಇಂತಹ ಸಮಯದಲ್ಲಿ ಪೋಷಕರು ಹೇಗೆ ಸಹಾಯ ಮಾಡಬಹುದು ಎಂಬುದನ್ನು ಬೆಂಗಳೂರಿನ ಕೌನ್ಸಿಲರ್ ಮೌಲಿಕಾ ಶರ್ಮರವರು  ಕೆಲವು ಸಲಹೆ ನೀಡುತ್ತಾರೆ :

ಪ್ರಾಯದ ಬಗ್ಗೆ ಮಾತನಾಡಿ: ಕೆಲವು ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಅವರ ಪ್ರಾಯದ ಬಗ್ಗೆ ಮಾತನಾಡಲು ಮುಜುಗರವಾಗಬಹುದು. ಬಹುಶಃ ಅವರಿಗೂ ಬಾಲ್ಯದಲ್ಲಿ ಅವರ ತಂದೆತಾಯಿ ಈ ಬಗ್ಗೆ ಚರ್ಚೆ ಮಾಡಿರದಿದ್ದರೆ, ಈ ರೀತಿ ಅನ್ನಿಸುತ್ತದೆ. ಆದರೆ ಯೌವನಕ್ಕೆ ಕಾಲಿಡುತ್ತಿರುವ ಮಗಳಿಗೆ ತನ್ನ ದೇಹದಲ್ಲಾಗುವ ಬದಲಾವಣೆಯ ಬಗ್ಗೆ ಹಂತಹಂತವಾಗಿ ಮುಕ್ತವಾದ ಚರ್ಚೆ ಮಾಡುವುದು ಬಹಳ ಮುಖ್ಯ.

ಮಾತಿಗೆ ಪ್ರತಿಕ್ರಿಯಿಸುವುದಕ್ಕಿಂತ, ಅರ್ಥ ಮಾಡಿಕೊಳ್ಳಿ: ಅವರ ಭಾವನೆಗಳನ್ನು ಅರಿತು, ಅವರು ನಿಮ್ಮೊಂದಿಗೆ ಮಾತನಾಡಲು ಬಯಸಿದರೆ, ಸಂಪೂರ್ಣ ಗಮನ ನೀಡಿ. ಯಾವುದೇ ಕೆಲಸ ಮಾಡುತ್ತಿದ್ದರೆ ಅದನ್ನು ಬದಿಗಿಟ್ಟು ಮಗಳ ಜೊತೆ ಮಾತನಾಡಲು ಸಮಯ ಗೊತ್ತುಪಡಿಸಿ. ಅವರು ಹೇಳಿ ಮುಗಿಸುವುದಕ್ಕಿಂತ ಮುಂಚೆ  ಅವರ ಮಾತನ್ನು ಮಧ್ಯದಲ್ಲೇ ಮುರಿದು ನಿಮ್ಮ ಅಭಿಪ್ರಾಯ ಹೇಳಲು ಪ್ರಾರಂಭಿಸಬೇಡಿ

ಪ್ರತಿಫಲ ನಿರೀಕ್ಷಿಸಬೇಡಿ .ಬದಲಾಗಿ, ಅವಳಲ್ಲಿರುವ ಕೌಶಲ್ಯ ಮತ್ತು ಪ್ರಯತ್ನಕ್ಕೆ ಬೆಲೆ ನೀಡಿ: ಓದಿನಲ್ಲಿ ಮುಂದಿದ್ದಾಳ ? ಎನ್ನುವುದಷ್ಟೇ ಮುಖ್ಯವಲ್ಲ. ಅವಳಲ್ಲಿರುವ ಇತರ ಗುಣಗಳ ಬಗ್ಗೆ ಗೌರವವಿರಲಿ. ಉದಾಹರಣೆಗೆ, ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರಬಹುದು ಆದರೆ ಅವರು ಓದಿರುವುದಕ್ಕೆ ಬೆಲೆ ನೀಡಿ. ವಿದ್ಯಾಭ್ಯಾಸದಲ್ಲಿ ಹಿಂದಿರಬಹುದು, ಆದರೆ ಅವಳಲ್ಲಿರುವ ಇತರೇ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ. ಆಕೆಯ ಜೊತೆಗಿನ ಬಾಂಧವ್ಯ, ಅವಳಿಗೆ ನೀಡುವ ಬೆಂಬಲ, ಪ್ರೋತ್ಸಾಹ ಮತ್ತು ಅವಳ ಮೇಲಿನ ನಂಬಿಕೆ ಬಹಳ ಮುಖ್ಯವಾಗುತ್ತದೆ . 

ನೀವೂ ಮಾದರಿಯಾಗಿರಿ: ಸರಿಯಾದ ನಿದ್ರೆ, ಪೌಷ್ಠಿಕ ಆಹಾರ ಮತ್ತು ಪ್ರತಿನಿತ್ಯ ವ್ಯಾಯಾಮ ಮಾಡುವ ಮೂಲಕ ನಿಮ್ಮ ಆರೋಗ್ಯ ನೋಡಿಕೊಳ್ಳಿ. ನಿಮ್ಮ ಸ್ನೇಹಿತರು, ಬಂಧುಗಳು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಿ. ನಿಮಗೆ ಸಿಗುವ ಗೌರವ, ಸಹಾನುಭೂತಿ ಮತ್ತು ನೀವು ಸನ್ನಿವೇಶಗಳನ್ನು ಬಗೆಹರಿಸುವ ರೀತಿ, ಇವೆಲ್ಲವೂ ಅವಳಿಗೆ ಮಾದರಿಯಾಗುತ್ತದೆ. ನೀವು ಇತರರೊಂದಿಗೆ ಹೇಗೆ ವರ್ತಿಸುತ್ತೀರಿ ಎಂಬುದನ್ನು ಆಕೆ ಗಮನಿಸುತ್ತಾಳೆ. ಆದ್ದರಿಂದ ನಿಮ್ಮ ಮೂಡ್ ಮತ್ತು ಭಾವನೆಗಳನ್ನು ಗುರುತಿಸಿ, ಅವುಗಳನ್ನು ಸಮರ್ಥವಾಗಿ ನಿಭಾಯಿಸಿ.

ಆಕೆಯ ಸ್ನೇಹಿತರ ಬಗ್ಗೆ ಗೌರವವಿರಲಿ: ಅವಳ ಸ್ನೇಹಿತರನ್ನು ಮನೆಗೆ ಆಹ್ವಾನಿಸಿದಾಗ, ಅವರೊಂದಿಗೆ ಸಹಜವಾಗಿ ಪ್ರೀತಿಯಿಂದ ವರ್ತಿಸಿದರೆ ಅವಳಿಗೆ ಸಂತೋಷವಾಗುತ್ತದೆ. ಇದರಿಂದ ನಿಮ್ಮ ಮಗಳಿಗೆ ತನ್ನ ಸ್ನೇಹಿತರ ಬಗ್ಗೆ ನಿಮಗೆ ಗೌರವವಿದೆ ಎಂಬುದು ಮನವರಿಕೆಯಾಗುತ್ತದೆ

ಶಿಕ್ಷಣವಲ್ಲದೇ ಇತರೇ ವಿಷಯಗಳ ಬಗ್ಗೆಯೂ  ಮಾತನಾಡಿ: ಸಂದರ್ಭ ಸಿಕ್ಕಾಗ ಪರಸ್ಪರ ಸಂಬಂಧಗಳು, ಲೈಂಗಿಕತೆ ಇತ್ಯಾದಿ ವಿಷಯಗಳ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೇ ಚರ್ಚಿಸಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org