ವಿದ್ಯುತ್ಕಂಪನ ಚಿಕಿತ್ಸೆ (Electroconvulsive Therapy-ECT) ಎಂದರೇನು?

ವಿದ್ಯುತ್ಕಂಪನ ಚಿಕಿತ್ಸೆ (ECT) ಎಂದರೇನು? ಯಾರಿಗೆ ಅಗತ್ಯ? ಯಾವ ಹಂತದಲ್ಲಿ ಈ ಚಿಕಿತ್ಸೆ ಅಗತ್ಯ? ಮುಂಜಾಗೃತೆ ಕ್ರಮಗಳೇನು? ಎಂಬಿತ್ಯಾದಿ ಆಸಕ್ತಿದಾಯಕ ವಿಚಾರಗಳ ಕುರಿತು ನಿಮ್ಹಾನ್ಸ್ ನಲ್ಲಿ ಮನೋರೋಗ ತಜ್ಞರಾಗಿರುವ ಡಾ.ಪ್ರೀತಿ ಸಿನ್ಹಾ ವಿವರಿಸು
ಡಾ.ಪ್ರೀತಿ ಸಿನ್ಹಾ

ನಾವು ನಿಮ್ಹಾನ್ಸ್‌ನ ಮನೋರೋಗ ತಜ್ಞರಾದ ಡಾ.ಪ್ರೀತಿ ಸಿನ್ಹಾ ಅವರನ್ನುಭೇಟಿ ಮಾಡಿ,  ವಿದ್ಯುತ್ಕಂಪನ ಚಿಕಿತ್ಸೆ ಮತ್ತು ಅದರ ಲಾಭಗಳು ಕುರಿತ ವಿವಾದಗಳು ಮತ್ತು ಇತರ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂತೆ ಕೇಳಿಕೊಂಡೆವು.

ವಿದ್ಯುತ್ಕಂಪನ ಚಿಕಿತ್ಸೆ(ಇಸಿಟಿ), ತೀವ್ರ ಸ್ವರೂಪದ ಮನೋರೋಗಳಿಗೆ ನೀಡುವ ಚಿಕಿತ್ಸೆ. ಇದನ್ನು ಸಾಮಾನ್ಯವಾಗಿ ಶಾಕ್‌ ಟ್ರೀಟ್‌ಮೆಂಟ್‌ ಎಂದು ಗುರುತಿಸಲಾಗುತ್ತದೆ. ಈ ಚಿಕಿತ್ಸೆ ವಿಧಾನದ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಹಾಗೂ ಇದು ಸುಲಭವಾಗಿ ಲಭ್ಯವಿಲ್ಲದಿರುವುದರಿಂದ ಇದರ ಬಗ್ಗೆ ಜನ ಕೆಲವು ಸಂಶಯಗಳನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿ ಇಸಿಟಿ ಎಂದರೆ ಜನರಲ್ಲಿ ಬೇರೆ ಕಲ್ಪನೆಯಿದೆ. ಸಿನಿಮಾ, ಧಾರಾವಾಹಿ, ಇಂಟರ್‌ನೆಟ್‌ನಲ್ಲಿ ತೋರಿಸುವಂತೆ ಈ ಚಿಕಿತ್ಸೆ ಇರುತ್ತದೆ ಎಂದು ಭಾವಿಸಿದ್ದಾರೆ!

ಈ ರೀತಿಯ ಎಲ್ಲ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ ಇಸಿಟಿ ಕುರಿತ ವಾಸ್ತವಾಂಶಗಳನ್ನು ವಿವರಿಸುವುದು ಈ ಲೇಖನದ ಉದ್ದೇಶ.

ವಿದ್ಯುತ್ಕಂಪನ ಚಿಕಿತ್ಸೆ (ಇಸಿಟಿ) ಎಂದರೇನು?

ವಿದ್ಯುತ್ಕಂಪನ ಚಿಕಿತ್ಸೆ(ಇಸಿಟಿ) ಸುರಕ್ಷಿತ, ದಕ್ಷ ಮತ್ತು ಕೆಲವು ಸಲ ಜೀವ ಉಳಿಸುವ ಚಿಕಿತ್ಸೆಯಾಗಿದ್ದು ನಿರ್ಧಿಷ್ಟವಾದ ಮಾನಸಿಕ ರೋಗಗಳಿಗೆ ಇದನ್ನು ಬಳಸಲಾಗುತ್ತದೆ. ಕಳೆದ 75 ವರ್ಷಗಳಿಂದ ಈ ಚಿಕಿತ್ಸಾ ಪದ್ಧತಿ ಚಾಲ್ತಿಯಲ್ಲಿದೆ. ಇಸಿಟಿಯಲ್ಲಿ ರೋಗಿಯ ಮೆದುಳಿನ ಕೋಶಗಳನ್ನು ಉತ್ತೇಜಿಸಲು ಸಂಪೂರ್ಣ ನಿಯಂತ್ರಿತ ವಿದ್ಯುತನ್ನು ಸಣ್ಣ ಪ್ರಮಾಣದಲ್ಲಿ ಹಣೆಯ ಬಳಿ ಹಾಯಿಸಲಾಗುತ್ತದೆ. ಇದು ಕೆಲ ಸೆಕೆಂಡ್‌ಗಳ ಕಾಲ ಫಿಟ್ಸ್‌ನಿಂದ ಕೈಕಾಲುಗಳು ನಡುಗುತ್ತದೆ. ವಿದ್ಯುತ್‌ನಿಂದ ಪ್ರಚೋದಿಸುವ ಮುಂಚೆ ರೋಗಿಗೆ ಅರಿವಳಿಕೆ ನೀಡಿ ಪ್ರಜ್ಞೆ ತಪ್ಪಿಸಲಾಗುತ್ತದೆ. ಹಾಗಾಗಿ ವಿದ್ಯುತ್‌ನ ಅನುಭವವಾಗಲಿ ಅಥವಾ ನಂತರದ ಫಿಟ್ಸ್‌ನ ಅನುಭವವಾಗಲಿ ರೋಗಿಗೆ ಆಗುವುದಿಲ್ಲ. ಇಡೀ ಪ್ರಕ್ರಿಯೆ ಕೆಲ ನಿಮಿಷಗಳಷ್ಟೆ ನಡೆಯುತ್ತದೆ ಮತ್ತು ರೋಗಿಯು ಸಾಮಾನ್ಯವಾಗಿ ೧೫-೨೦ ನಿಮಿಷಗಳಲ್ಲಿ ಪ್ರಜ್ಞಾವಸ್ಥೆಗೆ ಮರಳುತ್ತಾನೆ.

ಸಾಮಾನ್ಯವಾಗಿ ಇದನ್ನು ಹೇಗೆ ಬಳಸುತ್ತಾರೆ?

ಇಸಿಟಿಯನ್ನು ಅಮೆರಿಕ, ಯೂರೋಪ್‌ ಮತ್ತು  ಆಸ್ಟ್ರೆಲಿಯಾದ ಕೆಲವು ದೇಶಗಳು ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಪ್ರತಿ ವರ್ಷ ಅಮೇರಿಕದಲ್ಲಿ 75000, ಬೆಲ್ಜಿಯಂನಲ್ಲಿ 7000, ಜೆರ್ಮನಿಯಲ್ಲಿ 1500, ವ್ಯಕ್ತಿಗಳಿಗೆ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 600-800 ವ್ಯಕ್ತಿಗಳಿಗೆ ನೀಡಲಾಗುತ್ತದೆ.

ಇಸಿಟಿಯಿಂದ ಯಾರಿಗೆ ಲಾಭ?

ಖಿನ್ನತೆ, ಸ್ಕೀಝೋಪ್ರೆನಿಯಾ ಅಥವಾ ಮೇನಿಯಾದಂಥ ತೀವ್ರವಾದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ವೈದ್ಯರು ಇಸಿಟಿ ಚಿಕಿತ್ಸೆಗೆ ಸಲಹೆ ನೀಡುತ್ತಾರೆ.  ರೋಗಿಯ ಸುರಕ್ಷತೆ, ಅಥವಾ ಕುಟುಂಬದ ಆದ್ಯತೆ, ಅವರ ಈಗಿನ ಮಾನಸಿಕ ಸ್ಥಿತಿಯಿಂದ ತ್ವರಿತ ಗುಣಮುಖವಾಗುವ ಅಗತ್ಯತೆ ಹಾಗೂ ಇತರ ಅಂಶಗಳನ್ನು ಪರಿಗಣಿಸಿದ ನಂತರ ವೈದ್ಯರು ಈ ಚಿಕಿತ್ಸೆಯನ್ನು ಸೂಚಿಸುತ್ತಾರೆ.

ಸಾಮಾನ್ಯವಾಗಿ ಕೆಳಗಿನ ಸ್ಥಿತಿಗಳಲ್ಲಿ ಇಸಿಟಿ ಚಿಕಿತ್ಸೆ ನೀಡಲಾಗುತ್ತದೆ.

  • ಮಾನಸಿಕ ಅನಾರೋಗ್ಯ ಸ್ಥಿತಿ ತೀವ್ರವಾದಾಗ (ವಿಶೇಷವಾಗಿ ತೀವ್ರವಾದ ಖಿನ್ನತೆ) ಮತ್ತು ರೋಗಿಯು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಹೆಚ್ಚಿದಾಗ,

  • ಅತಿಯಾದ ಮಾನಸಿಕ ಅಸ್ವಸ್ಥತೆಯಿಂದ ರೋಗಿಯು ನೀರು, ಆಹಾರ ನಿರಾಕರಿಸಿದಾಗ, ಇದು ಅವರ ದೈಹಿಕ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು.

  • ರೋಗಿಯು ಅತ್ಯಂತ ಅನಾರೋಗ್ಯದಿಂದ ಮೌನಿಯಾದಾಗ ಮತ್ತು ಚಲನ ರಹಿತನಾದಾಗ. (ಈ ಸ್ಥಿತಿಯನ್ನು ಕ್ಯಾಟಟೊನಿಯಾ (catatonia) ಎನ್ನುತ್ತಾರೆ.)

  • ಸಂಬಂಧಿತ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲು ಔಷಧ ಪರಿಣಾಮಕಾರಿಯಾಗದಿದ್ದಾಗ,

  • ಔಷಧಗಳು ಗಂಭೀರವಾದ ಅಡ್ಡ ಪರಿಣಾಮ ಬೀರಿ ಅದನ್ನು ಮುಂದುವರಿಸಲು ಸಾಧ್ಯವಾಗದ್ದಿದಾಗ ಇಸಿಟಿ ಚಿಕಿತ್ಸೆಯನ್ನು ನೀಡಲಾಗುತ್ತದೆ.  

ಇಸಿಟಿಗೆ ಒಳಪಡಿಸುವ ಮೊದಲು ರೋಗಿಯ ಅಥವಾ ಆತನ ಸಂಬಂಧಿಕರ ಒಪ್ಪಿಗೆ ಪಡೆಯಲಾಗುವುದೇ?

ಮನೋರೋಗ ತಜ್ಞರು ರೋಗಿಗೆ ಇಸಿಟಿ ಅಗತ್ಯವಿದೆ ಎಂದು ನಿರ್ಧರಿಸಿದಾಗ , ಚಿಕಿತ್ಸೆಯ ಪ್ರಕ್ರಿಯೆಯನ್ನು ವಿವರಿಸುತ್ತಾರೆ. ಅದರ ಲಾಭಗಳು ಮತ್ತು ನಷ್ಟಗಳನ್ನು ಮತ್ತು ಪರ್ಯಾಯ ಮಾರ್ಗಗಳನ್ನು ರೋಗಿಗೆ ಮತ್ತು ಅವರ ಸಂಬಂಧಿಗಳಿಗೆ ತಿಳಿಸುತ್ತಾರೆ. ಈ ಪ್ರಕ್ರಿಯೆಗೆ ರೋಗಿ ಮತ್ತು ಆತನ ಕುಟುಂಬ ಲಿಖಿತ ಒಪ್ಪಿಗೆ ನೀಡಿದ ನಂತರ ಇಸಿಟಿ ನೀಡಲಾಗುತ್ತದೆ.

ರೋಗಿಯ ಆರೋಗ್ಯ ಸ್ಥಿತಿ ಅತ್ಯಂತ ಹದಗೆಟ್ಟು ಯಾವುದಕ್ಕು ಪ್ರತಿಕ್ರಿಯಿಸಲಾಗದ ಹಂತದಲ್ಲಿದ್ದರೆ ಆತನ ಕುಟುಂಬದವರಿಂದ ಒಪ್ಪಿಗೆ ಪಡೆಯಲಾಗುತ್ತದೆ. ರೋಗಿ ಮತ್ತು ಕುಟುಂಬದ ಸದಸ್ಯರು ನಿರಾಕರಿಸಬಹುದು. ಚಿಕಿತ್ಸೆ ಆರಂಭಿಸುವ ಮೊದಲು ಅವರು ತಮ್ಮ ಒಪ್ಪಿಗೆಯನ್ನು ಹಿಂಪಡೆಯಬಹುದು ಅಥವಾ ಚಿಕಿತ್ಸೆಯ ಯಾವುದೇ ಹಂತದಲ್ಲಿ ನಿರಾಕರಿಸಬಹುದು. ಅಂತಹ ಸಂದರ್ಭದಲ್ಲಿ, ಸಾಧ್ಯತೆಯಿರುವ ಮುಂದಿನ ಅತ್ಯುತ್ತಮ ಚಿಕಿತ್ಸೆಯನ್ನೇ ಪಡೆಯುತ್ತಾರೆ.

ಇಸಿಟಿಗೆ ಒಪ್ಪಿಗೆ ನೀಡದಿದ್ದರೆ ಏನು ಮಾಡಲಾಗುತ್ತದೆ?

ಮನೋವೈದ್ಯರು ರೋಗಿಯ ಮತ್ತು ಆತನ ಕುಟುಂಬದ ನಿರ್ಧಾರವನ್ನು ಗೌರವಿಸುತ್ತಾರೆ. ಲಭ್ಯವಿರುವ ಚಿಕಿತ್ಸೆಗಳೊಂದಿಗೆ ಅವರು ರೋಗಿಯ ಮಾನಸಿಕ ಸ್ಥಿತಿಯನ್ನು ನಿಭಾಯಿಸುತ್ತಾರೆ. ಆದಾಗ್ಯೂ ಈ ಚಿಕಿತ್ಸೆಗಳು ಪರಿಣಾಮ ಬೀರಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಅಥವಾ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಬಹುದು. ವೈದ್ಯರು ರೋಗಿಯ ಆತುರತೆ, ತಳಮಳ ಅಥವಾ ಇತರ ಲಕ್ಷಣಗಳನ್ನು ನಿಯಂತ್ರಿಸಲು ಅಧಿಕ ಪ್ರಮಾಣದ ಔಷಧವನ್ನು ನೀಡಬೇಕಾಗಬಹುದು.

ಹಿರಿಯರು ಮತ್ತು ಮಕ್ಕಳಿಗೆ ಇಸಿಟಿ ಸುರಕ್ಷಿತವೆ?

ಮುಂಜಾಗ್ರತೆಗಳನ್ನು ತೆಗೆದುಕೊಂಡಲ್ಲಿ ಹಿರಿಯರಿಗೆ ಇಸಿಟಿ ಸುರಕ್ಷಿತ. ಇನ್ನೂ ಮುಖ್ಯವಾದ ಅಂಶವೆಂದರೆ ಕೆಲ ದೇಶಗಳಲ್ಲಿ ಇಸಿಟಿ ಸ್ವೀಕರಿಸುವವರಲ್ಲಿ ಹೆಚ್ಚಿನವರು ಹಿರಿಯರು. ಮಕ್ಕಳಲ್ಲಿ ಇದನ್ನು ಕೊನೆಯ ಆಯ್ಕೆಯೆಂದು ಪರಿಗಣಿಸಲಾಗುತ್ತದೆ ಮತ್ತು ವೈದ್ಯರ ಸಮೂಹದಲ್ಲಿ ಚರ್ಚಿಸಿದ ಬಳಿಕವೆ ಮಗುವಿಗೆ ಎಸಿಟಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ನೂರಾರು ಮಕ್ಕಳು ಯಾವುದೇ ಅಡ್ಡ ಪರಿಣಾಮವಿಲ್ಲದೆ ಇಸಿಟಿ ಸ್ವೀಕರಿಸಿದ್ದಾರೆ.

ಅಧಿಕ ರಕ್ತದ ಒತ್ತಡ, ಹೃದಯ ಸಂಬಂಧಿ ಖಾಯಿಲೆ ಹೊಂದಿದವರನ್ನು ಇಸಿಟಿಗೆ ಒಳಪಡಿಸಬಹುದಾ?

ಅಂತಹ ರೋಗಿಗಳಲ್ಲಿ ಮನೋವೈದ್ಯರು ಅವರ ಸಂಪೂರ್ಣ ವೈದ್ಯಕೀಯ ವಿವರ ನೋಡುತ್ತಾರೆ ಹಾಗೂ ಅರವಳಿಕೆ ತಜ್ಞರು (anaesthesiologist) ಸೇರಿದಂತೆ ಬೇರೆ ಬೇರೆ ತಜ್ಞರ ಅಭಿಪ್ರಾಯ ಸಂಗ್ರಹಿಸುತ್ತಾರೆ. ಇಸಿಟಿ ಪ್ರಕ್ರಿಯೆ ಸಮಯದಲ್ಲಿ ರೋಗಿಯ ಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಾರೆ. ಹೃದಯ ಸಂಬಂಧಿ, ನರರೋಗ ಅಥವಾ ಉಸಿರಾಟದ ತೊಂದರೆ ಹೊಂದಿರುವ ಹೆಚ್ಚಿನ ರೋಗಿಗಳು ತಮ್ಮ ಮನೋರೋಗಕ್ಕೆ ಇಸಿಟಿಯನ್ನು ಯಾವುದೇ ಅಡ್ಡಪರಿಣಾಮವಿಲ್ಲದೆ ಪಡೆದಿದ್ದಾರೆ.

ಇಸಿಟಿಯನ್ನು ಗರ್ಭಿಣಿ ಮಹಿಳೆ ಅಥವಾ ಬಾಣಂತಿಯಲ್ಲಿ ಬಳಸಬಹುದೆ?

ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಗರ್ಭಿಣಿ ಮಹಿಳೆ ಅಥವಾ ಬಾಣಂತಿಯರಿಗೂ ಇಸಿಟಿ ಸುರಕ್ಷಿತ ಚಿಕಿತ್ಸಾ ಪ್ರಕ್ರಿಯೆ. ಇಂತಹ ಸ್ಥಿತಿಯಲ್ಲಿ ಮಹಿಳೆಯರಿಗೆ  ತುರ್ತು ಅಗತ್ಯವಿದ್ದರೆ ಮಾತ್ರ ವೈದ್ಯರು ಇಸಿಟಿ ಸೂಚಿಸುತ್ತಾರೆ.

ಒಬ್ಬ  ವ್ಯಕ್ತಿ ಒಮ್ಮೆ ಇಸಿಟಿ ಚಿಕಿತ್ಸೆಗೆ ಒಳಪಟ್ಟರೆ, ಪ್ರತಿ ಸಲ ಕಾಯಿಲೆ ಬಂದಾಗ ಇಸಿಟಿ ಅಗತ್ಯವೆ?

ಒಮ್ಮೆ ವ್ಯಕ್ತಿ ಇಸಿಟಿ ಚಿಕಿತ್ಸೆಗೆ ಒಳಪಟ್ಟರೆ, ಪ್ರತಿ ಸಲ ರೋಗದಿಂದ ಬಳಲಿದಾಗಲು ಇಸಿಟಿ ನೀಡಬೇಕು ಎಂಬುದು ತಪ್ಪು ಅಭಿಪ್ರಾಯ.  ಹಲವು ಪ್ರಕರಣಗಳಲ್ಲಿ ರೋಗಿ ಇಸಿಟಿ ಸ್ವೀಕರಿಸಿದ ನಂತರ ಮನೋವೈದ್ಯರು ಅದರ ಪುನಾರಾವರ್ತನೆ ತಡೆಗಟ್ಟಲು ಔಷಧಗಳಿಂದ ಚಿಕಿತ್ಸೆ ನೀಡುತ್ತಾರೆ. ಆದಾಗ್ಯೂ ಅದೇ ಮಾನಸಿಕ ಸ್ಥಿತಿ ಮರುಕಳಿಸಿದರೆ ಮತ್ತು ಸ್ವಲ್ಪ ಪ್ರಮಾಣದಲ್ಲಿದ್ದರೆ ಚಿಕಿತ್ಸೆಗೆ ಸೂಚಿಸುತ್ತಾರೆ ಹೊರತು ಇಸಿಟಿಯನ್ನಲ್ಲ. ಬೇರೆ ಯಾವುದೇ ಚಿಕಿತ್ಸೆಗಳು ಫಲಿಸದೆ ಮತ್ತೊಮ್ಮೆ ಇಸಿಟಿಗೆ ಮೊರೆಹೋಗುವ ಪ್ರಕರಣಗಳು ಅತ್ಯಂತ ವಿರಳ. ಅಂತಹ ಸಂದರ್ಭದಲ್ಲಿ ಮಾತ್ರ ಇಸಿಟಿ ಪುನಃ ನೀಡಲಾಗುತ್ತದೆ.

ಇಸಿಟಿ ಚಿಕಿತ್ಸೆ ಕಾಯಿಲೆಯನ್ನು ಗುಣಪಡಿಸುವುದೇ? ಇಸಿಟಿ ಪ್ರಕ್ರಿಯೆಗೆ ಒಳಪಟ್ಟಾಗ ಅಥವಾ ಅದರ ನಂತರ ಔಷಧ ಸೇವನೆ ಅಗತ್ಯವಿರುವುದೇ?

ಇಸಿಟಿಯ ಪರಿಣಾಮ ಶಾಶ್ವತವಲ್ಲ. ಇಸಿಟಿಯಿಂದಾದ ಆರೋಗ್ಯ ಸುಧಾರಣೆ ಕಾಪಾಡಲು ರೋಗಿಗಳು ಔಷಧ ಸೇವಿಸುವ ಅಗತ್ಯವಿದೆ. ಔಷಧ, ಚಿಕಿತ್ಸೆಗಳ ಹೊರತಾಗಿಯೂ ಇಸಿಟಿಯಿಂದಾಗಿಯೇ ರೋಗ ಗುಣಮುಖವಾಗುವುದು ವಿರಳ. ಇಂತಹ ಸಮಯದಲ್ಲಿ ಕಡಿಮೆ ತರಂಗಾಂತರದಲ್ಲಿ ಇಸಿಟಿಯನ್ನು ೧೫ ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪುನರಾವರ್ತನೆ ಮಾಡಲಾಗುತ್ತದೆ.

ಒಮ್ಮೆ ರೋಗಿಗೆ ಇಸಿಟಿ ಸೂಚಿಸಿದರೆ ಆತನೇನು ಮಾಡಬೇಕು?

ರೋಗಿಯ ಹಿಂದಿನ ಮತ್ತು ಪ್ರಸ್ತುತದ ಕಾಯಿಲೆಗಳ ಕುರಿತು ಅದರಲ್ಲೂ ವಿಶೇಷವಾಗಿ ಹೃದಯ, ಶ್ವಾಸಕೋಶ ಸಂಬಂಧಿತ, ರಕ್ತದೊತ್ತಡ ಅಥವಾ ಮೂಳೆ ಸಂಬಂಧಿತ ಕಾಯಿಲೆಗಳ ಕುರಿತು ವೈದ್ಯರಿಗೆ ತಿಳಿಸುವುದು ತುಂಬಾ ಮುಖ್ಯ. ಅರವಳಿಕೆಯೊಂದಿಗೆ ಶಸ್ತ್ರಚಿಕಿತ್ಸೆ ಹೊಂದಿದ ಇತಿಹಾಸವಿದ್ದರೆ, ಹಲ್ಲುಗಳು ಬೀಳುವ ಸ್ಥಿತಿಯಲ್ಲಿದ್ದರೆ ಅದನ್ನು ವೈದ್ಯರಿಗೆ ತಿಳಿಸುವುದು ಅಗತ್ಯ. ವೈದ್ಯರು ರೋಗಿ ತೆಗೆದುಕೊಳ್ಳುತ್ತಿರುವ ಅಥವಾ ತೆಗೆದುಕೊಂಡಿರುವ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಸಾಮಾನ್ಯವಾಗಿ ವೈದ್ಯರು ಪೂರ್ತಿಯಾಗಿ ರೋಗಿಯ ತಪಾಸಣೆ ನಡೆಸಿ, ರಕ್ತ ಪರೀಕ್ಷೆ, ಇಸಿಜಿಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಮೆದುಳಿನ ಸ್ಕ್ಯಾನ್‌ ಮಾಡಿಸಲು ಸೂಚಿಸಬಹುದು.

 ಇಸಿಟಿ ಅವಧಿಯಲ್ಲಿ ಯಾವ ರೀತಿ ಪೂರ್ವ ಸಿದ್ಧತೆ ಅಗತ್ಯ?

ಅತ್ಯಂತ ಮಹತ್ವದ ಸಂಗತಿಯೆಂದರೆ ಇಸಿಟಿಗೆ ೬ ಗಂಟೆ ಮೊದಲು ಏನ್ನನ್ನು ಕುಡಿಯಬಾರದು ಅಥವಾ ತಿನ್ನಬಾರದು. ಶಾಂಪೂ ಬಳಸಿ ತಲೆ ಸ್ನಾನ ಮಾಡುವುದು ಒಳ್ಳೆಯದು. ಸಡಿಲವಾಗಿರುವ ಬಟ್ಟೆ ಧರಿಸಲು ಹೇಳಬಹುದು. ಆಭರಣ, ಕನ್ನಡಕ, ಕಟ್ಟಿದ ಹಲ್ಲು ಅಥವಾ ಹಿಯರಿಂಗ್ ಏಡ್ (hearing aid) ಕಳಚಿಡಬೇಕು. ಇಸಿಟಿ ಕೋಣೆಗೆ ಹೋಗುವ ಮೊದಲು ಮೂತ್ರ ವಿಸರ್ಜನೆ ಮಾಡಬೇಕು. ರೋಗಿ ಔಷಧಗಳನ್ನು ಸೇವಿಸುವುದಿದ್ದರೆ ವೈದ್ಯರು ಇಸಿಟಿಗೆ ಮೊದಲು ಮತ್ತು ನಂತರ ಯಾವ ಔಷಧಗಳನ್ನು ಸೇವಿಸಬೇಕು ಎಂದು ಸೂಚಿಸುತ್ತಾರೆ.

ಇಸಿಟಿ ಚಿಕಿತ್ಸೆಯಲ್ಲಿ ಏನಾಗುತ್ತದೆ?  ಇಸಿಟಿ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇದರಿಂದ ನೋವುಂಟಾಗುತ್ತದೆಯೇ? 

ಮನೋವೈದ್ಯರು, ಅರವಳಿಕೆ ತಜ್ಞರು, ನರ್ಸ್ ತಂಡದವರು ಜೊತೆಗೂಡಿ ಇಸಿಟಿ ಚಿಕಿತ್ಸೆ ನೀಡಲಾಗುತ್ತದೆ. ಮೊದಲು ನಿದ್ದೆಗೆ ಜಾರಲು ರೋಗಿಗೆ ಅರವಳಿಕೆ ಚುಚ್ಚುಮದ್ದು ನೀಡಲಾಗುತ್ತದೆ. ಈ ವೇಳೆ ಮುಸುಕಿನಿಂದ ಆಮ್ಲಜನಕ ಪೂರೈಸಲಾಗುತ್ತದೆ. ಒಮ್ಮೆ ರೋಗಿ ನಿದ್ರೆಗೆ ಜಾರಿದ ನಂತರ ಆತನ ಸ್ನಾಯುಗಳ ಸೆಳೆತವನ್ನು ಮೃದುವಾಗಿಸಲು ಒಂದು ಚುಚ್ಚುಮದ್ದು ನೀಡಲಾಗುತ್ತದೆ. ನಂತರ ಹಣೆಯ ಬಳಿ ಸಣ್ಣ ಪ್ರಮಾಣದ ವಿದ್ಯುತ್‌ನ್ನು ೨-೪ ಸೆಕೆಂಡ್‌ಗಳ ಕಾಲ ಹಾಯಿಸಲಾಗುತ್ತದೆ. ಇದು ೨೦ ಸೆಕೆಂಡ್‌ನಿಂದ ಒಂದು ನಿಮಿಷದವರೆಗೆ ಸೆಳೆತ/ಫಿಟ್ಸ್ ಉಂಟು ಮಾಡುತ್ತದೆ. ರೋಗಿಯು ತನ್ನ ಉಸಿರಾಟ ಶುರು ಮಾಡುವವರೆಗೂ ಆಮ್ಲಜನಕವನ್ನು ಹೊರಗಡೆಯಿಂದ ನೀಡಲಾಗುತ್ತದೆ. ಎದೆ ಬಡಿತ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಈ ಪ್ರಕ್ರಿಯೆಯುದ್ದಕ್ಕೂ ವೈದ್ಯರು ಹತ್ತಿರದಿಂದ ಗಮನಿಸುತ್ತಾರೆ. ರೋಗಿ ನಿದ್ದೆಗೆ ಜಾರಿದಾಗ ವಿದ್ಯುತ್‌ ಕಂಪನ ಚಿಕಿತ್ಸೆಯನ್ನು ನೀಡಲಾಗುತ್ತದೆ. ಹೀಗಾಗಿ ಇಸಿಟಿಯಿಂದ ನೋವುಂಟಾಗುವುದಿಲ್ಲ.

ಇಸಿಟಿ ಪ್ರಕ್ರಿಯೆ ನಂತರ ಮಾಡಬೇಕಾದ ಆರೈಕೆಗಳೇನು?

ಇಸಿಟಿ ಮುಗಿದ ಕೆಲ ಗಂಟೆಗಳ ತರುವಾಯ ರೋಗಿಯು ಪೂರ್ತಿ ಜಾಗೃತನಾಗುತ್ತಾನೆ. ತಿಂಡಿ ತಿನ್ನಲು ಅಥವಾ ಬೆಳಗಿನ ಔಷಧಕ್ಕೆ ನರ್ಸನ್ನು ಸಂಪರ್ಕಿಸುವುದು ಅತ್ಯಗತ್ಯ. ಇಸಿಟಿಯ ಬಳಿಕ ಕೆಲವು ಘಂಟೆಗಳ ಕಾಲ ಯಾವುದೇ ವಾಹನ ಚಾಲನೆ ಮಾಡದಿರುವಂತೆ ಸೂಚಿಸಲಾಗುತ್ತದೆ. ಇದರ ಹೊರತಾಗಿ ವ್ಯಕ್ತಿಯು ಸಹಜವಾಗಿ ತಮ್ಮ ದಿನಚರಿಯನ್ನು ಮುಂದುವರಿಸಬಹುದು. ಚಿಕಿತ್ಸೆ ಪೂರ್ತಿ ಮುಗಿಯುವವರೆಗೆ ಯಾವುದೇ ವಹಿವಾಟು ಒಪ್ಪಂದ ಅಥವಾ ಗುತ್ತಿಗೆ ಸಹಿ ಹಾಕುವುದು, ಅಥವಾ ಇತರ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳದೆ ಇರುವುದು ಉತ್ತಮ.

ಇಸಿಟಿ ನೀಡಿದ ಬಳಿಕ ಹೇಗಿರುತ್ತದೆ? ಸಾಮಾನ್ಯವಾಗಿ ಎಷ್ಟು ಇಸಿಟಿ ಅವಧಿಗಳು ಬೇಕಾಗುತ್ತವೆ?

ವಾರದಲ್ಲಿ ೨ ಅಥವಾ ೩ ಸಲ ಇಸಿಟಿ ನೀಡಲಾಗುತ್ತದೆ. ಹೆಚ್ಚಿನ ರೋಗಿಗಳು ೬-೧೨ ಅವಧಿಯ ಚಿಕಿತ್ಸೆ ಪಡೆಯುತ್ತಾರೆ. ಇಸಿಟಿಯ ಫಲಿತಾಂಶ ಆಧರಿಸಿ ವೈದ್ಯರು ಇಸಿಟಿ ಅವಧಿಗಳನ್ನು ಹೆಚ್ಚು ಅಥವಾ ಕಡಿಮೆ ಮಾಡಬೇಕೆ  ಎಂಬುದನ್ನು ನಿರ್ಧರಿಸುತ್ತಾರೆ.

ಇಸಿಟಿಯನ್ನು ಎಲ್ಲಿ ನಡೆಸಲಾಗುತ್ತದೆ?

ಅರವಳಿಕೆ ಮತ್ತು ಇಸಿಟಿ ಚಿಕಿತ್ಸೆ ಅವಧಿಯಲ್ಲಿ ವ್ಯಕ್ತಿಯನ್ನು ನಿಯಂತ್ರಿಸಬಲ್ಲ ವಿಶೇಷವಾದ ಕೋಣೆಯಲ್ಲಿ ಇಸಿಟಿ ನೀಡಲಾಗುತ್ತದೆ. ಚಿಕಿತ್ಸೆ ಮುಂಚೆ ಕಾದಿರಲು, ಚಿಕಿತ್ಸೆ ಪಡೆಯಲು ಮತ್ತು ಪ್ರಕ್ರಿಯೆಯಿಂದ ಗುಣಮುಖರಾಗಲು ಪ್ರತ್ಯೇಕ ಕೋಣೆಗಳಿರುತ್ತವೆ.

ಇಸಿಟಿ ಚಿಕಿತ್ಸೆ ಪರಿಣಾಮದಿಂದ ಯಾವಾಗ ಲಾಭವನ್ನು ನಿರೀಕ್ಷಿಸಬಹುದು?

ಹೆಚ್ಚಿನ ಜನರಲ್ಲಿ ೨-೪ ಇಸಿಟಿ ಅವಧಿ ನಂತರ ಚೇತರಿಕೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಆದಾಗ್ಯೂ ಕೆಲವರಲ್ಲಿ ಚಿಕಿತ್ಸೆಯ ಪೂರ್ತಿ ಅವಧಿ ಮುಗಿಯುವವರೆಗೂ ಚೇತರಿಕೆ ಕಾಣದೆ ಇರಬಹುದು. ರೋಗಿಗಳು ಯಾವುದೇ  ಚೇತರಿಕೆಯಾಗದ ಪ್ರಕರಣಗಳು ಬಲು ಅಪರೂಪ.

ಇಸಿಟಿ ಹೇಗೆ ಕೆಲಸ ಮಾಡುತ್ತದೆ?

ಇಸಿಟಿ ಚಿಕಿತ್ಸೆಯ ಪರಿಣಾಮವಾಗಿ ಮೆದುಳಿನಲ್ಲಿ ಕೆಲ ರಾಸಾಯನಿಕ ಬದಲಾವಣೆಗಳು ಉಂಟಾಗಿ ಹೊಸ ನರ ಕೋಶಗಳ ಬೆಳವಣೆಗೆಯಾಗುತ್ತದೆ ಎಂದು ನಂಬಲಾಗುತ್ತದೆ. ಇಸಿಟಿ ಬಳಿಕ ಮೆದುಳಿನ ನರವರ್ಗಾವಣೆ ಮಾಪಕದ (neurotransmitters) ಮಟ್ಟದಲ್ಲಿ ಬದಲಾವಣೆಯಾಗಿರುವುದನ್ನು ವಿಜ್ಞಾನಿಗಳು ಕಂಡಿದ್ದಾರೆ. ಇದು ಇಸಿಟಿಯಲ್ಲಿ ಕಾಣಬಹುದಾದ ಅಭಿವೃದ್ಧಿ. ಆದಾಗ್ಯೂ ಇಸಿಟಿ ಹೇಗೆ ಕೆಲಸ ಮಾಡುತ್ತದೆ ಎಂಬ ನಿರ್ದಿಷ್ಟ ಮಾನದಂಡ ಇದುವರೆಗೂ ಸ್ಪಷ್ಟವಾಗಿಲ್ಲ. ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

ಇಸಿಟಿ ಸುರಕ್ಷಿತವೆ? ಇಸಿಟಿಯ ಅಡ್ಡಪರಿಣಾಮಗಳೇನು? ಇಸಿಟಿ ಚಿಕಿತ್ಸೆಯಿಂದ ಜ್ಞಾಪಕ ಶಕ್ತಿಗೆ ತೊಂದರೆಯುಂಟಾಗುವುದೇ? 

ಸಾಮಾನ್ಯವಾಗಿ ಹೇಳುವುದಾದರೆ ಇಸಿಟಿ ಒಂದು ಸುರಕ್ಷಿತ ಪ್ರಕ್ರಿಯೆ. ಸಾಮಾನ್ಯವಾಗಿ ಇಸಿಟಿಯಿಂದ ಕೆಲ ಅಡ್ಡ ಪರಿಣಾಮಗಳಾಗುತ್ತದೆ. ಹಲವರಿಗೆ ತಲೆನೋವು ಅಥವಾ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ನೋವು ನಿವಾರಕ ಔಷಧಗಳು ಬೇಕಾಗಬಹುದು. ರೋಗಿಗೆ ಕೆಲವು ನಿಮಿಷಗಳ ಕಾಲ ಗೊಂದಲಮಯ ಪರಿಸ್ಥಿತಿ ಉಂಟಾಗಬಹುದು.

ಚಿಕಿತ್ಸೆಗೂ ಮೊದಲು ನಡೆದಿರುವ  ಅಥವಾ ನಂತರದ ಕೆಲವು ವಿಷಯಗಳು ಮರೆತುಹೋಗಬಹುದು. ಆದರೆ, ಬುದ್ಧಿಶಕ್ತಿ ಹಾಗೂ ಸ್ಮರಣಶಕ್ತಿಗೆ  ಯಾವುದೆ ಹಾನಿಯಾಗುವುದಿಲ್ಲ. ಇತರ ವೈದ್ಯಕೀಯ ಚಿಕಿತ್ಸೆಯಂತೆ ಅಡ್ಡಪರಿಣಾಮಗಳ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇಸಿಟಿಗೆ ಒಳಪಡಿಸಿದ ನಂತರ ಸೂಕ್ತ ವೈದ್ಯಕೀಯ ಶುಶ್ರೂಷೆ ನೀಡುವುದರಿಂದ , ಹೃದಯ ಅಥವಾ ನರಮಂಡಲಗಳಿಗೆ ತೊಂದರೆ ಅಥವಾ ಅಡ್ಡ ಪರಿಣಾಮಗಳನ್ನು ತಡೆಗಟ್ಟಬಹುದು. ಒಂದು ವೇಳೆ ತೊಂದರೆ ಉಂಟಾದರೆ ಇಸಿಟಿ ತಂಡದವರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಆಧುನಿಕ ತಂತ್ರಜ್ಞಾನ ಬಳಕೆಯಿಂದ ದಂತ, ಮೂಳೆ ಮತ್ತು ಸಂಧಿಯ ಸಮಸ್ಯೆ ದೂರುಗಳು ತೀರಾ ಕಡಿಮೆ.

ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಇತರ ಮಾರ್ಗಗಳು ಇರುವುದೇ? 

ಜ್ಞಾಪಕ ಶಕ್ತಿ ಕ್ಷೀಣಿಸದಂತೆ ಅಥವಾ ಯಾವುದೇ ಅಡ್ಡ ಪರಿಣಾಮಗಳಾಗದಂತೆ ಇಸಿಟಿ ಚಿಕಿತ್ಸೆಯನ್ನು ಹೆಚ್ಚು ಪರಿಷ್ಕರಣೆ ಮಾಡಲಾಗಿದೆ. ನಿರ್ದಿಷ್ಟ ಚೇತರಿಕೆ ಪ್ರಮಾಣ, ದೈಹಿಕ ಕಾಯಿಲೆಗಳು, ವಯಸ್ಸು ಮತ್ತು ಇಸಿಟಿಯ ಹಿಂದಿನ ಅನುಭವ ಆಧರಿಸಿ ಈ ಪರಿಷ್ಕರಣೆಗಳನ್ನು ಮಾಡಲಾಗಿದೆ.

ಡಾ.ಪ್ರೀತಿ ಸಿನ್ಹಾ ಮನೊರೋಗ ತಪಾಸಣೆ ತಜ್ಞರು, ನಿಮ್ಹಾನ್ಸ್‌ ಬೆಂಗಳೂರು

 


ಇನ್ನೂ ಓದಿ