ಹಿರಿಯರಿಗಾಗಿ ಯೋಗ

ವೃದ್ಧರ ದೈಹಿಕ- ಬೌದ್ಧಿಕ ಆರೋಗ್ಯ ಸುಧಾರಣೆಗೆ ಯೋಗ ಸಹಕಾರಿ

ವಯಸ್ಸಾಗುವಿಕೆ ಮಹತ್ವದ ಹಾಗೂ ಅನಿವಾರ್ಯ ಪ್ರಕ್ರಿಯೆ. ವೃದ್ಧಾಪ್ಯದ ಜತೆಗೆ ಹಲವು ವೈದ್ಯಕೀಯ ಪರಿಸ್ಥಿತಿಗಳೂ ಅಂಟಿಕೊಳ್ಳುತ್ತವೆ. ಅದರಲ್ಲಿ ಮುಖ್ಯವಾದ್ದೆಂದರೆ, ದೇಹದ ಶಾರೀರಿಕ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುವುದು. ಯುವಜೀವನದಲ್ಲಿ ಆಯ್ಕೆ ಮಾಡಿಕೊಂಡ ಅನಾರೋಗ್ಯಕರ ಜೀವನಶೈಲಿ ಮತ್ತು ಇತರ ಹಲವು ಪೂರಕ ಅಂಶಗಳು, ಹೃದ್ರೋಗ, ಟೈಪ್-೨ ಮಧುಮೇಹ, ಕ್ಯಾನ್ಸರ್, ಬೊಜ್ಜು, ಬುದ್ಧಿಮಾಂದ್ಯತೆ ಹೀಗೆ ಆರೋಗ್ಯ ಸ್ಥಿತಿ ಹದಗೆಡಲು ಕಾರಣವಾಗುತ್ತವೆ. ಜತೆಗೆ ನೋವು, ಆಯಾಸ, ಚಲನೆ ಕೊರತೆ, ನಿದ್ರಾಹೀನತೆಯಂಥ ಆಗೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಮೂಲಕ ವೃದ್ಧಾಪ್ಯದ ಒಟ್ಟಾರೆ ಜೀವನ ಗುಣಮಟ್ಟ ಹದಗೆಡಲು ಕಾರಣವಾಗುತ್ತದೆ.

ಬೆಂಗಳೂರಿನ ವೃದ್ಧಾಶ್ರಮಗಳಲ್ಲಿ ನಿಮ್ಹಾನ್ಸ್ ನಡೆಸಿದ ಅಧ್ಯಯನವೊಂದರಲ್ಲಿ ಅಲ್ಲಿನ ನಿವಾಸಿಗಳಿಗೆ ಆರು ತಿಂಗಳ ಯೋಗಾಭ್ಯಾಸದ ಪರಿಣಾಮವನ್ನು ಪರಿಶೀಲಿಸಲಾಯಿತು. ನಿರಂತರ ಯೋಗಾಭ್ಯಾಸ, ಮುಪ್ಪಿನ ಸಮಸ್ಯೆಗಳನ್ನು ವ್ಯತಿರಿಕ್ತಗೊಳಿಸಲು ಅಂದರೆ ವೃದ್ಧರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಇದು ಬಹಳಷ್ಟು ಪ್ರಯೋಜನಕಾರಿ ಎನಿಸಿತು. ಹಿರಿಯರಿಗೆ ಕೂಡಾ ಯೋಗ ಪರಿಚಯಿಸಿದರೆ, ಪ್ರಯೋಜನಕಾರಿ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಪರಿಣಾಮಕಾರಿ ನಿರ್ವಹಣೆ: 

ಯೋಗಾಭ್ಯಾಸ ಆರೋಗ್ಯಕರ ವೃದ್ಧಾಪ್ಯಕ್ಕೆ ರಹದಾರಿ. ಯೋಗಕ್ರಮದಿಂದ ಚಲನೆ ಮತ್ತು ಸಮತೋಲನ, ಸ್ಥಿತಿಸ್ಥಾಪಕತ್ವ ಮತ್ತು ಮನೋಸ್ಥಿತಿಯನ್ನು ಸುಧಾರಿಸುತ್ತದೆ. ಇದು ಹಿರಿಯರ ಸಾಮಾನ್ಯ ಆರೋಗ್ಯ ಹಾಗೂ ಜೀವನ ಗುಣಮಟ್ಟ ಸುಧಾರಣೆಗೆ ಗಣನೀಯ ಕೊಡುಗೆ ನೀಡುತ್ತದೆ. ಹಲವು ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ನಿರಂತರ ಯೋಗಾಭ್ಯಾಸದ ಮೂಲಕ ಗುಣಪಡಿಸಲು ಅಥವಾ ನಿಯಂತ್ರಣದಲ್ಲಿಡಲು ಸಾಧ್ಯ.

ಮಾನಸಿಕ ಆರೋಗ್ಯಕ್ಕೆ ಮದ್ದು: 

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ೨೦೨೦ರ ವೇಳೆಗೆ ವಿಶ್ವದ ಎರಡನೇ ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಯೆಂದರೆ ಖಿನ್ನತೆ. ಹಿರಿಯರಲ್ಲಿ ಕೂಡಾ ಖಿನ್ನತೆ ಪತ್ತೆ ಮಾಡುವುದು ಕಷ್ಟಸಾಧ್ಯ. ಇದನ್ನು ವಯಸ್ಸಾಗುವಿಕೆಯ ಲಕ್ಷಣ ಎಂದು ಕರೆಯಬಹುದು. ಒಟ್ಟು ಜನಸಂಖ್ಯೆಗೆ ಹೋಲಿಸಿದಲ್ಲಿ ವೃದ್ಧರಲ್ಲಿ ಖಿನ್ನತೆ ಕಾಡುವ ಸಮಸ್ಯೆ ಶೇಕಡ ೧೬.೫ ಮಂದಿಯಲ್ಲಿ ಕಂಡುಬರುತ್ತದೆ. ಅದರಲ್ಲೂ ಪ್ರಮುಖವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಈ ಅಪಾಯ ಹೆಚ್ಚು. ಖಿನ್ನತೆಗೆ ಒಳಗಾದ ವ್ಯಕ್ತಿಗಳು ಒತ್ತಡಕ್ಕೆ ಕಾರಣವಾಗುವ ಕೊರ್ಟಿಸಾಲ್ ಹಾರ್ಮೋನ್‌ಗಳನ್ನು ಅಧಿಕವಾಗಿ ಹೊಂದಿರುತ್ತಾರೆ. ಆದರೆ ಯೋಗಚಿಕಿತ್ಸೆಯು ಉದ್ವಿಗ್ನತೆ ಹಾಗೂ ಖಿನ್ನತೆಯನ್ನು ಕಡಿಮೆ ಮಾಡಿ, ಜೀವನಮಟ್ಟವನ್ನು ಸುದಾರಿಸುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.

ಜೀವನಶೈಲಿಯ ಪದ್ಧತಿಯಾಗಿಯೂ ಯೋಗ ಹಿರಿಯರಿಗೆ ಹಲವು ವಿಧದಲ್ಲಿ ಪ್ರಯೋಜನಕಾರಿ. ಇದು ಮೆದುಳಿನ ಮೂಲದ ನರಚಿಕಿತ್ಸಾ ಅಂಶ (ಬಿಡಿಎನ್‌ಎಫ್) ಎಂಬ ಹಿಪ್ಪೊಕ್ಯಾಂಪಸ್‌ನಲ್ಲಿ ಅತ್ಯಂತ ಸಕ್ರಿಯವಾಗಿರುವ ನರ ಸಂರಕ್ಷಣಾ ರಾಸಾಯನಿಕವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಖಿನ್ನತೆಗೆ ಒಳಗಾಗಿರುವ ವ್ಯಕ್ತಿಗಳಲ್ಲಿ ಬಿಡಿಎನ್‌ಎಫ್ ಪ್ರಮಾಣ ಕಡಿಮೆ ಇರುತ್ತದೆ. ಖಿನ್ನತೆಗೆ ಒಳಗಾದ ವ್ಯಕ್ತಿ ಯೋಗಾಸನ ಹಾಗೂ ಪ್ರಾಣಾಯಾಮವನ್ನು ನಿರಂತರವಾಗಿ ಮೂರು ತಿಂಗಳು ಮಾಡಿದಲ್ಲಿ, ಬಿಡಿಎನ್‌ಎಫ್ ಪ್ರಮಾಣ ಗಣನೀಯವಾಗಿ ಹೆಚ್ಚಿರುವುದನ್ನು ಅಧ್ಯಯನಗಳು ದೃಢಪಡಿಸಿವೆ. ಯೋಗ ಹಾಗೂ ಧ್ಯಾನವು, ವೃದ್ಧಾಪ್ಯದಲ್ಲಿ ಬರುವ ಅರಿವಿನ ಕೊರತೆಯನ್ನು ಕೂಡಾ ಪರಿಣಾಮಕಾರಿಯಾಗಿ ತಡೆಯುತ್ತದೆ. ಇದು ಸ್ಮರಣಶಕ್ತಿಯನ್ನು ಹೆಚ್ಚಿಸಿ, ಅರಿವಿನ ಸಾಮರ್ಥ್ಯ ಹೆಚ್ಚಿಸಲು ಕಾರಣವಾಗುತ್ತದೆ.

ದೈಹಿಕ ಆರೋಗ್ಯಕ್ಕೆ ಮದ್ದು:

ಎರಡನೇ ಹಂತದ ಮಧುಮೇಹ (ಡಿ೨ಡಿಎಂ) ಹಾಗೂ ಹೃದ್ರೋಗವು ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆ. ಎಂಟು ವಾರಗಳ ಕಾಲ ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ವೃದ್ಧರಲ್ಲಿ ತೂಕ ಇಳಿಕೆ ಮತ್ತು ಸೊಂಟದ ಸುತ್ತಳತೆ ಇಳಿಕೆಗೆ ಕಾರಣವಾಗಿದೆ. ಪ್ರತಿದಿನದ ನಡಿಗೆಗಿಂತ ಯೋಗಾಭ್ಯಾಸ ಈ ನಿಟ್ಟಿನಲ್ಲಿ ಹೆಚ್ಚು ಪ್ರಯೋಜನಕಾರಿ ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಆದ್ದರಿಂದ ಟಿ೨ಡಿಎಂನಂಥ ಸಮಸ್ಯೆಗಳಿಗೆ ಯೋಗಾಭ್ಯಾಸ ಅತ್ಯಂತ ಪರಿಣಾಮಕಾರಿ ಜೀವನಶೈಲಿ ಎಂದು ಪರಿಗಣಿಸಲ್ಪಟ್ಟಿದೆ. ಇದು ವೃದ್ಧರ ಮಾನಸಿಕ ಸಮತೋಲನಕ್ಕೂ ಗಣನೀಯ ಕೊಡುಗೆ ನೀಡುತ್ತದೆ.

ಹಿರಿಯರಲ್ಲಿ ಅದರಲ್ಲೂ ವೃದ್ಧಮಹಿಳೆಯರಲ್ಲಿ ಅಂಗವೈಕಲ್ಯಕ್ಕೆ ಕಾರಣವಾಗುವ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಮೂಳೆ ಸವೆತ. ಆದರೆ ಮೂಳೆಸವೆತದಿಂದ ಬಳಲುತ್ತಿರುವ ಹಲವು ರೋಗಿಗಳು ನಿರಂತರವಾಗಿ ಯೋಗಾಸನ ಮಾಡುತ್ತಾ ಬಂದ ಪರಿಣಾಮವಾಗಿ, ಅವರ ನೋವು ಕಡಿಮೆಯಾಗಿದೆ. ಅವರು ಹೆಚ್ಚು ಶಕ್ತಿಶಾಲಿಗಳೂ, ನಿದ್ರೆ ಹೆಚ್ಚಾಗಿ ಬರಲು ಕೂಡಾ ಇದು ಕಾರಣವಾಗಿದೆ. ಇದರಿಂದ ನಿಯತವಾಗಿ ಯೋಗಾಭ್ಯಾಸ ಮಾಡುವುದು ಮೂಳೆಸವೆತವನ್ನು ನಿರ್ವಹಿಸುವಲ್ಲಿ ಕೂಡಾ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ತಿಳಿಯುತ್ತದೆ.

ಮೂತ್ರದಲ್ಲಿ ನಿಯಂತ್ರಣ ಇಲ್ಲದಿರುವುದು ಮತ್ತು ಮೂತ್ರಕೋಶ ನಿಯಂತ್ರಣ ತಪ್ಪುವುದು ನಲುವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರ ಮತ್ತೊಂದು ದೊಡ್ಡ ಸಮಸ್ಯೆ. ನಲುವತ್ತು ವರ್ಷ ಮೀರಿದ ಮೂರನೇ ಒಂದರಷ್ಟು ಮಹಿಳೆಯರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಇಂಥ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರು ವಾರಗಳ ಯೋಗಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಎನ್ನುವುದು ನಿರೂಪಿತವಾಗಿದೆ.

ಯೋಗಾಭ್ಯಾಸ ಆರಂಭಿಸುವ ಮೊದಲು ಈ ಕೆಳಗಿನ ಅಂಶಗಳನ್ನು ಗಮನಿಸುವುದು ಸೂಕ್ತ: 

೧. ಕಳೆದ ಆರು ತಿಂಗಳಲ್ಲಿ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಗಳು ಯೋಗ ಅಥವಾ ಯಾವುದೇ ದೈಹಿಕ ಶ್ರಮದ ವ್ಯಾಯಾಮ ಮಾಡದಿರುವುದು ಸೂಕ್ತ. ಅದಾಗ್ಯೂ ಅವರು ಸುಕ್ಷಮ ವ್ಯಾಯಾಮ ಮತ್ತು ಲಘು ಪ್ರಾಣಾಯಾಮವನ್ನು ನುರಿತ ಯೋಗ ಚಿಕಿತ್ಸಕರ ಮೇಲ್ವಿಚಾರಣೆಯಲ್ಲಿ ಮಾಡಬಹುದು.

೨. ಹೈಪರ್‌ಟೆನ್ಷನ್ ಸಮಸ್ಯೆ ಇರುವವರು ಆಸನಗಳು ಹಾಗೂ ಪ್ರಾಣಾಯಾಮವನ್ನು ತ್ವರಿತವಾಗಿ ಮಾಡುವುದು ಸೂಕ್ತವಲ್ಲ. ಬದಲಾಗಿ ಅವರು ನಿಧಾನವಾಗಿ ಇದನ್ನು ಮಾಡಬಹುದು.

೩. ಯಾರು ಕೂಡಾ ಯೋಗಾಭ್ಯಾಸವನ್ನು ತಾವಾಗಿಯೇ ಪರೀಕ್ಷಿಸಬಾರದು. ಯೋಗಶಿಕ್ಷಕರಿಂದ ಮಾರ್ಗದರ್ಶನ ಪಡೆದು ನಂತರ ಮನೆಯಲ್ಲಿ ಅಭ್ಯಾಸ ಮಾಡಬಹುದು.

೪. ನಿಮ್ಮ ಯೋಗಶಿಕ್ಷಕರು ನಿಮ್ಮ ಆರೋಗ್ಯ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರಬೇಕು. ಉದಾಹರಣೆಗೆ ಕೀಲು ನೋವು, ಎಲುಬು ಸವೆತ ಅಥವಾ ಇತರ ಯಾವುದೇ ತೊಂದರೆಗಳು. ಆಗ ಶಿಕ್ಷಕರು ನಿಮ್ಮ ದೇಹಕ್ಕೆ ಅನಗತ್ಯ ಶ್ರಮ ಎನಿಸದ ಆಸನಗಳನ್ನು ನಿಮಗೆ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತದೆ.

(ಡಾ.ಪೂಜಾ ಅವರು ನಿಮ್ಹಾನ್ಸ್‌ನ ಸಮಗ್ರ ಯೋಗ ಕೇಂದ್ರದ ವಿಜ್ಞಾನಾಧಿಕಾರಿ) 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org