ಪ್ರಸವಾ ನಂತರದ ಆತಂಕ

ಪ್ರಸವಾ ನಂತರದ ಆತಂಕ

ಪ್ರಸವದ ಸಂದರ್ಭದಲ್ಲಿ ಒತ್ತಡ ಮತ್ತು ಚಿಂತೆಯು ಸಹಜ. ಇವುಗಳಲ್ಲಿ ಹೆಚ್ಚಿನವು ಸಮಯ ಕಳೆದಂತೆ ಮರೆಯಾಗುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಮುತ್ತಿಕೊಳ್ಳುವ ಅನಗತ್ಯ ಯೋಚನೆಗಳು ನಮ್ಮ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತವೆ. ಇದಕ್ಕೆ ಚಿಕಿತ್ಸೆ ಅಗತ್ಯ

ಪ್ರಸವದ ಸಂದರ್ಭದಲ್ಲಿ ಒತ್ತಡ ಮತ್ತು ಚಿಂತೆಯು ಸಹಜ. ಇವುಗಳಲ್ಲಿ ಹೆಚ್ಚಿನವು ಸಮಯ ಕಳೆದಂತೆ ಮರೆಯಾಗುತ್ತವೆ. ಆದರೆ ಒಂದುವೇಳೆ ನಿಮ್ಮಲ್ಲಿ ಮತ್ತೆ ಮತ್ತೆ ಅನಗತ್ಯ ಯೋಚನೆ ಮತ್ತು ಚಿಂತೆಗಳು ಕಾಡಲಾರಂಭಿಸಿ ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯ ಕಡಿಮೆಯಾಗುತ್ತಿದ್ದರೆ ಬಹುಶಃ ನೀವು ಪ್ರಸವಾನಂತರದ ಆತಂಕಕ್ಕೆ ಒಳಗಾಗಿರಬಹುದು. ಆಗಷ್ಟೇ ತಾಯಿಯಾಗಿರುವ ನೀವು ಮಗುವಿನ ಆರೋಗ್ಯ ಮತ್ತು ಆಹಾರದ ಕುರಿತು ಯೋಚಿಸುವುದು ಅತ್ಯಂತ ಸಾಮಾನ್ಯ ವಿಷಯ. ಆದರೆ, ಈ ಯೋಚನೆಗಳು ನಿಮ್ಮ ನೆಮ್ಮದಿಯನ್ನು ಕೆಡಿಸಿ ಭಯವನ್ನು ಹುಟ್ಟಿಸುತ್ತಿದ್ದಲ್ಲಿ ತಜ್ಞರ ಸಹಾಯ ಪಡೆಯುವುದು ಒಳ್ಳೆಯದು.

ಪ್ರಸವಾನಂತರದ ಆತಂಕದ ಲಕ್ಷಣಗಳು ಗರ್ಭಧಾರಣೆಯ ಸಂದರ್ಭದಲ್ಲಿ ಉಂಟಾಗುವ ಆತಂಕದ ಲಕ್ಷಣಗಳಂತೆಯೇ ಇರುತ್ತದೆ. ಅವು ಯಾವುದೆಂದರೆ.. :

  • ಅವಿಶ್ರಾಂತ ಭಾವ ಮತ್ತು ಎಲ್ಲಾ ವೇಳೆಯೂ ಕಿರಿಕಿರಿ ಎನಿಸುವುದು
  • ನಿಮ್ಮ ದೈನಂದಿನ ಕಾರ್ಯಕ್ಷಮತೆಯನ್ನು ಕುಗ್ಗಿಸುವ ಅನಗತ್ಯ ಯೋಚನೆಗಳು
  • ವಿಶ್ರಮಿಸಲು ಸಾಧ್ಯವಾಗದಿರುವುದು ಅಥವಾ ರಾತ್ರಿಯ ವೇಳೆ ನಿದ್ರೆಯ ತೊಂದರೆ
  • ಸತತ ಯೋಚನೆಯಿಂದ ಮಗುವನ್ನು ಮತ್ತೆ ಮತ್ತೆ ಪರೀಕ್ಷಿಸುವುದು
  •  ಚಿಂತೆಯಿಂದಾಗಿ ಮಗುವಿನ ಜೊತೆ ಹೊರಗಡೆ ಹೋಗದಿರುವುದು

ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬರುತ್ತಿದ್ದರೆ ನೀವು ನಿಮ್ಮ ವೈದ್ಯರನ್ನು ಅಥವಾ ಪ್ರಸೂತಿ ತಜ್ಞರನ್ನು ಸಂಪರ್ಕಿಸಿ. ಅವರು ನಿಮಗೆ ಮಾನಸಿಕ ಆರೋಗ್ಯ ತಜ್ಞರ ಸಲಹೆ ನೀಡಬಹುದು.

ಪ್ರಸವಾ ನಂತರದ ಒಸಿಡಿ: 
ಕೆಲವೊಮ್ಮೆ ತಾಯಂದಿರಲ್ಲಿ ಅವರನ್ನು ಭಯಪಡಿಸುವ ಅನಗತ್ಯ ಯೋಚನೆಗಳು ಮತ್ತೆ ಮತ್ತೆ ಬರಬಹುದು. ಇದರಿಂದ ಅವರು ತಮ್ಮ ಮಗುವಿಗೆ ಹಾನಿಯುಂಟಾಗುವುದನ್ನು ತಪ್ಪಿಸಲು ಕೆಲವು ವಿಪರೀತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿರುತ್ತದೆ. ಪ್ರಸವಾ ನಂತರದ ಒಸಿಡಿಯ ಲಕ್ಷಣಗಳು ಈ ರೀತಿ ಇವೆ:

  • ಮಗುವಿನ ಕುರಿತು ಭಯವನ್ನುಂಟು ಮಾಡುವ ಅನಗತ್ಯ ಯೋಚನೆಗಳು
  • ತಾಯಿಯು ಈ ಯೋಚನೆಗಳಿಂದ ಹೊರಬರಲು ನಿರಂತರವಾಗಿ ಕೆಲವು ಕಾರ್ಯಗಳನ್ನು ಮತ್ತೆ ಮತ್ತೆ ಮಾಡುವ ಮೂಲಕ ಕಂಪಲ್ಸಿವ್ ನಡವಳಿಕೆಯನ್ನು ತೋರಿಸಬಹುದು. ಉದಾಹರಣೆಗೆ, ಮಗುವಿಗೆ ಸೋಂಕು ಉಂಟಾಗಬಹುದೆಂಬ ಭಯವುಂಟಾದಲ್ಲಿ ಆಕೆಯು ಮತ್ತೆ ಮತ್ತೆ ಮನೆಯನ್ನು ಸ್ವಚ್ಛಗೊಳಿಸಬಹುದು; ಅಥವಾ  ನಿದ್ರಿಸುತ್ತಿರುವ ಮಗುವನ್ನು ಕೂಡಾ ಮತ್ತೆ ಮತ್ತೆ ಪರೀಕ್ಷಿಸಬಹುದು.
  • ಮಗುವಿನೊಂದಿಗೆ ಒಂಟಿಯಾಗುವ ಭಯ.
  • ಅತ್ಯಂತ ಜಾಗೃತ ನಡವಳಿಕೆಯಿಂದ ವಿಶ್ರಾಂತಿ ದೊರೆಯದಿರುವುದು.

ಚಿಕಿತ್ಸೆ:
ಈ ಆತಂಕದ  ಲಕ್ಷಣದ ಗಂಭೀರತೆಯ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಒಂದು ವೇಳೆ ಲಕ್ಷಣಗಳು ಗಂಭೀರವಾಗಿರದಿದ್ದಲ್ಲಿ ಭಾವನಾತ್ಮಕ ಬೆಂಬಲ ಮತ್ತು ಥೆರಪಿಯಿಂದ ತಾಯಿಯ ಆತಂಕವನ್ನು ಹೋಗಲಾಡಿಸಲು ಸಾಧ್ಯವಾಗಬಹುದು. ಲಕ್ಷಣಗಳು ಗಂಭೀರವಾಗಿದ್ದಲ್ಲಿ ತಾಯಿಗೆ ಸೈಕೊಥೆರಪಿಯ ಜೊತೆಗೆ ಔಷಧಗಳ ಅಗತ್ಯವಿರಬಹುದು. ಕಾಗ್ನೆಟಿವ್ ಬಿಹೆವಿಯರಲ್ ಥೆರಪಿ (CBT) ಅಥವಾ ಇಂಟರ್ ಪರ್ಸನಲ್ ಥೆರಪಿ (IPT) ಯು ಸಹಾಯಕವಾಗಬಹುದು. ಈ ಥೆರಪಿಗಳು ಬೇಡದ ಯೋಚನೆಗಳ ಕಾರಣವನ್ನು ಗುರುತಿಸಿ ಅವುಗಳನ್ನು ಆರೋಗ್ಯಕರವಾದ ಯೋಚನೆಗಳಾಗಿ ಬದಲಾಯಿಸಲು ಸಹಾಯ ಮಾಡುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org