ಬಿಂಜ್ ಈಟಿಂಗ್ ಸಮಸ್ಯೆ

Q

ಬಿಂಜ್ ಈಟಿಂಗ್ ಸಮಸ್ಯೆ ಎಂದರೇನು?

A

ನಾವೆಲ್ಲರೂ ಹೊತ್ತು ಹೊತ್ತಿಗೆ ಆಹಾರ ಸೇವಿಸುತ್ತೇವೆ. ಕೆಲವೊಮ್ಮೆ ಸಂಬಂಧಿಕರ ಮನೆಗೆ ಹೋದಾಗ ಊಟದ ಟೇಬಲ್ಲಿನ ಮೇಲೆ ನಮಗಿಷ್ಟವಾದ ಆಹಾರವನ್ನು ಸಿದ್ಧಪಡಿಸಿಟ್ಟಿರುತ್ತಾರೆ. ಇನ್ನೊಮ್ಮೆ ಹಲವಾರು ರುಚಿಕರ ಪದಾರ್ಥಗಳಿರುವ ಔತಣಕ್ಕೆ ಹೋಗುತ್ತೇವೆ ಅಥವಾ ಒಮ್ಮೊಮ್ಮೆ ನಾವು ತೀರಾ ಹಸಿವಿದ್ದರೆ ಅತಿಯಾಗಿ ಆಹಾರ ಸೇವಿಸುತ್ತೇವೆ.

ಆಹಾರವು ನಮ್ಮ ಜೀವನದ ಕೇಂದ್ರಬಿಂದು. ರುಚಿಯಾದ ಆಹಾರ ತಿಂದರೆ ನಮಗೆ ಸಂತೋಷವಾಗುತ್ತದೆ, ಹಾಗಾಗಿ ಕೆಲವೊಮ್ಮೆ ಅಗತ್ಯಕ್ಕಿಂತ ಜಾಸ್ತಿ ಆಹಾರ ಸೇವಿಸುತ್ತೀವೆ. ಆದರೆ ಕೆಲವು ವ್ಯಕ್ತಿಗಳು ಯಾವಾಗಲೂ ಅತಿಯಾಗಿ ತಿನ್ನುವ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಅವರು ತಮ್ಮ ಬಯಕೆಯನ್ನು ನಿಯಂತ್ರಿಸಲು ಕಷ್ಟಪಡುತ್ತಾರೆ ಮತ್ತು ಅತಿಯಾಗಿ ತಿನ್ನುವುದನ್ನು ನಿಲ್ಲಿಸಲಾರರು. ಹೊಟ್ಟೆ ತುಂಬಿರುವಾಗಲೂ ಕೂಡ ತಮ್ಮಿಂದ ಇನ್ನು ಸಾಧ್ಯವಿಲ್ಲ ಎನಿಸುವವರೆಗೆ ಆಹಾರವನ್ನು ಸೇವಿಸುತ್ತಾರೆ. ಅಂತವರು ಬಿಂಜ್ ಈಟಿಂಗ್ ಸಮಸ್ಯೆಗೆ ಒಳಗಾಗಿದ್ದಾರೆ ಎನ್ನಬಹುದು.

ಬಿಂಜ್ ಈಟಿಂಗ್ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಒತ್ತಡ, ಆತಂಕ, ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸಲು ಅತಿಯಾಗಿ ತಿನ್ನುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳುತ್ತಾರೆ. ಆದರೆ ತಮ್ಮ ನಿಯಂತ್ರಣವಿಲ್ಲದೇ ತಿನ್ನುವ ಅಭ್ಯಾಸವು ಒಳ್ಳೆಯದಲ್ಲ ಎಂದು ತಿಳಿದು ಇನ್ನಷ್ಟು ಬೇಸರಗೊಳ್ಳುತ್ತಾರೆ. ಆದ್ದರಿಂದ ಇಂಥ ವ್ಯಕ್ತಿಗಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಬಿಂಗ್ ಈಟಿಂಗ್ ಸಮಸ್ಯೆಯಿಂದ ಮುಕ್ತರಾಗಬಹುದು.

ಸೂಚನೆ: ಬುಲಿಮಿಯಾದಿಂದ ಬಳಲುತ್ತಿರುವವರು ಕೂಡ ಬಿಂಜ್ ಈಟಿಂಗ್ ಸಮಸ್ಯೆಗೆ ಒಳಗಾಗಬಹುದು. ಆದರೆ ನಂತರ ಅವರು ಅದರ ಪರಿಹಾರಾರ್ಥವಾಗಿ ವಾಂತಿ ಮಾಡಿಕೊಳ್ಳುವುದು ಅಥವಾ ಅತಿಯಾದ ವ್ಯಾಯಾಮ ಮಾಡುತ್ತಾರೆ. ಏಕೆಂದರೆ ಬುಲಿಮಿಯಾದಿಂದ ಬಳಲುತ್ತಿರುವವರು ತೆಳ್ಳಗಿರಲು ಬಯಸುತ್ತಾರೆ ಮತ್ತು ದೇಹದ ಸೌಂದರ್ಯದ ಬಗ್ಗೆ ತಪ್ಪು ಗ್ರಹಿಕೆ ಹೊಂದಿರುತ್ತಾರೆ. ಬಿಂಜ್ ಈಟಿಂಗ್ ಸಮಸ್ಯೆಯಿಂದ ಬಳಲುತ್ತಿರುವವರು ದೇಹ ಸೌಂದರ್ಯದ ಬಗ್ಗೆ ಯೋಚಿಸುವುದಿಲ್ಲ, ಅವರು ಕೇವಲ ಭಾವನಾತ್ಮಕ ಒತ್ತಡ ಮತ್ತು ಸಮಸ್ಯೆಗಳ ಕಾರಣದಿಂದ ಹೀಗೆ ಮಾಡುತ್ತಾರೆ.

Q

ಬಿಂಜ್ ಈಟಿಂಗ್ ಸಮಸ್ಯೆಯ ಲಕ್ಷಣಗಳು ಯಾವವು?

A

ಬಿಂಜ್ ಈಟಿಂಗ್ ಸಮಸ್ಯೆಯ ಸಾಮಾನ್ಯ ಲಕ್ಷಣಗಳೆಂದರೆ:

  •  ಹೆಚ್ಚಿನ ಪ್ರಮಾಣದ ಆಹಾರವನ್ನು ವೇಗವಾಗಿ ಸೇವಿಸುವುದು. ಮತ್ತು ಅತಿಯಾಗಿ ತಿನ್ನುವುದನ್ನು ನಿಯಂತ್ರಿಸಲು ಕಷ್ಟಪಡುವುದು.
  • ಎಲ್ಲರೊಂದಿಗೆ ಆಹಾರ ಸೇವಿಸಲು ನಿರಾಕರಿಸುವುದು. ಏಕೆಂದರೆ ಅವರು ತಮ್ಮ ನಿಯಂತ್ರಣ ಮೀರಿ ತಿನ್ನುವ ಅಭ್ಯಾಸದಿಂದ ಸಂಕೋಚ ಪಡುತ್ತಾರೆ. ಅವರು ಸ್ವಲ್ಪ ಆಹಾರವನ್ನು ಮುಚ್ಚಿಟ್ಟುಕೊಂಡು ಒಬ್ಬರೇ ಇರುವಾಗ ತಿನ್ನಬಹುದು.
  • ಒತ್ತಡ ಮತ್ತು ಆತಂಕವುಂಟಾದಾಗ ಕೇವಲ ಆಹಾರ ಮಾತ್ರ ತಮಗೆ ನೆಮ್ಮದಿ ನೀಡುತ್ತದೆ ಎಂದು ಭಾವಿಸುತ್ತಾರೆ. ಆದರೆ ಅತಿಯಾಗಿ ಆಹಾರ ಸೇವಿಸಿದ ನಂತರ ಅದಕ್ಕಾಗಿ ಪರಿತಪಿಸಬಹುದು.
  • ಹೊಟ್ಟೆ ತುಂಬಿರುವಾಗಲೂ ಅವರು ಇನ್ನು ಸಾಧ್ಯವಿಲ್ಲ ಎಂದೆನಿಸುವವರೆಗೆ ಆಹಾರ ಸೇವಿಸಬಹುದು.
  • ಊಟಕ್ಕೆಂದು ಪ್ರತ್ಯೇಕ ಸಮಯವನ್ನು ಪಾಲಿಸದೇ ದಿನವಿಡೀ ತಿನ್ನುತ್ತಿರಬಹುದು.

Q

ಬಿಂಜ್ ಈಟಿಂಗ್ ಸಮಸ್ಯೆ ಏಕೆ ಉಂಟಾಗುತ್ತದೆ?

A

ಬಿಂಜ್ ಈಟಿಂಗ್ ಸಮಸ್ಯೆಗೆ ನಿಖರ ಕಾರಣಗಳು ಇನ್ನೂ ತಿಳಿದಿಲ್ಲ. ಆದರೆ ಇದು ಭಾವನಾತ್ಮಕ, ಮಾನಸಿಕ ಮತ್ತು ಪರಿಸರದ ಕಾರಣಗಳ ಸಂಯೋಗದಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ಬಿಂಜ್ ಈಟಿಂಗ್ ಸಮಸ್ಯೆಗೆ ಒಳಗಾಗಬಹುದು ಎಂದು ಗಮನಿಸಲಾಗಿದೆ.

ಒತ್ತಡದ ಸಂದರ್ಭಗಳನ್ನು ನಿವಾರಿಸಲು ಸಹ ಬಿಂಜ್ ಈಟಿಂಗ್ ಸಮಸ್ಯೆಗೆ ಒಳಗಾಗಬಹುದು ಎಂದು ಭಾವಿಸಲಾಗಿದೆ. ಕೆಲವು ಬಾಲ್ಯದ ಅನುಭವಗಳ ಕಾರಣದಿಂದಲೂ ಈ ಸಮಸ್ಯೆ ಉಂಟಾಗಬಹುದು: ನಿಮ್ಮ ಪಾಲಕರು ನಿಮ್ಮ ಸಾಧನೆಗೆ ಖುಷಿಪಟ್ಟು ನಿಮಗೆ ಟ್ರೀಟ್ ಕೊಡಿಸಿದ್ದರೆ, ಅಥವಾ ನಿಮಗೆ ಬೇಜಾರಾದಾಗ ನಿಮಗಿಷ್ಟವಾದ ಚಾಕೋಲೆಟ್ ಅಥವಾ ತಿನಿಸನ್ನು ನೀಡಿದ್ದರೆ ನೀವು ನಂತರ ಸಂಕಟದ ಸಮಯ ಅಥವಾ ಯಾವುದೇ ಕಷ್ಟಕರವಾದ ಸಂಧರ್ಭವನ್ನು ನಿಭಾಯಿಸಲು ಅತಿಯಾಗಿ ಆಹಾರ ಸೇವಿಸಬಹುದು. ಅಥವಾ ಬಾಲ್ಯದಲ್ಲಿ ದೈಹಿಕ ದೌರ್ಜನ್ಯ ಅಥವಾ ಹಿಂಸೆಗೆ ಒಳಗಾಗಿದ್ದರೆ ಈ ಸಮಸ್ಯೆಯಿಂದ ಬಳಲಬಹುದು.

ಕೆಲವರು ಆತ್ಮ ಗೌರವದ ಕೊರತೆಯಿಂದ ಕೂಡ ಅತಿಯಾಗಿ ಆಹಾರ ಸೇವನೆ ಮಾಡಬಹುದು.

Q

ಬಿಂಜ್ ಈಟಿಂಗಿಗೆ ಚಿಕಿತ್ಸೆ

A

ಈ ಸಮಸ್ಯೆಗೆ  ತಜ್ಞರು ಮಾನಸಿಕ ಚಿಕಿತ್ಸೆಯನ್ನು ಪ್ರಮುಖವಾಗಿ ಬಳಸುತ್ತಾರೆ. ಬಿಂಜ್ ಈಟಿಂಗ್ ಸಮಸ್ಯೆಯಿರುವ ವ್ಯಕ್ತಿಗೆ ಕಾಗ್ನೆಟಿವ್ ಬಿಹೇವಿಯರ್ ಥೆರಪಿ, ಇಂಟರ್ ಪರ್ಸನಲ್ ಸೈಕೋಥೆರಪಿ ಮತ್ತು ಡೈಯಲೆಕ್ಟಿಕ್ ಬಿಹೇವಿಯರಲ್ ಥೆರಪಿಗಳನ್ನು ತಜ್ಞರು ನೀಡುತ್ತಾರೆ. ಇವು ಆಹಾರದ ಮೇಲಿನ ಅವಲಂಬನೆಯನ್ನು ನಿವಾರಿಸಿ, ನಿಯಮಿತ ಆಹಾರ ಸೇವನೆ ಮಾಡುವ ಕ್ರಮವನ್ನು ಅಭ್ಯಾಸ ಬೆಳಸಿಕೊಳ್ಳಲು, ಹಾಗೂ ಆಹಾರಕ್ರಮ ಬದಲಾಯಿಸಲು ನೆರವಾಗುತ್ತದೆ. ಹಾಗೆಯೇ, ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸುವ ಸೂಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಲು ಈ ಚಿಕಿತ್ಸೆ ಸಹಾಯಮಾಡುತ್ತದೆ.

ಅತಿಯಾಗಿ ತಿನ್ನುವ ಅಭ್ಯಾಸದಿಂದ ದೇಹದ ತೂಕ ಹೆಚ್ಚಾಗಿದ್ದರೆ, ತೂಕ ಇಳಿಸುವ ವಿಧಾನವನ್ನು, ಹಾಗೂ ಸರಿಯಾದ ತೂಕವನ್ನು ನಿರ್ವಹಿಸಲು ಸೂಕ್ತವಾದ ಆಹಾರಾಭ್ಯಾಸದ ಬಗ್ಗೆ ತಿಳಿಸಿಕೊಡುತ್ತಾರೆ.

Q

ಅತಿಯಾಗಿ ತಿನ್ನುವ ಸಮಸ್ಯೆಯಿರುವವರ ಆರೈಕೆ

A

ನಿಮ್ಮ ಆಪ್ತರು ಅಥವಾ ಸ್ನೇಹಿತರು ಬಿಂಜ್ ಈಟಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರೊಂದಿಗೆ ಈ ವಿಷಯದ ಬಗ್ಗೆ ಮಾತನಾಡುವುದು ಅತ್ಯಂತ ಪ್ರಮುಖವಾದ ಸಂಗತಿ. ನಿಮಗೆ ಅವರ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲವೆನಿಸಬಹುದು ಅಥವಾ ಅವರಿಗೆ ಸಿಟ್ಟು ಬರಬಹುದು. ಆದರೂ ನೀವು ಹಿಂಜರಿಯಬಾರದು. ಆದರೆ ಅವರನ್ನು ಒತ್ತಾಯಿಸಬೇಡಿ.

ಅವರಿಗೆ ಬೆಂಬಲ ನೀಡಿ ಮತ್ತು ಒಂದೊಮ್ಮೆ ಅವರು ಮಾತನಾಡಲು ಬಯಸಿದರೆ ತಾಳ್ಮೆಯಿಂದ ಅವರ ಮಾತನ್ನು ಕೇಳಿಸಿಕೊಳ್ಳುವುದು ಅತ್ಯಂತ ಪ್ರಾಮುಖ್ಯ. ಅವರಿಗೆ ಯಾವುದೇ ಸಲಹೆ ನೀಡುವುದಾಗಲೀ ಅಥವಾ ಅವರಲ್ಲಿ ತಪ್ಪಿತಸ್ಥ ಭಾವನೆಯುಂಟಾಗುವಂತೆ ಮಾತನಾಡಬೇಡಿ. ನೀವು ಅವರಿಗೆ ಮಾದರಿಯಾಗುವಂತ ಆರೋಗ್ಯ ಕ್ರಮ ಮತ್ತು ವ್ಯಾಯಾಮದ ಅಭ್ಯಾಸವನ್ನು ಪಾಲಿಸಿದರೆ ಅವರಿಗೆ ಮಾರ್ಗದರ್ಶನ ಸಿಗುತ್ತದೆ. ಆಹಾರ, ಡಯಟ್ ಮತ್ತು ತೂಕದ ಬಗ್ಗೆ ಮಾತನಾಡದೇ ಇರುವುದು ಒಳ್ಳೆಯದು.

Q

ಬಿಂಜ್ ಈಟಿಂಗ್ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ?

A

ಬಿಂಜ್ ಈಟಿಂಗ್ ಸಮಸ್ಯೆ ಉಂಟುಮಾಡುವ ಅಸಹಾಯಕತೆ ಮತ್ತು ತಪ್ಪಿತಸ್ಥ ಮನೋಭಾವವು ನಮ್ಮ ಮೇಲೆ ಬಹಳ ಒತ್ತಡವನ್ನು ಹೇರಬಹುದು. ಆದರೆ ಸೂಕ್ತಸಮಯದಲ್ಲಿ ಚಿಕಿತ್ಸೆಯನ್ನು ಪಡೆದರೆ ಈ ಸಮಸ್ಯೆಯಿಂದ ಹೊರ ಬರಬಹುದು ಎಂದು ಅರಿತುಕೊಳ್ಳುವುದು ಮಹತ್ವದ ಸಂಗತಿ. ನೀವು ಚಿಕಿತ್ಸೆಯನ್ನು ತೆಗೆದುಕೊಳ್ಳಲು ಆರಂಭಿಸಿದ ಮೇಲೆ ವೈದ್ಯರ ಸಲಹೆಯಂತೆ ನಡೆದುಕೊಳ್ಳಿ.

ನಿಮ್ಮ ಡಾಕ್ಟರ್ ಅಥವಾ ಥೆರಪಿಸ್ಟನ್ನು ಆಗಾಗ ಭೇಟಿ ಮಾಡಿ ನಿಮ್ಮ ಪರಿಸ್ಥಿತಿ ಬಗ್ಗೆ ಅವರಿಗೆ ತಿಳಿಸುತ್ತಲಿರಿ. ನಿಮ್ಮ ಆಪ್ತರು ಅಥವಾ ಮನೆಯವರೊಂದಿಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ನಿಮ್ಮ ಭಾವನಾತ್ಮಕ ಒತ್ತಡದ ಕಾಲದಲ್ಲಿ ಅವರು ನಿಮಗೆ ಬೆಂಬಲ ನೀಡುತ್ತಾರೆ ಎಂದು ನಂಬಿಕೆಯಿಡಿ. ಮುಂದಿನ ಸಲ ನಿಮಗೆ ಅತಿಯಾಗಿ ತಿನ್ನಬೇಕೆನಿಸಿದಾಗ ಅದನ್ನು ನಿಯಂತ್ರಿಸಲು ಅವರ ಬೆಂಬಲವು ಸಹಾಯಕ್ಕೆ ಬರುತ್ತದೆ. ನಿಮಗೆ ಬೇಜಾರೆನಿಸಿದರೆ ವಾಕಿಂಗ್ ಹೋಗಿ ಅಥವಾ ಯಾರೊಂದಿಗಾದರೂ ಮಾತನಾಡಿ. ಧ್ಯಾನವು ಕೂಡಾ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org