ಅಲ್ಪಕಾಲಿಕ ಚಿತ್ತ ವೈಕಲ್ಯ (ಬ್ರೀಫ್ ಸೈಕೋಟಿಕ್ ಡಿಸಾರ್ಡರ್)

Q

ಅಲ್ಪಕಾಲಿಕ ಚಿತ್ತ ವೈಕಲ್ಯ ಎಂದರೇನು?

A

ಅಪಘಾತದಲ್ಲಿ ತನ್ನ ಗಂಡನನ್ನು ಕಳೆದುಕೊಂಡ ನೀನಾಳಿಗೆ ಪತಿಯ ನಿಧನವನ್ನು ಒಪ್ಪಿಕೊಳ್ಳುವುದೇ ಸಾಧ್ಯವಾಗುತ್ತಿರಲಿಲ್ಲ. ಎಲ್ಲ ಮುಗಿದೇ ಹೋಯಿತು. ತನ್ನ ಸರ್ವಸ್ವವೂ ನಾಶವಾಯಿತೆಂದು ಭಾವಿಸಿ ಬಿಟ್ಟಿದ್ದಳು. ಆಕೆ ಜಡವಾಗತೊಡಗಿದಳು. ಅಳುತ್ತಲೂ ಇರಲಿಲ್ಲ, ಮುಖದಲ್ಲಿ ಸದಾ ಕಸಿವಿಸಿಯ ಭಾವವಿರುತ್ತಿತ್ತು. ನೀನಾ ತಾಸುಗಟ್ಟಲೆ ಒಂದೇ ಜಾಗದಲ್ಲಿ ಕುಳಿತಿರುತ್ತಿದ್ದಳು ಅಥವಾ ಕುಳಿತ ಜಾಗದಿಂದ ಕದಲುತ್ತಿರಲಿಲ್ಲ. ಒಂದು ಮಾತೂ ಸಹ ಆಡುತ್ತಿರಲಿಲ್ಲ. ಈ ಪರಿಸ್ಥಿತಿ ಸುಮಾರು ಎರಡು ವಾರಗಳ ಕಾಲ ಮುಂದುವರೆದಿತ್ತು. ಕ್ರಮಕ್ರಮೇಣ, ಆಕೆ ನಿಧಾನವಾಗಿ ತನ್ನ ದಯನೀಯ ಪರಿಸ್ಥಿತಿಯಿಂದ ಹೊರಬರಲಾರಂಭಿಸಿದಳು. ಕೊನೆಗೂ ತನ್ನ ಸಹಜ ಬದುಕಿಗೆ ಮರಳಿದಳು.

ಅಲ್ಪಕಾಲಿಕ ಚಿತ್ತ ವೈಕಲ್ಯ ಖಾಯಿಲೆಯನ್ನು ಅರ್ಥೈಸಿಕೊಳ್ಳುವ ಸಲುವಾಗಿ ಈ ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ.

ಅಲ್ಪಕಾಲಿಕ ಚಿತ್ತ ವೈಕಲ್ಯ ಕೇವಲ ಕೆಲವು ಕಾಲ ಮಾತ್ರ ಕಾಡುವ ಖಾಯಿಲೆಯಾಗಿದ್ದು, ಇದರಲ್ಲಿ ಭ್ರಮೆ, ಭ್ರಾಂತಿ, ತೊದಲು ನುಡಿ ಅಥವಾ ಅಸಮಂಜಸ ವರ್ತನೆ, ಕ್ಯಾಟಾಟೋನಿಕ್‌ ವರ್ತನೆ (ದೀರ್ಘ ಕಾಲದವರೆಗೆ ಕುಳಿತಲ್ಲೇ ಇರುವುದು, ಚಲನೆ ಇಲ್ಲದಿರುವುದು) ಇತ್ಯಾದಿ ಹಠಾತ್ ಮನೋವಿಕೃತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ತೀವ್ರವಾದ, ಒತ್ತಡ ತರುವಂತಹ ಸಂಗತಿಗಳು ಅಥವಾ ದುರ್ಘಟನೆಗಳಾದ ಅಪಘಾತ, ಮನೆಯ ಸದಸ್ಯರು ಮರಣಿಸುವುದು, ತೀವ್ರವಾದ ಆರ್ಥಿಕ ಸಮಸ್ಯೆ ಇತ್ಯಾದಿಗಳಿಂದ ಜನರು ವ್ಯಕ್ತಿಗಳು ಆಘಾತ ಅಥವಾ ಭ್ರಾಂತಿಗೊಳಗಾಬಹುದು. ಆಗ ವ್ಯಕ್ತಿಯು ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡು, ವಾಸ್ತವಿಕತೆಯಿಂದ ದೂರಾಗಬಹುದು. ಈ ಸ್ಥಿತಿ ಕೆಲವು ದಿನಗಳವರೆಗೆ ಕಾಡುತ್ತದೆ. ತದನಂತರ ಆತ/ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು. 

ಸೂಚನೆ: ಆರೋಗ್ಯವಂತನಾಗಿದ್ದು, ಯಾವುದೇ ಮಾನಸಿಕ ಖಾಯಿಲೆಯ ಇತಿಹಾಸ ಹೊಂದಿರದ ವ್ಯಕ್ತಿ ಕೂಡ ಅಲ್ಪಾವಧಿಯಲ್ಲಿ ಈ ಖಾಯಿಲೆಗ ತುತ್ತಾಗಬಹುದು.

ಅಲ್ಪಕಾಲಿಕ ಚಿತ್ತ ವೈಕಲ್ಯದ ಲಕ್ಷಣಗಳೇನು?

ಅಲ್ಪಕಾಲಿಕ ಚಿತ್ತವೈಕಲ್ಯದ ಲಕ್ಷಣಗಳು ಈ ಕೆಳಗಿನಂತಿವೆ:

  • ಅಸಮಂಜಸವಾದ ಅಥವಾ ಅಸ್ಪಷ್ಟವಾದ ಮಾತು.  ಯಾರೊಂದಿಗೂ ಮಾತನಾಡಲು ಒಲ್ಲದಿರುವ ಸ್ಥಿತಿ.

  • ಭ್ರಮೆ (ಆಗಿ ಹೋಗಿರುವುದರ ಕುರಿತು ತಪ್ಪು ಕಲ್ಪನೆ).

  • ಭ್ರಾಂತಿ (ನೈಜವಲ್ಲದ ವಿಷಯಗಳನ್ನು ಕೇಳುವುದು, ನೋಡುವುದು).

  • ತರ್ಕಬದ್ಧವಲ್ಲದ, ಗೊಂದಲದ ಆಲೋಚನೆಗಳು ಮತ್ತು ಕ್ರಿಯೆಗಳು.

  • ಸಹಜ ನಡುವಳಿಕೆಯಲ್ಲಿ ಮಹತ್ತರ ಬದಲಾವಣೆ.

  • ದೀರ್ಘ ಕಾಲದವರೆಗೆ ಒಂದೇ ಭಂಗಿಯಲ್ಲಿ ಕುಳಿತಿರುವುದು ಅಥವಾ ತಟಸ್ಥರಾಗಿರುವುದು (ಕ್ಯಾಟಟೊನಿಯಾ)

  • ಭಾವನಾತ್ಮಕ ತಳಮಳ ಅಥವಾ ಗೊಂದಲ

ಈ ಮೇಲಿನವುಗಳಲ್ಲಿ ಯಾವುದೇ ಲಕ್ಷಣಗಳನ್ನು ನಿಮ್ಮ ಕುಟುಂಬದ ಸದಸ್ಯರು ಅಥವಾ ಸ್ನೆಹಿತರಲ್ಲಿ ಗಮನಿಸಿದರೆ ಆರೈಕೆದಾರರಾಗಿ ನೀವು ಅವರಿಗೆ ಸಹಾಯ ಮಾಡಬಹುದು. 

Q

ಅಲ್ಪಕಾಲಿಕ ಚಿತ್ತವೈಕಲ್ಯಕ್ಕೆ ಕಾರಣಗಳೇನು?

A

ಯಾವುದೇ ರೀತಿಯ ಒತ್ತಡಕಾರಿ ಪರಿಸ್ಥಿತಿ ಅಥವಾ ಆಘಾತಕಾರಿ ಅಂಶಗಳಿಂದಾಗಿ ಈ ತೊಂದರೆ ಕಾಣಿಸಿಕೊಳ್ಳಬಹುದು. ಒತ್ತಡ ನಿಭಾಯಿಸುವ ಶಕ್ತಿ ಕಡಿಮೆ ಇರುವವರಲ್ಲಿ ಅಥವಾ ವ್ಯಕ್ತಿತ್ವದ ಖಾಯಿಲೆ ಹೊಂದಿರುವರಲ್ಲಿ ಈ ಅಲ್ಪಕಾಲಿಕ ಚಿತ್ತವೈಕಲ್ಯ ಸಾಮಾನ್ಯವಾಗಿ ಕಂಡು ಬರುತ್ತದೆ ಎನ್ನುತ್ತಾರೆ ವೈದ್ಯರು. ಕೆಲವೊಮ್ಮೆ, ಪ್ರಸವಾನಂತರದ ಖಿನ್ನತೆಗೊಳಗಾಗಿರುವ ಮಹಿಳೆಯರೂ ಅಲ್ಪಕಾಲಿಕ ಚಿತ್ತವೈಕಲ್ಯಕ್ಕೆ ತುತ್ತಾಗಬಹುದು.

Q

ಅಲ್ಪಕಾಲಿಕ ಚಿತ್ತವೈಕಲ್ಯಕ್ಕೆ ಚಿಕಿತ್ಸೆ

A

ಸಾಮಾನ್ಯವಾಗಿ ಈ ಖಾಯಿಲೆಯ ಲಕ್ಷಣಗಳು ಒಂದು ಅಥವಾ ಎರಡು ವಾರದಲ್ಲಿ ಕಡಿಮೆಯಾಗಬಹುದು.

ದೀರ್ಘಾವಧಿಯವರೆಗೆ ಲಕ್ಷಣಗಳು ಕಾಣಿಸಿಕೊಂಡರೆ ಅಥವಾ ತೀವ್ರಗೊಂಡರೆ, ಮಾನಸಿಕ ತಜ್ಞರನ್ನು ಭೇಟಿ ಮಾಡುವುದು ಉತ್ತಮ. ಪರಿಸ್ಥಿತಿಯ ತೀವ್ರತೆಯ ಪತ್ತೆಗೆ ವಿಶೇಷ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ನಡೆಸಲಾಗುತ್ತದೆ.

ಚಿಕಿತ್ಸೆ, ಆಪ್ತಸಲಹೆ, ಔಷಧಿಗಳು ಅಥವಾ ಈ ಮೂರನ್ನೂ ಒಟ್ಟುಗೂಡಿಸಿ ಅಲ್ಪಕಾಲಿಕ ಚಿತ್ತವೈಕಲ್ಯಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಆದಾಗ್ಯೂ ವ್ಯಕ್ತಿ ತನಗೆ ತಾನೇ ಸ್ವಯಂಹಾನಿಯನ್ನು ಉಂಟುಮಾಡಿಕೊಳ್ಳುವ ಲಕ್ಷಣಗಳು ಗೋಚರಿಸಿದರೆ, ಅಂತಹ ವ್ಯಕ್ತಿಯನ್ನು ಪೂರ್ಣ ಗುಣಮುಖನಾಗುವ ತನಕ ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ. ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೂ ರೋಗ ಮತ್ತೆ ಮರುಕಳಿಸದಂತೆ ತಡೆಯಲು ಸೂಕ್ತವಾದ ಆಪ್ತಸಲಹೆಯನ್ನು ವೈದ್ಯರು ಸೂಚಿಸಬಹುದು.

Q

ಅಲ್ಪಕಾಲಿಕ ಚಿತ್ತವೈಕಲ್ಯ ಹೊಂದಿರುವವರ ಆರೈಕೆ

A

ಈ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಇದರಿಂದ ಶೀಘ್ರವಾಗಿ ಗುಣಮುಖನಾಗಲು ಆತನ ಕುಟುಂಬದ ಸದಸ್ಯರ ಮತ್ತು ಸ್ನೇಹಿತರ ಬೆಂಬಲ ಮತ್ತು ಆರೈಕೆ ಬಹು ಮುಖ್ಯವಾಗಿರುತ್ತದೆ.

ಅಹಿತಕರ ಘಟನೆಯಿಂದಾಗಿ ಈ ರೋಗಕ್ಕೆ ಒಳಗಾದವರು ಯಾರಾದರೂ ನಿಮ್ಮ ಗಮನಕ್ಕೆ ಬಂದಲ್ಲಿ, ನೀವು ಅವರಿಗೆ ಆರೈಕೆದಾರರಾಗಿ ಸಹಾಯ ಮಾಡಬಹುದು ಮತ್ತು ಅವರು ಚೇತರಿಸಿಕೊಳ್ಳುವಂತೆ ನೋಡಿಕೊಳ್ಳಬಹುದು.

ಸ್ನೇಹಿತ ಅಥವಾ ಸಂಬಂಧಿಕರಿಗೆ ಸಹಾಯ ಮಾಡಲು ನೀವು ಈ ಕೆಳಗಿನಂತೆ ಮಾಡಬಹುದು:

  • ಅಲ್ಪಕಾಲಿಕ ಚಿತ್ತವೈಕಲ್ಯದ ಕುರಿತು ತಿಳಿದುಕೊಳ್ಳಿ. ಖಾಯಿಲೆಯ ಬಗ್ಗೆ ತಿಳುವಳಿಕೆ ಹೊಂದುವುದು ಕಷ್ಟಕರ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಲು ಮತ್ತು ನಿಭಾಯಿಸಲು ಸಹಕಾರಿ.

  • ಅವರಿಗೆ ಭಾವನಾತ್ಮಕ ಬೆಂಬಲ ನೀಡಿ, ಅವರೊಂದಿಗೆ ಸಹಾನುಭೂತಿಯಿಂದ ಮಾತನಾಡಿ ಮತ್ತು ಅವರು ಹೇಳುವುದನ್ನು ಕೇಳಿಸಿಕೊಳ್ಳಿ. ಇದು ಅಲ್ಪಕಾಲಿಕ ಚಿತ್ತ ವೈಕಲ್ಯಕ್ಕೆ ಕಾರಣವಾಗುವ ಅಂಶಗಳನ್ನು ಗಮನಿಸಿ ಗುರುತಿಸಲು ಸಹಕಾರಿ.

  • ಸಾಧ್ಯವಾದಲ್ಲಿ ನಿಮ್ಮ ಸ್ನೇಹಿತ/ಸಂಬಂಧಿಯನ್ನು ವಾಕಿಂಗ್‌ ಕರೆದುಕೊಂಡು ಹೋಗಿ.

  • ಅವರನ್ನು ತಮ್ಮಷ್ಟಕ್ಕೆ ಇರಲು ಬಿಡದಿರಿ (ಹಾಗೆಂದು ಅವರ ಮೇಲೆ ಒತ್ತಡ ಹೇರದಿರಿ).

  • ಅವರಲ್ಲಿ ತನಗೆ ತಾನೇ ಹಾನಿ ಮಾಡಿಕೊಳ್ಳುವಂತಹ ಪ್ರತಿಕ್ರಿಯೆಗಳೇನಾದರೂ ಕಂಡುಬಂದಲ್ಲಿ, ತಕ್ಷಣವೇ ವೈದ್ಯರಿಗೆ ಅಥವಾ ಚಿಕಿತ್ಸಕರಿಗೆ ವರದಿ ಮಾಡಿ.

Q

ಅಲ್ಪಕಾಲಿಕ ಚಿತ್ತ ವೈಕಲ್ಯದ ಬಗೆಗಳು

A

ಅಲ್ಪಕಾಲಿಕ ಚಿತ್ತ ವೈಕಲ್ಯ, ಆರೋಗ್ಯ ಮತ್ತು ಅನಾರೋಗ್ಯಗಳೆರಡಕ್ಕೂ ಗಡಿಯಲ್ಲಿರುವ ವ್ಯಕ್ತಿತ್ವದ ಖಾಯಿಲೆ ಮತ್ತು ಚಿತ್ತವಿಕಲತೆಗೆ ಸಂಬಂಧಿಸಿರಬಹುದು.

ಸ್ಪಷ್ಟವಾಗಿ ಗೋಚರಿಸುವ ಒತ್ತಡದಿಂದ ಉಂಟಾಗುವ ಅಲ್ಪಕಾಲಿಕ ಚಿತ್ತವೈಕಲ್ಯ: ಸಂಗಾತಿಯ ಅಥವಾ ಹತ್ತಿರದ ಸಂಬಂಧಿಯ ಮರಣ, ದೈಹಿಕ ಹಿಂಸೆ, ಕಳ್ಳತನ, ಅಪಘಾತ, ನೈಸರ್ಗಿಕ ವಿಪತ್ತು ಮುಂತಾದ ಯಾವುದೇ ಒತ್ತಡಕಾರಿ ಅಥವಾ ದುರ್ಘಟನೆಗಳಾದಾಗ, ಅದಕ್ಕೆ ಸ್ಪಂದಿಸುವ ವೇಳೆಯಲ್ಲಿ  ವ್ಯಕ್ತಿ ಈ ಖಾಯಿಲೆಗೆ ತುತ್ತಾಗಬಹುದು. ಆದರೆ, ಪೀಡಿತರು ಕೆಲವು ವಾರಗಳಲ್ಲೇ ಚೇತರಿಸಿಕೊಳ್ಳುವುದರಿಂದ ಯಾವುದೇ ರೀತಿಯ ಚಿಕಿತ್ಸೆಯ ಅಗತ್ಯವಿರುವುದಿಲ್ಲ.

ಸ್ಪಷ್ಟವಾಗಿ ಗೋಚರಿಸದ ಒತ್ತಡದಿಂದಾಗುವ ಅಲ್ಪಕಾಲಿಕ ಚಿತ್ತವೈಕಲ್ಯ: ಯಾವುದೇ ಸ್ಪಷ್ಟ ಕಾರಣಗಳಿಲ್ಲದೇ ಬರಬಹುದಾದ ಅಲ್ಪಕಾಲಿಕ ಖಾಯಿಲೆ ಇದಾಗಿದ್ದು, ಒಂದು ತಿಂಗಳೊಳಗೆ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ.

ಪ್ರಸವಾನಂತರದ ಖಿನ್ನತೆಯಿಂದಾಗುವ ಅಲ್ಪಕಾಲಿಕ ಚಿತ್ತವೈಕಲ್ಯ: ಪ್ರಸವಾನಂತರದ ಖಿನ್ನತೆಗೊಳಗಾಗಿರುವ ತಾಯಂದಿರು ಈ ಖಾಯಿಲೆಗೆ ತುತ್ತಾಗಬಹುದು ಮತ್ತು ಇದು ತಿಂಗಳುಕಾಲ ಕಾಡಬಹುದು.


 

 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org