ಮಕ್ಕಳಲ್ಲಿ ಖಿನ್ನತೆ

Q

ಮಕ್ಕಳಲ್ಲಿ ಖಿನ್ನತೆ ಎಂದರೇನು?

A

ಮಗು ಬೆಳೆಯುವ ಹಂತದಲ್ಲಿ ದುಃಖ, ನೋವು, ಬೇಸರ ಮತ್ತಿತರ ಭಾವನೆಗಳನ್ನು ಅನುಭವಿಸುವುದು ಸಹಜ. ಕೆಲ ಮಕ್ಕಳಲ್ಲಿ ಈ ಭಾವನೆ ಸುದೀರ್ಘ ಅವಧಿವರೆಗೆ ಇದ್ದು ಮಗುವಿನ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಹಲವಾರು ಕಾರಣಗಳಿಂದ ಮಕ್ಕಳಲ್ಲಿ ಖಿನ್ನತೆಯುಂಟಾಗುವುದು ನಿಜವಾಗಿಯೂ ಕಾಳಜಿಯ ಸಂಗತಿ. ಇದು ಮಗು ಹೇಗೆ ಚಿಂತಿಸುತ್ತದೆ, ಭಾವಿಸುತ್ತದೆ, ವರ್ತಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರಬಹುದು. ಮಗುವಿನ ಬದುಕಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

Q

ಮಕ್ಕಳಲ್ಲಿನ ಕಾಣಿಸಿಕೊಳ್ಳಬಹುದಾದ ಖಿನ್ನತೆಯ ಗುಣಲಕ್ಷಣಗಳೇನು?

A

ಮಕ್ಕಳು ಮತ್ತು ತರುಣರು ಖಿನ್ನತೆಯಿಂದ ಬಳಲುತ್ತಿದ್ದರೆ ಬಹುತೇಕವಾಗಿ ಪತ್ತೆಮಾಡಲಾಗುವುದಿಲ್ಲ. ಮಕ್ಕಳಲ್ಲಿನ ಕಾಣುವ ಖಿನ್ನತೆಯ ಲಕ್ಷಣಗಳು ತರುಣರಲ್ಲಿ ಕಾಣುವುದಕ್ಕಿಂತ ತುಸು ಭಿನ್ನ. ಈ ಗುಣಲಕ್ಷಣಗಳನ್ನು ಗುರುತಿಸುವುದು ಚೇತರಿಕೆಯ ಮೊದಲ ಹೆಜ್ಜೆ.

  • ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಶಾಲೆಯ ಅಭ್ಯಾಸ ಪ್ರಗತಿ ಫಲಿತಾಂಶದಲ್ಲಿ ಹಠಾತ್ ಕುಸಿತ.

  • ಶಾಲೆಗೆ ಹೋಗಲು ನಿರಾಕರಿಸುವುದು

  • ಅಧ್ಯಯನ ಅಥವಾ ಇತರೆ ಕೆಲಸಳಿಂದ ವಿಮುಖನಾಗುವುದು ಮತ್ತು ಅವುಗಳ ಕುರಿತು ಗಮನ ಹರಿಸಲು ಸಾಧ್ಯವಾಗದೇ ಇರುವುದು

  • ಸುಲಭವಾಗಿ ಆಯಾಸಗೊಳ್ಳುವುದು ಮತ್ತು ಆಲಸಿಯಂತೆ ವರ್ತಿಸುವುದು

  • ಹಸಿವಾಗದಿರುವುದು ಮತ್ತು ಸರಿಯಾಗಿ ನಿದ್ದೆಮಾಡದಿರುವುದು

  • ಯೋಚಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು ಪರದಾಡುವುದು

  • ಸಣ್ಣ ಪುಟ್ಟ ವಿಷಯಗಳಿಗೂ ಅಸಮಾಧಾನಗೊಳ್ಳುವುದು

  • ಯಾವುದೇ ಕಾರಣವಿಲ್ಲದೆ ಅಳುವುದು

  • ಚಿಕಿತ್ಸೆ ನೀಡಿದರೂ, ತಲೆನೋವು ಅಥವಾ ಹೊಟ್ಟೆನೋವು ಎಂದು ಹೇಳಿಕೊಳ್ಳುವುದು

  • ಸ್ನೇಹಿತರೊಂದಿಗೆ ಆಟ ಆಡಲು ನಿರಾಕರಿಸುವುದು

  • ಹಿಂದೆ ಸಂತಸಪಟ್ಟ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು

Q

ಮಕ್ಕಳಲ್ಲಿ ಖಿನ್ನತೆ ಹೇಗೆ ಉಂಟಾಗುತ್ತದೆ?

A

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅದ್ಭುತ ಯಶಸ್ಸನ್ನು ಪಡೆಯಬೇಕೆಂಬ ಅನಗತ್ಯ ಒತ್ತಡದಿಂದ ಒದ್ದಾಡುತ್ತಾರೆ. ಪಾಲಕರು ಹಾಗೂ ಶಿಕ್ಷಕರು ಎಲ್ಲ ಮಕ್ಕಳೂ ಒಬ್ಬರಿಗಿಂತ ಒಬ್ಬರು ಭಿನ್ನ, ಪ್ರತಿಯೊಂದು ಮಗುವೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ ಎಂಬ ಸಂಗತಿಯನ್ನು ಮರೆತಿದ್ದಾರೆ.

ಮಕ್ಕಳು ಶಾಲೆಯಲ್ಲಿರಬಹುದು, ಮನೆಯಲ್ಲಾಗಿರಬಹುದು ಹೆಚ್ಚಿನ ಸಮಯವನ್ನು ಕಲಿಕೆಯಲ್ಲಿ ಕಳೆಯುತ್ತಾರೆ. ಒಂದು ಜಡವಾದ ವ್ಯವಸ್ಥೆಯನ್ನು ಅನುಸರಿಸಲು ಮತ್ತು ಅದರ ನಿಯಮಾವಳಿಗಳಿಗೆ ಬದ್ಧವಾಗಿರಲು ಹೇರಿಕೆಯ ಒತ್ತಾಯ ಮಾಡುತ್ತಾರೆ. ಇದು ಅತಿಯಾಗಿ ಪರಿಣಮಿಸಿ, ಒತ್ತಡ ನಿಭಾಯಿಸುವುದು ಮಗುವಿಗೆ ಕಷ್ಟವಾಗಬಹುದು. 

ಇದು ಕೂಡ ಮಕ್ಕಳಲ್ಲಿ ಖಿನ್ನತೆಯುಂಟಾಗಲು ಒಂದು ಪ್ರಮುಖ ಕಾರಣ. ಅಷ್ಟೇ ಅಲ್ಲದೇ, ಮನಸ್ಸಿಗೆ ಸಂಬಂಧಿಸಿದ ಕೆಲವು ಅಂಶಗಳು ಕೂಡ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಭಾವನಾತ್ಮಕ ಮತ್ತು ಮಾನಸಿಕ ಏರಿಳಿತಗಳನ್ನು ನಿಭಾಯಿಸಲು ಸಾಧ್ಯವಾಗದ ಮಕ್ಕಳು ಖಿನ್ನತೆಗೆ ಒಳಗಾಗಬಹುದು. 

ಈ ಕೆಳಗಿನ ಕಾರಣಗಳಿಂದಾಗಿ ಹದಿಹರೆಯದವರು ಮತ್ತು ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ ಎಂದು ಅಂದಾಜಿಸಲಾಗಿದೆ:

  • ಮನೆಯಲ್ಲಿ ಮನಸ್ತಾಪದಿಂದಾದ ಸುದೀರ್ಘ ಮಾನಸಿಕ ಒತ್ತಡ. ಉದಾಹರಣೆಗೆ ಪಾಲಕರ ಕುಡಿತದ ಸಮಸ್ಯೆ ಅಥವಾ ವೈವಾಹಿಕ ಸಮಸ್ಯೆ

  • ಹಿಂಸೆ, ದೈಹಿಕ ಅಥವಾ ಮಾನಸಿಕ ದೌರ್ಜನ್ಯ, ಕಡೆಗಣನೆಯಂಥ ಆಘಾತಕಾರಿ ಘಟನೆಗಳು

  • ಚಿಕಿತ್ಸೆ ಪಡೆಯದ ಆತಂಕ, ತಲ್ಲಣದಂಥ ಮಾನಸಿಕ ಸ್ಥಿತಿಗಳು

  • ಕಲಿಕೆಯಲ್ಲಿನ ಸಮಸ್ಯೆ ಮಕ್ಕಳ ಆತ್ಮವಿಶ್ವಾಸ ಮತ್ತು ಸಾಮರ್ಥ್ಯ ಮೇಲೆ ಪರಿಣಾಮಬೀರುತ್ತದೆ

ಮಕ್ಕಳಲ್ಲಿನ ಖಿನ್ನತೆ ಮೈಲ್ಡ್ ಡಿಪ್ರೆಶನ್ ನಿಂದ ಆರಂಭವಾಗಿ ಮಾಡರೇಟ್ ಸ್ಥಿತಿ ಅಥವಾ ತೀವ್ರವಾದ ಡಿಪ್ರೆಶನ್ ಹಂತದವರೆಗೆ ತಲುಪಬಹುದು.

ತೀವ್ರವಲ್ಲದ ಡಿಪ್ರೆಶನ್: ಮಕ್ಕಳಲ್ಲಿ ಅಸಂತೋಷ ಉಂಟು ಮಾಡಬಹುದು, ಆದರೆ ಮಗು ಸಾಮಾನ್ಯ ಬದುಕು ಬದುಕಲು ಸಮರ್ಥವಾಗಿರುತ್ತದೆ. ಮಗು ನಿತ್ಯದ ಚಟುವಟಿಕೆಗಳಲ್ಲಿ ಅಥವಾ ಶಾಲೆಯ ಕೆಲಸದಲ್ಲಿ ಹೆಚ್ಚು ಆಸಕ್ತಿ ತೋರಿಸದೇ ಇರಬಹುದು. ಆದರೆ ಪಾಲಕರ ಬೆಂಬಲದೊಂದಿಗೆ, ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಮಗು ಅಲ್ಪ ಖಿನ್ನತೆಯಿಂದ ಚೇತರಿಸಿಕೊಳ್ಳಬಹುದು.

ಮಾಡರೇಟ್ ಡಿಪ್ರೆಶನ್: ಇದು ಮಗುವಿನ ಜೀವನದಲ್ಲಿ ಸಾಕಷ್ಟು ಪರಿಣಾಮ ಬೀರಬಹುದು. ಮಗು ನಿರಂತರವಾಗಿ ದುಃಖಿತಗೊಂಡಂತೆ, ಕುಗ್ಗಿದಂತೆ ಕಾಣಿಸುತ್ತದೆ. ನಿಮಗೆ ನಿಮ್ಮ ಮಗುವಿನಲ್ಲಿ ಈ ರೀತಿ ವರ್ತನೆ ಕಂಡರೆ ನಿಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಿ ಮತ್ತು ಮಾನಸಿಕ ಆರೋಗ್ಯ ತಜ್ಞರ ಸಹಾಯ ತೆಗೆದುಕೊಳ್ಳಿ.

ತೀವ್ರವಾದ ಡಿಪ್ರೆಶನ್: ಇದು ಮಗುವಿನಲ್ಲಿ ತಾನು ನಿಷ್ಪ್ರಯೋಜಕ ಎಂಬ ಭಾವನೆ ಮೂಡಿಸುತ್ತದೆ. ಮಗು ಯಾವಾಗಲೂ ನಕಾರಾತ್ಮಕವಾಗಿ ಯೋಚಿಸಲಾರಂಭಿಸುತ್ತದೆ ಇದರಿಂದಾಗಿ ಬೇಸರದ ಭಾವನೆಗಳನ್ನು ತುಂಬಿಕೊಳ್ಳುತ್ತದೆ. ಒಂದೊಮ್ಮೆ ನಿಮ್ಮ ಮಗು ಈ ರೀತಿಯ ಸಿವಿಯರ್ ಡಿಪ್ರೆಶನ್ ಲಕ್ಷಣಗಳನ್ನು ತೋರ್ಪಡಿಸಿದರೆ ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಆರಂಭಿಸಿ.

Q

ಖಿನ್ನತೆಗೆ ಚಿಕಿತ್ಸೆ

A

ಖಿನ್ನತೆ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮತ್ತು ಶೈಕ್ಷಣಿಕ ಸಾಧನೆ ಮೇಲೆ ಅಷ್ಟೇ ಏಕೆ, ಅದರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮೇಲೆ ಹೇಳಿದ ಲಕ್ಷಣಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಲಕ್ಷಣಗಳು ಕಂಡುಬಂದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಮಕ್ಕಳ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು. ಚಿಕಿತ್ಸಾ ವಿಧಾನವು ಔಷಧೋಪಚಾರ ಮತ್ತು ಥೆರಪಿಗಳನ್ನು ಒಳಗೊಂಡಿದ್ದು ಮಗುವಿನ ಸ್ಥಿತಿಯನ್ನು ಅವಲಂಬಿಸಿ ತಜ್ಞರು ಸೂಕ್ತವಾದುದನ್ನು ಸೂಚಿಸುತ್ತಾರೆ. ಕಾಗ್ನಿಟಿವ್ ಬಿಹೇವಿಯರ್ ಥೆರಪಿ ವಿಧಾನವು ಖಿನ್ನತೆಯಿಂದ ಹೊರಬರಲು ಪರಿಣಾಮಕಾರಿಯೆಂದು ಸಾಬೀತಾಗಿದೆ.

ಸೂಚನೆ: ಶಿಕ್ಷಕರಿಗೆ ಮಾನಸಿಕ ಆರೋಗ್ಯದ ಕುರಿತು ತರಬೇತಿ ನೀಡುವ ಅಗತ್ಯವಿದೆ. ಆಗ ಅವರು ಮಕ್ಕಳ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಸ್ಪಂದಿಸಬಹುದು.

Q

ಖಿನ್ನತೆ ಹೊಂದಿದ ಮಗುವಿನ ಆರೈಕೆ

A

ಪಾಲಕರಾಗಿ ನಿಮ್ಮ ಮಗು ಖಿನ್ನತೆಯಿಂದ ಹೊರಬರಲು ನೀವು ಸಹಾಯ ಮಾಡಬಹುದು. ನಿಮ್ಮ ಮಗುವಿಗಾಗಿ ತೆಗೆದುಕೊಳ್ಳಬಹುದಾದ ಕೆಲ ಸಲಹಾಸೂತ್ರಗಳು ಇಲ್ಲಿವೆ:

  • ಖಿನ್ನತೆ ಕುರಿತು ತಿಳಿದುಕೊಳ್ಳಿ. ಇದು ನಿಮ್ಮ ಮಗುವಿಗೆ ಸೂಕ್ತ ಸಹಾಯ ಮತ್ತು ಮಾಗದರ್ಶನ ನೀಡಲು ಸಾಧ್ಯವಾಗಿಸುತ್ತದೆ.
  • ನಿಮ್ಮ ಮಗು ಸೂಚಿತ ಚಿಕಿತ್ಸೆ ತೆಗೆದುಕೊಳ್ಳಲು ಸಹಾಯ ಮಾಡಿ. ವೈದ್ಯರು ಔಷಧ ಸೂಚಿಸಿದ್ದರೆ, ಮಗುವಿಗೆ ನಿಯಮಿತವಾಗಿ ಔಷಧೋಪಚಾರ ನೀಡಿ.
  • ಮಗುವಿನ ಬಳಿ ಮಾತನಾಡಿ ಮತ್ತು ಸಹನೆಯೊಂದಿಗೆ ಅವರ ಮಾತನ್ನು, ಅನಿಸಿಕೆಗಳನ್ನು ಆಲಿಸಿ. ಅವರಿಗೆ ಮುಕ್ತವಾಗಿ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಬಿಡಿ.
  • ಖಿನ್ನತೆಯನ್ನು ಉಂಟು ಮಾಡುವ ಸೂಚನೆ ನೀಡುವ ಲಕ್ಷಣಗಳನ್ನು ಗಮನಿಸಿ. ಅಂಥ ಸ್ಥಿತಿಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿ.
  • ನಿಮ್ಮ ಮಗು ಹೇಗೆ ಚೇತರಿಕೆ ಕಾಣಬಹುದು ಎಂಬ ವಿಷಯದಲ್ಲಿ ವೈದ್ಯರು, ಶಿಕ್ಷಕರು ಮತ್ತು ಇತರ ತಜ್ಞರೊಂದಿಗೆ ಚರ್ಚಿಸಿ.
  • ಮಗುವಿನ ದೈಹಿಕ ಆರೋಗ್ಯದ ಕುರಿತು ಕಾಳಜಿ ವಹಿಸಿ. ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಮಗುವಿನ ಮನಸ್ಥಿತಿ ಉತ್ತಮಗೊಳಿಸುವಲ್ಲಿ ಸಹಾಯ ಮಾಡಬಹುದು.
  • ನಿಮ್ಮ ಮಗು ಪೌಷ್ಠಿಕಾಂಶಯುತ ಆಹಾರ ಸೇವನೆ ಮಾಡುವಂತೆ ನೋಡಿಕೊಳ್ಳಿ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಕೂಡ ಪೂರಕವಾಗಿ ಒದಗಿಬರುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org