ಇನ್ಸೋಮ್ನಿಯಾ (ನಿದ್ರಾಹೀನತೆ))

Q

ಇನ್ಸೋಮ್ನಿಯಾ ಎಂದರೇನು?

A

ನಿದ್ರೆಗೆ ಸಂಭಂಧಿಸಿದ ಅತ್ಯಂತ ಸಾಮಾನ್ಯವಾದ ರೋಗ ಇನ್ಸೋಮ್ನಿಯಾ. ಇದರಿಂದ ಬಳಲುತ್ತಿರುವ ವ್ಯಕ್ತಿ ನಿದ್ರೆಗೆ ಜಾರಲು ಅಥವಾ ಸುದೀರ್ಘ ನಿದ್ರೆ ಮಾಡಲು ಕಷ್ಟಪಡುತ್ತಾನೆ. ವ್ಯಕ್ತಿ ರಾತ್ರಿಯಲ್ಲಿ ತಡವಾಗಿ ನಿದ್ರಿಸುವುದಾಗಲೀ ಅಥವಾ ಕೆಲವು ಕಾರಣಗಳಿಗಾಗಿ ಬೆಳಿಗ್ಗೆ ಬೇಗ ಏಳುವ ಸಂದರ್ಭವಾಗಲೀ ಇದಕ್ಕೆ ಸಂಬಧವಿಲ್ಲ. ನಿದ್ರೆ ಮಾಡಲು ಸಾಕಷ್ಟು ಸಮಯ ಸಿಕ್ಕಾಗಲೂ ಈ ತೊಂದರೆಯನ್ನು ಅನುಭವಿಸುತ್ತಾರೆ. ನಿದ್ರೆಯ ಪ್ರಮಾಣ ಮತ್ತು ಪರಿಮಾಣಗಳ ಮೇಲೆ ಇನ್ಸೋಮ್ನಿಯಾ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿ ಹಗಲು ಹೊತ್ತಿನಲ್ಲಿ ಸುಸ್ತಾದ ಮತ್ತು ತೂಕಡಿಸಿದ ಅನುಭವ ಪಡೆಯುತ್ತಾನೆ.

ಆಗಾಗ್ಗೆ ನಾವು ಸಾಮಾನ್ಯವಾಗಿ ರಾತ್ರಿವೇಳೆ ನಿದ್ರೆಬಾರದೇ ತೊಳಲಾಡುತ್ತೇವೆ. ಹಾಗೆಂದಾಕ್ಷಣ ನಾವು ಇನ್ಸೋಮ್ನಿಯಾದಿಂದ ಬಳಲುತ್ತಿದ್ದೇವೆ ಎಂದು ಅರ್ಥವಲ್ಲ. ಇನ್ಸೋಮ್ನಿಯಾ ದೀರ್ಘ ಅವಧಿಯವರೆಗೆ ತೊಂದರೆ ಉಂಟುಮಾಡುವ ಸಮಸ್ಯೆ. ನಮ್ಮ ಕೆಲಸ ಮಾಡುವ ಸಾಮರ್ಥ್ಯ, ಸಂಬಂಧಗಳು, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಜೀವನದ ಗುಣಮಟ್ಟದ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಚಿಕಿತ್ಸೆ ನೀಡಬಹುದು. ಎಷ್ಟು ಬೇಗ ನೀವು ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತೀರೋ ಅಷ್ಟು ಬೇಗ ಸಮಸ್ಯೆ ಪರಿಹಾರವಾಗುತ್ತದೆ.

Q

ಇನ್ಸೋಮ್ನಿಯಾದ ಗುಣಲಕ್ಷಣಗಳೇನು?

A

ಈ ಕೆಳಗಿನ ಗುಣಲಕ್ಷಣಗಳಿದ್ದರೆ ನೀವು ಇನ್ಸೋಮ್ನಿಯಾ ಹೊಂದಿರಬಹುದು:

  • ರಾತ್ರಿ ವೇಳೆ ನಿದ್ರೆ ಬರದೇ ತೊಳಲಾಡುವುದು.

  • ನಿತ್ಯವೂ ಹಗಲಿನ ವೇಳೆ ನಿದ್ರೆ ಬರುವ ಅನುಭವ ಉಂಟಾಗುವುದು. ದಿನವಿಡೀ ಸುಸ್ತಾದಂತಿರುವ, ತೂಕಡಿಸುವ ಅನುಭವ.

  • ಯಾವುದೇ ವಿಷಯದ ಮೇಲೆ ಗಮನ ಕೇಂದ್ರಿಕರಿಸುವುದಕ್ಕೆ ಕಷ್ಟವಾಗುವದು. ಕೆಲವು ಬಾರಿ ಅನೇಕ ಸಂಗತಿಗಳು ಮರೆತು ಹೋಗುತ್ತವೆ. ಇದರ ಪರಿಣಾಮವಾಗಿ, ನೀವು ಆಗಾಗ್ಗೆ ತಪ್ಪು ಮಾಡುತ್ತೀರಿ.

  • ನಿಮಗೆ ಬೇಗ ಕಿರಿಕಿರಿ ಉಂಟಾಗುತ್ತಿರಬಹುದು. ನಿಮ್ಮ ಸಹನಾಶಕ್ತಿ ಕುಂಠಿತವಾಗುವುದು. 

  • ನಿತ್ಯವೂ ತಲೆನೋವು ಅಥವಾ ಹೊಟ್ಟೆನೋವು ಅನುಭವಿಸುವದು.

  • ನಿದ್ರೆ ಬರುತ್ತಿಲ್ಲವಲ್ಲಾ ಎಂಬ ಚಿಂತೆ ಹೆಚ್ಚುವುದು.

ದೀರ್ಘಾವಧಿಗೆ ಈ ಸಮಸ್ಯೆಯನ್ನು ಯಾರಾದರೂ ಅನುಭವಿಸುದನ್ನು ನೋಡಿದರೆ, ಅವರ ಜತೆ ಮಾತನಾಡಿ, ವೈದ್ಯರನ್ನು ಸಂಪರ್ಕಿಸುವಂತೆ ಅವರಿಗೆ ಸೂಚಿಸಿ.

Q

ಇನ್ಸೋಮ್ನಿಯಾಗೆ ಕಾರಣವೇನು?

A

ಇನ್ಸೋಮ್ನಿಯಾ ಸಾಮಾನ್ಯವಾಗಿ ಈ ಕೆಳಗಿನ ಕೆಲವು ಕಾರಣಗಳಿಂದಾಗಿ ಕಾಣಿಸಿಕೊಳ್ಳುತ್ತದೆ:

  • ಒತ್ತಡ: ಇನ್ಸೋಮ್ನಿಯಾಗೆ ಸಾಮಾನ್ಯ ಕಾರಣವೆಂದರೆ ಒತ್ತಡ. ಕೆಲಸದ ಒತ್ತಡ, ಹಣ ಅಥವಾ ಆರೋಗ್ಯದ ಕುರಿತಾದ ಚಿಂತೆ ಸೇರಿದಂತೆ ಸಾಮಾನ್ಯವಾದ ದೈನಂದಿನ ಸಮಸ್ಯೆಗಳಿಗೆ ಸಂಬಂಧಿಸಿದ ಒತ್ತಡವೂ ಇದಾಗಿರಬಹುದು. ಆತ್ಮೀಯರ ಸಾವು, ವಿಚ್ಚೇದನ ಅಥವಾ ಕೆಲಸ ಕಳೆದುಕೊಳ್ಳೂವಿಕೆಯಂಥ ದೊಡ್ಡ ಪ್ರಮಾಣದ ಘಟನೆಯೂ ಒತ್ತಡಕ್ಕೆ ಕಾರಣವಾಗಬಹುದು.

  • ಇತರ ಮಾನಸಿಕ ಆರೋಗ್ಯ ಸಮಸ್ಯೆಗಳು: ಖಿನ್ನತೆ ಮತ್ತು ಆತಂಕದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಅನುಭವಿಸುವ ವ್ಯಕ್ತಿಗಳಲ್ಲೂ ನಿದ್ರೆಯಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

  • ವೈದ್ಯಕೀಯ ಸನ್ನಿವೇಶಗಳು: ಅಸ್ತಮಾದಂತಹ ದೈಹಿಕ ಅನಾರೋಗ್ಯ ಅಥವಾ ಉಸಿರಾಟದ ಸಮಸ್ಯೆಯ ಕಾರಣದಿಂದ ವ್ಯಕ್ತಿಗಳು ಅನುಭವಿಸುವ ನೋವು ಅಥವಾ ಅನಾನುಕೂಲಗಳು ಕೂಡ ಇನ್ಸೋಮ್ನಿಯಾದಿಂದ ಬಳಲುವಂತೆ ಮಾಡಬಹುದು. ಇತರ ವೈದ್ಯಕೀಯ ಸನ್ನಿವೇಶಗಳಾದ ಕ್ಯಾನ್ಸರ್‌, ಹೃದಯದ ಖಾಯಿಲೆ ಅಥವಾ ಕೆಲವು ಅಲರ್ಜಿಗಳು ಮತ್ತು ಆಸಿಡ್ ರಿಫ್ಲಕ್ಸ್‌ ಕೂಡ ಇನ್ಸೋಮ್ನಿಯಾಗೆ ಕಾರಣವಾಗಬಹುದು.

  • ಔಷಧಗಳ ಅಡ್ಡಪರಿಣಾಮ: ಕೆಲವು ಔಷಧಗಳ ಅಡ್ಡ ಪರಿಣಾಮವಾಗಿಯೂ ಇನ್ಸೋಮ್ನಿಯಾ ಕಾಣಿಸಿಕೊಳ್ಳಬಹುದು. ಸಾಮಾನ್ಯ ನೆಗಡಿ ಅಥವಾ ಗಂಟಲು ಕಟ್ಟಿಕೊಳ್ಳುವಿಕೆಗೆ ನೀಡಲಾಗುವ ಹೆಚ್ಚುವರಿ ಔಷಧ ಮತ್ತು ನೋವು ನಿವಾರಕಗಳಲ್ಲಿ ಕೆಫೀನ್‌ ಇರುತ್ತದೆ. ಇವು ನಿದ್ರೆಯ ಚಕ್ರಕ್ಕೆ ತಡೆ ಒಡ್ಡುತ್ತವೆ. ಖಿನ್ನತೆ ನಿವಾರಕಗಳು, ರಕ್ತದೊತ್ತಡ ಔಷಧ ಮತ್ತು ಹೃದಯದ ಸಮಸ್ಯೆಗಳಿಗೆ ಸಂಬಧಿಸಿದ ಔಷಧಗಳೂ ಇನ್ಸೋಮ್ನಿಯಾಗೆ ಕಾರಣವಾಗುತ್ತವೆ.

  • ಅಲ್ಕೋಹಾಲ್ ಮತ್ತು ಇತರ ಅಮಲು ಪದಾರ್ಥಗಳು: ಅಲ್ಕೋಹಾಲ್‌, ಕೆಫೀನ್‌, ನಿಕೋಟಿನ್‌ ಮತ್ತು ಇತರ ನಾರ್ಕೋಟಿಕ್ ಡ್ರಗ್‌ಗಳು ಇನ್ಸೋಮ್ನಿಯಾ ಉಂಟಾಗಲು ಕಾರಣವಾದ ಸಾಮಾನ್ಯ ಸಂಗತಿಗಳು. ನಿದ್ರೆಗೆ ಜಾರುವ ಸಾಮರ್ಥ್ಯದ ಮೇಲೆ ಕೆಫೀನ್‌ ಪರಿಣಾಮ ಉಂಟು ಮಾಡಿದರೆ ನಿದ್ರೆಯ ವೇಳೆ ಆಗಾಗ್ಗೆ ಏಳುವುದಕ್ಕೆ ಅಲ್ಕೋಹಾಲ್‌ ಕಾರಣವಾಗುತ್ತದೆ.

  • ನಿದ್ರಾಚಕ್ರದಲ್ಲುಂಟಾಗುವ ಅಡೆತಡೆ ಮತ್ತು ವಾತಾವರಣ: ದೀರ್ಘಾವಧಿಯ ಅಸಹಜ ನಿದ್ರಾಚಕ್ರಗತಿ ಆರೋಗ್ಯಕರವಲ್ಲ. ಇದು ಇನ್ಸೋಮ್ನಿಯಾಗೆ ಕಾರಣವಾಗಬಹುದು. ಅತಿಯಾದ ಬೆಳಕು ಮತ್ತು ಗದ್ದಲಗಳಂತಹ ಅನಾನುಕೂಲಕರ ವಾತಾವರಣದಲ್ಲಿ ನಿದ್ರೆ ಮಾಡಿದರೆ, ನಿಮ್ಮ ನಿದ್ರೆಯ ಗುಣಮಟ್ಟವನ್ನು ಕಡಿಮೆಯಾಗುತ್ತದೆ.

  • ಜೀವನದ ಘಟನೆಗಳು: ನೀವು ರಾತ್ರಿ ವೇಳೆ ಕೆಲಸ ಮಾಡಿದರೆ ಅಥವಾ ನೀವು ಬೇರೆ ಟೈಮ್‌ಜೋನ್‌ಗೆ ವರ್ಗಾವಣೆಗೊಂಡರೆ ಆ ಬದಲಾವಣೆಗೆ ನಿಮ್ಮ ದೇಹವೂ ಹೊಂದಿಕೊಳ್ಳದಿರಬಹುದು ಮತ್ತು ನಿದ್ರೆ ಮಾಡಲು ನೀವು ಕಷ್ಟಪಡುವಂತಾಗಬಹುದು.

  • ವಯಸ್ಸಾಗುವಿಕೆ: ವಯಸ್ಸು ಸಂದಂತೆಲ್ಲ ಇನ್ಸೋಮ್ನಿಯಾದಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ. ದಿನದ ಆರಂಭದಲ್ಲಿ ನೀವು ಸುಸ್ತಾದರೆ ನಿಮ್ಮ ನಿದ್ರೆ ಆವೃತ್ತಿ ಬದಲಾಗುತ್ತದೆ. ಅಲ್ಲದೇ, ದೈಹಿಕ ಚಟುವಟಿಕೆ ಕಡಿಮೆಯಾದಷ್ಟೂ ನಿಮ್ಮ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ನಿದ್ರೆಯ ತೊಂದರೆಗೆ ಕಾರಣವಾಗುವ ಅನಾರೋಗ್ಯವನ್ನೂ ನೀವು ಅನುಭವಿಸಬಹುದು.

Q

ಇನ್ಸೋಮ್ನಿಯಾಗೆ ಚಿಕಿತ್ಸೆ

A

ನಿಮ್ಮ ಜೀವನದ ಗುಣಮಟ್ಟವನ್ನು ಇನ್ಸೋಮ್ನಿಯಾ ಬಾಧಿಸಬಹುದಾದರೂ, ಇದಕ್ಕೆ ಚಿಕಿತ್ಸೆಯಿದೆ. ನೀವು ನಿದ್ರಾ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ದೈನಂದಿನ ಜೀವನದ ಮೇಲೆ ಇದು ಪರಿಣಾಮ ಬೀರುತ್ತಿದ್ದರೆ ಈ ಸಮಸ್ಯೆಗೆ ನೀವು ವೈದ್ಯರನ್ನು ಸಂಪರ್ಕಿಸಬಹುದು.

ಸಾಮಾನ್ಯವಾಗಿ ಇನ್ಸೋಮ್ನಿಯಾ ಉಂಟಾಗುವುದಕ್ಕೆ ಕಾರಣವಾದ ಸಮಸ್ಯೆಯನ್ನು ಪತ್ತೆಮಾಡುವುದೇ ಅದರ ಚಿಕಿತ್ಸೆಯನ್ನು ನಿರ್ಧರಿಸಲು ಕಾರಣವಾಗಬಹುದು. ಇನ್ಸೋಮ್ನಿಯಾ ಚಿಕಿತ್ಸೆಗಾಗಿ ಕಾಗ್ನಿಟಿವ್‌ ಬಿಹೇವಿಯರಲ್ ಥೆರಪಿಯಂತಹ ಕೆಲವು ಬಿಹೇವಿಯರಲ್ ಥೆರಪಿಗಳು ಮತ್ತು ಸೂಕ್ತವಾದ ಔಷಧವನ್ನು ವೈದ್ಯರು ಶಿಫಾರಸು ಮಾಡಬಹುದು.

Q

ಇನ್ಸೋಮ್ನಿಯಾದಿಂದ ಬಳಲುತ್ತಿರುವವರ ಆರೈಕೆ

A

ವ್ಯಕ್ತಿಯ ಖಿನ್ನತೆಗೆ ಇನ್ಸೋಮ್ನಿಯಾ ಕಾರಣವಾಗಬಹುದು. ಇದರಿಂದಾಗಿ ಇನ್ನಷ್ಟು ಕಿರಿಕಿರಿ ಹಾಗೂ ನಿರಾಸೆ ಉಂಟಾಗಬಹುದು. ಅವರ ಬಗ್ಗೆ ನೀವು ಸಹನೆ ಹೊಂದಿರುವುದು ಮತ್ತು ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಪ್ರಯತ್ನಿಸುವುದು ಅತ್ಯಂತ ಪ್ರಮುಖವಾಗಿದೆ. ಅವರ ಸಮಸ್ಯೆಯ ಬಗ್ಗೆ ಮಾತನಾಡಿ; ಯಾವುದೋ ಒಂದು ಚಿಂತೆಯು ಅವರ ನಿದ್ರೆಗೆ ಅಡ್ಡಿಯಾಗುತ್ತಿದ್ದರೆ, ಆ ಬಗ್ಗೆ ಚರ್ಚಿಸುವುದರಿಂದ ನಿದ್ರೆಯಲ್ಲಿ ಸುಧಾರಣೆ ಕಂಡುಬರಬಹುದು. ನಿಮ್ಮ ಗೊರಕೆ ಹೊಡೆಯುವಿಕೆ ಅಥವಾ ಪರ್ಯಾಯ ನಿದ್ರಾ ವ್ಯವಸ್ಥೆಯು ನಿಮ್ಮ ಸಂಗಾತಿಯ ನಿದ್ರಾ ಸಮಸ್ಯೆಗೆ ಕಾರಣವಾಗಿದ್ದರೆ ಕೆಲವು ದಿನಗಳವರೆಗೆ ಪ್ರತ್ಯೇಕವಾಗಿ ಮಲಗಲು ಪ್ರಯತ್ನಿಸಿ. ಸಮಸ್ಯೆ ತೀವ್ರವಾಗಿದ್ದರೆ, ವೈದ್ಯರನ್ನು ಭೇಟಿ ಮಾಡುವ ಬಗ್ಗೆ ನೀವು ಅವರ ಬಳಿ ಮಾತನಾಡಿ.

Q

ಇನ್ಸೋಮ್ನಿಯಾವನ್ನು ನಿಭಾಯಿಸುವುದು

A

ಇನ್ಸೋಮ್ನಿಯಾ ನಿಮ್ಮ ನಿತ್ಯ ಜೀವನದ ಮೇಲೆ ಅಡ್ಡ ಪರಿಣಾಮ ಉಂಟುಮಾಡಬಹುದು. ಆದರೆ ನೀವು ಉತ್ತಮ ನಿದ್ರೆ ಮಾಡಲು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಬಹುದು.

  • ದಿನದ ವೇಳೆ ಸಕ್ರಿಯವಾಗಿರಲು ಮತ್ತು ವ್ಯಾಯಾಮ ಮಾಡಲು ಪ್ರಯತ್ನಿಸಬಹುದು. ಇದರಿಂದ ನೀವು ಆಳವಾದ ನಿದ್ರೆ ಮಾಡಲು ನೆರವಾಗಬಹುದು. ಇದರಿಂದ ನಿಮ್ಮ ವಿಶ್ರಾಂತಿ ಹೆಚ್ಚಾಗುತ್ತದೆ.
  • ಕೆಫೀನ್‌ ತೆಗೆದುಕೊಳ್ಳುವಿಕೆಯನ್ನು ಮಿತಿಗೊಳಿಸಿ ಮತ್ತು ಅಲ್ಕೋಹಾಲ್‌ ಹಾಗೂ ನಿಕೋಟಿನ್‌ ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಇವು ನಿದ್ರಾಭಂಗವನ್ನುಂಟುಮಾಡುತ್ತವೆ.
  • ಅನುಕೂಲಕರವಾಗಿ ನಿದ್ರೆಮಾಡಲು ಪ್ರಯತ್ನಿಸಿ. ನಿದ್ರೆಗೆ ಹೋಗುವ ಮುನ್ನ ಕೆಲವು ರಿಲ್ಯಾಕ್ಸೇಶನ್‌ ಕ್ರಮಗಳನ್ನು ಕೈಗೊಳ್ಳಿ.
  • ನಿದ್ರಾಹೀನತೆಯ ಕಾರಣದಿಂದ ನಿಮ್ಮ ನಿತ್ಯದ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org