ಫೋಬಿಯ

Q

ಫೋಬಿಯಾ ಎಂದರೇನು?

A

ನಮ್ಮ ಸುರಕ್ಷತೆಗೆ ತೊಂದರೆಯಾಗುವ ಪರಿಸ್ಥಿತಿಯಲ್ಲಿ ನಾವು ವ್ಯಕ್ತಪಡಿಸುವ ಸಹಜ ಪ್ರತಿಕ್ರಿಯೆ ಭಯ. ವ್ಯಕ್ತಿಗಳಿಗೆ ಅನೇಕ ರೀತಿಯ ಭಯಗಳಿರಬಹುದು. ಉದಾ: ಹಾವುಗಳ ಭಯ, ವಿಮಾನ ಪ್ರಯಾಣದ ಭಯ ಅಥವಾ ಕತ್ತಲೆಯ ಭಯ. ಅದೇ ರೀತಿ ಕೆಲವು ಜನರಿಗೆ, ಈ ಒಂದು ಅಪಾಯ ಕಾರಣವಿಲ್ಲದೆ ಅಥವಾ ಅಸಂಬದ್ಧವಾಗಿ ಅತಿಯಾಗಿ ಅವರಲ್ಲಿ ತೀವ್ರ ಆತಂಕ ಉಂಟುಮಾಡುತ್ತದೆ. ಇಂತಹ ಆತಂಕವನ್ನು ಫೋಬೀಯಾ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಎತ್ತರದ ಸ್ಥಳಗಳ ಕುರಿತು ಭಯವಿರುವವರು, ಎತ್ತರದ ಕಟ್ಟಡಗಳಲ್ಲಿರುವಾಗ ಅಹಿತಕರ ಹಾಗೂ ಆತಂಕ ತುಂಬಿದ ಭಾವನೆಯನ್ನು ಅನುಭವಿಸುವಂತಾಗಬಹುದು. ಅದೇ ರೀತಿ ಹಾವುಗಳ ಕುರಿತಾದ ಭಯವಿದ್ದವರು, ಟಿ.ವಿ.ಯಲ್ಲಿ ಹಾವು ನೋಡಿದ ಮಾತ್ರಕ್ಕೆ ತೀವ್ರ ಆತಂಕಕ್ಕೆ ಒಳಗಾಗಬಹುದು.

Q

ಫೋಬಿಯಾದ ಲಕ್ಷಣಗಳೇನು?

A

ಫೋಬಿಯಾದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ತಮ್ಮ ನಡುವಳಿಕೆಯಲ್ಲಿ ಈ ಕೆಳಗಿನ ಲಕ್ಷಣಗಳನ್ನು ತೋರುತ್ತಾರೆ:

  • ಕೆಲವು ವಸ್ತುಗಳನ್ನು ನೋಡಿದಾಗ ಅಥವಾ ಕೆಲವು ಸಂದರ್ಭಗಳಲ್ಲಿ ಯಾವ ರೀತಿಯ ತೊಂದರೆಯಿಲ್ಲದಿದ್ದರೂ ತಮಗೆ ಅಪಾಯ ಉಂಟಾಗಬಹುದು ಎಂದು ಅನವಶ್ಯಕವಾಗಿ ಭಯಪಡುವುದು.

  • ಭಯ ಅಥವಾ ಆತಂಕ ಉಂಟುಮಾಡುವ ಸಂದರ್ಭಗಳನ್ನು ಎದುರಿಸಲಾಗದೆ ಅದರಿಂದ ತಪ್ಪಿಸಿಕೊಳ್ಳುವುದು.

  • ಫೋಬಿಯಾ ಉಂಟಾದಾಗ ಹೃದಯ ಬಡಿತ ಹೆಚ್ಚಾಗುವುದು, ಅತಿಯಾಗಿ ಬೆವರುವುದು ಅಥವಾ ತಲೆತಿರುಗುವುದು ಮುಂತಾಗಿ ಹೃದಯಾಘಾತ ಸಂದರ್ಭವನ್ನು ಹೋಲುವ ಕೆಲವು ದೈಹಿಕ ಲಕ್ಷಣಗಳು ಕಂಡುಬರಬಹುದು.

ನಿಮ್ಮ ಕುಟುಂಬದಲ್ಲಿ, ಸ್ನೇಹಿತರಲ್ಲಿ ಅಥವಾ ನೀವು ಕೆಲಸಮಾಡುವ ಜಾಗದಲ್ಲಿ ಈ ರೀತಿಯ ಲಕ್ಷಣಗಳನ್ನು ಅನುಭವಿಸುತ್ತಿರುವವರನ್ನು ನೀವು ಗಮನಿಸಿರಬಹುದು. ಅಂತಹ ಸಂದರ್ಭಗಳಲ್ಲಿ ನೀವು ಅವರೊಂದಿಗೆ ಫೋಬಿಯಾ ಬಗ್ಗೆ ಮಾತನಾಡಿ ಹಾಗೂ ಮಾನಸಿಕ ಆರೋಗ್ಯ ವೃತ್ತಿಪರರಿಂದ ಸೂಕ್ತ ಚಿಕಿತ್ಸೆ, ಸಹಾಯಪಡೆಯುವಂತೆ ಅವರಿಗೆ ತಿಳಿಹೇಳಲು ಪ್ರಯತ್ನಿಸಿ.  

Q

ಫೋಬಿಯಾಕ್ಕೆ ಕಾರಣಗಳೇನು?

A

  • ಆಘಾತಕಾರಿ ಘಟನೆಗಳು: ಬಾಲ್ಯದಲ್ಲಿ ಅನುಭವಿಸಿರುವ ಕೆಲವು ಆಘಾತಕಾರಿ ಘಟನೆಗಳಿಂದ ಫೋಬಿಯಾ ಉಂಟಾಗಬಹುದು. ಉದಾಹರಣೆಗೆ, ನಾಯಿಯಿಂದ ಕಚ್ಚಿಸಿಕೊಂಡಿದ್ದರೆ, ಕ್ರಮೇಣ ನಾಯಿಯ ಕುರಿತಾದ ಭಯ ತೀವ್ರವಾಗಿ ಅದು ಫೋಬಿಯಾವಾಗಿ ಬದಲಾಗಬಹುದು.

  • ಕೌಟುಂಬಿಕಹಿನ್ನೆಲೆ: ಅಧ್ಯಯನಗಳು ಹೇಳುವಂತೆ, ಪಾಲಕರು ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸಿದ್ದರೆ, ಅವರ ಮಗು ಆತಂಕ ಅಥವಾ ಫೋಬಿಯಾದ ಸಮಸ್ಯೆಗೆ ಒಳಗಾಗಬಹುದು. ಅಲ್ಲದೆ ಕೆಲವು ಸಂದರ್ಭಗಳಲ್ಲಿ, ಪಾಲಕರಲ್ಲಿ ಕಂಡುಬಂದ ಫೋಬಿಯಾ ತೊಂದರೆಯೇ ಮಗುವಿನಲ್ಲಿ ಕೂಡ ಕಂಡುಬರಬಹುದು.

  • ದೀರ್ಘಕಾಲದ ಒತ್ತಡ: ದೀರ್ಘಕಾಲದಿಂದ ನೀವು ಅನುಭವಿಸುತ್ತಿರುವ ಒತ್ತಡವು ಪರಿಸ್ಥಿತಿಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯವನ್ನು ಕ್ರಮೇಣ ಕುಂಠಿತಗೊಳಿಸುತ್ತದೆ. ನಿಧಾನವಾಗಿ ಅದು ನಿಮ್ಮಲ್ಲಿ ಆತಂಕ ಹಾಗೂ ಭಯದ ಭಾವನೆಯನ್ನು ಹೆಚ್ಚಿಸುತ್ತದೆ. ದೀರ್ಘ ಸಮಯದ ನಂತರ ಅದು ಫೋಬಿಯಾವಾಗಿ ಬದಲಾಗಬಹುದು.

Q

ಫೋಬಿಯಾದ ವಿಧಗಳಾವುವು?

A

ಫೋಬಿಯಾವನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:

  • ಪ್ರಾಣಿಗಳ ಫೋಬಿಯಾ: ನಾಯಿ, ಕ್ರಿಮಿಕೀಟ, ಹಾವು ಇವೇ ಮೊದಲಾದ ಪ್ರಾಣಿಗಳ ಕುರಿತಾದ ಭಯ.

  • ನೈಸರ್ಗಿಕ ಪರಿಸರದ ಫೋಬಿಯಾ: ಎತ್ತರ, ನೀರು ಅಥವಾ ಕತ್ತಲೆ ಇವೇ ಮುಂತಾದ ನೈಸರ್ಗಿಕ ಪರಿಸರದ ಕುರಿತಾದ ಭಯ.

  • ಸಾಂದರ್ಭಿಕ ಫೋಬಿಯಾ: ಮೇಲಕ್ಕೆಹತ್ತುವಾಗ, ಆಕಾಶದಲ್ಲಿ ಹಾರಾಡುವಾಗ ಇತ್ಯಾದಿ ನಿರ್ದಿಷ್ಟ ಸನ್ನಿವೇಶಗಳಲ್ಲಿನ ಭಯ.

  • ಇನ್ನಿತರ ಫೋಬಿಯಾಗಳು: ರಕ್ತ ನೋಡಿದಾಗಿನ ಭಯ, ಚುಚ್ಚುಮದ್ದು ತೆಗೆದುಕೊಳ್ಳುವಾಗಿನ ಭಯ, ಶಸ್ತ್ರಚಿಕಿತ್ಸೆಯ ಕುರಿತಾದ ಭಯ ಅಥವಾ ಗಾಯ ಹಾಗೂ ಅಪಘಾತಗಳ ಕುರಿತಾದ ಭಯ.

Q

ಫೋಬಿಯಾಕ್ಕೆ ಚಿಕಿತ್ಸೆ

A

ಸಾಮಾನ್ಯವಾಗಿ ಜನರು, ತಮ್ಮ ದೈನಂದಿನ ಜೀವನಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭಾವಿಸಿ ಫೋಬಿಯಾ ಲಕ್ಷಣಗಳನ್ನು ಅಲಕ್ಷಿಸುತ್ತಾರೆ. ಫೋಬಿಯಾ ಉಂಟುಮಾಡುವ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ನೋಡುತ್ತಾರೆ ಹಾಗೂ ಅಂತಹ ಸಂದರ್ಭಗಳಿಂದ ದೂರವಿರಲು ಆರಂಭಿಸುತ್ತಾರೆ. ಆದರೆ ಇದೇ ಸಮಸ್ಯೆಗೆ ಪರಿಹಾರವಲ್ಲ. ಇದರಿಂದ ಹೊರಬರಲು ಮಾನಸಿಕ ಆರೋಗ್ಯ ವೃತ್ತಿಪರರ ಸಹಾಯಪಡೆಯುವುದು ಅತಿಮುಖ್ಯ.

ಈ ಸಮಸ್ಯೆಯ ಚಿಕಿತ್ಸಾ ಕ್ರಮವು ಔಷಧ ಅಥವಾ ಥೆರಪಿಯನ್ನು ಒಳಗೊಂಡಿರಬಹುದು ಅಥವಾ ಕೆಲವೊಮ್ಮೆ ಇವೆರಡರ ಸಂಯೋಜನೆಯನ್ನೂ ಒಳಗೊಂಡಿರಬಹುದು. ಸಾಮಾನ್ಯವಾಗಿ, ವ್ಯಕ್ತಿಗಳು ಸೂಕ್ತವಾದ ನಿಯಂತ್ರಿತ ವಾತಾವರಣದಲ್ಲಿ ತಮಗಿರುವ ಫೋಬಿಯಾವನ್ನು ಎದುರಿಸಿ ಅದರಿಂದ ಹೊರಬರುವ ಕ್ರಮವನ್ನು ಚಿಕಿತ್ಸೆಯು ಒಳಗೊಂಡಿರುತ್ತದೆ.

Q

ಫೋಬಿಯಾದಿಂದ ಬಳಲುತ್ತಿರುವವರ ಆರೈಕೆ

A

ಫೋಬಿಯಾದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಓರ್ವ ಹಿತೈಷಿಯಾಗಿ ನಿಮ್ಮಿಂದ ಸಹಾಯ ಹಾಗೂ ಬೆಂಬಲದ ಅವಶ್ಯಕತೆಗಳಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಭಯ ಹಾಗೂ ಆತಂಕದ ಲಕ್ಷಣಗಳು ಆ ವ್ಯಕ್ತಿಗಳಲ್ಲಿ ಸಹಜ. ಆದ್ದರಿಂದ ಅವರನ್ನು ದುರ್ಬಲರು ಎಂದು ಪರಿಗಣಿಸುವುದಾಗಲಿ ಅಥವಾ ಅವರ ಕುರಿತಾಗಿ ಅಪಹಾಸ್ಯ ಮಾಡುವುದಾಗಲೀ ಮಾಡಬಾರದು. ಫೋಬಿಯಾ ಪೀಡಿತರನ್ನು ಆರೈಕೆ ಮಾಡುವವರು ಇವೆಲ್ಲವುಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಆ ವ್ಯಕ್ತಿಗಳಿಗೆ ಸಹಕಾರ ನೀಡಬೇಕು. ಮಾನಸಿಕ ವೃತ್ತಿಪರರ ಸಹಾಯ ತೆಗೆದುಕೊಳ್ಳುವಂತೆ ಅವರನ್ನು ಪ್ರೇರೇಪಿಸಬೇಕು ಮತ್ತು ಭಯ ಅಥವಾ ಒತ್ತಡದ ಸಮಯದಲ್ಲಿ ಆರೈಕೆದಾರರಾಗಿ ನಿಮ್ಮಿಂದ ಆ ವ್ಯಕ್ತಿಗಳು ಯಾವ ರೀತಿಯ ಸಹಾಯವನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಕುರಿತು ಅವರೊಂದಿಗೆ ವಿಶ್ವಾಸಗಳಿಸಿಕೊಂಡು, ಮುಕ್ತವಾಗಿ ಮಾತನಾಡಬೇಕು. ಅವರಿಗೆ ಯಾವ ಸಂದರ್ಭದಲ್ಲಿಯೂ ಬಲವಂತ ಮಾಡಬಾರದು. ಬಲವಂತದ ಪ್ರಯತ್ನಗಳಿಂದ ಅವರ ಫೋಬಿಯಾ ತೊಂದರೆ ಮತ್ತಷ್ಟು ಹೆಚ್ಚಾಗಬಹುದು.

Q

ಫೋಬಿಯಾದ ನಿರ್ವಹಣೆ

A

ಫೋಬೀಯಾ ಬಗ್ಗೆ ಹೆಚ್ಚು ತಿಳಿದುಕೊಂಡರೆ ಅದರಿಂದ ಉಂಟಾಗುವ ಆತಂಕ ಹಾಗೂ ಭಯವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ಕಾಲಕ್ರಮೇಣ ನಿಮ್ಮ ಭಯಗಳನ್ನು ನೀವೇ ನಿಯಂತ್ರಿಸಬಹುದು. ದೀರ್ಘ ಸಮಯದ ಈ ಅಭ್ಯಾಸವು ನಿಮಗೆ ಭಯವನ್ನು ಗೆಲ್ಲಲು ಸಹಕರಿಸುತ್ತದೆ. ಈ ಅಸ್ವಸ್ಥತೆಯಿಂದ ಹೊರಬರಲು ವಿಶ್ರಾಂತಿಯನ್ನು ಅನುಭವಿಸುವ ಕೆಲ ತಂತ್ರಗಳು ಮತ್ತು ಸಮಾಧಾನದಿಂದ ಇರುವ ಪ್ರವೃತ್ತಿ ಹೆಚ್ಚಿನ ಸಹಾಯಮಾಡುತ್ತವೆ. ಸಪೋರ್ಟ್ ಗ್ರೂಪ್ ಜೊತೆಗೆ ಒಡನಾಟ ಹಾಗೂ ಫೋಬಿಯಾ ತೊಂದರೆ ಎದುರಿಸಿದ ಜನರೊಂದಿಗೆ ಮಾತನಾಡುವುದರಿಂದ ನಿಮಗೆ ನಿಮ್ಮ ಭಯದ ಕಾರಣವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಆದರೆ ಇವೆಲ್ಲ ಕೇವಲ ಅಸ್ವಸ್ಥತೆಯನ್ನು ನಿವಾರಿಸಲು ಇರುವ ಪ್ರಾಥಮಿಕ ಪ್ರಕ್ರಿಯೆಗಳು ಮಾತ್ರ. ನಿಮ್ಮ ಭಯಗಳನ್ನು ನಿವಾರಿಸಿಕೊಳ್ಳಲು ನೀವು ಮಾನಸಿಕ ವೃತ್ತಿಪರರ ಸಹಾಯ ತೆಗೆದುಕೊಳ್ಳುವುದು ನಿಮ್ಮ ಮೊದಲನೆಯ ಆದ್ಯತೆಯಾಗಿಬೇಕು ಎಂದು ನೆನಪಿಡಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org