ಲೈಂಗಿಕ ಅಸಾಮರ್ಥ್ಯ

Q

ಲೈಂಗಿಕ ಅಸಾಮರ್ಥ್ಯ ಎಂದರೇನು?

A

ನಿಮ್ಮ ಲೈಂಗಿಕ ಚಟುವಟಿಕೆಯ ಬಯಕೆಯನ್ನು ಯಾವುದೋ ಒಂದು ಸಮಸ್ಯೆ ತಡೆದರೆ ಅಥವಾ ಇದರಿಂದಾಗಿ ಲೈಂಗಿಕ ಚಟುವಟಿಕೆಯಲ್ಲಿ ನಿಮಗೆ ಖುಷಿ ಸಿಗದಿದ್ದರೆ ನೀವು ಲೈಂಗಿಕ ಅಸಾಮರ್ಥ್ಯದಿಂದ ಬಳಲುತ್ತಿದ್ದೀರಿ ಎಂದರ್ಥ. ಲೈಂಗಿಕ ಪ್ರಕ್ರಿಯೆಯ ಆವೃತ್ತಿಯಲ್ಲಿ ವ್ಯಕ್ತಿ ಅಥವಾ ದಂಪತಿಗಳು ಲೈಂಗಿಕ ಚಟುವಟಿಕೆಯಿಂದ ಸಂತೃಪ್ತಿಯನ್ನು ಅನುಭವಿಸುವುದರ ವಿರುದ್ಧ ಯಾವುದೇ ಹಂತದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಲೈಂಗಿಕ ಅಸಾಮರ್ಥ್ಯ ಎಂದು ಕರೆಯಲಾಗಿದೆ. ಲೈಂಗಿಕ ಕ್ರಿಯೆಯ ಆವೃತ್ತಿಯು ಉದ್ರೇಕ, ಮುನ್ನಲಿವು, ಸಂಭೋಗೋದ್ರೇಕ ಮತ್ತು ಶಮನ ಇತ್ಯಾದಿ ಹಂತಗಳನ್ನು ಹೊಂದಿರುತ್ತದೆ. ಲೈಂಗಿಕ ಪ್ರತಿಕ್ರಿಯೆಯಲ್ಲಿ ಬಯಕೆ ಮತ್ತು ಪ್ರಚೋದನೆಗಳೆರಡೂ ಉದ್ರೇಕ ಹಂತದ ಭಾಗಗಳಾಗಿವೆ.

ಲೈಂಗಿಕ ಅಸಾಮರ್ಥ್ಯ ಸಾಮಾನ್ಯವಾಗಿ ಎಲ್ಲ ವಯಸ್ಸಿನ ಪುರುಷರು ಮತ್ತು ಮಹಿಳೆಯರನ್ನು ಬಾಧಿಸುವ ಸಾಮಾನ್ಯ ಸ್ಥಿತಿ. ಆದರೂ ವಯಸ್ಸಾದಂತೆಲ್ಲ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ರೀತಿಯ ಹೆಚ್ಚಿನ ಸಮಸ್ಯೆಗಳಿಗೆ ಚಿಕಿತ್ಸೆಯಿದೆ. ಆದರೆ ಜನಸಾಮಾನ್ಯರು ಈ ಸಮಸ್ಯೆಗೆ ನೆರವು ಕೇಳಲು ಅಥವಾ ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.

ಲೈಂಗಿಕ ಚಟುವಟಿಕೆಗಳನ್ನು ಅನುಭವಿಸುವಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪರಿಸ್ಥಿತಿಯ ಬಗ್ಗೆ ನಿಮ್ಮ ಸಂಗಾತಿಯ ಜತೆ ಮಾತನಾಡಬೇಕು ಮತ್ತು ವೃತ್ತಿಪರರ ನೆರವು ಪಡೆಯಬೇಕು. ಸೂಕ್ತ ಚಿಕಿತ್ಸೆಯಿಂದ ನೀವು ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸಬಹುದಾಗಿದೆ.

Q

ಲೈಂಗಿಕ ಅಸಾಮರ್ಥ್ಯದ ಗುಣಲಕ್ಷಣಗಳು

A

ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಅಸಾಮರ್ಥ್ಯದ ಗುಣಲಕ್ಷಣಗಳು ವಿಭಿನ್ನವಾಗಿರುತ್ತವೆ. ಕೆಲವು ಸಾಮಾನ್ಯ ಗುಣಲಕ್ಷಣಗಳು ಹೀಗಿವೆ:

ಪುರುಷರಲ್ಲಿ:

  • ಉದ್ರೇಕ ಸಮಸ್ಯೆ: ಸಂಭೋಗದ ವೇಳೆ ಉದ್ರೇಕಗೊಳ್ಳುವುದು ಅಥವಾ ಉದ್ರೇಕವನ್ನು ಹಿಡಿದಿಟ್ಟುಕೊಳ್ಳುವ ಸಮಸ್ಯೆ.

  • ವೀರ್ಯಸ್ಖಲನ ಸಮಸ್ಯೆಗಳು: ಯಾವಾಗ ವೀರ್ಯಸ್ಖಲಿಸಬೇಕು ಎಂಬುದನ್ನು ನಿಯಂತ್ರಿಸಲು ಅಸಾಧ್ಯವಾಗುವುದು. ಉದ್ರೇಕಗೊಂಡ ಕೆಲವೇ ಕ್ಷಣಗಳಲ್ಲಿ ಅಥವಾ ದೀರ್ಘ ಸಮಯದ ನಂತರ ವೀರ್ಯಸ್ಖಲನ ಉಂಟಾಗಬಹುದು. ಕೆಲವು ಪುರುಷರಲ್ಲಿ ವಿಳಂಬಿತ ವೀರ್ಯಸ್ಖಲನ ಉಂಟಾಗಬಹುದು. ಸಂಭೋಗದ ತುರೀಯ ಹಂತದಲ್ಲಿ ವೀರ್ಯ ಶಿಶ್ನಕ್ಕೆ ಪ್ರವೇಶಿಸುವ ಬದಲು ಮೂತ್ರಕೋಶಕ್ಕೆ ತೆರಳುತ್ತದೆ.

  • ಅಲ್ಪ ಆಸಕ್ತಿ: ಕಡಿಮೆ ಪ್ರಮಾಣದಲ್ಲಿ ಟೆಸ್ಟೋಸ್ಟೆರೋನ್‌ ಉತ್ಪತ್ತಿಯಾಗುವುದರಿಂದ ಲೈಂಗಿಕ ಚಟುವಟಿಕೆಯ ಬಯಕೆ ಕಡಿಮೆಯಾಗಬಹುದು.

ಮಹಿಳೆಯರಲ್ಲಿ:

  • ಕುಗ್ಗಿದ ಆಸಕ್ತಿ: ಈಸ್ಟ್ರೋಜೆನ್‌ ಅಥವಾ ಟೆಸ್ಟೋಸ್ಟೆರನ್‌ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುವುದರಿಂದ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ.

  • ಉದ್ರೇಕಗೊಳ್ಳಲು ಅಸಾಧ್ಯವಾಗುವಿಕೆ: ಸಾಕಷ್ಟು ಪ್ರಮಾಣದಲ್ಲಿ ಪ್ರಚೋದನೆ ಮತ್ತು ಉದ್ದೀಪನವಿದ್ದಾಗ್ಯೂ ಪ್ರತಿಸಲವೂ ಉದ್ರೇಕಗೊಳ್ಳಲು ನಿಮಗೆ ಸಮಸ್ಯೆ ಉಂಟಾಗಿರಬಹುದು.

  • ಯೋನಿ ಒಣಗುವಿಕೆ ಮತ್ತು ನೋವು: ಸಂಭೋಗಕ್ಕೂ ಮುನ್ನ ಮತ್ತು ಸಂಭೋಗದ ವೇಳೆ ಯೋನಿಯಲ್ಲಿ ಲ್ಯೂಬ್ರಿಕೇಶನ್‌ ಕಡಿಮೆಯಾಗಿರುವುದರಿಂದ ತೀವ್ರ ನೋವು ಉಂಟಾಗುವುದು.

Q

ಲೈಂಗಿಕ ಅಸಾಮರ್ಥ್ಯಕ್ಕೆ ಕಾರಣವೇನು?

A

ಲೈಂಗಿಕ ಅಸಾಮರ್ಥ್ಯಕ್ಕೆ ದೈಹಿಕ, ಮಾನಸಿಕ ಮತ್ತು ಪಾರಿಸರಿಕ ಅಂಶಗಳು ಕಾರಣವಾಗಿರಬಹುದು. ಕೆಲವು ಸಾಮಾನ್ಯ ಅಂಶಗಳು ಹೀಗಿವೆ:

  • ದೈಹಿಕ ಅಂಶಗಳು: ಪುರುಷರಲ್ಲಿ ನರಕ್ಕೆ ಸಂಬಂಧಿಸಿದ ಹಾನಿ, ರಕ್ತ ಹರಿವಿನಲ್ಲಿ ಸಮಸ್ಯೆ, ಮಧುಮೇಹ, ಹಾರ್ಮೋನ್‌ ಅಸಮತೋಲನ, ನರ ಸಂಬಂಧಿ ರೋಗಗಳು, ಹೃದಯ ಅಥವಾ ಕಿಡ್ನಿ ವೈಫಲ್ಯದಂತಹ ಪರಿಸ್ಥಿತಿಗಳು ಲೈಂಗಿಕ ಅಸಾಮರ್ಥ್ಯಕ್ಕೆ ಕಾರಣವಾಗಬಹುದು. ಅಲ್ಕೋಹಾಲ್ ಮತ್ತು ನಿರ್ದಿಷ್ಟ ವಿಧದ ಔಷಧಗಳನ್ನು ಸೇವಿಸುವುದರಿಂದಲೂ ಲೈಂಗಿಕ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು.

ಮಹಿಳೆಯರಲ್ಲಿ, ಮೂತ್ರ ಅಥವಾ ಕರುಳಿನ ಸಮಸ್ಯೆ, ನರಕ್ಕೆ ಸಂಬಂಧಿಸಿದ ರೋಗಗಳು, ಸಂಧಿವಾತ ಮತ್ತು ಕೆಲವು ವಿಧದ ಔಷಧಗಳ ಬಳಕೆಯಿಂದಾಗಿ ಲೈಂಗಿಕ ಅಸಾಮರ್ಥ್ಯ ಉಂಟಾಗಬಹುದು. ಈಸ್ಟ್ರೋಜೆನ್‌ ಮಟ್ಟದಲ್ಲಿ ಕಡಿಮೆಯಾಗುವುದರಿಂದ ಯೋನಿಯ ಪದರ ತೆಳ್ಳಗಾಗುತ್ತದೆ ಮತ್ತು ಇದರಿಂದ ಲ್ಯೂಬ್ರಿಕೇಶನ್‌ ಸಮಸ್ಯೆ ಉಂಟಾಗುತ್ತದೆ. ಇದರಿಂದ ಸಂಭೋಗದಲ್ಲಿ ನೋವು ಉಂಟಾಗಬಹುದು.

  • ಮಾನಸಿಕ ಮತ್ತು ಪಾರಿಸರಿಕ ಅಂಶಗಳು: ಲೈಂಗಿಕ ಬಯಕೆ ಕಡಿಮೆಯಾಗುವುದಕ್ಕೆ ಪ್ರಮುಖವಾದ ಸಾಮಾನ್ಯ ಕಾರಣ ಕಚೇರಿಯಲ್ಲಿನ ಕೆಲಸದ ಒತ್ತಡ. ಇದರ ಹೊರತಾಗಿ ಇತರ ಅಂಶಗಳೆಂದರೆ ಸಂಭೋಗದ ಕುರಿತಾದ ಆತಂಕ, ಈಗಾಗಲೇ ಇರುವ ಖಿನ್ನತೆ ಅಥವಾ ಅತಂಕದ ಸಮಸ್ಯೆ, ಸಂಗಾತಿಯ ಜತೆಗಿನ ಸಂಬಂಧದಲ್ಲಿರಬಹುದಾದ ಸಮಸ್ಯೆ ಮತ್ತು ಈ ಹಿಂದೆ ನಡೆದ ಲೈಂಗಿಕ ಆಘಾತಗಳು.

Q

ಲೈಂಗಿಕ ಅಸಾಮರ್ಥ್ಯಕ್ಕೆ ಚಿಕಿತ್ಸೆ

A

ಬಹುತೇಕ ಪ್ರಕರಣಗಳಲ್ಲಿ ಲೈಂಗಿಕ ಅಸಾಮರ್ಥ್ಯವನ್ನು ಮೂಲ ವೈದ್ಯಕೀಯ ಸ್ಥಿತಿಗತಿಗಳನ್ನು ಪರಿಶೀಲಿಸುವ ಮೂಲಕ ಚಿಕಿತ್ಸೆ ನೀಡಬಹುದು. ಮೂಲ ಸಮಸ್ಯೆಯನ್ನು ಪರಿಹರಿಸಲು ನಿಮ್ಮ ವೈದ್ಯರು ಔಷಧನ್ನು ನೀಡುತ್ತಾರೆ. ಇದು ನಿಮ್ಮ ಲೈಂಗಿಕ ಸಮಸ್ಯೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ನಿಮಿರು ತೊಂದರೆಯನ್ನು ಅನುಭವಿಸುತ್ತಿರುವ ಪುರುಷರಿಗೆ ಕೂಡ ಔಷಧಗಳನ್ನು ನೀಡಲಾಗುತ್ತದೆ. ಈ ಔಷಧಗಳು ಶಿಶ್ನಕ್ಕೆ ರಕ್ತ ಪ್ರವಾಹವನ್ನು ಹೆಚ್ಚಿಸುತ್ತವೆ. ಕೆಲವು ಬಾರಿ, ಉದ್ರೇಕ ಉಂಟಾಗಲು ಮತ್ತು ಉದ್ರೇಕವನ್ನು ಹೆಚ್ಚು ಹೊತ್ತಿನವರೆಗೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವಂತೆ ನಿರ್ವಾತ ಸಾಧನಗಳನ್ನೂ ಬಳಸಲು ಸೂಚಿಸಬಹುದು. ಸಂಭೋಗದ ವೇಳೆ ಮಹಿಳೆಯರಲ್ಲಿ ಯೋನಿ ಸಂಕುಚಿತಗೊಳ್ಳುವ ಸಮಸ್ಯೆಯಿದ್ದರೆ ಡಿಲೇಟರ್‌ಗಳನ್ನು ಬಳಸಬಹುದಾಗಿದೆ.

ನಿಮ್ಮ ಸ್ಥಿತಿಗೆ ದೈಹಿಕ ಕಾರಣಗಳನ್ನು ವೈದ್ಯರು ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ಲೈಂಗಿಕ ಸಮಸ್ಯೆಗೆ ಮನೋವೈಜ್ಞಾನಿಕ ಥೆರಪಿಯನ್ನು ಶಿಫಾರಸು ಮಾಡಬಹುದು. ಒತ್ತಡ ಮತ್ತು ಆತಂಕವನ್ನು ಉತ್ತಮವಾಗಿ ನಿರ್ವಹಿಸಲು ಥೆರಪಿ ನೆರವಾಗಬಹುದು. ನಿಮ್ಮ ದೇಹದ ಲೈಂಗಿಕ ಪ್ರತಿಕ್ರಿಯೆ ಹೇಗೆ ಐಚ್ಛಿಕವಾಗಿರಬೇಕು ಎಂಬುದರ ಒಳನೋಟವನ್ನು ನಿಮ್ಮ ಥೆರಪಿಸ್ಟ್‌ ನಿಮಗೆ ನೀಡುತ್ತಾರೆ. ನೀವು ಮತ್ತು ನಿಮ್ಮ ಸಂಗಾತಿಗೆ ಜತೆಯಾಗಿ ನೀಡಲಾಗುವ ದಂಪತಿ ಥೆರಪಿಯಿಂದ ನಿಮ್ಮ ಮಧ್ಯೆ ಆತ್ಮೀಯತೆ, ಸಂವಹನ ಹಾಗೂ ಸಂಬಂಧಗಳಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಹಾಯಕವಾಗಬಹುದು.

ನಿಮ್ಮ ಸಂಗಾತಿಯ ಕುರಿತು ಕಾಳಜಿವಹಿಸುವುದು

ಲೈಂಗಿಕ ಸಮಸ್ಯೆಯಿಂದ ನಿಮ್ಮ ಸಂಗಾತಿ ಬಳಲುತ್ತಿದ್ದರೆ, ಅವರು ತುಂಬಾ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯವಾದ ಅಂಶವಾಗಿದೆ. ಇಂತಹ ಸಂದರ್ಭದಲ್ಲಿ, ನಿಮ್ಮಿಂದ ಬೆಂಬಲ ಮತ್ತು ಸಹನೆಯನ್ನು ಅವರು ನಿರೀಕ್ಷಿಸುತ್ತಾರೆ. ಸಮಸ್ಯೆ ಎಷ್ಟು ಸಂವೇದನಾಶೀಲ ಮತ್ತು ಖಾಸಗಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಅವರ ಸಮಸ್ಯೆಯ ಬಗ್ಗೆ ಮಾತನಾಡಲು ಪ್ರಯತ್ನಿಸಿ ಮತ್ತು ಇದರಿಂದ ಹೊರಬರಲು ಅಗತ್ಯವಿರುವ ಯಾವುದೇ ಬೆಂಬಲವನ್ನು ಬೇಕಾದರೂ ನೀವು ನೀಡುವುದು ಅವಶ್ಯಕವಿರುತ್ತದೆ. ವೈದ್ಯರ ಸಲಹೆ ಪಡೆಯಲು ಅವರನ್ನು ಪ್ರೋತ್ಸಾಹಿಸಿ ಮತ್ತು ಭೇಟಿಯ ವೇಳೆ ಅವರ ಜತೆ ಹೋಗಿ. ಸಂಬಂಧದಲ್ಲಿನ ಸಮಸ್ಯೆಯಿಂದಾಗಿ ಈ ತೊಂದರೆ ಉಂಟಾಗಿದೆ ಎಂದು ನಿಮಗೆ ಅನಿಸಿದರೆ, ಅದನ್ನು ಪರಿಹರಿಸಲು ಪ್ರಯತ್ನಿಸಿ. ಅತ್ಯಂತ ಪ್ರಮುಖವಾಗಿ, ಅವರು ಸುಧಾರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಿಮ್ಮನ್ನೂ ಜತೆಯಾಗಿ ತೊಡಗಿಸಿಕೊಳ್ಳಿ; ಜಾಯಿಂಟ್‌ ಥೆರಪಿ ಅಗತ್ಯವಿದೆ ಎಂದು ಥೆರಪಿಸ್ಟ್‌ ಹೇಳಿದರೆ ಅದನ್ನು ತಿರಸ್ಕರಿಸಬೇಡಿ; ಚಿಕಿತ್ಸೆಯ ಯೋಜನೆಯನ್ನು ವೈದ್ಯರು ರೂಪಿಸಿದರೆ, ಈ ಯೋಜನೆಯನ್ನು ನಿಮ್ಮ ಸಂಗಾತಿ ಪಾಲಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಲೈಂಗಿಕ ಅಸಾಮರ್ಥ್ಯದ ಜತೆಗೆ ಜೀವಿಸುವುದು

ಹಲವರಿಗೆ ಲೈಂಗಿಕ ಅಸಾಮರ್ಥ್ಯದ ಸಮಸ್ಯೆಯು ಒಂದು ಮುಜುಗರದ ಸಂಗತಿಯಾಗಿದೆ. ಆದರೆ ಎಷ್ಟು ಬೇಗ ನೀವು ಅದನ್ನು ಒಪ್ಪಿಕೊಂಡು ಸಹಾಯವನ್ನು ಪಡೆಯುತ್ತೀರೋ, ಅಷ್ಟು ಬೇಗ ನೀವು ಸುಧಾರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಿಕಿತ್ಸೆ ಪಡೆಯಲು ವಿಳಂಬ ಮಾಡಿದಷ್ಟೂ ಒತ್ತಡದ ಪ್ರಮಾಣ ಹೆಚ್ಚಾಗುತ್ತದೆ. ಜೀವನ ಶೈಲಿಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳುವ ಮೂಲಕ ಉತ್ತಮ ಲೈಂಗಿಕ ಸುಖ ಲಭ್ಯವಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಾಮಾಣಿಕರು ಮತ್ತು ಮುಕ್ತವಾಗಿ ವ್ಯವಹರಿಸುವುದರಿಂದ ನಿಮ್ಮ ಸಮಸ್ಯೆಯಿಂದ ಉದ್ಭವಿಸಿರುವ ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನಿಯಮಿತ ವ್ಯಾಯಾಮದ ಜತೆಗೆ ಕ್ರಿಯಾಶೀಲ ಜೀವನಶೈಲಿಯನ್ನು ಬೆಳೆಸಿಕೊಳ್ಳುವುದರಿಂದ ಶಕ್ತಿ ಸಾಮರ್ಥ್ಯ ಮತ್ತು ರಕ್ತ ಪ್ರವಾಹ ಹೆಚ್ಚುವುದಕ್ಕೆ ನೆರವಾಗುತ್ತದೆ. ಮದ್ಯಸೇವನೆ ಮತ್ತು ಧೂಮಪಾನ ತ್ಯಜಿಸಿ; ಮದ್ಯಸೇವನೆಯಿಂದ ನಿಮ್ಮ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಧೂಮಪಾನದಿಂದ ರಕ್ತದ ಪ್ರವಾಹ ಕುಂಠಿತಗೊಳ್ಳುತ್ತದೆ. ನಿತ್ಯದ ಒತ್ತಡವನ್ನು ನಿರ್ವಹಿಸಲು ಕೆಲವು ರಿಲ್ಯಾಕ್ಸೇಶನ್‌ ತಂತ್ರಗಳನ್ನು ಕಲಿತುಕೊಳ್ಳಬಹುದಾಗಿದೆ. ಅತ್ಯಂತ ಪ್ರಮುಖವಾಗಿ, ನಿಮ್ಮ ಸಮಸ್ಯೆಯನ್ನು ಉತ್ತಮವಾಗಿ ಅರ್ಥ ಮಾಡಿಕೊಂಡು ಚಿಕಿತ್ಸೆ ಯೋಜನೆಯನ್ನು ನಿಮಗೆ ಶಿಫಾರಸು ಮಾಡುವ ವೃತ್ತಿಪರರನ್ನು ನೀವು ಭೇಟಿ ಮಾಡಬೇಕು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org