ನಿದ್ರೆಯಲ್ಲಿ ಉಸಿರುಕಟ್ಟುವಿಕೆ (ಸ್ಲೀಪ್‌ ಆಪ್ನಿಯಾ)

Q

ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಎಂದರೇನು?

A

ಸ್ಲೀಪ್ ಆಪ್ನಿಯ ಎನ್ನುವುದು ನಿದ್ರೆಗೆ ಸಂಬಂಧಿಸಿದ ತೊಂದರೆ. ನಿದ್ರೆಯ ಸಮಯದಲ್ಲಿ ಉಸಿರು ಹಲವು ಬಾರಿ ಕಟ್ಟುತ್ತದೆ ಮತ್ತು ಇದರಿಂದ ಉಸಿರಾಡಲು ತೊಂದರೆಯಾಗುತ್ತದೆ.  

ಇದರಲ್ಲಿ ಎರಡು ವಿಧಗಳಿವೆ:

ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯಾ (obstructive sleep apnea - OCA): ಈ ಸ್ಥಿತಿಯಲ್ಲಿ ಶ್ವಾಸನಾಳ ಕಟ್ಟಿಕೊಳ್ಳುತ್ತದೆ. ಇದರಿಂದ ವ್ಯಕ್ತಿ  ಗೊರಕೆ ಹೊಡೆಯುತ್ತಾರೆ. ಇದು ಈ ತೊಂದರೆಯ ಅತಿ ಸಾಮಾನ್ಯ ರೂಪ. 

ಸೆಂಟ್ರಲ್‌ ಸ್ಲೀಪ್ ಆಪ್ನಿಯಾ (central sleep apnea - CSA):  ಉಸಿರಾಟವನ್ನು ನಿಯಂತ್ರಿಸುವ ಸ್ನಾಯಗಳಿಗೆ ಮಿದುಳು ಸೂಕ್ತವಾದ ಸಂಕೇತಗಳನ್ನು ನೀಡದೆ ಇರುವ ಕಾರಣದಿಂದ ಈ ಸ್ಥಿತಿಯಲ್ಲಿ ಉಸಿರು ನಿಂತುಹೋಗುತ್ತದೆ. 

 ಸಾಮಾನ್ಯವಾಗಿ ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯಾದಿಂದ ಬಳಲುತ್ತಿರುವವರಿಗೆ ಅವರ ಸಮಸ್ಯೆಯ ಬಗ್ಗೆ ಅರಿವಿರುವುದಿಲ್ಲ. ಇಂತವರು ಮಲಗುವ ರೀತಿಯಲ್ಲಿ ಸ್ವಲ್ಪ ಬದಲಾವಣೆ ಮಾಡುವುದರಿಂದ ಎಲ್ಲರಂತೆ ನಿದ್ರೆ ಮಾಡಬಹುದು. ಆದರೆ ಸೆಂಟ್ರಲ್‌ ಸ್ಲೀಪ್ ಆಪ್ನಿಯಾದಿಂದ ಬಳಲುತ್ತಿರುವವರು ಉಸಿರಾಡಲು ತೊಂದರೆ ಉಂಟಾಗಿ  ಎಚ್ಚರಗೊಳ್ಳುತ್ತಾರೆ.

ಮುಖ್ಯವಾದ ವಿಚಾರವೇನೆಂದರೆ ಗೊರಕೆ ಹೊಡೆಯುವ ಎಲ್ಲರಿಗೂ ಸ್ಲೀಪ್‌ ಆಪ್ನಿಯಾ ತೊಂದರೆ ಇರುವುದಿಲ್ಲ ಮತ್ತು ಸ್ಲೀಪ್‌ ಆಪ್ನಿಯಾ ತೊಂದರೆಯಿಂದ ಬಳಲುವವರು ಎಲ್ಲರೂ ಗೊರಕೆ ಹೊಡೆಯುವುದಿಲ್ಲ. ಇದು ಸಂಭವನೀಯ ಗಂಭೀರ ಸಮಸ್ಯೆಯಾಗಿದ್ದರೂ, ಇದಕ್ಕೆ ಚಿಕಿತ್ಸೆ ಇದೆ.

Q

ಸ್ಲೀಪ್‌ ಆಪ್ನಿಯಾದ ಗುಣಲಕ್ಷಣಗಳು

A

ಸ್ಲೀಪ್‌ ಆಪ್ನಿಯಾ ಸಮಸ್ಯೆ ಇರುವವರು ತಮಗೆ ಸಮಸ್ಯೆಯಿದೆ ಎಂಬುದನ್ನು ಗುರುತಿಸುವುದು ಕಷ್ಟ. ಯಾಕೆಂದರೆ ನಿದ್ರೆಯ ಸಮಯದಲ್ಲಿ ಮಾತ್ರ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದಾಗ್ಯೂ, ಕೆಲವು ಸಾಮಾನ್ಯ  ಲಕ್ಷಣಗಳು ಹೀಗಿರುತ್ತವೆ:

  • ಹಗಲಿನಲ್ಲಿ ತೂಕಡಿಕೆ: ರಾತ್ರಿ ಸರಿಯಾಗಿ ನಿದ್ರೆ ಮಾಡಿದ್ದರೂ ಹಗಲಿನಲ್ಲಿ ತೂಕಡಿಕೆಯ ಅನುಭವ ತೀವ್ರವಾಗಿ ಉಂಟಾಗಿದ್ದರೆ, ವ್ಯಕ್ತಿಗೆ ಗೊತ್ತಿಲ್ಲದಂತೆಯೇ  ನಿದ್ರೆಯ ಸಮಯದಲ್ಲಿ ಉಸಿರಾಟದ ಸಮಸ್ಯೆಯಿಂದ ಕಷ್ಟಪಡುತ್ತಿದ್ದಾರೆ ಎಂದರ್ಥ. 

  • ನಿದ್ರೆ ವೇಳೆ ಉಸಿರು ನಿಂತಂತ ಅನುಭವ: ಉಸಿರು ಕಟ್ಟಿದಂತಾಗಿ ರಾತ್ರಿ ವೇಳೆ ನಿದ್ರೆಯಿಂದ ಎಚ್ಚರಾಗಬಹುದು ಅಥವಾ ವ್ಯಕ್ತಿ ಉಸಿರಾಡಲು ಕಷ್ಟಪಡುತ್ತಿದ್ದರು ಎಂದು ಅವರ ಮನೆಯವರು ಹೇಳಬಹುದು.

  • ಬೆಳಗಿನ ತಲೆನೋವು, ಬಾಯಿ ಒಣಗುವುದು: ನಿತ್ಯವೂ ಏಳುವಾಗ ತಲೆನೋವು, ಬಾಯಿ ಒಣಗಿರುವಂತ  ಅನಿಸಿಕೆ ಅಥವಾ ಗಂಟಲು ನೋವು ಇರಬಹುದು; ಇದರಿಂದ ನಿದ್ರೆ ಮಾಡುವ ಸಮಯದಲ್ಲಿ ಉಸಿರಾಟದ ತೊಂದರೆ ಇರಬಹುದು ಎಂದು ಸೂಚಿಸುತ್ತದೆ.

  • ದೊಡ್ಡದಾದ ಗೊರಕೆ: ನಿತ್ಯವೂ ವ್ಯಕ್ತಿ ದೊಡ್ಡದಾಗಿ ಗೊರಕೆ ಹೊಡೆಯುತ್ತಾರೆ ಎಂದು ಮನೆಯವರು ಹೇಳಬಹುದು.

  • ಕಿರಿಕಿರಿಯಾಗುವುದು ಮತ್ತು ಮೂಡಿಯಾಗಿರುವುದು: ವ್ಯಕ್ತಿಯಲ್ಲಿ ಕಿರಿಕಿರಿಯ ಭಾವ ಹೆಚ್ಚಾಗಬಹುದು ಮತ್ತು ಚಂಚಲ ಸ್ವಭಾವ ವ್ಯಕ್ತಪಡಿಸಬಹುದು. ಇದು ನಿದ್ರೆಯ ಸಮಸ್ಯೆಯ ಕಾರಣದಿಂದ ಉಂಟಾಗಿರಬಹುದು.

ನಿತ್ಯವೂ ದೊಡ್ಡದಾಗಿ ಗೊರಕೆ ಹೊಡೆಯುವವರನ್ನು ನೀವು ಗಮನಿಸಿದರೆ ಅಥವಾ ಉಸಿರು ಕಟ್ಟಿದ ಅನುಭವವಾಗಿ ಎದ್ದೇಳುವುದನ್ನು ಕಂಡರೆ ನೀವು ಅವರ ಜತೆ ಸ್ಲೀಪ್ ಆಪ್ನಿಯಾ ಬಗ್ಗೆ ಮಾತನಾಡಿ ಮತ್ತು ವೈದ್ಯರ ಸಹಾಯ ಪಡೆಯುವಂತೆ ಅವರಿಗೆ ಸಲಹೆ ನೀಡಬಹುದು.

Q

ಸ್ಲೀಪ್‌ ಆಪ್ನಿಯಾಗೆ ಕಾರಣಗಳೇನು?

A

ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯ ಅತಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನಿದ್ರೆಯ ತೊಂದರೆ. ಶ್ವಾಸನಾಳದ ಮೇಲ್ಭಾಗದ ಸ್ನಾಯ ವಿಶ್ರಾಂತಿ ಪಡೆದುಕೊಳ್ಳುವಾಗ ಮತ್ತು ನೀವು ಉಸಿರನ್ನು ಒಳಗೆಳೆದುಕೊಳ್ಳುವಾಗ ನಾಲಿಗೆ ಹಿಂದೆ ಚಾಚಿ ಗಾಳಿಯನ್ನು ಒಳಗೆಳೆದುಕೊಳ್ಳುವ ಪ್ರಮಾಣ ಕಡಿಮೆಯಾಗುವಂತೆ ಮಾಡುತ್ತದೆ.  ಬಹುತೇಕ ಪ್ರಕರಣದಲ್ಲಿ, ಹೆಚ್ಚುವರಿ ಒತ್ತಡದಿಂದಾಗಿ ಗಂಟಲಿನ ಹಿಂಭಾಗದ ಅಂಗಾಂಶಗಳು ಕಂಪಿಸುವುದರಿಂದ ವ್ಯಕ್ತಿಯು ಗೊರಕೆ ಹೊಡೆಯುವ ಶಬ್ದ ಕೇಳುತ್ತದೆ. ಇದರಿಂದ ಉಸಿರು ಕಟ್ಟಿದ ಅನುಭವವೂ ಆಗಿ ಎದ್ದೇಳಬಹುದು. ಕತ್ತಿನಲ್ಲಿ ಹೆಚ್ಚುವರಿ ಕೊಬ್ಬಿನಾಂಶವನ್ನು ಹೊಂದಿರುವವರಲ್ಲಿ ಈ ತೊಂದರೆ ಕಾಣಿಸಿಕೊಳ್ಳಬಹುದು. ಇದರಿಂದ ಶ್ವಾಸನಾಳದ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಧೂಮಪಾನಿಗಳೂ ಕೂಡ ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯ ತೊಂದರೆಯಿಂದ  ಬಳಲಬಹುದು.

ಅಧಿಕ ರಕ್ತದೊತ್ತಡ, ಅತಿಯಾದ ತೂಕ ಮತ್ತು ವೃದ್ಧಾಪ್ಯ ಮುಂತಾದವು ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯಗೆ ಕಾರಣವಾಗುವ ಇತರ ಅಂಶಗಳು.

ಅಬ್ಸ್‌ಟ್ರಕ್ಟಿವ್‌ ಸ್ಲೀಪ್ ಆಪ್ನಿಯಗಿಂತ ಸೆಂಟ್ರಲ್‌ ಸ್ಲೀಪ್‌ ಆಪ್ನಿಯ ಕಾಣಿಸಿಕೊಳ್ಳುವ ಪ್ರಮಾಣ ಕಡಿಮೆ. ಸೆಂಟ್ರಲ್ ಸ್ಲೀಪ್ ಆಪ್ನಿಯ ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಈ ತೊಂದರೆಯಿಂದ ಹೃದಯ ವೈಫಲ್ಯ, ಹೃದಯಾಘಾತ ಮತ್ತು ಕೆಲವು ನರ ಸಂಬಂಧೀ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿ ತಮ್ಮ ಸಮಸ್ಯೆಯ ಬಗ್ಗೆ ಅರಿವಿರುತ್ತದೆ.

Q

ಸ್ಲೀಪ್ ಅಪ್ನಿಯಾಗೆ ಚಿಕಿತ್ಸೆ

A

ಸಣ್ಣ ಪ್ರಮಾಣದ ಸ್ಲೀಪ್‌ ಅಪ್ನಿಯಾಗೆ ವೈದ್ಯರು ಜೀವನಶೈಲಿಯಲ್ಲಿ ಬದಲಾವಣೆ, ದೇಹದ ತೂಕ ಕಡಿಮೆಮಾಡುವುದು, ಅಥವಾ ಧೂಮಪಾನ ಮತ್ತು ಮದ್ಯ ಸೇವನೆಯನ್ನು ಕಡಿಮೆ ಮಾಡಿಕೊಳ್ಳಲು ಸೂಚಿಸಬಹುದು. ಮೇಲ್ಮುಖವಾಗಿ ಮಲಗಿ ನಿದ್ರಿಸುವವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಲ್ಲಿ ವೈದ್ಯರು ಮಗ್ಗುಲಾಗಿ ಮಲಗಿ ನಿದ್ರಿಸುವಂತೆ ಸೂಚಿಸಿ ಇದಕ್ಕೆ ಸಂಬಂಧಿಸಿದ ಥೆರಪಿಯನ್ನು ಶಿಫಾರಸು ಮಾಡಬಹುದು. ಸ್ಲೀಪ್‌ ಆಪ್ನಿಯಾದ ಗಂಭೀರ ಪ್ರಕರಣಗಳಿಗೆ ಕೆಲವು ಚಿಕಿತ್ಸೆಗಳನ್ನು ನೀಡಲಾಗುತ್ತದೆ:

  • ಕಂಟಿನ್ಯೂಅಸ್‌ ಪಾಸಿಟಿವ್‌ ಏರ್‌ವೇ ಪ್ರೆಷರ್‌ (ಸಿ.ಪಿ.ಎ.ಪಿ): ಈ ಚಿಕಿತ್ಸೆಯಲ್ಲಿ, ಶ್ವಾಸನಾಳ ಎಂದೂ ತೆರೆದೇ ಇರುವಂತೆ ಮಾಡುವುದಕ್ಕೆ ನಿರಂತರವಾಗಿ ಗಾಳಿಯ ಪ್ರವಾಹವನ್ನು ಬಳಸುವ ಒಂದು ಮುಖವಾಡವನ್ನು ವ್ಯಕ್ತಿಗೆ ನೀಡಲಾಗುತ್ತದೆ. ಇದರಿಂದ  ವ್ಯಕ್ತಿ ರಾತ್ರಿಯ ನಿದ್ರೆಯನ್ನು ಅನುಕೂಲಕರವಾಗಿ ಮಾಡಬಹುದು. ಆದರೆ ಮಾಸ್ಕ್‌ ಧರಿಸಿ ನಿದ್ರೆ ಮಾಡುವುದನ್ನು ರೂಢಿ ಮಾಡಿಕೊಳ್ಳಲು ವ್ಯಕ್ತಿಗೆ ಸಮಯ ಹಿಡಿಯಬಹುದು.
  • ಮೌಖಿಕ ಸಾಧನಗಳು: ಕೆಲವು ಬಾರಿ ವೈದ್ಯರು ಮೌಖಿಕ ಸಾಧನಗಳನ್ನು ನೀಡಬಹುದು. ಇದು ದಂತಧಾರಕಗಳ ರೀತಿ ಇರುತ್ತದೆ. ಈ ಸಾಧನಗಳು ನಾಲಿಗೆಯನ್ನು ಮೇಲೆ ಎತ್ತಿ ಹಿಡಿದು ದವಡೆಯನ್ನು ಸರಿಯಾದ ಸ್ಥಾನದಲ್ಲಿ ಇರಿಸಲು ಸಹಾಯ ಮಾಡುತ್ತವೆ.
  • ಶಸ್ತ್ರಚಿಕಿತ್ಸೆ: ನಿದ್ರೆ ವೇಳೆಯಲ್ಲಿ ಶ್ವಾಸನಾಳವನ್ನು ಕಟ್ಟದಂತೆ ತಡೆಯಲು ಗಂಟಲಿನ ಹಿಂಭಾಗದಲ್ಲಿನ ಅಂಗಾಂಶವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಲಾಗುತ್ತದೆ ಅಥವಾ ಕಡಿಮೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ, ನಾಲಿಗೆಯ ಹಿಂಬದಿಯಲ್ಲಿ ಉಸಿರಾಟಕ್ಕೆ ಸಾಕಷ್ಟು ಸ್ಥಳಾವಕಾಶ ಸಿಗುವುದಕ್ಕಾಗಿ ದವಡೆಯನ್ನು ಮರು ಹೊಂದಿಸಲಾಗುತ್ತದೆ.

 

Q

ಸ್ಲೀಪ್‌ ಆಪ್ನಿಯಾದಿಂದ ಬಳಲುತ್ತಿರುವವರ ಆರೈಕೆ

A

ನಿದ್ರೆಯಲ್ಲಿ ಉಸಿರಾಟದ ಸಮಸ್ಯೆಯಿದೆ ಎಂಬುದು ಬಹುತೇಕರಿಗೆ ಅರಿವೇ ಆಗಿರುವುದಿಲ್ಲ. ಇದು ಸ್ಲೀಪ್‌ ಆಪ್ನಿಯಾ ಹೊಂದಿರುವವರ ಸಮಸ್ಯೆ. ದೊಡ್ಡದಾಗಿ ಗೊರಕೆ ಹೊಡೆಯುವುದನ್ನು ಮತ್ತು ನಿದ್ರೆ ವೇಳೆ ಏದುಸಿರು ಬಿಡುವುದನ್ನು ಕುಟುಂಬ ಸದಸ್ಯರು ಅಥವಾ ಕೆಲಸದ ಅವಧಿಯಲ್ಲಿ ನಿದ್ರೆ ಮಾಡುವಾಗ ಸಾಮಾನ್ಯವಾಗಿ ಸಹೋದ್ಯೋಗಿಗಳು ಗುರುತಿಸುತ್ತಾರೆ.

ನೀವು ಅಂತವರ ಬಳಿ ಮಾತನಾಡಬೇಕು ಮತ್ತು ವೈದ್ಯರ ಸಹಾಯವನ್ನು ಕೋರಲು ಹೇಳಬೇಕು. ಸ್ಲೀಪ್‌ ಆಪ್ನಿಯಾದಿಂದ ಬಳಲುತ್ತಿರುವವರು ಕಿರಿಕಿರಿಯ ಭಾವ ಮತ್ತು ಮೂಡಿ ಸ್ವಭಾವವನ್ನು ಹೊಂದಿರುತ್ತಾರೆ. ಇದರಿಂದ ನೀವು ಸಹನಶೀಲರಾಗಿರುವುದು ಮತ್ತು ಅವರು ಚಿಕಿತ್ಸೆಯನ್ನು ಮುಂದುವರಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸುವುದು ಬಹುಮುಖ್ಯ.

Q

ಸ್ಲೀಪ್‌ ಆಪ್ನಿಯಾವನ್ನು ಎದುರಿಸುವುದು

A

ಸ್ಲೀಪ್ ಆಪ್ನಿಯಾ ಸಂಭವನೀಯ ಗಂಭೀರ ಸಮಸ್ಯೆ. ದೀರ್ಘಾವಧಿಯಲ್ಲಿ ನಿಮ್ಮ ದೈಹಿಕ ಸಾಮರ್ಥ್ಯದ ಮೇಲೆ ಇದು ಪರಿಣಾಮ ಬೀರಬಹುದು. ಒತ್ತಡ ನಿರ್ವಹಿಸಲು ಅನುಕೂಲವಾಗುವಂತೆ ನಿಮ್ಮ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ನಿತ್ಯವೂ ವ್ಯಾಯಾಮವನ್ನು ಮಾಡುವುದರಿಂದ ಮತ್ತು ತೂಕ ಹೆಚ್ಚಿದ್ದರೆ ಕಡಿಮೆ ಮಾಡಿಕೊಳ್ಳುವುದರಿಂದ ಒಎಸ್‌ಎಯನ್ನು ನಿಯಂತ್ರಿಸಬಹುದು. ಧೂಮಪಾನ ಮತ್ತು ಮದ್ಯಪಾನ ಸೇವನೆಯನ್ನು ತ್ಯಜಿಸುವುದನ್ನು ಸೂಚಿಸಲಾಗುತ್ತದೆ. ಶ್ವಾಸನಾಳದ ಮೇಲ್ಭಾಗ ಕಟ್ಟುವುದು ಮತ್ತು ನಾಲಿಗೆ ಹಿಂದಕ್ಕೆ ಮಡಚಿಕೊಳ್ಳುವುದನ್ನು ತಡೆಯಲು ನೀವು ಮಗ್ಗುಲಾಗಿ ಮಲಗಲು ಪ್ರಯತ್ನಿಸಬಹುದು. ಈ ಎಲ್ಲ ಬದಲಾವಣೆಗಳನ್ನು ಅನುಸರಿಸುವುದಕ್ಕಿಂತ ಮುಖ್ಯವಾದ ಅಂಶವೆಂದರೆ ನಿಮ್ಮ ಸಮಸ್ಯೆಗೆ ನೀವು ಮೊದಲು ವೈದ್ಯರನ್ನು ಕಾಣಬೇಕು.

 

 

 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org