ವ್ಯಕ್ತಿತ್ವದ ಖಾಯಿಲೆ ವಿಧಗಳು

Q

Types of personality disorders

A

ವ್ಯಕ್ತಿತ್ವದ ಖಾಯಿಲೆಯಿರುವ ಒಬ್ಬ ವ್ಯಕ್ತಿಯಲ್ಲಿ ಯಾವುದೋ ಒಂದು ನಿರ್ದಿಷ್ಟ ಗುಣಸ್ವಭಾವದ ಪ್ರಾಬಲ್ಯವು ಜಾಸ್ತಿಯಾಗುವುದರಿಂದ ಅಥವಾ ಅದರ ಕೊರತೆಯುಂಟಾಗುವುದರಿಂದ ಆತ ಅಥವಾ ಆಕೆಯು ತಮ್ಮ ಮನೆಯ ಅಥವಾ ಕಛೇರಿಯ ದೈನಂದಿನ ಕೆಲಸವನ್ನು ನಿರ್ವಹಿಸುವಲ್ಲಿ ಅಡಚಣೆಯುಂಟಾಗಬಹುದು. ಇಂತಹ ಸಮಸ್ಯೆಗೆ ಸಂಬಂಧಿಸಿದ ವ್ಯಕ್ತಿತ್ವದ ಸ್ವಭಾವಗಳು ಎಲ್ಲಾ ವ್ಯಕ್ತಿಗಳಲ್ಲೂ ಬಾಲ್ಯದಿಂದಲೂ ಬೇರೆ ಬೇರೆ ಮಟ್ಟದಲ್ಲಿ ಕಂಡುಬರುತ್ತವೆ ಮತ್ತು ಹರೆಯದಲ್ಲಿ ಗಟ್ಟಿಯಾಗಿ ನೆಲೆಯಾಗುತ್ತವೆ.

ವ್ಯಕ್ತಿಯಲ್ಲಿ ಯಾವ ಸ್ವಭಾವದ ಪ್ರಭಾವವು ಹೆಚ್ಚಾಗಿ ಕಂಡುಬರುತ್ತಿದೆ ಎಂಬ ಆಧಾರದ ಮೇಲೆ ವ್ಯಕ್ತಿತ್ವದ ಖಾಯಿಲೆಯನ್ನು ಹಲವು ವಿಧಗಳಾಗಿ ವಿಂಗಡಿಸಲಾಗಿದೆ.

ಮುಖ್ಯವಾಗಿ ಇವುಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿಯೊಂದು ವಿಭಾಗದಲ್ಲಿಯೂ ಹಲವಾರು ನಿರ್ದಿಷ್ಟ ವ್ಯಕ್ತಿತ್ವದ ಖಾಯಿಲೆಗಳನ್ನು ಗುರುತಿಸಲಾಗಿದೆ. ಪ್ರತಿಯೊಂದೂ ಗುಂಪಿನಲ್ಲಿರುವ ವ್ಯಕ್ತಿತ್ವದ ಖಾಯಿಲೆಗಳು ಒಂದೇ ತೆರನಾದ ಲಕ್ಷಣಗಳು ಮತ್ತು ಕೆಲವು ನಿರ್ದಿಷ್ಟ ವ್ಯಕ್ತಿತ್ವದ ಗುಣಸ್ವಭಾವಗಳೊಂದಿಗಿನ ಲಕ್ಷಣಗಳನ್ನು ಹೊಂದಿವೆ.

  • ಎ ಗುಂಪು: ವಿಚಿತ್ರ ಅಥವಾ ವಿಲಕ್ಷಣ ಸ್ವಭಾವದ ಲಕ್ಷಣಗಳನ್ನು ಹೊಂದಿದ ನಡವಳಿಕೆ

  • ಬಿ ಗುಂಪು: ನಾಟಕೀಯವಾದ, ಅನಿರ್ದಿಷ್ಟತೆಯಿಂದ ಕೂಡಿದ ಭಾವೋದ್ವೇಗಕ್ಕೊಳಗಾಗುವ ನಡತೆಯುಳ್ಳ ಖಾಯಿಲೆಗಳು

  • ಸಿ ಗುಂಪು: ಆತಂಕ ಮತ್ತು ಭಯದ ನಡುವಳಿಕೆಯ ಲಕ್ಷಣಗಳಿಂದ ಕೂಡಿದ ಖಾಯಿಲೆಗಳು.

ಒಬ್ಬ ವ್ಯಕ್ತಿಯು ಇಂತಹ ಯಾವುದೇ ಖಾಯಿಲೆಗಳಿಂದ ಬಳಲುತ್ತಿದ್ದಾನೆಂಬುದನ್ನು ಪತ್ತೆಮಾಡಲು, ಆತನ ವೈಯಕ್ತಿಕ ಜೀವನ, ವ್ಯಕ್ತಿಗಳ ಜೊತೆಗಿನ ಸಂಬಂಧ ಮತ್ತು ವೃತ್ತಿ ಜೀವನದಲ್ಲಿ ಬಾಧೆಗೊಳಿಸುತ್ತಿರುವ ನಡತೆಯ ಗಮನಾರ್ಹ ವಿನ್ಯಾಸ ಕಾಣಸಿಗಬೇಕು.

ಸೂಚನೆ: ಮೇಲ್ಕಾಣಿಸಿದ ಗುಂಪುಗಳಲ್ಲಿ ವಿವರಿಸಲಾದ ಗುಣಸ್ವಭಾವಗಳು ನಮ್ಮೆಲ್ಲರಲ್ಲಿಯೂ ಕಂಡುಬರುತ್ತವೆ. ಈ ವಿಭಾಗಗಳಲ್ಲಿ ಹೇಳಲಾಗಿರುವ ಕೆಲ ಸ್ವಭಾವಗಳ ಲಕ್ಷಣಗಳು ನಿಮ್ಮಲ್ಲಿಯೇ ಇರಬಹುದು ಅಥವಾ ನಿಮ್ಮ ಸಹವರ್ತಿಗಳಲ್ಲಿ ಕಂಡುಬರಬಹುದು. ಆದರೆ ಈ ಲಕ್ಷಣಗಳು ಈ ಕೆಳಗೆ ಹೇಳಲಾಗಿರುವ ಸಂದರ್ಭದಲ್ಲಿ ಮಾತ್ರ ವ್ಯಕ್ತಿತ್ವದ ಖಾಯಿಲೆಗಳೆಂದು ಗುರುತಿಸಲ್ಪಡುತ್ತವೆಯೆಂದು ನೆನಪಿನಲ್ಲಿಡಿ:

ಅ) ಆ ಗುಣಸ್ವಭಾವಗಳು ಅತಿಯಾಗಿದ್ದು, ವ್ಯಕ್ತಿಗೆ ತನ್ನ ಕುರಿತ ಅಥವಾ ಸುತ್ತಲಿನವರು ಮತ್ತು ಅವರ ಪರಿಸರದ ಕುರಿತ ದೃಷ್ಟಿಕೋನದ ಮೇಲೆ ಪ್ರಭಾವ ಬೀರುವಂತಿದ್ದರೆ. ವ್ಯಕ್ತಿಯಲ್ಲಿ ಈ ಸ್ವಭಾವಗಳು ನಿರಂತರವಾಗಿ ದೀರ್ಘ ಸಮಯದವರೆಗೆ ಕಂಡುಬಂದರೆ ಮತ್ತು ಬೇರೆ ಬೇರೆ ಸಂದರ್ಭದಲ್ಲಿಯೂ ವ್ಯಕ್ತವಾಗುತ್ತಿದ್ದರೆ.

ಬ) ಈ ಗುಣಸ್ವಭಾವಗಳು ವ್ಯಕ್ತಿಗೆ ಅಥವಾ ಅವನ ಸುತ್ತಲೂ ಇರುವವರಿಗೆ ಹೆಚ್ಚಿನ ತೊಂದರೆಯನ್ನುಂಟು ಮಾಡುತ್ತಿದ್ದರೆ.

ಈ ಮೇಲಿನ ವಿವರಣೆಗಳು ತೊಂದರೆಯನ್ನು ಗುರುತಿಸುವಲ್ಲಿ ನೆರವಾಗುವ ಮಾರ್ಗದರ್ಶಿಗಳೇ ಹೊರತು ಇವುಗಳೇ ಖಾಯಿಲೆಯನ್ನು ನಿರ್ಧರಿಸುವುದಿಲ್ಲ. ಸಮಸ್ಯೆಯನ್ನು ಕೇವಲ ವೃತ್ತಿಪರ ಮಾನಸಿಕ ತಜ್ಞರೇ ನಿರ್ಧರಿಸಬೇಕು.

Q

‘ಎ’ ಗುಂಪು – ವಿಚಿತ್ರ ಮತ್ತು ವಿಲಕ್ಷಣ ಸ್ವಭಾವ

A

ಈ ಗುಂಪಿನಲ್ಲಿರುವ ಸಮಸ್ಯೆಯಿರುವ ವ್ಯಕ್ತಿಗಳು ಬೇರೆಯವರಿಗೆ ಅರ್ಥವಾಗದಂತಹ ವಿಕೃತ ಅಥವಾ ವಿರೂಪಗೊಂಡ ಯೋಚನೆಗಳು ಅಥವಾ ನಡವಳಿಕೆಯನ್ನು ಪ್ರದರ್ಶಿಸಬಹುದು. ಅವರು ಬೇರೆಯವರನ್ನು ಅತಿಯಾಗಿ ಅನುಮಾನಿಸಬಹುದು. ತಮ್ಮ ಪಾಡಿಗೆ ತಾವಿರಲು ಬಯಸಬಹುದು, ಉಳಿದವರನ್ನು ಉಪೇಕ್ಷಿಸಬಹುದು. ಅವರ ಈ ರೀತಿಯ ನಡವಳಿಕೆಯಿಂದ ಸಂಬಂಧಗಳ ಮೇಲೆ ಮತ್ತು ಅವರ ದೈನಂದಿನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗಬಹುದು.

ಬುದ್ಧಿಭ್ರಮಣೆಯಂತಹ (ಪ್ಯಾರಾನಾಯ್ಡ್ )ವ್ಯಕ್ತಿತ್ವದ ಖಾಯಿಲೆ

ಪ್ಯಾರಾನಾಯ್ಡ್ ಪರ್ಸನಾಲಿಟಿ ಡಿಸಾರ್ಡರ್ ಉಂಟಾದ ವ್ಯಕ್ತಿಗೆ ಇನ್ನೊಬ್ಬರನ್ನು ನಂಬುವುದು ಕಷ್ಟವಾಗಬಹುದು. ಉಳಿದವರಂತೆ ಅವರು ತಮ್ಮ ಅಪನಂಬಿಕೆಯನ್ನು ತಮ್ಮಲ್ಲಿಯೇ ಇಟ್ಟುಕೊಳ್ಳದೇ ತಮ್ಮ ಕಾರ್ಯ ಮತ್ತು ನಡುವಳಿಕೆಯ ಮೂಲಕ ಹೊರಹಾಕಬಹುದು. ಅಂತಹ ವ್ಯಕ್ತಿಯು ತನ್ನ ಕುಟುಂಬದವರು, ಆಪ್ತ ಸ್ನೇಹಿತರು ಮತ್ತು ಸಂಬಂಧಿಗಳನ್ನು ಕೂಡ ಸಂಶಯಿಸಬಹುದು. ಅವರು ನಿರಂತವಾಗಿ ಸುತ್ತಲಿನ ವ್ಯಕ್ತಿಗಳು ತಮಗೆ ಮೋಸ ಅಥವಾ ಹಾನಿ ಮಾಡಬಹುದು ಅಥವಾ ತಮ್ಮನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಭಯದಲ್ಲಿರುತ್ತಾರೆ. ಇದರಿಂದಾಗಿ ತಮ್ಮ ಹತ್ತಿರದವರಿಂದ ಭಾವನಾತ್ಮಕವಾಗಿ ದೂರವಾಗುತ್ತಾರೆ. ತಮ್ಮ ಸಂಗಾತಿಗಳಲ್ಲಿಯೂ ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬಹುದು. ಒಬ್ಬ ವ್ಯಕ್ತಿಯ ಚಿಕ್ಕ ತಪ್ಪನ್ನೇ ಇಟ್ಟುಕೊಂಡು ದೀರ್ಘ ಸಮಯದವರೆಗೆ ದ್ವೇಷ ಸಾಧಿಸಬಹುದು. ಅವರಿಂದ ಬೇರೆಯವರೊಂದಿಗೆ ಸಹಕರಿಸಿ ಕೆಲಸ ಮಾಡುವುದು ಸಾಧ್ಯವಾಗುವುದಿಲ್ಲ. ಅವರು ತಮ್ಮ ಸಂಶಯವನ್ನು ಮಾತಿನಲ್ಲಿ ಹೊರಹಾಕಬಹುದು ಮತ್ತು ಬೇರೆಯವರ ಒಳ ಉದ್ದೇಶವು ತಮಗೆ ತಿಳಿದಿದೆ ಎಂದು ಅವರೆದುರೇ ಹೇಳಲೂ ಬಹುದು.

ಪ್ಯಾರಾನಾಯ್ಡ್ ಪರ್ಸನಾಲಿಟಿ ಡಿಸಾರ್ಡರಿನಿಂದ ಬಳಲುತ್ತಿರುವ ವ್ಯಕ್ತಿಯು ಇತರರು( ತನ್ನ ಸ್ನೇಹಿತರು ಮತ್ತು ಕುಟುಂಬ) ತನಗೆ ಸಂಬಂಧಿಸಿದ ದಾಖಲೆಗಳನ್ನು ಹ್ಯಾಕ್ ಮಾಡಿಬಿಡಬಹುದೆಂಬ ಭಯದಿಂದ ಆತನ ಕೆಲಸ ಹಾಗೂ ಸಂಬಂಧಗಳು ಹಾಳಾಗುವಂತಹ ಸಮಯದಲ್ಲಿಯೂ ಸಹ ತನ್ನ ಕಂಪ್ಯೂಟರನ್ನುಹಂಚಿಕೊಳ್ಳಲು ಇಷ್ಟಪಡದಿರಬಹುದು.

ಛಿದ್ರಮನಸ್ಕತೆಯ ವ್ಯಕ್ತಿತ್ವದ ಖಾಯಿಲೆ

ಛಿದ್ರಮನಸ್ಕತೆಯ ವ್ಯಕ್ತಿತ್ವದ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ತಣ್ಣನೆಯ ಮತ್ತು ಏಕಾಂಗಿ ಸ್ವಭಾವದವರಾಗಿರಬಹುದು. ಅವರು ಒಬ್ಬಂಟಿಯಾಗಿರುವಲ್ಲಿಯೇ ಸಂತೋಷವನ್ನು ಅನುಬವಿಸುತ್ತಾರೆ. ಸಾಮಾಜಿಕ ಸಂವಹನ ಅಥವಾ ಉಳಿದವರು ಸಂತೋಷಪಡುವ ಚಟುವಟಿಕೆಗಳು ಇವರಿಗೆ ರುಚಿಸದಿರಬಹುದು. ಹೊಗಳಿಕೆಯಿಂದ ಅವರಿಗೆ ಸಂತೋಷವಾಗದಿರಬಹುದು ಮತ್ತು ವಿಮರ್ಶೆಯಿಂದ ಅವರು ವಿಚಲಿತರಾಗಬಹುದು. ಅವರ ಮೇಲೆ ಅವರ ಕುಟುಂಬ ಹಾಗೂ ಸ್ನೇಹಿತರ ಮೇಲೆ ಪ್ರಭಾವ ಬೀರುವ ಯಾವುದೇ ವಿಷಯದಲ್ಲಿ ತೊಡಗಿಕೊಳ್ಳಲು ನಿರಾಕರಿಸಬಹುದು. ಉಳಿದವರಿಗೆ ಇವರು ಅನಾಸಕ್ತರಾದ, ಸರಿಯಾಗಿ ಸ್ಪಂದಿಸದ ವ್ಯಕ್ತಿಯಾಗಿ ತೋರುವುದರಿಂದ ಅವರೊಂದಿಗೆ ಉತ್ತಮ ಸಂಬಂಧ ಮತ್ತು ಸಂವಹನ ನಡೆಸುವುದು ಕಷ್ಟವಾಗಬಹುದು.

ಇಂತಹ ವ್ಯಕ್ತಿಗಳಿಗೆ ಸಾಮಾಜಿಕವಾಗಿ ಇತರರೊಂದಿಗೆ ಬೆರೆಯಲು ಒತ್ತಾಯಿಸಿದರೆ ಒಂದು ರೀತಿಯ ಕಳೆದುಹೋದ ಭಾವನೆಯುಂಟಾಗಬಹುದು. ಇಂತವರು ಬೇರೆಯವರೊಂದಿಗೆ ಸಂವಹಿಸಬೇಕಾಗಿ ಬರುವಂತಹ ಸಂದರ್ಭಗಳಿಂದ ತಪ್ಪಿಸಿಕೊಳ್ಳಲು ಕೂಡ ನೋಡಬಹುದು.

ಸ್ಕಿಜೊಟೈಪಲ್ ವ್ಯಕ್ತಿತ್ವದ ಖಾಯಿಲೆ

ಸ್ಕಿಜೋಟೈಫಲ್ ಪರ್ಸನಾಲಿಟಿ ಡಿಸಾರ್ಡರಿಗೆ ಒಳಗಾದ ವ್ಯಕ್ತಿಗಳು ಛಿದ್ರಮನಸ್ಕತೆಯ ವ್ಯಕ್ತಿತ್ವದ ಖಾಯಿಲೆ ಮತ್ತು ಬುದ್ಧಿಭ್ರಮಣೆಯಂತಹ (ಪ್ಯಾರಾನಾಯ್ಡ್ )ವ್ಯಕ್ತಿತ್ವದ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಪ್ರದರ್ಶಿಸುತ್ತಿರುವ ಗುಣಸ್ವಭಾವಗಳ ಲಕ್ಷಣವನ್ನು ಹೊಂದಿರುತ್ತಾರೆ. ವ್ಯಕ್ತಿಯು ಬೇರೆಯವರನ್ನು ಅಪನಂಬಿಕೆಯಿಂದ ಕಾಣುತ್ತಾನೆ ಮತ್ತು ಅವರಿಂದ ದೂರವಿರಲು ಪ್ರಯತ್ನಿಸುತ್ತಾನೆ. ಇವುಗಳ ಜೊತೆಗೆ ಸುತ್ತಲಿನ ಜನರೊಂದಿಗೆ ವಿಲಕ್ಷಣವೆನಿಸುವ ಸ್ವಭಾವಗಳನ್ನು ವ್ಯಕ್ತಿಯು ಪ್ರದರ್ಶಿಸಬಹುದು. ಕೆಲವು ವಿಚಿತ್ರ ನಡುವಳಿಕೆಯನ್ನು ಆತನು ಪದೇಪದೇ ಪ್ರದರ್ಶಿಸಬಹುದು. ಉದಾಹರಣೆಗೆ ತನ್ನ ವಸ್ತುಗಳನ್ನು ಪದೇಪದೇ ಪರೀಕ್ಷಿಸಿಕೊಳ್ಳುವುದು, ಎಲ್ಲಾ ವಿಷಯಗಳಲ್ಲೂ ಅನುರೂಪತೆಯಿರುವುದನ್ನು ಖಚಿತಪಡಿಸಿಕೊಳ್ಳುವುದು, ಅಥವಾ ತಮ್ಮ ತಟ್ಟೆಯಲ್ಲಿರುವ ಧಾನ್ಯವನ್ನು ಸಹ ಎಣಿಸುವುದು.

ಸ್ಕಿಜೋಟೈಫಲ್ ಪರ್ಸನಾಲಿಟಿ ಡಿಸಾರ್ಡರ್ ಇರುವ ವ್ಯಕ್ತಿಗಳ ಪುನರಾವರ್ತಿತ ನಡವಳಿಕೆಯನ್ನು ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಎಂದು ಕೆಲವೊಮ್ಮೆ ತಪ್ಪಾಗಿ ಭಾವಿಸುವ ಸಾಧ್ಯತೆಯಿರುತ್ತದೆ. ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಹೊಂದಿರುವ ವ್ಯಕ್ತಿಗೆ ತಾನು ಮಾಡುತ್ತಿರುವ ಕೆಲಸವು ಕ್ಷುಲ್ಲಕ, ವಿಲಕ್ಷಣ ಮತ್ತು ಅಸಮಂಜಸವೆಂದು ತಿಳಿದಿರುತ್ತದೆ. ಆದರೆ ಅದನ್ನು ಬಿಡಲು ಸಾಧ್ಯವಾಗುವುದಿಲ್ಲ. ಸ್ಕಿಜೋಟೈಫಲ್ ಪರ್ಸನಾಲಿಟಿ ಡಿಸಾರ್ಡರ್ ಇರುವ ವ್ಯಕ್ತಿಗೆ ತನ್ನ ಕೆಲಸ ಅಸಮಂಜಸ ಮತ್ತು ಅಸಹಜವೆಂದು ತಿಳಿದಿರುವುದಿಲ್ಲ.

ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗೆ ಒಂದಕ್ಕೊಂದು ಸಂಬಂಧಪಡದ ಎರಡು ವಿಷಯಗಳಲ್ಲಿ ಮ್ಯಾಜಿಕಲ್ ಎನಿಸುವ ಯೋಚನೆಗಳು ಬರಬಹುದು: ಅವರಿಗೆ ಮೂಢನಂಬಿಕೆ ಮತ್ತು ಅತೀಂದ್ರಿಯ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಬಹುದು. ಇಂತಹ ವ್ಯಕ್ತಿಗಳಿಗೆ ನೈಜ ಘಟನೆಗಳು ಮತ್ತು ತಾವು ಕಲ್ಪಿಸಿಕೊಂಡ ಘಟನೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಕಷ್ಟವಾಗಬಹುದು.

Q

‘ಬಿ’ ಗುಂಪು : ನಾಟಕೀಯ, ಅನಿಯಮಿತ ಅಥವಾ ಭಾವೋದ್ವೇಗದ ನಡವಳಿಕೆ

A

ಈ ಗುಂಪಿನಲ್ಲಿರುವ ಖಾಯಿಲೆಗಳನ್ನು ನಾಟಕೀಯ ಅಥವಾ ಅತಿಯಾದ ಭಾವೋದ್ವೇಗದಿಂದ ಕೂಡಿದ ನಡವಳಿಕೆಯ ಆಧಾರದ ಮೇಲೆ ಗುರುತಿಸಲಾಗಿದೆ. ಇಂತವರು ತಮ್ಮ ಅವಶ್ಯಕತೆಗಳು ಇತರರಿಗಿಂತ ಹೆಚ್ಚು ಪ್ರಮುಖವೆಂದು ಭಾವಿಸುತ್ತಾರೆ ಮತ್ತು ಉಳಿದವರ ಪರಿವೆಯಿಲ್ಲದೇ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ. ಈ ವ್ಯಕ್ತಿಗಳಲ್ಲಿ ಕಂಡುಬರುವ ಇನ್ನೊಂದು ಸಾಮಾನ್ಯ ಅಂಶವೆಂದರೆ ತಮ್ಮ ವರ್ತನೆಯ ಆ ಕ್ಷಣದ ಪರಿಣಾಮದ ಆಚೆಗೆ ಯೋಚಿಸಲು ಇವರು ಅಸಮರ್ಥರಾಗಿರುತ್ತಾರೆ ಮತ್ತು ಪ್ರಚೋದನೆ ಮತ್ತು ಭಾವನೆಗಳನ್ನು ನಿಯಂತ್ರಿಸಲು ಕಷ್ಟಪಡುತ್ತಾರೆ.

ಸಮಾಜವಿರೋಧಿ ವ್ಯಕ್ತಿತ್ವದ ಖಾಯಿಲೆ

ಸಮಾಜವಿರೋಧಿ ವ್ಯಕ್ತಿತ್ವದ ಖಾಯಿಲೆಯಿರುವ ವ್ಯಕ್ತಿಗಳ ಒಂದು ಲಕ್ಷಣವೆಂದರೆ ಉಳಿದವರ ಒಳಿತಿನ ಕುರಿತು ಅತಿಯಾದ ನಿರ್ಲಕ್ಷ ಮತ್ತು ತಮ್ಮ ಅವಶ್ಯಕತೆಯನ್ನು ಪೂರೈಸುವ ಚಟುವಟಿಕೆಯ ಪರಿಣಾಮವನ್ನು ಉಪೇಕ್ಷಿಸುವುದು. ತಮ್ಮ ಕಾರ್ಯವು ಅವರ ಮೇಲೆ ಅಥವಾ ಉಳಿದವರ ಮೇಲೆ ದುಷ್ಪರಿಣಾಮವನ್ನು ಬೀರುವಂತಿದ್ದರೂ ಅದರ ಪರಿಣಾಮವನ್ನು ಅರಿಯಲು ಅಸಮರ್ಥರಾಗುವುದು. ಇಂತಹ ವ್ಯಕ್ತಿಗಳು ತಾವು ಹೆಚ್ಚಿನ ಹಕ್ಕನ್ನು, ಅರ್ಹತೆಯನ್ನು ಹೊಂದಿದವರೆಂದೂ, ಉಳಿದವರಿಗಿಂತ ಅರ್ಹರು ಮತ್ತು ಶ್ರೇಷ್ಠರೆಂದೂ ಭಾವಿಸುತ್ತಾರೆ.

ಸಮಾಜವಿರೋಧಿ ವ್ಯಕ್ತಿತ್ವದ ಖಾಯಿಲೆಯಿರುವ ವ್ಯಕ್ತಿಯು ವಿನಾಶಕ ಪ್ರವೃತ್ತಿಯನ್ನು ತೋರ್ಪಡಿಸುತ್ತಾನೆ. ಭಾವನಾತ್ಮಕವಾಗಿ, ದೈಹಿಕವಾಗಿ ಹಿಂಸಾತ್ಮಕವಾಗಿ ವರ್ತಿಸುವುದು; ಕಾಯಿದೆಗಳನ್ನು ಮುರಿಯುವುದು; ಉಳಿದವರ ವಸ್ತುಗಳನ್ನು ಕಡೆಗಣಿಸುವುದು( ಉದಾಹರಣೆಗೆ, ಬೇರೆಯವರ ವಸ್ತುಗಳನ್ನು ಮುರಿಯುವುದು) ಇತ್ಯಾದಿ. ಇಂತಹ ವ್ಯಕ್ತಿಗಳು ಬಾಲ್ಯದಲ್ಲಿಯೇ ಮತ್ತೆಮತ್ತೆ ನಡವಳಿಕೆಯ ಸಮಸ್ಯೆಗೆ ಒಳಗಾಗಿರಬಹುದು ಮತ್ತು ಹಲವು ಬಾರಿ ಇದು ದುರ್ಬಲ ವ್ಯಕ್ತಿಗಳನ್ನು, ಉದಾಹರಣೆಗೆ ಚಿಕ್ಕ ಮಕ್ಕಳು ಮತ್ತು ಪ್ರಾಣಿಗಳನ್ನು ಪೀಡಿಸುವ, ಬೆದರಿಸುವ ಮತ್ತು ದೈಹಿಕವಾಗಿ ಹಿಂಸಿಸುವ ರೂಪದಲ್ಲಿ ವ್ಯಕ್ತವಾಗಿರಬಹುದು. ಅವರಿಗೆ ತಮ್ಮ ನಡವಳಿಕೆಯಲ್ಲಿ ಅಥವಾ ತಾವು ತಮಗೆ ಮತ್ತು ಉಳಿದವರಿಗೆ ಉಂಟುಮಾಡುತ್ತಿರುವ ತೊಂದರೆಯಲ್ಲಿ ಯಾವ ತಪ್ಪೂ ಕಾಣಿಸದಿರಬಹುದು. ಆ ಸಂದರ್ಭದಲ್ಲಿ ಹಿಂಸೆಯು ಅನಿವಾರ್ಯವಾಗಿತ್ತು ಎಂಬ ರೀತಿ ಅವರು ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿರಬಹುದು. ಅವರು ಆಕ್ರಮಣಕಾರಿ ಮತ್ತು ಕುಯುಕ್ತಿಯನ್ನು ಕೂಡ ಪ್ರಯೋಗಿಸಬಹುದು. ಸುಳ್ಳು ಹೇಳುವುದು ಮತ್ತು ಇನ್ನೊಬ್ಬರನ್ನು ಉಪಯೋಗಿಸಿಕೊಂಡು ಕೆಲಸಮಾಡುವುದು; ಇನ್ನೊಬ್ಬರು ಮತ್ತೆ ತಮ್ಮನ್ನು ಸ್ವೀಕರಿಸುವಂತೆ ಮಾಡಲು ಪಶ್ಚಾತ್ತಾಪವಾದಂತೆ ನಟಿಸುವುದು, ಮತ್ತೆ ತಮ್ಮ ಉದ್ದೇಶ ಈಡೇರಿದ ಕೂಡಲೇ ಸಮಾಜವಿರೋಧಿ ನಡವಳಿಕೆಯನ್ನು ತೋರಿಸುವುದು ಇತ್ಯಾದಿ.

ಈ ಸಮಸ್ಯೆಯಿಂದ ಬಳಲುತ್ತಿರುವವರು ದುಡುಕಿನವರಾಗಿರುತ್ತಾರೆ. ಅವರು ಅಪಾಯಗಳನ್ನು ಎದುರುಹಾಕಿಕೊಳ್ಳಬಹುದು ಮತ್ತು ಮಾದಕದ್ರವ್ಯ ವ್ಯಸನ ಸಮಸ್ಯೆಗಳಿಂದ ಬಳಲುತ್ತಿರಬಹುದು. ಇಂತವರು ತಮ್ಮ ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಬಹುದು. ಅಥವಾ ಇನ್ನೊಬ್ಬರ ಪರಿಸ್ಥಿತಿ ಮತ್ತು ದೃಷ್ಟಿಕೋನವನ್ನು ಪರಿಗಣಿಸಲು ನಿರಾಕರಿಸಬಹುದು.

ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್

ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ವ್ಯಕ್ತಿಯ ಭಾವನೆಗಳನ್ನು ನಿರ್ವಹಿಸುವ ರೀತಿ ಮತ್ತು ಸಂದರ್ಭಗಳಿಗೆ ಪ್ರತಿಕ್ರಿಯಿಸುವ ರೀತಿಗಳ ಮೇಲೆ ಪ್ರಭಾವ ಬೀರುತ್ತದೆ. ವ್ಯಕ್ತಿಗೆ ತನ್ನ ಸ್ವಂತ ಅಸ್ತಿತ್ವದ ಬಗ್ಗೆ ಸ್ಪಷ್ಟ ನಿರ್ಧಾರವಿರದಿರಬಹುದು ಅಥವಾ ಆತನು ತನ್ನನ್ನು ತಾನು ಒಂದು ವಿಷಯದ ಜೊತೆ ಗುರುತಿಸಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿರಬಹುದು. ಅವರು ಯಾರ ಜೊತೆ ಒಡನಾಡುತ್ತಿದ್ದಾರೆ ಎಂಬ ಆಧಾರದ ಮೇಲೆ ಅವರ ವ್ಯಕ್ತಿತ್ವದ ಗುಣಸ್ವಭಾವಗಳು ಬದಲಾಗುತ್ತಿರಬಹುದು; ಇದರಿಂದ ಅವರು ಅಸಹಾಯಕರಂತೆಯೂ, ಸದಾ ಇತರರ ಗಮನಸೆಳೆಯಲು ಪ್ರಯತ್ನಿಸುವವರಂತೆಯೂ ಕಾಣಬಹುದು. ಇವರು ತಮ್ಮ ಸುತ್ತಲೂ ನಡೆಯುವ ಘಟನೆಗಳಿಗೆ ಭಾವನಾತ್ಮಕವಾಗಿ ಅತೀ ಸೂಕ್ಷ್ಮವಾಗಿ ಸ್ಪಂದಿಸುತ್ತಾರೆ; ಇದರಿಂದಾಗಿ ತಮ್ಮ ದೈನಂದಿನ ಜೀವನದಲ್ಲಿ ಯಾತನೆಯನ್ನು ಅನುಭವಿಸುತ್ತಾರೆ.

ಶ್ರೇಷ್ಠತೆಯ ಗೀಳಿನ ವ್ಯಕ್ತಿತ್ವದ ಖಾಯಿಲೆ

ತನ್ನ ಬಗ್ಗೆಯೇ ಗೀಳಿರುವ, ತನ್ನ ರೂಪ, ಗುಣಗಳನ್ನು ಪ್ರಶಂಸಿಸುವ, ತನ್ನ ಕುರಿತು ತಾನೇ ಹೆಮ್ಮೆ ಪಡುವ ವ್ಯಕ್ತಿಯನ್ನು ಕುರಿತು ‘ನಾರ್ಸಿಸಿಸ್ಟ್’ ಶಬ್ಧವನ್ನು ಬಳಸುತ್ತಾರೆ.

ನಾರ್ಸಿಸಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್ ಹೊಂದಿದ ವ್ಯಕ್ತಿಯು ತನ್ನ ಕುರಿತು ಅತಿಯಾದ ಗೀಳನ್ನು ಬೆಳೆಸಿಕೊಂಡಿರುತ್ತಾನೆ. ಅಂತವರು ತಮ್ಮ ಸೌಂದರ್ಯ, ಪ್ರಾಮುಖ್ಯತೆ ಮತ್ತು ಹಿರಿಮೆಯ ಕುರಿತ ಕಲ್ಪನೆಯಲ್ಲಿ ಮುಳುಗಿರುತ್ತಾರೆ. ತಾವು ಕೆಲವು ವಿಶೇಷ ಉಪಚಾರ, ಅಧಿಕಾರ, ಶ್ರೀಮಂತಿಕೆ ಮತ್ತು ಯಶಸ್ಸಿಗೆ ಬಾಧ್ಯಸ್ಥರೆಂದು ಭಾವಿಸಿರುತ್ತಾರೆ. ಅವರು ಯಶಸ್ಸು ಮತ್ತು ಅಧಿಕಾರದ ಕಲ್ಪನೆಯಲ್ಲಿ ಎಷ್ಟು ಮುಳುಗಿರುತ್ತಾರೆಂದರೆ, ಅದನ್ನು ನೈಜವಾಗಿ ಸಾಧಿಸಲು ಯಾವ ಶ್ರಮವನ್ನೂ ಹಾಕುವುದಿಲ್ಲ. ಉಳಿದವರ ಮಿತಿಯನ್ನೇ ಬಳಸಿಕೊಂಡು ಇವರು ತಮ್ಮ ಹಿರಿಮೆಯನ್ನು ಎತ್ತಿ ತೋರಿಸುತ್ತಾರೆ. ತಮ್ಮ ಶ್ರೇಷ್ಠತೆಯನ್ನು ಸಾಧಿಸಲು ಉಳಿದವರನ್ನು ಕಡೆಗಣಿಸುತ್ತಾರೆ.

ಉಳಿದವರು ಇವರನ್ನು ಜಂಬದ, ಒಣ ಪ್ರತಿಷ್ಠೆಯ ಮತ್ತು ಅಹಂಕಾರದ ವ್ಯಕ್ತಿಯೆಂದು ಗುರುತಿಸುತ್ತಾರೆ. ಅವರು ಜಂಬದ ವ್ಯಕ್ತಿಗಳೆಂದು ತೋರಿದರೂ, ವಿಮರ್ಶೆಗೆ ಅತೀ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾರೆ. ಈ ರೋಗಿಗಳು ಹಠಾತ್ ಪ್ರವೃತ್ತಿಯವರಾಗಿದ್ದು, ಸದಾಕಾಲ ಇನ್ನೊಬ್ಬರ ಗಮನವನ್ನು ಬಯಸುತ್ತಿರಬಹುದು. ತಾವು ಅರ್ಹರೆಂದು ಭಾವಿಸುವ ಗುರಿಯನ್ನು ಸಾಧಿಸಲು ಇನ್ನೊಬ್ಬರನ್ನು ಬಳಸಿಕೊಳ್ಳಲೂಬಹುದು.

ತಾವು ವಿಶೇಷವಾದ ವ್ಯಕ್ತಿಗಳೆಂಬ ಭಾವನೆ ಮತ್ತು ಸ್ವ-ಕೇಂದ್ರಿತ ಮನೋಭಾವದಿಂದಾಗಿ ಇವರು ಉಳಿದವರೊಡನೆ ಉತ್ತಮ ಬಾಂಧವ್ಯಹೊಂದಲು ವಿಫಲರಾಗುತ್ತಾರೆ.

ಈ ಸಮಸ್ಯೆಗೆ ಸಂಬಂಧಿಸಿದಂತೆ ಮೆಗಲೋಮೇನಿಯಾ (ಶ್ರೇಷ್ಠತೆಯ ಗೀಳು) ಎಂಬ ಶಬ್ಧವನ್ನು ಹಲವು ಬಾರಿ ಉಪಯೋಗಿಸಲಾಗುತ್ತದೆ.

ಬೂಟಾಟಿಕೆಯ ವ್ಯಕ್ತಿತ್ವದ ಖಾಯಿಲೆ

ಹೆಸರೇ ತಿಳಿಸುವಂತೆ, ಹಿಸ್ಟ್ರಿಯೋನಿಕ್ ಪರ್ಸನಾಲಿಟಿ ಡಿಸಾರ್ಡರ್ ಅತ್ಯಂತ ತೀವ್ರವಾದ ಭಾವನೆಗಳು ಮತ್ತು ಗಮನ-ಬಯಸುವ ನಡವಳಿಕೆಯನ್ನು ಸೂಚಿಸುತ್ತದೆ. ಈ ಸಮಸ್ಯೆಯಿರುವ ವ್ಯಕ್ತಿ, ಯಾವುದೇ ಸಮಾವೇಶಗಳಲ್ಲಿ ತಾನೇ ಕೇಂದ್ರಬಿಂದುವಾಗಿರಬೇಕೆಂದು ಬಯಸುತ್ತಾನೆ. ಇದನ್ನು ಸಾಧಿಸಲು ಆ ವ್ಯಕ್ತಿಯು ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಕೂಡಾ ಹಾಕಬಹುದು. ಅವರು ತಮ್ಮ ಖುಷಿ ಅಥವಾ ದುಃಖದ ಭಾವನೆಗಳನ್ನು ಅತಿಶಯವಾದ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಇವರು ಸದಾಕಾಲ ಇನ್ನೊಬ್ಬರ ಗಮನ ಮತ್ತು ಅನುಮೋದನೆಯನ್ನು ಇದಿರು ನೋಡುತ್ತಾರೆ. ಅವರ ಉಡುಗೆತೊಡುಗೆಗಳಲ್ಲಿ, ನಡವಳಿಕೆಯಲ್ಲಿ (ಭಾವನೆಗಳ ನಾಟಕೀಯ ಪ್ರದರ್ಶನ, ಹೊಗಳುವುದು, ಫ್ಲರ್ಟ್ ಮಾಡುವುದು ಇತ್ಯಾದಿ), ಅಪಾಯವನ್ನು ಅರಿಯದೇ ಹಠಾತ್ ನಿರ್ಧಾರವನ್ನು ಕೈಗೊಳ್ಳುವಲ್ಲಿ (ಆತ್ಮಹತ್ಯೆ) ಕಂಡುಬರುತ್ತದೆ.

ಅವರ ಸಂಬಂಧಗಳಲ್ಲಿ ಕೂಡಾ ಅವರು ಇಲ್ಲದಿರುವ ಆತ್ಮೀಯತೆಯನ್ನು ಕಲ್ಪಿಸಿಕೊಳ್ಳಬಹುದು – ಯಾರೋ ಒಬ್ಬರು ಇವರನ್ನು ಕೇವಲ ಪರಿಚಿತರೆಂದು ಭಾವಿಸಿದ್ದರೂ ಸಹ ಇವರು ಮಾತ್ರ ಅವರನ್ನು ಅತ್ಯಂತ ಆಪ್ತ ಸ್ನೇಹಿತರೆಂದು ಪರಿಗಣಿಸುತ್ತಿರಬಹುದು. ಅವರ ಭಾವನೆಗಳಲ್ಲಿರುವ ಉತ್ಪ್ರೇಕ್ಷೆಯಿಂದ ಅವರ ನಡವಳಿಕೆಯನ್ನು ಕೇವಲ ತೋರಿಕೆ ಮತ್ತು ಕಪಟವೆಂದು ಇತರರು ಭಾವಿಸಬಹುದು. ಆದ್ದರಿಂದ ಉಳಿದವರು ಇವರನ್ನು ಚಂಚಲ ಸ್ವಭಾವದವರೆಂದೂ ಮತ್ತು ಸುಲಭವಾಗಿ ಪ್ರಭಾವಕ್ಕೆ ಒಳಪಡುವವರೆಂದೂ ತೀರ್ಮಾನಿಸಬಹುದು. ಅವರು ಅಲ್ಪಾವಧಿಗೆ ಮಾತ್ರ ಒಂದು ವಿಷಯದಲ್ಲಿ ಗಮನವನ್ನು ಕೇಂದ್ರಿಕರಿಸಬಲ್ಲವರಾಗಿದ್ದು, ಒಂದು ಕೆಲಸದಲ್ಲಿ ಬಹುಕಾಲ ಉಳಿಯಲಾರರು. ಅವರು ರಂಜನೆಯನ್ನು ಬಯಸುತ್ತಾರೆ ಮತ್ತು ತಾವು ಕೇಂದ್ರಬಿಂದುವಲ್ಲದ ಸಂದರ್ಭದಲ್ಲಿ ಶಾಂತಿಯಿಂದ ಇರಲಾರರು.

Q

‘ಸಿ’ ಗುಂಪು: ಆತಂಕ ಮತ್ತು ಭಯದ ನಡುವಳಿಕೆ

A

ಈ ಗುಂಪಿನಲ್ಲಿರುವ ಖಾಯಿಲೆಗಳನ್ನು ಆತಂಕ, ನಿರ್ಭಂಧಪಡಿಸುವ ಮತ್ತು ಅಬ್ಸೆಸಿವ್ ಕಂಪಲ್ಸಿವ್ ಹಾಗೂ ಪ್ರತ್ಯೇಕತೆಯ ನಡವಳಿಕೆಯಿಂದ ಗುರುತಿಸಲಾಗುತ್ತದೆ. ವ್ಯಕ್ತಿಗಳಿಗೆ ತಮ್ಮ ಸಾಮರ್ಥ್ಯದ ಕುರಿತಾಗಿರುವ ಸಂಶಯದಿಂದ ಮೂಡುವ ಆತಂಕ ಮತ್ತು ಇದರಿಂದ ಅವರ ಕಾರ್ಯಚಟುವಟಿಕೆಯಲ್ಲಾಗುವ ತೊಂದರೆಗಳು ಈ ವಿಭಾಗದ ಪ್ರಮುಖ ಲಕ್ಷಣಗಳು.

ಪಲಾಯನ ವ್ಯಕ್ತಿತ್ವದ ಖಾಯಿಲೆ

ಈ ವ್ಯಕ್ತಿತ್ವದ ಖಾಯಿಲೆ ಇರುವ ವ್ಯಕ್ತಿಗಳು ಬೇರೆಯವರು ತಮ್ಮ ಬಗ್ಗೆ ಏನೆಂದು ಯೋಚಿಸಬಹುದೆಂಬ ಬಗ್ಗೆ ಅತಿಯಾಗಿ ಚಿಂತಿಸುತ್ತಾರೆ. ಉಳಿದವರು ತಮ್ಮನ್ನು ಋಣಾತ್ಮಕವಾಗಿ ಪರಿಗಣಿಸಬಹುದೆಂಬ, ತಮ್ಮ ನ್ಯೂನತೆಯನ್ನು ಗುರುತಿಸುವರೆಂಬ ಮತ್ತು ತಮ್ಮನ್ನು ಅನುಪಯುಕ್ತವೆಂದು ತೀರ್ಮಾನಿಸಬಹುದೆಂಬ ಕುರಿತು ಭಯಭೀತರಾಗಿರುತ್ತಾರೆ. ಇದರಿಂಧ ಜನರ ನಡುವೆ ಇರುವಾಗ ಅವರು ಆತಂಕದಿಂದ ತೊಳಲಾಡುತ್ತಾರೆ.

ಪಲಾಯನ ವ್ಯಕ್ತಿತ್ವದ ಖಾಯಿಲೆಯಿರುವವರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆತ್ಮಗೌರವವನ್ನು ಹೊಂದಿರುತ್ತಾರೆ. ತಾವು ಸಾಕಷ್ಟು ಬುದ್ದಿವಂತರಲ್ಲವೆಂಬ, ಒಳ್ಳೆಯವರಲ್ಲವೆಂಬ, ಶ್ರೀಮಂತರಲ್ಲವೆಂಬ ಮತ್ತು ಉಪಯುಕ್ತವಾದವರಲ್ಲವೆಂಬ ನಂಬಿಕೆಯಲ್ಲಿ ಸಿಲುಕಿರುತ್ತಾರೆ. ತಮಗಿಂತ ಶ್ರೇಷ್ಠವೆಂದು ಭಾವಿಸುವ ವ್ಯಕ್ತಿಗಳ ಜೊತೆ ಮಾತನಾಡಲು ಹಿಂಜರಿಯುತ್ತಾರೆ (ಇದು ನಿಜವಿಲ್ಲದಿರಬಹುದು). ಅವರು ಸಂವಹನ ಮತ್ತು ಸಂಪರ್ಕಕ್ಕೆ ಹಾತೊರೆಯುತ್ತಿದ್ದರೂ, ವಿಮರ್ಶೆ ಮತ್ತು ನಿರಾಕರಣೆಯ ಕುರಿತು ಭಯಭೀತರಾಗಿರುತ್ತಾರೆ. ಜನರು ತಮ್ಮನ್ನು ಜಡ್ಜ್ ಮಾಡುವರೆಂಬ ಕಾರಣಕ್ಕೆ ಸಾಮಾಜಿಕ ಸಂವಹನಕ್ಕೆ ಹೆದರುತ್ತಾರೆ. ಅವರು ವಿಮರ್ಶೆಯನ್ನು ಎಷ್ಟು ಸೂಕ್ಷ್ಮವಾಗಿ ಪರಿಗಣಿಸುತ್ತಾರೆಂದರೆ, ಅವರ ಯಾವುದೇ ಕೆಲಸದ ಕುರಿತು ಬಂದ ವಿಮರ್ಶೆಯನ್ನು ತಮ್ಮ ಬಗೆಗಿನ ನಿರಾಕರಣೆಯೆಂದು ಭಾವಿಸುತ್ತಾರೆ. ಜನರು ಅವರನ್ನು ನಾಚಿಕೆಯ, ಬಿರುಸಿನ ಮತ್ತು ಭಾವನಾತ್ಮಕವಾಗಿ ವಿಭಿನ್ನ ವ್ಯಕ್ತಿಯೆಂದು ತಿಳಿಯುತ್ತಾರೆ.

ಅವಲಂಬಿತ ವ್ಯಕ್ತಿತ್ವದ ಖಾಯಿಲೆ

ಅವಲಂಬಿತ ವ್ಯಕ್ತಿತ್ವದ ಖಾಯಿಲೆ ಇರುವ ವ್ಯಕ್ತಿಗಳು ತಮ್ಮ ಸುತ್ತಲಿರುವವರ ಮೇಲೆ ಅವಲಂಬಿತರಾಗಿರುತ್ತಾರೆ. ಅವರು ನಿರ್ಧಾರಗಳನ್ನು ತೆಗೆದುಕೊಳ್ಳಲು ತಾವು ಅಸಮರ್ಥರೆಂದೂ ತಿಳಿದಿರುತ್ತಾರೆ ಮತ್ತು ತಮ್ಮದೇ ಕಾಳಜಿಯ ಕುರಿತ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೆದರುತ್ತಾರೆ. ಅವರು ಬೆಂಬಲಕ್ಕಾಗಿ ವಿಧೇಯರಾಗಿರಲು ತಯಾರಾಗುತ್ತಾರಲ್ಲದೇ ತಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡುತ್ತಾರೆ. ತಾವೇ ಸ್ವತಃ ಏನಾದರೂ ಮಾಡಬೇಕಾದಲ್ಲಿ ಅಸಹಾಯಕತೆಯಿಂದ ಬಳಲುತ್ತಾರೆ. ಅವರ ಕಾಳಜಿಯನ್ನು ವಹಿಸಲು ನಿರಂತರವಾಗಿ ಇನ್ನೊಬ್ಬರ ಬೆಂಬಲವನ್ನು ಬಯಸುತ್ತಾರೆ. ಉಳಿದವರು ಇವರನ್ನು ಅಂಟಿಕೊಳ್ಳುವ ಮತ್ತು ಅಸಹಾಯಕ ಪ್ರವೃತ್ತಿಯವರೆಂದು ಭಾವಿಸುತ್ತಾರೆ. ಇವರು ಸಂಬಂಧವನ್ನು ಕಳೆದುಕೊಳ್ಳುವ ಭಯದಲ್ಲಿ ಕೆಟ್ಟ ಉಪಚಾರ ಮತ್ತು ಹಿಂಸೆಗೆ ಒಳಗಾಗುತ್ತಾರೆ. ಇವರು ಆತಂಕದ ಸಮಸ್ಯೆಗಳು ಮತ್ತು ಖಿನ್ನತೆಗೆ ಒಳಗಾಗುವ ಸಂಭವವೂ ಜಾಸ್ತಿಯಿರುತ್ತದೆ.

ಗೀಳು ಮನೋಭಾವದ ವ್ಯಕ್ತಿತ್ವದ ಖಾಯಿಲೆ / ಅನಂಕಾಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್

ಗೀಳು ಮನೋಭಾವದ ವ್ಯಕ್ತಿತ್ವದ ಖಾಯಿಲೆ (ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್) ಇರುವ ವ್ಯಕ್ತಿಗಳು ಒಂದು ವಿಷಯವನ್ನು ಹೇಗೆ ನಿರ್ವಹಿಸಬೇಕೆಂಬ ವಿಷಯದಲ್ಲಿ ತಮ್ಮದೇ ಆದ ಕಠಿಣ ನಿಲುವನ್ನು ಹೊಂದಿರುತ್ತಾರೆ. ಅವರು ಎಲ್ಲವೂ ಪರಿಪೂರ್ಣವಾಗಿರಬೇಕೆಂದು ನಿರೀಕ್ಷಿಸುತ್ತಾರೆ ಮತ್ತು ಅದನ್ನು ಸಾಧಿಸಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಅವರು ಎಷ್ಟು ಕಾಠಿಣ್ಯದಿಂದ ವರ್ತಿಸುತ್ತಾರೆಂದರೆ: ಒಂದು ಕೆಲಸವು ಪೂರ್ತಿಯಾದರೆ ಸಾಲದು; ಇದು ಅವರು ನಿರ್ಧರಿಸದ ಮಟ್ಟವನ್ನು ಸಾಧಿಸಿರಬೇಕು, ಆ ಮಟ್ಟಕ್ಕಿಂತ ಕೆಳಗಿದ್ದಲ್ಲಿ ಅವರು ಚಿಂತಿತರಾಗುತ್ತಾರೆ. ಅದಕ್ಕಾಗಿ ಇವರ ತಮ್ಮ ಮನರಂಜನೆ, ವಿರಾಮ ಮತ್ತು ದೈಹಿಕ ಆರೋಗ್ಯವನ್ನು ಸಹ ಬದಿಗಿಟ್ಟು ತಾವು ಅಂದುಕೊಂಡಂತೆ ಕೆಲಸವನ್ನು ಮುಗಿಸಬಲ್ಲರು. ಇದರಿಂದ ಅವರು ಜವಾಬ್ದಾರಿಯನ್ನು ಹಂಚದೇ, ತಮ್ಮ ಕೈಲಾಗದಷ್ಟು ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಅವರು ಕೆಲಸದ ಗೀಳನ್ನು ಎಷ್ಟು ಹಚ್ಚಿಕೊಂಡಿರುತ್ತಾರೆಂದರೆ, ತಮ್ಮ ವೈಯಕ್ತಿಕ ಬದುಕನ್ನು ಸಹ ನಿರ್ಲಕ್ಷಿಸಿ ವೃತ್ತಿಬದುಕಿನಲ್ಲಿ ಪರಿಪೂರ್ಣತೆಯನ್ನು ತರಲು ಬಯಸುತ್ತಾರೆ.

ಗೀಳು ಮನೋಭಾವದ ವ್ಯಕ್ತಿತ್ವದ ಖಾಯಿಲೆ ಇರುವ ವ್ಯಕ್ತಿ ನಿಯಮ ಮತ್ತು ಕಾಯಿದೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಹುದು. ಕೆಲಸವು ಯಾವ ರೀತಿಯಲ್ಲಿ ನಡೆಯಬೇಕೆಂಬುದನ್ನು ನಿರ್ಧರಿಸಲು ಅವರು ನಿಯಮಗಳನ್ನು ರೂಪಿಸಬಹುದು, ಪಟ್ಟಿಯನ್ನು ತಯಾರಿಸಿಕೊಡಬಹುದು ಮತ್ತು ಕಟ್ಟುನಿಟ್ಟಾಗಿ ಪಾಲಿಸಬೇಕಾದಂತಹ ವೇಳಾಪಟ್ಟಿಯನ್ನು ನಿಗದಿಪಡಿಸಬಹುದು. ಅವರು ಹಣವನ್ನು ಕಳೆದುಕೊಳ್ಳಲು ಹೆದರುವುದರಿಂದ ಮತ್ತು ಹಣವನ್ನು ಹೇಗೆ ವಿನಿಯೋಗಿಸಬೇಕೆಂಬ ಬಗ್ಗೆ ಸಾಕಷ್ಟು ನಿಯಂತ್ರಣ ಹೇರಿಕೊಳ್ಳುವುದರಿಂದ ಜಿಪುಣರಂತೆ ತೋರಬಹುದು. ಆ ವ್ಯಕ್ತಿಗೆ ತನ್ನ ನಡವಳಿಕೆಯು ಅತಾರ್ಕಿಕವೂ, ಅಸಮಂಜಸವೂ ಎನಿಸಿದರೂ ಅದನ್ನು ಬದಲಾಯಿಸಿಕೊಳ್ಳಲಾರರು.

Q

ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಮತ್ತು ಅಬ್ಸೆಸಿವ್ ಕಂಪಲ್ಸಿವ್ ಪರ್ಸನಾಲಿಟಿ ಡಿಸಾರ್ಡರ್ ನಡುವಿನ ವ್ಯತ್ಯಾಸಗಳು

A

ಒಂದೇ ತೆರನಾದ ಲಕ್ಷಣಗಳು ಮತ್ತು ನಡವಳಿಕೆಯಿಂದಾಗಿ ಅಬ್ಸೆಸಿವ್ ಕಂಪಲ್ಸಿವ್ ಪರ್ಸನಾಲಿಟಿ ಡಿಸಾರ್ಡರ್ ಅನ್ನು ಕೆಲವೊಮ್ಮೆ ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಜೊತೆಗೆ ತಪ್ಪಾಗಿ ಭಾವಿಸುತ್ತಾರೆ.

ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ ಹೊಂದಿರುವ ಓರ್ವ ವ್ಯಕ್ತಿ ತನ್ನ ಸಹಜ ಒಲವುಗಳಿಗೆ ವಿರುದ್ಧವಾದ ಪ್ರಚೋದನೆಗಳಿಂದ ಉಂಟಾದ ವೇದನೆಯನ್ನು ತಪ್ಪಿಸಿಕೊಳ್ಳಲು ಅದೇಅದೇ ವರ್ತನೆಗಳನ್ನು ಪುನರಾವರ್ತಿಸುತ್ತಿರುತ್ತಾನೆ. ಅಬ್ಸೆಸಿವ್ ಕಂಪಲ್ಸಿವ್ ಪರ್ಸನಾಲಿಟಿ ಡಿಸಾರ್ಡರ್ ಇರುವ ವ್ಯಕ್ತಿಯಲ್ಲಿ ಈ ರೀತಿಯ ಯಾವುದೇ ಬಲವಂತದ ಕ್ರಿಯೆಗಳಿರುವುದಿಲ್ಲ. ಅವರು ನಿಯಂತ್ರಣವನ್ನು ಕಳೆದುಕೊಳ್ಳುವ ಮತ್ತು ಅಪೂರ್ಣವೆಂದು ತೀರ್ಮಾನಿಸಲಾಗುವ ಭಯದಿಂದ ಕೆಲವು ನಿರ್ದಿಷ್ಟ ನಡವಳಿಕೆಯನ್ನು ತೋರಿಸುತ್ತಾರೆ. ಒಂದುವೇಳೆ ಫಲಿತಾಂಶವನ್ನು ನಿಯಂತ್ರಿಸಲು ಸಾಧ್ಯವಾಗದೆಂದು ತಿಳಿದರೆ ಅವರು ಗಾಬರಿಗೊಳ್ಳುತ್ತಾರೆ. ಎರಡೂ ಕೇಸುಗಳಲ್ಲಿ ಆತಂಕವೇ ಈ ನಡವಳಿಕೆಗೆ ಕಾರಣವಾಗಿರುತ್ತದೆ. ಒಸಿಡಿ ಹೊಂದಿದ ವ್ಯಕ್ತಿಗೆ ಕೆಲವು ಕಾರ್ಯಗಳನ್ನು ನಿರ್ವಹಿಸಬೇಕಾಗಿರುವ ಕುರಿತು ಆತಂಕವಿದ್ದರೆ, ಒಸಿಪಿಡಿ ಇರುವ ವ್ಯಕ್ತಿಗಳು ತಮ್ಮ ನಡುವಳಿಕೆಯ ಕಾರಣದಿಂದ ಆತಂಕಕ್ಕೆ ಒಳಗಾಗುತ್ತಾರೆ (ಹೆಚ್ಚಿನ ವೇಳೆ, ಅವರ ಪರಿಪೂರ್ಣತೆಯ ಸ್ವಬಾವ ಅಥವಾ ಕೆಲಸವು ಹೇಗೆ ನಡೆಯಬೇಕೆಂಬ ಅವರ ಕಠಿಣ ನಿಲುವಿನಿಂದಲೇ ಆತಂಕವುಂಟಾಗುತ್ತದೆ).

ಒಸಿಡಿ ಇರುವ ವ್ಯಕ್ತಿಗೆ ತನ್ನ ನಡವಳಿಕೆಯು ಅತಾರ್ಕಿಕ ಮತ್ತು ವಿಲಕ್ಷಣವಾದ್ದೆಂದು ತಿಳಿದಿರುತ್ತದೆ. ಆದರೆ ಒಸಿಪಿಡಿಯಲ್ಲಿ ವ್ಯಕ್ತಿಗೆ ತನ್ನ ನಡವಳಿಕೆಯು ಅಸಹಜವಾದದ್ದೆಂದು ತಿಳಿದಿರುವುದಿಲ್ಲ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org