ಆಲ್ಜೈಮರ್ಸ್‌ ಖಾಯಿಲೆಯನ್ನು ಅರಿಯುವುದು

Q

ಆಲ್ಜೈಮರ್ಸ್‌ ಖಾಯಿಲೆಯಿಂದ ಮೆದುಳಿಗೆ ಏನಾಗುತ್ತದೆ?

A

ಆಲ್ಜೈಮರ್ಸ್‌ ಖಾಯಿಲೆ ಹೇಗೆ ಶುರುವಾಗುತ್ತದೆ ಎಂದು ತಿಳಿದಿಲ್ಲವಾದರೂ, ಖಾಯಿಲೆಯ ಲಕ್ಷಣಗಳು ಕಾಣಿಸುವ ಹತ್ತು ಅಥವಾ ಅದಕ್ಕೂ ಹೆಚ್ಚು ವರ್ಷಗಳ ಮೊದಲು ಮಿದುಳಿಗೆ ಹಾನಿಯಾಗತೊಡಗುತ್ತದೆ. ಆರಂಭದಲ್ಲಿ ವ್ಯಕ್ತಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಮಿದುಳಿನಲ್ಲಿ ವಿಷಮ ಬದಲಾವಣೆಗಳು ಆರಂಭವಾಗಿರುತ್ತವೆ. ಸಮಯ ಕಳೆದಂತೆ ನರಗಳು ಸಂದೇಶಗಳನ್ನು ರವಾನಿಸುವ ಶಕ್ತಿ ಕಳೆದುಕೊಳ್ಳುತ್ತಾ ನಿಧಾನವಾಗಿ ನಾಶವಾಗುತ್ತವೆ.

ಬಹು ಬೇಗ ಮಿದುಳಿನಲ್ಲಿ ಉಂಟಾಗುವ ಹಾನಿಯು ನೆನಪುಗಳನ್ನು ಸೃಷ್ಟಿಸುವ ಹಿಪ್ಪೊಕ್ಯಾಂಪಸ್‌ ಪ್ರದೇಶಕ್ಕೆ ವ್ಯಾಪಿಸುತ್ತದೆ. ಹೆಚ್ಚು ನ್ಯೂರಾನ್‌ಗಳು ಹಾನಿಯಾದಂತೆ ಮಿದುಳಿನಲ್ಲಿ ಹಾನಿಗೊಳಗಾದ ಭಾಗ ಕುಗ್ಗತೊಡಗುತ್ತದೆ. ಆಲ್ಜೈಮರ್ಸ್‌ನ ಅಂತಿಮ ಹಂತದಲ್ಲಿ ಮಿದುಳಿನ ಇತರೆ ಭಾಗಗಳು ಹಾನಿಗೊಂಡು ವ್ಯಕ್ತಿ ಸಂಪೂರ್ಣವಾಗಿ ನೆನಪಿನ ಶಕ್ತಿ ಕಳೆದುಕೊಂಡು ಆರೈಕೆದಾರರ ಮೇಲೆ ಅವಲಂಬಿತರಾಗುತ್ತಾರೆ.

Q

ಆಲ್ಜೈಮರ್ಸ್‌ ಖಾಯಿಲೆಯೊಂದಿಗೆ ವ್ಯಕ್ತಿ ಎಷ್ಟು ಕಾಲ ಬದುಕಬಹುದು?

A

ಆಲ್ಜೈಮರ್ಸ್‌ ಖಾಯಿಲೆಯು ನಿಧಾನವಾಗಿ 3 ಹಂತಗಳಲ್ಲಿ ಬೆಳವಣಿಗೆ ಕಾಣುತ್ತದೆ. ಯಾವುದೇ ಲಕ್ಷಣಗಳಿಲ್ಲದ ಆರಂಭಿಕ ಹಂತ, ಸ್ವಲ್ಪ ಅರಿವಿನ ಸಮಸ್ಯೆ ಹೊಂದಿದ ಎರಡನೇ ಹಂತ ಮತ್ತು ಸಂಪೂರ್ಣವಾಗಿ ನೆನಪಿನ ಶಕ್ತಿ ನಷ್ಟವಾಗುವ ಅಂತಿಮ ಹಂತ. ಸಮಸ್ಯೆ ಪತ್ತೆ ಆದಾಗ ವ್ಯಕ್ತಿಗೆ 80 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ 3 ರಿಂದ 4 ವರ್ಷ, ಅದಕ್ಕೂ ಮೊದಲೇ ಸಮಸ್ಯೆ ಕಾಣಿಸಿಕೊಂಡರೆ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬದುಕಿರಬಹುದು.

Q

ಡಿಮೆನ್ಶಿಯಾ (ಮರೆಗುಳಿತನ) ಎಂದರೇನು?

A

ನೆನಪಿನ ಶಕ್ತಿ, ವರ್ತನೆ, ತರ್ಕ, ಯೋಚನೆ ಮುಂತಾದ ಅರಿವಿನ ಸಮಸ್ಯೆಗಳಾಗಿ ಕಾಣಿಸಿಕೊಳ್ಳುವುದು ಡಿಮೆನ್ಶಿಯ (ಮರೆಗುಳಿತನ). ಇದು ಆರಂಭಿಕ ಹಂತದಲ್ಲಿ ವ್ಯಕ್ತಿಯ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಅಡ್ಡಿಯಾಗುತ್ತದೆ. ಸಮಸ್ಯೆ ಗಂಭೀರವಾದಾಗ ವ್ಯಕ್ತಿ ಸಂಪೂರ್ಣವಾಗಿ ಬೇರೆಯವರ ಮೇಲೆ ಅವಲಂಬಿತರಾಗಬೇಕಾಗುತ್ತದೆ.

ಸಾಕಷ್ಟು ಕಾರಣಗಳು ಮತ್ತು ಖಾಯಿಲೆಗಳಿಂದ ಇಳಿವಯಸ್ಸಿನ ಮರೆಗುಳಿತನ ಆರಂಭವಾಗಬಹುದು. ಅತ್ಯಂತ ಸಾಮಾನ್ಯ ಕಾರಣವೆಂದರೆ ಆಲ್ಜೈಮರ್ಸ್‌ ಖಾಯಿಲೆ. ಲಕ್ವ(ಸ್ಟ್ರೋಕ್) ಅಥವಾ ಮಿದುಳಿನಲ್ಲಿ ರಕ್ತ ಸಂಚಲನದ ಏರುಪೇರಿಂದಾಗಿ ವ್ಯಾಸ್ಕುಲರ್‌ ಡೆಮೆನ್ಶಿಯ ಆರಂಭಗೊಳ್ಳಬಹುದು.

ಮರೆಗುಳಿತನದ ಇತರ ಕಾರಣಗಳು:

·         ಔಷಧಗಳ ಅಡ್ಡ ಪರಿಣಾಮ

·         ತೀವ್ರ ಮದ್ಯಪಾನ

·         ಮಿದುಳಿನಲ್ಲಿ ಉಂಟಾಗುವ ಹುಣ್ಣು ಅಥವಾ ಸೋಂಕು

·         ಮಿದುಳಿಗೆ ತೀವ್ರ ಪೆಟ್ಟು ಅಥವಾ ನ್ಯೂರಾನ್ ಗಳಿಗೆ ಹಾನಿ.

·         ಮಿದುಳಿನಲ್ಲಿ ರಕ್ತ ಹೆಪ್ಪುಗೆಟ್ಟುವಿಕೆ

·         ವಿಟಮಿನ್‌ ಬಿ12 ಕೊರತೆ

·         ಥೈರಾಯ್ಡ್‌, ಕಿಡ್ನಿ ಅಥವಾ ಲಿವರ್‌ ಖಾಯಿಲೆಗಳು.

Q

ಮರೆಗುಳಿತನ ಎಂದು ತಪ್ಪು ತಿಳಿಯುವುದು

A

ಖಿನ್ನತೆ, ಒತ್ತಡ, ಆತಂಕದ ಸಮಸ್ಯೆಗಳಿಂದ ಮರೆವು ಉಂಟಾಗಬಹುದು. ಅದನ್ನು ಮರೆಗುಳಿತನ ಎಂದು ತಪ್ಪು ತಿಳಿಯಬಾರದು. ಉದಾಹರಣೆಗೆ, ಈಗಿನ್ನೂ ನಿವೃತ್ತರಾಗಿರುವವರು ಅಥವಾ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವವರು ದುಃಖ, ಒಂಟಿತನ, ಬೇಜಾರಿನ ಭಾವನೆಗಳನ್ನು ಹೊಂದಿರಬಹುದು. ಈ ಬದಲಾವಣೆಗಳಿಗೆ ಹೊಂದಿಕೊಳ್ಳುವಾಗ ಗೊಂದಲ ಅಥವಾ ಮರೆವು ಸಹಜ. ಮನೆಯವರ ಮತ್ತು ಸ್ನೇಹಿತರ ಬೆಂಬಲ ಈ ಸಮಸ್ಯೆಗಳನ್ನು ಸರಿಪಡಿಸಲು ಸಹಾಯಕ.

Q

ನನಗೆ ಹೆಸರುಗಳು ನೆನಪಿರುವುದಿಲ್ಲ. ನನಗೆ ಆಲ್ಜೈಮರ್ಸ್ ಇದೆಯೇ?

A

ಪ್ರತಿಯೊಬ್ಬರೂ ಏನನ್ನಾದರೂ ಆಗಾಗ ಮರೆಯುತ್ತಾರೆ. ಯಾವಾಗ ಜ್ಞಾಪಕ ಶಕ್ತಿಯ ಕೊರತೆ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತದೆಯೋ ಆಗ ಮಾತ್ರ ನೀವು ವಿಚಾರಿಸುವ ಅಗತ್ಯವಿರುತ್ತದೆ.

Q

ವಯಸ್ಸಾದವರಿಗೆ ಮಾತ್ರ ಆಲ್ಜೈಮರ್ಸ್ ಬರುತ್ತದೆಯೇ?

A

ಆಲ್ಜೈಮರ್ಸ್‌ ಖಾಯಿಲೆಗೆ ತುತ್ತಾಗುವ ಶೇ.50 ರಷ್ಟು ವ್ಯಕ್ತಿಗಳು 75 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟವರು. ಕೆಲವು ಪ್ರಕರಣಗಳಲ್ಲಿ 40-50 ವರ್ಷ ವಯಸ್ಸಿನ ವ್ಯಕ್ತಿಗಳು ಈ ಖಾಯಿಲೆಗೆ ತುತ್ತಾಗಿರಬಹುದು. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org