ಪ್ರಸವಾನಂತರದ ನಿದ್ರೆಯ ಸಮಸ್ಯೆಗಳು

ಪ್ರಸವಾನಂತರದ ನಿದ್ರೆಯ ಸಮಸ್ಯೆಗಳು

ಹೆಚ್ಚಿನ ತಾಯಂದಿರಿಗೆ ಸರಿಯಾಗಿ ನಿದ್ರಿಸುವುದು ಅಥವಾ ವಿಶ್ರಾಂತಿ ಪಡೆಯುವುದು ಸಾಧ್ಯವಾಗದ ಕಾರಣ ಅವರ ಭಾವನಾತ್ಮಕ ಯಾತನೆಯು ಜಾಸ್ತಿಯಾಗುತ್ತದೆ.

ಮಗುವಿಗೆ ಜನ್ಮ ನೀಡುವುದು ತಾಯಿಗೆ ದೈಹಿಕ ಮತ್ತು ಮಾನಸಿಕ ಶ್ರಮವನ್ನುಂಟು ಮಾಡುತ್ತದೆ. ಇದರಿಂದ ಚೇತರಿಸಿಕೊಳ್ಳಲು ಆಕೆಗೆ ನಿದ್ರೆ ಮತ್ತು ವಿಶ್ರಾಂತಿಯ ಅಗತ್ಯವಿರುತ್ತದೆ. ಆದರೆ ಹೆಚ್ಚಿನ ತಾಯಂದಿರಿಗೆ ಸರಿಯಾಗಿ ನಿದ್ರಿಸುವುದು ಅಥವಾ ವಿಶ್ರಾಂತಿ ಪಡೆಯುವುದು ಸಾಧ್ಯವಾಗದ ಕಾರಣ ಅವರ ಭಾವನಾತ್ಮಕ ಯಾತನೆಯು ಜಾಸ್ತಿಯಾಗುತ್ತದೆ.

ಜತೆಗೆ ಮಗುವಿನ ಆರೋಗ್ಯದ ಕುರಿತ ಆತಂಕ ಮತ್ತು ಮಗುವು ಸರಿಯಾಗಿ ನಿದ್ರಿಸುತ್ತಿದೆಯೇ ಎಂಬ ಯೋಚನೆಗಳೂ ಮುತ್ತಿಕೊಂಡು ತಾಯಿ ವಿಶ್ರಮಿಸಲು ಸಾಧ್ಯವಾಗದಿರಬಹುದು. ಕೆಲವು ತಾಯಂದಿರು ನಿದ್ರೆಯಲ್ಲಿ ತಾವು ಮಗುವಿಗೆ ಹಾನಿಮಾಡಬಹುದೆಂಬ ಭಯಕ್ಕೆ ಒಳಗಾಗಬಹುದು. ಕೆಲವರು ತಮ್ಮ ಬಳಲಿಕೆ ಮತ್ತು ಆಯಾಸದ ಅವಧಿಯನ್ನು ಸಮರ್ಥವಾಗಿ ನಿಭಾಯಿಸಿ ಆರೋಗ್ಯಕರ ನಿದ್ರೆಯನ್ನು ರೂಢಿಸಿಕೊಳ್ಳಬಹುದು. ಆದರೆ ಇನ್ನೂ ಅನೇಕರಿಗೆ ಆರೋಗ್ಯಕರ ನಿದ್ರೆಯ ಅಭ್ಯಾಸಕ್ಕೆ ಮರಳಲು ಕಷ್ಟವಾಗಬಹುದು.  ತಮಗೂ ಬಳಲಿಕೆಯಾಗಿದ್ದು, ಮಗುವೂ ಕೂಡ ಆರಾಮದಾಯಕವಾಗಿ ನಿದ್ರಿಸುತ್ತಿರುವಾಗಲೂ ತಾಯಂದಿರು ನಿದ್ರಿಸಲಾಗದ ಪರಿಸ್ಥಿತಿಗೆ ಪ್ರಸವಾನಂತರದ ನಿದ್ರಾಹೀನತೆ ಎನ್ನುತ್ತಾರೆ. ಅವರು ಯಾವಾಗಲೂ ಜಾಗೃತರಾಗಿದ್ದು ಮಗುವನ್ನು ನಿದ್ರೆಯ ವೇಳೆಯಲ್ಲೂ ಗಮನಿಸುತ್ತಿರುತ್ತಾರೆ. ತಾವು ನಿದ್ರಿಸಿದರೆ ಮಗುವಿನ ಅಳುವು ಕೇಳದೇ ಹೋಗಬಹುದೆಂಬ ಚಿಂತೆಯಲ್ಲಿರುತ್ತಾರೆ. ಕೆಲವೊಮ್ಮೆ ನಿದ್ರಿಸಿದರೂ ಸಹಿತ ‘ಕಾಲ್ಪನಿಕ ಧ್ವನಿ’ಯನ್ನು ಕೇಳಿ ಎದ್ದೇಳಬಹುದು: ಮಗುವು ನಿದ್ರಿಸುತ್ತಿರುವಾಗಲೂ ಅದು ಅಳುತ್ತಿರಬಹುದೆಂಬ ಕಲ್ಪನೆ.  ಪ್ರಸವಾನಂತರದ ನಿದ್ರಾಹೀನತೆಯನ್ನು ಪ್ರಸವಾನಂತರದ ಖಿನ್ನತೆಗೆ ತಳುಕು ಹಾಕಲಾಗುತ್ತದೆ. ಕೆಲವೊಮ್ಮೆ ನಿದ್ರಾಹೀನತೆಯ ಸಮಸ್ಯೆ ಮಾತ್ರ  ಕಂಡುಬರಬಹುದು.

ನಿಮ್ಮ ನಿದ್ರೆಯು ಸುಧಾರಿಸಲು ಏನು ಮಾಡಬಹುದು:
ಮಗುವಿನ ಜನನದ ನಂತರ ನೀವು ಸರಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿಲ್ಲವಾದಲ್ಲಿ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಈ ಕೆಳಗಿನ ಸಂಗತಿಗಳನ್ನು ಪ್ರಯತ್ನಿಸಿ:

  • ಕೆಫಿನ್ ಯುಕ್ತ ಪದಾರ್ಥಗಳನ್ನು ವರ್ಜಿಸಿ:
    ಕೆಫಿನ್ ನಿಮ್ಮ ನಿದ್ರೆಗೆ ಅಡಚಣೆಯುಂಟು ಮಾಡುವುದರಿಂದ ಮುಖ್ಯವಾಗಿ ದಿನದ ಅಂತ್ಯದ ವೇಳೆಗೆ  ಕೆಫಿನ್ ಯುಕ್ತ ಪದಾರ್ಥಗಳನ್ನು ಸೇವಿಸಬೇಡಿ.
  • ನಿದ್ರೆಯ ಸಮಯನ್ನು ಯೋಜಿಸಿ:
    ನಿದ್ರಿಸಲು ತೆರಳುವ ಮುನ್ನ ಮಾನಸಿಕವಾಗಿ ಹಗುರಾಗಿ. ಬೆಚ್ಚನೆಯ ಸ್ನಾನ, ಪುಸ್ತಕವನ್ನು ಓದುವುದು ಅಥವಾ ಹಿತವಾದ ಸಂಗೀತವನ್ನು ಆಲಿಸುವುದರಿಂದ ನಿಮಗೆ ಆರಾಮವೆನಿಸಿ ಮನಸ್ಸು ಮತ್ತು ದೇಹ ನಿದ್ರೆಗೆ ಅಣಿಯಾಗುತ್ತದೆ.
  • ವಿಶ್ರಾಮದ ತಂತ್ರಗಳು:
    ದೀರ್ಘವಾದ ಉಸಿರಾಟ ಮತ್ತು ಸ್ನಾಯುಗಳಿಗೆ ವಿಶ್ರಾಂತಿ ನೀಡುವ ತಂತ್ರಗಳು ನಿಮ್ಮ ದೇಹಕ್ಕೆ ದೈಹಿಕ ವಿಶ್ರಾಂತಿ ನೀಡಬಹುದು.
  • ಸಂಗಾತಿಯ ಸಹಾಯ:
    ನಿಮ್ಮ ಪತಿ ಅಥವಾ ಸಂಗಾತಿಯು ನೀವು ಚೆನ್ನಾಗಿ ನಿದ್ರಿಸಲು ಬಹಳಷ್ಟು ಸಹಾಯ ಮಾಡಬಹುದು. ಮಸಾಜ್ ಮಾಡುವುದರಿಂದ ನಿಮಗೆ ದೈಹಿಕ ಆರಾಮ ದೊರೆಯುತ್ತದೆ. ‘ರಾತ್ರಿಯ ಕರ್ತವ್ಯ’ಗಳನ್ನು ಹಂಚಿಕೊಳ್ಳುವುದರಿಂದ ಅಥವಾ ದಿನ ಬಿಟ್ಟು ದಿನ ಒಬ್ಬರು ಮಗುವನ್ನು ನೋಡಿಕೊಳ್ಳುವುದರಿಂದ ನಿಮಗೆ ವಿಶ್ರಾಂತಿ ದೊರೆಯುತ್ತದೆ.

ಮುಖ್ಯವಾಗಿ ನಿಮ್ಮ ನಿದ್ರೆಯ ಸಮಸ್ಯೆಯ ಬಗ್ಗೆ ವೈದ್ಯರಲ್ಲಿ ಚರ್ಚಿಸಿ. ಅವರು ನಿಮಗೆ ಸರಿಯಾದ ಮಾರ್ಗವನ್ನು ಸೂಚಿಸಬಹುದು. ನಿಮ್ಮ ವೈದ್ಯರ ಸಲಹೆ ಪಡೆಯದೇ ನಿದ್ರೆಯ ಪ್ರಚೋದಕಗಳನ್ನು ತೆಗೆದುಕೊಳ್ಳಬೇಡಿ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org