ಮಾನಸಿಕ ಖಾಯಿಲೆಗಳು

ಕಳೆದ 100 ವರ್ಷಗಳಲ್ಲಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹವಾದ ಪ್ರಗತಿಯುಂಟಾಗಿದೆ. ಗಮನ ಹರಿಸಬೇಕಾದ ಮತ್ತು ಚಿಕಿತ್ಸೆ ನೀಡಬೇಕಾದ ವಿವಿಧ ಪ್ರಕಾರಗಳ ಮಾನಸಿಕ ಸ್ಥಿತಿಗತಿಗಳನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಅನೇಕ ವೈಜ್ಞಾನಿಕ ಸಂಶೋಧನೆಗಳು ಮತ್ತು ನಡುವಳಿಕೆಯ ಕುರಿತಾದ ಅಧ್ಯಯನಗಳು ನಡೆಸಲ್ಪಟ್ಟಿವೆ. ವ್ಯಕ್ತಿಯೋರ್ವನು ಪ್ರಕಟಪಡಿಸುವ ಗುಣಲಕ್ಷಣಗಳ ಸಮೂಹವನ್ನು ಆಧರಿಸಿ, ಆತನು ನಿರ್ದಿಷ್ಟವಾದ  ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ವೃತ್ತಿಪರರು ಪತ್ತೆಮಾಡಬಹುದು. ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಪ್ರಗತಿಯ ಪರಿಣಾಮವಾಗಿ ಈಗ ನಿರ್ದಿಷ್ಟವಾದ ಖಾಯಿಲೆಗೆ ಮೆದುಳಿನ ಯಾವ ಭಾಗ ಕಾರಣವಾಗಿದೆ ಎಂದು ಕೂಡ ತಿಳಿಯಬಹುದು.

ಜಾಗತಿಕವಾಗಿ, ಮಾನಸಿಕ ಆರೋಗ್ಯ ಅಸ್ವಸ್ಥತೆಗಳನ್ನು ಗುರುತಿಸಿ ವಿಭಾಗಿಸುವ ಪ್ರಮುಖ ಎರಡು ಪದ್ಧತಿಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ ‘ದ ಇಂಟರ್ ನ್ಯಾಶನಲ್ ಕ್ಲಾಸಿಫಿಕೇಶನ್ ಆಫ್ ಡಿಸೀಸ್’ (ಐಸಿಡಿ-10) ನ 5ನೇ ಅಧ್ಯಾಯದಲ್ಲಿ ಮತ್ತು ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ ಪ್ರಕಟಿಸಿದ ‘ಡಯಾಗ್ನೋಸ್ಟಿಕ್ ಆಂಡ್ ಸ್ಟ್ಯಾಟಿಸ್ಟಿಕಲ್ ಮಾನ್ಯುವಲ್ ಆಫ್ ಮೆಂಟಲ್ ಡಿಸಾರ್ಡರ್ಸ್ (ಡಿಎಸ್ ಎಂ-05)’ ನಲ್ಲಿ ಹೇಳಲಾಗಿದೆ. ಸುಮಾರು 350ಕ್ಕೂ ಹೆಚ್ಚಾಗಿ ಮಾನಸಿಕ ಆರೋಗ್ಯ ಅಸ್ವಸ್ಥತೆಗಳನ್ನು ಗುರುತಿಸಿ ಇಲ್ಲಿ ಹೆಸರಿಸಲಾಗಿದೆ.

ಮಾನಸಿಕ ಮತ್ತು ಅಭಿವೃದ್ಧಿ ಹೊಂದುವ ಖಾಯಿಲೆಗಳ ಕುರಿತು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ಈ ವಿಭಾಗವನ್ನು ಸಾಮಾನ್ಯ ಖಾಯಿಲೆಗಳು ಮತ್ತು ಜೀವನದ ವಿವಿಧ ಹಂತದಲ್ಲಿ ಕಾಣಿಸಿಕೊಳ್ಳುವ ಖಾಯಿಲೆಗಳೆಂದು ವಿಭಾಗಿಸಲಾಗಿದೆ. ಸಾಮಾನ್ಯ ಖಾಯಿಲೆಗಳ ವಿಭಾಗದಲ್ಲಿ ಖಿನ್ನತೆ ಮತ್ತು ಆತಂಕಗಳಿಗೆ ಸಂಬಂಧಿಸಿದ ಖಾಯಿಲೆಗಳ ಕುರಿತು ಮತ್ತು ಜೀವನದ ವಿವಿಧ ಹಂತದಲ್ಲಿ ಕಾಣಿಸಿಕೊಳ್ಳುವ ಖಾಯಿಲೆಗಳ ವಿಭಾಗದಲ್ಲಿ ಬಾಲ್ಯಾವಸ್ಥೆಯ ಮತ್ತು ಮುಪ್ಪಿನ ಅಸ್ವಸ್ಥತೆಗಳ ಕುರಿತು ಮಾಹಿತಿಯುಕ್ತ ಲೇಖನಗಳನ್ನು ನೋಡಬಹುದು. ಸ್ಕಿಜೋಫ್ರೀನಿಯಾ, ಅಥವಾ ಲಘು ಮನೋವೈದ್ಯಕೀಯ ಅಸ್ವಸ್ಥತೆಗಳು ಮುಂತಾದವುಗಳ ಕುರಿತು ಇನ್ನಿತರ ಅಸ್ವಸ್ಥತೆಗಳು ವಿಭಾಗದಲ್ಲಿ ನೋಡಬಹುದು.

ಈ ವಿಭಾಗದಲ್ಲಿ ಪ್ರಕಟವಾಗಿರುವ ಮಾಹಿತಿಯನ್ನು ವ್ಯಾಪಕ ಸಂಶೋಧನೆ ಮತ್ತು ಮನೋವೈದ್ಯಕೀಯ ಕ್ಷೇತ್ರದ ಪರಿಣತರ ಸಂದರ್ಶನಗಳನ್ನೊಳಗೊಂಡು ವೈಟ್ ಸ್ವಾನ್ ಫೌಂಡೇಶನ್ನಿನಿಂದ ಬರವಣಿಗೆಯ ರೂಪದಲ್ಲಿ  ಪ್ರಸ್ತುತಪಡಿಸಲಾಗಿದೆ. ದಿನದಿನವೂ ಬೆಳೆಯುತ್ತಲೇ ಸಾಗುವ ಇದೊಂದು ಜ್ಞಾನಭಂಡಾರವಾಗಿದ್ದು ಮಾನಸಿಕ ಅಸ್ವಸ್ಥತೆಗಳ ಕುರಿತಾದ ನಿಮ್ಮ ಪ್ರಶ್ನೆಗಳಿಗೆ ಸರಳಾತಿಸರಳ ಮಾದರಿಯಲ್ಲಿ ಉತ್ತರವನ್ನು ನೀಡಲು ಪ್ರಯತ್ನಿಸುತ್ತದೆ. ರೋಗಗಳ ವೈದ್ಯಕೀಯ ವಿವರಣೆಯೊಂದಿಗೆ ರೋಗಿಗಳ ವೈಯಕ್ತಿಕ ಅನುಭವಗಳು, ಕೇಸುಗಳ ಅಧ್ಯಯನ ಮತ್ತು ಪರಿಣತರ ಲೇಖನಗಳೊಂದಿಗೆ ಈ ಕುರಿತು ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಆದರೆ ಒಂದು ಮಹತ್ವದ ವಿಷಯವನ್ನು ನೀವು ಗಮನದಲ್ಲಿಟ್ಟುಕೊಳ್ಲಬೇಕು. ಅದೇನೆಂದರೆ, ಈ ಜಾಲತಾಣವು ನೀವು ನಿಮ್ಮಷ್ಟಕ್ಕೇ ಮನೋರೋಗಗಳನ್ನು ಪತ್ತೆಮಾಡಿಕೊಳ್ಳುವುದಕ್ಕಾಗಿ ಇಲ್ಲ. ಬದಲಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳ ಇರುವಿಕೆಯ ಕುರಿತು ನಿಮಗೆ ತಿಳುವಳಿಕೆ ನೀಡಲು ಪ್ರಯತ್ನಿಸುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಇನ್ನಿತರ ಯಾವುದೇ ದೈಹಿಕ ಖಾಯಿಲೆಗಳಂತೆಯೇ, ಮಾನಸಿಕ ಅಸ್ವಸ್ಥತೆಗಳ ವಿಷಯದಲ್ಲಿ ಕೂಡ ಆರಂಭದ ಹಂತದಲ್ಲಿಯೇ ರೋಗಪತ್ತೆ ಮಾಡುವುದು ಮತ್ತು ಮಧ್ಯಸ್ಥಿಕೆ ವಹಿಸುವುದು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಚಿಕಿತ್ಸೆಗೊಳಪಡಿಸುವಲ್ಲಿ ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯವನ್ನು ಅರ್ಥೈಸಿಕೊಳ್ಳುವ ಬಗೆ ಎಂಬ ನಮ್ಮ ವಿಭಾಕ್ಕೆ ಭೇಟಿನೀಡಿ ಇಂತಹ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣತರ ಪಾತ್ರವೇನು ಎಂಬ ಕುರಿತ ಲೇಖನಗಳನ್ನು ಓದಿ. ಇದರಿಂದಾಗಿ ನೀವು ಈ ಕುರಿತಾದ ಮಾಹಿತಿಯನ್ನು ಸಹಾಯದ ಅವಶ್ಯಕತೆಯಿರುವವರಿಗೆ ನೀಡಬಹುದು.

ಹೆಚ್ಚಿನ ಮಾಹಿತಿ

ಇತರ