ಶಿಕ್ಷಕ ಮತ್ತು ವಿದ್ಯಾರ್ಥಿ ಸಂಬಂಧ

ಎಲ್ಲ ಉತ್ತಮ ಸಂಬಂಧಗಳು ಆರಂಭವಾಗುವುದು ಉತ್ತಮ ಸಂವಾದದಲ್ಲಿ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡರೆ ಗುಣಾತ್ಮಕ ಸಂಬಂಧದ ಅಡಿಪಾಯ ನಿರ್ಮಿಸಲು ಸಾಧ್ಯ. ಶಿಕ್ಷಕರು ಮೂಲಭೂತವಾಗಿ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ವೃತ್ತಿ ಆಕಾಂಕ್ಷೆಗಳ ಬಗ್ಗೆ ಅವರ ಜತೆ ಚರ್ಚೆ ಆರಂಭಿಸಬಹುದು.

ಕೆಲ ಶಿಕ್ಷಕರು ವಿದ್ಯಾರ್ಥಿಯ ಆಸಕ್ತಿ ಹಾಗೂ ಮಹತ್ವಾಕಾಂಕ್ಷೆಗಳ ಬಗ್ಗೆ ನೆನಪಿಟ್ಟುಕೊಂಡು, ಪತ್ರಿಕೆ ಅಥವಾ ಇಂಟರ್‌ನೆಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೋಡಿದಾಗ, ಅದನ್ನು ವಿದ್ಯಾರ್ಥಿಗಳ ಜತೆ ಹಂಚಿಕೊಳ್ಳುತ್ತಾರೆ. ಇದರಿಂದ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ.

ಶಿಕ್ಷಕರು ತಮ್ಮ ನಿರೀಕ್ಷೆಗಳನ್ನು ವರ್ಷಾರಂಭದಲ್ಲೇ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಅಭಿವ್ಯಕ್ತಪಡಿಸಬೇಕು. ಉದಾಹರಣೆಗೆ ಪಠ್ಯಚಟುವಟಿಕೆಗಳ ಗಡುವು, ಹಾಜರಾತಿ, ಮೊಬೈಲ್ ಬಳಕೆ ಹೀಗೆ.. ಇದರಿಂದ ವಿದ್ಯಾರ್ಥಿಗಳು ಸಮ್ಮತಿಯೊಡನೆ ಪರಿಪಾಲಿಸುತ್ತಾರೆ. ವರ್ಷ ಮುಂದುವರೆದಂತೆ ಸಂವಹನವನ್ನು ಮುಕ್ತವಾಗಿರಿಸಿ.

ನೀವು ಆಡುವ ಮಾತು ಹಾಗೂ ವರ್ತನೆ ಸಮಂಜಸವಾಗಿರಲಿ. * ತರಗತಿಯಲ್ಲಿ ಪ್ರತಿಯೊಬ್ಬರಿಗೂ ಗೌರವ ದೊರಕುವಂಥ ವಾತಾವರಣ ನಿರ್ಮಿಸಿ. ಮುಖ್ಯವಾಗಿ ಎಲ್ಲ ವಿದ್ಯಾರ್ಥಿಗಳನ್ನೂ ಸಮಾನವಾಗಿ ಪರಿಗಣಿಸಿ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕ ಪಕ್ಷಪಾತಿಯಲ್ಲ ಎಂದು ಮನವರಿಕೆಯಾದರೆಅವರು ವಿಶ್ವಾಸ ಹಾಗೂ ಗೌರವಯುತವಾಗಿ ಸ್ಪಂದಿಸುತ್ತಾರೆ.

ವಿದ್ಯಾರ್ಥಿಗಳು ತಮ್ಮ ಕ್ಷಮತೆ ಬಗ್ಗೆ ಶಿಕ್ಷಕರ ಅಭಿಪ್ರಾಯವನ್ನು ನಂಬುತ್ತಾರೆ. ಅವರ ಬಗೆಗಿನ ಕೆಲ ಒಳ್ಳೆಯ ಮಾತುಗಳು ಅವರಲ್ಲಿ ಸಾಧನೆಗೆ ಸ್ಫೂರ್ತಿ ನೀಡುತ್ತದೆ ಹಾಗೂ ಅವರು ಉನ್ನತ ಗುರಿಯತ್ತ ಸಾಗಲು ಪೂರಕವಾಗುತ್ತದೆ. ಆದರೆ ಒಂದು  ಕಟುವಾದ ಮಾತು ಅಥವಾ ಠೀಕೆ ಅವರ ಆತ್ಮಸ್ಥೈರ್ಯ ಮತ್ತು ಆತ್ಮಗೌರವವನ್ನು ಕುಂದಿಸಬಹುದು. ಸಾಧ್ಯವಾದಷ್ಟು ನಿಮ್ಮ ಮಾತು ಅಥವಾ ಸಂಭಾಷಣೆ ಗುಣಾತ್ಮಕವಾಗಿರಲಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org