ನಿಮ್ಮ ಮಗುವಿನ ನಡವಳಿಕೆಯಿಂದ ಆತಂಕಗೊಂಡಿದ್ದೀರಾ?

ಮಕ್ಕಳ ಜೊತೆಗೆ ಆಪ್ತ ಸಮಾಲೋಚನೆಗೆ ಸಮಯ ನಿಗದಿಪಡಿಸುವ ಹೆಚ್ಚಿನ ಪಾಲಕರು ಮಕ್ಕಳ ದುರ್ನಡತೆಯ ಲಕ್ಷಣಗಳನ್ನು ಈ ರೀತಿ ವಿವರಿಸುತ್ತಾರೆ – ಶೀಘ್ರ ಕೋಪಗೊಳ್ಳುವುದು, ಒರಟಾಗಿ ವರ್ತಿಸುವುದು, ಮೊಬೈಲಿನ (ಅಥವಾ ಟೆಕ್ನಾಲಜಿಯ) ಗೀಳು ಹತ್ತಿಸಿಕೊಂಡಿರುವುದು, ಅಧ್ಯಯನ ಮಾಡದಿರುವುದು, ಯಾವುದರೆಡೆಗೂ ಗಮನವಿಲ್ಲದಿರುವುದು, ಅಂಕಗಳನ್ನು ಗಳಿಸದಿರುವುದು, ಸ್ನೇಹಿತರೊಂದಿಗೆ ಬೆರೆಯದೇ ಇರುವುದು, ಹೇಳುವುದನ್ನು ಕೇಳಿಸಿಕೊಳ್ಳದಿರುವುದು, ಪಟ್ಟಿ ಹೀಗೆ ಬೆಳೆಯುತ್ತದೆ. ಪಾಲಕರು ಆಪ್ತ ಸಮಾಲೋಚನೆಯಿಂದ ಮಕ್ಕಳ ನಡವಳಿಕೆ ಸರಿಯಾಗಲೆಂದು ಬಯಸುತ್ತಾರೆ.

ಆದರೆ ನನ್ನ ಪ್ರಕಾರ ಅಂತಹ ನಡವಳಿಕೆಗೆ ಕಾರಣವಾಗುವ ಭಾವನೆ ಮತ್ತು ವಿಚಾರವನ್ನು ಅರ್ಥಮಾಡಿಕೊಳ್ಳದೇ ಪರಿಸ್ಥಿತಿಯನ್ನು ಸುಧಾರಿಸುವುದು ಸಾಧ್ಯವಿಲ್ಲ. ಭಾವನೆಗಳು, ಯೋಚನೆ ಮತ್ತು ನಡವಳಿಕೆಗಿರುವ ಸಂಬಂಧಗಳನ್ನು ಹಲವಾರು ಸಂಶೋಧನೆಗಳು ದೃಢಪಡಿಸಿವೆ. ಹಲವಾರು ಮಾನಸಿಕ ಸಮಸ್ಯೆಗಳಿಗೆ ನೀಡಲಾಗುವ ಕಾಗ್ನೆಟಿಕ್ ಬಿಹೇವಿಯರ್ ಥೆರಪಿಗೆ ಅಂತರ್ ಸಂಬಂಧಗಳೇ ಆಧಾರವಾಗಿದೆ. ನಾನು ಸಿಬಿಟಿ ಎಂದು ಜನಪ್ರಿಯವಾಗಿರುವ ಚಿಕಿತ್ಸೆಯ ಬಗ್ಗೆ ವಿವರವಾಗಿ ಹೋಗಲು ಬಯಸುವುದಿಲ್ಲವಾದರೂ ನಮ್ಮ ಮಕ್ಕಳ ಸಮಸ್ಯೆಯನ್ನು (ಮತ್ತು ನಮ್ಮವೇ ಆದ ಸಮಸ್ಯೆಗಳನ್ನು) ವಿಭಿನ್ನ ರೀತಿಯಲ್ಲಿ ಅರಿಯಲು ಸಹಾಯ ಮಾಡುವ ಈ ಸಂಬಂಧಗಳ ಕುರಿತು ಕೆಲವಷ್ಟು ವಿಚಾರಗಳನ್ನು ತಿಳಿಸಲು ಬಯಸುತ್ತೇನೆ.

ನಾವೀಗ ಹೊಸದಾಗಿ ಶಾಲೆಗೆ ಸೇರಿದ ಮಗುವಿನ ಉದಾಹರಣೆಯನ್ನು ತೆಗೆದುಕೊಳ್ಳೋಣ. ಈಗ ಆ ಮಗುವು ಸಂಪೂರ್ಣ ಹೊಸಬರಾದ ಸ್ನೇಹಿತರೊಂದಿಗೆ ಬೆರೆಯಬೇಕಾಗಿದೆ.

ಒಂದು ವೇಳೆ ಆ ಮಗುವು

  • ತನಗಿಂತ ಗುಂಪಿನ ಇತರರು ಉತ್ತಮರು ಎಂದು ಭಾವಿಸಿದರೆ, ತಾನು ಆ ಗುಂಪನ್ನು ಸೇರಲು ತಾನು ಅರ್ಹನೇ ಎಂದು ಕೇಳಿಕೊಳ್ಳುತ್ತದೆ. ನಂತರದಲ್ಲಿ
  • ಅಸುರಕ್ಷಿತ, ಅವಿಶ್ವಾಸ ಹಾಗೂ ಹಿಂಜರಿಕೆಯನ್ನು ತಾಳುತ್ತದೆ, ಇದರಿಂದ
  • ಅತಿ ಶಾಂತವಾಗಿ ವರ್ತಿಸಬಹುದು ಮತ್ತು ಹಿಂಜರಿಕೆ ಮತ್ತು ಅವಿಶ್ವಾಸದಿಂದಾಗಿ, ಮೆಲ್ಲನೆಯ ಧ್ವನಿಯಲ್ಲಿ ಗುಂಪಿನ ಉಳಿದವರಲ್ಲಿ ತನ್ನನ್ನು ಗುಂಪಿಗೆ ಸೇರಿಸಿಕೊಳ್ಳಲು ಕೇಳಬಹುದು. ಅಂತಹ ಸಂದರ್ಭದಲ್ಲಿ ಆ ಮಗುವಿನ ಮನವಿ ತಿರಸ್ಕೃತವಾಗಲೂಬಹುದು.

ಮಗುವಿನ ಅತೀ ಸೌಮ್ಯಸ್ವಭಾವ ಅಥವಾ ಸಾಮಾಜಿಕವಾಗಿ ಯಾರೊಂದಿಗೂ ಬೆರೆಯದೇ ಒಂಟಿಯಾಗಿರುವುದನ್ನು ನೋಡಿದ ವಯಸ್ಕರು ಮಗುವಿಗೆ ಆತ್ಮವಿಶ್ವಾಸದಿಂದ ವರ್ತಿಸುವಂತೆ ಮತ್ತು ಹೆಚ್ಚಿನ ಸ್ನೇಹಿತರನ್ನು ಗಳಿಸಿಕೊಳ್ಳುವಂತೆ ಹೇಳಬಹುದು. ಆದರೆ ಆ ಮಗುವಿನಲ್ಲಿ ಕುಸಿದ ಆತ್ಮಗೌರವ ಮತ್ತು ತಾನು ಅರ್ಹನಲ್ಲವೆಂಬ ಭಾವನೆಯಿಂದಾಗಿ ಅಸುರಕ್ಷತೆ ಮತ್ತು ಅವಿಶ್ವಾಸ ಕಾಡುತ್ತಿದೆಯೆಂದು ತಿಳಿಯಲು ನಾವು ವಿಫಲರಾಗುತ್ತೇವೆ. ಆಪ್ತಸಮಾಲೋಚನೆಯ ಸಂದರ್ಭದಲ್ಲಿ ಈ ರೀತಿ ಸರಿಪಡಿಸಬೇಕಾದ ಗುಣಗಳ ಬಗ್ಗೆ ತಿಳಿಸಲಾಗುತ್ತದೆ. ಒಬ್ಬ ಪಾಲಕರು “ ಅವನಿಗೆ ಹೆಚ್ಚು ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬೇಕೆಂಬುದನ್ನು ಕಲಿಸಿ” ಎಂದರೆ ಇನ್ನೊಬ್ಬರು “ಅವನಿಗೆ ಆತ್ಮವಿಶ್ವಾಸದಿಂದ ಇರುವುದನ್ನು ಕಲಿಸಿ” ಎನ್ನುತ್ತಾರೆ. ಆದರೆ ಬದಲಾಯಿಸಬೇಕಾಗಿರುವುದು ಇಂತಹ ನಡವಳಿಕೆಗೆ ಕಾರಣವಾಗುವ ಅಪ್ರಯೋಜಕ, ಕ್ರಿಯಾತ್ಮಕವಲ್ಲದ, ಅತಾರ್ಕಿಕ ಯೋಚನೆಗಳನ್ನು.

ಈಗ ಅದೇ ಉದಾಹರಣೆಯನ್ನು ಮತ್ತೆ ನೋಡೋಣ. ಆದರೆ ಈಗ ಮಗುವು

  • ತಾನು ಉಳಿದವರಷ್ಟೇ ಅರ್ಹ ಎಂದು ಭಾವಿಸುತ್ತದೆ ಮತ್ತು ತನ್ನ ಬಗ್ಗೆ ಅನುಮಾನ ಪಡದೇ ತನ್ನ ಜೊತೆ ಸ್ನೇಹಕ್ಕೆ ಉಳಿದವರು ಅರ್ಹರೇ ಎಂದು ಯೋಚಿಸುತ್ತದೆ.
  • ಅದಕ್ಕೆ ಸುರಕ್ಷತೆ ಹಾಗೂ ವಿಶ್ವಾಸದ ಭಾವವಿರುವುದರಿಂದ
  • ಆತ್ಮವಿಶ್ವಾಸದಿಂದ ವರ್ತಿಸುತ್ತದೆ. ತನ್ನ ಸ್ನೇಹಿತರ ಬಳಿ ಹೋದಾಗ ನಿರ್ಬಿಡೆಯಿಂದ ತನ್ನನ್ನು ಪರಿಚಯಿಸಿಕೊಂಡು ಗುಂಪನ್ನು ಸೇರಲು ಬಯಸುತ್ತದೆ. ಅಂತಹ ಸಂದರ್ಭದಲ್ಲಿ ಆ ಮಗುವನ್ನು ಉಳಿದವರು ಸ್ವೀಕರಿಸುತ್ತಾರೆ ಮತ್ತು ಸ್ನೇಹ ಹಸ್ತ ಚಾಚುತ್ತಾರೆ.

ಎರಡು ಘಟನೆಗಳಲ್ಲಿಯೂ ಸಂದರ್ಭ ಒಂದೇ ಆಗಿದೆ. ಆದರೆ ಮಗುವಿಗೆ ತನ್ನ ಕುರಿತು ಹಾಗೂ ತನ್ನ ಸುತ್ತಲಿನ ಪರಿಸರದ ಕುರಿತು ಇರುವ ಅಭಿಪ್ರಾಯದಿಂದಾಗಿ ಆತ್ಮವಿಶ್ವಾಸ ಅಥವಾ ಅನಿಶ್ಚಿತತೆಯ ಭಾವ ಉಂಟಾಗುತ್ತದೆ. ಇದರಿಂದ ಒಂದೇ ಸಂದರ್ಭದಲ್ಲಿ ಫಲಿತಾಂಶ ಬೇರೆ ಬೇರೆಯಾಗಿರುತ್ತದೆ.

ಆದ್ದರಿಂದ ನಮ್ಮ ಮಕ್ಕಳು ಸ್ವೀಕಾರಾರ್ಹವಲ್ಲದ ವರ್ತನೆಯಲ್ಲಿ ತೊಡಗಿದಾಗ ಕೇವಲ ಮೇಲ್ನೋಟಕ್ಕೆ ಕಾಣಿಸುವುದನ್ನು ಮಾತ್ರ ಪರಿಗಣಿಸದೇ ಸ್ವಲ್ಪ ಆಳವಾಗಿ ಯೋಚಿಸುವುದು ಒಳ್ಳೆಯದು. ಮಗುವಿಗೆ ಏನನ್ನಿಸುತ್ತಿದೆ ಎಂಬುದನ್ನು ತಿಳಿಯಲು ಮತ್ತು ಮಗುವಿನ ಭಾವನೆಗಳು ಹಾಗೂ ಯೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಆದರೆ ಈ ರೀತಿ ನಿಜವನ್ನು ಅರಿಯುವ ಪ್ರಯತ್ನದಲ್ಲಿ ಹಠತ್ತಾಗಿ ಯಾವುದೇ ತೀರ್ಮಾನಕ್ಕೆ ಬರದೇ ಮತ್ತು ರಕ್ಷಣಾತ್ಮಕವಾಗಿ ವರ್ತಿಸದೇ ಇರುವುದು ಬಹಳ ಮುಖ್ಯವಾಗಿರುತ್ತದೆ.

ಕೆಲವೊಮ್ಮೆ ಈ ಪ್ರಯತ್ನದಲ್ಲಿ ನಾವು ಹೊಂದಲು ಬಯಸದ ಕೆಲವು ನಂಬಿಕೆಗಳನ್ನು ಮಗುವು ಬೆಳೆಸಿಕೊಂಡಿರುವುದು ತಿಳಿಯುತ್ತದೆ. ನೀವು ನಿಮ್ಮ ಮಗುವು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಹೆಚ್ಚಿನದನ್ನು ಸಾಧಿಸಲೆಂದು ಬಯಸಿರುತ್ತೀರಿ. ಆದರೆ ಮಗುವು ಏಕೆ ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದೆಯೆಂದು ತಿಳಿಯುವುದಿಲ್ಲ. ಆಗ ನಿಮಗೆ ನೀವೇ ಕೆಲವು ಕ್ಲಿಷ್ಟ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ – ನೀವು ಎಲ್ಲಿ ತಪ್ಪಿದ್ದೀರಿ ಅಥವಾ ಏನನ್ನು ತಪ್ಪಾಗಿ ಹೇಳಿದಿರಿ ಎಂಬ ಬಗ್ಗೆ – ಬಹುಶಃ ಇಂತಹ ಸಂಗತಿಗಳು ನಿಮಗೆ ಸಂತೋಷವನ್ನು ನೀಡುವುದಿಲ್ಲ.

ಹಠಾತ್ತಾಗಿ ಏನನ್ನೂ ನಿರ್ಧರಿಸದೇ ನಿಮ್ಮ ಮತ್ತು ನಿಮ್ಮ ಮಗುವಿನ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು ಇಲ್ಲಿ ಬಹಳ ಮುಖ್ಯ ಸಂಗತಿ. ಒಳ್ಳೆಯ ಪಾಲಕರಾಗಬಲ್ಲ ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆಯಿಡಬೇಕು. ನೀವು ನಿಮ್ಮಲ್ಲಿ ನಂಬಿಕೆಯಿರಿಸಿದಾಗ ಮಾತ್ರ ಮಗುವು ತನ್ನನ್ನು ತಾನು ನಂಬುತ್ತದೆ. ನೀವು ಪರಿಪೂರ್ಣರಲ್ಲ ಮತ್ತು ಆಗಬೇಕಿಲ್ಲ ಕೂಡಾ. ನೀವು ಸಮರ್ಥರಿದ್ದೀರಿ. ಹಾಗೆಯೇ ನಿಮ್ಮ ಮಗು ಪರಿಪೂರ್ಣವಲ್ಲ ಮತ್ತು ಆಗಬೇಕಿಲ್ಲ. ಹಾಗೆಯೇ ಮಗು ಕೂಡಾ ತಕ್ಕ ಸಾಮರ್ಥ್ಯ ಹೊಂದಿರುತ್ತದೆ.

ಹಾಗಾಗಿ ನಿಮ್ಮ ಮಗು ಕೋಪದಿಂದ ವರ್ತಿಸುತ್ತಿದ್ದರೆ ಅದರ ವರ್ತನೆಯನ್ನು ಮಾತ್ರ ಹತ್ತಿಕ್ಕಲು ಪ್ರಯತ್ನಿಸದೇ ಅದಕ್ಕೆ ಕಾರಣವನ್ನು ಹುಡುಕಿ ಮತ್ತು ಅದನ್ನು ಸರಿಪಡಿಸಲು ಪ್ರಯತ್ನಿಸಿ. ಒಂದು ವೇಳೆ ಮಗು ಗಮನ ಸೆಳೆಯುವ ನಡವಳಿಕೆಯನ್ನು ತೋರುತ್ತಿದ್ದರೆ ಅದರ ಬೇಡಿಕೆಗೆ ಬಗ್ಗಬಾರದೆಂಬ ನಿರ್ಧಾರದ ಜೊತೆಗೆ ಮಗು ಯಾಕೆ ಅಟೆನ್ಶನ್ ಸೀಕಿಂಗ್ ನಡವಳಿಕೆಯನ್ನು ತೋರುತ್ತದೆಯೆಂಬ ಬಗ್ಗೆ ಯೋಚಿಸಿ. ನಿಮ್ಮ ಮಗು ಟೆಕ್ನಾಲಜಿಯ ಗೀಳು ಅಂಟಿಸಿಕೊಂಡಿದ್ದರೆ ಕೇವಲ ಮೊಬೈಲ್ ಅಥವಾ ಗೆಜೆಟನ್ನು ಕಸಿಯುವ ಬದಲು ಅದರ ಗೀಳಿನಿಂದ ಮಗುವಿಗೆ ದೊರೆಯುವ ಸಂತೋಷ ಬೇರೆ ಸಂಗತಿಗಳಿಂದ ಏಕೆ ದೊರೆಯುತ್ತಿಲ್ಲ ಎಂದು ಗಮನಿಸಿ. ಯಾವ ಕಾರಣಕ್ಕಾಗಿ ಮಗು ನಿಜವಾದ ಪ್ರಪಂಚದಿಂದ ದೂರವಾಗಿ ವರ್ಚುವಲ್ ಪ್ರಪಂಚದಲ್ಲಿ ಮುಳುಗಲು ಬಯಸುತ್ತಿದೆ ಎಂದು ಅರಿಯಿರಿ. ಮಗುವಿಗೆ ಒಂದು ವಿಷಯದ ಕುರಿತು ಗಮನ ಕೇಂದ್ರಿಕರಿಸಲು ಸಾಧ್ಯವಾಗುತ್ತಿಲ್ಲವಾದರೆ ಯಾವ ಯೋಚನೆ (ಭಯ, ಆತಂಕ, ಆಸೆಗಳು) ಅದನ್ನು ಕಾಡುತ್ತಿದೆ ಎಂದು ತಿಳಿದು ಅದರ ಬಗ್ಗೆ ಮಾತನಾಡಲು ಪ್ರೋತ್ಸಾಹಿಸಿ.

ಇದು ನಿಮಗೆ ಕಷ್ಟವೆನಿಸಬಹುದು ಅಥವಾ ನಿಮ್ಮಿಂದ ಸಾಧ್ಯವಿಲ್ಲವೆಂದೆನಿಸಬಹುದು, ಆದರೆ ನೈಜದಲ್ಲಿ ಹಾಗಿರುವುದಿಲ್ಲ. ನೀವು ಮನಃಪೂರ್ವಕವಾಗಿ ಕೇಳಲು ಸಿದ್ಧರಿದ್ದರೆ ಮತ್ತು ನಿಮ್ಮ ಹಾಗೂ ಮಗುವಿನ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ತಯಾರಿದ್ದರೆ ಎಲ್ಲವೂ ಸಾಧ್ಯ. ಇದಕ್ಕೆ ನಿಮ್ಮನ್ನು ನೀವು ಅಣಿಗೊಳಿಸಿಕೊಳ್ಳಬೇಕು ಮತ್ತು ನಿಮ್ಮ ಯಾವತ್ತಿನ ಪ್ರತಿಕ್ರಿಯೆಗಿಂತ ಭಿನ್ನವಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ಇದರ ಫಲಿತಾಂಶವು ನಿಮಗೂ, ಮಗುವಿಗೂ ಹಾಗೂ ನಿಮ್ಮಿಬ್ಬರ ಸಂಬಂಧಕ್ಕೂ ಬಹಳ ಉತ್ತಮವಾಗಿರುತ್ತದೆ.

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಮತ್ತು ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org