ಆರೈಕೆ ಪ್ರಯಾಸದ ಕೆಲಸ

ನನ್ನ ಈ ಹಿಂದಿನ ಲೇಖನದಲ್ಲಿ ನಾನು ಆರೈಕೆದಾರರ ಮೇಲೆ ಉಂಟಾಗುವ ಹಲವಾರು ಪರಿಣಾಮಗಳ ಬಗ್ಗೆ ವಿವರಿಸಿದ್ದೆ. ಈ ಕುರಿತು ಇನ್ನಷ್ಟು ವಿವರವಾಗಿ ಮತ್ತು ಆರೈಕೆದಾರರ ಆರೋಗ್ಯದ ಮೇಲೆ ಒಂದು ರೀತಿಯಲ್ಲಿ ಗಮನಾರ್ಹ, ಮತ್ತೊಂದು ರೀತಿಯಲ್ಲಿ ವಿಪರ್ಯಾಸಕರ ಎನ್ನಬಹುದಾದ ಪರಿಣಾಮಗಳ ಬಗ್ಗೆ ಬೆಳಕು ಹರಿಸುತ್ತೇನೆ. ಆರೈಕೆಯಲ್ಲಿ ತೊಡಗಿರುವ ಬಹುಪಾಲು ಮಂದಿ ತಾವೇ ಸ್ವತಃ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಈ ವಿಷಯವು ಬಹಳ ಮುಖ್ಯವಾಗಿದೆ. ವಿಪರ್ಯಾಸ ಏಕೆಂದರೆ, ದೈಹಿಕ ಅಥವಾ ಮಾನಸಿಕ ರೋಗಿಗಳ ಸೇವೆ ಮಾಡುತ್ತಾ ಪಾಲನೆ ಮಾಡುವವರೇ ರೋಗಿಗಳಾಗಿ ಬಿಡುತ್ತಾರೆ.

ಕೇರ್ಸ್ ವರ್ಲ್ಡ್ ವೈಡ್  ಸಂಸ್ಥೆಯು ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ  69% ಆರೈಕೆದಾರರು (ಮಾನಸಿಕ ಖಾಯಿಲೆ ಅಥವಾ ಎಪಿಲೆಪ್ಸೀಯಿಂದ ಬಳಲುತ್ತಿರುವ ಕುಟುಂಬ ಸದಸ್ಯರನ್ನು ನೋಡಿಕೊಳ್ಳುತ್ತಿರುವವರು) ತಾವು ಪದೇ ಪದೇ ಬೆನ್ನು ನೋವು, ತಲೆನೋವು, ಕೆಮ್ಮು, ಶೀತ ಅಥವಾ ಇನ್ನಿತರ ದೈಹಿಕ ಅನಾರೋಗ್ಯದ ಸಮಸ್ಯೆಯಿಂದ ಬಳಲುವುದಾಗಿ ತಿಳಿಸಿರುತ್ತಾರೆ. ತಮ್ಮ ನೆರೆಹೊರೆಯವರು ಮತ್ತು ಸಹೋದ್ಯೋಗಿಗಳಂತೆ ಇವರಿಗೆ ಸುಧಾರಿಸಿಕೊಳ್ಳಲು ಅಗತ್ಯವಾದ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಬಿಡುವು ಸಿಗುವುದಿಲ್ಲ. ಅವರು ದಿನದ 24 ಗಂಟೆ ಹಾಗೂ ವಾರದ ಏಳೂ ದಿನಗಳ ಕಾಲ ಶುಶ್ರೂಷೆ ಹಾಗೂ ಮನೆಯ ನಿತ್ಯದ ಕೆಲಸಗಳನ್ನು ಮಾಡುತ್ತಾ ವಿರಾಮವೇ ದೊರಕುವುದಿಲ್ಲ.

ಹೆಚ್ಚಿನವರು ತಮ್ಮ ಈ ಆರೋಗ್ಯದ ಸಮಸ್ಯೆಗೆ ವೈದ್ಯರ ಬಳಿ ಹೋಗುವುದಿಲ್ಲ. ಈ ಬಗ್ಗೆ ವಿಚಾರಿಸಿದರೆ – “ನನಗೆ ಹೋಗಲು ಸಮಯವೇ ಇಲ್ಲ,” “ನಾನು ಆಸ್ಪತ್ರೆಗೆ ಹೋದರೆ ನನ್ನ ಸಂಬಂಧಿಯನ್ನು ಯಾರು ನೋಡುತ್ತಾರೆ?,” “ನನಗೆ ಮತ್ತಷ್ಟು ಔಷಧಗಳನ್ನು ಕೊಳ್ಳಲು ಸಾಧ್ಯವಿಲ್ಲ,” “ನಿದ್ದೆ ಮಾಡಿದರೆ ಎಲ್ಲಾ ಸರಿಯಾಗುತ್ತದೆ” ಎಂಬ ಉತ್ತರ ನೀಡುತ್ತಾರೆ.

ನಮ್ಮ ಸಂಸ್ಥೆಯು ಈ ಆರೈಕೆದಾರರ ಸಮಸ್ಯೆಗಳ ಬಗ್ಗೆ ಸ್ಥಳೀಯ ವೈದ್ಯರ ಗಮನ ಸೆಳೆಯಲು ಶ್ರಮಿಸುತ್ತಿದೆ. ಆದರೆ, ಎಲ್ಲಾ ಆರೈಕೆದಾರರನ್ನು ಈ ರೀತಿ ಸಂಪರ್ಕಿಸಲು ಸಾಧ್ಯವಿಲ್ಲ. ಆರೈಕೆದಾರರ ಬಗ್ಗೆ ತಿಳುವಳಿಕೆ ಮತ್ತು ಕಾಳಜಿ ಸುತ್ತಲಿನ ಸಮುದಾಯದಲ್ಲಿ ಮೊದಲು ಮೂಡಬೇಕು.

ನನ್ನ ಹಿಂದಿನ ಲೇಖನದಲ್ಲಿ ನಿಮ್ಮ ಪರಿಚಿತ ವಲಯದಲ್ಲಿರುವ ನಿಮ್ಮ ಸಂಬಂಧಿ, ನರೆಹೊರೆಯವರು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಆರೈಕೆ ಕೆಲಸವನ್ನೂ ಸಹ ಮಾಡುತ್ತಿರಬಹುದು. ಇವರ ಬಗ್ಗೆ ಯೋಚಿಸಲು ತಿಳಿಸಿದ್ದೆ. ನೀವು ಹಾಗೆ ಮಾಡಿದಲ್ಲಿ ನಿಮ್ಮ ಹತ್ತಿರದ ವಲಯದಲ್ಲಿ ಒಬ್ಬರಾದರೂ ಅಂತಹ ಆರೈಕೆದಾರರು ಇರುತ್ತಾರೆ. ಆದರೆ ಬಹುಶಃ ಅವರನ್ನು ಹೇಗೆ ಸಂಪರ್ಕಿಸುವುದು ಅಥವಾ ಅವರಿಗೆ ನೀವು ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬ ಬಗ್ಗೆ ತಿಳಿಯದೇ ಇರಬಹುದು. ಈ ವಿಷಯವನ್ನು ನಿಭಾಯಿಸುವುದು ನಿಮಗೆ ಕಷ್ಟವೆನಿಸುತ್ತಿರಬಹುದು- ಅವರ ಬಳಿ ಏನೆಂದು ಹೇಳುವುದು ಅಥವಾ ಅವರು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಬಗ್ಗೆ ನಿಮಗೆ ಆತಂಕವಿರಬಹುದು.

ಆದ್ದರಿಂದ ಮೊದಲಿಗೆ ನೀವು ಅವರಿಗಾಗಿ ಸ್ವಲ್ಪ ಸಮಯವನ್ನು ನೀಡಬಹುದು: ಖಾಯಿಲೆಯಿರುವ ವ್ಯಕ್ತಿಯ ಜೊತೆ ನೀವು ಸ್ವಲ್ಪ ಸಮಯ ಕಳೆಯುವುದರಿಂದ ಆರೈಕೆದಾರರಿಗೆ ಸ್ವಲ್ಪ ಬಿಡುವು ದೊರೆಯುತ್ತದೆ. ಈ ಸಮಯದಲ್ಲಿ ಅವರಿಗೆ ತಮ್ಮ ಕೆಲಸ  ಸಾಧ್ಯವಾಗಬಹುದು. ನೀವು ಅವರ ಶಾಪಿಂಗ್ ಕೆಲಸಗಳಲ್ಲಿ ಸಹಾಯ ಮಾಡಬಹುದು. ಇದರಿಂದ ಅವರಿಗೆ ನೀವು ಜೊತೆಗಿರುವಿರೆಂಬ ಸಮಾಧಾನವಾಗುತ್ತದೆ. ನಿಮ್ಮ ನಗು ಮತ್ತು ಕಾಳಜಿಯುಕ್ತ ಮಾತು ಅವರ ಬಳಲಿಕೆಯನ್ನು ದೂರ ಮಾಡಬಲ್ಲದು ಮತ್ತು ‘ನಾನು ನಿಮಗೆ ಹೇಗೆ ಸಹಾಯ ಮಾಡಲಿ ?' ಎಂಬ ನಿಮ್ಮ ನೈಜ ಕಳಕಳಿಯು ಅವರ ಹೊರೆಯನ್ನು ಕಡಿಮೆ ಮಾಡಬಲ್ಲದು.

ಸೂಕ್ತ ಬೆಂಬಲ ಸಿಗದೆ ಇದ್ದಾಗ ಅವರ ಒತ್ತಡ, ಸರಿಯಾಗಿ ನಿದ್ರೆಯಿಲ್ಲದೆ, ದಣಿವು ಮುಂತಾದ ಕಾರಣಗಳಿಂದ ಕಾಲಕ್ರಮೇಣ ಅವರು ಮುಂಚಿನಂತೆ ಆರೈಕೆ ಮಾಡಲು ಆಗದೆ ಇರಬಹುದು. ಕೊನೆಗೆ  ರೋಗಿಗಳು ಹಾಗೂ ಅವರ ಆರೈಕೆದಾರರು ಇಬ್ಬರೂ ಸಂಧಿಗ್ಧ ಪರಿಸ್ಥಿತಿಗೆ ಸಿಲುಕಬಹುದು. ಆದ್ದರಿಂದ ನಿಮ್ಮ ಪರಿಚಿತ ಆರೈಕೆದಾರರಿಗೆ ಈ ರೀತಿಯ ಸನ್ನಿವೇಶ ಎದುರಾಗುವ ಮೊದಲು ನೀವು ಸಹಾಯಕ್ಕೆ ಧಾವಿಸಿ.   

ನನ್ನ ಮುಂದಿನ ಲೇಖನದಲ್ಲಿ ನಮ್ಮ ನಡುವಿರುವ ಆರೈಕೆದಾರರಿಗೆ ಆಗುವ ಮಾನಸಿಕ ಸಮಸ್ಯೆ ಮತ್ತು ಅವರಿಗೆ ಸಂಘಸಂಸ್ಥೆಗಳು, ಅಧಿಕಾರಿ ವರ್ಗದಲ್ಲಿರುವವರು ಮತ್ತು ಸಮಾಜ ಹೇಗೆ ಬೆಂಬಲ ನೀಡಬಹುದು ಎಂಬುದನ್ನು ವಿವರಿಸುತ್ತೇನೆ.

ಈ ಲೇಖನ ಮೂಲತಃ ಇಂಗ್ಲಿಷಿನಲ್ಲಿ ಬರೆಯಲ್ಪಟ್ಟಿದ್ದು ಇಲ್ಲಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org