ಜೀವನದ ರೂಪಕ: ಮನಶ್ಶಾಸ್ತ್ರದ ಹೊಸ ವಿಚಾರ

ಮೂರೇ ಮೂರು ಪದಗಳಲ್ಲಿ ಮಾನವನ ಅಸ್ತಿತ್ವದ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿದರೆ ಏನಂತೀರಿ ? ಬಹುಷಃ  ಜೀವನ ಒಂದು ಸಂಗ್ರಾಮ, ಪ್ರಯಾಣ, ಶಾಲೆ, ಅಥವಾ ಜೀವನ ಒಂದು ಚದುರಂಗದ ಆಟದಂತೆ ಎಂದು ನಿಮ್ಮ ಉತ್ತರವಾಗಬಹುದು. ಹಾಗೆಯೆ ಅಥವಾ ಜೀವನ ಒಂದು ಶಾಲೆ, ಕಡಲತೀರದಲ್ಲಿ ಕಳೆವ ಸುಂದರ ಸಂಜೆ , ಗೆಳೆಯರ ಜೊತೆಗಿನ ಮೋಜಿನ ನೃತ್ಯ, ಅಥವಾ ಒಂದು ಪಾರ್ಟೀ ಎಂದು ನೀವು ಹೇಳಬಹುದು. ಇವೆಲ್ಲವು ಜನರು ಜೀವನವನ್ನು ವಿವರಿಸುವ ಬಗೆಯಾಗಿರುತ್ತದೆ. ಮಾನವನ ಸ್ವಭಾವ ಅಥವಾ ವ್ಯಕ್ತಿತ್ವ ಒಂದು ಹೂವಿನ ಗಿಡ, ಸಣ್ಣ ಬೀಜದಿಂದ ಬೆಳೆಯುವ ದೊಡ್ಡ ಮರ, ಅಥವಾ ಒಂದು ಯಂತ್ರ ಎಂದು ಹೇಳಬಹುದು.
ಪ್ರಯಾಣದ ಸಂಬಂಧ ಒಂದು ಡುಯೆಟ್, ಜೊತೆಗೂಡಿ ಅನುಭವಿಸುವ ಸಾಹಸದ ಕಾರ್ಯ ಅಥವಾ ಬಿರುಗಾಳಿ ತುಂಬಿದ ಕಡಲು ಎಂದು ವರ್ಣಿಸಬಹುದು.
ಸೈಕಾಲಜಿಸ್ಟ್ಸ್ ಹೇಳುವುದೇನೆಂದರೆ ನೀವು ವರ್ಣಿಸುವ ಬಗೆ ಸಾಮಾನ್ಯವಾಗಿ ನಿಮ್ಮ ದಿನನಿತ್ಯದ ಜೀವನದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪ್ರಭಾವ ಬೀರುತ್ತದೆ. ಈ ವಿಷಯದ ಬಗ್ಗೆ ಮನಶಾಸ್ತ್ರಜ್ಞರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಏಕೆಂದರೆ ಪ್ರತಿಯೊಂದು ಮಾನಸಿಕ ಸಿದ್ಧಾಂತವೂ ಬದುಕಿನ ರೂಪಕವನ್ನು ಆಧರಿಸಿರುತ್ತದೆ.
ಉದಾಹರಣೆಗೆ, ಖ್ಯಾತ ಮನಶ್ಶಾಸ್ತ್ರಜ್ಞನಾದ ಸಿಗ್ಮಂಡ್ ಫ್ರಾಯ್ಡ್ರನ ಕಾಲದಲ್ಲಿ ಉಗಿ ಶಕ್ತಿಯು ಪ್ರಬಲ ತಂತ್ರಜ್ಞಾನವಾಗಿತ್ತು. ಶತಮಾನದ ಹಿಂದೆ ಸರ್ವಶ್ರೇಷ್ಠವಾಗಿದ್ದ ಗಣಕಯಂತ್ರಗಳು ನಮಗೆ ಇಂದು ಸಾಮಾನ್ಯವಾಗಿವೆ. “ಮನಸ್ಸಿನ ಸಾಧನ"ದ ಬಗ್ಗೆ ವಿವರಿಸಲು ಫ್ರಾಯ್ಡ್ ಉಗಿ ಎಂಜಿನ್ ಅನ್ನು ರೂಪಕವಾಗಿ ಆರಿಸಿಕೊಂಡಿದ್ದರು.
 ಈ ಪದ್ಧತಿಯಲ್ಲಿ 'ಮಾನಸಿಕ ಶಕ್ತಿ'ಯು ಒಂದು 'ಚಲನಶೀಲ' ವ್ಯವಸ್ಥೆಯಾಗಿ ಬದಲಾಗುತ್ತದೆ. ಅದನ್ನು ಯಾರೂ ಸೃಷ್ಟಿಸಲಾಗುವುದಿಲ್ಲ ಅಥವಾ ನಾಶಪಡಿಸಲೂ ಆಗುವುದಿಲ್ಲ. 
ಅಮೆರಿಕನ್ ಬಿಹೇವಿಯರ್ ಸಂಸ್ಥೆಯ ಸ್ಥಾಪಕರಾದ ಜಾನ್ ಬಿ ವ್ಯಾಟ್ಸನ್ ಮತ್ತು ಬಿ. ಎಫ್ ಸ್ಕಿನ್ನರ್ ರಂತಹ ಮಾನಸಿಕ ತಜ್ಞರು ಹಲವು ರೂಪಕಗಳನ್ನು ವಿವರಿಸುತ್ತಾರೆ. ಅವರ ಪ್ರಕಾರ ನವಜಾತ ಶಿಶುವೊಂದು 'ಖಾಲಿ ಸ್ಲೇಟ್'ಗೆ ಸಮ. ಮಗು ತನ್ನ ಮುಂದೆ ಜೀವನವನ್ನು ರೂಪಿಸಿಕೊಳ್ಳುತ್ತದೆ. ಅಂದರೆ ವರ್ತನೆಯ ವಿಧಾನವು ಯಾವಾಗಲೂ  ನಿರ್ದಿಷ್ಟ ರೂಪಕಕ್ಕೆ ಸಂಬಂಧಿಸಿದೆ ಎನ್ನಬಹುದು.  
ಎರಡನೆ ಮಹಾಯುದ್ಧದ ನಂತರ ಅಮೇರಿಕದಲ್ಲಿ ಮಾನವಿಕ ಮನೋವಿಜ್ಞಾನವು ಹುಟ್ಟಿಕೊಂಡಿತು. ಅದರ ಸ್ಥಾಪಕರಾದ ಕಾರ್ಲ್ ರೋಜರ್ಸ್ ಮತ್ತು ಅಬ್ರಹಾಂ ಮ್ಯಾಸ್ಲೊ  ಹೊಸ ರೂಪಕಗಳನ್ನು ಬಳಸಿದರು.  ರೋಜರ್ಸ್, ನಮ್ಮನ್ನು ಗಾಳಿ, ಮಣ್ಣು ಮತ್ತು ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಬಳಸಿಕೊಂಡು, ಹೂಬಿಡುವ ಸಸ್ಯಗಳಿಗೆ ಹೋಲಿಸಿದರೆ , ಮ್ಯಾಸ್ಲೋವ್ ನಮ್ಮನ್ನು ಸಣ್ಣ ಬೀಜದಿಂದ ಉದ್ಭವಿಸುವ ಭವ್ಯವಾದ ಮರಗಳಿಗೆ ಹೋಲಿಸಿದನು. 
ನಂತರ ಕಂಪ್ಯೂಟರ್ ತಂತ್ರಜ್ಞಾನ ಬೆಳೆದು, ಕೆಲವು ಮನೋವಿಜ್ಞಾನಿಗಳು ಮಾನವರು ಮೂಲಭೂತವಾಗಿ ಮಾಹಿತಿ ಸಂಸ್ಕರಣೆಗೆ ಅಥವಾ ಸೈಬರ್ ವ್ಯವಸ್ಥೆಯಂತಹ ಸಂಕೀರ್ಣ ವ್ಯವಸ್ಥೆಗೆ ಸಮವಾಗಿದ್ದಾರೆ.  ನಮ್ಮ ಅಸ್ಮಿತೆಯ ಅರ್ಥವು ಬರೀ ಭ್ರಮೆಯಷ್ಟೆ.  ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (artificial intelligence) ಕಂಡುಹಿಡಿದ  ತತ್ತ್ವಜ್ಞಾನಿ 'ಮಾರ್ವಿನ್ ಮಿನ್ಸ್ಕಿ' ಯವರ ಪುಸ್ತಕ 'ಸೊಸೈಟಿ ಆಫ್ ಮೈಂಡ್', ಅದರಲ್ಲಿ ಮಾನವ ಮನಸ್ಸು ನಿಜಕ್ಕೂ ಅಸಂಖ್ಯಾತ ಮೈಕ್ರೋಚಿಪ್ಗಳ  ಸಮೂಹವಾಗಿದೆ. ಅದಕ್ಕೆ ಸ್ವಂತ ಬುದ್ದಿಯಿಲ್ಲ ಎಂದು ವಾದಿಸುತ್ತಾರೆ. ಕೊನೆಗೆ, ನಮ್ಮ ಜೀವನ ಒಂದು ಯಾಂತ್ರದ ಹಾಗೆ ಎಂಬ ವಿವರಣೆಗೆ ತಿರುಗಿ ಬಂದಿದ್ದೇವೆ!
 ಒಂದು ಶತಮಾನದ ಮುಂಚೆ ಆಲ್ಫ್ರೆಡ್ ಆಡ್ಲರ್ ಅವರ ದೃಷ್ಟಿಕೋನದಲ್ಲಿ,  "ನಮ್ಮ ಜೀವನ ಯೋಜನೆಯು ಬಾಲ್ಯದಲ್ಲಿ ಪ್ರಾರಂಭವಾಗಿ ಆರು ವರ್ಷಕ್ಕೆಲ್ಲ ದೃಢವಾಗುತ್ತದೆ. ಹುಟ್ಟಿನಿಂದಲೇ ಇರುವ ದೈಹಿಕ ಮತ್ತು ಮಾನಸಿಕ ಶಕ್ತಿಗಳಿಂದ ರೂಪುಗೊಳ್ಳುತ್ತದೆ. ಅಲ್ಲದೆ ಕುಟುಂಬ ಸದಸ್ಯರೊಂದಿನ  ನಿರ್ದಿಷ್ಟ ಅನುಭವಗಳನ್ನು  ಒಳಗೊಂಡಿರುತ್ತದೆ." ಎಂದು  ವಿವರಿಸುತ್ತಾರೆ. 
ಅಲ್ಪ್ರೆಡ್ ಅವರ ಮಗನಾದ ಮನೋವೈದ್ಯ ಕರ್ಟ್ ಆಡ್ಲರ್ ಅವರು, "ಜೀವನದ ಯೋಜನೆ ಯಾವಾಗ ರೂಪಗೊಂಡಿತು ಎಂಬುದನ್ನು ತಿಳಿದಾಗ ನಾವು ನಮ್ಮ ಆಲೋಚನೆ ಮತ್ತು ವರ್ತನೆ ಬದಲಾಯಿಸಬಹುದು" ಎಂದು ಹೇಳುತ್ತಾರೆ.
ಸಂತೋಷವು ಕೇವಲ ಕವನ ಅಥವಾ ಅಲಂಕಾರಿಕ ವಿಷಯವಾಗಷ್ಟೇ ಪ್ರಸ್ತುತವಲ್ಲ. ಅಮೇರಿಕನ್ ಲೇಖಕ,  ಭಾಷಾತಜ್ಞ  ಜಾರ್ಜ್ ಲಕೋಫ್ ಮತ್ತು ತತ್ವಜ್ಞಾನಿ ಮಾರ್ಕ್ ಜಾನ್ಸನ್ ಅವರ ಪ್ರಕಾರ “ನಾವು ಗ್ರಹಿಸುವ, ಯೋಚಿಸುವ ಮತ್ತು ಕಾರ್ಯನಿರ್ವಹಿಸುವ ವಿಧಾನಗಳನ್ನು ರೂಪಕಗಳು ಪ್ರಭಾವಿಸುತ್ತವೆ.  ವಾಸ್ತವತೆಯು ಸಹ ರೂಪಕ ಎಂದು ವ್ಯಾಖ್ಯಾನಿಸಲಾಗಿದೆ. ಲಕೋಫ್ ಮತ್ತು ಜಾನ್ಸನ್ ಅವರು ಈ  ವಿಚಾರದ ಪ್ರಾಯೋಗಿಕ  ದತ್ತಾಂಶವನ್ನು ಒದಗಿಸದೆ, “ಸಮಯವೇ ಹಣ "ಎಂಬ ಭಾಷಣದ ಮೂಲಕ ಜನಪ್ರಿಯಗೊಳಿಸಿದರು.  ಅವರ ಪುಸ್ತಕವೊಂದು  ವ್ಯವಹಾರ ನಿರ್ವಹಣೆ ಮತ್ತು ಮನಸ್ಸಿನ ನಿರ್ವಹಣೆಯ ಕುರಿತು ಹೆಚ್ಚು ಪ್ರಾಮುಖ್ಯತೆ ನೀಡಿತು. 
ರಿಚರ್ಡ್ ಕೊಪ್ ಅವರು 1995 ರಲ್ಲಿ ವ್ಯಕ್ತಿ ಮತ್ತು ದಂಪತಿಗಳಿಗೆ ಚಿಕಿತ್ಸೆ ನೀಡಲು ರೂಪಕಗಳನ್ನು ಬಳಸಿದರು. ಇಲ್ಲಿ  ತಮ್ಮ ವೈಯಕ್ತಿಕ ಜೀವನ ಮತ್ತು ಸಂಬಂಧಗಳನ್ನು ವಿವರಿಸಲು ಜನರು ಬಳಸುವ ರೂಪಕಗಳನ್ನು ಆಧರಿಸಿ ಥೆರಪೀ ನೀಡುತ್ತಿದ್ದರು. ನ್ಯೂಜಿಲ್ಯಾಂಡಿನ ಚಿಕಿತ್ಸಕ ಡೇವಿಡ್ ಗ್ರೋವ್ ಅವರ ಪ್ರಕಾರ ರೂಪಕಗಳು ಪ್ರಜ್ಞೆ ಮತ್ತು ಸುಪ್ತ ಮನಸ್ಸಿನ ನಡುವೆ ಸಂಪರ್ಕ ಕಲ್ಪಿಸುತ್ತದೆ.
ಉದಾಹರಣೆಗೆ, ವ್ಯಕ್ತಿಯು "ನಾನು ಇಟ್ಟಿಗೆ ಗೋಡೆ ವಿರುದ್ಧ ಓದುತ್ತಿದ್ದೇನೆ" ಎಂದು ಹೇಳಿದಾಗ ಗ್ರೋವ್ ಅವರು ಕೇಳುತ್ತಾರೆ: " ಅದು ಯಾವುದರಿಂದ ನಿರ್ಮಿಸಿದ ಗೋಡೆ?  ಎಷ್ಟು ಎತ್ತರವಾಗಿತ್ತು ಮತ್ತು ಅದನ್ನು ನಿರ್ಮಿಸಿದವರು ಯಾರು? ಗೋಡೆಯೂ  ಚಲಿಸುತ್ತಿದೆಯೇ?  ಯಾವ ದಿಕ್ಕಿಗೆ ನೀವು ಓಡುತ್ತೀದ್ದೀರಿ ? ಈ ವಿವರಣೆಗಳ ಒಟ್ಟು ಮೊತ್ತವು ಮೆಟಾಫರ್ ಲ್ಯಾಂಡ್ಸ್ಕೇಪ್ ಎಂದು ಕರೆಯಲ್ಪಡುತ್ತದೆ. ಇದು ಸನ್ನಿವೇಶವನ್ನು ತಿಳಿಯಲು ನೆರವಾಗುತ್ತದೆ. 
ನಾನು ಕೊಲಂಬಿಯಾದಲ್ಲಿ ಸಹ-ಸಂಶೋಧಕರಾದ ಡಾ. ವಿಲಿಯಂ ಕಾಂಪ್ಟನ್ ಮತ್ತು ಕ್ಯಾಟಲಿನಾ ಅಕೋಸ್ಟಾ ಒರೊಝ್ಕೊ ಅವರೊಂದಿಗೆ ಅಧ್ಯಯನ ನಡೆಸಿದೆವು. ಅದರ ಫಲವಾಗಿ ವಿದ್ಯಾರ್ಥಿ ನಾಯಕರ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಕೇಂದ್ರೀಕರಿಸಲ್ಪಟ್ಟ ಲೇಖನಗಳು ಕಾಲೇಜು ವಿದ್ಯಾರ್ಥಿ ಪತ್ರಿಕೆಯಲ್ಲಿ ಪ್ರಕಟವಾದವು. ವಿದ್ಯಾರ್ಥಿಗಳು ತಮ್ಮ ಜೀವನದ ಮೌಲ್ಯ, ಗುರಿ, ನಿರ್ಧಾರ ತೆಗೆದುಕೊಳ್ಳುವ ಬಗೆ, ಈ ವಿಷಯಗಳ ಬಗ್ಗೆ ಪರಿಶೀಲಿಸಿದರು.  
ಕೆಲವು ವಿದ್ಯಾರ್ಥಿಗಳು "ಜೀವನ ಒಂದು ಪಯಣ" ಎಂದು ವಿವರಿಸಿದರು. ಕೆಲವರು "ಜೀವನ ಒಂದು ಸೆರೆ ಮನೆ" ಎಂದೂ ಹೇಳಿದರು. ವಿದ್ಯಾರ್ಥಿಗಳ ಎರಡೂ ಗುಂಪುಗಳು ಮುಖ್ಯವಾಗಿ ಸಕ್ರಿಯ, ಸಕಾರಾತ್ಮಕ ಮತ್ತು ವ್ಯಕ್ತಿಗತ ರೂಪಕಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ  ನಾಯಕತ್ವದ ವಿದ್ಯಾರ್ಥಿಗಳ ಜೀವನ-ರೂಪಕಗಳು ವೈದ್ಯಕೀಯ ವಿದ್ಯಾರ್ಥಿಗಳಿಗಿಂತ ಹೆಚ್ಚು ಸಾಮೂಹಿಕ ಮತ್ತು ಅಧ್ಯಾತ್ಮಿಕ ದೃಷ್ಟಿಯನ್ನೂ ಆಧಾರಿಸಿದೆ.
ಇಂದು ಹೊಸ ಜೀವನ ರೂಪಕಗಳು ಹೊರಹೊಮ್ಮುತ್ತಿವೆ. 1999-2003ರಲ್ಲಿ  ತೆರೆಕಂಡ 'ಮ್ಯಾಟ್ರಿಕ್ಸ್' ಸರಣಿಯ ಮೂರು ಚಲನಚಿತ್ರಗಳಲ್ಲಿ  ಆಧುನಿಕ ನಾಗರೀಕತೆಯ ಶಕ್ತಿಶಾಲಿ ರೂಪಕವು ಮೆಚ್ಚುಗೆಗೆ ಪಾತ್ರವಾಯಿತು. ಇದರಲ್ಲಿ ತೋರಿಸಿದಂತೆ ಯಂತ್ರಗಳು ನಮ್ಮ ಅಸ್ಮಿತೆಯನ್ನು ರೂಪಿಸಿ ವಾಸ್ತವ ಪ್ರಜ್ಞೆಯನ್ನು ಬದಲಿಸುತ್ತಿವೆ.
ಮಾರ್ಟಿನ್ ಲಾಸ್ ಎಂಬ ಅಮೆರಿಕಾದ ಬ್ಲಾಗ್ ಬರಹಗಾರರು  "ಮೆಟ್ರಿಕ್ಸ್ ಸರಣಿಯ ಚಲನಚಿತ್ರಗಳು ಹೊಸ ಶೈಲಿಯ ರೋಮಾಂಚಕ ಚಿತ್ರಗಳಿಗಿಂತ ಭಿನ್ನವಾಗಿವೆ. ಇವು ಇಂದಿನ ರೂಪಕವಾಗಿದ್ದು, ನಮ್ಮ ವ್ಯಕ್ತಿಗತ ಮತ್ತು ಸಾಮೂಹಿಕ ಸುಪ್ತಾವಸ್ಥೆಯ ನೈಜ  ಸ್ಥಿತಿಯನ್ನು ಬಿಂಬಿಸುತ್ತದೆ " ಎಂದಿದ್ದಾರೆ.
ಹಲವು ಸಾಮಾಜಿಕ ವಿಶ್ಲೇಷಕರ ಪ್ರಕಾರ ಅಂತರ್ಜಾಲವು ವಿಭಿನ್ನ ಹೊಸ ರೂಪಕಗಳನ್ನು ಸೃಷ್ಟಿಸುತ್ತಿದೆ. ಅಂದರೆ ನಾವೆಲ್ಲರೂ ಇಂದು ನಿರಂತರ ಪ್ರವಾಸಿಗರು. ಯಾವಾಗಲೂ ಜಾಲತಾಣದಿಂದ ಜಾಲತಾಣಕ್ಕೆ ಹಾರುತ್ತಿರುತ್ತೇವೆ. ಹೊಸ ಹೊಸ ಆನ್ ಲೈನ್  ಸಂಬಂಧವನ್ನು ಅಪೇಕ್ಷಿಸುತ್ತೇವೆ. ಯಾವುದೇ  ವಸ್ತುವನ್ನು ನೇರಾನೇರ ಅನುಭವಿಸಲಾಗದೆ ನಾವಿಂದು ಪ್ರವಾಸಿಗರಾಗಿ ಬದಲಾಗಿದ್ದೇವೆ ಎಂಬ ವಾದ ಇವರದು.  ಆದರೆ ಈ ಮಾತನ್ನು ಹೆಚ್ಚು ಜನರು ಒಪ್ಪುತ್ತಾರೆಯೇ ಎಂಬುದು ಊಹೆಗೆ ಬಿಟ್ಟದ್ದಾಗಿದೆ.
ನಿಮ್ಮ  ಜೀವನದಲ್ಲಿ ನಿಮ್ಮದೇ ಆದ ರೂಪಕಗಳನ್ನು ಹುಡುಕಿಕೊಳ್ಳಿ. ಅದು ಪರಿಪೂರ್ಣವಾಗಿ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org