ಮಹಿಳೆ: ಸ್ವ-ಆರೈಕೆಯೂ ಆದ್ಯತೆಯಾಗಲಿ

ಹೆಣ್ಣು ಮಕ್ಕಳಿಗೆ ಜವಾಬ್ದಾರಿ ಹೆಚ್ಚಿದಂತೆಲ್ಲಾ ಪ್ರೀತಿಪಾತ್ರರ ಆರೈಕೆಯ ಹೊಣೆಯೂ ಹೆಗಲೇರುತ್ತದೆ. ಜವಾಬ್ದಾರಿಗಳ ಜಂಜಾಟ, ಎಲ್ಲವನ್ನೂ ನಿಭಾಯಿಸುವ ಆತಂಕದಲ್ಲಿ ಮಹಿಳೆಯರು ಸ್ವ-ಅಗತ್ಯ, ಆರೈಕೆಯನ್ನೇ ನಿರ್ಲಕ್ಷಿಸಿ ಬಿಡುತ್ತಾರೆ. ಯಾವುದಕ್ಕೂ ಸಮಯವೇ ಸಿಗುತ್ತಿಲ್ಲ, ಎಲ್ಲರ ಅಗತ್ಯಕ್ಕೆ ತಕ್ಕಂತೆ ನಡೆದುಕೊಂಡರೂ ಮನಸ್ಸಿಗೆ ನೆಮ್ಮದಿಯಿಲ್ಲ ಎಂದು ವ್ಯಥೆ ಪಡುತ್ತಾ, ಅನುದಿನ ಕಿರಿಕಿರಿ ಅನುಭವಿಸುವ ಮಹಿಳೆಗೆ ತನ್ನ ದೇಹ-ಮನಸ್ಸುಗಳೂ ಗಮನ ಬೇಡುತ್ತಿವೆ ಎಂಬುದೇ ಬಹಳಷ್ಟು ಸಾರಿ ಅರ್ಥವಾಗುವುದಿಲ್ಲ.

ಸ್ವ-ಆರೈಕೆಯನ್ನು ಕಡೆಗಣಿಸಿದಾಗ:

38ರ ಆಸುಪಾಸಿನಲ್ಲಿರುವ ಶೀಲಾ ಉದ್ಯೋಗಸ್ಥೆ. ಮದುವೆಯಾಗಿ 14 ವರ್ಷಗಳಾಗಿವೆ. ವೃತ್ತಿಯಿಂದ ಕುಟುಂಬದವರಿಗೆ ಯಾವುದೇ ರೀತಿಯ ಕುಂದು-ಕೊರತೆ ಬರದಂತೆ ನೋಡಿಕೊಳ್ಳಬೇಕು, ವೃತ್ತಿ-ಮನೆಯ ಜವಾಬ್ದಾರಿ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕೆಂಬ ಹಂಬಲ. ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಬಯಕೆಯಿಂದ ಮನೆಕೆಲಸಗಳನ್ನೂ ತಾನೇ ಮಾಡುವ ಪರಿಪಾಠವಿಟ್ಟುಕೊಂಡಿದ್ದಾರೆ.

ಮಕ್ಕಳಿಬ್ಬರ ಪಾಲನೆ, ಗಂಡನ ಅಗತ್ಯಗಳಿಗೆ ಸ್ಪಂದಿಸುವುದರ ಜೊತೆಗೆ ಹಾಸಿಗೆ ಹಿಡಿದಿರುವ ಅತ್ತೆಯ ಹೊಣೆಯೂ ಶೀಲಾರ ಮೇಲಿದೆ. ಇತ್ತೀಚೆಗೆ ಸಣ್ಣದಕ್ಕೂ ಕೋಪ, ಕಿರಿಕಿರಿ, ದುಃಖಿಸುವುದು, ಮನೆಯವರ ಮೇಲೆ ರೇಗಾಡುವುದು ಹೆಚ್ಚಾಗಿದೆ. ದೈಹಿಕವಾಗಿ ಯಾವ ಸಮಸ್ಯೆ ಇಲ್ಲದಿದ್ದರೂ ಸುಸ್ತು, ಬೆನ್ನು ನೋವು ಜಾಸ್ತಿಯಾಗಿದೆ, ನಿದ್ರೆ ಕಡಿಮೆಯಾಗಿದೆ.

ಹಾಗೆಂದು ಕಾಟಾಚಾರಕ್ಕೆ ಏನೋ ಒಂದು ಕೆಲಸ ಮಾಡಲೂ ಮನಸ್ಸಾಗುವುದಿಲ್ಲ. ಮನೆಯವರಿಗಾಗಿಯೇ ಇಷ್ಟೆಲ್ಲಾ ಮಾಡಿದರೂ ಮನೆ-ಮನದಲ್ಲಿ ಶಾಂತಿಯಿಲ್ಲ, ವೃತ್ತಿಯಲ್ಲಿ ನೆಮ್ಮದಿಯಿಲ್ಲ, ಸಂಬಂಧಗಳಲ್ಲೂ ಸಾಮರಸ್ಯವಿಲ್ಲ. ಮಕ್ಕಳೂ ನೀನು ರೇಗಾಡುವುದರಿಂದಲೇ ಸಮಸ್ಯೆ ಎಂದು ದೂರಲು ಶುರುವಿಟ್ಟುಕೊಂಡಿದ್ದಾರೆ. ತನಗೋಸ್ಕರ ಏನೊಂದೂ ಮಾಡದೇ ಇಷ್ಟೆಲ್ಲಾ ಮಾಡಿದರೂ ತನ್ನಿಂದೇನು ಲೋಪವಾಗಿದೆ ಎಂದು ಶೀಲಾಗೆ ತಿಳಿಯುತ್ತಿಲ್ಲ.

ಸ್ವ ಆರೈಕೆ: ಮಹಿಳೆಯರಿಗೇಕೆ ಮುಖ್ಯ?
ಸ್ವ ಆರೈಕೆಯೆಂದರೆ ನಮಗಿರುವ ಅಗತ್ಯಗಳೇನು ಎಂದು ಗುರುತಿಸಿಕೊಂಡು ನಮ್ಮ ಆರೈಕೆಯಲ್ಲಿ ನಾವೇ ತೊಡಗಿಕೊಳ್ಳುವುದು. ದೇಹ-ಮನಸ್ಸುಗಳ ಕಾಳಜಿ ಮಾಡುತ್ತಾ ನಮ್ಮ ಅವಶ್ಯಕತೆಗಳನ್ನೂ ಪರರ ಅವಶ್ಯಕತೆಗಳಂತೆಯೇ ಗೌರವಿಸಿ ಪೋಷಿಸುವುದು. ಸ್ವ-ಆರೈಕೆ ಅತ್ಯಗತ್ಯ. ಅದು ಇಂಧನವಿದ್ದಂತೆ. ಇಂಧನವಿಲ್ಲದ ವಾಹನ ಎಷ್ಟು ಮಜುಬೂತಾಗಿದ್ದರೇನು ಎಲ್ಲಿಯೂ ಚಲಿಸಲಾರದು!
ಮಹಿಳೆ ತನ್ನ ಜೀವನದ ಬಹುಪಾಲು ಸಮಯವನ್ನು ತನ್ನವರ ಆರೈಕೆಯಲ್ಲೇ ಕಳೆಯುತ್ತಾಳೆ.
ಪರರ ಆರೈಕೆ ಮಹಿಳೆಯಾಗಿ ತನ್ನ ಕರ್ತವ್ಯವೆಂದು ಭಾವಿಸಿಕೊಳ್ಳುತ್ತಾಳೆ. ಸಂಗಾತಿ, ಮಕ್ಕಳು, ಸೇಹಿತರು, ಕುಟುಂಬದವರು, ಬಂಧುಗಳು, ವೃತ್ತಿ, ಮನೆಕೆಲಸ, ಸಂಘ-ಸಂಸ್ಥೆಯ ಚಟುವಟಿಕೆಗಳು, ಹೀಗೇ ಮಹಿಳೆಯ ದಿನಚರಿ ಪರರ ಸುತ್ತಲೇ ಸುತ್ತುತ್ತಿರುವುದು. ಎಲ್ಲರ ಕಾಳಜಿ ಮಾಡುತ್ತಾ, ಸರಿದೂಗಿಸಿಕೊಂಡು ಹೋಗುವುದರಲ್ಲಿ ಸೈ ಎನಿಸಿಕೊಳ್ಳುವ ಹಂಬಲದಲ್ಲಿ ತನ್ನನ್ನೇ ತಾನು ಮರೆತುಬಿಡುವುದು ಬಹಳ ಸುಲಭ. ಒತ್ತಡ, ಆತಂಕಗಳಲ್ಲಿ ತನ್ನ ಆರೋಗ್ಯ, ಆನಂದಗಳನ್ನು ಕಡೆಗಣಿಸಿದ ಮಹಿಳೆಯರು ದುಃಖ, ಅಸಮಾಧಾನ, ಅವಿಶ್ವಾಸ, ಅತೃಪ್ತಿಗಳಲ್ಲಿ ಕೊರಗುತ್ತಾರೆ. ಈ ಋಣಾತ್ಮಕತೆಯೇ ತಾವು ಸರ್ವಸ್ವವನ್ನೂ ತ್ಯಜಿಸಿ ಪೋಷಿಸುತ್ತಿರುವ ಸಂಬಂಧಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಅರಿಯದೇ ಸಮಸ್ಯೆಗಳ ವರ್ತುಲದಲ್ಲಿ ಸಿಲುಕಿ ನರಳುತ್ತಾರೆ. 
ತನ್ನ ಆರೈಕೆಯನ್ನೇ ಕಡೆಗಣಿಸಿದಾಗ: 
ತನ್ನ ಕಾಳಜಿ ಮಾಡಿಕೊಳ್ಳುವುದನ್ನೇ ಮರೆಯುವುದು ಹಲವಾರು ದೈಹಿಕ-ಮಾನಸಿಕ ತೊಂದರೆಗಳಿಗೆ ಆಹ್ವಾನವಿತ್ತಂತೆ. ಬಹಳಷ್ಟು ಮಹಿಳೆಯರು ಅವಲಂಭಿತರ ಪೋಷಣೆಯಲ್ಲಿ ತಮ್ಮ ದೇಹಾರೋಗ್ಯವನ್ನೇ ಕಡೆಗಣಿಸಿರುತ್ತಾರೆ. ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು, ಅಗತ್ಯವಾದ ಪೌಷ್ಟಿಕ ಆಹಾರ ಸೇವನೆ ಇವುಗಳ ಬಗ್ಗೆ ನಿಗಾ ವಹಿಸದಿರುವುದರಿಂದ, ಆರೋಗ್ಯಕರ ಜೀವನಶೈಲಿ, ದಿನಚರಿಯನ್ನು ಅಳವಡಿಸಿಕೊಳ್ಳಲು ವಿಫಲವಾಗದಿರುವುದರಿಂದ ದೇಹಾರೋಗ್ಯದಲ್ಲಿ ವ್ಯತ್ಯಯ, ದೀರ್ಘಕಾಲಿಕ ದೈಹಿಕ ಅನಾರೋಗ್ಯಗಳು, ನೋವುಗಳು ಮಹಿಳೆಯರ ಸಂಗಾತಿಯಾಗಿ ಬಿಡುತ್ತಿವೆ.
ಒತ್ತಡ, ಆತಂಕದ ಬದುಕು ಮಾನಸಿಕ ಆರೋಗ್ಯವನ್ನು ಹದೆಗೆಡಿಸುತ್ತದೆ. ದೀರ್ಘ ಸಮಯ ಉಳಿದುಬಿಟ್ಟ ಒತ್ತಡ ದೇಹಾರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಸ್ವ-ಆರೈಕೆ ಕಡೆಗಣಿಸುವ ಮಹಿಳೆಯರು ಖಿನ್ನತೆ, ಆತಂಕದ ಸಮಸ್ಯೆಗಳು, ಇನ್ನಿತರ ಮಾನಸಿಕ ತೊಂದರೆಗಳಿಂದ ಬಳಲುತ್ತಾರೆ ಹಾಗೂ ಭಾವನಾತ್ಮಕ ನೋವು, ಹತಾಶೆ, ಯಾತನೆಗಳಿಂದ ಜರ್ಝರಿತವಾಗುತ್ತಾರೆ. ಅಸಮರ್ಥಳಾಗಿ ಕಾಣಿಸಿಕೊಳ್ಳುವ ಭಯದಿಂದ ತನಗಾಗುತ್ತಿರುವ ಒತ್ತಡದ ಯಾತನೆಯನ್ನು ಯಾರಲ್ಲಿಯೂ ಹೇಳಿಕೊಳ್ಳದ ಮಹಿಳೆ ಒಂಟಿತನ, ಏಕತಾನತೆ, ಸಾಮಾಜಿಕ ವಿಮುಖತೆಯಿಂದಲೂ ನರಳಬಹುದು.
ತ್ಯಾಗ, ನಿಸ್ವಾರ್ಥತೆ ಎಂಬ ಆಲೋಚನೆಗಳಿಗೆ ಜೋತುಬಿದ್ದು ಒಳಗಿನ ಸಣ್ಣಸಣ್ಣ ಖುಷಿಗಳನ್ನು ಅದುಮಿಬಿಟ್ಟರೆ ಮನದೊಳಗೆ ದುಗುಡ ಮಾತ್ರವೇ ಉಳಿಯುವುದು ಮತ್ತು ಅದನ್ನೇ ಅರಿವಿಲ್ಲದೇ ನಮ್ಮವರಿಗೂ ನಾವು ಹರಡುವೆವು!
ಸ್ವ ಆರೈಕೆ: ಆಲೋಚನೆಯೇ ನಿಮ್ಮನ್ನು ನಿರ್ಬಂಧಿಸುತ್ತಿದೆಯೇ?
ಸಾಕಷ್ಟು ಮಹಿಳೆಯರಿಗೆ ವೈಯಕ್ತಿಕ ಸುಖ-ಸಂತೋಷವೂ ಮುಖ್ಯವೆಂಬ ತಿಳಿವೇ ಇರದು. ತನಗೇ ತಾನು ಕಟ್ಟುಪಾಡು ವಿಧಿಸಿಕೊಳ್ಳುವಂತಹ ಆಲೋಚನೆಗೆ ಜೋತು ಬೀಳುವುದರಿಂದ ಸಮಸ್ಯೆಯಿಂದ ಹೊರಬರುವ ಮಾರ್ಗವೇ ಕಾಣದಾಗುತ್ತದೆ.
ನಿರ್ಬಂಧಿಸುವ ಈ ಯೋಚನಾ ಲಹರಿ ನಿಮ್ಮಲ್ಲಿದೆಯೇ ಪರಿಶೀಲಿಸಿ: 
  • ಸ್ವ-ಆರೈಕೆ ಸ್ವಾರ್ಥ: ತನ್ನ ಇಷ್ಟಗಳಿಗೆ ಗಮನ ನೀಡುವುದೇ ಸ್ವಾರ್ಥವೆಂದು ಕೆಲ ಮಹಿಳೆಯರ ಆಲೋಚನೆಯಿರುವುದು. ಸ್ವ-ಆರೈಕೆಯೆಂದರೆ ಎಲ್ಲರನ್ನೂ ಅಲಕ್ಷಿಸಿ    ಸ್ವ-ಪೋಷಣೆಯಲ್ಲಿ ತೊಡಗಿಬಿಡುವ ಸ್ವಾರ್ಥವಲ್ಲ. ಎಲ್ಲರಂತೆ ತನಗೂ ಪ್ರೀತಿ-ಪೋಷಣೆಯ ಅವಶ್ಯಕತೆಯಿದೆ ಎಂದು ಅರಿತು ಅದನ್ನು ಪೂರೈಸುವುದು. 
  • ಪರರ ಆರೈಕೆಗೆಂದೇ ಹೆಣ್ಣುಮಕ್ಕಳ ಜೀವನವಿದೆ: ಒಳ್ಳೆಯ ಸಂಸಾರಸ್ಥೆಯೆಂದರೆ ಅತಿ ಹೆಚ್ಚು ಪರರಿಗೆ ಕೊಡುವುದು ಮತ್ತು ಅತೀ ಕಡಿಮೆ ಸ್ವಂತಕ್ಕಾಗಿ ಬಯಸುವುದು ಎಂದು ಹೆಣ್ಣುಮಕ್ಕಳು ನಂಬಿರುವರು. ತನ್ನನ್ನು ನಿರ್ಲಕ್ಷಿಸಿ ತನ್ನವರ ಸೇವೆಗೈಯುವುದು ಅತ್ಯಂತ ಸಹಜವೆಂಬ ಆಲೋಚನೆ ಸಲ್ಲದು.
  • ಎಲ್ಲರನ್ನು ಮೆಚ್ಚಿಸಲೇಬೇಕಿದೆ: ಎಲ್ಲಾ ಸಮಯದಲ್ಲೂ ಎಲ್ಲರ ಮೆಚ್ಚುಗೆ, ಮನ್ನಣೆಯನ್ನು ಪಡೆಯುವುದು ದುಸ್ತರ. ಎಲ್ಲರೂ ಮೆಚ್ಚಿದರೆ ಮಾತ್ರವೇ ತಾನು ಒಳ್ಳೆಯ ಪತ್ನಿ, ತಾಯಿಯೆನಿಸಿಕೊಳ್ಳಲು ಅರ್ಹಳು ಎಂಬ ಅನಿಸಿಕೆಯಿದೆ. ಮೆಚ್ಚುಗೆಯ ಹಂಬಲ ಸಾಮಾನ್ಯ. ಮೆಚ್ಚಿದರೆ ಸಂತೋಷವೇ. ಆದರೆ ಆತ್ಮತೃಪ್ತಿಗಿಂತ ಪರರ ಬಳಿ ಸೈ ಎನಿಸಿಕೊಳ್ಳುವುದೇ ಪ್ರಾಶಸ್ತ್ಯವಾಗಿಬಿಟ್ಟರೆ ಕಷ್ಟವಾದೀತು.
  • ಸೂಪರ್‍ವುಮನ್‍ನಂತೆ ಕೆಲಸ ಮಾಡಬೇಕು: ಮಹಿಳೆಯರು ತಾವೂ ಸಾಮಾನ್ಯ ಮನುಷ್ಯರು ಎಂಬುದನ್ನೇ ಮರೆತುಬಿಡುತ್ತಾರೆ. ನೂರೆಂಟು ಕೆಲಸಗಳನ್ನು ಹಚ್ಚಿಕೊಂಡು ಎಲ್ಲವೂ ತನ್ನಿಂದಲೇ ನಡೆಯಬೇಕೆಂದುಕೊಂಡು ಒದ್ದಾಡುವುದು ಸಾಮಾನ್ಯವಾಗಿ ಬಿಟ್ಟಿರುತ್ತದೆ. ಅತೀ ನಿರೀಕ್ಷಿಸುವುದು ಹೆಚ್ಚಿನ ಒತ್ತಡ, ನಿರಾಶೆಗಳನ್ನಷ್ಟೇ ತಂದೊಡ್ಡಬಲ್ಲದು. ಇಲ್ಲಿ ಯಾರೂ ಅತೀಂದ್ರಿಯ ಶಕ್ತಿಯ ಸೂಪರ್ ವುಮನ್‍ಗಳಲ್ಲ. ನಮ್ಮ ಸಾಮರ್ಥ್ಯ ಮತ್ತು ಬಲಹೀನತೆಗಳ ಬಗ್ಗೆ ಸರಿಯಾದ ಮಾಹಿತಿಯಿದ್ದರೆ ನಾವು ಏನೋ ಮಾಡಲಿಲ್ಲವೆಂದು ಕೊರಗುವುದು ತಪ್ಪುತ್ತದೆ!
ಮಹಿಳೆಯ ಕಾಳಜಿ ಮಾಡಿ!
ಹೆಣ್ಣುಮಕ್ಕಳ ಕಾಳಜಿಯನ್ನು ಅವರಷ್ಟೇ ಅಲ್ಲ ಅವರ ಪ್ರೀತಿಪಾತ್ರರೂ ಅಲಕ್ಷಿಸುವುದು ದುರದೃಷ್ಟಕರ. ತನಗೋಸ್ಕರ ಸಮಯ ವಹಿಸುವುದು ಕ್ಷುಲ್ಲಕ, ಸ್ವಾರ್ಥ, ಅನಗತ್ಯ ಎಂದು ಸಾಮಾಜಿಕವಾಗಿ ಪರಿಗಣಿತವಾಗುವುದರಿಂದ ಸ್ವ-ಆರೈಕೆಯೇ ತಪ್ಪು ಎಂದು ಮಹಿಳೆಯರು ಭಾವಿಸಿಕೊಂಡಿರುತ್ತಾರೆ. ನಿಮ್ಮ ಪ್ರೀತಿಪಾತ್ರ ಹೆಣ್ಣುಮಗಳು ಬರೀ ತನ್ನವರ ಆರೈಕೆಯಲ್ಲೇ ನಿರತಳಾಗಿಬಿಟ್ಟಿದ್ದಾಳಾ? ಅವಳ ದೇಹ-ಮನಸ್ಸೂ ಆರೈಕೆ ಬೇಡುತ್ತಿದೆ ಎಂದು ಮನಗಾಣಿ. ಕೈಲಾದ ಸಹಾಯ, ಪ್ರೀತಿ-ಕರುಣೆ ತೋರ್ಪಡಿಸುವುದು, ಅವಳ ಸಮಯವನ್ನು ಗೌರವಿಸುವುದು, ಭಾವನಾತ್ಮಕ ಬೆಂಬಲ ವ್ಯಕ್ತಪಡಿಸುವುದರ ಮೂಲಕ ನೀವೂ ಕಾಳಜಿ ಮಾಡಿ, ತನ್ನ ಕಾಳಜಿ ವಹಿಸುವಂತೆಯೂ ಪ್ರೇರೇಪಿಸಿ.
ಸ್ವ-ಆರೈಕೆಯ ಸೂತ್ರಗಳು:
ದಿನನಿತ್ಯ ಬದುಕಿನಲ್ಲಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹಾಗೂ ಸಂತಸಕೊಡುವ ಚಟುವಟಿಕೆಯನ್ನು ರೂಡಿಸಿಕೊಳ್ಳುವುದು ಸ್ವ-ಆರೈಕೆಯ ಪ್ರಮುಖಾಂಶಗಳು. ನಿಮ್ಮ ದಿನಚರಿಯನ್ನು ಅಭ್ಯಸಿಸಿ, ಬದಲಾವಣೆಗಳನ್ನು ಅಳವಡಿಸಿಕೊಳ್ಳಿ.
  • ‘ಯಾವ ಕೆಲಸಕ್ಕೆ ನಾನು ಬೇಕು?’ ಕೇಳಿಕೊಳ್ಳಿ: ಎಲ್ಲಾ ಕೆಲಸಗಳನ್ನೂ ನಾನೇ ಮಾಡಬೇಕು ಎಂಬ ಒತ್ತಡಕ್ಕೊಳಗಾಗದೇ ‘ಯಾವ ಕೆಲಸಕ್ಕೆ ನಾನು ಬೇಕು?’ ಕೇಳಿಕೊಳ್ಳಿ. ಮಕ್ಕಳು-ಮನೆಯವರೊಂದಿಗಿನ ಒಡನಾಟ, ಹವ್ಯಾಸ, ಉದ್ಯೋಗದಂತಹ ಕಾರ್ಯಚಟುವಟಿಗೆಳನ್ನು ನಿರ್ವಹಿಸಲು ನಮ್ಮದೇ ಅವಶ್ಯಕತೆಯಿದೆ. ಇನ್ನುಳಿದ ಕೆಲಸಗಳನ್ನು ಕುಟುಂಬದವರ, ಹೊರಗಿನವರ ಸಹಾಯದೊಡನೆ ಪೂರೈಸಿಬಿಡಬಹುದು. ನಮ್ಮ ಅಗತ್ಯತೆ ಇರುವ ಕೆಲಸಗಳನ್ನಷ್ಟೇ ನಾವು ಮಾಡಿದರೆ ಎಷ್ಟೋ ಆತಂಕ ನಿವಾರಣೆಯಾದಂತೆ.
  • ಆದ್ಯತೆ ಕೊಡುವುದನ್ನು ಅಭ್ಯಸಿಸಿ: ಅತೀ ಮುಖ್ಯವಾದ ಕೆಲಸ ಯಾವುದು? ಯಾವ ಪುಟ್ಟ ಕೆಲಸ ನನಗಿಂದು ಸಂತಸ ತರಬಲ್ಲದು? ಯಾವುದನ್ನು ನಾನಿಂದು ಮಾಡಿದರೆ ಭವಿಷ್ಯದ ಯೋಜನೆಗೆ ಒಂದಡಿ ಇಟ್ಟಂತೆ ಆಗುವುದು? ನಿರ್ಧರಿಸಿ ಮತ್ತು ಅದನ್ನು ಮೊದಲು ಮಾಡುವತ್ತ ಗಮನ ನೀಡಿ. ಹಾಗಲ್ಲದೇ ಎಲ್ಲಾ ಚಿಕ್ಕಪುಟ್ಟ ಕೆಲಸಗಳನ್ನೂ ಬಹಳ ಸಮಯದವರೆಗೂ ಮಾಡುತ್ತಲೇ ಕುಳಿತು ಬಿಟ್ಟರೆ ದೇಹ-ಮನಸ್ಸು ಬಸವಳಿದುಬಿಡುವುದು.
  • ಸ್ವ ಆರೈಕೆ ಸ್ವಾರ್ಥವಲ್ಲ ಅಗತ್ಯ ಎನ್ನುವುದನ್ನು ಮನಗಾಣಿ: ವಿಮಾನದಲ್ಲಿ ಆಕ್ಸಿಜನ್ ಮಾಸ್ಕ್ ಅನ್ನು ಮೊದಲು ನೀವು ಧರಿಸಿ ನಂತರ ಸಹಾಯಕ್ಕೆ ಮುಂದಾಗಬೇಕು ಎಂದು ಸೂಚಿಸುವಂತೆ ಸ್ವ-ಆರೈಕೆ ಆಮ್ಲಜನಕವಿದ್ದಂತೆ! ನಾವು ದೈಹಿಕ-ಮಾನಸಿಕವಾಗಿ ಚೈತನ್ಯಭರಿತರಾಗಿದ್ದರೆ ಮಾತ್ರ ನಮ್ಮವರ ಆರೈಕೆ ಸಮರ್ಥವಾಗಿ ಮಾಡಲು ಸಾಧ್ಯ ಎಂದು ತಿಳಿಯಿರಿ.
  • ದೈಹಿಕ-ಮಾನಸಿಕ ಅಗತ್ಯಗಳೇನು ಕೇಳಿಕೊಳ್ಳಿ: ನಿಮ್ಮ ದಿನಚರಿಯಲ್ಲಿ ಯಾವ ಚಟುವಟಿಕೆಯನ್ನು ಅಳವಡಿಸಿಕೊಂಡರೆ ದೇಹ-ಮನಸ್ಸಿಗೆ ವಿಶ್ರಾಂತಿ ಸಿಗಬಹುದು, ನನಗೇನಿಷ್ಟ? ಪ್ರಶ್ನಿಸಿಕೊಳ್ಳಿ. ಆರೋಗ್ಯಕರ ಜೀವನ ಶೈಲಿ ರೂಢಿಸಿ, ಆನಂದಿಸಿ.
  • ಇಷ್ಟದ ಚಟುವಟಿಕೆಗಳನ್ನು ಪಟ್ಟಿಮಾಡಿ: ವ್ಯಾಯಾಮ, ಪುಟ್ಟನಿದ್ದೆ, ಸಾಕು ಪ್ರಾಣಿಯೊಂದಿಗೆ ಒಡನಾಟ, ಬಿಸಿನೀರಿನ ಸ್ನಾನ, ಧ್ಯಾನ, ಕುಟುಂಬದವರೊಂದಿಗಿನ ಒಡನಾಟ, ಸಂಗೀತ, ಸಾಹಿತ್ಯ, ಓದು, ಧ್ಯಾನ, ವಿಹಾರ, ಬರವಣಿಗೆ, ಆಟ, ಹಿಗೇ.. ನಿಮಗಿಷ್ಟವಾದ್ದು, ಮನಕ್ಕೆ ಮುದನೀಡುವಂತದ್ದು ಯಾವುದಿದೆಯೋ ಅದನ್ನು ಕಂಡುಕೊಳ್ಳಿ- ಆಯ್ದುಕೊಳ್ಳಿ.
  • ಕೊಂಚ ಸಮಯ ನೀಡಿ, ಸ್ವಲ್ಪ ಮಟ್ಟದಿಂದ ಪ್ರಾರಂಭಿಸಿ: ಸ್ವ-ಆರೈಕೆಗೆ ದುಬಾರಿ ಖರ್ಚು, ಗಂಟಗಟ್ಟಲೆ ಸಮಯ ವ್ಯಯಿಸಬೇಕೆಂದಿಲ್ಲ. ಪುಟ್ಟ, ಮುಖ್ಯವಾದ ಸ್ವ-ಆರೈಕೆಯ ಅಭ್ಯಾಸವೊಂದನ್ನು  ದಿನಕ್ಕೆ ಕನಿಷ್ಟ 15-20 ನಿಮಿಷವನ್ನಾದರೂ ಅಭ್ಯಸಿಸಿದರೆ ಬದುಕಿನ ಗೊಂದಲಗಳ ನಡುವೆಯೂ ಕಿರುನಗೆಯೊಂದು ಮೂಡಬಹುದು. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org