ಒತ್ತಡದ ಜೀವನ ನಿಮ್ಮದೇ?

ಒತ್ತಡದ ಜೀವನ ನಿಮ್ಮದೇ?

34ರ ರಾಮಕೃಷ್ಣ ಖಾಸಗಿ ಕಂಪನಿ ಉದ್ಯೋಗಿ. ಮದುವೆಯಾಗಿ 5ವರ್ಷಗಳಾಗಿವೆ. 2ವರ್ಷದ ಮಗನಿದ್ದಾನೆ. ಕೆಲಸದಲ್ಲಿ ಒತ್ತಡ ಜಾಸ್ತಿ ಎನಿಸುತ್ತಿದೆ. ಕೆಲಸದ ವಾತಾವರಣದಿಂದ ಬದಲಾವಣೆ ಬಯಸಿರುವ ಅವರು ಓದನ್ನು ಮುಂದುವರೆಸುವ ಸಲುವಾಗಿ ಕೋರ್ಸುಗಳಿಗೆ ಸೇರಿಕೊಂಡಿದ್ದಾರೆ. ಕೆಲಸದಲ್ಲಿನ ಹೆಚ್ಚಿನ ಅವಧಿ, ಒತ್ತಡದಿಂದ ಓದಿನಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲೂ ಮಗುವಿಗೆ ಹೆಚ್ಚಿನ ಗಮನ ನೀಡಬೇಕಾದ ಅನಿವಾರ್ಯತೆಯಿದೆ. ಈ ನಡುವೆ ಪತ್ನಿಯೊಡನೆ ಮನಸ್ತಾಪಗಳೂ ಜಾಸ್ತಿಯಾಗಿವೆ. ಮನೆ-ಆಫೀಸ್ ಎರಡೂ ಕಡೆ ರೇಗಾಡುವುದು, ಕೋಪ, ಕಿರಿಕಿರಿ ಹೆಚ್ಚಾಗಿದೆ. ರಾಮಕೃಷ್ಣರಿಗೆ ಬದುಕಿನಲ್ಲಿ ನೆಮ್ಮದಿಯಿಲ್ಲ, ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎನಿಸುತ್ತಿದೆ. ಈ ನಡುವೆ ಟ್ರಾಫಿಕ್‍ಜಾಮ್, ಮಗುವಿನ ಅಳು ಎಲ್ಲಾ ಸಣ್ಣಸಣ್ಣ ಕಿರಿಕಿರಿಗಳೂ ಬಹಳ ದೊಡ್ಡದೆನಿಸಲು ಶುರುವಾಗಿವೆ. ಕಳೆದ 3 ತಿಂಗಳಿನಿಂದ ತಲೆನೋವು, ಬೆನ್ನುನೋವು ಕಾಣಿಸಿಕೊಂಡಿದ್ದು ವೈದ್ಯರು ಒತ್ತಡವನ್ನು ತಗ್ಗಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಏನಿದು ಒತ್ತಡ?

ಒತ್ತಡ ಯಾರಿಗಿಲ್ಲ? ಮಾಡಲು ಸಾಕಷ್ಟು ಕೆಲಸಗಳು ಬಾಕಿ ಉಳಿದಿದ್ದಾಗ, ಸರಿಯಾಗಿ ವಿಶ್ರಮಿಸದೇ ಇದ್ದಲ್ಲಿ, ಹಣಕಾಸು, ಸಂಬಂಧ ಮೊದಲಾದ ವಿಚಾರಗಳ ಕುರಿತು ಚಿಂತೆ ಬಾಧಿಸುತ್ತಿದ್ದಲ್ಲಿ ಒತ್ತಡ ಕಾಡುವುದು ಮಾಮೂಲು. ಒತ್ತಡ ದೈಹಿಕವಾಗಿ ಹಾಗೆಯೇ ಮಾನಸಿಕವಾಗಿ ಅನುಭವಕ್ಕೆ ಬರುವುದು. ಹೆಚ್ಚಿನ ಒತ್ತಡದ ಸಂದರ್ಭ ಎದುರಾದಾಗ ವೇಗವಾಗಿ, ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ದೇಹ ರಕ್ತಪರಿಚಲನೆ, ಹೃದಯದ ಬಡಿತ, ಉಸಿರಾಟದ ವೇಗದಲ್ಲಿ ಹೆಚ್ಚಳವನ್ನುಂಟು ಮಾಡುತ್ತಾ ಜೊತೆಗೇ ಕೆಲ ದೈಹಿಕ ಹೊಂದಾಣಿಕೆಗಳ ಮೂಲಕ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುತ್ತದೆ. ಆದರೆ ಈ ಹೆಚ್ಚಿನ ಒತ್ತಡದ ಸ್ಥಿತಿಯೇ ಆಗಾಗ್ಗೆ ಎದುರಾಗುತ್ತಿದ್ದರೆ, ಅದನ್ನು ನಿಭಾಯಿಸಲು ವಿಫಲವಾಗಿ ಒತ್ತಡವೇ ಬಹಳ ಸಮಯ ಮುಂದುವರೆದುಬಿಟ್ಟರೆ ಅದು ದೈಹಿಕ, ಮಾನಸಿಕ ಸ್ವಾಸ್ಥ್ಯ ಮತ್ತು ಯೋಗಕ್ಷೇಮವನ್ನು ಕುಂಠಿತಗೊಳಿಸಿಬಿಡುವುದು. ಬಹಳ ಸಾರಿ ಆತಂಕದ ಸಂದರ್ಭ ಎದುರಾದಾಗ ತೀವ್ರಕರವಾದ ಒತ್ತಡ ಅನುಭವವಾಗಿ ಸನ್ನಿವೇಶ ಮುಗಿದ ನಂತರ ಕಡಿಮೆಯಾಗಿಬಿಡುವುದು. ಅದೇ ದೀರ್ಘಕಾಲಿಕ ಒತ್ತಡ ಹಲವು ಸಮಯದವರೆಗೂ ಮುಂದುವರೆದು ಹಾನಿಯುಂಟು ಮಾಡುವುದು.

ಸ್ವಲ್ಪ ಮಟ್ಟದ ಒತ್ತಡ ಅವಶ್ಯಕ, ನಿರುಪದ್ರವಿ. ಅದು ಕೆಲಸ ಮಾಡುವಂತೆ ಪ್ರೇರೇಪಿಸುವುದು. ಇನ್ನು ಮದುವೆ, ಗೆಲುವು, ಪ್ರೊಮೋಷನ್ ಮೊದಲಾದ ಸಂದರ್ಭದಲ್ಲೂ ಅನುಭವಕ್ಕೆ ಬರುವ ಒಳ್ಳೆಯ ಒತ್ತಡ (eustress) ಹಾನಿಕಾರಕವಲ್ಲದ್ದು. ಹಾಗಾಗಿ ದೈಹಿಕ/ಮಾನಸಿಕ ಯಾತನೆಯನ್ನು ತರುವ ಒತ್ತಡ(distress)ವನ್ನೇ ನಾವು ಒತ್ತಡವೆಂದು ಕಾಣುವುದು ಮತ್ತು ಅದು ಉಂಟು ಮಾಡುವ ಮನೋದೈಹಿಕ ಪರಿಣಾಮವನ್ನೇ ಉಪದ್ರವಿಯೆಂದು ಪರಿಗಣಿಸುವುದು. ಒತ್ತಡ ಆಘಾತಗಳು, ದುರದೃಷ್ಟಕರ ಜೀವನ ಸನ್ನಿವೇಶಗಳಿಂದ ಮೂಡಿರಬಹುದು ಇಲ್ಲವೇ ದಿನನಿತ್ಯದ ಕಿರಿಕಿರಿಯಿಂದ ಉಂಟಾಗಿದ್ದಿರಬಹುದು.  

ದಿನನಿತ್ಯದ ಕಿರಿಕಿರಿ ನಿಮ್ಮ ಒತ್ತಡದ ಆಕರವೇ?

ಜೀವನವನ್ನು ವ್ಯತ್ಯಯಗೊಳಿಸುವ ಆಘಾತಗಳು, ಸನ್ನಿವೇಶಗಳು ತರುವ ಒತ್ತಡ ಬಹಳ ತೀವ್ರವಾದದ್ದು. ಆದರೆ ಈ ಸಂದರ್ಭಗಳು ಅಷ್ಟಾಗಿ ಎದುರಾಗದ ಕಾರಣ ಅವು ಸ್ವಲ್ಪ ವಿರಳ. ಅದೇ ಟ್ರಾಫಿಕ್‍ಜಾಮ್ ಕಿರಿಕಿರಿ, ಮಕ್ಕಳ ಕಿರುಚಾಟ, ಸಂಗಾತಿಯ ಆರೋಪ, ಮರೆತುಹೋದ ಅಗತ್ಯದ ವಸ್ತು ಇವುಗಳು ಪ್ರತಿನಿತ್ಯ ಎದುರಾಗಿ ಕಿರಿಕಿರಿ ನೀಡುವಂತಹವು. ಆಗಾಗ್ಗೆ ನಮ್ಮನ್ನು ಬಾಧಿಸುತ್ತಾ ಬಹಳಷ್ಟು ದಿನ ಕಾಡಿಬಿಡುವ ಈ ಪ್ರತಿನಿತ್ಯದ ಕಿರಿಕಿರಿಗಳು ಒತ್ತಡವಾಗಿ ಪರಿವರ್ತಿತಗೊಂಡು ಬಿಡುವವು. ಈ ರೀತಿಯ ಒತ್ತಡವೂ ಸಹ ಮಾನಸಿಕ ಅಶಾಂತಿ, ದೀರ್ಘಕಾಲಿಕ ದೈಹಿಕ ಕಾಯಿಲೆಗಳು, ಅಲ್ಪಾಯಸ್ಸಿಗೆ ಪ್ರಮುಖ ಕಾರಣವಾಗಿರುವುದು! ಸಮಸ್ಯೆಯೆಂದರೆ, ನಾವು ನಿತ್ಯದ ಕಿರಿಕಿರಿಯಿಂದ ಒತ್ತಡಕ್ಕೊಳಗಾಗಿದ್ದೇವೆ ಎಂಬುದೇ ನಮ್ಮ ಗಮನಕ್ಕೆ ಬಂದಿರದು. ಅದಕ್ಕೆ ಕಾರಣಗಳಿವು.

  • ಜೀವನ ಇರುವುದೇ ಹೀಗೆ! : ನಾವು ದಿನನಿತ್ಯದ ಕಿರಿಕಿರಿ ಸಾಮಾನ್ಯವೆಂದು ನಂಬಿದ್ದೇವೆ. ಆದರೆ ಎಷ್ಟರಮಟ್ಟದ ಕಿರಿಕಿರಿ ಮಾಮೂಲು ನಮಗೆ ತಿಳಿದಿಲ್ಲ. ಮನೋದೈಹಿಕ ತೊಂದರೆಗಳಾದಾಗಲೂ ದಿನನಿತ್ಯದ ಒತ್ತಡ ಇದಕ್ಕೆ ಕಾರಣವಾಗಿರಬಹುದು ಎಂಬ ಯೋಚನೆ ನಮಗೆ ಬಾರದು.

  • ಕಿರಿಕಿರಿಗಳು ಇದ್ದೇ ಇರುತ್ತವೆ: ಒಂದಾದರ ನಂತರ ಒಂದರಂತೆ ಕಿರಿಕಿರಿಯಾಗುವ ಸಮಸ್ಯೆಗಳು ಯಾವಾಗಲೂ ಉದ್ಭವವಾಗುತ್ತಲೇ ಇರುತ್ತವೆ. ಹೀಗಾಗೇ ಇವೇ ಸಮಸ್ಯೆಗೆ ಕಾರಣ ಎಂಬುದು ಪ್ರಮುಖವಾಗಿ ಗಮನಕ್ಕೆ ಬರುವುದಿಲ್ಲ.

ಕಿರಿಕಿರಿಗಳು ಪ್ರಮುಖ ಒತ್ತಡಗಳಾಗಲು ಕಾರಣವೇನು?

  • ಈಗಾಗಲೇ ಆಘಾತ, ಕಷ್ಟಕರ ಜೀವನ ಸನ್ನಿವೇಶಗಳಿಂದ ಒತ್ತಡಕ್ಕೊಳಗಾಗಿದ್ದರೆ ಸಣ್ಣ ಕಿರಿಕಿರಿಯೂ ಬಹಳ ಒತ್ತಡ, ಹಿಂಸೆಯನ್ನುಂಟು ಮಾಡುವುದು. ಹಳಸಿದ ಸಂಬಂಧ, ಉದ್ಯೋಗದಲ್ಲಿ ಸಮಸ್ಯೆ ಮೊದಲಾದ ಒತ್ತಡಗಳು ಬಹಳಷ್ಟು ನಮ್ಮ ಮನಸ್ಸಿನ ಶಕ್ತಿ ಸಂಪನ್ಮೂಲಗಳನ್ನು ಬೇಡುವುದರಿಂದ ಅನಿರೀಕ್ಷಿತವಾಗಿ ಬಂದೆರಗುವ ಪುಟ್ಟ ಕಿರಿಕಿರಿಯನ್ನೂ ಎದುರಿಸಲು ಅಸಮರ್ಥರಾಗಿಬಿಡುವೆವು.

  • ನಿತ್ಯದ ಕಿರಿಕಿರಿ ನಮ್ಮ-ಗುರಿಯ ನಡುವೆ ಬಂದು ನಿಲ್ಲುವುದು. ಸರಿಯಾದ ಸಮಯಕ್ಕೆ ನಮ್ಮ ಪ್ರಮುಖ ಕೆಲಸಗಳನ್ನು ಮುಗಿಸದಂತೆ ತಡೆಯೊಡ್ಡುವುದು. ಹಾಗಾಗೇ ನಿಭಾಯಿಸಲು ಕಷ್ಟವೆಂದೂ, ನಾವು ಅಸಹಾಯಕರೆಂದೂ ಭಾವನೆ ಬಂದು ಬಿಡುವುದು

ಒತ್ತಡಕ್ಕೊಳಗಾಗಿದ್ದೇವೆ ಎಂದು ತಿಳಿಯುವುದು ಹೇಗೆ?

ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಒತ್ತಡವನ್ನು ನಿಭಾಯಿಸುತ್ತಾರೆ. ಹೊಸ ವ್ಯವಹಾರಕ್ಕಿಳಿಯುವುದು ಹೆಚ್ಚು ತ್ರಾಸದಾಯಕ ಎಂದು ಕೆಲವರಿಗೆನಿಸಿದರೆ, ನೂತನ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದೇ ಕೆಲವರ ಅಭ್ಯಾಸವಿರಬಹುದು. ಒತ್ತಡ ತರುವ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ಕೆಲವರು ಯತ್ನಿಸಿದರೆ, ಅಂತಹ ಸಂದರ್ಭಗಳಿಗೇ ಒಡ್ಡಿಕೊಂಡು ನಿಭಾಯಿಸಲು ಇಚ್ಚಿಸುವ ಮಂದಿಯೂ ಹಲವಾರು! ಕೆಲವರಿಗೆ ಟ್ರಾಫಿಕ್ ಹೆಚ್ಚು ಕಿರಿಕಿರಿ ತಂದರೆ ಉಳಿದವರಿಗೆ ಅದೊಂದು ಪ್ರಮುಖ ಸಮಸ್ಯೆ ಎನಿಸದಿರಬಹುದು! ಒಟ್ಟಾರೆ ವೈಯಕ್ತಿಕವಾಗಿ ಎಷ್ಟರ ಮಟ್ಟದ ಒತ್ತಡವನ್ನು ನಾವು ತಾಳಿಕೊಂಡು ನಿಭಾಯಿಸಬಲ್ಲೆವು ಎಂಬ ಅರಿವಿರಬೇಕು. ಒತ್ತಡ ಎಲ್ಲರಲ್ಲಿಯೂ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಅಂತೆಯೇ ಒಂದೇ ವ್ಯಕ್ತಿ ಜೀವನದ ವಿವಿಧ ಹಂತದಲ್ಲಿ ಬೇರೆಯದೇ ರೀತಿಯ ಒತ್ತಡದ ಲಕ್ಷಣವನ್ನು ಅನುಭವಿಸಬಹುದು. ದೈಹಿಕ, ಭಾವನಾತ್ಮಕತೆ ಹಾಗೂ ವರ್ತನೆಯಲ್ಲಿ ಬದಲಾವಣೆ ತರುವ ಒತ್ತಡ ಆರೋಗ್ಯ, ಮಾನಸಿಕ ಶಾಂತಿ ಮತ್ತು ಸಾಮಾಜಿಕ ಸಂಬಂಧಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದು.

ತೀವ್ರವಾದ ಒತ್ತಡ, ನಿದ್ರಾಹೀನತೆ, ದೈಹಿಕ ನೋವು (ಬೆನ್ನು ನೋವು, ತಲೆನೋವು, ಮೈಗ್ರೇನ್, ಎದೆ ನೋವು ಮೊದಲಾದವು), ಹೊಟ್ಟೆಯಲ್ಲಿ ಸಂಕಟ ಮೊದಲಾದ ದೈಹಿಕ ಲಕ್ಷಣದ ಜೊತೆಗೆ ಹೆಚ್ಚಿದ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಂತಹ ದೀರ್ಘಕಾಲಿಕ ಸಮಸ್ಯೆಯನ್ನೂ ತಂದೊಡ್ಡಬಲ್ಲದು. ಇದರೊಟ್ಟಿಗೆ ಚಿಂತೆ, ಏಕಾಗ್ರತೆಯ ಕೊರತೆ, ಆತಂಕ, ದುಃಖಿಸುವುದು, ನಿರ್ಧರಿಸುವಲ್ಲಿ ಕಷ್ಟವಾಗುವುದು, ಸಾಮಾಜಿಕವಾಗಿ ಪಾಲ್ಗೊಳ್ಳಲು ಹಿಂಜರಿತ, ಸಣ್ಣದಕ್ಕೂ ಕಿರಿಕಿರಿ, ಸುತ್ತಲಿನವರ ಮೇಲೆ ಕೋಪಗೊಳ್ಳುವುದು, ಕೆಲಸ/ಓದಿನಲ್ಲಿ ತೊಡಗಿಸಿಕೊಳ್ಳಲಾಗದಿರುವುದು ಮೊದಲಾದ ಲಕ್ಷಣಗಳ ಮೂಲಕವೂ ಒತ್ತಡ ವ್ಯಕ್ತಗೊಳ್ಳುತ್ತಿರಬಹುದು.

ಒತ್ತಡ: ನಿಭಾಯಿಸುವ ಮಾರ್ಗಗಳು:

ಜೀವನದ ಬೇಡಿಕೆಗಳು ನಮಗಿರುವ ಸಮಯ, ಶಕ್ತಿ, ಆಸೆ-ಕನಸು, ಶಕ್ತಿ-ಸಾಮರ್ಥ್ಯ ಎಲ್ಲವನ್ನೂ ಮೀರಿಬಿಟ್ಟಿದೆ ಎನಿಸಿದಾಗ ಒತ್ತಡ ತಲೆದೋರುವುದು. ಒಂದಲ್ಲಾ ಒಂದು ಒತ್ತಡ ಜೀವನದ ಪ್ರತೀ ಹಂತದಲ್ಲೂ ಇರುವುದರಿಂದ ನಿಭಾಯಿಸುವುದನ್ನು ಕಲಿಯುವುದು ಅತಿ ಮುಖ್ಯ. ಸಮತೋಲಿತ (balanced) ಜೀವನ ಒತ್ತಡವನ್ನು ನಿಭಾಯಿಸಲು ಸಹಕಾರಿ. ಅದಕ್ಕಾಗಿ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕವಾಗಿ ಸಮತೋಲಿತ ಬದುಕು ನಡೆಸುತ್ತಿದ್ದೇನೆಯೇ ಎಂದು ವಿಮರ್ಶಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಮುಖ್ಯ. ಹಾಗೇ, ಸ್ವಪ್ರಯತ್ನದಿಂದ ನಿಭಾಯಿಸಲು ಸಾಧ್ಯವಾಗದಷ್ಟು ಒತ್ತಡದಲ್ಲಿ ನೀವಿರುವಿರಾದರೆ ತಜ್ಞರ ಸಹಾಯ ಅವಶ್ಯ.

ಒತ್ತಡವನ್ನು ತಗ್ಗಿಸಬಲ್ಲ ಕೆಲ ಮಾರ್ಗೋಪಾಯಗಳು ಇಲ್ಲಿವೆ

ಮಾನಸಿಕವಾಗಿ ವಿಶ್ರಮಿಸಲು:

  • ಒತ್ತಡದ ಮೂಲವೇನು ತಿಳಿಯಲು ಪ್ರಶ್ನಿಸಿಕೊಳ್ಳಿ: ನಾನು ಪ್ರತಿದಿನವೂ ಒಂದೇ ಸಮಯದಲ್ಲಿ ಒತ್ತಡಕ್ಕೊಳಗಾಗುತ್ತಿದ್ದೀನಾ?

  • ನನ್ನ ಒತ್ತಡಕ್ಕೆ ಕಾರಣ ನಿರ್ಧಿಷ್ಟ ಸಂದರ್ಭ, ಸಂಬಂಧ(ವ್ಯಕ್ತಿ) ಅಥವಾ ಆಲೋಚನೆಯೇ?

  • ಬರೆಯಿರಿ: ಆ ದಿನದಲ್ಲಿ ಒತ್ತಡಕ್ಕೊಳಗಾದ ಸಂದರ್ಭ, ಅದಕ್ಕೆ ಸಂಬಂಧಿಸಿದಂತೆ ನಿಮ್ಮ ಆಲೋಚನೆ-ಭಾವನೆಗಳನ್ನು ದಾಖಲಿಸಿ. ಯೋಚನೆಗೆ ಹೊಳೆಯದ ಎಷ್ಟೋ ವಿವರ-ವಿಚಾರ, ಪರಿಹಾರೋಪಾಯಗಳು ಬರೆದಾಗ ಅರಿವಿಗೆ ಬರುವುದು.

  • ಹೆಚ್ಚು ಕೆಲಸ, ಚಟುವಟಿಕೆಗಳಿಂದ ಜರ್ಝರಿತಗೊಂಡಿದ್ದೀರಾ? ಮಿತಿಮೀರಿದ ಜವಾಬ್ದಾರಿ ವಹಿಸಿಕೊಂಡಿದ್ದೀರಾ? ಸಾಧ್ಯವಾಗದ ಕೆಲಸಕ್ಕೆ ಆಗುವುದಿಲ್ಲ (no) ಎನ್ನುವುದನ್ನು ಅಭ್ಯಸಿಸಿ. ಜೊತೆಯವರಿಗೂ ಒಂದಷ್ಟು ಕೆಲಸ ವಹಿಸಿಕೊಡಿ, ಸಲಹೆ-ಸೂಚನೆಗೂ ಕಿವಿಗೊಡಿ.

  • ಎಲ್ಲಾ ಕೆಲಸಗಳನ್ನೂ ಒಮ್ಮೆಯೇ ಮಾಡಲು ಹೊರಟು ಒತ್ತಡಕ್ಕೊಳಗಾಗುವ ಬದಲು ಒಂದೊಂದನ್ನೇ ಒಂದಾದರೊಂದಂತೆ ಮಾಡುತ್ತಾ ಬನ್ನಿ. ಮುಖ್ಯವಾದ ಕೆಲಸದಿಂದ ಪ್ರಾರಂಭಿಸಿ

  • ಭಾವನೆಗಳನ್ನು ವ್ಯಕ್ತಪಡಿಸಿ: ಸ್ನೇಹಿತರು, ಕುಟುಂಬ, ಆಪ್ತರೊಡನೆ ಮುಕ್ತವಾಗಿ ಮಾತನಾಡಿ. ನಿಮ್ಮ ಅನಿಸಿಕೆ-ಅಭಿಪ್ರಾಯ, ಭಾವನೆಗಳನ್ನು ಒಳಗೇ ಬಚ್ಚಿಟ್ಟುಕೊಂಡು ಒತ್ತಡಕ್ಕೊಳಗಾಗದೇ ಮುಕ್ತವಾಗಿ ತೆರೆದಿಡಿ

  • ಇಷ್ಟದ ಹವ್ಯಾಸಗಳನ್ನು ರೂಡಿಸಿಕೊಳ್ಳಿ: ಕೊಂಚ ಬಿಡುವು ಮಾಡಿಕೊಳ್ಳಿ, ನಿಮ್ಮಿಷ್ಟದ ಹವ್ಯಾಸವನ್ನು ಕಂಡುಕೊಂಡು ರೂಢಿಸಿಕೊಳ್ಳಿ. ಕ್ರಿಯಾತ್ಮಕತೆಯ ಅಭಿವ್ಯಕ್ತಿ, ಮನೋಲ್ಲಾಸಕ್ಕೆ ಕಾರಣವಾಗುವ ಚಟುವಟಿಕೆ ಆಯ್ದುಕೊಳ್ಳಿ (ಪೇಯಿಂಟಿಂಗ್, ಬರವಣಿಗೆ, ಸಂಗೀತ ಇತ್ಯಾದಿ)

  • ಆಪ್ತರೊಡನೆ ಬೆರೆಯಿರಿ. ಇಷ್ಟದ ಚಟುವಟಿಕೆಯನ್ನು ಒಟ್ಟಿಗೇ ಮಾಡಿ ಆನಂದಿಸಿ.

  • ಧ್ಯಾನ ಅಭ್ಯಸಿಸಿ.

  • ಸ್ವಯಂಸೇವೆಗೆ ಮುಂದಾಗಿ, ಮಾನಸಿಕ ತೃಪ್ತಿ ನೀಡುವ ಕೆಲಸಗಳಿಗೆ ಕೈಜೋಡಿಸಿ.

  • ಜೀವನದಲ್ಲಿ ಜರುಗುವ ಎಲ್ಲಾ ಸನ್ನಿವೇಶಗಳೂ ನಮ್ಮ ಹಿಡಿತದಲ್ಲಿರುವುದಿಲ್ಲ ಎಂಬುದನ್ನು ಮನದಲ್ಲಿರಿಸಿ. ಒತ್ತಡಗಳು ಎಲ್ಲರಿಗೂ ಭಿನ್ನ ಪ್ರಮಾಣದಲ್ಲಿದ್ದೇ ಇದೆ. ನೀವು ಏಕಾಂಗಿಯಲ್ಲ ಎಂದು ನೆನಪಿಡಿ.

ದೈಹಿಕ ಒತ್ತಡ ನಿವಾರಣೆಗೆ:

  • ವ್ಯಾಯಾಮ, ಯೋಗ, ಪ್ರಾಣಾಯಾಮಗಳನ್ನು ದಿನಚರಿಯ ಭಾಗವಾಗಿಸಿ.

  • ನಿಧಾನವಾದ, ದೀರ್ಘವಾದ ಉಸಿರಾಟ ಅಭ್ಯಸಿಸಿ.

  • ಸಾಕುಪ್ರಾಣಿಯೊಡನೆ ಒಡನಾಡಿ ಸಂತೋಷಿಸಿ.

  • ಕೈತೋಟದಲ್ಲಿನ ಕೆಲಸ ಖುಷಿ ನೀಡುವುದು.

  • ಬಿಸಿನೀರಿನ ಸ್ನಾನ ಹಿತಕಾರಿ.

  • ಒತ್ತಡ ಜಾಸ್ತಿಯಾದಾಗ ಹೆಚ್ಚಾಗಿ ತಿನ್ನುವುದು, ಕಾಫಿ/ಟೀ ಸೇವನೆ, ಸಿಹಿ ಪದಾರ್ಥ, ಝಂಕ್ ಹೆಚ್ಚು ತಿನ್ನುವುದು ಮಾಡದಿರಿ.

  • ಉತ್ತಮವಾದ, ಪೌಷ್ಠಿಕವಾದ ಆಹಾರಾಭ್ಯಾಸ ರೂಡಿಸಿಕೊಳ್ಳಿ.

  • ಅಂತೆಯೇ ಒತ್ತಡ ನಿವಾರಣೆಗೆ ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಮೊರೆ ಹೋಗದೇ ಆರೋಗ್ಯಕರ ಅಭ್ಯಾಸ ಅಳವಡಿಸಿಕೊಳ್ಳುವುದರತ್ತ ನಿಗಾ ವಹಿಸಿ.

  • ಸಾಕಷ್ಟು ವಿಶ್ರಮಿಸಿ ನಿರಾಳರಾಗಿ.    

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org