ಹದಿಹರೆಯದವರ ಚಿಂತೆಗಳು

ಈಗಿನ ಕಾಲದ ಯುವಕರು ಎಲ್ಲವನ್ನು ಹೊಂದಿರುತ್ತಾರೆ ಎಂದು ನಾವು ಭಾವಿಸಬಹುದು ಆದರೆ ಇದು ಸತ್ಯಾಂಶವಲ್ಲ. ಅವರ ಆಸೆ ಆಕಾಂಕ್ಷಗಳೊಂದಿಗೆ, ಮತ್ತು ಜೀವನದಲ್ಲಿ ಎದುರಿಸುವ ಪರೀಸ್ಥಿತಿಗಳೊಡನೆ ಹೋರಾಡುತಿರುತ್ತಾರೆ. ಡಾ ಶ್ಯಾಮಲಾ ವತ್ಸ ಯುವಕರ ಮಾನಸಿಕ ಯೋಗಕ್ಷೇಮ ಮತ್ತು ಆರೋಗ್ಯದ ಮೇಲೆ ಈ ಎಲ್ಲಾ ಅಂಶಗಳು ಹೇಗೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸುತ್ತಾರೆ.

“ಹಠಾತ್ತಾಗಿ ಜಗತ್ತು ದೊಡ್ಡದಾದಂತೆ ಕಾಣಿಸತೊಡಗಿದೆ; ಆದರೆ, ನಾನು ಹಲವು ವರ್ಷಗಳಿಂದ ಅರಿತಿದ್ದ, ಆ ಬಗ್ಗೆ ಬೆರಗುಗೊಂಡಿದ್ದ ಭೌತಶಾಸ್ತ್ರದ ನಿಯಮದ ಕಾರಣದಿಂದಲ್ಲ; ಆದರೆ ನನ್ನನ್ನು ಸುತ್ತುವರೆದಿದ್ದ ಗುಳ್ಳೆಯೊಂದು ಒಡೆದಂತೆ, ನನ್ನನ್ನು ಹಸಿಯಾದ, ಉನ್ಮಾದಗೊಳಿಸುವ ಗಾಳಿಗೆ ಒಡ್ಡಿದಂತೆ ಭಾಸವಾಗುತ್ತಿದೆ”. 

ಇದನ್ನು ನನಗೆ ಚೆನ್ನಾಗಿ ಪರಿಚಯವಿರುವ ಹದಿಹರೆಯದ ಹುಡುಗನೊಬ್ಬ ಬರೆದಿದ್ದ. ಈ ಸುಂದರ ಸಾಲುಗಳು ಬೆಳೆಯುವಿಕೆಯು ಒಳಗೊಂಡ ಅವರ್ಣನೀಯ, ರೋಮಾಂಚಕಾರಿ ಅನುಭವಗಳನ್ನು ಮನೋಜ್ಞವಾಗಿ ಅಭಿವ್ಯಕ್ತಿಗೊಳಿಸುತ್ತವೆ. ಬೆಳವಣಿಗೆಯೆಂದರೆ ಯೋಚನೆ ಹಾಗೂ ಭಾವನೆಗಳು, ಜನರು ಹಾಗೂ ತಂತ್ರಜ್ಞಾನದ ಬೃಹತ್ ವಿಶ್ವಕ್ಕೆ ಮತ್ತು ಅದು ಕೊಡಮಾಡುವ ಎಲ್ಲ ಸಾಧ್ಯತೆಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುವುದು. ಅದೊಂದು ಕೇವಲ ಭೌತಿಕ ಎಲ್ಲೆಯನ್ನು ಮಾತ್ರ ಹೊಂದಿದ ಪ್ರಪಂಚವಷ್ಟೇ ಅಲ್ಲ.

ಹದಿಹರೆಯದ ಆರಂಭದಲ್ಲಿ ಮೊತ್ತ ಮೊದಲಬಾರಿಗೆ, ಬದುಕು ಕೇವಲ ಕಪ್ಪು-ಬಿಳುಪಿನಿಂದ ಕೂಡಿಲ್ಲ ಎಂದೆನಿಸುತ್ತದೆ; ಜೀವನದ ಪ್ರತೀ ಆಯ್ಕೆಗಳಲ್ಲಿಯೂ ಸಾಕಷ್ಟು ಬಣ್ಣಗಳಿವೆ. ಮೌಲ್ಯಗಳು,ಸ್ನೇಹಿತರು ಅಥವಾ ನಿಮ್ಮ ವ್ಯಕ್ತಿತ್ವವನ್ನು ನಿರೂಪಿಸಲು ನೀವು ಆರಿಸುವ ಬಟ್ಟೆಗಳು ಕೂಡ ಕೇವಲ ಅವಷ್ಟೇ ಆಗಿರುವುದಿಲ್ಲ. ನೀವೀಗ ಹಿಂದಿನಿಂದ ರೂಢಿಯಲ್ಲಿರುವ ಆಚರಣೆಗಳನ್ನು ಪ್ರಶ್ನಿಸಲಾರಂಭಿಸುತ್ತೀರಿ ಏಕೆಂದರೆ ನಿಮ್ಮ ನಂಬಿಕೆಗಳನ್ನು ಜಾಲಾಡಿ ನಿಮ್ಮದೇ ಆದ ಗುರುತನ್ನು ಕಟ್ಟಿಕೊಳ್ಳುವ ಹಂತದಲ್ಲಿರುತ್ತೀರಿ.

ಅತ್ಯಂತ ಆತ್ಮವಿಶ್ವಾಸದಿಂದಿರುವ ಹದಿಹರೆಯದವರು ಕೂಡಾ ತಮ್ಮ ಬಗ್ಗೆಯೇ ಒಳಗೊಳಗೆ ಸಂದೇಹಗೊಳ್ಳುತ್ತಾರೆ. ಮೇಲ್ನೋಟಕ್ಕೆ ಎಷ್ಟೇ ಕ್ಷುಲ್ಲಕವೆನಿಸಿದರೂ ಕೂಡ ನಿಮ್ಮ ಸ್ನೇಹಿತರೊಂದಿಗೆ ಸ್ಪರ್ಧೆಗೆ ಬೀಳುವುದನ್ನು ಮತ್ತು ಹೋಲಿಸಿಕೊಳ್ಳುವುದನ್ನು ನೀವು ತಪ್ಪಿಸಿಕೊಳ್ಳಲಾರಿರಿ, ಏಕೆಂದರೆ ಇದು ಉಳಿದವರನ್ನು ಮಾನದಂಡವಾಗಿಟ್ಟುಕೊಂಡು ನಿಮ್ಮ ಜಾಗವನ್ನು ನೀವು ಕಂಡುಕೊಳ್ಳುವ ಸಹಜ ಕ್ರಿಯೆ.

ನಿಮ್ಮ ಯಶಸ್ಸು ಮತ್ತು ಅಪಯಶಸ್ಸನ್ನು ಕೂಡಾ ನೀವು ಇದೇ ಮಾನದಂಡದ ಮೂಲಕ ನಿರ್ಧರಿಸುತ್ತೀರಿ. ಏನನ್ನೋ ಸಾಧಿಸಿದ ಭಾವನೆಯಿಂದ ನಿಮ್ಮಲ್ಲಿ ವಿಶ್ವಾಸ ಮೂಡುತ್ತದೆ. ನಿಮಗೂ ಪ್ರಾಮುಖ್ಯತೆಯಿದೆಯೆಂದೆನಿಸುತ್ತದೆ ಮತ್ತು ನಿಮ್ಮ ಜೀವನವೂ ಅಮೂಲ್ಯವೆಂಬ ಭಾವನೆ ಬೆಳೆಯುತ್ತದೆ. ಮಾನಸಿಕ ಆರೋಗ್ಯ ಕೂಡಾ ಹೇಳುವುದು ಇದನ್ನೇ. ಈ ಹಂತದಲ್ಲಿ ನೀವು ಸೋತರೆ ಆತಂಕ ಮತ್ತು ಖಿನ್ನತೆಯಂತಹ ಋಣಾತ್ಮಕ ಭಾವನೆಗಳು ನಿಮ್ಮನ್ನು ಆವರಿಸಿ ನಿಮ್ಮನ್ನು ದುರ್ಬಲಗೊಳಿಸಬಹುದು.

ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವನ್ನು ಕೂಡಾ ನಿರ್ಲಕ್ಷಿಸಬಾರದು ಎಂಬುದನ್ನು ಅಗತ್ಯವಾಗಿ ತಿಳಿದಿರಬೇಕು. ಕೆಲವು ಬಾರಿ ಏನಾದರೂ ತಪ್ಪಾದಾಗ ನಿಮ್ಮ ಪಾಲಕರೊಂದಿಗೆ ಆ ಕುರಿತು ಮಾತನಾಡಿ; ನೀವು ಒಂದೊಮ್ಮೆ ನಿಮ್ಮ ಪಾಲಕರೊಂದಿಗೆ ಆತ್ಮೀಯ, ವಿಶ್ವಸನೀಯ ಸಂಬಂಧವನ್ನು ಹೊಂದಿದ್ದರೆ ಅದು ಬಹಳ ಉತ್ತಮ ಸಂಗತಿ. ನೀವು ಮಾಡಿದ ಎಲ್ಲಾ ಕೆಲಸಗಳಿಗೂ ಅವರ ಸಮ್ಮತಿ ಇಲ್ಲದಿದ್ದರೂ ಹೃದಯಪೂರ್ವಕವಾಗಿ ಅವರು ನಿಮ್ಮ ಒಳಿತನ್ನೇ ಬಯಸುತ್ತಿರುತ್ತಾರೆ. ಒಂದೊಮ್ಮೆ ಯಾವುದೇ ಕಾರಣದಿಂದ ನೀವು ಅವರ ಬಳಿ ಹೇಳಿಕೊಳ್ಳಲಾಗದಿದ್ದರೆ ನೀವು ವಿಶ್ವಾಸವಿರಿಸಿದ ಯಾವುದೇ ವಯಸ್ಕರಲ್ಲಿ ಅಥವಾ ಮಾನಸಿಕ ಆರೋಗ್ಯ ತಜ್ಞರಲ್ಲಿ ವಿಷಯವನ್ನು ಹಂಚಿಕೊಳ್ಳಿ.

ನಾನೀಗ ಇಲ್ಲಿ ಒಬ್ಬ ಹದಿಹರೆಯದ ಹುಡುಗಿಯು ತನ್ನ ಬದುಕಿನ ಕುರಿತಾಗಿ ಹೊಂದಿರುವ ಅಭಿಪ್ರಾಯವನ್ನು ನಿಮ್ಮ ಜೊತೆ ಹಂಚಿಕೊಳ್ಳಬಯಸುತ್ತೇನೆ;

“ಹದಿಹರೆಯದವರಾಗಿರುವುದು ಬಹಳ ಕಷ್ಟ. ಹಿರಿಯರು ನಿಮ್ಮಿಂದ ಅತಿಯಾಗಿ ನಿರೀಕ್ಷಿಸುತ್ತಾರೆ ಮತ್ತು ಯಾವಾಗಲೂ ಅತೀ ಹೆಚ್ಚಿನ ಸಾಧನೆ ಮಾಡಿದ ಮಕ್ಕಳ ಉದಾಹರಣೆಯನ್ನೇ ನೀಡುತ್ತಿರುತ್ತಾರೆ. ನಂಬಲಾಗದ ಸರಳ ಮಾನಕಗಳ ಮೂಲಕ ನಿಮ್ಮ ಮೌಲ್ಯಗಳನ್ನು ಅಳೆಯುವಂತೆ ಜನರು ನಾಟಕವಾಡುತ್ತಾರೆ. ಒತ್ತಡದಡಿಯಲ್ಲಿ ಸಿಲುಕಿ ಪುಡುಪುಡಿಯಾಗುವಂತಹ ಪರಿಸ್ಥಿತಿ ಇದು.

ಉಳಿದವರನ್ನು ಬಿಟ್ಟುಬಿಡಿ. ಹದಿಹರೆಯ ನಿಮ್ಮೊಳಗೆ ನಿಮಗೆ ಅತ್ಯಂತ ಒತ್ತಡ ನೀಡುವ ಸಮಯ. ನೀವು ನಿಮ್ಮನ್ನು ಪದೇ ಪದೇ ಬೇರೆಯವರೊಂದಿಗೆ ಹೋಲಿಸಿಕೊಳ್ಳುತ್ತೀರಾ? ನೀವು ಆಯ್ದುಕೊಳ್ಳುವ ಎಲ್ಲ ಕ್ಷೇತ್ರಗಳಲ್ಲಿಯೂ ತಪ್ಪೇ ಮಾಡದ ಪ್ರತಿಸ್ಪರ್ಧಿಗಳಿರುತ್ತಾರೆ ಎಂದು ಭಾವಿಸುವದನ್ನು ಬಿಟ್ಟುಬಿಡಿ. ಅದು ನಿಷ್ಪ್ರಯೋಜಕ ಎಂದು ಭಾವಿಸಿ ಮುನ್ನಡೆಯಿರಿ. ನಾನು ಕೂಡಾ ಕೆಲವೊಮ್ಮೆ ಹಾಗೆಯೇ ಮಾಡುತ್ತೇನೆ. ಇದು ತುಂಬ ಪ್ರಯಾಸಕರ. ನನಗೆ ನಾನು ಪ್ರಾಮಾಣಿಕವಾಗಿದ್ದಾಗ, ಈ ರೀತಿ ಮಾಡುವುದನ್ನು ಸಂಪೂರ್ಣವಾಗಿ ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ.

ನೀವು ನಿಮ್ಮ ಜೀವನದಲ್ಲಿ ಏನು ಮಾಡಲು ಬಯಸುತ್ತೀರಿ? ಯಶಸ್ಸು ಮತ್ತು ಸೋಲನ್ನು ಹೇಗೆ ಪರಿಗಣಿಸುತ್ತೀರಿ? ಈ ವಿಷಯದಲ್ಲಿ ನಿಮ್ಮದೇ ವಿವರಣೆಯೊಂದಿಗೆ ಮುನ್ನಡೆಯುವುದು ಕಠಿಣ ಕೆಲಸ. ಅದರಲ್ಲೂ ನಿಮ್ಮ ಪಾಲಕರಿಗೆ ಈ ಕುರಿತು ಭಿನ್ನಾಭಿಪ್ರಾಯವಿದ್ದರೆ ಬಹಳ ಕಷ್ಟ.

ಇವುಗಳ ಜೊತೆ ಒಂದಿಷ್ಟು ನೈತಿಕ ಗೊಂದಲಗಳು. ಶಾಲೆಯ ಕೆಲಸದ ಒತ್ತಡ ಹೆಚ್ಚಿರುವಾಗಲೇ ಈ ಎಲ್ಲಾ ಭಾರಗಳೂ ಒಮ್ಮೆಲೇ ಬಂದು ಎರಗುತ್ತವೆ. ನೀವು ನೈತಿಕವಾಗಿ ತಪ್ಪು ಕೆಲಸ ಮಾಡಲು ಸಿದ್ಧರಿರುವುದಿಲ್ಲವಾದ್ದರಿಂದ ಒಬ್ಬಂಟಿಯೆಂದು, ಉಳಿದವರಿಂದ ಪ್ರತ್ಯೇಕಿಸಲ್ಪಟ್ಟವರೆಂದು ಅನಿಸತೊಡಗುತ್ತದೆ. ಸ್ನೇಹಿತರ ಒತ್ತಡಕ್ಕೆ ಒಳಗಾಗಿ, ವಿಷಯವು ಕೈ ಜಾರಿದಂತೆಯೂ ಅನಿಸಿ ಶಾಲೆಯ ಕೆಲಸಗಳಲ್ಲಿ ಸರಿಯಾಗಿ ಭಾಗಿಯಾಗಲು ಸಾಧ್ಯವಾಗದೇ ಹತಾಶರಾಗುತ್ತೀರಿ.

ಸಂದರ್ಭಗಳು ಮತ್ತು ವ್ಯಕ್ತಿಗಳು ನೀವಂದುಕೊಂಡಂತೆಯೇ ಕಪ್ಪು ಅಥವಾ ಬಿಳಿಯ ಬಣ್ಣಗಳಲ್ಲಿ ಇರುವುದಿಲ್ಲ. ಗೊಂದಲವಾಗುವಷ್ಟು ಬೂದು ಬಣ್ಣವನ್ನು ಹೊಂದಿರಲೂ ಬಹುದು. ಆದ್ದರಿಂದ ನನ್ನ ಇಲ್ಲಿಯವರೆಗಿನ ನಂಬಿಕೆಯೇ ಬುಡಮೇಲಾಯಿತು ಮತ್ತು ಹಿರಿಯರು ಹೇಳುವಂತೆ ಕೆಲ ವಿಷಯಗಳು ಸಂಪೂರ್ಣ ತಪ್ಪೆಂಬ ಬಗ್ಗೆ ನನಗೆ ನಂಬಿಕೆಯುಂಟಾಗುತ್ತಿಲ್ಲ. ಅಥವಾ ಹಿರಿಯರು ಎಲ್ಲಾ ವಿಷಯದಲ್ಲಿಯೂ ಸರಿಯಾಗಿರುತ್ತಾರೆ ಎಂದು ಕೂಡಾ ನಾನು ಭಾವಿಸಲಾರೆ.

ನನ್ನ ಸಮಸ್ಯೆಗಳು ಕೆಲವೊಮ್ಮೆ ಬಗೆಹರಿಯಲಾರದವುಗಳಂತೆಯೂ ಇನ್ನೊಮ್ಮೆ ಕ್ಷುಲ್ಲಕವೆಂದೂ ಅನಿಸುತ್ತದೆ. ಈ ಸಮಸ್ಯೆಗಳು ನನ್ನ ಮನಸ್ಸಿನಲ್ಲಿ ಹೊಕ್ಕು ಕುಣಿಯುತ್ತಾ ನಾನೊಬ್ಬಳೇ ಈ ರೀತಿ ಯೋಚಿಸುತ್ತಿರುವೆನೇನೋ ಎಂದೆನಿಸುತ್ತದೆ. ಆದರೆ ಕೆಲವೊಮ್ಮೆ ನಾನು ಈ ರೀತಿಯೂ ಯೋಚಿಸುತ್ತೇನೆ – ಹದಿಹರೆಯವೆಂದರೆ ಇದೇ ಏನು?”

ಇದು ಕೇವಲ ಒಬ್ಬ ಹುಡುಗಿಯ ಕಥೆ. ಆದರೆ ನನಗೆ ಗೊತ್ತಿದೆ, ಪ್ರತಿ ಹದಿಹರೆಯದ ವ್ಯಕ್ತಿಯೂ ಜೀವನವನ್ನು ತಮ್ಮದೇ ಆದ ದೃಷ್ಟಿಕೋನದಿಂದ ನೋಡುತ್ತಿರುತ್ತಾರೆ. ಮತ್ತು ಅವರಲ್ಲಿ ಇನ್ನೂ ಉತ್ತರ ಸಿಗಬೇಕಾದ ಹಲವು ಪ್ರಶ್ನೆಗಳಿವೆ. ಮುಂದಿನ ದಿನಗಳಲ್ಲಿ ಈ ಅಂಕಣವು ಹದಿಹರೆಯದವರ ಮಾನಸಿಕ ಆರೋಗ್ಯದ ಕುರಿತ ವಿಷಯಗಳನ್ನು ಪ್ರಸ್ತಾಪಿಸಲಿದೆ.

ಡಾ. ಶ್ಯಾಮಲಾ ವತ್ಸರವರು ಬೆಂಗಳೂರು ಮೂಲದ ಮನೋವೈದ್ಯರಾಗಿದ್ದು, ಸುಮಾರು 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹದಿಹರೆಯದವರ ಕುರಿತ ಈ ಅಂಕಣವು ಈ ಜಾಲತಾಣದಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ. ನಿಮಗೆ ಈ ಲೇಖನದ ಕುರಿತು ಯಾವುದೇ ಸಂದೇಹ, ಪ್ರಶ್ನೆ ಅಥವಾ ಪ್ರತಿಕ್ರಿಯೆಗಳಿದ್ದರೆ columns@whiteswanfoundation.org ಈ ವಿಳಾಸಕ್ಕೆ ಬರೆಯಿರಿ.

ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲ್ಪಟ್ಟಿದ್ದು ಇಲ್ಲಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org