ನಮ್ಮ ಸಂಪಾದಕೀಯ ನೀತಿ

ವೈಟ್ ಸ್ವಾನ್ ಫೌಂಡೇಶನ್ನಿನ ಸಂಪಾದಕೀಯ ನೀತಿ

ಮಾನಸಿಕ ಆರೋಗ್ಯ ಮತ್ತು ಉತ್ತಮ ಜೀವನಕ್ಕೆ ಸಂಬಂಧಿಸಿದಂತೆ ಅತ್ಯುನ್ನತ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿರುವ ಜ್ಞಾನವನ್ನು ನಿಮಗೆ ಒದಗಿಸುವಲ್ಲಿ ವೈಟ್ ಸ್ವಾನ್ ಫೌಂಡೇಶನ್ ಕಟಿಬದ್ಧವಾಗಿದೆ.

ನಮ್ಮ ಸಂಗ್ರಹದಲ್ಲಿರುವ ಜ್ಞಾನದ ಓದುಗರು/ನೋಡುಗರನ್ನೂ ಒಳಗೊಂಡಂತೆ ನಮ್ಮ ಹಲವಾರು ಪಾಲುದಾರರ ಸಂವೇದನಾಶೀಲತೆಯನ್ನು ಮತ್ತು ಅವರ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ನಮ್ಮ ಸಂಪಾದಕೀಯ ನೀತಿಯ ಪ್ರಮುಖ ಗುಣಲಕ್ಷಣಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ.

ನಮ್ಮ ಸಂಪಾದಕೀಯ ನೀತಿಯ ತತ್ವ-ಆದರ್ಶಗಳು

ನಮ್ಮ ಸಂಗ್ರಹದಲ್ಲಿರುವ ಜ್ಞಾನಭಂಡಾರದ ಮೇಲೆ ನಮ್ಮ ಓದುಗರು/ನೋಡುಗರು ಇಟ್ಟಿರುವ ನಂಬಿಕೆಯನ್ನು ವೈಟ್ ಸ್ವಾನ್ ಫೌಂಡೇಶನ್ ಗೌರವಿಸುತ್ತದೆ. ಈ ನಂಬಿಕೆಯನ್ನು ಎತ್ತಿಹಿಡಿಯುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ವೈಟ್ ಸ್ವಾನ್ ಫೌಂಡೇಶನ್ನಿನ ಸಿಬ್ಬಂದಿಗಳು ಮತ್ತು ಪಾಲುದಾರರಿಗಾಗಿ ರೂಪಿಸಲಾಗಿರುವ ಸಂಪಾದಕೀಯ ನೀತಿಯನ್ನು ಚಾಚೂ ತಪ್ಪದಂತೆ ಕಟ್ಟುನಿಟ್ಟಾಗಿ ಪಾಲಿಸುವ ಸೂಕ್ಷ್ಮಗ್ರಾಹಿಯಾದ ಕಾರ್ಯಗಳಿಗೆ ನಮ್ಮ ಈ ತತ್ವ ಎಡೆಮಾಡಿಕೊಡುತ್ತದೆ.

ಪ್ರಮಾಣಕಗಳು

 • ಗುಣಮಟ್ಟ: ನಮ್ಮ ಜ್ಞಾನಭಂಡಾರವನ್ನು ಒಳಗೊಂಡಿರುವ ಎಲ್ಲ ಭಾಷೆಗಳಲ್ಲಿ, ಅತ್ಯುನ್ನತ ಗುಣಮಟ್ಟದ ಭಾಷೆ ಮತ್ತು ಸಂವಹನವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ವೈಟ್ ಸ್ವಾನ್ ಫೌಂಡೇಶನ್ನಿನ ಸಿಬ್ಬಂದಿಗಳು ಸದಾ ಕಾರ್ಯನಿರ್ವಹಿಸುತ್ತಾರೆ. ದೋಷರಹಿತ ಜ್ಞಾನವನ್ನು ನಿಮಗೆ ಒದಗಿಸುವುದು ನಮ್ಮ ಯಾವಜ್ಜೀವಿತ ಸತತ ಪ್ರಯತ್ನ. ಇದನ್ನು ಸಾಧಿಸುವಲ್ಲಿ ನಾವು ಆಂತರಿಕವಾಗಿ ಅತಿಸೂಕ್ಷ್ಮ ಪರಿಶೀಲನೆ ಮತ್ತು ಸಮತೋಲವನ್ನು ಕಾಪಾಡಿಕೊಳ್ಳುತ್ತೇವೆಂದು ಖಾತರಿಪಡಿಸುತ್ತೇವೆ.

 • ನ್ಯೂನಾತಿರೇಕವಿಲ್ಲದ ಮಾಹಿತಿ: ನಮ್ಮ ಜ್ಞಾನ ಭಂಡಾರದಲ್ಲಿ ಒದಗಿಸಲಾದ ಪ್ರತಿಯೊಂದೂ ಮಾಹಿತಿಯ ತುಣುಕೂ ನ್ಯೂನತೆ ಮತ್ತು ಅತಿರೇಕದ ಸಂಗತಿಗಳಿಂದ ಕೂಡಿಲ್ಲ ಎಂಬುದನ್ನು ಖಾತರಿಪಡಿಸಲು ನಾವು ಹೆಚ್ಚಿನ ನಿಗಾ ವಹಿಸುತ್ತೇವೆ. ಎಲ್ಲ ಮಾಹಿತಿಗಳು ನಮ್ಮಲ್ಲಿ ಪ್ರಕಟವಾಗುವದಕ್ಕೂ ಮುಂಚೆ ವಿಷಯ ತಜ್ಞರಿಂದ ಸೂಕ್ಷ್ಮವಾಗಿ ಪರಿಶೀಲನೆಗೊಳಪಟ್ಟಿರುತ್ತವೆ.

 • ಸಮಗ್ರತೆ: ಮಾಹಿತಿಗಳನ್ನು ಕಲೆಹಾಕುವಾಗ, ವಿಷಯಗಳನ್ನು ಕಲೆಹಾಕಿ ಪ್ರಕಟಿಸುವಾಗ ಮತ್ತು ಸಂದೇಶಗಳ ರೂಪದಲ್ಲಿ ಅವುಗಳನ್ನು ಸಾರ್ವಜನಿಕರಿಗೆ ತಲುಪಿಸುವಾಗ ನಾವು ಅತ್ಯುನ್ನತ ಮಟ್ಟದ ನಿಯತ್ತು, ಬದ್ಧತೆ ಮತ್ತು ಸಮಗ್ರತೆಗಳತ್ತ ಗಮನ ನೀಡುತ್ತೇವೆ.

 • ಪೂರ್ವಗ್ರಹ ರಾಹಿತ್ಯ: ಸಂಪಾದಕೀಯ ನಿರ್ಧಾರಗಳು ವಾಸ್ತವಾಂಶ ಮತ್ತು ಮೌಲ್ಯಗಳಿಂದ ಕೂಡಿದ್ದು ನಮ್ಮ ಓದುಗರು/ನೋಡುಗರಿಗೆ ತಲುಪುವ ನಿಟ್ಟಿನಲ್ಲಿ ನಾವು ಸದಾ ಕಾರ್ಯಶೀಲರಾಗಿರುತ್ತೇವೆ. ನಮ್ಮಲ್ಲಿ ಪ್ರಕಟವಾಗುವ ಯಾವುದೇ ಮಾಹಿತಿ/ಜ್ಞಾನ ಒಂದು ನಿರ್ದಿಷ್ಟ ಸಮುದಾಯ, ವಿಚಾರಧಾರೆ, ಅಥವಾ ಫಲಾನುಭವಿಗಳ ಹಿತಗಳಿಂದ ಪ್ರಭಾವಿತವಾಗಿರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಖಾತರಿಪಡಿಸುತ್ತೇವೆ.

 • ಸಹಾನುಭೂತಿ :ನಮ್ಮ ಕರ್ತವ್ಯವನ್ನು ನಿಭಾಯಿಸುವ ಎಲ್ಲ ಹಂತಗಳಲ್ಲಿ ವೈಟ್ ಸ್ವಾನ್ ಫೌಂಡೇಶನ್ನಿನ ಎಲ್ಲ ಸಿಬ್ಬಂದಿಗಳು ಈ ಕೆಳಗೆ ಹೇಳಲ್ಪಟ್ಟ ಸಂಗತಿಗಳ ಕುರಿತು ಅತ್ಯುನ್ನತ ಮಟ್ಟದ ಸಹಾನುಭೂತಿಯನ್ನು ಹೊಂದಿ ವ್ಯವಹರಿಸುತ್ತೇವೆ.

 • ಜ್ಞಾನ ನಿರ್ಮಾಣದ ಪ್ರಕ್ರಿಯೆಯಲ್ಲಿ ನಮ್ಮ ಸಿಬ್ಬಂದಿಗಳು ಸಂಗ್ರಹಿಸಿ ಪ್ರಕಟಿಸುವ ಎಲ್ಲ ತರಹದ ಮೌಲ್ಯಯುತ ಬರಹಗಳ ಅಸ್ತಿತ್ವ, ಘನತೆ ಮತ್ತು ಗೌರವಗಳನ್ನು ಕಾಪಾಡುತ್ತೇವೆ. ಯಾವುದೇ ಸಂದರ್ಭದಲ್ಲಿಯೂ ಯಾವುದೇ ವ್ಯಕ್ತಿಗಳ ಅಸ್ತಿತ್ವ, ಗೌರವ ಮತ್ತು ಘನತೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಮ್ಮ ನಡುವಳಿಕೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ನಾವು ಸ್ಥಾಪಿತ ಪ್ರಕ್ರಿಯೆಗಳನ್ನು ಪಾಲಿಸುತ್ತೇವೆ.

 • ನಮ್ಮ ಲೇಖನಗಳಲ್ಲಿ ಕೇಸ್ ಸ್ಟಡಿ ರೂಪದಲ್ಲಿ ಪ್ರಕಟವಾಗುವ ವ್ಯಕ್ತಿಗಳ ಹೇಳಿಕೆ, ವಿವರ ಅಥವಾ ವಿವರಿಸಲಾದ ವೈಯಕ್ತಿಕ ಬದುಕಿನ ಸಂಗತಿಗಳನ್ನು ಗೌಪ್ಯವಾಗಿರಿಸುವಲ್ಲಿ ಸದಾ ಬದ್ಧರಾಗಿರುತ್ತೇವೆ. ನಮ್ಮೊಂದಿಗೆ ಭಾಗಿಗಳಾಗಬಯಸುವ ಪ್ರತಿಯೊಬ್ಬರಿಗೂ, ಅವನ/ಅವಳ ಲಿಖಿತ ಒಪ್ಪಿಗೆ ಪತ್ರವನ್ನು ಪಡೆಯುವ ಮುನ್ನವೇ ನಮ್ಮ ಉದ್ದೇಶ ಮತ್ತು ಮಾಹಿತಿಯನ್ನು ಕಲೆಹಾಕುವಲ್ಲಿ ನಾವು ಪಾಲಿಸುವ ಕ್ರಮಗಳು ಮತ್ತು ವಿಷಯಗಳ ಕುರಿತು ವಿವರವಾಗಿ ವಿಶದೀಕರಿಸಲಾಗುತ್ತದೆ.

 • ಸಾರ್ವಜನಿಕರ, ಅದರಲ್ಲೂ ವಿಶೇಷವಾಗಿ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ಹೋರಾಟ ನಡೆಸುತ್ತಿರುವವರ ಹಾಗೂ ಅವರನ್ನು ಆರೈಕೆಮಾಡುತ್ತಿರುವವರ ಮಾಹಿತಿಯ ಅವಶ್ಯಕತೆಗಳು, ಸಂಬಂಧಿತ ಸಂಗತಿಗಳು ಮತ್ತು ಇನ್ನಿತರ ಸೂಕ್ಷ್ಮವಿಷಯಗಳ ಕುರಿತು ನಾವು ಸಾಕಷ್ಟು ಸಹಾನುಭೂತಿಯನ್ನು ಹೊಂದಿರುತ್ತೇವೆ.

 • ಮಾಹಿತಿಯನ್ನು ಸಂಗ್ರಹಿಸುವ ಕಾರ್ಯಕ್ಕೆ ನಾವು ಸಂಪರ್ಕಿಸುವ ಮಾನಸಿಕ ಆರೋಗ್ಯ ಆರೈಕೆಯಲ್ಲಿ ತೊಡಗಿಕೊಂಡಿರುವ ಹಲವಾರು ಪರಿಣಿತ ತಜ್ಞರ ಕುರಿತಾಗಿಯೂ ನಾವು ಸಹಾನುಭೂತಿಯನ್ನು ಹೊಂದಿರುತ್ತೇವೆ. ನಮ್ಮ ಲೇಖನಗಳ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ಸಂದರ್ಭಗಳಲ್ಲಿ ಅವರ ಆಳವಾದ ಜ್ಞಾನ ಮತ್ತು ಅಪರಿಮಿತ ಅನುಭವಗಳನ್ನು ನಾವು ಗೌರವಿಸುತ್ತೇವೆ.

 • ಪಾರದರ್ಶಕತೆ: ಮಾಹಿತಿ, ಅಂಕಿ-ಅಂಶಗಳ ಸಂಗ್ರಹಣೆ ಮತ್ತು ಅಕ್ಷರ ರೂಪದಲ್ಲಿ ಅವುಗಳ ಮಂಡನೆಯ ಪ್ರಕ್ರಿಯೆ ಮತ್ತು ವಿಧಾನಗಳ ಕುರಿತಾಗಿ ವೈಟ್ ಸ್ವಾನ್ ಫೌಂಡೇಶನ್ ಯಾವಾಗಲೂ ಪಾರದರ್ಶಕತೆಯನ್ನು ಪ್ರದರ್ಶಿಸುತ್ತದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನಮ್ಮ ಸಂಪಾದಕೀಯ ನೀತಿಯನ್ನು ಪ್ರಕಟಿಸಿರುವುದು ಸಾಕ್ಷಿಯಾಗಿದೆ.

 • ಕೃತಿಸ್ವಾಮ್ಯ (ಕಾಪಿರೈಟ್): ಅವನು/ಅವಳು ರೂಪಿಸುವ/ಪ್ರಕಟಿಸುವ ವಿಷಯಗಳು ಮೌಲ್ಯಯುತವೆಂದು ಪರಿಗಣಿಸಲ್ಪಟ್ಟಾಗ ವೈಟ್ ಸ್ವಾನ್ ಫೌಂಡೇಶನ್ನಿನ ಸಿಬ್ಬಂದಿಗಳು ಮಾಹಿತಿ ಮತ್ತು/ಅಥವಾ ಲೇಖನದ ಮೇಲಿನ ಲೇಖಕ/ಕಿಯ ಮಾಲಿಕತ್ವವನ್ನು ಯಾವನಿರ್ಬಂಧಗಳೂ ಇಲ್ಲದೇ ಮಾನ್ಯ ಮಾಡುತ್ತಾರೆ. ವಿಷಯದ ಯಾವುದೇ ತುಣುಕಿಗೆ ಕೂಡ ಸಂಬಂಧಪಟ್ಟ ಕೃತಿಸ್ವಾಮ್ಯವನ್ನು ಯಾವುದೇ ಸಂದರ್ಭದಲ್ಲಿಯೂ ನಾವು ಉಲ್ಲಂಘಿಸುವುದಿಲ್ಲ. ನಮ್ಮ ಲೇಖನ/ಜ್ಞಾನ ಭಂಡಾರದ ಭಾಗವಾಗಿ ಸೇರ್ಪಡಿಸುವುದಕ್ಕೂ ಮೊದಲು ಕೃತಿಯ ಮಾಲಿಕರ ಒಪ್ಪಿಗೆಯನ್ನು ಪಡೆದುಕೊಂಡೇ ನಾವು ಮುಂದಡಿಯಿಡುತ್ತೇವೆ.

 • ಪ್ರವರ್ತಕತೆ: ವೈಟ್ ಸ್ವಾನ್ ಫೌಂಡೇಶನ್ ಯಾವುದೇ ಒಂದು ಉತ್ಪನ್ನ/ವಿಚಾರ/ಪರಿಕಲ್ಪನೆ/ ವೃತ್ತಿ ಅಥವಾ ವೈಚಾರಿಕತೆಯನ್ನು ಯಾವುದೇ ಸಂದರ್ಭದಲ್ಲಿಯೂ ಬೆಂಬಲಿಸುವುದಾಗಲೀ ಅಥವಾ ಪ್ರೋತ್ಸಾಹಿಸುವುದಾಗಲೀ ಮಾಡುವುದಿಲ್ಲ. ಮಾನಸಿಕ ರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸಾಧ್ಯ ಜ್ಞಾನವನ್ನೂ ಹಾಗೂ ಅದರ ವಿವಿಧ ಮಗ್ಗಲುಗಳನ್ನೂ, ಸಂಬಂಧಿತ ಇತರ ವ್ಯವಸ್ಥೆಗಳನ್ನೂ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಉತ್ಪನ್ನಗಳು ಅಥವಾ ವಿಚಾರ ಧಾರೆಗಳ ಪರ ಅಥವಾ ವಿರೋಧವಾಗಿ ವಾದಿಸದೇ, ಯಾವುದೇ ಪೂರ್ವಗ್ರಹೀತಗಳಿಲ್ಲದೇ ನಮ್ಮ ಓದುಗರು/ನೋಡುಗರಿಗೆ ನಾವು ತೆರೆಡಿಡುತ್ತೇವೆ. ನಮ್ಮ ಜ್ಞಾನಸಂಗ್ರಹದಲ್ಲಿ ನಾವು ಲಭ್ಯವಾಗಿಸಿರುವ ಆಯ್ಕೆಗಳ ಅಂಕಗಳನ್ನಾಧರಿಸಿ ಯೋಗ್ಯವಾದುದನ್ನು ನಿರ್ಧರಿಸುವುದು ನಮ್ಮ ಓದುಗರು/ನೋಡುಗರಿಗೆ ಬಿಟ್ಟ ವಿಚಾರವಾಗಿರುತ್ತದೆ.

ಭಾಷೆ:

 • ಇಂಗ್ಲೀಷ್ ಭಾಷೆಯಲ್ಲಿ ಪ್ರಕಟವಾಗುವ ನಮ್ಮ ಜ್ಞಾನಸಂಗ್ರಹ ಆವೃತ್ತಿಯು ಅಮೇರಿಕನ್ ಇಂಗ್ಲೀಷ್ ಫಾಂಟನ್ನು ಹೊಂದಿರುತ್ತದೆ.

 • ಸಾಮಾನ್ಯ ಜನರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಸರಳ ಭಾಷೆಯನ್ನು ಬಳಸುವುದು ನಮ್ಮ ಪ್ರಯತ್ನವಾಗಿದೆ.

 • ವಿಷಯಗಳ ವಾಸ್ತವಾಂಶದ ನಿಖರತೆಯನ್ನು ಕಾಪಾಡಿಕೊಂಡು ಬರುವ ಸಂದರ್ಭದಲ್ಲಿ ವೈಜ್ಞಾನಿಕ ಪದಗಳು ಮತ್ತು ವ್ಯಾಖ್ಯೆಗಳ ಪಯೋಗವನ್ನು ಆದಷ್ಟೂ ಕಡಿಮೆ ಮಾಡುವತ್ತ ನಮ್ಮ ಪ್ರಯತ್ನವಿರುತ್ತದೆ.

 • ‘ಸಮಸ್ಯೆಗಳು’ ‘ರೋಗಗಳು’ ಮತ್ತು ‘ಡಿಸಾರ್ಡರ್’ ಮುಂತಾದ ಪದಗಳನ್ನು ಒಂದಕ್ಕೊಂದು ಪೂರಕವಾಗಿ ಸೂಚಿಸುವಂತೆ ಬಳಸಲಾಗುವುದು.

ವೈಟ್ ಸ್ವಾನ್ ಫೌಂಡೇಶನ್ನಿನ ಬರಹಗಳು/ಪೋಸ್ಟಿಂಗ್ ಗಳು

 • ನಮ್ಮ ಜ್ಞಾನಸಂಗ್ರಹದಲ್ಲಿ ಲಭ್ಯವಾಗಿರುವ ವೈಟ್ ಸ್ವಾನ್ ಫೌಂಡೇಶನ್ ನಿಂದ ನಿರೂಪಿಸಲಪಟ್ಟ ಎಲ್ಲ ಬರಹಗಳು/ಪೋಸ್ಟಿಂಗ್ ಗಳು, ಬೇರೆ ರೀತಿಯಲ್ಲಿ ಹೇಳದೇ ಹೋಗಿದ್ದ ಪಕ್ಷದಲ್ಲಿ, ಮಾನಸಿಕ ರೋಗ್ಯಕ್ಕೆ ಸಂಬಂಧಿಸಿದಂತೆ, ವೈಟ್ ಸ್ವಾನ್ ಫೌಂಡೇಶನ್ನಿನ ಕೃತಿಸ್ವಾಮ್ಯಕ್ಕೆ (ಕಾಪಿರೈಟ್) ಒಳಪಟ್ಟಿರುತ್ತವೆ.

 • ಆದಾಗ್ಯೂ, ಮೊದಲೇ ಒಪ್ಪಿಗೆ ಪಡೆಯುವ ಮೂಲಕ ಈ ವಿಷಯಗಳನ್ನು ಸಾರ್ವಜನಿಕರ ಪ್ರಯೋಜನಕ್ಕಾಗಿ, ಇನ್ನಿತರ ಸಮೂಹ ಮಾಧ್ಯಮಗಳಲ್ಲಿ ಉಚಿತವಾಗಿ ಪ್ರಕಟಿಸಬಹುದಾಗಿದೆ. ನಿಮ್ಮ ಮನವಿಗಳಿಗಾಗಿ ದಯಮಾಡಿ connect@whiteswanfoundation.org ವಿಳಾಸಕ್ಕೆ ಈ-ಮೇಲ್ ಕಳಿಸಿ.

ಸಂಪಾದಕೀಯ ನೀತಿಯ ಕುರಿತು:

 • ನಮ್ಮ ಜ್ಞಾನಸಂಗ್ರಹಾಲಯ ತಾಣಕ್ಕೆ ಭೇಟಿಕೊಡುವ ಓದುಗರು/ನೋಡುಗರ ಅನುಭವವನ್ನು ವಿಸ್ತರಿಸುವ ನಿಟ್ಟಿನಲ್ಲಿ ವೈಟ್ ಸ್ವಾನ್ ಫೌಂಡೇಶನ್ನಿನ ಸಂಪಾದಕೀಯ ನೀತಿಯು ಕಾಲಕಾಲಕ್ಕೆ ನಿಯಮಿತವಾಗಿ ಪುನರವಲೋಕನಕ್ಕೆ ಒಳಗಾಗುತ್ತವೆ.

 • ನೀವು, ನಮ್ಮ ಓದುಗರು/ನೋಡುಗರು ನಮ್ಮ ಕಣ್ಣು ಮತ್ತು ಕಿವಿಗಳಿದ್ದಂತೆ. ನಮ್ಮ ಪೋರ್ಟಲ್ ಅಥವಾ ಇನ್ನಿತರ ಯಾವುದೇ ಮಾಧ್ಯಮಗಳಲ್ಲಿ ಮಾಹಿತಿಯು ಲಭ್ಯವಾಗುವಂತೆ ಮಾಡುವಲ್ಲಿ ಎಚ್ಚರಿಸಿ ನಿರಂತರವಾಗಿ ನಮ್ಮನ್ನು ಬೆಂಬಲಿಸುತ್ತಾ ಇರಬೇಕೆಂದು ಕೋರುತ್ತೇವೆ. ಯಾವುದೇ ತಪ್ಪುಗಳು ಕಂಡುಬಂದಲ್ಲಿ ಅಥವಾ ವಿಷಯಗಳು ಬಿಟ್ಟುಹೋದಲ್ಲಿ ನಮ್ಮ ಗಮನಕ್ಕೆ ತನ್ನಿ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೌಲಿಕವಾಗಿರುವ ಮಾಹಿತಿಯ ತುಣುಕುಗಳನ್ನು ನಿಮಗೆ ಒದಗಿಸಲು ನಿಮ್ಮ ಸಲಹೆ-ಸೂಚನೆಗಳಿಗಾಗಿ ನಾವು ಇದಿರು ನೋಡುತ್ತೇವೆ. ಹಾಗಾದಾಗ ನೀವು ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ

 • ಸಂಪಾದಕೀಯ ನೀತಿಯ ಆವೃತ್ತಿಯನ್ನು ಮಾರ್ಚ್ 23, 2015ರಂದು ಪ್ರಕಟಿಸಲಾಗಿದೆ.