We use cookies to help you find the right information on mental health on our website. If you continue to use this site, you consent to our use of cookies.

ಆರೈಕೆ ಮಾಡಲು ಸಹಾಯ ಕೇಳಿ

ಆರೈಕೆಯ ಹೊರೆ ನಿಭಾಯಿಸಲು ಕುಟುಂಬದವರ ಮತ್ತು ಸ್ನೇಹಿತರ ಸಹಾಯ ಪಡೆಯಿರಿ

ನಿಮ್ಮ ಪ್ರೀತಿಪಾತ್ರರ ಆರೈಕೆಯನ್ನು ತುಂಬಾ ದಿನಗಳಿಂದ ಮಾಡುತ್ತಿದ್ದರೆ  ಅದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುವಂತೆ ಮಾಡುತ್ತದೆ. ಅದರಲ್ಲೂ ಮಾನಸಿಕ ಅನಾರೋಗ್ಯ ಪೀಡಿತರ ಬಗ್ಗೆ ಜನರು ತಾರತಮ್ಯದ ಭಾವನೆ ಹೊಂದಿರುವಾಗ ಅವರಿಂದ ಸಹಾಯ ದೊರಕುವುದು ಕಷ್ಟವೇ. ಆದರೆ ಯಾರಾದರೂ ನಿಮಗೆ ಸಹಾಯ ಮಾಡಲು ಮುಂದೆ ಬಂದರೆ ಅದನ್ನು ಸ್ವೀಕರಿಸಿದರೆ ನಿಮಗೆ ನಿಮಗೆ ಅನುಕೂಲವಾಗುತ್ತದೆ.

ಭಾರತದಲ್ಲಿ ಮಾನಸಿಕ ಅನಾರೋಗ್ಯ ಪೀಡಿತರನ್ನು ನೋಡಿಕೊಳ್ಳುವುದು ಕುಟುಂಬದ ಸದಸ್ಯರಿಗೆ ಹೆಚ್ಚಿನ ಹೊರೆಯಾಗಿದೆ. ಹೆಚ್ಚುತ್ತಿರುವ ಖರ್ಚು, ಸಮಯದ ಅಭಾವ ಮತ್ತು ಬದಲಾದ ಸಾಮಾಜಿಕ ಸಂಬಂಧಗಳು ಒಂದು ತರಹದ ಹೊರೆಯಾದರೆ, ಆರೈಕೆದಾರರು ಅನುಭವಿಸುವ ಬಾವನಾತ್ಮಕ ಸಂಕಷ್ಟಗಳದ್ದು ಇನ್ನೊಂದು ರೀತಿ. “ಕುಟುಂಬದಲ್ಲಿ ತುಂಬಾ ಜನರು ಲಭ್ಯವಿದ್ದರೂ ಕೂಡ ಸಾಮಾನ್ಯವಾಗಿ ಕುಟುಂಬದ ಒಂದೇ ವ್ಯಕ್ತಿ ಆರೈಕೆ ಮಾಡುತ್ತಿರುತ್ತಾರೆ.” ಎನ್ನುತ್ತಾರೆ ನಿಮ್ಹಾನ್ಸ್ನ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರತಿ ಜಗನ್ನಾಥನ್.

ಸ್ಕಿಜ಼ೋಫ್ರೇನಿಯ ಅಥವಾ ಆಲ್‌ಜ಼ೈಮರ್ಸ್ ಹೊಂದಿರುವ ವ್ಯಕ್ತಿಯ ಆರೈಕೆ ಮಾಡುವಾಗ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ ಸ್ನಾನಮಾಡಿಸುವುದು, ಸರಿಯಾದ ಸಮಯಕ್ಕೆ ಔಷಧನೀಡುವುದು, ವ್ಯಕ್ತಿಯ ಆರೋಗ್ಯವನ್ನು ಮೇಲ್ವಿಚಾರಿಸುವುದು ಮತ್ತು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗಳಿಗೆ ಕರೆದುಕೊಂಡು ಹೋಗುವುದು, ಇತ್ಯಾದಿ. ಈ ರೀತಿಯ ದೀರ್ಘಕಾಲೀನ ಕಾಳಜಿಯ ಹೊರೆಯಿಂದ ಆರೈಕೆದಾರರಿಗೆ ಒತ್ತಡವುಂಟಾಗುತ್ತದೆ. ಆದ್ದರಿಂದ ಉಳಿದವರ ಸಹಾಯದ ಅವಶ್ಯಕತೆಯಿರುತ್ತದೆ.­

­ಪರಸ್ಪರ ಸಂಬಂಧ
ಆರೈಕೆದಾರರಿಗೆ ಯಾರಾದರೂ ಸಹಾಯ ಮಾಡಲು ಮುಂದೆ ಬಂದಾಗ “ಇವರು ಯಾಕೆ ಸಹಾಯ ಮಾಡಲು ಬಯಸುತ್ತಾರೆ? ನನ್ನಿಂದ ಏನಾದರೂ ಬೇಕಿದೆಯೋ?” ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಬ್ಬ ಸ್ನೇಹಿತ ಅಥವಾ ಸಂಬಂಧಿ ಸಹಾಯ ಮಾಡಲು ಮುಂದೆ ಬಂದಾಗ ಆರೈಕೆದಾರರು ಅವರ ಸಹಾಯವನ್ನು ಹೇಗೆ ಮರಳಿಸುವುದು ಎಂದು ಯೋಚಿಸುತ್ತಾರೆ. ಇದರಿಂದ ಆರೈಕೆದಾರರಲ್ಲಿ ಪಶ್ಚಾತ್ತಾಪದ ಭಾವನೆ ಉಂಟಾಗಬಹುದು.

ಕೆಲವು ಸ್ನೇಹಿತರು ಮತ್ತು ಸಂಬಂಧಿಗಳು ಪ್ರತಿಫಲವನ್ನು ನಿರೀಕ್ಷಿಸಿದರೂ ಉಳಿದವರು ಕೇವಲ ಸಹಾಯ ಮಾಡುವ ಉದ್ದೇಶವನ್ನು ಮಾತ್ರ ಹೊಂದಿರಬಹುದು. 

ಸಹಾಯ ಕೇಳಲು ಹಿಂಜರಿಕೆ
ಮಾನಸಿಕ ಅನಾರೊಗ್ಯದ ಕುರಿತು ಸಮಾಜದಲ್ಲಿರುವ ತಾರತಮ್ಯ ಭಾವನೆಯ ಕಾರಣದಿಂದ ಆರೈಕೆದಾರರು ತಮ್ಮ ಪರಿಸ್ಥಿತಿಯ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಇದರೊಂದಿಗೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಅವರ ಹೊರೆಯನ್ನು ಈ ರೀತಿ ಇನ್ನಷ್ಟು ಹೆಚ್ಚಿಸುತ್ತಾರೆ:

  • ಅಪವಾದ ಹೊರಿಸುವುದು
  • ಟೀಕಿಸುವುದು
  • ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಪ್ರತ್ಯೇಕಿಸುವುದು

ಇದನ್ನು ತಪ್ಪಿಸಲು ಆರೈಕೆದಾರರು ತಮ್ಮ ಕುಟುಂಬದವರು, ಸ್ನೇಹಿತರು ಮತ್ತು ಸಂಬಂಧಿಗಳಿಗೆ ತಮ್ಮ ಪ್ರೀತಿಪಾತ್ರರ ಅನಾರೋಗ್ಯದ ಕುರಿತು ತಿಳುವಳಿಕೆ ಮೂಡಿಸಬೇಕು. “ರೋಗಿಗಳನ್ನು ಮತ್ತು ಆರೈಕೆದಾರರನ್ನು ಒಪ್ಪಿಕೊಳ್ಳುವಂತಹ ಮುಕ್ತವಾದ ಸಮಾಜವಿದ್ದಾಗ ಆರೈಕೆದಾರರ ಭಾವನಾತ್ಮಕ ಹೊರೆಯನ್ನು ಬಹಳಷ್ಟು ಮಟ್ಟಿಗೆ ಕಡಿಮೆಮಾಡುತ್ತದೆ,” ಎನ್ನುತ್ತಾರೆ ಡಾ. ಜಗನ್ನಾಥನ್.

ಆರೈಕೆದಾರರು ವ್ಯಕ್ತಿಯೊಂದಿಗೆ ಆತ್ಮೀಯವಾಗಿದ್ದಷ್ಟು ಆರೈಕೆದಾರರ ಜವಾಬ್ದಾರಿ ಹೆಚ್ಚುತ್ತದೆ. ಆದ್ದರಿಂದ ಸಹಾಯ ಸ್ವೀಕರಿಸಿ. ಇದರಿಂದ ನಿಮ್ಮ ಜೀವನವು ಸಮತೋಲನಗೊಳ್ಳುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರನ್ನು ಇನ್ನಷ್ಟು ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯವಾಗುತ್ತದೆ.