ನಿಮ್ಮ ಶಕ್ತಿಯನ್ನು ಮರಳಿ ಪಡೆಯುವ ಬಗ್ಗೆ ”

ನನ್ನ ಬಾಲ್ಯದಲ್ಲಿ ನಡೆದ ದೌರ್ಜನ್ಯದ ಸುತ್ತ ಇದ್ದ ಅಳುಕನ್ನು ನಿವಾರಿಸಿದ್ದು ನನ್ನಲ್ಲಿ ನಿಯಂತ್ರಣ ಸಾಧಿಸಲು ಹೇಗೆ ನೆರವಾಯಿತು !

ನನ್ನ ಬಾಲ್ಯದಲ್ಲಿ ನಡೆದ ದೌರ್ಜನ್ಯದ ಸುತ್ತ ಇದ್ದ ಅಳುಕನ್ನು ನಿವಾರಿಸಿದ್ದು ನನ್ನಲ್ಲಿ ನಿಯಂತ್ರಣ ಸಾಧಿಸಲು ಹೇಗೆ ನೆರವಾಯಿತು !

ಕೋಪಿಷ್ಟೆ, ಮುಂಗೋಪಿ,  ಬೇಗನೆ ಆಕ್ರೋಶಕ್ಕೊಳಗಾಗುವವಳು ಇವೆಲ್ಲವೂ ನನ್ನನ್ನು ಬಣ್ಣಿಸಲು ನನ್ನ ಕುಟುಂಬದವರು, ಸಹಪಾಠಿಗಳು, ಸಹೋದ್ಯೋಗಿಗಳು ಬಳಸುತ್ತಿದ್ದ ಪದಗಳು.  ಅದೃಷ್ಟವಶಾತ್ ನನ್ನಲ್ಲಿ ಕೋಪ ಹೆಚ್ಚಾಗಿದ್ದರೂ ನನ್ನಲ್ಲಿದ್ದ ಸ್ನೇಹಮಯಿ ವ್ಯಕ್ತಿತ್ವದ ಪರಿಣಾಮ ನಾನು ನನ್ನ ಇಡೀ ಗೆಳೆಯರ ಬಳಗವನ್ನು ಕಳೆದುಕೊಳ್ಳಲಿಲ್ಲ.  ಆದರೆ ನಾನು ಮೂವತ್ತರ ಹರೆಯ ತಲುಪುತ್ತಿದ್ದಂತೆ ಪರ್ಯಾಯ ಶಿಕ್ಷಣ ಶಾಲೆಯಲ್ಲಿ ಕೆಲಸ ಮಾಡುತ್ತಾ ಮಕ್ಕಳೊಡನೆ ಕರೆತು, ಬೆರೆತು, ಕೆಲಸ ನಿರ್ವಹಿಸಿ ಜೀವನ ನಡೆಸಿದ ನಂತರ ನನ್ನಲ್ಲಿ ಜ್ಞಾನೋದಯವಾಗಿತ್ತು ನನ್ನಲ್ಲಿನ ಭಾವಾವೇಶ ನನ್ನ ಮನಸ್ಥಿತಿಯನ್ನು ನಿಯಂತ್ರಿಸಬಾರದು ಎಂದು ನನಗೆ ಖಾತರಿಯಾಯಿತು.  ಈ ಸಂದರ್ಭದಲ್ಲೇ , ನಾನು ಏಕೆ ಅಷ್ಟು ಬೇಗೆ ಸಹನೆ ಕಳೆದುಕೊಂಡು  ಆವೇಶ ವ್ಯಕ್ತಪಡಿಸುತ್ತೇನೆ ಎಂದು ಅರ್ಥಮಾಡಿಕೊಳ್ಳಲು ಗಾಢವಾಗಿ ಯೋಚಿಸತೊಡಗಿದೆ.  ಆಗ ನನಗೆ ಅರಿವಾಗಿದ್ದೇನೆಂದರೆ,  ನಾನು ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಮತ್ತು ಅದಕ್ಕೆ ಸಂಬಂಧಿಸಿದ  ಪರಿಹಾರ ಕಾಣದ ಇತರ  ವಿಚಾರಗಳೇ ನನ್ನ ವರ್ತನೆ ಕಾರಣ  ಎಂದು ನಾನೇ ಒಪ್ಪಿಕೊಳ್ಳುವಂತಾಯಿತು.  ಈ ಲೈಂಗಿಕ ದೌರ್ಜನ್ಯದ ನೆನಪು ನನ್ನಲ್ಲಿ ಹಸಿರಾಗಿಯೇ ಇದ್ದರೂ ನಾನು ಯಾರೊಂದಿಗೂ ಆ ವೇದನೆಯನ್ನು ಹಂಚಿಕೊಂಡಿರಲಿಲ್ಲ. ಇದು ನನ್ನ ವರ್ತನೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು.  

ಮತ್ತೊಬ್ಬರಿಂದ ನೆರವು ಪಡೆಯಲು ಇದು ನನಗೆ ಪ್ರೇರಣೆ ನೀಡಿತ್ತು. ಒಂದು ರೀತಿಯ ಖಿನ್ನತೆಯನ್ನು ಅನುಭವಿಸುತ್ತಲೇ ನಾನು  , ನನ್ನ ಮೇಲೆ ನಡೆದ ದೌರ್ಜನ್ಯವನ್ನು ನಿರ್ವಹಿಸುವುದು ಎಂಬ ಸುಳಿವನ್ನೂ ಅರಿಯದ ಒಬ್ಬ ಮಾನಸಿಕ ತಜ್ಞರನ್ನು ಭೇಟಿ ಮಾಡಲಾರಂಭಿಸಿದೆ. ಏತನ್ಮಧ್ಯೆ ನಾನು ಈ ದೌರ್ಜನ್ಯಗಳು ನನ್ನ ಮೇಲೆ ಯಾವ ರೀತಿಯ ಪ್ರಭಾವ ಬೀರಿವೆ  ಎಂದು ಗುರುತಿಸತೊಡಗಿದೆ. ನನಗೆ  ಪರಿಹಾರ ಕಾಣದ ಬಾಲ್ಯದ  ಸಮಸ್ಯೆಗಳಿಂದ ಉದ್ಭವಿಸಿದ ಕೋಪ, ಆವೇಶದ ಸಮಸ್ಯೆಗಳಷ್ಟೇ ಇರಲಿಲ್ಲ, ನನಗೆ ವಿಶ್ವಾಸದ ಕೊರತೆಯೂ ತೀವ್ರವಾಗಿತ್ತು. ದೈಹಿಕ ಸ್ವರೂಪದ ವಿಷಯವೂ  ಇತ್ತು. ನಾನು ಆತ್ಮವಿಶ್ವಾಸ ಹೊರಗೆಡಹುವ ಮೂಲಕ ಈ ಎಲ್ಲವನ್ನೂ ಇತರರಿಂದ ಮುಚ್ಚಿಡುತ್ತಿದ್ದೆ ಆದರೆ ಅಂತರಿಕವಾಗಿ ಗೊಂದಲದಲ್ಲಿದ್ದೆ. ಕಳೆದುಹೋದಂತೆ ಭಾವಿಸುತ್ತಿದ್ದೆ. ಈ ಸಮಸ್ಯೆಗಳು ಸೃಷ್ಟಿಯಾಗಲು ಕಾರಣವೇನು ಎಂದ ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಸಮಸ್ಯೆಗಳು ಮೇಲ್ನೋಟಕ್ಕೆ ಅರ್ಥವಾಗುವಂತಿದ್ದವು ಆದರೆ ಬಾಲ್ಯದಲ್ಲಿ ಅನುಭವಿಸಿದ ದೌರ್ಜನ್ಯ ಅಷ್ಟು ದೀರ್ಘ ಕಾಲ ನನ್ನ ಮೇಲೆ ಪ್ರಭಾವ ಬೀರುತ್ತದೆ ಎಂದು ಅರ್ಥಮಾಡಿಕೊಳ್ಳಲು ಎಲ್ಲವನ್ನೂ ಪೋಣಿಸುವ ಸಾಮರ್ಥ್ಯ ನನಗೆ ಸುಲಭವಾಗಿ ಒದಗಿಬರಲಿಲ್ಲ.

ಮನಶ್ಶಾಸ್ತ್ರಜ್ಞರ ಸಲಹೆ ಪಡೆಯುತ್ತಿರುವ ಸಂದರ್ಭದಲ್ಲೇ ನನಗೆ ಅರ್ಥವಾಗಿದ್ದೇನೆಂದರೆ,  ಆ ವೈದ್ಯರಿಗೆ ನನ್ನನ್ನು ಕಾಡುತ್ತಿದ್ದ ಸಮಸ್ಯೆಗೆ ಹೇಗೆ ಪರಿಹಾರ ಒದಗಿಸಬೇಕು ಎಂದು ತಿಳಿದಿರಲಿಲ್ಲ. ಆಗ ನನ್ನ ಸ್ನೇಹಿತೆಯೊಬ್ಬರು ನನಗೆ ರಾಹಿ ( RAHI )ಸಂಸ್ಥೆಯನ್ನು ಸಂಪರ್ಕಿಸಲು ಹೇಳಿದರು. ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಅನುಭವಿಸಿರುವ ಮಹಿಳಾ ಸಂತ್ರಸ್ತಗಿಗಾಗಿಯೇ ದುಡಿಯುವ ಸಂಸ್ಥೆ ರಾಹಿ. ನಾನು ರಾಹಿ ಸಂಸ್ಥೆಯನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಲಾರಂಭಿಸಿದೆ.  ಬಾಲ್ಯದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಉಂಟಾಗುವ ಪರಿಣಾಮಗಳು ಮತ್ತು ಪ್ರಭಾವಗಳ ಬಗ್ಗೆಯೇ ವಿಶೇಷವಾಗಿ ಕೇಂದ್ರೀಕರಿಸಿ ಪರಿಹಾರ ಮಾರ್ಗಗಳನ್ನು ತೋರುವ ಈ ಚಿಕಿತ್ಸಾ ಕೇಂದ್ರ ನನ್ನ ಎಲ್ಲ ಸಮಸ್ಯೆಗಳನ್ನೂ ಸರಿಯಾದ ದೃಷ್ಟಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.  ನನ್ನ ಜೀವನದುದ್ದಕ್ಕೂ ಬಾಲ್ಯದ ಘಟನೆಗಳನ್ನು ಕುರಿತ ಅಳುಕು ನನ್ನ ಭಾವಾವೇಶವನ್ನು ನಿಯಂತ್ರಿಸುತ್ತಿದ್ದುದು ನನಗೆ ಅರಿವಾಯಿತು. ಈ ಧೋರಣೆಯಿಂದಲೇ ನಾನು  30 ವರ್ಷ ವಯಸ್ಸಾಗುವವರೆಗೆ ನನ್ನ ಆಂತರ್ಯದ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಈ ರೀತಿ ಘಟನೆ ನಡೆಯಲು ನಾನು ಅವಕಾಶ ನೀಡಿದೆ ಎನ್ನುವ ಅಳುಕು, ನಾನು ಅದರಲ್ಲಿ ಭಾಗಿಯಾಗಿದ್ದೆ ಎನ್ನುವ ಅಳುಕು, ನನಗೆ ಅದನ್ನು ತಡೆಗಟ್ಟಬೇಕು ಎನ್ನುವ ಮನಸ್ಸು ಇದ್ದಿದ್ದರೆ ತಡೆಗಟ್ಟಬಹುದಿತ್ತು ಎನ್ನುವ ಅಳುಕು ನನ್ನನ್ನು ಕಾಡುತ್ತಿತ್ತು.

ರಾಹಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದ ನಂತರ ನನ್ನೊಳಗಿನ ಅಳುಕು ದೂರವಾಗಿ, ನನ್ನ ಮೇಲೆ ದೌರ್ಜನ್ಯ ಎಸಗಿದವರೇ ತಪ್ಪಿತಸ್ಥರು ಎಂಬ ಭಾವನೆ ಮೂಡಿತ್ತು.

ಚಿಕಿತ್ಸೆಯ ವೇಳೆಯಲ್ಲಿ ನನಗೆ ಅರ್ಥವಾಗಿದ್ದೇನೆಂದರೆ, ನಾನು ಎಂಟು ವರ್ಷದ ಬಾಲಕಿಯಾಗಿದ್ದೆ, ನನ್ನ ನಿರ್ಣಯಗಳನ್ನು ಯಾರೂ  ನಿಯಂತ್ರಿಸುತ್ತಿರಲಿಲ್ಲ, ನನಗೆ ಏನಾಗುತ್ತಿದೆ ಎಂದೇ ನನಗೆ ಅರ್ಥವಾಗುತ್ತಿರಲಿಲ್ಲ,  ನನಗೆ ತೀರ ಪರಿಚಿತರಾಗಿದ್ದ ವ್ಯಕ್ತಿಯೊಬ್ಬರು ನನ್ನ ಮೇಲೆ ದೌರ್ಜನ್ಯ ಎಸಗಿದ್ದರು. ಅವರಲ್ಲಿ ನನಗೆ ಅತಿಯಾದ ವಿಶ್ವಾಸ ಇದ್ದುದರಿಂದ ನನಗೆ ಬೇಡ ಎನ್ನುವ ಆಯ್ಕೆ ಇದ್ದರೂ, ಬೇಡ ಎನ್ನಲು ಶಕ್ತಿ ಇರಲಿಲ್ಲ. ಚಿಕಿತ್ಸೆಯ ನಂತರ ನನ್ನಲ್ಲಿ ಮೂಡಿದ ತಿಳುವಳಿಕೆಯಿಂದ ಅಳುಕು ದೂರವಾಗಿ, ನನ್ನ ಮೇಲೆ ದೌರ್ಜನ್ಯ ಎಸಗಿದವರೇ ತಪ್ಪಿತಸ್ಥರು ಎಂಬ ಭಾವನೆ ಮೂಡಿತ್ತು.

ಮೌನಕ್ಕೆ ಶರಣಾಗಿದ್ದ ಹಂತದಿಂದ ಈ  ವಿಚಾರದಲ್ಲಿ ಸಲಹೆ ಪರಿಹಾರ ನೀಡುವ ಹಂತಕ್ಕೆ ಮುಂದುವರೆದ ನನ್ನ ಪಯಣ ನನಗೆ ಗೊಂದಲಮಯವಾದ ಅನುಭವವಾಗಿತ್ತು. ನನಗೆ ಹೇಳಿಕೊಳ್ಳುವಂತಹ ಆತ್ಮೀಯ ಸಂಬಂಧಗಳು ಇಲ್ಲದಿದ್ದರೂ, ನಾನು ಬಾಲ್ಯದಿಂದಲೂ  ಮೈಗೂಡಿಸಿಕೊಂಡಿದ್ದ ಭಾವನಾತ್ಮಕ ಮನಸ್ಸು ಬರುಬರುತ್ತಾ ತಿಳಿಯಾಗುತ್ತಿತ್ತು. ಚಿಕಿತ್ಸೆ ಪಡೆಯುತ್ತಿರುವಾಗ ನಾನು ನನ್ನ ಭಾವಾವೇಶವನ್ನು, ಭಾವನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕಲಿತೆ. ದೌರ್ಜನ್ಯದಿಂದ ನನ್ನ ಮೇಲೆ ಉಂಟಾಗಿದ್ದ ಪರಿಣಾಮವನ್ನು ಗುರುತಿಸಿದ್ದೆ. ಇದು ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನೇ ಬದಲಿಸಿತ್ತು. ನನ್ನ ಆಕ್ರೋಶಕ್ಕೆ ಕಾರಣವಾಗಿದ್ದ ಹಲವು ವಿಷಯಗಳು ಸಂಪೂರ್ಣವಾಗಿ ಮರೆಯಾದವು. ನಾನು ಹೆಚ್ಚು ಆತ್ಮ ವಿಶ್ವಾಸ ಗಳಿಸಿ ನನ್ನಲ್ಲಿ ಸುರಕ್ಷಿತ ಭಾವನೆ ಮೂಡಿತ್ತು.

ಹಿಂದಿರುಗಿ ನೋಡಿದಾಗ ನನ್ನ ಮೇಲೆ ಬಾಲ್ಯದಲ್ಲಿ ನಡೆದ ದೌರ್ಜನ್ಯ ನನ್ನ ಜೀವನದಲ್ಲಿ ನಡೆದ ದುರದೃಷ್ಟಕರ ಘಟನೆ ಎಂಬ ಭಾವನೆ ಮೂಡಿದೆ. ಅದು ನನ್ನನ್ನು ನೋಯಿಸಲು ಇನ್ನು ಸಾಧ್ಯವಿಲ್ಲ ಎಂಬ ವಿಶ್ವಾಸ ಮೂಡಿದೆ. ಇದು ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ್ದರೂ, ನನ್ನ ಭವಿಷ್ಯದ ಜೀವನ ಹೇಗಿರಬೇಕು, ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ಧರಿಸುವಷ್ಟು ನಿಯಂತ್ರಣ ಸಾಧಿಸಲು ನನಗೆ ಸಾಧ್ಯವಾಗಿದೆ. ವೈಯಕ್ತಿಕ ಅಳುಕು ಮತ್ತು ಸಾಂಸಾರಿಕ ಹಾಗೂ ಸಾಮಾಜಿಕ ಒತ್ತಡದ ಪರಿಣಾಮ ನನ್ನ ಆ ದಿನಗಳ ನೋವು ಮರೆಯಾಗಿಹೋಗಿದೆ. ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದರೆ ನನ್ನ ಮೌನವನ್ನು ಮುರಿದು ಮುಕ್ತವಾಗಿ ಮಾತನಾಡಲು ಆರಂಭಿಸಿರುವುದು.  ಇದು ನನಗೆ ನನ್ನೊಳಗಿದ್ದ ಕಾರ್ಯಕರ್ತೆಯ ಹುರುಪನ್ನು ಇಮ್ಮಡಿಗೊಳಿಸಲು ಸಹಾಯ ಮಾಡಿರುವುದಷ್ಟೇ ಅಲ್ಲ, ಭಾವನಾತ್ಮಕ ನೆಲೆಯಲ್ಲಿ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ನೆರವಾಗಿದೆ.

ಲೇಖಕಿ ರೀನಾ ಡಿ’ಸೋಜಾ ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿದ್ದು,ಪರಿಸರ ಮತ್ತು ಪ್ರಾಣಿಗಳ ಹಕ್ಕುಗಳ ರಕ್ಷಣೆಗಾಗಿ ಹೋರಾಟದಲ್ಲಿ ನಿರತರಾಗಿದ್ದಾರೆ. ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಒಳಿತಿಗಾಗಿ ರಾಹಿ ಸಂಸ್ಥೆಯ ಮೂಲಕ ದುಡಿಯುತ್ತಿದ್ದಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org