ಮದ್ಯ ವ್ಯಸನ : ಕಲ್ಪನೆಗಳು ಮತ್ತು ವಾಸ್ತವಗಳು

ಮದ್ಯ ವ್ಯಸನದ ಕುರಿತು ವ್ಯಸನಿಗಳಲ್ಲಿ ಅನೇಕ ತಪ್ಪು ಕಲ್ಪನೆಗಳಿರುತ್ತವೆ. ಮದ್ಯ ವ್ಯಸನ ಒಂದು ಆಯ್ಕೆ ಮಾತ್ರ, ಎಷ್ಟೇ ಕುಡಿದರೂ ನಾನು ನಿಯಂತ್ರಣ ತಪ್ಪುವುದಿಲ್ಲ, ಕುಡಿತದ ನಂತರ ಕಾಫಿ ಅಥವಾ ಟೀ ಕುಡಿಯುವುದರಿಂದ ನಾನು ಸಹಜ ಸ್ಥಿತಿಗೆ ಮರಳುತ್ತೇನೆ

ಕಲ್ಪನೆ : ಮದ್ಯ ವ್ಯಸನಿಗಳಾಗುವುದು ಮತ್ತು ವ್ಯಸನಿಗಳಾಗಿಯೇ ಉಳಿಯುವುದು ನಮ್ಮ ಆಯ್ಕೆ.

ವಾಸ್ತವ : ಮದ್ಯ ವ್ಯಸನ ಕೇವಲ ಆಯ್ಕೆಯ ವಿಚಾರ ಮಾತ್ರ ಅಲ್ಲ. ವ್ಯಕ್ತಿಯು ಮದ್ಯ ಸೇವಿಸಲು ಬಯಸತೊಡಗಿ, ಅದು ಅವರ ವ್ಯಸನವಾಗಿ ತಿರುಗಲು ಹಲವಾರು ಕಾರಣಗಳನ್ನು, ಸಂಕೀರ್ಣ ಅಂಶಗಳನ್ನು ಅವಲಂಬಿಸಿರುತ್ತದೆ. ವ್ಯಕ್ತಿಯು ಮದ್ಯದ ಗೀಳಿಗೆ ಒಳಗಾಗುತ್ತಾನೆ ಅಂತಾದರೆ ಅದಕ್ಕೆ ಬೇರೆಬೇರೆ ರೀತಿಯ ವಾತಾವರಣ ಮತ್ತು ವಂಶವಾಹಿ ಅಂಶಗಳು ಕಾರಣವಾಗಬಹುದು. ಈ ವಿಷಯದಲ್ಲಿ ಆಯ್ಕೆ ಎನ್ನುವುದರ ಪಾತ್ರ ಅತಿ ಚಿಕ್ಕದು.

ಕಲ್ಪನೆ : ನಾನು ಇಚ್ಛಿಸಿದ ಪ್ರಮಾಣದಲ್ಲಿ ಎಷ್ಟು ಬೇಕಾದರೂ ಮದ್ಯ ಸೇವಿಸಬಹುದು ಮತ್ತು ನಾನು ನಿಯಂತ್ರಣ ತಪ್ಪುವುದಿಲ್ಲ.

ವಾಸ್ತವ : ಮದ್ಯವು ಮಿದುಳಿನ ಕೆಲಸದಲ್ಲಿ ತೊಡಕು ಉಂಟುಮಾಡಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಮಿತಿಗಳಿರುತ್ತವೆ (ಅದು ವ್ಯಕ್ತಿಯ ಎತ್ತರ, ತೂಕ, ಲಿಂಗ ಮತ್ತು ವಂಶವಾಹಿಯನ್ನು ಆಧರಿಸಿರುತ್ತದೆ). ವ್ಯಕ್ತಿಯು ನಿಯಂತ್ರಣ ಕಳೆದುಕೊಳ್ಳುವುದಕ್ಕೂ ಮುಂಚೆ ಎಷ್ಟರ ಮಟ್ಟಿಗಿನ ಪ್ರಮಾಣದ ಮದ್ಯವನ್ನು ಸಹಿಸಿಕೊಳ್ಳಬಹುದು ಎನ್ನುವುದನ್ನು ಇವು ನಿರ್ಧರಿಸುತ್ತದೆ. ಅದೇನೇ ಇದ್ದರೂ, ನೀವು ಮೊದಲು ಪಡೆಯುತ್ತಿದ್ದ ಕಿಕ್ ಹೊಂದಲು ಮೊದಲಿಗಿಂತಲೂ ಅಧಿಕ ಪ್ರಮಾಣದಲ್ಲಿ ಮದ್ಯಸೇವನೆ ಮಾಡುತ್ತಿರುವಿರಿ ಎಂದಾದಲ್ಲಿ, ಅಲ್ಕೋಹಾಲ್ ಟಾಲರನ್ಸ್ ಗೆ ಒಳಗಾಗಿದ್ದೀರಿ ಎಂದರ್ಥ. ಅಲ್ಕೋಹಾಲ್ ಟಾಲರನ್ಸ್ ಕೂಡ ನಿಮ್ಮ ಹವ್ಯಾಸ ವ್ಯಸನವಾಗಿ ಪರಿವರ್ತಿತವಾಗುತ್ತಿರುವ ಒಂದು ಲಕ್ಷಣ, ಅದರಿಂದ ಹೊರಬರಲು ನಿಮಗೆ ಸಹಾಯ ಬೇಕಾಗಬಹುದು.

ಕಲ್ಪನೆ : ನಾನು ಎಷ್ಟು ಪೆಗ್ ಮದ್ಯ ಸೇವಿಸಿದ್ದೇನೆ ಎನ್ನುವುದು ಮುಖ್ಯವಲ್ಲ. ಒಂದು ಕಪ್ ಕಾಫಿ ಕುಡಿದ ತಕ್ಷಣ ನಾನು ಸಹಜ ಸ್ಥಿತಿಗೆ ಮರಳುತ್ತೇನೆ.

ವಾಸ್ತವ : ಮಾನವ ದೇಹವು ಸರಾಸರಿ ಒಂದು ಗಂಟೆಯ ಅವಧಿಯಲ್ಲಿ ಒಂದು ಪೆಗ್ ಮದ್ಯವನ್ನು ಜೀರ್ಣಿಸಿಕೊಳ್ಳಬಹುದು. ನೀವು ಗಂಟೆಯೊಂದರಲ್ಲಿ ಒಂದೇ ಪೆಗ್ ಮದ್ಯ ಸೇವಿಸಿದಲ್ಲಿ ಮದ್ಯದ ವಿಷಕಾರಕತೆಯನ್ನು ತೊಡೆದು ಹಾಕುವಲ್ಲಿ ನಿಮ್ಮ ಲಿವರ್ ತನ್ನ ಕೆಲಸ ನಿಭಾಯಿಸುತ್ತದೆ. ನೀವು ಹೆಚ್ಚು ಕುಡಿದಂತೆಲ್ಲ, ನಿಮ್ಮ ಲಿವರ್ ಇಂದ ಅತಿಯಾದ ಮದ್ಯದ ಹೊರೆಯನ್ನು ನಿಭಾಯಿಸಲಾಗದು. ಇದರಿಂದ ಮದ್ಯ ನಿಮ್ಮ ದೇಹದಲ್ಲಿಯೇ ಉಳಿಯುತ್ತದೆ. ಕಾಫಿ ಕುಡಿಯುವುದು ತಕ್ಷಣಕ್ಕೆ ನಶೆಯನ್ನು ಇಳಿಸಿದಂತೆ ತೋರಬಹುದಾದರೂ, ಮದ್ಯವು ನಿಮ್ಮ ದೇಹದಲ್ಲಿಯೇ ಉಳಿದುಕೊಂಡಿರುತ್ತದೆ. ಅದು ಅಲ್ಲಿಂದ ಹೊರದೂಡಲು ಸಮಯ ಬೇಕು. ಕಾಫೀ ಕುಡಿಯುವುದರಿಂದ ಸ್ವಲ್ಪ ಮಟ್ಟಿಗೆ ಪರಿಣಾಮ ಕಡಿಮೆಯಾದರೂ, ಮದ್ಯದ ಅಂಶವು ಪೂರ್ತಿಯಾಗಿ ದೇಹದಿಂದ ಹೊರಹೋಗಲು ಸಮಯ ಬೇಕಾಗುವುದು.

ಕಲ್ಪನೆ: ಬೇಕೆನಿಸಿದಾಗ ನಾನು ಇದನ್ನು ಬಿಡುತ್ತೇನೆ, ಆದರೆ ಸದ್ಯಕ್ಕಲ್ಲ.

ವಾಸ್ತವ: ನೀವು ದೀರ್ಘ ಸಮಯದಿಂದ ಕುಡಿಯುತ್ತಿದ್ದು, ಮದ್ಯಪಾನದ ಮೇಲೆ ಅವಲಂಬಿತರಾಗಿರುವುದನ್ನು ತಿಳಿದಿದ್ದರೆ, ನಿಮ್ಮ ವ್ಯಸನವನ್ನು ನಿಯಂತ್ರಿಸುವುದು ನಿಮ್ಮಿಂದ ಸಾಧ್ಯವಾಗದ ಮಾತು. ಕೇವಲ ‘ಕುಡಿಯುವುದಿಲ್ಲ’ ಎಂದಷ್ಟೇ ಹೇಳುವುದರಿಂದ ವ್ಯಸನಮುಕ್ತರಾಗುವುದು ಅಷ್ಟು ಸುಲಭವಲ್ಲ. ನಿಮಗೆ ಸಮಸ್ಯೆ ಇದೆಯೆಂದು ಅನಿಸಿದರೆ, ಸಹಾಯ ಪಡೆದುಕೊಳ್ಳಿ.

ಕಲ್ಪನೆ: ಪುನಶ್ಚೇತನ ಮತ್ತು ಚಿಕಿತ್ಸೆಯ ನಂತರ ಮದ್ಯಪಾನವನ್ನು ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದು ನನಗೆ ತಿಳಿದಿದೆ. ಒಂದು ಅಥವಾ ಎರಡು ಪೆಗ್ ಕುಡಿಯುವುದರಿಂದ ನನಗೇನೂ ಆಗುವುದಿಲ್ಲ ಎಂಬುದು ಕೂಡ ನನಗೆ ತಿಳಿದಿದೆ.

ವಾಸ್ತವ: ಮದ್ಯ ಸೇವನೆಯ ವ್ಯಸನದಿಂದ ಬಿಡುಗಡೆ ಪಡೆಯುವಂತದ್ದು ಜೀವನಪೂರ್ತಿ ಇರುವಂತಹ ನಿರಂತರ ಪ್ರಯಾಣ. ಚಿಕಿತ್ಸೆ ಮತ್ತು ಪುನಶ್ಚೇತನದ ನಂತರ, ನೀವು ವ್ಯಸನ ಮರುಕಳಿಸಬಹುದಾದ ಪರಿಸ್ಥಿತಿಗಳ ಕುರಿತಾಗಿಯೂ ಲಕ್ಷ್ಯವಹಿಸಬೇಕು. ನೀವು ಎಷ್ಟು ಕಾಲ ಮದ್ಯದಿಂದ ದೂರವಿದ್ದೀರಿ ಎನ್ನುವುದು ಮುಖ್ಯವಲ್ಲ, ಒಂದೇ ಒಂದು ಪೆಗ್ ಮದ್ಯ ಸೇವನೆ ಕೂಡ ವ್ಯಸನ ಮರುಕಳಿಸಲು ಕಾರಣವಾಗಬಹುದು. ಕುಡಿತ ಮರುಕಳಿಸಬಹುದಾದ ಪರಿಸ್ಥಿತಿಯ ಸುಳಿಗೆ ನೀವು ಸಿಲುಕಿದ್ದೀರಿ ಎಂದು ನಿಮಗೆ ಅನಿಸಿದರೆ ನೀವು ನಿಮ್ಮ ವೈದ್ಯರ ಅಥವಾ ಚಿಕಿತ್ಸಕರ ಸಹಾಯ ಪಡೆಯಿರಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org