ಹದಿಹರೆಯದಲ್ಲಿ ಬುಲ್ಲಿಯಿಂಗ್ (ಬೆದರಿಕೆ)

10 ವರ್ಷದ ಆಕಾಶ್ ಬಹಳ ಚುರುಕಾದ ಲವಲವಿಕೆಯ ಹುಡುಗ. ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದ. ಆದರೆ ಕೆಲವು ದಿನಗಳ ನಂತರ, ಶಾಲೆಗೆ ಹೋಗಲು ನಿರಾಕರಿಸಿದ ಮತ್ತು ಪ್ರತೀ ದಿನ ಶಾಲೆಗೆ ಹೋಗಲು ನೆಪ ಹೇಳುತ್ತಿದ್ದ. ಆದರೆ ಪೋಷಕರು ಅವನನ್ನು ಬಲವಂತವಾಗಿ ಶಾಲೆಗೆ ಕಳಿಸುತ್ತಿದ್ದರು. ಆಕಾಶ್ ಶಾಲೆಯಿಂದ ಮನೆಗೆ ಬಂದಮೇಲೆ ಮಂಕಾಗಿ ಕೂರುತ್ತಿದ್ದ. ಕ್ರಮೇಣವಾಗಿ ಅವನು ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಕಡಿಮೆಯಾದವು. ಅವನ ಪೋಷಕರಿಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಅವನನ್ನು ಟ್ಯೂಶನ್‍ಗೆ ಸೇರಿಸಿದರು. ಈಗಾಗಲೇ ಶಾಲೆಯ ಬಗ್ಗೆ ನೆನೆಸಿಕೊಂಡರೆ ಆತಂಕಗೊಳ್ಳುತ್ತಿದ್ದ ಆಕಾಶ್, ಶೈಕ್ಷಣಿಕ ಒತ್ತಡಕ್ಕೆ ಕೂಡ ಒಳಗಾದ. ಸದಾ ಬೇಸರದಲ್ಲೇ ಇರುತ್ತಿದ್ದ.

ಬುಲ್ಲಿಯಿಂಗ್ (ಬೆದರಿಸುವುದು) ಎಂದರೇನು?

ಮತ್ತೊಬ್ಬರ ಮೇಲೆ ಅಧಿಕಾರ ಅಥವಾ ದಬ್ಬಾಳಿಕೆ ಪ್ರದರ್ಶಿಸುವುದನ್ನು ಬುಲ್ಲಿಯಿಂಗ್ ಎನ್ನುತ್ತೇವೆ. ಬೆದರಿಕೆ ಒಡ್ಡುವವರು (ಬುಲ್ಲಿ) ದೈಹಿಕವಾಗಿ, ಮಾತಿನಿಂದ ಅಥವಾ ನಡವಳಿಕೆಯಿಂದ ಒಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈ ನಡುವೆ ಮೆಸೇಜ್, ಬ್ಲಾಗ್, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಕೂಡ ಇನ್ನೊಬ್ಬರನ್ನು ಹಿಂಸೆಗೆ ಗುರಿ ಮಾಡುತ್ತಾರೆ.

ಮಕ್ಕಳು ಬೆದರಿಸುವ ಸ್ವಭಾವವನ್ನು ಹೇಗೆ ಬೆಳೆಸಿಕೊಳ್ಳುತ್ತಾರೆ?

ಹಲವು ಕಾರಣಗಳಿಂದಾಗಿ ಮಕ್ಕಳು ಬುಲ್ಲಿಯಿಂಗ್ ಮಾಡಬಹುದು. ಕೆಲವು ಕಾರಣಗಳು ಹೀಗಿವೆ:

• ಗೆಳೆಯರಿಂದ ನಿರಾಕರಣೆ, ಶಾಲೆಯಲ್ಲಿ ಸೋಲು.

• ಸ್ವತಃ ಬೆದರಿಕೆಗೆ ಒಳಗಾಗಿದ್ದು, ಅದರಿಂದ ಉಂಟಾದ ನೋವು, ಕೋಪ ಮತ್ತು ಹತಾಶೆಯನ್ನು ತೀರಿಸಿಕೊಳ್ಳಲು ಮತ್ತೊಬ್ಬರನ್ನು ಬೆದರಿಸುವುದು.

• ಮನೆಯಲ್ಲಿ ಪ್ರೀತಿ ಮತ್ತು ಸುರಕ್ಷತೆಯ ಕೊರತೆ ಅಥವಾ ಕುಟುಂಬದವರ ನಿಂದನೆ.

• ಆತ್ಮಗೌರವದ ಕೊರತೆ.

• ಟಿ.ವಿ., ವೀಡಿಯೋಗೇಮ್‍ನಲ್ಲಿ ಹಿಂಸಾಚಾರ ನೋಡುವುದು.

• ದಬ್ಬಾಳಿಕೆಯ ಸ್ವಭಾವವಿರುವ ಸ್ನೇಹಿತರೊಂದಿಗೆ ಬೆರೆಯುವುದು.

• ಪೋಷಕರು ದಬ್ಬಾಳಿಕೆ ಮಾಡಿದರೆ ಅದನ್ನೇ ಮಕ್ಕಳೂ ಅನುಸರಿಸುವುದು.

• ಪೋಷಕರ ಅತಿಯಾದ ಪ್ರೀತಿ ಮತ್ತು ಮುದ್ದಿನಿಂದಾಗಿ ಮಗು ತಾನು ಮಾಡಿದ್ದೆಲ್ಲಾ ಸರಿ ಎಂದು ಭಾವಿಸುವುದು.

ಮಕ್ಕಳು ಮನೆಯಲ್ಲಿ ಹಣಕಾಸಿನ ಸಮಸ್ಯೆ, ಪೋಷಕರ ದಾಂಪತ್ಯ, ಇನ್ನಿತರ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬುಲ್ಲಿಯಿಂಗ್ ಸ್ವಭಾವ ಬೆಳೆಸಿಕೊಳ್ಳಬಹುದು. ಮತ್ತೊಂದು ಕಡೆ, ಕಡಿಮೆ ಆತ್ಮವಿಶ್ವಾಸ ಮತ್ತು ಆತ್ಮಗೌರವವಿರುವ ಮಕ್ಕಳು ಸುಲಭವಾಗಿ ಸ್ನೇಹಿತರ ಮತ್ತು ಶಿಕ್ಷಕರ ಬೆದರಿಕೆಗೆ ಈಡಾಗುತ್ತಾರೆ.

ಹದಿಹರೆಯದಲ್ಲಿ ಆಗುವ ಬೆದರಿಕೆ, ದೇಹಾಕೃತಿಯ ಚಿಂತೆ ಮತ್ತು ನಡವಳಿಕೆಯ ಬಗ್ಗೆ ನಿಮ್ಹಾನ್ಸ್ ಸಂಸ್ಥೆಯು ನಡೆಸಿದ ಒಂದು ಅಧ್ಯಯನದ ಪ್ರಕಾರ, ಬೆದರಿಕೆಗೆ ಒಳಗಾಗಿರುವ ಮಕ್ಕಳು ಮಾನಸಿಕ ಸಮಸ್ಯೆ ಅನುಭವಿಸುವ ಸಾಧ್ಯತೆ ಹೆಚ್ಚು. ಇವರು ಮೂಡ್ ಸಮಸ್ಯೆ, ಖಿನ್ನತೆ, ಆತಂಕ, ಮಾನಸಿಕ ಕಾರಣಗಳಿಂದಾಗುವ ದೈಹಿಕ ತೊಂದರೆ, ಜನರಿಂದ ದೂರವಿರಲು ಇಚ್ಛಿಸುವುದು, ಕೀಳರಿಮೆ, ಕೋಪ, ವಾದ ಮಾಡುವ ಸ್ವಭಾವ, ಗಮನದ ಅಭಾವ ಹೀಗೆ ಹಲವು ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂದು ಈ ಅಧ್ಯಯನ ತಿಳಿಸುತ್ತದೆ.

ಎಲ್ಲಾ ಮಕ್ಕಳ ಮೇಲೆಯೂ ಬೆದರಿಕೆಯ ಪ್ರಭಾವ ಒಂದೇ ರೀತಿ ಇರುವುದಿಲ್ಲ. ಕೆಲವರು ಅದನ್ನು ಮರೆತು ಮುಂದೆ ಸಾಗಿದರೆ, ಇನ್ನು ಕೆಲವರು ಜೀವನವಿಡೀ ತಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮವಾಗುವಷ್ಟರ ಮಟ್ಟಿಗೆ ಅದರಿಂದ ಕೊರಗುತ್ತಾರೆ ಎಂದು ಈ ಅಧ್ಯಯನ ತಿಳಿಸುತ್ತದೆ.    

ನಿಮ್ಮ ಮಗು ಬೆದರಿಕೆಗೆ ಗುರಿಯಾಗಿದೆಯೇ?

ಬೆದರಿಕೆಗೆ ಗುರಿಯಾಗಿರುವ ಮಗುವಿನ ನಡವಳಿಕೆಯಲ್ಲಿ ಹಲವು ಬದಲಾವಣೆಗಳಾಗುತ್ತವೆ. ಮಗು ತೊಂದರೆಯಲ್ಲಿದೆ ಎಂಬ ಸೂಚನೆ ಇದು. ಆದ್ದರಿಂದ ಈ ಬದಲಾವಣೆಗಳನ್ನು ಪೋಷಕರು ಗುರುತಿಸಿದರೆ ಸುಲಭವಾಗಿ ಮಗುವಿನ ಸಮಸ್ಯೆಯನ್ನು ತಿಳಿಯಬಹುದು.

ನಿಮ್ಮ ಮಗು ಈ ಕೆಳಗಿನ ನಡವಳಿಕೆಯನ್ನು ತೋರಿಸುತ್ತಿದೆಯೇ?

• ಕಿರಿಕಿರಿಗೊಳ್ಳುವುದು, ಪದೇ ಪದೇ ಶಾಲೆಗೆ ಹೋಗಲು ನಿರಾಕರಿಸುವುದು. ಹೊಟ್ಟೆ ನೋವು, ತಲೆ ನೋವು ಅಥವಾ ಬೇರೆ ನೆಪಗಳನ್ನು ಹೇಳಿ ಶಾಲೆಯಿಂದ ತಪ್ಪಿಸಿಕೊಳ್ಳುವುದು.

• ಬಹಳ ಬೇಗ ಅಳುವುದು, ಹೆಚ್ಚು ಆತಂಕ ಪಡುವುದು.

• ಓದಿನಲ್ಲಿ ಹಿಂದುಳಿಯುವುದು.

• ಕೋಪಗೊಂಡು ರೇಗುವುದು.

• ಒರಟು ನಡವಳಿಕೆ.

• ಪೂರೈಸಲಾಗದ ಬೇಡಿಕೆಗಳನ್ನಿಡುವುದು.

• ಫೋನ್ ಅಥವಾ ಮೆಸೇಜ್ ಬಂದರೆ ಭಯ ಪಡುವುದು (ಸೈಬರ್ ಬುಲ್ಲಿಯಿಂಗ್ ಇದ್ದಾಗ).

• ಗುಟ್ಟಾಗಿ ಇಂಟರ್‍ನೆಟ್ ಬಳಸುವುದು (ಸೈಬರ್ ಬುಲ್ಲಿಯಿಂಗ್ ಇದ್ದಾಗ).

ನಿಮ್ಮ ಮಗು ಈ ರೀತಿಯ ನಡವಳಿಕೆ ತೋರಿದರೆ ಅವರೊಂದಿಗೆ ಮಾತನಾಡಿ ವಿಷಯ ತಿಳಿಯಿರಿ.

ಮನೆಯಲ್ಲಿ ಪೂರಕ ವಾತಾವರಣವಿಲ್ಲದಿದ್ದರೆ ಅವರ ನೋವನ್ನು ಅರ್ಥಮಾಡಿಕೊಳ್ಳುವವರು ಯಾರೂ ಇಲ್ಲ ಎಂಬ ಅಸಹಾಯಕ ಭಾವನೆ ಮಕ್ಕಳಲ್ಲಿ ಮೂಡಬಹುದು. ಅವರಿಗೆ ಮಾತನಾಡುವ ಇಚ್ಛೆ ಇದ್ದರೂ ತಾವೇ ಬೈಸಿಕೊಳ್ಳಬಹುದು ಎಂಬ ಭಯ ಅವರಿಗಿರುತ್ತದೆ. ನಿಮ್ಮ ಮಗು ಮನಬಿಚ್ಚಿ ಮಾತನಾಡಲು ಉತ್ತೇಜಿಸಿ, ಅವರನ್ನು ದೂಷಿಸದೇ ಅವರ ಮಾತನ್ನು ಕೇಳಿಸಿಕೊಳ್ಳಿ. ಏಕೆಂದರೆ ಬೆದರಿಕೆಗೆ ಒಳಪಟ್ಟಿರುವುದರಲ್ಲಿ ಅವರ ತಪ್ಪೇನಿಲ್ಲ.

ಇಂತಹ ಸಂದರ್ಭಗಳಲ್ಲಿ ಪೋಷಕರು ಏನು ಮಾಡಬೇಕು?

• ಮಗು ವಿಷಯ ಹಂಚಿಕೊಳ್ಳಲು ಒಪ್ಪಿದರೆ ಮೊದಲು ಮಗುವಿನ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಸೂಕ್ತ ಪ್ರಶ್ನೆಗಳನ್ನು ಕೇಳಿ ಸಂಪೂರ್ಣ ವಿಷಯ ತಿಳಿಯಿರಿ.

• ಮಗು ಈ ಸನ್ನಿವೇಶದಿಂದ ಕಷ್ಟ ಎದುರಿಸುತ್ತಿದೆ ಎಂಬುದನ್ನು ಒಪ್ಪಿಕೊಳ್ಳಿ.

• ಮಗು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲು ಬಯಸುತ್ತದೆ ಎಂದು ಕೇಳಿ.

• ‘ಪರಿಸ್ಥಿತಿಯನ್ನು ನಿರ್ಲಕ್ಷಿಸು’ ಅಥವಾ ‘ಹೋರಾಡು’ ಎಂದು ಸಲಹೆ ನೀಡಬೇಡಿ.

• ಮಗುವಿನಲ್ಲಿ ಆತ್ಮವಿಶ್ವಾಸ, ಆತ್ಮಗೌರವ ಮತ್ತು ದಿಟ್ಟತನ ಹೆಚ್ಚಾಗುವಂತೆ ಬೆಂಬಲ ನೀಡಿ.

• ಶಾಲೆಯ ಅಧಿಕಾರಿಗಳೊಂದಿಗೆ ಮಾತನಾಡಿ ಮಗುವಿನ ಸುರಕ್ಷತೆಯ ಬಗ್ಗೆ ನಿಮಗಿರುವ ಕಾಳಜಿಯನ್ನು ಹಂಚಿಕೊಳ್ಳಿ.

• ಮಕ್ಕಳನ್ನು ಸ್ವಯಂ ರಕ್ಷಣಾ ಕೌಶಲ್ಯ ತರಬೇತಿಗೆ (self defence classes) ಸೇರಿಸಿ.

ನಿಮ್ಮ ಮಗುವೇ ಇತರರನ್ನು ಬೆದರಿಸುತ್ತಿದ್ದರೆ?

ಯಾವಾಗಲೂ ಬೇರೆ ಮಕ್ಕಳಿಂದ ನಮ್ಮ ಮಗುವಿಗೆ ತೊಂದರೆಯಾಗುತ್ತಿದೆ ಎಂದೇ ನಾವು ತಿಳಿಯುತ್ತೇವೆ. ಆದರೆ ನಿಮ್ಮ ಮಗು ಕೂಡ ಬುಲ್ಲಿಯಾಗಿರಬಹುದು. ಸಾಮಾನ್ಯವಾಗಿ ಶಾಲೆಯಿಂದ ಅಥವಾ ಮಗುವಿನ ಪೋಷಕರಿಂದ ದೂರು ಬಂದಾಗ ಮಾತ್ರ ಮಕ್ಕಳ ಈ ನಡವಳಿಕೆಯ ಬಗ್ಗೆ ಪೋಷಕರಿಗೆ ತಿಳಿಯುತ್ತದೆ.

ಇತರರನ್ನು ಬೆದರಿಸುವ ಮಕ್ಕಳು ಈ ರೀತಿ ನಡವಳಿಕೆಯನ್ನು ತೋರುತ್ತಾರೆ:

• ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಬಹಳ ಬೇಗ ಬೇರೆಯವರನ್ನು ದೂಷಿಸುವುದು.

• ಹೊಂದಾಣಿಕೆ ಮತ್ತು ಕರುಣೆ ಇಲ್ಲದಿರುವುದು.

• ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರೆಯುವ ಸ್ವಭಾವ ಇಲ್ಲದಿರುವುದು.

• ಅವರ ನಡವಳಿಕೆಯನ್ನು ಉತ್ತೇಜಿಸುವ ಸ್ನೇಹಿತರ ಗುಂಪಿನಲ್ಲಿರುವುದು.

ತಮ್ಮ ಮಕ್ಕಳು ಬುಲ್ಲಿ ಎಂಬುದನ್ನು ಒಪ್ಪಿಕೊಳ್ಳಲು ಪೋಷಕರಿಗೆ ಕಷ್ಟವಾಗಬಹುದು. ಅವರು ಮಗುವನ್ನು ಶಿಕ್ಷಿಸುವುದೇ ಪರಿಹಾರ ಎಂದುಕೊಳ್ಳುತ್ತಾರೆ. ಆದರೆ ಇದು ತಮಾಷೆಗಾಗಿ ಮಾಡುವುದು ಎಂದು ಮಕ್ಕಳು ತಿಳಿದಿರುತ್ತಾರೆ. ಬೆದರಿಸುವುದರಿಂದ ಮತ್ತೊಬ್ಬರಿಗೆ ನೋವಾಗಬಹುದೆಂಬ ಅರಿವು ಮಕ್ಕಳಿಗೆ ಇರುವುದಿಲ್ಲ. ಹಾಗಾಗಿ ಶಿಕ್ಷೆಯಿಂದ ಮಕ್ಕಳು ನಿಮಗೆ ಇನ್ನಷ್ಟು ವಿರುದ್ಧವಾಗಿ ವರ್ತಿಸಬಹುದು.

ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಹೀಗೆ ಸಹಾಯ ಮಾಡಬಹುದು:

• ತಾಳ್ಮೆಯಿಂದ ಯಾವುದೇ ನಿರ್ಧಾರಕ್ಕೆ ಬರದೇ ಮಗುವಿನ ಮಾತನ್ನು ಆಲಿಸಿ.

• ಮಕ್ಕಳ ಈ ವರ್ತನೆಗೆ ಕಾರಣ ಏನಿರಬಹುದೆಂದು ತಿಳಿಯಿರಿ.

• ಶಿಸ್ತು ರೂಢಿಸಲು ಮಕ್ಕಳಿಗೆ ಬೈಯಬೇಡಿ ಅಥವಾ ಹೊಡೆಯಬೇಡಿ.

• ಮನೆಯಲ್ಲಿ ಈ ಹಿಂದೆ ಯಾವುದಾದರು ಅಹಿತಕರ ಘಟನೆ ನಡೆದಿತ್ತೆ ಎಂದು ಯೋಚಿಸಿ. ಯಾವಾಗಿನಿಂದ ಮತ್ತು ಏಕೆ  ಮಗುವಿನಲ್ಲಿ ಈ ರೀತಿಯ ಬದಲಾವಣೆ ಆಯಿತೆಂದು ಆಲೋಚಿಸಿ.

• ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ.

• ತಮಗೆ ಕೋಪ ಬಂದಾಗ ಯಾರಿಗೂ ನೋವುಂಟುಮಾಡದೆ ಹೇಗೆ ವರ್ತಿಸಬೇಕೆಂದು ಮಕ್ಕಳಿಗೆ ಹೇಳಿಕೊಡಿ.

• ಎಲ್ಲರ ಪ್ರೀತಿ ಮತ್ತು ಗಮನ ಗಳಿಸಲು ಸಕಾರಾತ್ಮಕ ಮಾರ್ಗಗಳನ್ನು ತಿಳಿಸಿ.

ಸೈಬರ್ ಬೆದರಿಕೆ

ಚಿಕ್ಕ ವಯಸ್ಸಿನಲ್ಲೇ ತಂತ್ರಜ್ಞಾನವನ್ನು ಬಳಸುವ ಮಕ್ಕಳು, ಬ್ಲಾಗ್, ಮೆಸೇಜ್, ಅಪ್ಲಿಕೇಶನ್, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಬೆದರಿಕೆಗೆ ಒಳಪಡುತ್ತಾರೆ. 2015ರಲ್ಲಿ ಇಂಟೆಲ್ ಸೆಕ್ಯೂರಿಟಿ ಡಿಜಿಟಲ್ ಸೇಫ್ಟಿ ಪ್ರೋಗ್ರಾಮ್ ಮತ್ತು ಮಕ್‍ಎಫೀ ಆಂಟಿ ವೈರಸ್ ಸಂಸ್ಥೆಗಳು ಭಾರತದಲ್ಲಿ ಮಾಡಿದ ಸರ್ವೇ ಪ್ರಕಾರ ಶೇ.46ರಷ್ಟು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಬ್ಬರನ್ನು ಈ ರೀತಿ ಬೆದರಿಸಿದ್ದರು:

• ಹಲವು ಜನರಿರುವ ಸಂಭಾಷಣೆಯ ಗುಂಪಿನಲ್ಲಿ (chat group) ಒಬ್ಬರನ್ನು ಅಪಹಾಸ್ಯ ಮಾಡಿದ್ದರು.

• ಹಿಯ್ಯಾಳಿಸುವಂತಹ ಚಿತ್ರ ಅಥವಾ ವೀಡಿಯೋದಲ್ಲಿ ಮತ್ತೊಬ್ಬರನ್ನು ಟ್ಯಾಗ್ ಮಾಡಿದ್ದರು.

• ವ್ಯಕ್ತಿಯೊಬ್ಬನನ್ನು ಹೆದರಿಸಿದ್ದರು.

• ವ್ಯಕ್ತಿಯ ರೂಪವನ್ನು ಆಡಿಕೊಂಡಿದ್ದರು.

ಮನೋವೈದ್ಯರ ಪ್ರಕಾರ ಬಹಳಷ್ಟು ಸಲ ಬೆದರಿಕೆ ಒಡ್ಡುವ ವ್ಯಕ್ತಿಯು ಪರಿಚಿತರೇ ಆಗಿರುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ಮಾತ್ರ ಅಪರಿಚಿತರಿಂದ ಬೆದರಿಕೆ ಬರುವುದು.

ಕುಟುಂಬ ಮತ್ತು ಶಾಲೆಯ ಆಡಳಿತ ವರ್ಗವು ಮಕ್ಕಳಿಂದ ಈ ವಿಷಯದ ಬಗ್ಗೆ ರೋಲ್‍ಪ್ಲೇ ಮಾಡಿಸಿದರೆ, ಮಗು ನೊಂದ ವ್ಯಕ್ತಿಯ ದೃಷ್ಟಿಕೋನದಿಂದ ಸನ್ನಿವೇಶವನ್ನು ತಿಳಿಯುತ್ತದೆ. ತಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸುವ ಹಿರಿಯರಲ್ಲಿ ಈ ಸ್ವಭಾವವಿದ್ದರೆ, ಅದನ್ನು ನೋಡಿ ಮಕ್ಕಳೂ ಕೂಡ ದಬ್ಬಾಳಿಕೆಯ ಸ್ವಭಾವ ರೂಢಿಸಿಕೊಳ್ಳಬಹುದು. ಹಾಗಾಗಿ ಮಕ್ಕಳ ಎದುರು ಕುಟುಂಬದವರು ಮತ್ತು ಶಿಕ್ಷಕರು ತಮ್ಮ ವರ್ತನೆಯ ಬಗ್ಗೆ ಎಚ್ಚರವಾಗಿರಬೇಕು. ವಿಶೇಷವಾಗಿ ಕೋಪ, ಅಪಹಾಸ್ಯ, ದೂಷಣೆ, ನಿಂದನೆಗಳನ್ನು ಮಗುವಿನ ಮುಂದೆ ಮಾಡದಿದ್ದರೇನೇ ಸೂಕ್ತ.  

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org