ಜನರಿಗೆ ಏನಾದರು ಹೆಸರಿಟ್ಟು ಕರೆಯುವುದು, ಪ್ರೀತಿಯಿಂದಲೇ ಆದರೂ ಅದು ಸರಿಯಲ್ಲ

ನಾನು 31 ವರ್ಷದ ಮಹಿಳೆ ಮತ್ತು ಈ ವಿಷಯ ನನ್ನ ಪಾಲಿಗೆ ಅತ್ಯಂತ ಸೂಕ್ಷ್ಮವಾದದ್ದು. ಇದು ನನ್ನ ಆತ್ಮಗೌರವವಕ್ಕೂ, ಆತ್ಮವಿಶ್ವಾಸಕ್ಕೂ ದೊಡ್ಡಮಟ್ಟದ ಹಾನಿ ಉಂಟುಮಾಡಿದೆ. ಆದ್ದರಿಂದ ನಾನು ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇನೆ.

ಜಗತ್ತಿನ ಎಲ್ಲ ಕಡೆ ಇದೊಂದು ಸಮಸ್ಯೆಯಿದೆ. ಜನರು ತಮ್ಮ ರೂಪದ ಕುರಿತಾಗಿ ಬೇಕೋ ಬೇಡವೋ ಇತರರ ಟೀಕೆಗಳನ್ನು ಕೇಳಬೇಕಾಗುತ್ತದೆ. ನನಗೆ ನೆನಪಿರುವಂತೆ ಮೊದಲ ಸಲ ನಾನು ಟೀಕೆಗಳನ್ನು ಕೇಳಿದ್ದು ನನ್ನ ಕೂದಲು, ಚರ್ಮದ ಬಣ್ಣ ಮತ್ತು ನನ್ನ ದೇಹದ ಗಾತ್ರದ ಕುರಿತಾಗಿ. ನನ್ನ ಜೊತೆಯಲ್ಲೇ ಇದ್ದವರ, ಕುಟುಂಬದ ಸದಸ್ಯರು, ನನ್ನ ಮೇಲೆ ಪ್ರೀತಿ ಉಕ್ಕಿದಾಗ ‘ಟೆಡ್ಡಿ’ ಎಂದು ಕರೆಯುತ್ತಿದ್ದರು. ಕೋಪಗೊಂಡಾಗ ಆನೆ ಮರಿ ಅಥವಾ ಹಿಪೋಪೊಟಮಸ್ ಎಂದು ಬೈಯುತ್ತಿದ್ದರು. ನನ್ನನ್ನು ಹೇಗೆ ಕರೆದರೂ ನನಗೆ ಇಷ್ಟವಾಗುತ್ತಿರಲಿಲ್ಲ. ಎರಡೂ ನನ್ನ ಮೇಲೆ ಪರಿಣಾಮವನ್ನು ಬೀರುತ್ತಿದ್ದವು. ನನ್ನ ಕಪ್ಪು ಮೈಬಣ್ಣದಿಂದಾಗಿ ಜನ ನನ್ನನ್ನು ಕಾಗೆ ಎಂದು ಕರೆಯುತ್ತಿದ್ದರು. ಈಶಾನ್ಯ ಭಾಗದಿಂದ ಬಂದ ನನ್ನ ಕೂದಲು ಗುಂಗುರಾಗಿತ್ತು. ನನ್ನ ಗೆಳತಿಯರು ನನ್ನನ್ನು ಸಾಯಿ ಬಾಬಾ ಎಂದು ಛೇಡಿಸುತ್ತಿದ್ದರು. ನಾನು ಈ ಎಲ್ಲವನ್ನೂ ನಿರ್ಲಕ್ಷ ಮಾಡತೊಡಗಿದೆ.

ಕ್ರಮೇಣ ನನ್ನನ್ನು ನಾನು ಅಡಗಿಸಿಕೊಳ್ಳಲು ಆರಂಭಿಸಿದೆ. ಎಲ್ಲೂ ಹೊರಗೆ ಹೋಗುತ್ತಲೇ ಇರಲಿಲ್ಲ. ಯಾರ ಕಣ್ಣಿಗೂ ಬೀಳದೆ ಹೋದರೆ ನನ್ನ ದೇಹದ ಕುರಿತು ಟೀಕೆಗಳನ್ನು ಕೇಳುವುದು ತಪ್ಪುತ್ತದೆ ಅನ್ನೋದು ನನ್ನ ನಂಬಿಕೆಯಾಗಿತ್ತು. ಜನರ ಟೀಕೆಗಳಿಂದ ನನಗೆ ನನ್ನ ದೇಹವು ಸುಂದರವಾಗಿಲ್ಲ ಎನ್ನಿಸತೊಡಗಿತು. ತೋಳು ಕಾಣಿಸುವ, ಮಂಡಿ ಮೇಲಿನ, ಮೊದಲಾದ ಬಣ್ಣಗಳ ಬಟ್ಟೆಗಳನ್ನು ತೊಡುವುದೇ ಬಿಟ್ಟುಬಿಟ್ಟೆ. ನನ್ನ ಬಣ್ಣ ಕಪ್ಪಾಗಿದ್ದುದರಿಂದ ಗಾಢ ಬಣ್ಣದ ಬಟ್ಟೆಗಳ ಬದಲು ತಿಳಿಯಾದವನ್ನೇ ಆಯ್ದುಕೊಳ್ಳತೊಡಗಿದೆ. ನಾನು ನೋಡಲು ಸುಂದರವಾಗಿಲ್ಲದೆ ಇರುವುದರಿಂದ, ಜೀವನದಲ್ಲಿ ಮುಂದೆ ಬರಲು ಕಠಿಣ ಪರಿಶ್ರಮ ಹಾಕಬೇಕು ಎಂದು ಮೇಲಿಂದ ಮೇಲೆ ಹೇಳಲಾಗುತ್ತಿತ್ತು. ನಾನು ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನೇ ಬಿಟ್ಟುಬಿಟ್ಟೆ. ದಪ್ಪವಾಗಿರುವುದು ಎಂದರೆ ಅನಾರೋಗ್ಯ ಹೊಂದಿರುವಷ್ಟೇ ಕೆಟ್ಟದ್ದು ಎಂದು ನಂಬತೊಡಗಿದೆ.

ಆದರೆ ಇದೇ ಮನಸ್ಥಿತಿಯಲ್ಲಿ ಬಹಳ ಕಾಲ ನನ್ನನ್ನು ನಾನು ಇರಲಾಗಲಿಲ್ಲ. ಕ್ರಮೇಣ ಬಾಡಿ ಇಮೇಜ್ ಅಥವಾ ದೇಹದ ಕುರಿತು ಮಾತಾಡತೊಡಗಿದೆ. ಇದರಿಂದ ನನಗೆ ದಪ್ಪವಾಗಿರುವುದು ಎಂದರೆ ಅನಾರೋಗ್ಯವಲ್ಲ ಎಂದು ಅರಿವಾಯಿತು. ನನಗೆ ನಾನೇ ಆತ್ಮವಿಶ್ವಾಸ ತಂದುಕೊಂಡೆ. ಮತ್ತು ಜನ ನನ್ನ ಬಗ್ಗೆ ಏನು ಹೇಳಿದರೂ ಅದಕ್ಕೆ ಗಮನ ಕೊಡದೆ ಉಪೇಕ್ಷೆ ಮಾಡತೊಡಗಿದೆ.

ನಾನೀಗ ಇತರರ ಮಾತಿಗೆ ತಲೆ ಕೊಡದೆ, ನನ್ನ ಬಯಕೆಯನ್ನೇ ಆಯ್ದುಕೊಳ್ಳಲು ಆರಂಭಿಸಿದ್ದೇನೆ. ನಾನು ಏನನ್ನು ತೊಟ್ಟುಕೊಳ್ಳುತ್ತೇನೆ ಅನ್ನುವುದು ನನ್ನದೇ ಆಯ್ಕೆಯಾಗಿರುತ್ತದೆ. ಯಾರು ಏನು ಹೇಳುತ್ತಾರೆ ಅನ್ನುವುದು ನನಗೀಗ ಮುಖ್ಯವಾಗುವುದಿಲ್ಲ.. ನಾನು ಇರುವಂತೆಯೇ ನನ್ನನ್ನು ಪ್ರೀತಿಸಿಕೊಳ್ಳಲು ನಿರ್ಧರಿಸಿದ್ದೇನೆ ಮತ್ತು ನನ್ನನ್ನು ನಾನು ಪ್ರೀತಿಸಿಕೊಳ್ಳುತ್ತಿದ್ದೇನೆ ಕೂಡಾ.

ವೈಟ್ ಸ್ವಾನ್ ಫೌಂಡೇಶನ್ ಜೊತೆ ಹೇಳಿಕೊಂಡಂತೆ. ಕೋರಿಕೆಯ ಮೇರೆಗೆ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.

ಇದು body image and mental health ಸರಣಿಯ ಲೇಖನ. ಇದರ ಸಂಪೂರ್ಣ ಸಂವಾದವನ್ನು ನೀವು  ಟ್ವಿಟರ್ ಹಾಗೂ ಫೇಸ್ ಬುಕ್’ನಲ್ಲಿ  #ReclaimOurselves ಫಾಲೋ ಮಾಡುವ ಮೂಲಕ ಓದಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org