ಶಿಕ್ಷಕರು ಆಪ್ತಸಮಾಲೋಚಕರಾಗಬಲ್ಲರೇ?

ನಿಮ್ಮ ಶಾಲಾ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡು ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕರನ್ನು ಗುರುತಿಸಿ. ಅವರ ವಿಶೇಷತೆಗೆ ಕಾರಣಗಳೇನು? ಕೆಲವರನ್ನು ನೀವು ಅವರು ಕಲಿಸುವ ಶೈಲಿಗಾಗಿ ಮೆಚ್ಚಿಕೊಂಡಿರಬಹುದು ಆದರೆ ಕೆಲವರನ್ನು ನೀವು ಅವರ ಸಪೋರ್ಟಿವ್ ನಡವಳಿಕೆ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಾನುಭೂತಿಯಿಂದ ಆಲಿಸುತ್ತಿದ್ದರೆಂಬ ಕಾರಣಕ್ಕೆ ನೆನಪಿಸಿಕೊಳ್ಳಬಹುದು. ಈ ಎರಡೂ ಗುಣಗಳನ್ನು ಹೊಂದಿರುವವರು ಹೆಚ್ಚಿನ ಬಾರಿ ಉತ್ತಮ ಶಿಕ್ಷಕರೆನಿಸಿಕೊಳ್ಳುತ್ತಾರೆ.

ವಿದ್ಯಾರ್ಥಿಗಳು ತಮ್ಮ ಬೆಳವಣಿಗೆಯ ಸಮಯದ ಹೆಚ್ಚಿನ ಅವಧಿಯನ್ನು ಶಾಲೆ ಮತ್ತು ಕಾಲೇಜಿನಲ್ಲಿಯೇ ಕಳೆಯುವುದರಿಂದ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ವಹಿಸುತ್ತಾರೆ.

ಶಾಲೆಯ ಆಪ್ತಸಮಾಲೋಚಕರಿಗೆ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ನಿಭಾಯಿಸಲು ತರಬೇತಿಯನ್ನು ನೀಡಲಾಗುತ್ತದೆ. ಉದಾಹರಣೆಗೆ, ಮುರಿದ ಸಂಬಂಧಗಳು, ಪಾಲಕರೊಂದಿಗಿನ ಹದಗೆಟ್ಟ ಸಂಬಂಧಗಳು, ಆತ್ಮಗೌರವ ಮತ್ತು ದೇಹದ ಆಕೃತಿಯ ಕುರಿತ ವಿಷಯಗಳು, ವ್ಯಸನ ಹಾಗೂ ಆತ್ಮಹತ್ಯೆಯ ಕುರಿತ ಯೋಚನೆಗಳು ಮತ್ತು ಉದ್ಯೋಗ ಮಾರ್ಗದರ್ಶನದ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.

ಅದೇ ರೀತಿ ಶಿಕ್ಷಕರು ನಿರಂತರವಾಗಿ ವಿದ್ಯಾರ್ಥಿಗಳ ಸಂಪರ್ಕದಲ್ಲಿರುವುದರಿಂದ ಅವರೂ ಕೂಡ ವಿದ್ಯಾರ್ಥಿಗಳೊಂದಿಗೆ ಸಂವಹನವನ್ನು ಆರಂಭಿಸಬಹುದು ಮತ್ತು ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಪ್ರೋತ್ಸಾಹಿಸಬಹುದು. ಶೈಕ್ಷಣಿಕ ವಲಯದಲ್ಲಿ ಆಪ್ತಸಮಾಲೋಚಕರ ಪಾತ್ರವು ಅತ್ಯಂತ ಮಹತ್ವದ್ದಾಗಿರುತ್ತದೆ ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಪ್ರಾಥಮಿಕ ಬೆಂಬಲದ ಮೂಲವಾಗಿರುತ್ತಾರೆ.

ಯಾರು ಈ ಪಾತ್ರವನ್ನು ನಿಭಾಯಿಸಬಹುದು?

ವಿದ್ಯಾರ್ಥಿಗಳಿಗೆ ಶಿಕ್ಷಕ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಸುಲಭವಾಗಿರುವುದಿಲ್ಲ. ಶಿಕ್ಷಕರು ಮುಕ್ತ ಮನಸ್ಸಿನವರಾಗಿದ್ದು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮನಸ್ಥಿತಿಯನ್ನು ಹೊಂದಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ. ವಿದ್ಯಾರ್ಥಿಯ ಮನಸ್ಸಿನಲ್ಲಿ ಶಿಕ್ಷಕರ ಬಗ್ಗೆ ನಂಬಿಕೆ ಬೆಳೆದಾಗ ಮಾತ್ರ ಆತ/ಆಕೆಯು ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವರು.

ಈ ಕೆಳಗಿನ ಗುಣಗಳು ವಿದ್ಯಾರ್ಥಿಯು ಶಿಕ್ಷರ ಜೊತೆ ಸಮಾಲೋಚಿಸಲು ಪ್ರೋತ್ಸಾಹ ನೀಡುತ್ತವೆ.

  • ವಸ್ತುನಿಷ್ಠ ನಿರ್ವಹಣೆ: ಶಿಕ್ಷಕರು ವಿದ್ಯಾರ್ಥಿಯನ್ನು ಶೈಕ್ಷಣಿಕ ಸಾಧನೆ ಅಥವಾ ವ್ಯಕ್ತಿತ್ವದ ಆಧಾರದ ಮೇಲೆ ವೈಯಕ್ತಿಕ ಪೂರ್ವಾಗ್ರಹವನ್ನು ಬೆಳೆಸಿಕೊಳ್ಳದೇ ವಸ್ತುನಿಷ್ಠವಾಗಿ ನೋಡಬೇಕು.

  • ದೀರ್ಘಕಾಲದ ಒಡನಾಟವಿರುವವರು: ಒಂದೇ ಸಂಸ್ಥೆಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಕರು ಆ ಸ್ಥಳ ಮತ್ತು ವಿದ್ಯಾರ್ಥಿಗಳನ್ನು ಚೆನ್ನಾಗಿ ಅರಿತಿರುತ್ತಾರೆ ಆದ್ದರಿಂದ ಆಪ್ತಸಮಾಲೋಚಕರಾಗಲು ಸೂಕ್ತ ವ್ಯಕ್ತಿಗಳಾಗಿರುತ್ತಾರೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸೂಕ್ತ ಎಂದು ಭಾವಿಸುವ ಶಿಕ್ಷಕರನ್ನು ಕೂಡ ಗುರುತಿಸಿ ಆಪ್ತಸಮಾಲೋಚನೆಗೆ ತರಬೇತಿ ನೀಡಬಹುದು.

  • ಕೇಳಿಸಿಕೊಳ್ಳುವ ಕೌಶಲ್ಯ: ವಿದ್ಯಾರ್ಥಿಯು ಏನನ್ನು ಹೇಳಲು ಬಯಸುತ್ತಾನೆ ಎಂಬ ಬಗ್ಗೆ ಶಿಕ್ಷಕರು ಪ್ರಾಮಾಣಿಕ ಗಮನವನ್ನು ನೀಡಬೇಕು. ವಿದ್ಯಾರ್ಥಿಯು ಏನನ್ನಾದರೂ ಹೇಳಲು ಬಯಸಿದಾಗ ಅವರು ಸ್ವನಿಯಂತ್ರಣ, ತಾಳ್ಮೆ ಮತ್ತು ತಲೆಯನ್ನು ಹಾಕುವ ಮೂಲಕ ಸಪೋರ್ಟಿವ್ ಬಾಡಿ ಲಾಂಗ್ವೆಜನ್ನು ಪ್ರದರ್ಶಿಸಬೇಕು.

  • ಹೆಚ್ಚಿನ ಭದ್ರತೆ: ತಾವು ತಿಳಿಸಿದ ವಿಷಯವನ್ನು ಯಾರಿಗೂ ತಿಳಿಸುವುದಿಲ್ಲ ಎಂದು ದೃಢವಾದಾಗ ಮಾತ್ರವೇ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಉದಾಹರಣೆಗೆ, ವಿದ್ಯಾರ್ಥಿಯು ತನ್ನ ಕೌಟುಂಬಿಕ ಸಮಸ್ಯೆಯ ಬಗ್ಗೆ ಕೇವಲ ತನ್ನ ವಿಶ್ವಾಸಪಾತ್ರ ವ್ಯಕ್ತಿಗಳ ಬಳಿ ಮಾತ್ರ ಹೇಳಿಕೊಳ್ಳುತ್ತಾನೆ.

  • ಪರಾನುಭೂತಿ ಮತ್ತು ಪರಿಶೋಧನೆ: ವಿದ್ಯಾರ್ಥಿಗಳ ದೃಷ್ಟಿಕೋನದಿಂದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಪರಾನುಭೂತಿ ಸಾಮರ್ಥ್ಯವಿರಬೇಕು. ಜೊತೆಗೆ ಅವರ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಅಗತ್ಯವಿರುವ ಹೆಚ್ಚಿನ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಪಡೆಯುವ ಕೌಶಲ್ಯವಿರಬೇಕು.

ವಿದ್ಯಾರ್ಥಿಗಳು ಶಿಕ್ಷಕರ ಸಹಾಯ ಬಯಸಿದಾಗ ಅವರು ಏನು ಮಾಡಬೇಕು?

  1. ಬಾಂಧವ್ಯ ವೃದ್ಧಿಸಿಕೊಳ್ಳಿ: ಇದು ಶಿಕ್ಷಕರು – ಆಪ್ತಸಮಾಲೋಚಕರು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ. ವಿದ್ಯಾರ್ಥಿಗಳು ಮುಕ್ತವಾಗಿ ಮಾತನಾಡಲು ಸಾಧ್ಯವಾಗುವಂತೆ ಅವರ ಜೊತೆ ಹಿತಕರವಾಗಿ ನಡೆದುಕೊಳ್ಳಿ. ವಿದ್ಯಾರ್ಥಿಗಳು ನೀವು ಭರವಸೆಗೆ ಅರ್ಹರೇ ಎಂದು ಪರೀಕ್ಷಿಸುತ್ತಾರೆ ಎಂಬುದನ್ನು ನೆನಪಿಡಿ. ಈ ಸಂದರ್ಭದಲ್ಲಿ ಸೂಕ್ತವಾದ ರೀತಿಯಲ್ಲಿ ಮೌಖಿಕ ಮತ್ತು ಅಮೌಖಿಕ ಸಂವಹನವನ್ನು ಬಳಸಿ.

  2. ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಮಾತನಾಡಲು ಬಿಡಿ: ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರುವಾಗ ಅವರ ಭಾವನೆಗಳು ಹರಿಯಲು ಬಿಡಿ. ಅವರ ಪ್ರತಿಯೊಂದು ಮಾತುಗಳನ್ನು ಕೇಳಿಸಿಕೊಳ್ಳಿ ಮತ್ತು ಅವರ ಯೋಚನೆಗಳಿಗೆ ಅಡ್ಡಿಪಡಿಸಬೇಡಿ. ಶಿಕ್ಷರಾದ ನೀವು ನಿಮ್ಮ ವಿದ್ಯಾರ್ಥಿಯ ಸಮಸ್ಯೆಯನ್ನು ಅರ್ಥಮಾಡಿಕೊಂಡಿರುವುದನ್ನು ಖಚಿತಪಡಿಸಲು ಅವರ ಮಾತುಗಳ ಭಾವಾರ್ಥವನ್ನು ಇನ್ನೊಮ್ಮೆ ಪುನರಾವರ್ತಿಸಬಹುದು. ಇದು ಅವರ ಯೋಚನೆಗಳಿಗೆ ಸ್ಪಷ್ಟತೆಯನ್ನು ನೀಡುತ್ತದೆ. “ ನಾನು ನಿನ್ನ ಸಮಸ್ಯೆಯನ್ನು ಈ ರೀತಿ ಅರ್ಥ ಮಾಡಿಕೊಂಡಿದ್ದೇನೆ ನನ್ನ ಪ್ರಕಾರ ನೀನು ಈ ಸಮಸ್ಯೆಯನ್ನು ಈ ರೀತಿಯಲ್ಲಿ ಬಗೆಹರಿಸಿಕೊಳ್ಳಬಹುದು ಇದಕ್ಕೆ ನಿನ್ನ ಅಭಿಪ್ರಾಯವೇನು?”, ನೀವು ಈ ವಿಧಾನದಲ್ಲಿ ಕೇಳಬಹುದು. ವಿದ್ಯಾರ್ಥಿಗೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡಿ. ಒಮ್ಮೆಲೆ ಸಿದ್ಧ ಪರಿಹಾರವನ್ನು ನೀಡಬೇಡಿ.

  3. ಪೂರ್ವತೀರ್ಮಾನಕ್ಕೆ ಬರಬೇಡಿ: ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿರಬೇಕು. ಉದಾಹರಣೆಗೆ, ಒಬ್ಬ ವಿದ್ಯಾರ್ಥಿಯು ತಾನು ದಿನವೊಂದಕ್ಕೆ 60 ಸಿಗರೇಟುಗಳನ್ನು ಸೇದುತ್ತೇನೆ ಎಂದು ಹೇಳಿದಾಗ ಶಿಕ್ಷಕರು, “ಅಯ್ಯೋ, ಅದು ತುಂಬ ಕೆಟ್ಟದ್ದು!” ಎಂದು ಹೇಳಬಾರದು. ಸ್ವನಿಯಂತ್ರಣವನ್ನು ಅನುಸರಿಸಬೇಕು.

  4. ಭಾವನೆಗಳಲ್ಲಿ ದೃಢತೆ: ಶಿಕ್ಷಕರಾದವರು ತಮ್ಮ ಯೋಚನೆಗಳು ಮತ್ತು ಭಾವನೆಗಳಲ್ಲಿ ದೃಢತೆಯನ್ನು ಹೊಂದಿರಬೇಕು. ತಮ್ಮ ಸಮಸ್ಯೆಯ ಪರಿಹಾರಕ್ಕೆಂದು ಅವರ ಬಳಿ ಬಂದ ವಿದ್ಯಾರ್ಥಿಗಳ ಮೇಲೆ ತಮ್ಮ ಮನಸ್ಥಿತಿ ಮತ್ತು ಭಾವನೆಗಳು ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಶಾಂತಚಿತ್ತದಿಂದ ವರ್ತಿಸಬೇಕು.

  5. ಗೌಪ್ಯತೆಯನ್ನು ಕಾಪಾಡಿ: ವಿದ್ಯಾರ್ಥಿಗಳು ಹಂಚಿಕೊಂಡ ಮಾಹಿತಿಗಳು ಗೌಪ್ಯವಾಗಿರುತ್ತವೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ. (ಒಂದುವೇಳೆ ವಿದ್ಯಾರ್ಥಿಯು ತಿಳಿಸಿದ ವಿಷಯವು ಅವರಿಗಾಗಲಿ ಇಲ್ಲವೇ ಉಳಿದವರಿಗಾಗಿ ಹಾನಿಕರವಾಗಿದ್ದಲ್ಲಿ ಅದನ್ನು ಶಾಲೆಯ ಆಡಳಿತ ಮಂಡಳಿಗೆ ತಿಳಿಸಬೇಕು.)

ಇದರ ಜೊತೆಗೆ ಶಾಲೆಯ ಆಡಳಿತ ಮಂಡಳಿಯು ಕೆಲವು ಶಿಕ್ಷಕರನ್ನು ಗುರುತಿಸಿ ಅವರಿಗೆ ಆಪ್ತಸಮಾಲೋಚನೆಯ ತರಬೇತಿಯನ್ನು ನೀಡಬಹುದು.

ಈ ಲೇಖನವನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಮುಖ್ಯ ಆಪ್ತಸಮಾಲೋಚಕರಾದ ಡಾ. ಉಮಾ ವಾರಿಯರ್ ಅವರು ನೀಡಿದ ಅಂಶಗಳ ಸಹಾಯದಿಂದ ಸಿದ್ಧಪಡಿಸಲಾಗಿದೆ.  

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org