ಜೀವನದ ಅಂತಿಮ ಕ್ಷಣದಲ್ಲಿರುವ ವ್ಯಕ್ತಿಗಳ ಆರೈಕೆ

ಜೀವನದ ಕೊನೆಯ ಕ್ಷಣದಲ್ಲಿರುವವರ ಆರೈಕೆ ಮಾಡುವುದೆಂದರೆ ಆ ವ್ಯಕ್ತಿಯ ಘನತೆಯನ್ನು ಗೌರವಿಸಿದಂತೆ. ಇದರಿಂದ ಅವರು ಜೀವನದ ಕೊನೆಯ ಕ್ಷಣವನ್ನು ನೆಮ್ಮದಿಯಿಂದ ಕಳೆಯಲು ಅನುವು ಮಾಡಿಕೊಟ್ಟಂತಾಗುತ್ತದೆ.

ಮೂರು ವರ್ಷಗಳಿಂದ ಕ್ಯಾನ್ಸರಿನಿಂದ ಬಳಲುತ್ತಿದ್ದ ತನ್ನ ತಂದೆಯ ಆರೈಕೆಯಲ್ಲಿ ತೊಡಗಿದ್ದ ಮಹೇಶನಿಗೆ ರೋಗವು ಕೊನೆಯ ಹಂತದಲ್ಲಿರುವುದೆಂದು ವೈದ್ಯರು ತಿಳಿಸಿದಾಗ ಬಹಳ ಆಘಾತವಾಯಿತು. ಹಲವು ವರ್ಷಗಳಿಂದ ಆರೈಕೆ ಮಾಡುತ್ತಿದ್ದರೂ ಸಹ ತನ್ನ ತಂದೆಯನ್ನು ಕಳೆದುಕೊಳ್ಳುವ ಯೋಚನೆ ಮಹೇಶನಲ್ಲಿ ದುಃಖ ಮತ್ತು ನೋವನ್ನುಂಟುಮಾಡಿತು. ಅವನಿಗೆ ಆ ಸಂದರ್ಭವನ್ನು ನಿಭಾಯಿಸುವುದು ಹೇಗೆಂದೇ ಆರ್ಥವಾಗಲಿಲ್ಲ. 

(ನೈಜಜೀವನದಲ್ಲಿ ಉಂಟಾಗುವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಗಲೆಂದು ಈ ಕಾಲ್ಪನಿಕ ದೃಷ್ಟಾಂತವನ್ನು ನೀಡಲಾಗಿದೆ.)

ಯಾವ ರೋಗಿಯನ್ನೇ ಆಗಲಿ ಆರೈಕೆ ಮಾಡುವುದು ಒಂದು ಕಷ್ಟದ ಮತ್ತು ಪ್ರಯಾಸದ ಕೆಲಸ. ಅದರಲ್ಲೂ ಮಾರಣಾಂತಿಕ ಕಾಯಿಲೆಗಳಿಂದ (ಕ್ಯಾನ್ಸರ್, ಏಡ್ಸ್, ಅಲ್ಜೈಮರ್, ಹಾಗೂ ವಯಸ್ಸಿಗೆ ಸಂಬಂಧಿಸಿದ ಖಾಯಿಲೆಗಳು ಮುಂತಾದವು) ಬಳಲುತ್ತಿರುವವರನ್ನು ನೋಡಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಕುಟುಂಬದವರಿಗೆ ರೋಗಿಯ ಪರಿಸ್ಥಿತಿಯ ಬಗ್ಗೆ ವೈದ್ಯರು ತಿಳಿಸಿದಾಗ ಅವರು ಭಾವನಾತ್ಮಕವಾಗಿ ಹಲವು ರೀತಿಯಲ್ಲಿ ತೊಳಲಾಡುತ್ತಾರೆ. ಪ್ರತಿ ವ್ಯಕ್ತಿಯೂ ಪರಿಸ್ಥಿತಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಅವರು ಮೊದಲು ವಾಸ್ತವವನ್ನು ನಂಬಲು ಸಿದ್ಧರಿರುವುದಿಲ್ಲ. ನಂತರ ಅವರು ಬೇರೆ ವಿಧದ ಚಿಕಿತ್ಸೆಯಿಂದ ಖಾಯಿಲೆಯನ್ನು ಗುಣಪಡಿಸಲು ಸಾಧ್ಯವೇ ಎಂದು ಹುಡುಕಾಡತೊಡಗುತ್ತಾರೆ. ಆದರೆ ಯಾವಾಗ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ತಿಳಿಯುತ್ತದೆಯೋ ಆಗ ಅವರು ನೋವಿನಿಂದ ಒಪ್ಪಿಕೊಳ್ಳುತ್ತಾರೆ.

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರನ್ನು ಆರೈಕೆಮಾಡುತ್ತಿರುವವರು ಔಷಧಿ ಮತ್ತು ಚಿಕಿತ್ಸೆಗಳ ಅನಿಶ್ಚಿತತೆಯ ಕುರಿತು ಚಿಂತಿತರಾಗುತ್ತಾರೆ. ವ್ಯಕ್ತಿಯು ಎಷ್ಟು ದಿನಗಳವರೆಗೆ ಉಳಿಯಬಹುದು ಮತ್ತು ಈ ವಿಷಯವನ್ನು ಆ ವ್ಯಕ್ತಿಗೆ ಹೇಗೆ ತಿಳಿಸಬೇಕು ಎಂಬ ಗೊಂದಲ. ವ್ಯಕ್ತಿಯ ಪರಿಸ್ಥಿತಿ ಹದಗೆಟ್ಟಂತೆ, ಆತ/ಆಕೆ ಆರೈಕೆದಾರರನ್ನು ಇನ್ನಷ್ಟು ಅವಲಂಬಿಸತೊಡಗಬಹುದು. ಇದರಿಂದ ತಮ್ಮ ದಿನನಿತ್ಯದ ಚಟುವಟಿಕೆಯ ಜೊತೆ ಹೆಚ್ಚಿನ ಕಾಳಜಿಯ ಹೊಣೆಯನ್ನೂ ನಿಭಾಯಿಸಬೇಕಾಗುವುದರಿಂದ, ಆರೈಕೆಯಲ್ಲಿ ತೊಡಗಿರುವ ವ್ಯಕ್ತಿಗಳಲ್ಲಿ ಒತ್ತಡವು ಹೆಚ್ಚಬಹುದು. ಇಂತಹ ಸಂದರ್ಭದಲ್ಲಿ ಆರೈಕೆದಾರರಿಗೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಬೆಂಬಲದ ಅವಶ್ಯಕತೆಯಿರುತ್ತದೆ.

ಆರೈಕೆದಾರರಾಗಿ ರೋಗಿಗೆ ಬೆಂಬಲ ಒದಗಿಸುವುದು: 
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಆರೈಕೆ ನಾವು ಊಹಿಸಿಕೊಂಡಷ್ಟು ಸುಲಭವಲ್ಲ. ಆದರೂ ಆರೈಕೆದಾರರು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಬೇಕು.

  • ಸ್ವಯಂನಿಯಂತ್ರಣ: ಪ್ರತಿಯೊಬ್ಬ ವ್ಯಕ್ತಿಯು ತಮಗೆ ಮಾರಣಾಂತಿಕ ಕಾಯಿಲೆಯಿರುವ ಬಗ್ಗೆತಿಳಿದಾಗ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಸಹಜವಾಗಿಯೇ ದುಃಖಿತರಾಗುತ್ತಾರೆ. ಪರಿಸ್ಥಿತಿಯನ್ನು ನಿಭಾಯಿಸುವ ಒಬ್ಬ ಸಮರ್ಥ ಆರೈಕೆದಾರರಾಗಿ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ ಮತ್ತು ರೋಗಿಗೆ ಭಾವನಾತ್ಮಕ ಬೆಂಬಲವನ್ನು ನೀಡಿ. ಮನೆಯ ಸದಸ್ಯರು ಕೂಡ ಆ ವ್ಯಕ್ತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದು ಒಳ್ಳೆಯದು.
  • ಮುಂಚಿತವಾಗಿ ಯೋಜಿಸಿ:, ಖಾಯಿಲೆಯಿರುವ ವ್ಯಕ್ತಿಯು ಸ್ವಯಂನಿರ್ಧಾರವನ್ನು ಕೈಗೊಳ್ಳಲು ಶಕ್ತನಾಗಿರುವಾಗಲೇ ಮನೆಯವರು ಚಿಕಿತ್ಸೆ ಮತ್ತು ಆರೈಕೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಿ ಎಂಬುದಾಗಿ ತಜ್ಞರು ಈ ವಿಷಯದಲ್ಲಿ ಸಲಹೆ ನೀಡುತ್ತಾರೆ. ಇದರಿಂದ ಕುಟುಂಬದವರಿಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಾಗುತ್ತದೆ. ಸರಿಯಾದ ಯೋಜನೆಯಿಲ್ಲದಿದ್ದರೆ ಆರೈಕೆದಾರರಿಗೆ ಕೊನೆಯ ಹಂತದಲ್ಲಿ ಸಂದರ್ಭವನ್ನು ನಿಭಾಯಿಸುವುದು ಕಷ್ಟವಾಗಬಹುದು.
  • ಆದಷ್ಟೂ ಹೆಚ್ಚಾಗಿ ರೋಗಿಯೊಂದಿಗೆ ಮಾತನಾಡುತ್ತಿರಿ: ಕುಟುಂಬದ ಮತ್ತು ರೋಗಿಯ ಜೀವನಕ್ಕೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ರೋಗಿಯೊಂದಿಗೆ ಮಾತನಾಡುವುದು ಅತ್ಯಂತ ಮುಖ್ಯ. ರೋಗಿಯನ್ನು ಕೌಟುಂಬಿಕ ಮಾತುಕತೆ ಮತ್ತು ವಿಚಾರ ವಿನಿಮಯದಲ್ಲಿ ಸೇರಿಸಿಕೊಳ್ಳಿ. ವ್ಯಕ್ತಿಗೆ ಅವರ ಯೋಚನೆ ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ತಿಳಿಸಿ ಅವರ ಯಾವುದಾದರೂ ಬಯಕೆಯು ಈಡೇರಬೇಕಿದೆಯೇ ಎಂದು ಕೇಳಿ ಆ ಕುರಿತು ಚರ್ಚಿಸಿ. ಆದರೆ ವ್ಯಕ್ತಿಯು ಗಂಭೀರವಾದ ಸ್ಮರಣ ಶಕ್ತಿಯ ಕೊರತೆಯಿಂದ ಬಳಲುತ್ತಿದ್ದರೆ ನೀವು ಈ ರೀತಿಯಾಗಿ ಮಾತನಾಡಲು ಅಸಾಧ್ಯವಾಗಬಹುದು.
  • ಮನೆಯ ಚಟುವಟಿಕೆಗಳು ಎಂದಿನಂತೆಯೇ ಸ್ವಾಭಾವಿಕವಾಗಿ ಇರಲಿ: ಮನೆಯ ದೈನಂದಿನ ದಿನಚರಿಗಳು ಸಾಮಾನ್ಯವಾಗಿರುವಂತೆ ನೋಡಿಕೊಳ್ಳಿ. ಇದರಿಂದ ವ್ಯಕ್ತಿಯ ದಿನಚರಿಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾದ್ಯವಾಗುತ್ತದೆ ಮತ್ತು ಅವರನ್ನು ಕ್ರಿಯಾಶೀಲವಾಗಿರಿಸುತ್ತದೆ. ಅವರನ್ನು ಸಾಮಾಜಿಕ ಸಮಾರಂಭಗಳಿಗೆ ಕರೆದುಕೊಂಡು ಹೋಗಿ. ಅವರೊಂದಿಗಿರುವ ಕ್ಷಣಗಳನ್ನು ಆನಂದದಿಂದ ಕಳೆಯಿರಿ. ಮನೆಯಲ್ಲಿ ಸಹಜವಾದ ವಾತಾವರಣವಿರುವಂತೆ ಸಾಧ್ಯವಾದಷ್ಟು ನೋಡಿಕೊಳ್ಳಿ. ಇದರಿಂದ ವ್ಯಕ್ತಿಯ ಗೌರವ ಮತ್ತು ಪ್ರಾಮುಖ್ಯತೆಯ ಭಾವ ಹೆಚ್ಚುತ್ತದೆ.
  • ಕಾನೂನು ಮತ್ತು ಹಣಕಾಸಿನ ವಿಚಾರಗಳನ್ನು ನಿಭಾಯಿಸಿ: ವ್ಯಕ್ತಿಯ ಪರಿಸ್ಥಿತಿಯು ಸ್ಥಿರವಾಗಿರುವಾಗಲೇ ಕಾನೂನು ಮತ್ತು ಹಣಕಾಸಿನ ವಿಚಾರಗಳನ್ನು (ಮರಣಪತ್ರ ಬರೆಯುವುದು, ಆಸ್ತಿ, ಹಣ,ಇತ್ಯಾದಿ) ನಿಭಾಯಿಸಲು ತಿಳಿಸಿ ಮತ್ತು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸೂಚಿಸಿ. ಇದರಿಂದ ಆವ್ಯಕ್ತಿಗೂ, ಎಲ್ಲಾ ವಿಷಯಗಳು ತಾವು ಬಯಸಿದಂತೆ ನಡೆದವು ಎಂಬ ತೃಪ್ತಿಯಿರುತ್ತದೆ ಮತ್ತು ನಿಮಗೂ ಸಹ ನಂತರದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ.
  • ಬೆಂಬಲ ಪಡೆಯಿರಿ: ವ್ಯಕ್ತಿಯ ಕಾಯಿಲೆ ಹೆಚ್ಚಾದಂತೆ ಅವರು ತಮ್ಮ ದೈನಂದಿನ ಕಾರ್ಯಗಳಿಗೂ (ಸ್ನಾನ, ಬಟ್ಟೆ ಧರಿಸುವುದು, ಆಹಾರ ಸೇವನೆ, ಶೌಚಾಲಯದ ಬಳಕೆ ಮತ್ತು ಒಪ್ಪವಾಗಿ ತಯಾರಾಗುವುದು) ನಿಮ್ಮ ಮೇಲೆ ಅತಿಯಾಗಿ ಅವಲಂಬಿತರಾಗಬಹುದು. ನೀವು ಈ ಬದಲಾವಣೆಗೆ ಸಿದ್ಧರಾಗಿರಬೇಕಾಗುತ್ತದೆ. ನಿಮಗೆ ಒಬ್ಬಂಟಿಯಾಗಿ ಇದನ್ನೆಲ್ಲಾ ನಿಭಾಯಿಸಲು ಕಷ್ಟವೆನಿಸಿದರೆ ಮನೆಯ ಸದಸ್ಯರ ಸಹಾಯವನ್ನು ಪಡೆದುಕೊಳ್ಳಿ ಇಲ್ಲವೇ ಒಬ್ಬ ಪೂರ್ಣಾವಧಿಯ ನರ್ಸ್ ಅಥವಾ ಆರೈಕೆದಾರರನ್ನು ನೇಮಿಸಿಕೊಳ್ಳಿ.
  • ಆಧ್ಯಾತ್ಮಿಕ ವಿಷಯಗಳಿಗೆ ಬೆಂಬಲ ನೀಡಿ: ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ನಂಬಿಕೆ ಮತ್ತು ಶ್ರದ್ಧೆಯಿರುತ್ತದೆ. ಕೆಲವರಿಗೆ ಧಾರ್ಮಿಕತೆಯು ಅತ್ಯಂತ ಮಹತ್ವದ ಸಂಗತಿಯಾಗಿರುತ್ತದೆ; ಇದು ಅವರ ಜೀವನ ಮತ್ತು ಮರಣ ಎರಡಕ್ಕೂ ಅರ್ಥವನ್ನು ನೀಡುತ್ತಿರಬಹುದು. ಆದ್ದರಿಂದ ಅವರವರ ಅವಶ್ಯಕತೆಗೆ ಅನುಗುಣವಾಗಿ ನೀವು ಅವರಿಗೆ ಸಹಾಯ ಮಾಡಬಹುದು. ಉದಾಹರಣೆಗೆ,ಅವರು ಪೂಜಾರಿ ಅಥವಾ ಕ್ಲರ್ಜಿಗಳಿಂದ ಪ್ರಾರ್ಥಿಸಲು ಬಯಸಿದರೆ ಅಥವಾ ಧಾರ್ಮಿಕ ಶ್ಲೋಕ, ಸಂಗೀತ ಮತ್ತು ಪವಿತ್ರ ಗ್ರಂಥಗಳನ್ನು ಓದಲು ಬಯಸಿದರೆ ಅದಕ್ಕೆ ಅನುವುಮಾಡಿ ಕೊಡಿ.
  • ಉಪಶಾಮಕ ಆರೈಕೆಯನ್ನು ಒದಗಿಸಿ: ತರಬೇತಿ ಪಡೆದ ವೃತ್ತಿಪರತಜ್ಞರು ರೊಗನಿಯಂತ್ರಕ ಚಿಕಿತ್ಸೆಯ ಜೊತೆಗೆ ಈ ವಿಶೇಷ ವೈದ್ಯಕೀಯ ಆರೈಕೆಯನ್ನು ನೀಡುತ್ತಾರೆ. ಈ ಚಿಕಿತ್ಸೆಯು ನೋವು ಮತ್ತು ಯಾತನೆಯ ಲಕ್ಷಣಗಳನ್ನು ಕಡಿಮೆಮಾಡುತ್ತದೆ ಮತ್ತು ರೋಗಿ ಹಾಗೂ ಮನೆಯವರ ಒತ್ತಡವನ್ನು ಕಡಿಮೆಮಾಡಲು ಸಹಕರಿಸುತ್ತದೆ. ರೋಗಿಯ ಆರೈಕೆಯಲ್ಲಿ ಮನೋಸಾಮಾಜಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಸಂಯೋಜಿಸಿ ಉಪಶಾಮಕ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿದೆ. ರೋಗಿ ಮತ್ತು ಮನೆಯವರ ಜೀವನಮಟ್ಟ ಸುಧಾರಣೆಯು ಈ ಚಿಕಿತ್ಸೆಯ ಗುರಿ.

ಮಾರಣಾಂತಿಕವಾದ ವೈದ್ಯಕೀಯ ಸ್ಥಿತಿಗಳು ಅಥವಾ ಕಾಯಿಲೆಗಳು: 

ಕೆಲವು ಮಾರಣಾಂತಿಕ ಸ್ಥಿತಿಗಳು ಈ ಕೆಳಗೆ ಹೇಳಿದಂತೆ ಇರುತ್ತವೆ.

  • ಗುಣಪಡಿಸಲು ಸಾಧ್ಯವಾಗದ ಗ್ರಹಿಕೆಗೆ ಸಂಬಂಧಿಸಿದ ಮತ್ತು ಕೆಲವು ರೀತಿಯ ಕಾರ್ಯಕ್ಷಮತೆಯ ವೈಫಲ್ಯವನ್ನುಂಟುಮಾಡುವ (ಡೈಮೆನ್ಶಿಯಾ, ಅಲ್ಜೈಮರ್ಸ್) ಮುಂತಾದ ನರವೈದ್ಯಕೀಯಕ್ಕೆ ಸಂಬಂಧಿಸಿದ ತೀವ್ರಸ್ವರೂಪದ ಸಮಸ್ಯೆಗಳು.
  • ಮುಪ್ಪು ಮತ್ತು ನಿಧಾನವಾಗಿ ಅಂಗಾಂಗಗಳ ವೈಫಲ್ಯ ಮತ್ತು ದೌರ್ಬಲ್ಯವನ್ನು ಉಂಟುಮಾಡುವ ಕಾಯಿಲೆಗಳು.
  • ಚಿಕಿತ್ಸೆ ವಿಫಲಗೊಂಡು ಅಥವಾ ರೋಗಿ ಚಿಕಿತ್ಸೆಯನ್ನು ನಿರಾಕರಿಸುವುದರಿಂದ ವೃದ್ಧಿಯಾಗುತ್ತಿರುವ ಕ್ಯಾನ್ಸರ್.
  • ಶಸ್ತ್ರಚಿಕಿತ್ಸೆಯ ಆನಂತರದ ಗುಣಪಡಿಸಲಾಗದ ಸಂಕೀರ್ಣ ಸಮಸ್ಯೆಗಳು.
  • ಔಷಧ ಹಾಗೂ ಶಸ್ತ್ರಕ್ರಿಯೆಯ ಮೂಲಕ ಚಿಕಿತ್ಸೆ ನೀಡಿದ ಕೊನೆಯ ಹಂತದ ಶ್ವಾಸಕೋಶ, ಹೃದಯ, ಮೂತ್ರಪಿಂಡ ಅಥವಾ ಯಕೃತ್ತಿನ ಕಾಯಿಲೆಗಳು.
  • ಹಲವು ಸಮಯಗಳ ಚಿಕಿತ್ಸೆಗೂ ಸ್ಪಂದಿಸದ ಮತ್ತು ಅಂಗಾಂಗ ವೈಫಲ್ಯವನ್ನುಂಟುಮಾಡುವ ಮಾರಣಾಂತಿಕ ಕಾಯಿಲೆಗಳು (ಪಾರ್ಶ್ವವಾಯು, ಲಕ್ವ ಮುಂತಾದವು).
  • ಮೆದುಳಿಗೆ ಉಂಟಾಗುವ ಆಘಾತಕಾರಿ ಪೆಟ್ಟು ಅಥವಾ ಆಂತರಿಕ ರಕ್ತಸ್ರಾವದಿಂದಾಗಿ ಉಂಟಾದ ಕೋಮಾ (ಬ್ರೇನ್ ಡೆತ್ ಹೊರತುಪಡಿಸಿ).
  • ಬದುಕುಳಿಯುವ ಸಾಧ್ಯತೆಯು ಅನಿಶ್ಚಿತವಾಗಿರುವ ಇನ್ನಿತರ ಯಾವುದೇ ರೀತಿಯ ವೈದ್ಯಕೀಯ ಪರಿಸ್ಥಿತಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org