ಮಕ್ಕಳ ಲೈಂಗಿಕ ಕಿರುಕುಳ : ಮಿಥ್ಯ ಮತ್ತು ಸತ್ಯ

ಮಿಥ್ಯ: ಹೆಣ್ಣು ಮಕ್ಕಳೊಂದಿಗೆ ಮಾತ್ರ ಲೈಂಗಿಕ ಕಿರುಕುಳ ನಡೆಯುತ್ತದೆ.

ಸತ್ಯ: ಮಗು ಗಂಡಾಗಲಿ ಅಥವಾ ಹೆಣ್ಣಾಗಲಿ, ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. 2007ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ನೆಡೆಸಿದ ‘ಭಾರತದಲ್ಲಿ ಮಕ್ಕಳ ಲೈಂಗಿಕ ಕಿರುಕುಳ ’ ಕುರಿತ ಅಧ್ಯಯನದ ಪ್ರಕಾರ ಹಲವಾರು ಪ್ರಕರಣಗಳಲ್ಲಿ ಶೇಕಡ 52.94 ರಷ್ಟು ಗಂಡು ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ದುರಂತವೆಂದರೆ ಗಂಡುಮಕ್ಕಳ ಮೇಲೆ ಜರುಗುವ ಲೈಂಗಿಕ ಕಿರುಕುಳವನ್ನು ಲೈಂಗಿಕ ಚಟುವಟಿಕೆಯ ಪ್ರಾರಂಭ ಎಂಬಂತೆ ತಪ್ಪಾಗಿ ತೋರಿಸಲಾಗುತ್ತದೆ ಹಾಗೂ ಮಗುವಿನ ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ ಸುರಕ್ಷತೆಯ ಉಲ್ಲಂಘನೆಯನ್ನು ಕಡೆಗಣಿಸಲಾಗುತ್ತದೆ.

ಮಿಥ್ಯ: ನನ್ನ ಮಗುವಿನ ಮೇಲೆ ಕಿರುಕುಳ ನಡೆಯುವುದಿಲ್ಲ. ಮಗುವನ್ನು ಅಪರಿಚತರ ಬಳಿ ಬಿಡುವಾಗ ಎಚ್ಚರಿಕೆಯಿಂದ ಇರುತ್ತೇನೆ.

ಸತ್ಯ: ಹಲವಾರು ಸಂದರ್ಭಗಳಲ್ಲಿ ಮಗು ಮತ್ತು ಪೋಷಕರಿಗೆ ಪರಿಚಯವಿರುವ ನಂಬಿಕಸ್ಥ ವ್ಯಕ್ತಿಯಿಂದಲೇ ಕಿರುಕುಳ ಆಗಿರುತ್ತದೆ. 2007 ರ  ಅಧ್ಯಯನದಲ್ಲಿ ಬೆಳಕಿಗೆ ಬಂದ ಪ್ರಮುಖ ಅಂಶವೇನೆಂದರೆ ಶೇಕಡ 50 ರಷ್ಟು ಸೋದರ ಸಂಬಂಧಿಗಳು, ಬಂಧುಗಳು, ಸ್ನೇಹಿತರು ಮತ್ತು ಸಹಪಾಠಿಗಳೇ ಕಿರುಕುಳ ನೀಡಿರುವವರಾಗಿದ್ದಾರೆ.   

ಮಿಥ್ಯ: ಕಡಿಮೆ ಆದಾಯವಿರುವ ಕುಟುಂಬಗಳಲ್ಲಿ ಮಾತ್ರ ಈ ರೀತಿ ಆಗುತ್ತದೆ. ನನಗೆ ಪರಿಚಯಸ್ಥರಲ್ಲಿ ಯಾರೂ ಕಿರುಕುಳಕ್ಕೆ ಸಿಲುಕಿಲ್ಲ. ಭಾರತದಲ್ಲಿ ಇಂತಹ ಘಟನೆ ನೆಡೆಯುವುದಿಲ್ಲ.

ಸತ್ಯ: ಲೈಂಗಿಕ ಕಿರುಕುಳ ಎಂಬುದು ಲಿಂಗ, ದೇಶ, ಸಾಮಾಜಿಕ ಸ್ಥಾನಮಾನ ಅಥವಾ ಆರ್ಥಿಕ ಸ್ಥಿತಿಗೂ ಮೀರಿ ಜರುಗುವ ಸಮಸ್ಯೆಯಾಗಿದೆ.

ಮಿಥ್ಯ: ಮಕ್ಕಳು ಇನ್ನೂ ಚಿಕ್ಕವರು. ಬೆಳೆದು ದೊಡ್ಡವರಾದ ಮೇಲೆ ಎಲ್ಲವನ್ನೂ ಮರೆತುಬಿಡುತ್ತಾರೆ.

ಸತ್ಯ: ಲೈಂಗಿಕ ಕಿರುಕುಳದ ಪರಿಣಾಮ ಮಗುವಿನ ಮನಸ್ಸಿನ ಮೇಲೆ ಧೀರ್ಘಕಾಲದವರೆಗೂ ಇರುತ್ತದೆ. ಕಿರುಕುಳದ ಪರಿಣಾಮವಾಗಿ ಮಗುವಿನಲ್ಲಿ ಕೆಲವು ತಕ್ಷಣದ ಪರಿಣಾಮ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಹಿಂಜರಿಕೆ/ ಕುಸಿಯುವುದು, ಭಯ ಅಥವಾ ಕೆಲವು ಸನ್ನಿವೇಶಗಳಲ್ಲಿ ಆಕ್ರೋಶ, ಆಕ್ರಮಣಕಾರಿ ವರ್ತನೆ. ಮಗುವಿಗೆ ಆತಂಕ, ಖಿನ್ನತೆ, PTSD, ಹೊಂದಾಣಿಕೆ ಸಮಸ್ಯೆ ಅಥವಾ ಡಿಸ್ ಅಸೋಸಿಯೇಟಿವೆ ಡಿಸಾರ್ಡರ್, ನೆನಪಿನ ಶಕ್ತಿಯಲ್ಲಿ ಕುಸಿತ, ಯೋಚನಾ ಶಕ್ತಿಯಲ್ಲಿ ಸಮಸ್ಯೆ ಇತ್ಯಾದಿ ಆಗುವ ಸಂಭವ ಹೆಚ್ಚಿರುತ್ತದೆ.

ಇನ್ನಿತರ ಧೀರ್ಘಕಾಲದ ಪರಿಣಾಮಗಳೆಂದರೆ,  ಮಗು ತನ್ನ ಬಗ್ಗೆ  ನಕಾರಾತ್ಮಕ ಆಲೋಚನೆಗಳನ್ನು ಬೆಳಸಿಕೊಳ್ಳಬಹುದು, ಯಾವುದೇ ವ್ಯಕ್ತಿಯನ್ನು ಅನುಮಾನಿಸಬಹುದು ಅಥವಾ ನಂಬುವುದಿಲ್ಲ. ಇಡೀ ಜೀವನ ಸಂಬಂಧಗಳ ಬಗ್ಗೆ ಒಳ್ಳೆ ಭಾವನೆಯಿರುವುದಿಲ್ಲ. 

ಮಿಥ್ಯ: ಲೈಂಗಿಕ ಕಿರುಕುಳದ ಬಗ್ಗೆ ದೂರು / ವರದಿ ನೀಡಿದರೆ ಮಗುವಿನ ಭವಿಷ್ಯಕ್ಕೆ ತೊಂದರೆಯಾಗುತ್ತದೆ.

ಸತ್ಯ: ಭಾರತ ಸರ್ಕಾರದ POCSO ಆಕ್ಟ್ ( ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ) ಪ್ರಕಾರ ಮಕ್ಕಳ ಲೈಂಗಿಕ ಕಿರುಕುಳವನ್ನು ದಾಖಲು ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಕಿರುಕುಳಕ್ಕೊಳಗಾದ ಮಗುವಿನ ಪೋಷಕರು ದೋಷಿಯ ವಿರುದ್ಧ ಮೊಕದ್ದಮೆ ಹೂಡಲು ತಯಾರಿದ್ದರೆ, ಈ ಕಾಯ್ದೆಯಡಿಯಲ್ಲಿ ಮಗುವಿಗೆ ಅಗತ್ಯವಿರುವ ಎಲ್ಲಾ ರೀತಿಯ ರಕ್ಷಣೆಯನ್ನು ನೀಡಲಾಗುತ್ತದೆ. ಉದಾಹರಣೆಗೆ ದೂರು ದಾಖಲಿಸುವಾಗ ಅಥವಾ ದಾಖಲಿಸಿದ ನಂತರ, ತನ್ನ ನಂಬಿಕಸ್ಥ ಹಿರಿಯರ ಜೊತೆ ಹೇಳಿಕೆ ನೀಡಲು ಬಂದ ಮಗುವಿನ ಗುರುತನ್ನು ಗೌಪ್ಯವಾಗಿಡಬೇಕು. ನ್ಯಾಯಾಲಯದಲ್ಲಿ  ಮಗುವಿನ ಸಹಾಯಕ್ಕೆ ತಜ್ಞರು ಇರಬೇಕು (ಆಪ್ತ ಸಮಾಲೋಚಕರು, ವಿಶೇ‍ಷ ಶಿಕ್ಷಕರು, ಅನುವಾದಕರು , ಇತ್ಯಾದಿ).

ಒಂದು ವೇಳೆ ಮಗುವಿನ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗದೇ ಇದ್ದರೆ, ಅಪರಾಧಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲದೇ, ಇನ್ನೂ ಹಲವಾರು ಮಕ್ಕಳು ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

ಮಿಥ್ಯ: ಗಂಡಸರು ಮಾತ್ರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ.  

ಸತ್ಯ: ಸಾಮಾನ್ಯವಾಗಿ ಕಿರುಕುಳ ನೀಡುವವರಲ್ಲಿ ಗಂಡಸರೇ ಹೆಚ್ಚು. ಆದರೂ, ಕೆಲವೊಂದು ಪ್ರಕರಣಗಳಲ್ಲಿ 4% ಮಹಿಳೆಯರಿಂದ ಮಕ್ಕಳ ಲೈಂಗಿಕ ಕಿರುಕುಳ ಅಪರಾಧ  ದಾಖಲಾಗಿವೆ. ಮಹಿಳೆಯರ ಲೈಂಗಿಕ ಅಪರಾಧಗಳು ಸಾಮಾನ್ಯವಾಗಿ ದಾಖಲಾಗುವುದಿಲ್ಲ ಮತ್ತು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.  

ಮಿಥ್ಯ: ಚಿಕ್ಕ ಮಕ್ಕಳು ಮಾತ್ರ ಕಿರುಕುಳಕ್ಕೆ ಒಳಗಾಗುತ್ತಾರೆ.

ಸತ್ಯ: ಬೆಳೆದ ಮಕ್ಕಳ ಮೇಲೂ ಲೈಂಗಿಕ ಕಿರುಕುಳ ಜರುಗುವ ಸಾಧ್ಯತೆ ಇರುತ್ತದೆ.  2007 ರ ಅಧ್ಯಯನದ ಪ್ರಕಾರ, ವಾಸ್ತವವಾಗಿ ಹರೆಯ ಪೂರ್ವ ಮತ್ತು ತರುಣಾವಸ್ಥೆಯ ಮಕ್ಕಳು ಹೆಚ್ಚು ಅಪಾಯದಲ್ಲಿದ್ದಾರೆ. ಲೈಂಗಿಕ ಕಿರುಕುಳದ ದೂರು ಪ್ರಕರಣಗಳಲ್ಲಿ 73% ಮಕ್ಕಳು 11 ರಿಂದ 18 ವರ್ಷದವರಾಗಿದ್ದಾರೆ.

ಮಿಥ್ಯ: ಯಶಸ್ವಿಯಾದ ಮತ್ತು ಸೌಮ್ಯವಾದ ವ್ಯಕ್ತಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲು ಸಾಧ್ಯವೇ ಇಲ್ಲ. ಮಗು ಸುಳ್ಳು ಹೇಳುತ್ತಿರಬಹುದು.

ಸತ್ಯ: ಅಂತರಾಷ್ಟ್ರೀಯಮಟ್ಟದಲ್ಲಿ ಹೆಸರುವಾಸಿಯಾದ  ಡಾ. ಆನ್ನಾ.ಸಿ.ಸಾಲ್ಟರ್, ತಮ್ಮ ಪುಸ್ತಕ ‘ಪ್ರಿಡೇಟರ್’ ನಲ್ಲಿ ಹೇಳಿರುವಂತೆ ಲೈಂಗಿಕ ಅಪರಾಧಿಗಳೆಂದರೆ ಶಿಶುಕಾಮಿಗಳು, ಅತ್ಯಾಚಾರಿಗಳು ಮತ್ತಿತರ ಲೈಂಗಿಕ ಅಪರಾಧಿಗಳು. ಅವರೂ ಎಲ್ಲರಂತೆ ಸಾಮಾನ್ಯವಾಗಿ ಇರುತ್ತಾರೆ.  ನಾವು ಊಹಿಸಿದಂತೆ ವಿಕೃತವಾಗಿ ಇರುವುದಿಲ್ಲ. ಆಕರ್ಷಕವಾಗಿದ್ದು, ಎಲ್ಲರೂ ಮೆಚ್ಚಿರುವ ವ್ಯಕ್ತಿಯಾಗಿರುತ್ತಾರೆ. ಕೆಲವರು ತಮ್ಮ ವರ್ತನೆಯಲ್ಲಿ, ಸಾರ್ವಜನಿಕ ಜವಾಬ್ದಾರಿಯಿರುವ ಮತ್ತು ಕಾಳಜಿ ವಹಿಸುವ ವ್ಯಕ್ತಿಯಂತೆ ಕಾಣಿಸುತ್ತಾರೆ. ತಮ್ಮ ಈ  ನಡವಳಿಕೆಯಿಂದ ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ.

ಕಿರುಕುಳಕ್ಕೆ ಮುನ್ನ, ಅಪರಾಧಿಗಳು ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯುತ್ತಾರೆ ಮತ್ತು ಅವರೊಂದಿಗೆ ಬಾಂಧವ್ಯ ಬೆಳೆಸುತ್ತಾ ಅವರ ನಂಬಿಕೆ ಗಳಿಸುತ್ತಾರೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳು ಯಾವುದೇ ವ್ಯಕ್ತಿಯ ಮೇಲೆ ಆಪಾದನೆ ಹೊರಿಸುವುದಿಲ್ಲ ಅಥವಾ ಸುಳ್ಳು ಹೇಳುವುದಿಲ್ಲ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org