ಸೂಕ್ತ ಪುನಃಶ್ಚೇತನ ಕೇಂದ್ರದ ಆಯ್ಕೆ ಅಗತ್ಯ

ನಿಮ್ಮ ಪ್ರೀತಿಪಾತ್ರರ ಚೇತರಿಕೆಗೆ ತುಂಬ ಅನುಕೂಲವಾದ ಉತ್ತಮ ಪುನಃಶ್ಚೇತನ ಕೇಂದ್ರವನ್ನು ಗುರುತಿಸುವುದು ತುಂಬ ಅಗತ್ಯ. ಅದಕ್ಕೆ ಪೂರಕವಾದ ಮಾಹಿತಿಗಳು ಇಲ್ಲಿವೆ.

ಮಾನಸಿಕ ಸಮಸ್ಯೆಗೊಳಗಾದ ವ್ಯಕ್ತಿಯ ಆರೈಕೆಯಲ್ಲಿ ತೊಡಗಿರುವ ವ್ಯಕ್ತಿ  (ಚಿಕಿತ್ಸೆಯ ಹಂತದಲ್ಲಿ ಅಥವಾ ನಂತರದಲ್ಲಿ ) ಒಂದಲ್ಲಾ ಒಂದು ಸಂದರ್ಭದಲ್ಲಿ, ತಮ್ಮ ಆಪ್ತರು ದೈನಂದಿನ ಕಾರ್ಯಗಳನ್ನು ಸ್ವತಃ ನಿರ್ವಹಿಸುವಂತಾಗಲು ಸಹಾಯ ಮಾಡುವ ಪುನಃಶ್ಚೇತನ ಕೇಂದ್ರವನ್ನು ಹುಡುಕಬೇಕಾಗುತ್ತದೆ. ಕೇಂದ್ರದಲ್ಲಿರುವ ವ್ಯವಸ್ಥೆಗಳ ಪ್ರಯೋಜನ ಹಾಗೂ ಸಂಸ್ಥೆಯ ವಿಶ್ವಾಸಾರ್ಹತೆಯನ್ನು  ಆಧರಿಸಿ ಪುನಃಶ್ಚೇತನ ಕೇಂದ್ರವನ್ನು ಆಯ್ಕೆ ಮಾಡಬಹುದು.

ಪುನಃಶ್ಚೇತನ ಕೇಂದ್ರದ ವಿಧಗಳು:
ಹಲವಾರು ರೀತಿಯ ಪುನಃಶ್ಚೇತನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಖಾಯಿಲೆಯ ಲಕ್ಷಣ, ಸೌಲಭ್ಯಗಳ ಲಭ್ಯತೆ, ಹಾಗೂ ರೋಗಿಯ ಅವಶ್ಯಕತೆಗನುಗುಣವಾಗಿ ಸೂಕ್ತವಾದ ಕೇಂದ್ರವನ್ನು ಆರಿಸಬೇಕಾಗುತ್ತದೆ.

ಸಮುದಾಯ ಆಧಾರಿತ ಪುನಃಶ್ಚೇತನ ಕೇಂದ್ರವು ಮಾನಸಿಕ ಸಮಸ್ಯೆಯಿರುವ ವ್ಯಕ್ತಿಗಳಿಗೆ ಅತ್ಯಂತ ಸೂಕ್ತ. ಇವು ವ್ಯಕ್ತಿಯು ವಾಸಿಸುತ್ತಿರುವ ಸಮುದಾಯದ ಒಳಗಡೆಯೇ ಕಾರ್ಯ ನಿರ್ವಹಿಸುತ್ತದೆ. ವ್ಯಕ್ತಿ ಚಿಕಿತ್ಸೆ ಪಡೆದ ಮೇಲೆ ತಮ್ಮ ಸಮುದಾಯಕ್ಕೆ ವಾಪಾಸಾಗುತ್ತಾರೆ ಮತ್ತು ತಮ್ಮ ಸ್ವಂತ ಪರಿಸರದಲ್ಲಿ ಕೌಶಲ್ಯಗಳನ್ನು ಮತ್ತೆ ಕಲಿಯುತ್ತಾರೆ. ಈ ಪುನಃಶ್ಚೇತನ ವ್ಯವಸ್ಥೆಯಲ್ಲಿ ಮನೋವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರ ಪಾತ್ರ ಅತ್ಯಂತ ಕಡಿಮೆ. ಸಮುದಾಯದ ವ್ಯಕ್ತಿಗಳು ( ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರು) ಚೇತರಿಕೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಪೀಡಿತರಿಗೆ ಬೆಂಬಲ ನೀಡಿ ಸಾಮಾನ್ಯರಂತೆ ಬದುಕುವ ಅವಕಾಶ ಒದಗಿಸುತ್ತಾರೆ.

ಸಮುದಾಯ ಆಧಾರಿತ ಪುನಃಶ್ಚೇತನವು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಮತ್ತು ಈ ಕುರಿತ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಅತ್ಯಂತ ಪರಿಣಾಮಕಾರಿ ವ್ಯವಸ್ಥೆಯಾಗಿದೆ. ಸಮುದಾಯವು ಅಂಥ ವ್ಯಕ್ತಿಗಳ ಸಾಮರ್ಥ್ಯ ಮತ್ತು ಮಿತಿಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಉದ್ಯೋಗ ಅವಕಾಶಗಳನ್ನು ಕೂಡ ಸೃಷ್ಟಿಸಬಹುದು. ಇದರಿಂದ ವ್ಯಕ್ತಿ ಮತ್ತು ಆತನ ಕುಟುಂಬವನ್ನು ವಿಶಾಲವಾದ ಸಮುದಾಯದ ಜೊತೆ ಜೋಡಿಸಲು ಸಾಧ್ಯವಾಗುತ್ತದೆ.ಆದರೆ ಭಾರತದಲ್ಲಿ ಕೆಲವೇ ಕೆಲವು ಸಮುದಾಯಾಧಾರಿತ ಪುನಃಶ್ಚೇತನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಡೇ ಕೇರ್ ವ್ಯವಸ್ಥೆಯಲ್ಲಿ ವ್ಯಕ್ತಿಗಳು ಕೆಲವು ವಾರ ಮತ್ತು ತಿಂಗಳುಗಳವರೆಗೆ ಪ್ರತಿದಿನ ಸುಮಾರು ಎಂಟು ಗಂಟೆಗಳವರೆಗೆ ಸಮಯ ಕಳೆಯಬಹುದು. ಇಲ್ಲಿ ರೋಗಿಗಳಿಗೆ ಅವರ ಆಸಕ್ತಿಗೆ ತಕ್ಕಂತೆ ಕೌಶಲ್ಯಗಳನ್ನು ಕಲಿಸಿ, ನಂತರ ಉದ್ಯೊಗವನ್ನು ಪಡೆಯಲು ಸಹಾಯ ಮಾಡಲಾಗುತ್ತದೆ. ಇಷ್ಟೇ ಅಲ್ಲದೇ, ಸಮಾಜದೊಡನೆ ಬೆರೆಯುವುದು ಮತ್ತು ವಿವಿಧ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಇದು ನೆರವು ನೀಡುತ್ತದೆ. ವ್ಯಕ್ತಿಗಳನ್ನು ಅವರ ಸಮಸ್ಯೆಗಳ ಜೊತೆ ಸಹಜವಾಗಿ ಸ್ವೀಕರಿಸುವ ಪರಿಸರದಲ್ಲಿ ಇವೆಲ್ಲ ಅವಕಾಶಗಳನ್ನು ಒದಗಿಸಲಾಗುತ್ತದೆ. ರೋಗಿಗಳಿಗೆ ಉಳಿದ ಮಾನಸಿಕ ಸಮಸ್ಯೆಯಿರುವ ಮತ್ತು ಇಲ್ಲದ ವ್ಯಕ್ತಿಗಳೊಂದಿಗೆ ಬೆರೆಯಲು ಈ ಪರಿಸರವು ಅವಕಾಶ ನೀಡುತ್ತದೆ. ಇದರಿಂದ ಅವರಿಗೆ ತಮ್ಮಂತಹ ಸಮಸ್ಯೆಯಿರುವ ಇತರ ವ್ಯಕ್ತಿಗಳನ್ನು ಸಾಮಾನ್ಯರಂತೆ ನಡೆಸಿಕೊಳ್ಳುವ ಮತ್ತು ಸಮಾಜವು ಗೌರವಿಸುವ ವಿಷಯವು ತಿಳಿಯುತ್ತದೆ. ಇದು ವ್ಯಕ್ತಿಯ ಮೇಲೆ ಗಾಢವಾದ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಒಮ್ಮೆ ತರಬೇತಿ ಪಡೆದ ಮೇಲೆ ವ್ಯಕ್ತಿಯು ಉದ್ಯೋಗವನ್ನು ಕೂಡ ಪಡೆಯಬಹುದು. ಇದು ಅವರಲ್ಲಿ ಜೀವನೋತ್ಸಾಹವನ್ನು ಮರಳಿಸುತ್ತದೆ ಮತ್ತು ಜೀವನೋಪಾಯಕ್ಕೆ ದಾರಿಯನ್ನು ತೋರಿಸುತ್ತದೆ. ಡೇ ಕೇರ್ ವ್ಯವಸ್ಥೆಯು ವ್ಯಕ್ತಿಗೆ ಅವರ ದಿನಚರಿಯನ್ನು ರೂಪಿಸಿಕೊಳ್ಳಲು ಮತ್ತು ರೋಗಿಯಾಗಿ ನಿಷ್ಕ್ರಿಯನಾಗಿದ್ದವನು ಉತ್ಪಾದಕ ಸಾಮರ್ಥ್ಯವುಳ್ಳ ವ್ಯಕ್ತಿಯಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ.

ಕೆಲವೊಮ್ಮೆ ವ್ಯಕ್ತಿಯ ಖಾಯಿಲೆಯ ಗಂಭೀರತೆಯಿಂದಾಗಿ ಆತ/ಆಕೆಯು ಪುನಃಶ್ಚೇತನ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಅವರಿಗೆ ಪುನಃಶ್ಚೇತನದ ಲಾಭದ ಬಗ್ಗೆ ತಿಳಿಸಿ, ಉತ್ತೇಜನ ನೀಡಲಾಗುತ್ತದೆ. ವ್ಯಕ್ತಿಯ ಸಮ್ಮತಿಯಿಲ್ಲದೇ ಪುನಃಶ್ಚೇತನವನ್ನು ಒದಗಿಸುವುದು ಸಾಧ್ಯವಾಗುವುದಿಲ್ಲ. ಪುನಃಶ್ಚೇತನದ ಲಾಭವನ್ನು ಅರಿತುಕೊಳ್ಳಲು ವ್ಯಕ್ತಿಗೆ ಆಪ್ತಸಮಾಲೋಚನೆಯ ಅಗತ್ಯವೂ ಇರಬಹುದು.

ಗಂಭೀರವಾದ ಮಾನಸಿಕ ಖಾಯಿಲೆಯಿರುವ ಕೆಲವು ವ್ಯಕ್ತಿಗಳಿಗೆ ಡೇ ಕೇರಿನ ವ್ಯವಸ್ಥೆಯು ಸರಿಹೊಂದುವುದಿಲ್ಲ. ಅಂತಹ ಸಂದರ್ಭದಲ್ಲಿ ಕಡಿಮೆ ಅವಧಿಯ ಡೇ ಕೇರ್ ಅಥವಾ ದೀರ್ಘಾವದಿಯಲ್ಲಿ ಮನೆಯಲ್ಲಿಯೇ ಪುನಶ್ಚೇತನಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು. ಹೀಗೆ ಮಾಡಬೇಕಾಗಿ ಬರುವುದು ಕಾಯಿಲೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ ಮತ್ತು ಉಳಿದೆಲ್ಲ ಕ್ರಮಗಳು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿದ್ದಾಗಲಷ್ಟೇ ಸಾಧ್ಯವಾಗುತ್ತದೆ.

ಕೇಂದ್ರದ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವುದು:
ವ್ಯಕ್ತಿಯನ್ನು ಸಶಕ್ತಗೊಳಿಸುವುದು ಪುನಶ್ಚೇತನ ಕೇಂದ್ರದ ಮುಖ್ಯ ಉದ್ದೇಶ. ಆದರೆ ಹೆಚ್ಚಿನ ಪುನಶ್ಚೇತನ ಕೇಂದ್ರಗಳು ರೋಗಿಗಳನ್ನು ಕೇವಲ ನೋಡಿಕೊಳ್ಳುತ್ತವೆಯೆ ಹೊರತು, ಅವರಿಗೆ ಅಗತ್ಯವಾದ ಶಿಕ್ಷಣವನ್ನು ನೀಡುವುದಿಲ್ಲ. ಅಲ್ಲದೇ ಇನ್ನು ಕೆಲವು ಪುನಶ್ಚೇತನ ಕೇಂದ್ರಗಳು ಅನಧಿಕೃತವಾಗಿದ್ದು, ಅಲ್ಲಿನ ಸಿಬ್ಬಂದಿಗಳು ಸೂಕ್ತ  ಅರ್ಹತೆಗಳನ್ನು ಹೊಂದಿರುವುದಿಲ್ಲ. ಅವರ ಚಿಕಿತ್ಸೆಗಳು ಅಷ್ಟೇನೂ ಪರಿಣಾಮಕಾರಿಯಾಗಿರುವುದಿಲ್ಲ ಅಥವಾ ಅದರಿಂದ ರೋಗಿಗೆ ಉಪಯೋಗವೂ ಆಗುವುದಿಲ್ಲ. ಅಂತಹ ಕೆಲವು ಪುನಶ್ಚೇತನ ಕೇಂದ್ರಗಳಲ್ಲಿ ರೋಗಿಯನ್ನು ಬಂಧಿಸಿಡಬಹುದು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಗಳಾಗಬಹುದು. ರೋಗಿಯು ಚೇತರಿಸಿಕೊಳ್ಳುವುದನ್ನೇ ಕಾಯುತ್ತಿರುವ ಕುಟುಂಬದವರು ಇದನ್ನೆಲ್ಲಾ ರೋಗಿಯ ಒಳಿತಿಗಾಗಿಯೇ ಮಾಡಲಾಗುತ್ತದೆಯೆಂಬ ತಪ್ಪು ಕಲ್ಪನೆಯಿಂದ ಸುಮ್ಮನಿರಬಹುದು

ಕೆಲವು  ಮಾನಸಿಕ ಖಾಯಿಲೆಗಳಿಗೆ ಹಲವು ತಿಂಗಳುಗಳ ಪುನಶ್ಚೇತನ ಕಾರ್ಯಕ್ರಮದ ಅವಶ್ಯಕತೆಯಿರುತ್ತದೆ. ಇನ್ನು ಕೆಲವು ಪರಿಸ್ಥಿತಿಗಳಲ್ಲಿ ಇನ್ನೂ ದೀರ್ಘಕಾಲದ ಪುನಶ್ಚೇತನದ ಅವಶ್ಯಕತೆಯಿರಬಹುದು. ಬೇರೆ ಬೇರೆ ತರಹದ ವ್ಯವಸ್ಥೆಗಳು ಬೇರೆ ಬೇರೆ ತರಹದ ಶುಲ್ಕವನ್ನು ವಿಧಿಸುತ್ತವೆ. ಸರ್ಕಾರದ ಅನುದಾನವಿರುವ ಪುನಶ್ಚೇತನ ಕೇಂದ್ರಗಳು ಕಡಿಮೆ ಶುಲ್ಕವನ್ನು ವಿಧಿಸಬಹುದು. ಆದರೆ ಖಾಸಗಿ ಕೇಂದ್ರಗಳ ಮಾಸಿಕ ಶುಲ್ಕ ಅಧಿಕವಾಗಿರಬಹುದು. ಒಬ್ಬ ಆರೈಕೆದಾರರಾಗಿ ನೀವು ನಿಮ್ಮ ಪ್ರೀತಿಪಾತ್ರರ ಅವಶ್ಯಕೆತೆಗೆ ಅನುಗುಣವಾದ ಸೌಲಭ್ಯಗಳನ್ನು ಒದಗಿಸುವ ಮತ್ತು ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸರಿಹೊಂದುವ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಿ.

ಪುನಶ್ಚೇತನ ಕೇಂದ್ರವು ಅಧಿಕೃತವೇ ಮತ್ತು ಪಾರದರ್ಶಕವೇ ಎಂದು ತಿಳಿಯುವುದು ಹೇಗೆ?

  • ನಿಮ್ಮ ಪ್ರೀತಿಪಾತ್ರರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸೂಚಿಸುವ ಕೇಂದ್ರವನ್ನು ಆಯ್ದುಕೊಳ್ಳುವುದು ಉತ್ತಮ.
  • ಕೇಂದ್ರವು ಅಧಿಕೃತವಾದ ವ್ಯವಸ್ಥೆಯಾಗಿದ್ದಲ್ಲಿ ಅದು ಆಸ್ಪತ್ರೆ ಅಥವಾ ಪುನಶ್ಚೇತನ ಕೇಂದ್ರದ ಮಾನ್ಯತೆ ಪಡೆದಿರಬೇಕು. ನ್ಯಾಶನಲ್ ಅಕ್ರಡೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಎಂಡ್ ಹೇಲ್ತಕೇರ್ ಪ್ರೊವೈಡರ್ಸ್ (NABH) ಅಥವಾ ರಿಹಾಬಿಲಿಟೇಶನ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರಬೇಕು.
  • ಅಧಿಕೃತ ಮಾನ್ಯತೆ ಪಡೆದ ಕೇಂದ್ರವು ಸರ್ಕಾರದಿಂದ ನೇಮಿಸಲ್ಪಟ್ಟ ವಿಚಕ್ಷಕರ ತಂಡವನ್ನು ಹೊಂದಿರುತ್ತದೆ. ಇವರು ಎರಡು ಅಥವಾ ಮೂರು ತಿಂಗಳಿಗೊಮ್ಮೆ ಕೇಂದ್ರಕ್ಕೆ ಅನಿರೀಕ್ಷಿತ ಬೇಟಿ ನೀಡಿ ನಿಯಮಾವಳಿಗಳನ್ನೆಲ್ಲಾ ಪಾಲಿಸಲಾಗುತ್ತಿದೆಯೆ ಎಂದು ಪರೀಕ್ಷಿಸುತ್ತಾರೆ. ಅವರ ತಂಡಕ್ಕೆ ಯಾವುದಾದರೂ ಮಾನವ ಹಕ್ಕುಗಳ ಉಲ್ಲಂಘನೆ ಕಂಡುಬಂದರೆ, ಅವರು ಆ ಕೇಂದ್ರವನ್ನು ಮುಚ್ಚಲು ಆದೇಶಿಸಬಹುದು.
  • ಪುನಶ್ಚೇತನ ಕೇಂದ್ರವು ಎಲ್ಲರಿಗೂ ಸುಲಭದಲ್ಲಿ ಕಾಣುವಂತಹ ಜಾಗದಲ್ಲಿ ಸಲಹಾ ಪೆಟ್ಟಿಗೆಯನ್ನು ಹೊಂದಿರಬೇಕು. ಎಲ್ಲಾ ರೋಗಿಗಳು (ಕೆಲವೊಮ್ಮೆ ಭೇಟಿ ನೀಡುವವರಿಗೆ) ಸಲಹಾ ಪೆಟ್ಟಿಗೆಯನ್ನು ಬಳಸಲು ಅವಕಾಶವಿರಬೇಕು. ಇದನ್ನು ವಿಚಕ್ಷಣಾ ತಂಡವು ಮಾತ್ರ ತೆರೆಯಬೇಕು.
  • ಪುನಶ್ಚೇತನ ಕೇಂದ್ರದಲ್ಲಿ ಭೇಟಿ ನೀಡುವವರಿಗೆ ಎಷ್ಟು ಮುಕ್ತ ಅವಕಾಶವಿದೆ? ಅದರ ಪಾರದರ್ಶಕತೆ (ಅಥವಾ ಅಲ್ಲಿನ ಕೊರತೆಗಳು) ಅಲ್ಲಿ ರೋಗಿಗಳನ್ನು ಯಾವ  ರೀತಿ ನಡೆಸಿಕೊಳ್ಳಲಾಗುತ್ತದೆ ಎಂಬುದರ ಸೂಚನೆಯಾಗಿದೆ. ಒಂದು ವೇಳೆ ಪುನಶ್ಚೇತನ ಕೇಂದ್ರದಲ್ಲಿ ಕುಟುಂಬದವರಿಗೆ ರೋಗಿಗಳ ಜೊತೆ ಮಾತಾನಾಡಲು ಮುಕ್ತ ಅವಕಾಶವಿಲ್ಲದಿದ್ದರೆ ಅವರು ಏನನ್ನೋ ಮುಚ್ಚಿಡುತ್ತಿರಬಹುದು.
  • ಒಂದು ಸೂಕ್ತ ಪುನಶ್ಚೇತನ ಕೇಂದ್ರದಲ್ಲಿ ರೋಗಿಯ ಕುಟುಂಬದವರಿಗೆ ರೋಗಿಯ ಜೊತೆ ಬೆರೆಯಲು, ಭೇಟಿ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಆದ್ದರಿಂದ ಆ ವ್ಯವಸ್ಥೆಯನ್ನು ಬಳಸುತ್ತಿರುವವರು ಮತ್ತು ಅವರ ಕುಟುಂಬದವರನ್ನು ಮಾತನಾಡಿಸುವುದರಿಂದ, ಆ ಕೇಂದ್ರವು ನಿಮ್ಮ ಅವಶ್ಯಕತೆಗಳಿಗೆ ಪೂರಕವಾಗಿದೆಯೆ ಎಂದು ತಿಳಿಯುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org