ಮಾನಸಿಕ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಆಯುರ್ವೇದದ ಪಾತ್ರವೇನು?

ಆಯುರ್ವೇದವನ್ನು ದೈಹಿಕ ಸಮಸ್ಯೆಗಳಿಗೆ ಪರ್ಯಾಯ ಚಿಕಿತ್ಸೆಯೆಂದು ತಿಳಿಯಲಾಗಿತ್ತು. ಆದರೆ ಈಗ ಇದನ್ನು ಮಾನಸಿಕ ಸಮಸ್ಯೆಗಳಿಗೂ ಪೂರಕ/ಪರ್ಯಾಯ ಚಿಕಿತ್ಸಾ ಮಾರ್ಗವೆಂದು ಅರಿಯಲಾಗುತ್ತಿದೆ.

22 ವರ್ಷದ ಸುಧಾ ಕಲಾ ವಿಭಾಗದ ವಿದ್ಯಾರ್ಥಿ. ಈಕೆ ಆತಂಕದ ತೊಂದರೆಯಿಂದ ಬಳಲುತ್ತಿದ್ದಾಳೆ. ಮೊದಮೊದಲು ನಿಯಂತ್ರಣದಲ್ಲಿದ್ದ ಆಕೆಯ ಆತಂಕವು ಕ್ರಮೇಣ ನಿಯಂತ್ರಣ ಮೀರತೊಡಗಿತು. ಉಸಿರು ಕಟ್ಟಿದಂತೆ ಅನಿಸುವುದು, ಬೆವರುವಿಕೆ ಮತ್ತು ತಲೆತಿರುಗುವಿಕೆ ಹೆಚ್ಚಾದಂತೆ ಆಕೆಯು ವೈದ್ಯರನ್ನು ಭೇಟಿ ಮಾಡಿದಳು. ವೈದ್ಯರು ಆಕೆಗೆ ಮನೋವೈದ್ಯರನ್ನು ಕಾಣಲು ತಿಳಿಸಿದರು.

ಮನೋವೈದ್ಯರು ಆಕೆಗೆ ಆತಂಕದ ಸಮಸ್ಯೆಯಿರುವುದನ್ನು ಗುರುತಿಸಿ ಔಷಧಗಳನ್ನು ನೀಡಿದರು. ಸುಧಾ ತನ್ನ ನಡವಳಿಕೆಯ ಲಕ್ಷಣಗಳಿಗೆ ಕಾರಣ ತಿಳಿದ ಮೇಲೆ ಸ್ವಲ್ಪ ಸಮಾಧಾನಗೊಂಡರೂ ಆಕೆಗೆ ಔಷಧಗಳ ಕುರಿತು ಪೂರ್ತಿ ನಂಬಿಕೆಯಿರಲಿಲ್ಲ. ಆಕೆಯು ತನ್ನ ಅನಿಸಿಕೆಯನ್ನು ಮನೋವೈದ್ಯರಿಗೆ ತಿಳಿಸಿದಳು. ಅವರು ಆಕೆಗೆ ಆಲೋಪತಿ ಔಷಧದ ಮೇಲಿನ ಅವಲಂಬನೆಯನ್ನು ತಪ್ಪಿಸಲು ಆಯುರ್ವೇದ ವೈದ್ಯರನ್ನು ಕಾಣಲು ತಿಳಿಸಿದರು.

ಹೆಚ್ಚಿನ ಭಾರತೀಯರು ತಿಳಿದಿರುವಂತೆ ಆಯುರ್ವೇದವು ಸನಾತನವಾದ ವಿಜ್ಞಾನ,  ಇತ್ತೀಚೆಗೆ ಪೂರಕ ಮತ್ತು ಪರ್ಯಾಯ ಔಷಧ ವಿಜ್ಞಾನವಾಗಿ ಬಳಕೆಯಲ್ಲಿದೆ. ಅಲೋಪತಿಯೊಂದಿಗೆ  ಹೆಚ್ಚುವರಿಯಾಗಿ ಪರ್ಯಾಯ ಚಿಕಿತ್ಸೆಯಾಗಿ ಆಯುರ್ವೇದವು ಬಹಳ ಜನಪ್ರಿಯ. ಆದ್ಧರಿಂದ ಮಾನಸಿಕ ಆರೋಗ್ಯ ಸಮಸ್ಯೆಯಿರುವವರು ಔಷಧಗಳ ಅವಲಂಬನೆ ಕಡಿಮೆ ಮಾಡಲು ಆಯುರ್ವೇದವನ್ನು ಆಶ್ರಯಿಸುತ್ತಿದ್ದಾರೆ. ಮಾನಸಿಕ ಆರೋಗ್ಯ ವಿಜ್ಞಾನವು ಆಯುರ್ವೇದದ ವ್ಯಾಖ್ಯಾನದಲ್ಲೇ ಅಡಕವಾಗಿರುವುದನ್ನು ನಾವು ನೋಡಬಹುದು.

ಆಯುರ್ವೇದದ ಪ್ರಕಾರ, ಒಬ್ಬ ವ್ತಕ್ತಿಯಲ್ಲಿ ದೈಹಿಕ ಮತ್ತು ಮಾನಸಿಕ ಅಂಶಗಳು (ಸಮದೋಷ), ದೇಹದಲ್ಲಿ ಉತ್ಪತ್ತಿಯಾಗುವ ಶಕ್ತಿ (ಸಮಗ್ನಿಶ್ಚ), ದೇಹದ ಅಂಗಾಂಶಗಳು (ಸಮಧಾತು) ಗಳು ಸಮತೋಲನದಲ್ಲಿದ್ದು, ಕಲ್ಮಶಗಳು ದೇಹದಿಂದ ಸರಿಯಾಗಿ ಹೊರಹೋಗುತ್ತಿದ್ದರೆ (ಮಲಕ್ರಿಯೆ), ಸಂತೋಷವಾದ ಆತ್ಮ (ಪ್ರಸನ್ನಾತ್ಮ), ಸಂತೋಷದಿಂದಿರುವ ಕ್ರಿಯಾಶೀಲ ಮನಸ್ಸು (ಪ್ರಸನ್ನ ಮನ) ಮತ್ತು ಪಂಚೇಂದ್ರಯಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಆತ ಆರೋಗ್ಯವಂತ ಎಂದು ಹೇಳಲಾಗುತ್ತದೆ.

ಸರಳವಾಗಿ ಹೇಳಬೇಕೆಂದರೆ ಅಲೋಪತಿ ರೋಗ ಲಕ್ಷಣವನ್ನು ಬಹಳ ಶೀಘ್ರವಾಗಿ ನಿವಾರಿಸುತ್ತದೆ. ಅದೇ ಆಯುರ್ವೇದವು ಸಮಸ್ಯೆಯು ಉದ್ಭವಗೊಳ್ಳಲು ಕಾರಣವಾದ, ಮೇಲೆ ತಿಳಿಸಿದ ಯಾವುದಾದರೊಂದು ಮೂಲಕಾರಣಗಳನ್ನು ಸರಿಪಡಿಸುತ್ತದೆ. ಈ ಸಮಗ್ರ ವಿಧಾನದಿಂದಲೇ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವೆಂದು ತಜ್ಞರು ನಂಬುತ್ತಾರೆ. ಇದರಿಂದಾಗಿ ಆಯುರ್ವೇದವು ಮಾನಸಿಕ ಖಾಯಿಲೆಗಳಿಗೆ ಪರ್ಯಾಯ ಚಿಕಿತ್ಸೆ ಆಗದಿದ್ದರೂ, ಪೂರಕವಾಗಿ ಉಪಯೋಗಿಸಬಹುದು ಎಂದು ಮನೋವೈದ್ಯರು ಹೇಳುತ್ತಾರೆ.

ಆಯುರ್ವೇದ ಅಂದರೆ ಆಯು (ಆಯಸ್ಸು), ವೇದ (ವಿಜ್ಞಾನ), ಜೀವನ ವಿಜ್ಞಾನ ಎಂಬ ಅರ್ಥವನ್ನು ಹೊಂದಿದೆ. ಇದು ದೇಹ ಮನಸ್ಸು ಮತ್ತು ಆತ್ಮವನ್ನು ಬೆಸೆಯುವ ವಿಜ್ಞಾನವಾಗಿದೆ. ಅಡ್ಡಪರಿಣಾಮಗಳು ಇರದ ಕಾರಣ ಭಾರತದ ಹಲವು ಭಾಗಗಳಲ್ಲಿ ಜನರು ಈ ಚಿಕಿತ್ಸೆಗೆ ಒಲವು ತೋರುತ್ತಿದ್ದಾರೆ. ದೈಹಿಕ ಅನಾರೋಗ್ಯ ಚಿಕಿತ್ಸೆಗೆ ಆಯುರ್ವೇದದ ಬಳಕೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ, ಮಾನಸಿಕ ಅನಾರೋಗ್ಯ ಚಿಕಿತ್ಸೆಯಲ್ಲಿಯೂ ಇದನ್ನು ಪೂರಕ ಮತ್ತು ಪರ್ಯಾಯ ಚಿಕಿತ್ಸೆಯಾಗಿ ಬಳಸುತ್ತಾರೆ.

ಆಯುರ್ವೇದ ಮತ್ತು ಮಾನಸಿಕ ಆರೋಗ್ಯ

“ಖಿನ್ನತೆ, ಆತಂಕ ಮತ್ತು ಒಸಿಡಿಗಳ ಚಿಕಿತ್ಸೆಯಲ್ಲಿ ಆಯುರ್ವೇದವು ಆಲೋಪಥಿ ಚಿಕಿತ್ಸೆಗೆ ಪರ್ಯಾಯ ಚಿಕಿತ್ಸೆಯಾಗಿ ಬಹಳ ಪರಿಣಾಮಕಾರಿಯಾಗಿದೆ. ಆಯುರ್ವೇದ ಔಷಧಗಳ ಡೋಸನ್ನು ಹೆಚ್ಚು ಮಾಡುತ್ತಾ ಅಲೋಪತಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಬಗ್ಗೆ ಅಧ್ಯಯನ ಮಾಡಿದ್ದಾರೆ.” ಎಂದು ನಿಮ್ಹಾನ್ಸ್ ನ ಅಡ್ವಾನ್ಸಡ್ ಸೆಂಟರ್ ಫಾರ್ ಆಯುರ್ವೇದ ಇನ್ ಮೆಂಟಲ್ ಹೆಲ್ತ್  (Nimhans Centre for Ayurveda in  Mental Health) ವಿಭಾಗದ ಉಪನಿರ್ದೇಶಕರಾದ ಡಾ. ಡಿ. ಸುಧಾಕರ್ ಹೇಳುತ್ತಾರೆ. ಕೆಲವು ಕೇಸುಗಳಲ್ಲಿ ಆಲೋಪಥಿ ಔಷಧವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಹೇಳುತ್ತಾರೆ.

ಆಯುರ್ವೇದದ ಔಷಧಗಳು ರೋಗಿಯ ಸಮಸ್ಯೆಯನ್ನು ಸಮಗ್ರವಾಗಿ ನಿರ್ವಹಿಸುತ್ತವೆ ಆದರೆ ಅಲೋಪತಿಯು ಕೇವಲ ಸಮಸ್ಯೆಯ ನಿರ್ದಿಷ್ಟ ಲಕ್ಷಣಗಳ ಮೇಲಷ್ಟೇ ಪ್ರಭಾವ ಬೀರುತ್ತವೆ. ಆಯುರ್ವೇದವು ಸಾಂಪ್ರದಾಯಿಕವಾದ ಆಹಾರ ಪದ್ಧತಿ, ಜೀವನ ಶೈಲಿಯ ಸುಧಾರಣೆ, ಯೋಗಾಭ್ಯಾಸ ಮತ್ತು ಗಿಡಮೂಲಿಕೆ ಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಇದು ಒಂದು ಪರ್ಯಾಯ ಚಿಕಿತ್ಸೆಯಾಗಿ ಕೇವಲ ದೈಹಿಕ ಮಾನಸಿಕ ಸಮಸ್ಯೆಯನ್ನು ಮಾತ್ರ ನಿವಾರಿಸದೇ ವ್ಯಕ್ತಿಯ ಜೀವನ ಶೈಲಿಯಲ್ಲಿ ಬದಲಾವಣೆ ತಂದು ಮತ್ತೆ ಭವಿಷ್ಯದಲ್ಲಿ ಆ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ.

ಆಯುರ್ವೇದದ ಹೆಸರೇ ಸೂಚಿಸುವಂತೆ, ಇದರಲ್ಲಿ ಆರೋಗ್ಯವಂತ ಮನಸ್ಸಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಒಂದು ಸಂಪೂರ್ಣ ವಿಜ್ಞಾನವಾಗಿ ಇದು ಮನಸ್ಸು, ದೇಹ ಮತ್ತು ಆತ್ಮ, ಪಂಚೇಂದ್ರಿಯಗಳು ಮತ್ತು ಅವುಗಳ ಕಾರ್ಯಗಳ ನಡುವಿನ ಸಂಬಂಧವನ್ನು ಶೋಧಿಸುತ್ತದೆ .

ಆಯುರ್ವೇದ ಮಾನಸಿಕ ಆರೋಗ್ಯವನ್ನು ಈ ಕೆಳಗಿನ ರೀತಿಯಲ್ಲಿ ನಿಭಾಯಿಸುತ್ತದೆ.

  • ಮಾನವನ ದೇಹವು ಮನಸ್ಸು, ಶರೀರ, ಆತ್ಮ ಮತ್ತು ಇಂದ್ರಿಯಗಳ ಸಮ್ಮಿಳಿತವಾಗಿದೆ. ಇದು ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳ ಸಂಯೋಜನೆಯನ್ನು ಒಳಗೊಳ್ಳುತ್ತದೆ. ಈ ಪ್ರಾಥಮಿಕ ಅಂಶಗಳು ಮಾನವನ ದೇಹದ ಆರೋಗ್ಯವನ್ನು ನಿಯಂತ್ರಿಸುತ್ತದೆ.
  • ಮನಸ್ಸು ಮೂರು ಬಗೆಯ ಕಾರ್ಯಕಾರಿ ಗುಣಧರ್ಮವನ್ನು ಹೊಂದಿದೆ. ಸತ್ವ, ರಜಸ್ಸು, ತಮಸ್ಸು ಇವನ್ನು ಗುಣಗಳೆಂದು ಕರೆಯುತ್ತಾರೆ. ಇವು ಮನುಷ್ಯನ ತತ್ವ ಅಥವಾ ವ್ಯಕ್ತಿತ್ವವನ್ನು ನಿರ್ಣಯಿಸುತ್ತವೆ. ಸತ್ವವು ಒಳ್ಳೆಯ ಗುಣಗಳಾದ ಸ್ವ ನಿಯಂತ್ರಣ, ಜ್ಞಾನ ಸರಿ ತಪ್ಪುಗಳ ವಿಶ್ಲೇಷಣೆಗಳನ್ನು ಹೊಂದಿದೆ. ರಜಸ್ಸು, ಚಲನಶೀಲತೆ, ಹಿಂಸಾತ್ಮಕ, ದ್ವೇಷಭರಿತ, ಅಧಿಕಾರಯುತ, ಆಸೆ ಮತ್ತು ಗೊಂದಲವುಳ್ಳ ಗುಣಗಳನ್ನು ನಿರ್ದೇಶಿಸುತ್ತದೆ. ತಮಸ್ಸು ಮಂದವಾಗಿರುವುದು, ಚಟುವಟಿಕೆಯಿಲ್ಲದಿರುವುದು, ಆಲಸ್ಯ, ಅತಿ ನಿದ್ರೆಯ ಗುಣಗಳನ್ನು ಪ್ರದರ್ಶಿಸುತ್ತದೆ. ಇವುಗಳನ್ನು ರಜಸ್ಸು ಮತ್ತು ತಮಸ್ಸು ಮನೋರೋಗಗಳ ಲಕ್ಷಣಗಳಾಗಿವೆ. ಸತ್ವ, ರಜಸ್ಸು, ತಮಸ್ಸುಗಳ ಅಸಮತೋಲನದಿಂದ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ಇದನ್ನು ಮನೋವಿಕಾರ ಎನ್ನುತ್ತಾರೆ.

ಇದೇ ರೀತಿ ‘ಪ್ರಕೃತಿ’ ಯಿಂದಾದ ಶರೀರವು ಮೂರು ಮನೋದೈಹಿಕ ಅಂಶಗಳಿಂದಾಗಿದೆ. ವಾತ (ಗಾಳಿ), ಪಿತ್ತ (ಅಗ್ನಿ) ಮತ್ತು ಕಫ (ಭೂಮಿ)ದ ಅಂಶಗಳು. ಇವುಗಳನ್ನು ತ್ರಿದೋಷಗಳು ಎನ್ನುತ್ತಾರೆ. ಹತ್ತು ವರ್ಷಗಳಿಂದ ಆಯುರ್ವೇದ ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ಆಯುರ್ವೇದ ವೈದ್ಯರಾದ ಡಾ. ರಘುರಾಮ್ (ಎಂ. ಡಿ. ಆಯು) ಅವರ ಪ್ರಕಾರ ತ್ರಿದೋಷಗಳು ಋಣಾತ್ಮಕ ಸ್ವಭಾವ ಹೊಂದಿದ್ದರೂ ನಿಜವಾಗಿ ಅವು ದೇಹವನ್ನು ರಕ್ಷಿಸುತ್ತದೆ. ಕೆಲವೊಮ್ಮೆ ಈ ದೋಷಗಳ ಸಮತೋಲನದಲ್ಲಿ ವೈಪರಿತ್ಯವಾದಾಗ ಅವು ದೇಹದ ಯಾವುದಾದರೂ ಭಾಗಗಳನ್ನು ಅಥವಾ ಪೂರ್ತಿ ದೇಹದ ಮೇಲೆ ದಾಳಿ ಮಾಡಿ ಅನಾರೋಗ್ಯವುಂಟಾಗುವಂತೆ ಮಾಡುತ್ತವೆ. ಇದು ಮನಸ್ಸಿನ ಮೇಲೂ ಪರಿಣಾಮ ಬೀರಿ ಕ್ಷೋಭೆ ಅಥವಾ ಖಾಯಿಲೆಯನ್ನುಂಟು ಮಾಡಬಹುದು. ಆದ್ದರಿಂದ ಆಯುರ್ವೇದವು ಮಾನಸಿಕ ಆರೋಗ್ಯ ಹಾಗೂ ದೇಹದ ಸಮಸ್ಯೆಗಳು ಒಂದಕ್ಕೊಂದು ಸಂಬಂಧಿಸಿದೆ ಎಂದು ನಂಬಿ ಎರಡಕ್ಕೂ ಚಿಕಿತ್ಸೆ ನೀಡುತ್ತಾರೆ.

ಆಯುರ್ವೇದ ವೈದ್ಯರು ಖಿನ್ನತೆ ಮತ್ತು ಆತಂಕಗಳಂತಹ ಸಮಸ್ಯೆಗಳಿಗೆ ನೀಡಿದ ನಿರ್ದಿಷ್ಟ ಔಷಧಗಳು ಫಲಕಾರಿ ಯಾಗಿದೆ ಎಂದು ಸಂಶೋಧನೆಗಳು ತಿಳಿಸಿವೆ.

“ಆಯುರ್ವೇದವನ್ನು ದೈಹಿಕ ಸಮಸ್ಯೆಗಳಿಗೆ ಪರ್ಯಾಯ ಚಿಕಿತ್ಸೆಯೆಂದು ತಿಳಿಯಲಾಗಿತ್ತು. ಆದರೆ ಈಗ ಇದನ್ನು ಮಾನಸಿಕ ಸಮಸ್ಯೆಗಳಿಗೂ ಪೂರಕ/ಪರ್ಯಾಯ ಚಿಕಿತ್ಸಾ ಮಾರ್ಗವೆಂದು ಅರಿಯಲಾಗುತ್ತಿದೆ,” ಎನ್ನುತ್ತಾರೆ ಡಾ. ಸುಧಾಕರ್

ಅವಲೋಕನ

1- “ಆಯುಷ್ ಇನ್ ಮೆಂಟಲ್ ಹೆಲ್ತ್”,  ಡಾ. ಡಿ ಸುಧಾಕರ್, ಡಾ. ಶ್ರೀನಿಭಾಸ್ಡಾ. ಬಿ.ಸಿ.ಎಸ್ ರಾವ್, ಅಡ್ವಾನ್ಸ್ ಸೆಂಟರ್ ಫಾರ್ ಇನ್ ಮೆಂಟಲ್ ಹೆಲ್ತ್ ಅಂಡ್ ನ್ಯೋರೊಸೈನ್ಸ್, ನಿಮ್ಹಾನ್ಸ್, ಬೆಂಗಳೂರು

2- ಡಾ. ರಘುರಾಮ್ ಎಂ. ಡಿ., ಆಯುರ್ವೇದಿಕ್  ರಿಯುಮಟಾಲಜಿ, ಕನ್ಸಲ್ಟೆಂಟ್ ಆಯುರ್ವೇದಿಕ್ ಫಿಸಿಷಿಯನ್, ಬೆಂಗಳೂರು

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org