ಆತ್ಮಹತ್ಯೆಯ ಬಗ್ಗೆ ಮಾತನಾಡುವುದು ಹೇಗೆ?

ಆತ್ಮಹತ್ಯೆಯ ಬಗ್ಗೆ ಮಾತನಾಡುವುದು ಹೇಗೆ?

ಆತ್ಮಹತ್ಯೆಯ ವಿಚಾರ ಬಹಳ ಸೂಕ್ಷ್ಮವಾದುದು. ಶತಮಾನಗಳಿಂದಲೂ ಆತ್ಮಹತ್ಯೆ ಎಂದರೆ ಕಳಂಕ ಎಂದೇ ಪರಿಗಣಿಸಲಾಗಿದೆ. ಆತ್ಮಹತ್ಯೆಯಿಂದ ಬಾಧಿತರಾದ ಜನರು ಸಾಮಾನ್ಯವಾಗಿ ಅಸಹಾಯಕರಾಗಿ ಕಂಡುಬರುತ್ತಾರೆ, ಏಕಾಂಗಿತನವನ್ನು ಅನುಭವಿಸುತ್ತಾರೆ. ಸಮಾಜ ತಮ್ಮ ಬಗ್ಗೆ ಹೇಗೆ ಪ್ರತಿಕ್ರಯಿಸುತ್ತದೋ ಎಂದು ಆತಂಕದಿಂದಿರುತ್ತಾರೆ. ಆದ್ದರಿಂದ ಆತ್ಮಹತ್ಯೆಯ ಸುತ್ತಲೂ ಇರುವ ಕಳಂಕವನ್ನು ತೊಡೆದುಹಾಕುವ ದೃಷ್ಟಿಯಿಂದ ಅದರ ಬಗ್ಗೆ ಮಾತನಾಡುವುದನ್ನು ಹೆಚ್ಚು ಮಾಡಬೇಕಿದೆಯಾದರೂ , ಆತ್ಮಹತ್ಯೆ ಎನ್ನುವುದು ಒಂದು ಮನೋರೋಗವಾಗಿದ್ದು ಅದನ್ನು ಕುರಿತು ಮಾತನಾಡುವಾಗ ಸೂಕ್ಷ್ಮತೆಯಿಂದ ವರ್ತಿಸಬೇಕು.

ಇಂದು ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದರಿಂದ ನಮ್ಮ ಸುತ್ತಮುತ್ತಲಿನಲ್ಲಿಯೇ ಆತ್ಮಹತ್ಯೆ ಸಂಭವಿಸಬಹುದು. ಅಥವಾ ನಮ್ಮ ಸಾಮಾಜಿಕ ನೆರೆಹೊರೆಯಲ್ಲೇ ಸಂಭವಿಸಬಹುದು.ಇದು ಕುಟುಂಬ ಮತ್ತು ಗೆಳೆಯರ ಮೇಲೆ ಅಗಾಧವಾದ ಪರಿಣಾಮ ಬೀರಬಹುದು. ತೀವ್ರವಾದ ಆಘಾತ ಮತ್ತು ದುಃಖವನ್ನು ಉಂಟುಮಾಡುವ ಮೂಲಕ ಸಮುದಾಯದ ಮೇಲೆಯೂ ವ್ಯಾಪಕವಾದ ಪರಿಣಾಮ ಬೀರಬಹುದು.  ಹಾಗಾಗಿ ಆತ್ಮಹತ್ಯೆಯನ್ನು ಕುರಿತು ಮಾತನಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ :

  • ಅನುಸರಿಸಿದ ವಿಧಾನದ ಬಗ್ಗೆ ಚರ್ಚೆ ಮಾಡಬೇಡಿ: ಆತ್ಮಹತ್ಯೆ ಮಾಡಿಕೊಳ್ಳಲು ಅನುಸರಿಸಿದ ವಿಧಾನವನ್ನು ಚರ್ಚೆ ಮಾಡುವುದರಿಂದ ವ್ಯಕ್ತಿಯ ಖಾಸಗಿ ಬದುಕನ್ನು ಉಲ್ಲಂಘಿಸಲಾಗುತ್ತದೆ. ಮೇಲಾಗಿ ಅದರಿಂದ ಆತ್ಮಹತ್ಯೆಯ ಸಾಧ್ಯತೆ ಎದುರಿಸುತ್ತಿರುವವರ ಮೇಲೆಯೂ ಪರಿಣಾಮ ಉಂಟಾಗುತ್ತದೆ. ಈ ರೀತಿ ಚರ್ಚೆ ಮಾಡುವುದರಿಂದ ಅಂಥವರಿಗೆ ಉಪಾಯ ಸೂಚಿಸಿದಂತಾಗುತ್ತದೆ.

  • ಯಾವುದೇ ಅಂತಿಮ ನಿರ್ಧಾರಕ್ಕೆ ಬರಬೇಡಿ: ಆತ್ಮಹತ್ಯೆ ದೌರ್ಬಲ್ಯದ ಸಂಕೇತವಲ್ಲ : ಆತ್ಮಹತ್ಯೆ ಎನ್ನುವುದು ಒಂದು ಸಂಕೀರ್ಣ ವಿದ್ಯಮಾನವಾಗಿರುತ್ತದೆ. ವ್ಯಕ್ತಿಯ ಜೀವನದಲ್ಲಿ ನಡೆದ ಹಲವಾರು ಗಂಭೀರ ಘಟನೆಗಳ ಪ್ರಭಾವದಿಂದ ಇದು ಸಂಭವಿಸುತ್ತದೆ. ಇದು ಒಂದು ರೋಗವಾಗಿದ್ದು ದೌರ್ಬಲ್ಯದ ಸಂಕೇತವಲ್ಲ.

  • ಆತ್ಮಹತ್ಯೆಯಿಂದ ಬಂಧುಗಳನ್ನು ಕಳೆದುಕೊಂಡವರಿಗೆ ನಿಮ್ಮ ಬೆಂಬಲ ಅವಶ್ಯ. ಅವರು ಮಾತನಾಡಲು ಬಯಸಿದರೆ ಮಾತ್ರ ಆತ್ಮಹತ್ಯೆಯ ಬಗ್ಗೆ ಮಾತನಾಡಿ: ಆತ್ಮಹತ್ಯೆಯಿಂದ ಬಂಧುಗಳನ್ನು ಕಳೆದುಕೊಂಡವರು ಒಂಟಿತನವನ್ನು ಅನುಭವಿಸುತ್ತಿರುತ್ತಾರೆ. ಆತ್ಮಹತ್ಯೆಗೆ ಹತ್ತಿರುವ ಕಳಂಕದ ಸೊಂಕಿನಿಂದ ಅವರ  ಪರಿಸ್ಥಿತಿ ಇನ್ನೂ ಶೋಚನೀಯವಾಗಿರುತ್ತದೆ. ಆತ್ಮಹತ್ಯೆಯಿಂದ ತನ್ನ ಗೆಳೆಯರನ್ನೋ, ಕುಟುಂಬದ ಸದಸ್ಯರನ್ನೋ, ಸಂಬಂಧಿಕರನ್ನೋ ಕಳೆದುಕೊಂಡವರ ಬಳಿ ಮಾತನಾಡುವಾಗ ನಿಮ್ಮ ಮುಂದೆ ದೊಡ್ಡ ಸವಾಲು ಎದುರಾಗುತ್ತದೆ. ಅವರಿಗೆ ಏನು ಹೇಳಬೇಕು ಎಂದೇ ನಿಮಗೆ ತೋಚದೆ ಹೋಗಬಹುದು. ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ  ತೀವ್ರವಾದ ದುಃಖದ ಸನ್ನಿವೇಶದಲ್ಲಿ ಅವರಿಗೆ ಬೇಕಿರುವುದು ನಿಮ್ಮ ಬೆಂಬಲ ಮಾತ್ರ

  • “ಅವರು ತಮ್ಮ ಕುಟುಂಬದವರ ಬಗ್ಗೆ ಯೋಚಿಸಲೇ ಇಲ್ಲವೇ” ಎಂದೋ ಅಥವಾ “ ಅವರು ಹೇಗೆ ಈ ರೀತಿ ಮಾಡಿಬಿಟ್ಟರು ” ಎಂದೆಲ್ಲಾ ಹೇಳಬೇಡಿ : ಇದು ಮೂರನೆಯ ಸಲಹೆಯ ಮುಂದುವರೆದ ಭಾಗ. ಆತ್ಮಹತ್ಯೆಯಿಂದ ಮೃತಪಟ್ಟ ವ್ಯಕ್ತಿಯ ಮನಸ್ಸಿನಲ್ಲಿ ಏನು ನಡೆದಿರಬಹುದು ಎಂದು ಊಹಿಸಲು ಯತ್ನಿಸಬೇಡಿ.

ಆತ್ಮಹತ್ಯೆ ಮಾಡಿಕೊಂಡರು ಎಂದು ಏಕೆ ಹೇಳಕೂಡದು

ಆತ್ಮಹತ್ಯೆಯನ್ನು ಕುರಿತು ಆರೋಗ್ಯಕರವಾದ ಚರ್ಚೆಯನ್ನು ನಡೆಸಲು, ಆತ್ಮಹತ್ಯೆಯ ಸುತ್ತ ಇರುವ ಕಳಂಕವನ್ನು ತೊಡೆದುಹಾಕುವ ರೀತಿಯಲ್ಲಿ ಸರಿಯಾದ ಪದಗಳನ್ನು ಬಳಸುವುದು ಬಹಳ ಮುಖ್ಯ. ಆತ್ಮಹತ್ಯೆ ಒಂದು ಅಪರಾಧ ಎಂದು ಭಾವಿಸುತ್ತಿದ್ದ ಕಾಲಘಟ್ಟದಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಪದಗಳನ್ನು ಬಳಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಏಕೆ ಆತ್ಮಹತ್ಯೆಯ ಯೋಚನೆಯನ್ನು ಮಾಡುತ್ತಾರೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಈ ವಿದ್ಯಮಾನವನ್ನು  ಕುರಿತು ಹೆಚ್ಚಿನ ಜ್ಞಾನ ಮೂಡಿದ್ದು ಆತ್ಮಹತ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಂತಾಗಿದೆ.

ಈ  ಬೆಳವಣಿಗೆಯೊಂದಿಗೆ ಮತ್ತೊಂದು ಮುಖ್ಯ ವಿಚಾರ ಎಂದರೆ ನಾವು ಹೆಚ್ಚು ಭಾವುಕರಾಗುವ ಮೂಲಕ ಆತ್ಮಹತ್ಯೆಯಿಂದ ಬಾಧಿತರಾದ ಜನರನ್ನು ಕಳಂಕರನ್ನಾಗಿ ಮಾಡಲಾಗುವುದಿಲ್ಲ. ಆದ್ದರಿಂದ ನಾವು “ ಅವರು ಬದುಕನ್ನು ಕೊನೆಗೊಳಿಸಿಕೊಂಡರು ” ಎಂದು ಹೇಳಬಹುದೇ ಹೊರತು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಕೂಡದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org