ದೀರ್ಘಕಾಲಿಕ ನೋವು ಉಂಟು ಮಾಡುವ ಭಾವನಾತ್ಮಕ ಸಮಸ್ಯೆ ಮತ್ತು ಚಿಕಿತ್ಸೆ

ದೀರ್ಘಕಾಲಿಕ ನೋವು ಉಂಟು ಮಾಡುವ ಭಾವನಾತ್ಮಕ ಸಮಸ್ಯೆ ಮತ್ತು ಚಿಕಿತ್ಸೆ

ದೀರ್ಘಕಾಲದ ನೋವು ಒಬ್ಬ ಮನುಷ್ಯನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಾಧಿಸುತ್ತದೆ. ಮಾನಸಿಕ ಆರೋಗ್ಯದ ಸುಧಾರಣೆಗೆ ಹೆಚ್ಚಿನ ಗಮನ ನೀಡುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ನೀವು ಎಂದಾದರೂ ಅತಿಯಾದ ತಲೆನೋವು ಅಥವಾ ತೀವ್ರವಾದ ಹಲ್ಲುನೋವನ್ನು ಅನುಭವಿಸಿದ್ದರೆ, ನಿಮಗೆ ಆ ನೋವಿನ ತೀವ್ರತೆ ಮತ್ತು ಪರಿಣಾಮ ಹೇಗಿರಬಹುದೆಂಬ ಅರಿವಿರುತ್ತದೆ. ನೋವು ದೀರ್ಘಕಾಲದವರೆಗೆ ಮುಂದುವರೆದರೆ, ಅದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ದೀರ್ಘಕಾಲದ ನೋವು ಎಂದರೇನು?

ಯಾವುದೇ ತರಹದ ನೋವು ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯವರೆಗೆ ಕಾಣಿಸಿಕೊಂಡರೆ ಅದನ್ನು ದೀರ್ಘಕಾಲಿಕ ನೋವು ಎಂದು ಹೇಳಬಹುದು. ಎಲ್ಲಾ ನೋವುಗಳಿಗೂ ಒಂದು ನಿರ್ದಿಷ್ಟ ಅವಧಿಯಿರುತ್ತದೆ. ನಮ್ಮ ಶರೀರದಲ್ಲಿನ ಎಲ್ಲಾ ಭಾಗಗಳು ಸರಿಯಾಗಿ, ಸಹಜವಾಗಿ ಕಾರ್ಯನಿರ್ವಹಿಸದಿದ್ದಾಗ ಅನಾರೋಗ್ಯದ ಎಚ್ಚರಿಕೆಯನ್ನೂ ನೀಡುತ್ತವೆ. ಒಬ್ಬ ವ್ಯಕ್ತಿಗೆ ತಡೆದುಕೊಳ್ಳಲಾಗದಷ್ಟು ಮಿತಿಮೀರಿದ ನೋವು ಕಾಣಿಸಿಕೊಂಡರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನೋವು ಒಬ್ಬ ಮನುಷ್ಯನ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಉದ್ವೇಗಗಳಿಗೂ ಕಾರಣವಾಗಬಲ್ಲದು.

ಯಾವ ಸಂದರ್ಭದಲ್ಲಿ ನೋವು ಸುದೀರ್ಘವಾಗಿರುತ್ತದೆಯೋ, ಅದು ವ್ಯಕ್ತಿಯ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲಿಕ ನೋವು ಅನುಭವಿಸುವ ವ್ಯಕ್ತಿಯ ದೈನಂದಿನ ಚಟುವಟಿಕೆಗಳನ್ನು ಗಮನಿಸಿದರೆ ನಮಗೆ ಅದು ಅರ್ಥವಾಗುತ್ತದೆ. ಯಾವುದೇ ನೋವು ಶಾರೀರಿಕವಾಗಿ ಅಥವಾ ಮಾನಸಿಕವಾಗಿ ಸ್ವತಂತ್ರವಲ್ಲ. ಮಾನಸಿಕ ಸಮಸ್ಯೆಗಳ ಪರಿಣಾಮ ದೇಹದ ಮೇಲೂ, ದೈಹಿಕ ಸಮಸ್ಯೆಗಳ ಪರಿಣಾಮ ಮಾನಸಿಕ ಆರೋಗ್ಯದ ಮೇಲೂ ಉಂಟಾಗುವುದು ಸಹಜ. ಆದರೆ ಅವುಗಳ ಗುಣಲಕ್ಷಣಗಳನ್ನು ಅಷ್ಟು ಸುಲಭವಾಗಿ ಗುರುತಿಸಲಾಗುವುದಿಲ್ಲ.

ಮಾನಸಿಕವಾಗಿ ನೋವು ಅನಿಶ್ಚಿಯತೆ ಮತ್ತು ವ್ಯಕ್ತಿಯ ವಿವೇಚನಾಶಕ್ತಿಯ ಮೇಲೆ ಪರಿಣಾಮ ಬೀರುವುದೇ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ವ್ಯಕ್ತಿಯ ಕಾರ್ಯಕ್ಷಮತೆ ಕಡಿಮೆಯಾಗಿ, ನೇರವಾಗಿ ದುಡಿಮೆ ಮತ್ತು ಗಳಿಕೆಯ ಮೇಲೆ ಪರಿಣಾಮ ಬೀರತೊಡಗುತ್ತದೆ. ನೋವು ತೀವ್ರವಾಗುತ್ತಿದ್ದಂತೆ ದೈನಂದಿನ ಜೀವನವೇ ಕಷ್ಟಕರವಾಗಿ ಬಿಡುತ್ತದೆ. ಇಂತಹ ದೀರ್ಘಕಾಲಿಕ ನೋವನ್ನು ಅನುಭವಿಸುತ್ತಿರುವವರಲ್ಲಿ ಮಾನಸಿಕ ಖಿನ್ನತೆ ಕಂಡುಬರುವುದು ಸಾಮಾನ್ಯ ಸಂಗತಿಯಾಗಿದೆ. ಅಧಿಕ ಪ್ರಮಾಣದ ನೋವು ವ್ಯಕ್ತಿಯ ಶರೀರದ ಮೇಲೆ ಮತ್ತು ಮನಸ್ಸಿನ ಮೇಲೆ ಒತ್ತಡ ಹೇರುತ್ತದೆ. ಒಂದು ಹಂತದವರೆಗೆ ನಾವೆಲ್ಲರೂ ನೋವನ್ನು ತಡೆದುಕೊಳ್ಳಬಹುದು, ಆದರೆ ನೋವು ಮಿತಿಮೀರಿದಾಗ ಶರೀರದ ಸಹನಶಕ್ತಿ ಮತ್ತು ಸಾಮರ್ಥ್ಯ ಕಡಿಮೆಯಾಗಿ ಕೆಲಸ ಕಾರ್ಯಗಳಲ್ಲಿ ನಮ್ಮ ಗಮನವನ್ನು ಕೇಂದ್ರೀಕರಿಸುವುದು ಕಷ್ಟವಾಗುತ್ತದೆ. ಇದು ವ್ಯಕ್ತಿಯನ್ನು ಹತಾಶೆಗೊಳಗಾಗುವಂತೆ ಮಾಡುತ್ತದೆ ಮತ್ತು ಅವರ ನಿರ್ಧಾರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.

ದೈಹಿಕ ನೋವು ಮತ್ತು ಮಾನಸಿಕ ನೋವು

ಕೆಲವೊಮ್ಮೆ, ದೈಹಿಕ ನೋವು ಮಾನಸಿಕ ನೋವಿಗೆ ಕಾರಣವಾಗಿರುತ್ತದೆ. ಮಾನಸಿಕ ನೋವನ್ನು, ಅದರ ಪ್ರಮಾಣವನ್ನು ಸುಲಭವಾಗಿ ಗುರುತಿಸಲಾಗುವುದಿಲ್ಲ. ಒಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ಮಾನಸಿಕ ನೋವು ಅವನ ಭಾವನೆಗಳಲ್ಲಿನ ಬದಲಾವಣೆಗಳಿಂದ ಪ್ರಾರಂಭಗೊಂಡು, ಮುಂದೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ದೀರ್ಘಕಾಲಿಕ  ಮಾನಸಿಕ ನೋವು ದೈಹಿಕ ನೋವಿಗಿಂತಲೂ ಕೆಟ್ಟದಾಗಿರುತ್ತದೆ.

ದೀರ್ಘ ಕಾಲದ ನೋವನ್ನು, ಮಾನಸಿಕ ಸ್ವಾಸ್ಥ್ಯವನ್ನು ಗಣನೆಗೆ ತೆಗೆದುಕೊಂಡು, ಸೂಕ್ತವಾಗಿ ನಿರ್ವಹಿಸುವ ಮೂಲಕ ಪರಿಣಾಮಕಾರಿಯಾಗಿ ಎದುರಿಸಬಹುದಾಗಿದೆ. ದೀರ್ಘಕಾಲಿಕ ನೋವನ್ನು ಅನುಭವಿಸುತ್ತಿರುವ ವ್ಯಕ್ತಿಗಳಲ್ಲಿ ಮಾನಸಿಕ ಕಾಯಿಲೆ ಮೂರು ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಉದ್ವೇಗ ಮತ್ತು ಖಿನ್ನತೆಗಳನ್ನು ಉಂಟು ಮಾಡುವ ಮೂಲಕ ದೀರ್ಘಕಾಲಿಕ ನೋವು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಷ್ಟು ಸತ್ಯವೋ, ಅದರಿಂದ ಉಂಟಾಗುವ ಖಿನ್ನತೆಯೂ ವ್ಯಕ್ತಿಯ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ ಎಂಬುದೂ ಸತ್ಯ.

ದೀರ್ಘಕಾಲದ ನೋವಿಗೆ ಸ್ವಯಂ ಆರೈಕೆ

1. ಸ್ವಯಂ ಆರೈಕೆಗೆ ನಮ್ಮ ಎಲ್ಲಾ ಶಕ್ತಿಯನ್ನು ಬಳಸಿಕೊಳ್ಳಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸೂಕ್ತವಾದ ಆಹಾರಕ್ರಮ, ನಿಯಮಿತ ಆಹಾರ ಸೇವನೆ, ಸಾಕಷ್ಟು ನಿದ್ರೆ, ಮತ್ತು ಸೂಕ್ತ ವ್ಯಾಯಾಮಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

2. ನಿಮಗೆ ನೋವು ನಿರಂತರವಾಗಿದ್ದರೆ, ಫಿಸಿಯೋಥೆರಪಿ ಚಿಕಿತ್ಸೆಯನ್ನು ಪಡೆಯಬಹುದು.

3. ನಿಮ್ಮ ಮಿತ್ರರಿಂದ, ಕುಟುಂಬದವರಿಂದ ಹಾಗೂ ಸಾಧ್ಯವಾದರೆ ಸೂಕ್ತ ವೈದ್ಯರಿಂದ ಸಹಾಯ ಪಡೆಯಿರಿ.

4. ಮಾನಸಿಕ ಒತ್ತಡಗಳಿಂದ ನೋವು ಹೆಚ್ಚಾಗುತ್ತದೆ. ಆದ್ದರಿಂದ ಯಾವ ವಿಷಯಗಳು ನಿಮ್ಮ ಮನಸ್ಸಿನ ಮೇಲೆ ಒತ್ತಡ ಹೇರುತ್ತಿವೆ ಎಂದು ಗುರುತಿಸಿ, ಅದರಿಂದ ಸಾಧ್ಯವಾದಷ್ಟು ದೂರವಿರಿ. ಅವುಗಳನ್ನು ಬಗೆಹರಿಸಿಕೊಳ್ಳುವುದು ಅಸಾಧ್ಯವೆನ್ನಿಸಿದರೆ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಇರಬಹುದಾದ ಮಾರ್ಗಗಳ ಬಗ್ಗೆ ತಿಳಿದುಕೊಳ್ಳಿ.

5. ಉತ್ತಮ ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳಿ. ಪೌಷ್ಟಿಕವಾದ ಹಾಗೂ ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

6. ನಿಶ್ಚಿಂತೆಯಿಂದ ಚೆನ್ನಾಗಿ ನಿದ್ದೆ ಮಾಡಿ, ನಿದ್ರಿಸುವಾಗ ಸೂಕ್ತ ವಿಧಾನಗಳನ್ನು ಅನುಸರಿಸಿ.

7. ನಿಮಗೆ ಅಗತ್ಯ ಬಿದ್ದಾಗ ಸೂಕ್ತವಾದ ಮಾನಸಿಕ, ಕ್ರಿಯಾತ್ಮಕವಾದ ಬೆಂಬಲವನ್ನು ಪಡೆದುಕೊಳ್ಳಿ.

ಹಿಬಾ ಸಿದ್ದಿಕಿ ಕೌನ್ಸೆಲಿಂಗ್ ಸೈಕೋಲಜಿಸ್ಟ್ ಆ್ಯಾಂಡ್ ಸೈಕೋ - ಆಂಕಾಲಜಿಸ್ಟ್; ಡಾ.ಶಾಂತಲಾ ಹೆಗ್ಡೆ ಅಸಿಸ್ಟೆಂಟ್ ಪ್ರೊಫೆಸರ್(ನ್ಯೂರೋಸೈಕಾಲಜಿ)ನಿಮ್ಹಾನ್ಸ್;  ಡಾ.ಆನಂದ್ ಜಯರಾಮನ್ ಕನ್ಸಲ್ಟೆಂಟ್ ಸೈಕ್ರಿಯಾಟ್ರಿಸ್ಟ್ ಅ್ಯಂಡ್ ಪೈನ್ ಮ್ಯಾನೇಜ್ಮೆಂಟ್, ಜೆ ಐ ಎಸ್ ಎ ಆರ್, ಬೆಂಗಳೂರು ಇವರುಗಳು ನೀಡಿದ ಮಾಹಿತಿಯನ್ನು ಆಧರಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org