ನನಗೆ ಪಿ.ಸಿ.ಓ.ಎಸ್. ಸಮಸ್ಯೆ ಇದೆ ಮತ್ತು ತುಂಬಾ ಮೂಢಿಯಾಗಿದ್ದೇನೆ ಎಂದು ಅನಿಸುತ್ತದೆ. ಇದಕ್ಕೆ ಪರಿಹಾರವಿದೆಯೆ?

ಪಿ ಸಿ ಒ ಎಸ್ ಒಂದು ವಿಧದ ದೈಹಿಕ ಅಸ್ವಸ್ಥತೆಗಿಂತ ಹೆಚ್ಚಾಗಿದೆ ಮತ್ತು ಇದನ್ನು ಸ್ವಯಂ - ಆರೈಕೆಯಿಂದ ಸರಿಪಡಿಸಿಕೊಳ್ಳಬಹುದಾಗಿದೆ.

- ಡಾ. ಗರಿಮಾ ಶ್ರೀವಾಸ್ತವ.

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿ ಸಿ ಓ ಎಸ್) ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಪ್ರೌಢಾವಸ್ಥೆಯಲ್ಲಿ ಅವರ ದೇಹದಲ್ಲಿನ ಕೆಲವು ಹಾರ್ಮೋನ್ ಗಳಲ್ಲಾಗುವ ಬದಲಾವಣೆ. ಪಿ ಸಿ ಓ ಎಸ್ ಒಂದು ಬಗೆಯ ಲೈಂಗಿಕ ವ್ಯಾಧಿಯಾಗಿದೆ. ಆದರೆ, ಪಿ ಸಿ ಒ ಎಸ್ ಒಳಗಾಗಿರುವ ಎಲ್ಲಾ ಮಹಿಳೆಯರಲ್ಲೂ ವ್ಯಾಧಿಗೆ ಸಂಬಂಧಿಸಿದ ಎಲ್ಲಾ ಲಕ್ಷಣಗಳು ಕಂಡು ಬರುವುದಿಲ್ಲ.

ಪಿ ಸಿ ಓ ಎಸ್  ಋತುಚಕ್ರದಲ್ಲಿನ ಏರುಪೇರುಗಳು, ಅನಗತ್ಯವಾದ ಕೂದಲು ಬೆಳೆಯುವಿಕೆ, ಬೊಜ್ಜು, ಮೊಡವೆಗಳಾಗುವುದು, ಅಲೋಪೇಶಿಯಾ ಮುಂತಾದ ಗುಣಲಕ್ಷಣಗಳನ್ನುಹೊಂದಿರುತ್ತದೆ. ಪಿ ಸಿ ಓ ಎಸ್ ಹೊಂದಿರುವ ಮಹಿಳೆಯರಲ್ಲಿ ಸುಲಭವಾಗಿ ಗುರುತಿಸಲಾಗದ ಮತ್ತು ಗಮನಕ್ಕೆ ಬಾರದ ಅಂಶವೆಂದರೆ ಅವರು ಅನುಭವಿಸುವ ಮಾನಸಿಕ ತೊಂದರೆಗಳು.

ಪಿ ಸಿ ಓ ಎಸ್ ಉಂಟು ಮಾಡುವ ಮಾನಸಿಕ ಸಮಸ್ಯೆಗಳು

ಪಿ ಸಿ ಓ ಎಸ್’ನಿಂದಾಗಿ ಮಹಿಳೆಯರು ಅನುಭವಿಸುವ ಮಾನಸಿಕ ವ್ಯಾಧಿಗಳಾದ ಉದ್ವೇಗ, ಖಿನ್ನತೆ ಮುಂತಾದವುಗಳನ್ನು ಕಂಡುಹಿಡಿಯಲಾಗುವುದಿಲ್ಲ ಎಂದು ಅಧ್ಯಯನಗಳು ವರದಿ ಮಾಡಿವೆ. ಮನಸ್ಸು ಮತ್ತು ದೇಹ ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ ಒಂದರಲ್ಲಾಗುವ ಬದಲಾವಣೆ ಇನ್ನೊಂದರ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಪಿ ಸಿ ಓ ಎಸ್ ನಿಂದಾಗುವ ಕೆಲವು ಹಾರ್ಮೋನ್ ಗಳ ವ್ಯತ್ಯಯಗಳು ಮನಸ್ಸಿನ ಚಂಚಲತೆ ಅಥವಾ ಅಸ್ಥಿರವಾದ ಮನಸ್ಥಿತಿಗೆ ಕಾರಣವಾಗಬಹುದು ಮತ್ತು ಖಿನ್ನತೆಗೂ ದೂಡಬಹುದು.

ದೇಹದ ಮೇಲಾಗುವ ಪರಿಣಾಮವನ್ನು ಹೊರತುಪಡಿಸಿ ಪಿ ಸಿ ಓ ಎಸ್ ನಿಂದ ಮಾನಸಿಕವಾಗಿ, ಸಾಮಾಜಿಕವಾಗಿಯೂ ಹಲವು ಬಗೆಯಲ್ಲಿ ತೊಂದರೆಗಳಾಗುತ್ತವೆ. ಆದರೆ, ಕೆಲವು ನಿರ್ದಿಷ್ಟ ಕ್ರಮಗಳಿಂದ ಈ ತೊಂದರೆಗಳನ್ನು ಸಮರ್ಥವಾಗಿ ಎದುರಿಸುವ ಅವಕಾಶಗಳಿವೆ.

ಪಿ ಸಿ ಓ ಎಸ್ ಗಿರುವ ಚಿಕಿತ್ಸೆಗಳು ಏಕರೂಪವಾಗಿರುವುದಿಲ್ಲ. ಅವು ಮಹಿಳೆಯಿಂದ ಮಹಿಳೆಗೆ ವಿಭಿನ್ನವಾಗಿರುತ್ತವೆ. ಆದರೆ ಚಿಕಿತ್ಸೆಯ ಗುರಿ ಮಾತ್ರ ಈ ವ್ಯಾಧಿಯ ಸೂಕ್ತ ನಿರ್ವಹಣೆ ಮತ್ತು ನಿರ್ಮೂಲನೆ. ವ್ಯಾಧಿಯ ಗುಣಲಕ್ಷಣಗಳು ಹಾಗೂ ತೀವ್ರತೆಯನ್ನು ಗಮನಿಸಿ ವಿಭಿನ್ನ ಪ್ರಕಾರಗಳಲ್ಲಿ ಸೂಕ್ತ ಚಿಕಿತ್ಸೆಗಳನ್ನು ಸೂಚಿಸಬಹುದು. ಆರೋಗ್ಯಕರ ಜೀವನವನ್ನು ಗುರಿಯಾಗಿಟ್ಟುಕೊಂಡು ವ್ಯಕ್ತಿಗೆ ಸೂಕ್ತವಾದ ಶಿಕ್ಷಣ ಹಾಗೂ ಮಾರ್ಗದರ್ಶನ, ಬೆಂಬಲ ನೀಡುವುದರ ಮೂಲಕ ಚಿಕಿತ್ಸೆ ನೀಡಬೇಕು. ಔಷಧೀಯ ಪದ್ಧತಿಯನ್ನು ಹೊರತು ಪಡಿಸಿ, ಜೀವನಶೈಲಿಯ ಬದಲಾವಣೆ, ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ಧತಿಗಳಿಂದ ಪಿ ಸಿ ಓ ಎಸ್ ನಿಂದಾಗುವ ಕೆಲವು ತೊಂದರೆಗಳನ್ನು ನಿಯಂತ್ರಿಸಬಹುದು.

ಈ ವ್ಯಾಧಿಗೊಳಗಾಗಿರುವ ಮಹಿಳೆಯರಿಗೆ ನೀಡಬಹುದಾದ ಪ್ರಥಮ ಚಿಕಿತ್ಸೆಯೆಂದರೆ ಜೀವನ ಶೈಲಿಯ ಬದಲಾವಣೆ ಮತ್ತು ತೂಕ ಕಡಿಮೆ ಮಾಡಿಕೊಳ್ಳುವುದು. ದೇಹದ ತೂಕ ಕಡಿಮೆ ಮಾಡಿಕೊಳ್ಳುವುದರಿಂದ ಕೆಲವೊಂದು ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಆರೋಗ್ಯಕರ ಉತ್ತಮ ಜೀವನ ನಡೆಸಲೂ ಇದು ಸಹಕಾರಿ.

ಜೀವನಶೈಲಿಯ ಬದಲಾವಣೆ

ಪಿ ಸಿ ಓ ಎಸ್ ನ್ನು ಎದುರಿಸಲು ವ್ಯಾಯಾಮ ಮತ್ತು ಸರಿಯಾದ ಆಹಾರ ಪದ್ಧತಿಯ ಅಳವಡಿಕೆಗಳು ಪರಿಣಾಮಕಾರಿ ಮಾರ್ಗಗಳಾಗಿವೆ. ಕೇವಲ 5-10% ದೇಹದ ತೂಕ ಕಡಿಮೆಯಾಗುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸಕಾರಾತ್ಮಕ ಪರಿವರ್ತನೆಗಳಾಗುತ್ತವೆ. ವ್ಯಾಯಾಮದಿಂದ ದೇಹದ ಸಾಮರ್ಥ್ಯ ಅಧಿಕಗೊಳ್ಳುತ್ತದೆ. ಏರೋಬಿಕ್ಸ್  ಮತ್ತು ರೆಸಿಸ್ಟೆನ್ಸ್ ಟ್ರೈನಿಂಗನ್ನು ಒಳಗೊಂಡಿರುವ ವ್ಯಾಯಾಮ ಅತ್ಯುತ್ತಮ ಪರಿಣಾಮ ಬೀರಬಲ್ಲದು. ಖಿನ್ನತೆಯ ಲಕ್ಷಣಗಳು, ಉದ್ವೇಗ, ದೈಹಿಕ ನ್ಯೂನತೆ ಮತ್ತು ಕೀಳರಿಮೆ ಮುಂತಾದವುಗಳು ಪಿ ಸಿ ಓ ಎಸ್ ವ್ಯಾಧಿಯನ್ನು ಉಲ್ಬಣಗೊಳಿಸುತ್ತವೆ. ಈಗಾಗಲೇ ಹೇಳಿದಂತೆ, ಈ ವ್ಯಾಧಿಯನ್ನು “ಬಯೋಸೈಕೋಸೋಷಿಯಲ್” (ಮನೋದೈಹಿಕಸಾಮಾಜಿಕ ಕಾಯಿಲೆ) ಎಂದು ಅರ್ಥೈಸಬಹುದಾಗಿದೆ. ಆದ್ದರಿಂದ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಕಂಡು ಬರುವ ಕೆಲವು ಗುಣಲಕ್ಷಣಗಳನ್ನು ಗಮನಿಸಿದರೆ ಈ ವ್ಯಾಧಿಯನ್ನು ಎದುರಿಸಲು ನಮ್ಮ ಸುತ್ತಲಿನವರ ಸಹಾಯ ಪಡೆದುಕೊಳ್ಳುವುದು ಅತಿ ಮುಖ್ಯ.

ಬಹುತೇಕ ಮಹಿಳೆಯರು, ತಮ್ಮ ಕುಟುಂಬದವರು ಪಿ ಸಿ ಓ ಎಸ್ ವ್ಯಾಧಿಯ ಗುಣಲಕ್ಷಣಗಳನ್ನು ಲಘುವಾಗಿ ಪರಿಗಣಿಸುತ್ತಾರೆ ಎಂದು ದೂರುತ್ತಾರೆ. ಇನ್ನೊಂದೆಡೆ, ಕೆಲವು ಮಹಿಳೆಯರು ಈ ವ್ಯಾಧಿಯ ದುಷ್ಪರಿಣಾಮಗಳಿಂದಾಗಿ ಗರ್ಭ ಧರಿಸಲು ಸಾಧ್ಯವಾಗದೆ ಬಂಜೆ ಎಂದು ನಿಂದಿಸಲ್ಪಡುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆ ಮತ್ತು ಅವರ ಕುಟುಂಬ ವರ್ಗದವರು ಈ ವ್ಯಾಧಿಯ ಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಅಗತ್ಯವಿದ್ದರೆ ವೈದ್ಯರ ಅಥವಾ ಆಪ್ತಸಮಾಲೋಚಕರ ಸಲಹೆ ಪಡೆದುಕೊಳ್ಳಬೇಕು; ಹಾಗೂ ಪಿ ಸಿ ಓ ಎಸ್ ಬಗ್ಗೆ ಇರುವ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು.

  •  ಪಿ ಸಿ ಓ ಎಸ್ ವ್ಯಾಧಿಗೊಳಗಾಗಿರುವ ಮಹಿಳೆಯರು ಮಾನಸಿಕ ಖಿನ್ನತೆಗೊಳಗಾಗಿರುತ್ತಾರೆ ಆದ್ದರಿಂದ ಅವರಿಗೆ ಕುಟುಂಬದವರ, ಮಿತ್ರರ ಸೂಕ್ತ ಬೆಂಬಲ ಹಾಗೂ ಸಹಾಯ ಅವಶ್ಯವಾಗಿರುತ್ತದೆ.
  •  ಪಿ ಸಿ ಓ ಎಸ್ ನ ನಿರ್ವಹಣೆಯಲ್ಲಿ ತಜ್ಞವೈದ್ಯರ ಮತ್ತು ಗರ್ಭಕೋಶ ತಜ್ಞರ ಪಾತ್ರ ಪ್ರಮುಖವಾದದ್ದು. ವೈದ್ಯರು ಬಾಧಿತ ಮಹಿಳೆಗೆ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಪಿ ಸಿ ಓ ಎಸ್ ಬಗ್ಗೆ ಮತ್ತು ಕೊಡಲಿರುವ ಚಿಕಿತ್ಸೆಯ ಬಗ್ಗೆ ಸರಿಯಾದ ತಿಳುವಳಿಕೆ ನೀಡಬೇಕು; ಹಾಗೂ ಚಿಕಿತ್ಸೆಯ ಪ್ರತಿ ಹಂತದಲ್ಲಿಯೂ ಮಹಿಳೆಗೆ ಸಹಕಾರ ನೀಡಬೇಕು.
  •  ಪಿ ಸಿ ಓ ಎಸ್ ನ ಸಮರ್ಪಕ ನಿರ್ವಹಣೆಗಾಗಿ ಮನಃಶಾಸ್ತ್ರಜ್ಞರ ಮತ್ತು ಆಪ್ತಸಮಾಲೋಚಕರ ಅಗತ್ಯದ ಬಗ್ಗೆ ಇತ್ತೀಚಿನ ಕೆಲವು ಅಧ್ಯಯನಗಳು ಹೆ್ಚ್ಚು ಗಮನ ನೀಡುತ್ತಿವೆ.
  •  ಪಿ ಸಿ ಓ ಎಸ್ ನ ನಿರ್ವಹಣೆಯಲ್ಲಿ ಸ್ವಯಂ ಆರೈಕೆಯೂ ಗಣನೀಯವಾದದ್ದು. ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೂ ಗಮನಹರಿಸಬೇಕು. ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲಿಯೂ ಈ ವ್ಯಾಧಿಗೊಳಗಾಗಿರುವ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಆನ್ ಲೈನ್ ಸಪೋರ್ಟ್ ಗ್ರೂಪ್ ಗಳನ್ನು ರಚಿಸಲಾಗಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.

ಆದಾರ: 1.ವಿಲಿಯಮ್ಸ್,ಶೆಫೆಲ್ಡ್ ಮತ್ತು ನಿಬ್ 2015

2.https://www.ncbi.nlm.nih.gov/pmc/articles/pmc1069067/

3.https://www.womenshealth.gov/files/assets/does/fact-sheets/polycystic-ovary-syndrome.pdf

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org