ಟೀಕೆಗಳು ನನ್ನ ದೇಹವನ್ನು ನಾನು ಪ್ರೀತಿಸದಂತೆ ಮಾಡಿದವು

24 ವರ್ಷದ ಯುವತಿ

ನಾನು ಚಿಕ್ಕವಳಿರುವಾಗಿಂದಲೂ ದೊಡ್ಡ ತಿಂಡಿಪೋತಿ. ನಾನು ಚೆನ್ನಾಗಿ ತಿನ್ನಲು ಆರಂಭಿಸಿದ್ದು 8 ವರ್ಷ ತುಂಬಿದ ನಂತರದಿಂದ. ಕ್ರಮೇಣ (ಬಹುತೇಕ 10ನೇ ವರ್ಷಕ್ಕೆ ಕಾಲಿಟ್ಟ ವೇಳೆ) ನನ್ನ ತೂಕ ಹೆಚ್ಚುತ್ತಾ ಹೋಯಿತು. ನನ್ನ ಸುತ್ತಮುತ್ತಲಿನವರು ಅದನ್ನು ಎತ್ತಿ ಆಡತೊಡಗಿದರು. ಆ ದಿನಗಳಲ್ಲಿ ನನಗೆ ಮಾಡೆಲ್ ಆಗುವ ಮತ್ತು ಮಿಸ್ ಯೂನಿವರ್ಸ್ ಕಿರೀಟ ತೊಡುವ ಕನಸಿತ್ತು. ಅದು ಸಾಧ್ಯವಾಗಬೇಕೆಂದರೆ ತೆಳ್ಳಗೆ ಬಳಕುವ ಬಳ್ಳಿಯಂತಿರಬೇಕು, ಸುಂದರವಾಗಿರಬೇಕು ಎಂದು ನನಗೆ ಹೇಳಲಾಯ್ತು. ಆದರೆ ನಾನು ತದ್ವಿರುದ್ದವಾಗಿದ್ದೆ.

ಈಗ ಆ ಬಗ್ಗೆ ಯೋಚಿಸಿದರೆ, ನಾನು ಕುರೂಪಿಯೇನೂ ಆಗಿರಲಿಲ್ಲ. ಚೆನ್ನಾಗಿಯೇ ಇದ್ದೆ. ಆದರೆ ಕುಟುಂಬದವರು ಹಾಗೂ ಗೆಳೆಯರು ನನ್ನ ತೂಕದ ಬಗ್ಗೆ ಮೇಲಿಂದ ಮೇಲೆ ಟೀಕೆಗಳನ್ನು ಮಾಡುತ್ತಿದ್ದುದು ನನ್ನನ್ನು ವಿಚಲಿತಗೊಳಿಸಿತ್ತು. ಮತ್ತು ನನ್ನ ದೇಹವನ್ನು ನಾನೇ ಇಷ್ಟಪಡದೆ ಇರುವಂತೆ ಮಾಡಿತ್ತು. ನನಗೆ ಚೆನ್ನಾಗಿ ನೆನಪಿದೆ. ಅವರು ನನ್ನೆದುರು ಇದ್ದಾಗ ನನ್ನ ದೇಹದ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಿದ್ದೆ. ಕ್ರಮೇಣ ನನಗೆ ನನ್ನ ದೇಹವೇ ಒಂದು ಹೊರೆ ಅನ್ನಿಸತೊಡಗಿತು. ನಾನು 12ನೇ ವರ್ಷದವಳಾಗಿದ್ದಾಗ ನನ್ನ ಪೋಷಕರು ಡಿಟಾಕ್ಸ್ ಚಿಕಿತ್ಸೆ ಪಡೆಯುತ್ತಿದ್ದರು.

ಯೋಗ ಮತ್ತು ಡಯೆಟಿಂಗ್ ಕೂಡ ಅದರ ಭಾಗವಾಗಿದ್ದವು. ನನ್ನನ್ನೂ ಅದಕ್ಕೆ ಸೇರಿಸಲಾಯ್ತು. ಮುಂದಿನ ಕೆಲವು ತಿಂಗಳಲ್ಲಿ ನಾನು 12ರಿಂದ 13 ಕೆಜಿ ತೂಕ ಇಳಿಸಿದೆ. ಆದರೆ ಅದರೊಟ್ಟಿಗೆ ನನ್ನ ತಲೆಗೂದಲೂ ಉದುರಲಾರಂಭಿಸಿತು. ನನ್ನ ಶಾಲಾ ದಿನಗಳುದ್ದಕ್ಕೂ ‘ಡುಮ್ಮಿ’ ಅನ್ನಿಸಿಕೊಂಡೇ ಬಂದವಳು. ಈಗಲೂ ಅಭ್ಯಾಸ ಬಲದಿಂದ ಕೆಲವರು ಹಾಗೆಯೇ ಕರೆಯುತ್ತಾರೆ. ನಂತರದ ದಿನಗಳಲ್ಲಿ ನನ್ನ ದೇಹ ಸಾಕಷ್ಟು ಕರಗಿ ತೆಳ್ಳಗಾದರೂ ನನಗೆ ಸಮಾಧಾನ ಆಗಲಿಲ್ಲ. ನನ್ನ ದೇಹ ಮತ್ತು ರೂಪದ ಬಗ್ಗೆ ನನಗೆ ತೃಪ್ತಿಯೇ ಇರಲಿಲ್ಲ. ನಾನು ನಡೆಯುವ ಬಗೆಯನ್ನು ಗೆಳತಿಯರು ಆಡಿಕೊಂಡು ನಗುತ್ತಿದ್ದರು. ಆದ್ದರಿಂದ ನಾನು ಆ ಕುರಿತಾಗಿಯೂ ಹೆಚ್ಚು ಕಾಳಜಿ ವಹಿಸತೊಡಗಿದೆ.

ಕಾಲೇಜಿಗೆ ಸೇರಿದ ನಂತರ ನನ್ನ ತೂಕ ಮತ್ತೆ ವಿಪರೀತ ಹೆಚ್ಚಾಯಿತು. ಪದೇ ಪದೇ ತೂಕ ಹೆಚ್ಚುವುದು, ಕಳೆಯುವುದು ನನ್ನಲ್ಲಿ ಉದ್ವಿಗ್ನತೆಯನ್ನು ಹುಟ್ಟಿಸಿತು. ನನ್ನ ದೇಹದ ಬಗ್ಗೆ ಅಸಮಾಧಾನ ಉಂಟಾಯಿತು. ನಾನು ಖಿನ್ನಳಾಗುತ್ತಾ ಹೋದೆ. ಮುಂದೊಮ್ಮೆ ನನಗೆ ನಾನು PCOD ಇಂದ ಬಳಲುತ್ತಿದ್ದೇನೆ ಎನ್ನುವುದು ತಿಳಿದುಬಂತು. ನನ್ನಲ್ಲಿ ಉದ್ವೇಗ ಹಾಗೂ ಖಿನ್ನತೆಯ ಲಕ್ಷಣಗಳು ತೋರತೊಡಗಿದವು. ನನ್ನ ತಾಯಿ ಒಬ್ಬ ಪರಿಪೂರ್ಣತೆಯನ್ನು ಬಯಸುವ ವ್ಯಕ್ತಿ.

ಅವರ ನಿರೀಕ್ಷೆಯ ಮಟ್ಟ ತಲುಪಲಾಗದೆ ನನಗೆ ನಾನು ಒಳ್ಳೆಯ ಮಗಳಲ್ಲ ಅನ್ನುವ ಭಾವನೆ ಉಂಟಾಗತೊಡಗಿತು. ಬೆಳವಣಿಗೆ ಎಂದರೆ ಮೇಲ್ಮುಖದ ಚಲನೆಯಷ್ಟೇ ಅಲ್ಲ, ಸಮಗ್ರ ವಿಕಸನ ಅನ್ನುವುದನ್ನು ಅವರು ಮರೆತಂತಿತ್ತು. ಇದರಿಂದಾಗಿ ನಾನು ತೀವ್ರ ಆತಂಕಕ್ಕೆ ಒಳಗಾದೆ. ಇದರಿಂದ ಹೊರಬರಲು ಆಪ್ತ ಸಮಾಲೋಚಕರ ಮೊರೆ ಹೋದೆ. ಅವರು ನನಗೆ ‘ಸ್ಟ್ರೆಸ್ ಈಟಿಂಗ್’ ವ್ಯಸನವಿದೆಯೇ ಎಂದು ಕೇಳಿದರು. ಹೌದು. ನಾನು ಖಿನ್ನತೆಗೆ ಒಳಗಾದಾಗೆಲ್ಲ ವಿಪರೀತ ತಿನ್ನುತ್ತಿದ್ದೆ.

ಇದರಿಂದ ಹೊರಗೆ ಬರಲು ನನಗೆ ಸಹಾಯ ಮಾಡಿದ್ದೇನು ಗೊತ್ತೇ? ವೃತ್ತಿಪರ ಆಪ್ತಸಮಾಲೋಚಕರ ಚಿಕಿತ್ಸೆಯ ಜೊತೆ, ನನ್ನ ಆಪ್ತ ಗೆಳತಿಯೊಬ್ಬಳ ಅನುಭವ. ಹೌದು. ಬಹಳ ಚೆಂದವಿದ್ದ ಈ ನನ್ನ ಗೆಳತಿ ತಾನು ದಪ್ಪವಿದ್ದೇನೆಂದು ಕೊರಗುತ್ತಿದ್ದಳು. ಅವಳಿಗೆ ಆಕೆಯ ಸುತ್ತಲಿನವರು ‘ಸ್ವಲ್ಪ ಮೈ ಇಳಿಸು’, ‘ತೆಳ್ಳಗಾಗು’, ‘ದೇಹದ ಶೇಪ್ ಹೀಗಿಟ್ಟುಕೋ’ ಎಂದೆಲ್ಲ ಪದೇಪದೇ ಹೇಳುತ್ತಿದ್ದರು.

ಇದು ಅವಳನ್ನು ಖಿನ್ನತೆಗೆ ನೂಕಿತ್ತು. ಅವಳ ಸಮಸ್ಯೆ ಏನೆಂದು ಅರ್ಥವಾದ ಮೇಲೆ ನನಗೆ ನನ್ನ ಸಮಸ್ಯೆ ಅರ್ಥವಾಯಿತು. ನಮ್ಮ ಸುತ್ತಲಿನವರು ನಮ್ಮ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರುತ್ತಾರೆ. ಸಕಾರಾತ್ಮಕವೋ ನಕಾರಾತ್ಮಕವೋ… ಅವರು ನಮ್ಮನ್ನು ನಿರ್ದಿಷ್ಟ ರೀತಿಯಲ್ಲಿ ನೋಡಲುಬಯಸುತ್ತಾರೆ.

ಹಾಗೆಂದು ನಾವು ಪ್ರತಿಯೊಬ್ಬರ ತಾಳಕ್ಕೆ ತಕ್ಕಂತೆ ಕುಣಿಯಲು ಸಾಧ್ಯವಿಲ್ಲ. ಅವರಿಗಾಗಿ ನಾವು ನಮ್ಮ ದೇಹವನ್ನು, ರೂಪವನ್ನು ಬದಲಿಸಿಕೊಳ್ಳಬೇಕಿಲ್ಲ. ನಾವು ಹೇಗೆ ಹುಟ್ಟಿದ್ದೇವೆಯೋ ಹಾಗೆಯೇ ಸರಿ ಇದ್ದೇವೆ. ಅದನ್ನು ನಾವು ಒಪ್ಪಿಕೊಂಡು ಬಾಳಬೇಕು.

ವೈಟ್ ಸ್ವಾನ್ ಫೌಂಡೇಶನ್ ಬಳಿ ಹೇಳಿಕೊಂಡಂತೆ; ಗೌಪ್ಯತೆ ಕಾಪಾಡಲು ಹೆಸರನ್ನು ಪ್ರಕಟಿಸಲಾಗಿಲ್ಲ.

Was this helpful for you?