ದೇಹದಲ್ಲಿ ನೋವು ಯಾವುದೇ ಸ್ಪಷ್ಟ ಕಾರಣಗಳಿಲ್ಲದೇ, ಆಗಾಗ ದೇಹದಲ್ಲಿ ನೋವು, ತಲೆನೋವು, ಕತ್ತಿನ ಭಾಗದಲ್ಲಿ ನೋವು ಹಾಗೂ ಸ್ನಾಯು ಸೆಳೆತವು ಕಾಣಿಸಿಕೊಳ್ಳುತ್ತದೆ.
ದೇಹದಲ್ಲಿ ನೋವು ಯಾವುದೇ ಸ್ಪಷ್ಟ ಕಾರಣಗಳಿಲ್ಲದೇ, ಆಗಾಗ ದೇಹದಲ್ಲಿ ನೋವು, ತಲೆನೋವು, ಕತ್ತಿನ ಭಾಗದಲ್ಲಿ ನೋವು ಹಾಗೂ ಸ್ನಾಯು ಸೆಳೆತವು ಕಾಣಿಸಿಕೊಳ್ಳುತ್ತದೆ.

ದೈಹಿಕ ಅನಾರೋಗ್ಯದಿಂದ ಉಂಟಾಗುವ ಖಿನ್ನತೆಯ ಲಕ್ಷಣಗಳು

ಕೆಲವು ಬಗೆಯ ದೈಹಿಕ ಅನಾರೋಗ್ಯಗಳಲ್ಲಿಯೂ ಖಿನ್ನತೆಯ ಲಕ್ಷಣಗಳು ಕಂಡುಬರುವುದುಂಟು.

ಆಯಾಸ, ತಪ್ಪಿತಸ್ಥ ಮನೋಭಾವ, ನಿಷ್ಪ್ರಯೋಜಕತೆಯ ಅಳುಕು, ಕಿರಿಕಿರಿ, ನಿದ್ರಾಹೀನತೆ, ಹಸಿವಾಗದಿರುವಿಕೆ, ಆಹಾರ ಸೇರದೆ ಇರುವುದು, ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿ, ವಿಷಾದ ಮನೋಭಾವ – ಇವೆಲ್ಲವೂ ಖಿನ್ನತೆಯ ಗುಣ ಲಕ್ಷಣಗಳು. ಕೆಲವೊಮ್ಮೆ ವ್ಯಕ್ತಿಯು ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಾಗ ಇವು ಕಾಣಿಸಿಕೊಳ್ಳುವುದುಂಟು. ಕೆಲವು ಸಂದರ್ಭಗಳಲ್ಲಿ ಖಿನ್ನತೆಯು ಸ್ವತಃ ರೋಗವಾಗಿರದೆ, ಮತ್ತೊಂದು ರೋಗದ ಲಕ್ಷಣವಾಗಿರುತ್ತದೆ.

ನಿಮ್ಹಾನ್ಸ್ ನ ಸೈಕಿಯಾಟ್ರಿಕ್ ರಿಹ್ಯಾಬಿಲಿಟೇಶನ್ ಸರ್ವಿಸಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಕೃಷ್ಣ ಪ್ರಸಾದ್ ಹೇಳುವಂತೆ, “ದೈಹಿಕ ಆರೋಗ್ಯ ಹಾಗೂ ಖಿನ್ನತೆಯ ನಡುವೆ ಸಂಬಂಧವಿದೆ. ಬೇಗ ಸುಸ್ತಾಗುವುದು, ಮೈಕೈ ನೋವು ಮೊದಲಾದ ಖಿನ್ನತೆಯ ಲಕ್ಷಣಗಳಂತೆ ತೋರುವ ಸಂಗತಿಗಳು ದೈಹಿಕ ಕಾಯಿಲೆಯ ಲಕ್ಷಣಗಳಾಗಿರುತ್ತವೆ. ದೇಹದಲ್ಲಿ ಇರಬಹುದಾದ ನ್ಯೂನತೆಗಳಿಂದ ಹೀಗಾಗುತ್ತದೆ.

ಹೈಪೋಥೈರಾಯ್ಡಿಸಮ್, ಅನೀಮಿಯಾ, ವಿಟಮಿನ್ ಕೊರತೆಗಳೇ ಮೊದಲಾದ ದೇಹಾರೋಗ್ಯ ಸಮಸ್ಯೆಗಳು ಇರುವಾಗ ಇಂಥ ಗುಣಲಕ್ಷಣಗಳು ಕಂಡುಬರುತ್ತವೆ”. ನೀವು ಕಾಣುವ ವೈದ್ಯರು (ಫಿಸಿಶಿಯನ್ ಅಥವಾ ಸೈಕಿಯಾಟ್ರಿಸ್ಟ್) ನಿಮ್ಮ ಖಿನ್ನತೆಯ ಲಕ್ಷಣಗಳನ್ನು ಕೇಳಿದರೆ ನಿಮಗೆ ಯಾವುದೇ ಬಗೆಯ ದೈಹಿಕ ಅನಾರೋಗ್ಯ ಇರುವುದನ್ನು ಅಲ್ಲಗಳೆಯುವ ಸಾಧ್ಯತೆಯೇ ಹೆಚ್ಚು.

ಕೆಲವು ಸಂಶೋಧನೆಗಳು ಖಿನ್ನತೆಯ ಲಕ್ಷಣಗಳನ್ನು ತೋರುವ ದೈಹಿಕ ಅನಾರೋಗ್ಯಗಳನ್ನು ಪಟ್ಟಿ ಮಾಡಿದ್ದು, ಅವು ಇಲ್ಲಿವೆ:

  •  ಹೈಪೋಥೈರಾಯ್ಡಿಸಮ್ (30ರಿಂದ 40 ವಯಸ್ಸಿನವರೆಗಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ ಕಾಯಿಲೆ): ಮಂದಗತಿಯ ಥೈರಾಯ್ಡ್ ಹಾರ್ಮೋನ್ ಸ್ರಾವವು ಆಯಾಸ, ತೂಕದಲ್ಲಿ ಹೆಚ್ಚಳ, ನೆನಪಿನ ಶಕ್ತಿ ಕುಂದುವಿಕೆ, ಅತಿನಿದ್ರೆ, ಮನಸ್ಥಿತಿಯಲ್ಲಿ ಏರುಪೇರು ಅಥವಾ ವಿಷಾದ ಭಾವಗಳ ಲಕ್ಷಣವನ್ನು ತೋರುತ್ತವೆ.
  •  ಹೈಪೋಗ್ಲೈಕೇಮಿಯ (ಬಹುತೇಕವಾಗಿ ಜಡವಾದ ಜೀವನಶೈಲಿಯನ್ನು ಹೊಂದಿದ್ದು, ಅಶಿಸ್ತಿನ ಆಹಾರಸೇವನೆ ಹಾಗೂ ಆನುವಂಶಿಕ ಸಮಸ್ಯೆಗಳನ್ನು ಹೊಂದಿರುವ ಜನರಲ್ಲಿ ಇದು ಕಂಡುಬರುತ್ತದೆ): ಈ ಕಾಯಿಲೆ ಇರುವವರ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು, ಆಯಾಸ, ಸುಸ್ತು ಹಾಗೂ ಗೊಂದಲದ ಲಕ್ಷಣಗಳು ಕಂಡುಬರುತ್ತವೆ.
  • ಅನೀಮಿಯ ಅಥವಾ ಕಬ್ಬಿಣಾಂಶ ಕೊರತೆ (ಋತುಸ್ರಾವ ಹೆಚ್ಚಿರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ): ವಿಪರೀತ ಆಯಾಸ, ತೂಕದಲ್ಲಿ ಇಳಿಕೆ, ಏಕಾಗ್ರತೆಯ ಕೊರತೆ ಹಾಗೂ ನಿದ್ರಾಹೀನತೆ.
  • ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ (ಸಸ್ಯಾಹಾರವನ್ನಷ್ಟೆ ಸೇವಿಸುವವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ): ವಿಟಮಿನ್ ಬಿ ಕಾಂಫ್ಲೆಕ್ಸ್ (B12) ಕೊರತೆಯಿಂದಾಗಿ ಆಯಾಸ, ಅಂಗಾಂಗಳಲ್ಲಿ ನೋವು, ಹಸಿವು ಕಡಿಮೆಯಾಗುವುದು, ಮನಸ್ಥಿತಿಯಲ್ಲಿ ಏರುಪೇರು ಮತ್ತು ಕಿರಿಕಿರಿಗೊಳ್ಳುವುದು.
  •  ಫೋಲಿಕ್ ಆಸಿಡ್ ಕೊರತೆ (ಹಣ್ಣು ಮತ್ತು ತರಕಾರಿಗಳನ್ನು ತಿನ್ನದ ಅಥವಾ ಬಹಳ ಅಪರೂಪಕ್ಕೆ ಬಳಸುವ ಜನರಲ್ಲಿ ಕಂಡುಬರುತ್ತದೆ): ಫೊಲೇಟ್ ಅಥವಾ ಫೋಲಿಕ್ ಆಸಿಡ್ ಕೊರತೆಯಿಂದಾಗಿ ಆಯಾಸ, ಅತಿ ನಿದ್ರೆ, ಮನಸ್ಥಿತಿಯಲ್ಲಿ ಏರುಪೇರು ಮತ್ತು ಕಿರಿಕಿರಿ ಉಂಟಾಗುತ್ತವೆ.
  •  ವಿಟಮಿನ್ ಡಿ ಕೊರತೆ (ಸಾಮಾನ್ಯವಾಗಿ ವಯೋವೃದ್ಧರಲ್ಲಿ, ಅದರಲ್ಲೂ ಬಿಸಿಲಿಗೆ ಹೆಚ್ಚು ಮೈಯೊಡ್ಡದ ವೃದ್ಧರಲ್ಲಿ ಕಾಣಿಸಿಕೊಳ್ಳುತ್ತದೆ. ಹಾಲು ಕುಡಿಯದೆ ಇರುವುದೇ ಮೊದಲಾದ ಅಪೌಷ್ಟಿಕ ಆಹಾರ ಪದ್ಧತಿಯೂ ಇದಕ್ಕೆ ಕಾರಣವಾಗುತ್ತದೆ): ಹೇಳತೀರದ ಸುಸ್ತು, ಮೈಕೈ ನೋವು ಹಾಗೂ ಸ್ಪಷ್ಟ ಆಲೋಚನೆ ಸಾಧ್ಯವಾಗದೆ ಹೋಗುವುದು.

ರೋಗಿಯಲ್ಲಿ ಖಿನ್ನತೆ ಯಾವ ಪ್ರಮಾಣದಲ್ಲಿದೆ ಎಂದು ಅಳೆಯಲು ಮಾನಸಿಕ ಆರೋಗ್ಯ ತಜ್ಞರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳರೆಡರ ಕುಲಂಕುಶ ಪರಿಶೀಲನೆ ನಡೆಸುತ್ತಾರೆ. ದೈಹಿಕ ಪರಿಶೀಲನೆಯಲ್ಲಿ ಬಾಡಿ ಮಾಸ್ ಇಂಡೆಕ್ಸ್ (ಭೌತಿಕ ದ್ರವ್ಯರಾಶಿ ಸೂಚಿ) ಮಾಪನ, ಪಲ್ಸ್ ಹಾಗೂ ರಕ್ತದೊತ್ತಡದ ಪ್ರಮಾಣ, ಉಸಿರಾಟದ ಪ್ರಮಾಣ, ಮತ್ತಿತರ ದೈಹಿಕ ಕ್ರಿಯೆಗಳನ್ನು ಅಭ್ಯಸಿಸುತ್ತಾರೆ. ಹಾಗೂ ನಿಮಗೆ ಏನಾದರೂ ದೈಹಿಕ ಕಾಯಿಲೆ ಇದೆಯೇ ಎಂದು ಪತ್ತೆ ಹಚ್ಚಲು ರಕ್ತ ಪರೀಕ್ಷೆ ಮಾಡಿಸಲು ಕೂಡಾ ಸೂಚಿಸುತ್ತಾರೆ.

ಹೀಗೆ ಸೂಚಿಸುವ ಬ್ಲಡ್ ಟೆಸ್ಟ್’ನಲ್ಲಿ ಈ ಕೆಳಗಿನ ಅಂಶಗಳ ಮಾಪನ ಮಾಡಲಾಗುತ್ತದೆ:

  •  ಥೈರಾಯ್ಡ್ ಹಾರ್ಮೋನ್ ಹಾಗೂ ರಕ್ತದಲ್ಲಿ TSH ಮಟ್ಟ - ಈ ಮೂಲಕ ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾಯ್ಡಿಸಮ್ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ.
  •  ವಿಟಮಿನ್ ಬಿ ಕಾಂಪ್ಲೆಕ್ಸ್, ಫೋಲಿಕ್ ಆಸಿಡ್, ಐರನ್, ವಿಟಮಿನ್ ಡಿ ಇತ್ಯಾದಿಗಳ ಪ್ರಮಾಣ – ಈ ಮೂಲಕ ದೇಹದಲ್ಲಿ ಪೌಷ್ಠಿಕತೆಯ ಕೊರತೆ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ.
  •  ರಕ್ತದಲ್ಲಿ ಸಕ್ಕರೆ ಅಂಶದ ಪ್ರಮಾಣ - ಈ ಮೂಲಕ ಹೈಪೋಗ್ಲೈಕೇಮಿಯ ಮತ್ತು ಡಯಾಬಿಟೀಸ್ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ.

ಮೇಲೆ ಹೇಳಿದ ಕಾಯಿಲೆಗಳಲ್ಲಿ ಬಹುಪಾಲು ಸುಲಭ ಚಿಕಿತ್ಸೆಯಿಂದ ಗುಣ ಆಗುವಂಥವು. ಅದಕ್ಕಾಗಿ ನೀವು ರಕ್ತ ಪರೀಕ್ಷೆಯ ನಂತರ ಜನರಲ್ ಫಿಸಿಶಿಯನ್ ಅಥವಾ ಸ್ಪೆಶಲಿಸ್ಟ್’ಗಳನ್ನು ಭೇಟಿ ಮಾಡಿ ಮುಂದುವರೆಯಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸೂಕ್ತ ಚಿಕಿತ್ಸೆ ದೊರೆತ ಬಳಿಕವೂ ನಿಮ್ಮಲ್ಲಿ ಅವೇ ಗುಣಲಕ್ಷಣಗಳು ಕಂಡುಬಂದರೆ, ಆಗ ನೀವು ಮಾನಸಿಕ ಆರೋಗ್ಯ ಪರಿಣಿತರನ್ನು ಸಂಪರ್ಕಿಸುವ ಅಗತ್ಯ ಬೀಳುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org