ಸಂದರ್ಶನ : ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಮಹಿಳೆಯರ ದೌರ್ಬಲ್ಯ

ಸಂದರ್ಶನ : ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಮಹಿಳೆಯರ ದೌರ್ಬಲ್ಯ

ಮಹಿಳೆಯರ ಮಾನಸಿಕ ಅನಾರೋಗ್ಯ ಹದಗೆಡಲು ಹಲವು ಕಾರಣಗಳಿವೆ. ಈ ಹಿನ್ನೆಲೆಯಲ್ಲಿ ವೈಟ್ ಸ್ವಾನ್ ಫೌಂಡೇಶನ್’ನ ಮುಖ್ಯಸ್ಥರಾದ ಸುಬ್ರೊತೊ ಬಾಗ್ಚಿ ಅವರು ಡಾ.ಪ್ರಭಾ ಎಸ್ ಚಂದ್ರ ಅವರ ಸಂದರ್ಶನ ನಡೆಸಿದ್ದು, ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಖಿನ್ನತೆ ಮತ್ತು ಸಾಮಾಜಿಕ ಸಂಗತಿಗಳ ಕುರಿತು ಚರ್ಚಿಸಿದ್ದಾರೆ. ‘ನ್ಯೂ ಡೈಮೆನ್ಶನ್’ ನಲ್ಲಿ ನಡೆಸಿದ ಈ ಸಂದರ್ಶನದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

ಡಾ.ಪ್ರಭಾ ಚಂದ್ರ, Nimhansನಲ್ಲಿ ಸೈಕಿಯಾಟ್ರಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಹಾಗೂ ಇಂಟರ್’ನ್ಯಾಶನಲ್ ಅಸೋಸಿಯೇಶನ್ ಫಾರ್ ವಿಮೆನ್ಸ್ ಮೆಂಟಲ್ ಹೆಲ್ತ್’ನ ಕಾರ್ಯದರ್ಶಿಯೂ ಆಗಿದ್ದಾರೆ.

ಸುಬ್ರತೊ ಬಾಗ್ಚಿ: ಮಹಿಳೆಯರ ಮಾನಸಿಕ ಆರೋಗ್ಯದ ಕುರಿತು ನಮ್ಮೊಂದಿಗೆ ಮಾತನಾಡಲು ಬಂದಿರುವ ನಿಮಗೆ ಸ್ವಾಗತ. ಇಲ್ಲಿಗೆ ಬರುವ ಮೊದಲು ನಿಮ್ಮ ದಿನ ಹೇಗಿತ್ತು?

ಡಾ.ಪ್ರಭಾ ಚಂದ್ರ : ಈ ದಿನ ಬ್ಯುಸಿಯಾಗಿದ್ದೆ. 4 ವಿಭಿನ್ನ ಸಮಸ್ಯೆಗಳ ಮಹಿಳೆಯರ ತಪಾಸಣೆ ನಡೆಸುವುದಿತ್ತು. ಮೊದಲನೆಯದಾಗಿ, ಬೌದ್ಧಿಕ ಸಾಮರ್ಥ್ಯವಿಲ್ಲದ ತರುಣಿಯೊಬ್ಬಳನ್ನು ಅವಳ ಪೋಷಕರು ಕರೆತಂದಿದ್ದರು. ಆ ಹುಡುಗಿಗೆ ಮದುವೆ ಮಾಡಲು ಯೋಚಿಸಿರುವ ಹಿನ್ನೆಲೆಯಲ್ಲಿ ಚರ್ಚೆ ಮಾಡಲು ಅವರು ಬಂದಿದ್ದರು. ಎರಡನೆಯದಾಗಿ ಮಾನಸಿಕ ತೊಂದರೆ ಅನುಭವಿಸುತ್ತಿರವ ಸಾಫ್ಟ್’ವೇರ್ ಇಂಜಿನಿಯರ್ ಒಬ್ಬರು ಬಂದಿದ್ದರು. ಅವರು ಲೈಂಗಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಬ್ಬರಿಗೆ ಈ ಹಿಂದೆ ಖಿನ್ನತೆ ಸಮಸ್ಯೆ ಇದ್ದು, ಈಗ ಗರ್ಭ ಧರಿಸುವ ಯೋಚನೆ ಮಾಡುತ್ತಿದ್ದಾರೆ. ಇದರಿಂದ ಏನಾದರೂ ಸಮಸ್ಯೆಯಾಗಬಹುದೆ ಎಂದು ಚರ್ಚಿಸಲು ತಮ್ಮ ಪತಿಯೊಡನೆ ಬಂದಿದ್ದರು. ಒಟ್ಟಾರೆ ಈ ದಿನ ನನ್ನ ಪಾಲಿಗೆ ಬಿಡುವಿಲ್ಲದ ದಿನವಾಗಿತ್ತು.

ಎಸ್.ಬಿ : ನಾಲ್ಕನೆಯ ಪೇಶೆಂಟ್ ಕುರಿತು ಹೇಳಲಿಲ್ಲ…

ಪಿ.ಸಿ : ಅವರು ಈಟಿಂಗ್ ಡಿಸಾರ್ಡರ್ (ತಿನ್ನುವ ಸಮಸ್ಯೆ) ಎದುರಿಸುತ್ತಿದ್ದಾರೆ.

ಎಸ್.ಬಿ : ಈ ಮಹಿಳೆಯರು ಯಾವ ವಯಸಿನವರು?

ಪಿ.ಸಿ : ಇಂದು ಭೇಟಿಯಾದ ಎಲ್ಲ ಮಹಿಳೆಯರೂ 35 ವರ್ಷದ ಒಳಗಿನವರು.

ಎಸ್.ಬಿ : ಇಂಥ ಸಮಸ್ಯೆಗಳು ಕೇವಲ ನಗರಗವಾಸಿಗಳಲ್ಲಿ ಕಾಣಿಸುತ್ತವೆಯೇ? ಅಥವಾ ಗ್ರಾಮೀಣ ಪ್ರದೇಶದಲ್ಲಿಯೂ ಇರುತ್ತವೆಯೇ?

ಪಿ.ಸಿ : ಹಾಗೇನಿಲ್ಲ. ನಾನು ಹೇಳಿದ ಮೊದಲ ಪೇಶೆಂಟ್ ದಾವಣಗೆರೆಯ ಹಳ್ಳಿಯೊಂದರಿಂದ ಬಂದವರಾಗಿದ್ದರು. ಮತ್ತೊಬ್ಬರು ನೆಲ್ಲೂರಿನಿಂದ ಬಂದಿದ್ದರು. ಆದ್ದರಿಂದ ಇವು ಕೇವಲ ನಗರ ಪ್ರದೇಶದಲ್ಲಿ ಕಾಣುವ ಸಮಸ್ಯೆಯಲ್ಲ, ಭಾರತದ ಮೂಲೆಮೂಲೆಯಲ್ಲೂ ಇಂಥಾ ಸಮಸ್ಯೆಗಳನ್ನು ನಾವು ನೋಡಬಹುದು.

ಎಸ್.ಬಿ : ಹಾಗಾದರೆ ಇದು ನಗರ – ಹಳ್ಳಿ ಸಮಸ್ಯೆಯಲ್ಲ; ಶ್ರೀಮಂತ – ಬಡವ ಎನ್ನುವ ಭೇದವೂ ಇದಕ್ಕೆ ಇಲ್ಲ. ಅಲ್ಲವೆ? (ಪಿ.ಸಿ : ಖಂಡಿತವಾಗಿಯೂ ಇಲ್ಲ) ನಾನು ಒಂದು ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಯಲು ಆಸಕ್ತನಾಗಿದ್ದೇನೆ. ನಮ್ಮದು 1.2 ಬಿಲಿಯನ್’ಗಿಂತಲೂ ಹೆಚ್ಚು ಜನಸಂಖ್ಯೆಯುಳ್ಳ ದೇಶ. ಆದರೆ ನಮ್ಮಲ್ಲಿರುವ ಮನೋವೈದ್ಯರ ಸಂಖ್ಯೆ ಕೇವಲ 4,000. ಜೊತೆಗೆ, ಹೆಚ್ಚೆಂದರೆ 10,000ದಷ್ಟು ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಇದ್ದಾರೆ. ನಮ್ಮ ಜನಸಂಖ್ಯೆಗೆ ಹೋಲಿಸಿದರೆ, ಇದು ಸಮುದ್ರದೊಳಗಿನ ಹನಿಯಷ್ಟೇ ಅತ್ಯಲ್ಪ. ಅದರಲ್ಲೂ ನಮ್ಮ ಜನಸಂಖ್ಯೆಯಲ್ಲಿ 50%ರಷ್ಟುಮಹಿಳೆಯರಿದ್ದು, ಅದರಲ್ಲಿ 50%ರಷ್ಟು ಮಹಿಳೆಯರು ಈ ಸಮಸ್ಯೆಯನ್ನು ಗುರುತಿಸಿಕೊಳ್ಳುವುದೇ ಇಲ್ಲ. ಮಹಿಳೆಯರ ಮಾನಸಿಕ ಅನಾರೋಗ್ಯವು ಅವರ ವೈಯಕ್ತಿಕ ಯಾತನೆಯಷ್ಟೆ ಅಲ್ಲ, ಕುಟುಂಬ ಹಾಗೂ ಸಮಾಜದ ಮೇಲೂ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯಗಳೂ ಇವೆ. ಆದ್ದರಿಂದ ಮಹಿಳೆಯರ ಮಾನಸಿಕ ಅನಾರೋಗ್ಯ ಒಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಈ ಕುರಿತು ನೀವೇನು ಹೇಳುತ್ತೀರಿ?

ಪಿ.ಸಿ : ನಿಜಕ್ಕೂ ಇದು ಒಳ್ಳೆಯ ಪ್ರಶ್ನೆ. ನಾನು ಈ ಕುರಿತು ಮೇಲಿಂದ ಮೇಲೆ ಆಲೋಚನೆ ನಡೆಸಿದ್ದೇನೆ. ಪುರುಷರ ಮಾನಸಿಕ ಆರೋಗ್ಯಕ್ಕಿಂತ ಮಹಿಳೆಯರ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಪ್ರಾಮುಖ್ಯತೆ ಏಕೆ ನೀಡಲಾಗಿದೆ? ಮಹಿಳೆಯರ ಮಾನಸಿಕ ಆರೋಗ್ಯ ಕುರಿತು ಕೆಲಸ ಮಾಡುವ ಸಾಕಷ್ಟು ಸಂಘ ಸಂಸ್ಥೆಗಳಿವೆ. ಬಹಳಷ್ಟು ಪುಸ್ತಕಗಳೂ ಪ್ರಕಟವಾಗಿವೆ. ಇಂಡಿಯನ್ ಸೈಕಿಯಾಟ್ರಿಸ್ಟ್ ಸೊಸೈಟಿ ಕೂಡಾ ಮಹಿಳಾ ಮಾನಸಿಕ ಆರೋಗ್ಯ ಕುರಿತು ಕಾರ್ಯಪಡೆ ರೂಪಿಸಿದೆಯೇ ಹೊರತು ಪುರುಷರ ಮಾನಸಿಕ ಆರೋಗ್ಯದ ಕುರಿತು ಕೆಲಸ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಿದ್ದ ಮೇಲೆ ಅಲ್ಲೊಂದು ಗಂಭೀರವಾದ ಚಿಂತನೆ ಇರಲೇಬೇಕು ಅಲ್ಲವೆ?

ಮಾನಸಿಕ ಸಮಸ್ಯೆಗಳು ಪರಿಣಾಮ ಬೀರುವಾಗ ಸಮಸ್ಯೆ ಹೊಂದಿರುವ ವ್ಯಕ್ತಿಯ ಲಿಂಗವೂ ಪ್ರಾಮುಖ್ಯತೆ ಪಡೆಯುತ್ತದೆ. ಪುರುಷರಿಗೂ ಮಾನಸಿಕ ಸಮಸ್ಯೆಗಳಿರುತ್ತವೆ, ಮತ್ತು ಅವರಿಗೆ ಅವರದೇ ಆದ ತೊಂದರೆಗಳು ಉಂಟಾಗುತ್ತವೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ, ಅಂಕಿಅಂಶಗಳ ಪ್ರಕಾರ ಮಾನಸಿಕ ಸಮಸ್ಯೆಯುಳ್ಳವರ ಸಂಖ್ಯೆಯಲ್ಲಿ ಮಹಿಳೆಯರ ಪಾಲು ಅತ್ಯಧಿಕವಾಗಿದೆ. ಅದರಲ್ಲೂ ಜಾಗತಿಕ ವ್ಯಾಪ್ತಿಯಲ್ಲಿ ಮನೋರೋಗಗಳಲ್ಲೇ ಅತ್ಯಂತ ಸಾಮಾನ್ಯವಾದ ಖಿನ್ನತೆಯ ಕಾಯಿಲೆಗೆ ಮಹಿಳೆಯರು ಈಡಾಗುವುದೇ ಹೆಚ್ಚು. ಆದ್ದರಿಂದಲೇ ಬಹುಶಃ ಮಹಿಳೆಯರ ಮಾನಸಿಕ ಸಮಸ್ಯೆ ಕುರಿತ ಚರ್ಚೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ.

ಎಸ್.ಬಿ : ಹಾಗಾದರೆ, ನಿರ್ದಿಷ್ಟ ಸಂಗತಿಗಳಿಗೆ ಮಹಿಳೆಯರು ಹೆಚ್ಚು ಸೂಕ್ಷ್ಮವಾಗಿ ಸ್ಪಂದಿಸುತ್ತಾರೆ ಎಂದು ನಿಮ್ಮ ಅಭಿಪ್ರಾಯವೆ? ಅದಕ್ಕೆ ಕೇವಲ ಜೈವಿಕ ಕಾರಣಗಳಿವೆಯೋ ಅಥವಾ ಸಾಮಾಜಿಕ ಕಾರಣಗಳೂ ಇವೆಯೋ?

ಪಿ.ಸಿ : ಹೌದು. ಮತ್ತು, ನಾನಿದನ್ನು ಒಂದು ತ್ರಿಕೋನವಾಗಿ ನೋಡಲು ಬಯಸುತ್ತೇನೆ. ಇದರ ಮೂರು ಕೋನಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ಕಾರಣಗಳನ್ನು ನಾವು ನೋಡಬಹುದು. ಇದು ಕೇವಲ ಜೈವಿಕ ಮತ್ತು ಸಮಾಜದ ಲಿಂಗಾಧಾರಿತ ಸಂರಚನೆಯನ್ನು ಅವಲಂಬಿಸಿಲ್ಲ. ಇಲ್ಲಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೆ, ಹೇಗೆ ಸಂವಹಿಸುತ್ತಾರೆ; ಮಹಿಳೆಯರು ಮಾತ್ರ ಅನುಭವಿಸುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೆ – ಎಂಬಿತ್ಯಾದಿ ಅಂಶಗಳೂ ಇಲ್ಲಿ ಮುಖ್ಯವಾಗುತ್ತವೆ. ಮಹಿಳೆಯು ಈ ತ್ರಿಕೋನದ ನಡುವೆ ನಿಂತಿದ್ದು, ಆಕೆಯ ಸ್ಪಂದನೆಗೆ ತಕ್ಕಂತೆ ಆಕೆಯ ಶಕ್ತಿ ಮತ್ತು ದೌರ್ಬಲ್ಯಗಳು ನಿರ್ಧಾರಗೊಳ್ಳುತ್ತವೆ.

ಎಸ್.ಬಿ : ನಾವು ಸಾಮಾನ್ಯವಾಗಿ ‘ಮಹಿಳೆಯರು’ ಎಂದು ಉಲ್ಲೇಖಿಸುತ್ತೇವೆ. ಈ ಮೂಲಕ ನಾವು ಒಟ್ಟು ಸ್ತ್ರೀಕುಲದ ಬಗ್ಗೆ ಮಾತಾಡುತ್ತಿದ್ದೇವೆಯೇ ಅಥವಾ ಮಹಿಳೆ ಎಂದು ಕರೆಸಿಕೊಳ್ಳುವ ನಡು ವಯಸ್ಸಿನ ಸ್ತ್ರೀಯರ ಕುರಿತಾಗಿಯೇ? ಏಕೆಂದರೆ ಹೆಣ್ಣುಮಕ್ಕಳು ಹುಟ್ಟಿದಾಗಿಂದ, ಬುದ್ಧಿ ತಿಳಿಯತೊಡಗಿದಾಗಿಂದ ಹಲವು ಹಂತಗಳನ್ನು ಎದುರುಗೊಳ್ಳುತ್ತಾಳೆ. ಹದಿಹರೆಯಕ್ಕೆ ಮುಂಚಿನ ದಿನಗಳು, ಪ್ರೌಢಾವಸ್ಥೆ, ಹದಿಹರೆಯ, ಯೌವನ, ನಂತರದಲ್ಲಿ ಕಿರಿಯ ಮಹಿಳೆ. ಆಮೇಲೆ ಮಹಿಳೆ ಮತ್ತು ಮುಂದಿನ ಹಂತಗಳು. ಇಷ್ಟು ಅವಸ್ಥೆಗಳಲ್ಲಿ ಹೆಣ್ಣು ಮಹಿಳಾವಸ್ಥೆಯನ್ನು ತಲುಪಿದಾಗ ಅನುಭವಿಸುವ ಮಾನಸಿಕ ಸಮಸ್ಯೆಗಳು ಭಿನ್ನವಾಗಿರುತ್ತವೆಯೆ?

ಪಿ.ಸಿ : ಖಂಡಿತವಾಗಿಯೂ. ಆದ್ದರಿಂದಲೇ ಬಹುಶಃ ಮಹಿಳಾ ಮಾನಸಿಕ ಆರೋಗ್ಯ ಹೆಚ್ಚು ಪ್ರಾಮುಖ್ಯತೆ ಪಡೆದಿರುವುದು. ವಯಸ್ಸಿನ ವಿವಿಧ ಹಂತಗಳಲ್ಲಿ ಎದುರುಗೊಳ್ಳುವ ಸಮಸ್ಯೆಗಳು ಬೇರೆಬೇರೆಯೇ ಆಗಿರುತ್ತವೆ; ಆದ್ದರಿಂದ ದೈಹಿಕ ಮತ್ತು ಮಾನಸಿಕ ಅನಾರೋಗ್ಯದ ಕಾರಣಗಳೂ ಪರಿಣಾಮಗಳೂ ಭಿನ್ನವಾಗಿರುತ್ತವೆ. ಉದಾಹರಣೆಗೆ ಪ್ರೌಢಾವಸ್ಥೆಯು ಹೆಣ್ಣುಮಕ್ಕಳಲ್ಲಿ ತರುವ ಬದಲಾವಣೆ. ಬಹುತೇಕವಾಗಿ ಇದು ಉದ್ವೇಗ, ಖಿನ್ನತೆ ಮೊದಲಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ರೌಢಾವಸ್ಥೆಗಿಂತ ಮುಂಚೆ ಹೆಣ್ಣು ಮತ್ತು ಗಂಡು ಮಕ್ಕಳ ಯಾವದೇ ಸಮಸ್ಯೆಗೆ ಬಹುತೇಕ ಒಂದೇ ಬಗೆಯ ಚಿಕಿತ್ಸೆ ನೀಡಲಾಗುತ್ತಿರುತ್ತದೆ. ಪ್ರೌಢಾವಸ್ಥೆಯ ನಂತರ ನಿರ್ದಿಷ್ಟವಾಗಿ ಹೆಣ್ಣನ್ನು ದೃಷ್ಟಿಯಲ್ಲಿ ಇಟ್ಟುಕೊಂಡ ಚಿಕಿತ್ಸೆ ಬೇಕಾಗಬಹುದು. ಹಾಗೆಯೇ ಪ್ರೌಢಾವಸ್ಥೆಯ ನಂತರ ಖಿನ್ನತೆಗೆ ಒಳಗಾಗುವ ಸಂಭವವು ಹುಡುಗರಿಗಿಂತ ಹೆಣ್ಣುಮಕ್ಕಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ.


ಎಸ್.ಬಿ : ನಾವು ಒಟ್ಟು ಸ್ತ್ರೀಯರ ಕುರಿತು ಚರ್ಚಿಸೋಣ. ಹುಟ್ಟಿದಾಗಿಂದ ಪ್ರೌಢಾವಸ್ಥೆಗೆ ಬರುವವರೆಗೆ, ಅಲ್ಲಿಂದ ಪ್ರಜನನ ಅವಧಿ ಮುಗಿಯುವವರೆಗೆ, ಹಾಗೂ ನಂತರದ ಅವಸ್ಥೆ – ಈ ಭಿನ್ನ ಹಂತಗಳಲ್ಲಿ ಮಾನಸಿಕ ಆರೋಗ್ಯದ ವಿಷಯದಲ್ಲಿ ಸ್ತ್ರೀಯರು ಎದುರಿಸುವ ಸವಾಲುಗಳು ಭಿನ್ನವಾಗಿರುತ್ತವೆಯೆ?

ಪಿ.ಸಿ : ಇದು ಬಹಳ ಪ್ರಮುಖ ಅಂಶ. ನಾವು ಹುಟ್ಟಿನಿಂದ ಪ್ರೌಢಾವಸ್ಥೆಯವರೆಗಿನ ಹಂತವನ್ನು ಮೊದಲು ನೋಡೋಣ. ಇದೊಂದು ಪ್ರಮುಖ ಹಂತ. ಆದರೆ ಮಾನಸಿಕ ಆರೋಗ್ಯದ ವಿಷಯ ಬಂದಾಗ ಈ ಹಂತಕ್ಕೆ ಅಷ್ಟು ಪ್ರಾಮುಖ್ಯತೆ ದೊರೆತಿಲ್ಲ. ಕೆಲವು ಕುಟುಂಬಗಳು ಹೆಣ್ಣುಮಕ್ಕಳ ಜನನದಿಂದ ಸಂತೋಷಪಡುವುದಿಲ್ಲ. ಅಂತಹ ಕುಟುಂಬಗಳಲ್ಲಿ ಜನಿಸಿದ ಹೆಣ್ಣುಮಕ್ಕಳು ಬೆಳೆಯುವಾಗ ಲಿಂಗ ತಾರತಮ್ಯವನ್ನು ಅನುಭವಿಸಬೇಕಾಗಿ ಬರುತ್ತದೆ.

ಅಲ್ಲಿ ಹುಡುಗರಿಗೆ ಸಿಕ್ಕಷ್ಟು ಪ್ರಾಮುಖ್ಯತೆ ಮತ್ತು ಕಾಳಜಿ ಹುಡುಗಿಯರಿಗೆ ಸಿಗುವುದಿಲ್ಲ. ಪರಿಣಾಮವಾಗಿ, ಬಹುತೇಕ ಹೆಣ್ಣುಮಕ್ಕಳು ತಾವು ದ್ವಿತೀಯ ದರ್ಜೆಯ ಪ್ರಜೆಗಳು ಎಂಬ ಭಾವವನ್ನು ಹೊತ್ತುಕೊಂಡೇ ಬೆಳೆಯುತ್ತಾರೆ. ಮನೆಯಲ್ಲಿ ಅವರ ಅಭಿಪ್ರಾಯಗಳಿಗೆ ಮನ್ನಣೆ ಇರುವುದಿಲ್ಲ. ಅವರು ಗಟ್ಟಿಯಾಗಿ ಮಾತಾಡಬಾರದು, ಎಲ್ಲಿಯೂ ಕಾಣಿಸಿಕೊಳ್ಳಬಾರದು ಎಂದು ನಿರ್ಬಂಧ ಹಾಕಲಾಗಿರುತ್ತದೆ. ಈ ಎಲ್ಲದರ ಪರಿಣಾಮವಾಗಿ ಹೆಣ್ಣು ಬೆಳೆದು ತನ್ನದೇ ಕುಟುಂಬವನ್ನು ಹೊಂದುವಾಗ, ತಾನು ವಾಸ್ತವದಲ್ಲಿ ಏನಾಗಿದ್ದಳೋ ಅದಾಗಿ ಉಳಿದಿರುವುದಿಲ್ಲ.

ಎಸ್.ಬಿ : ಅಂದರೆ, ಹೆಣ್ಣನ್ನು ಒಂದು ಅನಿಶ್ಚಿತ ವ್ಯಕ್ತಿತ್ವವಾಗಿ ರೂಪಿಸಲಾಗುತ್ತದೆ ಎಂದು ಹೇಳುತ್ತಿದ್ದೀರಿ… ಮಾನಸಿಕ ಸಮಸ್ಯೆಗಳ ಹೊರತಾಗಿಯೂ ಇಂತದೊಂದು ಅನಿಶ್ಚಿತತೆಯನ್ನು ಅವರು ಅನುಭವಿಸಬೇಕಾಗುತ್ತದೆ ಎಂದು…

ಪಿ.ಸಿ : ಹೌದು. ಮನ್ನಣೆ ಸಿಗದ, ಯಾವುದೇ ಮೌಲ್ಯವಿಲ್ಲದ ಪರಿಸ್ಥಿತಿಯು ಹೆಣ್ಣುನ ಮನಸ್ಸನ್ನು ದುರ್ಬಲಗೊಳಿಸುವ ಸಾಧ್ಯತೆ ಇರುತ್ತದೆ. ಕೆಲವು ಕುಟುಂಬಗಳು ಸ್ತ್ರೀಯರನ್ನು ಬಹಳ ಆಘಾತಕಾರಿಯಾಗಿ ನಡೆಸಿಕೊಳ್ಳುತ್ತವೆ. ಕೆಲವೆಡೆಗಳಲ್ಲಿ ದೌರ್ಜನ್ಯ, ಲೈಂಗಿಕ ದೌರ್ಜನ್ಯವೇ ಮೊದಲಾದ ದುರವಸ್ಥೆಗೂ ಅವರು ಒಳಗಾಗುತ್ತಾರೆ. ಯುವಕರಿಗೆ ಇಂತಹ ಆತಂಕಗಳು ಬಹಳ ಕಡಿಮೆ. ಇಂಥ ದೌರ್ಜನ್ಯಗಳನ್ನು ಎದುರಿಸುತ್ತಿದ್ದರೂ ಹೆಣ್ಣುಮಕ್ಕಳು ಅವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಅದರಿಂದ ಹೆಚ್ಚಿನ ಅಪಾಯ ಒದಗಬಹುದು ಎನ್ನುವ ಆತಂಕ ಒಂದು ಕಡೆಯಾದರೆ, ತನಗೆ ಸೂಕ್ತ ರಕ್ಷಣೆ ಒದಗಿಸುವವರು ಯಾರೂ ಇಲ್ಲವೆಂಬ ಅಳಲು ಮತ್ತೊಂದು ಕಾರಣ. ಇವುಗಳ ಜೊತೆ ಕುಟುಂಬವೂ ಸರಿಯಾಗಿ ಸ್ಪಂದಿಸದೆ ಹೋದರೆ ಅದು ಮತ್ತೊಂದು ಸಮಸ್ಯೆ. ಇಂತಹ ಸಂದರ್ಭಗಳಲ್ಲಿ ಪೋಷಕರು ತಮ್ಮ ಮಕ್ಕಳ ಬೆಂಬಲಕ್ಕೆ ನಿಲ್ಲದೆಹೋದರೆ, ಇದರಿಂದ ಹೆಣ್ಣುಮಕ್ಕಳು ತೀವ್ರ ಒತ್ತಡವನ್ನು ಅನುಭವಿಸುತ್ತಾರೆ.

ನಂತರದಲ್ಲಿ ಪ್ರೌಢಾವಸ್ಥೆ. ಪ್ರೌಢಾವಸ್ಥೆಯು ಹೆಣ್ಣುಮಕ್ಕಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುತ್ತದೆ. ಆಕೆ ಸರಿಯಾದ ರೀತಿಯಲ್ಲೇ ಮುನ್ನಡೆಯುತ್ತ ಇರುತ್ತಾಳೆ. ಆದರೆ ಹಾರ್ಮೋನುಗಳ ಸ್ರವಿಸುವಿಕೆ ಮತ್ತು ಮೆದುಳಿನಲ್ಲಾಗುವ ಬದಲಾವಣೆಗಳು ಕೆಲವು ನಿರ್ದಿಷ್ಟ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಅವಧಿಯಲ್ಲಿ ಹೆಣ್ಣುಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹುಡುಗರಿಗಿಂತ 4 ಪಟ್ಟು ಹೆಚ್ಚಾಗಿರುತ್ತವೆ.


ಎಸ್.ಬಿ : ಇದನ್ನು ಹಾದುಹೋಗುವುದು ಹೇಗೆ? ಇದನ್ನು ನಿಭಾಯಿಸಲು ಎಷ್ಟರ ಮಟ್ಟಿಗೆ ಗಂಭೀರ ಪ್ರಯತ್ನ ಹಾಕಬೇಕಾಗುತ್ತದೆ?

ಪಿ.ಸಿ : ಅದನ್ನು ಹೇಳುವುದು ಸ್ವಲ್ಪ ಕಷ್ಟ.

ಈ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಿಮಗೆ ಸಾಧಾರಣ ಒಂದು ಅಂದಾಜಿರಬಹುದು…. ಅಂದರೆ, ಈ ರೀತಿಯ ಲಕ್ಷಣಗಳು ಕಂಡುಬಂದಾಗ ಅದರಲ್ಲಿ 50%ರಷ್ಟು ಖಿನ್ನತೆ ಉಂಟುಮಾಡಬಹುದು – ಹೀಗೆ ನೀವು ಊಹಿಸಬಹುದು. ಅಲ್ಲವೆ?

ಪಿಸಿ. : ಇಲ್ಲ, ಅದು ಹಾಗಲ್ಲ. ಪ್ರೌಢಾವಸ್ಥೆಯು ಹೆಣ್ಣು ಮಕ್ಕಳಲ್ಲಿ ಖಿನ್ನತೆ ಉಂಟುಮಾಡುತ್ತದೆ; ಮತ್ತು ಕೆಲವರಲ್ಲಿ ಅದು ಮುಂದುವರೆಯುತ್ತದೆ, ಕೆಲವರಲ್ಲಿ ಅದು ಮುಂದುವರೆಯುವುದಿಲ್ಲ – ಎಂದು ಊಹಿಸಲುಬರುವುದಿಲ್ಲ. ಆದರೆ, 13 – 14 ವಯಸ್ಸಿನ ಹೆಣ್ಣುಮಕ್ಕಳಷ್ಟೇ 80 ವಯಸ್ಸಿನ ವೃದ್ಧೆಯೂ ಖಿನ್ನತೆಗೆ ಒಳಗಾಗುತ್ತಾರೆ. ಒಟ್ಟಾರೆಯಾಗಿ ಮಹಿಳೆಯರಲ್ಲಿಯೇ ಪುರುಷರಿಗಿಂತ 4 ಪಟ್ಟು ಹೆಚ್ಚು ಖಿನ್ನತೆ ಇರುತ್ತದೆ. ಆದ್ದರಿಂದ, ಪ್ರೌಢಾವಸ್ಥೆಯು ಒಂದು ವ್ಯತ್ಯಾಸಕ್ಕೆ ಕಾರಣವಾಗುವ ಅಂಶ ಎಂದಷ್ಟೆ ಹೇಳಬಹುದು. ವಾಸ್ತವದಲ್ಲಿ ಮನಸ್ಸು ದುರ್ಬಲಗೊಳ್ಳಲು ಹಾರ್ಮೋನುಗಳು ಕಾರಣವಾಗಿರುತ್ತವೆ.

ಎಸ್.ಬಿ.: ಹಾಗಾದರೆ, ಮೂಲದಲ್ಲಿ ಎಲ್ಲವೂ ಒಂದೇ ಎಂಬುದು ನಿಮ್ಮ ಮಾತಿನ ಅರ್ಥವೇ? ಚಿಕ್ಕ ಹುಡುಗಿ ಇರಲಿ, ಮಹಿಳೆ ಇರಲಿ, ಅವರಲ್ಲಿ ಉದ್ವೇಗ ಮತ್ತು ಖಿನ್ನತೆಯ ಸಾಧ್ಯತೆಗಳು ಹೆಚ್ಚಾಗಿಯೇ ಇರುತ್ತವೆ ಎಂದೇ?

ಪಿ.ಸಿ : ಹಾಗೆಯೇ ನೀವು ಪ್ರಜನನ ಅವಧಿಯ ಬಗ್ಗೆಯೂ ಕೇಳಿದ್ದಿರಿ. ಎಲ್ಲ ಹಂತಗಳಲ್ಲೂ ಇದು ಇರುತ್ತದೆ. ನಿಮಗೆ ಗೊತ್ತೆ? ಬಹುತೇಕ ಮಹಿಳೆಯರು ಇಂಥ ವಾತಾವರಣದಲ್ಲಿಯೇ ಬೆಳೆದಿರುತ್ತಾರೆ. ಅದು ನಗರವಿರಲಿ, ಚಿಕ್ಕ ಪಟ್ಟಣ ಅತವಾ ಹಳ್ಳಿ; ಅವರು ಹುಟ್ಟಿ ಬೆಳೆದ ಪರಿಚಿತ ಸ್ಥಳದಿಂದ ಅಪರಿಚಿತ ಸ್ಥಳ ಮತ್ತು ಜನರೊಂದಿಗೆ ವಾಸಿಸಬೇಕಾಗುತ್ತದೆ. ಆದ್ದರಿಂದ ಇಂಥಾ ಆಘಾತಗಳು ಸಾಮಾನ್ಯ. ಮದುವೆಯಾದ ಮೇಲೆ ಅವರು ತಮ್ಮ ಬದುಕನ್ನು ಹೊಸತಾಗಿ ಆರಂಭಿಸಬೇಕಾಗುತ್ತದೆ. ಕುಟುಂಬದವರು ಆಕೆ ಒಂದು ವಾರದಲ್ಲಿ ಅಥವಾ ತಿಂಗಳಲ್ಲಿ ಹೊಂದಿಕೊಂಡು ಬಾಳಲು ಕಲಿಯಬೇಖೆಂದು ನಿರೀಕ್ಷಿಸುತ್ತಾರೆ. ಆದರೆ ಹೆಣ್ಣು, ತಾನು ಹುಟ್ಟಿ ಬೆಳೆದ ಪರಿಸರ, ಗೆಳೆಯ ಗೆಳತಿಯರು, ಸಂಬಂಧಗಳು ಎಲ್ಲವನ್ನೂ ಬಿಟ್ಟುಕೊಟ್ಟು ಹೊಸತಕ್ಕೆ ಹೊಂದಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ.
 

ಎಸ್.ಬಿ : ಮಹಿಳೆಯರು ಯಾವಾಗಲೂ ಅಪರಿಚಿತ ಬದುಕಿಗೆ ತಳ್ಳಲ್ಪಡುತ್ತಲೇ ಇರುತ್ತಾರೆ, ಅಲ್ಲವೆ?

ಪಿ.ಸಿ ; ಹೌದು. ಅದೇ ಕಾರಣದಿಂದಲೇ ಹೆಣ್ಣುಮಕ್ಕಳು ಹೆಚ್ಚು ಮಾನಸಿಕ ಆಘಾತಕ್ಕೆ ಒಳಗಾಗುವುದು. ಸಾಂಸ್ಕೃತಿಕವಾಗಿಯೇ ಇದನ್ನು ಮಹಿಳೆಯರ ಮೇಲೆ ಹೇರಲಾಗಿದೆ. ಇದನ್ನು ಮಾಡಲೇಬೇಕು ಎಂದು ನಿರೀಕ್ಷಿಸಲಾಗುತ್ತದೆ. ಕಷ್ಟವೋ ಸುಖವೋ… ನೀನಿದನ್ನು ಮಾಡಲೇಬೇಕು. ಆಗುವುದಿಲ್ಲ ಅನ್ನುವ ಮಾತೇ ಇಲ್ಲ! ಈ ಹೇರಿಕೆಯೇ ಮಹಿಳೆಯರನ್ನು ಅಸ್ವಸ್ಥರನ್ನಾಗಿಸಿಬಿಡುತ್ತದೆ. ಹೀಗಿರುವಾಗ ಮೊದಲೇ ಕೊಂಚ ಸೂಕ್ಷ್ಮವಾಗಿರುವ ಹೆಣ್ಣುಮಕ್ಕಳು ಇನ್ನೂ ಹೆಚ್ಚಿನ ಆಘಾತಕ್ಕೆ ಒಳಗಾಗುತ್ತಾರೆ. ಹೀಗೆ ಕೆಲವರು ತಮಗೇ ಅರಿವಿಲ್ಲದಂತೆ ಬಹಳ ದೂರ ಹೋಗಿಬಿಡುತ್ತಾರೆ. ಅದರಲ್ಲಿಯೂ ಭಾರತದಲ್ಲಿ, ಒಂದು ಬಾರಿ ಗಂಡನ ಮನೆ ಸೇರಿದರೆ ಮುಗಿಯಿತು. ಅಲ್ಲಿಯ ಕುಟುಂಬ, ಅವರ ಸಂಸ್ಕೃತಿ, ಅವರ ಸಂಪ್ರದಾಯಗಳು ಮಹಿಳೆಯರ ಪಾಲಿಗೆ ಪ್ರಥಮ ಆದ್ಯತೆಯಾಗಿಬಿಡುತ್ತದೆ. ಇದನ್ನು ನಿರಾಕರಿಸುವಂತೆಯೇ ಇಲ್ಲ. ಮತ್ತು ಅವರು ಅದನ್ನು ನಿಭಾಯಿಸಲು ತಮ್ಮ ತಾಯ್ತಂದೆಯರ ಸಹಾಯ ಪಡೆಯುವ ಅವಕಾಶವೂ ಇರುವುದಿಲ್ಲ.

ಮಾತ್ರವಲ್ಲ, ತಾಯ್ತಂದೆಯರು ಕೂಡಾ ತಮ್ಮ ಹೆಣ್ಣುಮಕ್ಕಳಿಗೆ ತಾವೇ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಹೇಳುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳ ಮಾನಸಿಕ ಸ್ಥಿತಿಯನ್ನು ಊಹಿಸಿ. ಅವರೇನು ಮಾಡಬೇಕು? ನಾನು ಬಹಳ ಬಾರಿ ಪುರುಷರನ್ನು ಕೇಳಿದ್ದೇನೆ, “ಇಂಥ ಪರಿಸ್ಥಿತಿ ನಿಮಗೆ ಒದಗಿ ಬಂದರೆ ನೀವೇನು ಮಾಡುತ್ತೀರಿ?” ಎಂದು. ಹುಟ್ಟಿ ಬೆಳೆದ ಪರಿಸರಕ್ಕಿಂತ ಬೇರೆಯದೇ ಆದ ಸನ್ನಿವೇಶದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಕಷ್ಟವನ್ನು ಅವರು ಅರ್ಥ ಮಾಡಿಕೊಳ್ಳಬೇಕು.

ಎಸ್.ಬಿ : ಈ ನಿಟ್ಟಿನಲ್ಲಿ ಪಾಶ್ಚಾತ್ಯ ಮಹಿಳೆಯರ ಪರಿಸ್ಥಿತಿ ಉತ್ತಮವಾಗಿದೆಯೇ?

ಪಿ.ಸಿ : ಬಹುಶಃ ಈ ಬಗೆಯ ಆಘಾತಗಳನ್ನು ಅವರು ಎದುರಿಸಬೇಕಾಗಿ ಬರುವುದಿಲ್ಲ. ಅಲ್ಲಿ ಗಂಡ ಹೆಂಡತಿ ಇಬ್ಬರನ್ನೂ ಸಮಾನವಾಗಿ ಕಾಣಲಾಗುತ್ತದೆ.

ಎಸ್.ಬಿ : ನಮ್ಮಲ್ಲಿ ಸಮಾನತೆಯ ಆಲೋಚನೆಯೇ ಬಹಳ ದೂರವಿದೆ!

ಪಿ.ಸಿ : ಹೌದು ಅದೇ ದೊಡ್ಡ ಸವಾಲು. ಹಾಗೆಯೇ ನಮ್ಮಲ್ಲಿ ಮದುವೆಯಾಗಿ ಅಪರಿಚಿತ ಕುಟುಂಬ ಸೇರುವ ಹೆಣ್ಣಿಗೆ ಸ್ವತಃ ಗಂಡನೂ ಅಪರಿಚಿತನೇ ಆಗಿರುತ್ತಾನೆ! ಅವನ ನಡೆ ನುಡಿ, ಆಸಕ್ತಿ ಯಾವ ಪರಿಚಯವೂ ಅವಳಿಗೆ ಇರುವುದಿಲ್ಲ. ಅಂಥ ಅಪರಿಚಿತ ಪರಿಸರದಲ್ಲಿ ಅವಳು ಹೊಸತಾಗಿ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ.

ಎಸ್.ಬಿ: ನೀವು NIMHANSನಲ್ಲಿ ಪ್ರತಿದಿನ ಪೇಷೆಂಟ್’ಗಳನ್ನು ನೋಡುತ್ತೀರಿ. ಸಾಮಾನ್ಯವಾಗಿ ನಿಮ್ಮಲ್ಲಿಗೆ ಬರುವ ರೋಗಿಗಳು ಯಾವ ಹಂತದಲ್ಲಿ ಮಾನಸಿಕ ಅನಾರೋಗ್ಯಕ್ಕೆ ಈಡಾಗಿರುತ್ತಾರೆ?

ಪಿ.ಸಿ : ನಾನು ಗಮನಿಸಿದಂತೆ, ಮದುವೆಯಾದ ಹೊಸತರಲ್ಲೇ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬಹುತೇಕ ಕಿರಿಯ ಮಹಿಳೆಯರು ಚಿಕಿತ್ಸೆಗೆ ಬರುವುದು ಆಗಲೇ. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, 20ರಿಂದ 30 – 35ರವರೆಗಿನ ಮಹಿಳೆಯರಲ್ಲಿ ಇದು ಆರಂಭವಾಗುತ್ತದೆ. ಆ ವೇಳೆಗೆ ಅವರ ಮದುವೆಯಾಗಿ 2 – 3 ವರ್ಷಗಳಾಗಿರುತ್ತವೆ. ಆ ವೇಳೆಗೆ ಗಂಡನ ಮನೆಯವರು ಆಕೆಗೇನೋ ಸಮಸ್ಯೆ ಇದೆ, ಅವಳು ಮನೆಗೆ ಹೊಂದಿಕೊಳ್ಳುತ್ತಿಲ್ಲ, ಅಥವಾ ‘ಅವಳು ನಮ್ಮ ಮಾತು ಕೇಳುತ್ತಿಲ್ಲ’, ಎಂದೆಲ್ಲ ಆಲೋಚಿಸಲು ಆರಂಭಿಸಿರುತ್ತಾರೆ. ನೆನ್ನೆ ನಮ್ಮಲ್ಲಿಗೆ ಪೇಷೆಂಟ್ ಒಬ್ಬರನ್ನು ಕರೆತಂದವನು ಹೇಳುತ್ತದ್ದ, “ಅವಳು ನನ್ನ ಕಾಲರ್ ಸರಿಯಾಗಿ ಒಗೆಯುವುದಿಲ್ಲ” ಎಂದು! ಆ ಕಾರಣದಿಂದಲೇ ಅವರು ಆಕೆಗೆ ಏನೋ ಸಮಸ್ಯೆ ಇದೆ ಎಂದು ಆಲೋಚಿಸಿದ್ದರು!! ಹೆಣ್ಣುಮಕ್ಕಳ ಮೇಲೆ ಎಷ್ಟೆಲ್ಲ, ಎಂಥದೆಲ್ಲ ನಿರೀಕ್ಷೆಗಳಿರುತ್ತವೆ ಅನ್ನುವುದಕ್ಕೆ ಇದೊಂದು ಚಿಕ್ಕ ನಿದರ್ಶನವಷ್ಟೆ.

ಇದನ್ನು ನೋಡಿದರೆ ಸಮಸ್ಯೆ ಇದ್ದುದು ಆ ಪುರುಷನಿಗೇ ಅನ್ನಿಸುತ್ತದೆ…

ಪಿ.ಸಿ : ಇನ್ನೂ ಎಂಥವೆಲ್ಲ ನಿರೀಕ್ಷೆಗಳಿರುತ್ತವೆ ನಿಮಗೆ ಗೊತ್ತೆ? ಕೆಲವರು ಈ ನಿರೀಕ್ಷೆಗಳ ಆಧಾರದ ಮೇಲೆ ಮಹಿಳೆಯರಿಗೆ ಹಣೆಪಟ್ಟಿಯನ್ನೂ ಹಚ್ಚಿಬಿಟುತ್ತಾರೆ. ಅವಳು ನಿಧಾನ, ಅವಳಿಗೆ ಮನೆಗೆಲಸ ಮಾಡಲು ಬರುವುದಿಲ್ಲ ಎಂದೆಲ್ಲ ದೂರುತ್ತಾರೆ. ಅಲ್ಲಿ ಸಂಗಾತ ಮುಖ್ಯವಾಗಿರುವುದೇ ಇಲ್ಲ, ಅವಳ ಕೆಲಸಗಳು ಮುಖ್ಯವಾಗಿಬಿಡುತ್ತವೆ. ಆಕೆಗೆ ಏನು ಬೇಕು, ಎಲ್ಲಿ ಏನು ಸಮಸ್ಯೆಯಾಗುತ್ತಿದೆ ಎಂದು ಅರಿಯುವ ಗೊಡವೆಗೇ ಹೋಗುವುದಿಲ್ಲ. ಇದು ಮಹಿಳೆಯರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ತನ್ನನ್ನು ಸಂಗಾತಿಯಾಗಿ ನೋಡದೆ ಕೆಲಸದವರಂತೆ ಕಾಣುವುದನ್ನು ಆಕೆ ಸಹಿಸದಾಗುತ್ತಾಳೆ. ಆದರೆ ಅದನ್ನು ಹೇಳಿಕೊಳ್ಳುವ ದಾರಿಯಾಗಲೀ ಅವಕಾಶವಾಗಲೀ ಆಕೆಗೆ ಇರುವುದಿಲ್ಲ. ಈ ಎಲ್ಲದರಿಂದ ತನಗೆ ಸಮಸ್ಯೆಯಾಗುತ್ತಿದೆ ಎಂದು ಸರಿಯಾಗಿ ಅರಿಯುವ ಮೊದಲೇ ಆಕೆ ಗರ್ಭಿಣಿಯಾಗಿರುತ್ತಾಳೆ! ಇದನ್ನು ನಿಭಾಯಿಸುವುದು ಹೇಗೆ?

ನನ್ನ ಬಳಿ ನೆನ್ನೆ ಸಮಾಲೋಚನೆಗೆ ಒಬ್ಬ ದಂಪತಿ ಬಂದಿದ್ದರು. ಆಕೆ ಫಾರ್ಮಸಿಸ್ಟ್. ಗರ್ಭ ಧರಿಸುವ ಮುನ್ನ ಸ್ವಲ್ಪ ಮಾನಸಿಕ ಅನಾರೋಗ್ಯ ಹೊಂದಿದ್ದವರು. ಅವರು ಈ ಸನ್ನಿವೇಶದಲ್ಲಿ ತಾವು ಗರ್ಭ ಧರಿಸಿದರೆ ಏನಾದರೂ ಸಮಸ್ಯೆಯಾಗುತ್ತದೆಯೇ ಎಂದು ಸಮಾಲೋಚನೆ ನಡೆಸಲು ಬಂದಿದ್ದರು. “ನಿಮಗೆ ಇಷ್ಟವಿದೆಯೇ?” ಎಂದು ನಾನು ಕೇಳಿದೆ.

ಆಕೆಯಿಂದ ಇಲ್ಲವೆನ್ನುವ ಉತ್ತರ ಬಂತು. ಆದರೆ ತನ್ನ ಗಂಡ ಮತ್ತು ಅತ್ತೆ ಅದನ್ನು ಬಯಸುತ್ತಿರುವುದರಿಂದ, ಅನಿವಾರ್ಯವಾಗಿ ಗರ್ಭ ಹೊತ್ತುಕೊಂಡಿರುವುದಾಗಿ ಹೇಳಿದಳು. ಸದ್ಯದ ತನ್ನ ಪರಿಸ್ಥಿತಿಯಲ್ಲಿ ಮಗುವನ್ನು ಹೊಂದಲು ಆಕೆಗೆ ಇಷ್ಟವಿಲ್ಲ. ಆದರೆ ಕುಟುಂಬದವರ ನಿರೀಕ್ಷೆ ಮೀರುವಂತೆಯೂ ಇಲ್ಲ! ಮದುವೆಯಾಗಿ ಮೂರು ತಿಂಗಳಷ್ಟೆ ಆಗಿದೆ. ಇನ್ನೂ ಹೊಂದಾಣಿಕೆಗೆ ಸಮಯ ಬೇಕು ಅನ್ನುವುದು ಆಕೆಯ ಯೋಚನೆ. ಈ ಯೋಚನೆಯೇ ಆಕೆಯನ್ನು ಒತ್ತಡಕ್ಕೆ ನೂಕಿದೆ. ಈ ಪರಿಸ್ಥಿತಿಯಲ್ಲಿ ಗರ್ಭಧಾರಣೆ ಮತ್ತು ಹೆರಿಗೆ ಆಕೆಯ ಮಾನಸಿಕ ಸ್ವಾಸ್ಥ್ಯವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆಗಳಿರುತ್ತವೆ.

ಎಸ್.ಬಿ : ಇಲ್ಲೊಂದು ಪ್ರಶ್ನೆ ಇದೆ. ಇದನ್ನು ಹೇಗೆ ಕೇಳಬೇಕು ಎಂದು ತಿಳಿಯುತ್ತಿಲ್ಲ. ಈಗ ಉಲ್ಲೇಖಿಸಿದ ಮಹಿಳೆ, ತಾನಿರುವ ಪರಿಸ್ಥಿತಿಯಲ್ಲಿ ಮಗುವನ್ನು ಪಡೆಯುವುದು ಸಮಂಜಸವಾಗಿದೆಯೇ? ಹಾಗೆ ಮಗುವನ್ನು ಅವರು ಪಡೆಯಬಹುದೇ? ತಂದೆ – ತಾಯಿಯರಲ್ಲಿ ಯಾರಾದರೊಬ್ಬರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅದು ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆಯೇ?
 

ಪಿ.ಸಿ : ಇಲ್ಲಿ ಮೊದಲನೆಯ ಅಂಶ ಮದುವೆ. ಎರಡನೆಯದು ಮಗುವನ್ನು ಪಡೆಯುವುದು. ಸಂಗಾತಿಯನ್ನು ಹೊಂದುವುದು ಪ್ರತಿಯೊಬ್ಬ ಮನುಷ್ಯ ಜೀವಿಯ ಹಕ್ಕು. ಈ ಹಿನ್ನೆಲೆಯಲ್ಲಿ ಯೋಚಿಸಿದರೆ, ಪ್ರತಿಯೊಬ್ಬರಿಗೂ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮದುವೆಯಾಗುವ ಹಕ್ಕು ಇರುತ್ತದೆ. ಕೆಲವರು ಸಾಂಗತ್ಯಕ್ಕಾಗಿ. ಕೆಲವರು ಆಸರೆಗಾಗಿ. ಕೆಲವರು ಜೊತೆಗೊಬ್ಬರು ಬೇಕಾಗಿ – ಹೀಗೆ ಹಲವು ಕಾರಣಗಳಿಗೆ ಮದುವೆಯಾಗುತ್ತಾರೆ. ಇದು ಒಂದು ಹಂತ. ಈ ವೈಯಕ್ತಿಕ ಕಾರಣಗಳೇನೇ ಇದ್ದರೂ ಸಮಾಜಿಕ ಸ್ತರದಲ್ಲಿ ಮದುವೆಯಾಗುವುದು ಅಂದರೆ ಅದೊಂದು ಗೌರವ. ಮದುವೆ ಮಾಡಿಕೊಂಡ ಗಂಡು ಹೆಣ್ಣಿಗೆ ಗೌರವದ ಸ್ಥಾನಮಾನವನ್ನು ನಮ್ಮ ಸಮಾಜ ಕೊಟ್ಟಿದೆ. ಆದ್ದರಿಂದ ಹೆಣ್ಣುಮಕ್ಕಳು ಮಾನಸಿಕ ಸಮಸ್ಯೆ ಹೊಂದಿದ್ದರೆ, ಆಕೆಯ ಪೋಷಕರು ಅದನ್ನು ಬಚ್ಚಿಡುತ್ತಾರೆ. ಅದರಿಂದ ಮದುವೆ ನಿಲ್ಲಬಹುದೆಂಬ ಭಯ ಅವರಿಗಿರುತ್ತದೆ. ಗಂಡಸರು ಈ ಸಮಸ್ಯೆ ಎದುರಿಸುವುದು ಬಹಳ ಕಡಿಮೆ. ಮದುವೆಯಿಂದ ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಅನ್ನುವ ತಪ್ಪು ಕಲ್ಪನೆಯೂ ನಮ್ಮಲ್ಲಿದೆ. ಹಾಗೇನೂ ಇಲ್ಲ. ಅದು ಸಂಪೂರ್ಣವಾಗಿ ತಪ್ಪು ಕಲ್ಪನೆ.

ಆದರೆ ಹೆಣ್ಣುಮಕ್ಕಳ ಪೋಷಕರು ಬೇರೆ ಯೋಚನೆಯನ್ನೇ ಮಾಡಲು ಹೋಗುವುದಿಲ್ಲ. ನಾನು ಹೇಳಿದ ಮೊದಲ ಪೇಷೆಂಟ್’ಗೆ ಮಾನಸಿಕ ಸ್ವಾಸ್ಥ್ಯವಿಲ್ಲದೆ ಇದ್ದರೂ ಕೂಡಾ ಆಕೆಯ ಪೋಷಕರು ಮದುವೆ ಮಾಡಲು ಬಯಸಿದ್ದಾರೆ. ತಮ್ಮ ಮಗಳಿಗೆ ಒಂದು ಆಧಾರ ಬೇಕು, ರಕ್ಷಣೆ ಬೇಕು ಅನ್ನುವುದು ಅವರ ಯೋಚನೆ. ಅವರ ಮನಸ್ಸಿನಲ್ಲಿ ತಾವು ಮಾಡುತ್ತಿರುವುದು ಸರಿಯಾಗಿದೆ ಎಂದೇ ಇರುತ್ತದೆ.


ಎಸ್.ಬಿ : ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸಲು ಒಂದು ಸಮಾಜವಾಗಿ ನಾವೇನು ಮಾಡಬಹುದು? ವೈದ್ಯಕೀಯ ಕ್ಷೇತ್ರದಲ್ಲಿ ಈಗ ಮಾಡುತ್ತಿರುವುದಕ್ಕಿಂತ ಹೆಚ್ಚಿನದೇನು ಮಾಡಬಹುದು?

ಪಿ.ಸಿ : ಈ ನಿಟ್ಟಿನಲ್ಲಿ ಯಾರಾದರೂ ಮಾಡಬೇಕಿರುವ ಮೊಟ್ಟಮೊದಲ ಕೆಲಸವೆಂದರೆ, ಹೆಣ್ಣುಮಕ್ಕಳಿಗೆ ಅವರು ಹುಟ್ಟಿದಾಗಿಂದಲೂ ಸುರಕ್ಷಿತ ವಾತಾವರಣ ಕಟ್ಟಿಕೊಡುವುದು.

ಪ್ರೌಢಾವಸ್ಥೆಗೆ ಮೊದಲು ಹೆಣ್ಣುಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂದು ನೀವು ಹೇಳಿದಿರಿ. ಹೆಣ್ಣುಮಗುವನ್ನು ಯಾರು ಆಪ್ತತೆಯಿಂದ, ಭದ್ರತೆ ನೀಡಿ ನೋಡಿಕೊಳ್ಳುತ್ತಾರೋ ಅದು ಅವರೊಡನೆ ಹೆಚ್ಚು ಮುಕ್ತವಾಗಿ ವ್ಯವಹರಿಸುತ್ತದೆ. ಆದರೆ, ಹೆಣ್ಣುಮಕ್ಕಳು ಬೆಳೆದಂತೆಲ್ಲ ಅವರ ಈ ಮನೋಭಾವವೇ ಅವರು ಲೈಂಗಿಕ ದೌರ್ಜನ್ಯಕ್ಕೀಡು ಮಾಡುವ ಕಾರಣಗಳಲ್ಲಿ ಒಂದಾಗುತ್ತದೆ ಅಲ್ಲವೆ?

ಪಿ.ಸಿ : ಹೆಣ್ಣುಮಕ್ಕಳನ್ನು ಗೌರವಿಸುವುದು, ಅವರ ಮೌಲ್ಯಮಾಪನ ಮಾಡುವುದು, ಅವರ ಭದ್ರತೆಯನ್ನು ಖಾತ್ರಿಪಡಿಸುವುದು, ಆಕೆಗೆ ಏನಾದರೂ ಸಮಸ್ಯೆಗಳಿವೆಯೇ ಎಂದು ಪರಿಶೀಲಿಸುವುದು, ಸೂಕ್ತ ಶಿಕ್ಷಣ ಒದಗಿಸುವುದು – ಇವೆಲ್ಲವೂ ಮಗುವಿನ ಸಹಜ ವಿಕಸನಕ್ಕೆ ಕಾರಣವಾಗುತ್ತದೆ. ಇದು ಮೊದಲನೆಯದು.

ಎರಡನೆಯದು, ಆಕೆ ಯಾವ ಮನಸ್ಥಿತಿಯನ್ನು ಹಾದು ಹೋಗುತ್ತಿದ್ದಾಳೆಯೋ ಅದನ್ನು ಸರಿಪಡಿಸುವುದು. ಹಾರ್ಮೋನ್ ಬದಲಾವಣೆಗಳಿದ್ದರೆ ಸೂಕ್ತ ಚಿಕಿತ್ಸೆ ಕೊಡಿಸುವುದು, ಮನಸ್ಥಿತಿಯನ್ನು ಬದಲಾಯಿಸಲು ಕೌಶಲ್ಯಪೂರ್ಣ ಚಟುವಟಿಕೆಗಳಲ್ಲಿ ತೊಡಗಿಸುವುದು ಇತ್ಯಾದಿ.

ಬಹುತೇಕ ಹುಡುಗಿಯರಿಗೆ ಸಂಪನ್ಮೂಲದ್ದೇ ಕೊರತೆ. ಹುಡುಗರಿಗೆ ಈ ಸಮಸ್ಯೆ ಇರುವುದಿಲ್ಲ. ನೀವು ಆಗ ಹೇಳಿದಂತೆ ಅವರಿಗೆ ಕುಟುಂಬದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದರಿಂದ ಇಂಥ ಸಮಸ್ಯೆಗಳನ್ನು ಅವರು ಅನುಭವಿಸಬೇಕಾಗುವುದಿಲ್ಲ. ಆದ್ದರಿಂದ ಹೆಣ್ಣುಮಕ್ಕಳ ಭಾವನಾತ್ಮ ತುಮುಲಗಳನ್ನು ನಿಭಾಯಿಸಲು ಕಲಿಸುವುದು ಕೂಡ ಮುಖ್ಯವಾಗುತ್ತದೆ. ಸೂಕ್ಷ್ಮ ಸನ್ನಿವೇಶಗಳಲ್ಲಿ ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳಲು ಅವಳು ಕಲಿಯಬೇಕಾಗುತ್ತದೆ. ಮತ್ತು ಅಂತಹ ಕಲಿಕೆಗೆ, ಸಾಮರ್ಥ್ಯ ಬೆಳೆಸಿಕೊಳ್ಳಲಿಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಕುಟುಂಬದ ಸದಸ್ಯರ ಕರ್ತವ್ಯವಾಗಿರುತ್ತದೆ.

ಹಾಗೆಯೇ ಗರ್ಭಧಾರಣೆಯ ಸಂದರ್ಭದಲ್ಲಿ ಕೂಡಾ ಮಹಿಳೆಯು ಮಾನಸಿಕ ಸಿದ್ಧತೆ ನಡೆಸುವ ಅಗತ್ಯವಿದೆ. ಮಾನಸಿಕ ಅಸ್ವಸ್ಥತೆಯಿರುವ ಹೆಣ್ಣು ಕೂಡಾ ಗರ್ಭಧಾರಣೆ ಮಾಡಬಹುದು. ಅದಕ್ಕಾಗಿ ಆಕೆ ಸೂಕ್ತ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಕುಟುಂಬದವರ ಸಹಕಾರ ದೊಡ್ಡ ಪಾತ್ರ ವಹಿಸುತ್ತದೆ.

ಮಹಿಳೆಯೇ ತಾನು ಗರ್ಭ ಧರಿಸಲು ಸಿದ್ಧವಾಗಿಲ್ಲದೆ, ಆಕೆಯ ಗಂಡ ಅಥವಾ ಆತನ ಮನೆಯವರು ಮಗುವಿಗಾಗಿ ಅವಳ ಮೇಲೆ ಒತ್ತಡ ಹಾಕಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಒತ್ತಾಯಕ್ಕೆ ಕಟ್ಟುಬಿದ್ದು ಅಥವಾ ಹೆದರಿಕೆಯಿಂದ ಗರ್ಭ ಧರಿಸಿದ ಮಹಿಳೆ ಮಾನಸಿಕವಾಗಿ ಕುಗ್ಗುತ್ತಾ ಸಾಗುತ್ತಾಳೆ. ಇದರಿಂದ ತಾಯಿ – ಮಗು ಇಬ್ಬರಿಗೂ ಸಮಸ್ಯೆ ಉಂಟಾಗುವ ಸಾಧ್ಯತೆಯೇ ಹೆಚ್ಚು.

ಈ ಸಂದರ್ಭದಲ್ಲಿ ಗಂಡ ತನ್ನ ಜವಾಬ್ದಾರಿಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಮನೆಯವರನ್ನು ಸಮಾಧಾನಪಡಿಸಿ, ತನ್ನ ಹೆಂಡತಿಯ ಕಾಳಜಿಯನ್ನೂ ವಹಿಸುವುದು ಈ ಸಂದರ್ಭದಲ್ಲಿ ಅವನ ಕರ್ತವ್ಯವಾಗಿರುತ್ತದೆ.

ಎಸ್.ಬಿ : ಇಷ್ಟು ಹೊತ್ತು ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಡಾಕ್ಟರ್. ನಮ್ಮ ಓದುಗರಿಗೆ / ನೋಡುಗರಿಗೆ ನೀವು ವೀಶೇಷವಾಗಿ ನೀಡಬಯಸುವ ಸಂದೇಶವೇನಾದರೂ ಇದೆಯೇ?

ಪಿ.ಸಿ : ಪ್ರತಿಯೊಬ್ಬರೂ ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಅವರಿಗೆ ಅದನ್ನು ಖಾತ್ರಿಪಡಿಸುವ ಜವಾಬ್ದಾರಿ ಹೊರಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಮುಖ್ಯವಾಗಿ ಪುರುಷರು ಈ ಜವಾಬ್ದಾರಿ ಹೊತ್ತುಕೊಳ್ಳಬೇಕು.

ಏಕೆಂದರೆ ಮಹಿಳೆಯರು ಪುರುಷರ ಬದುಕಿನ ಮುಖ್ಯ ಭಾಗವೇ ಆಗಿದ್ದಾರೆ. ಮತ್ತು ಪುರುಷರು ಮಹಿಳೆಯರ ಸಮಸ್ಯೆಗಳ ಮುಖ್ಯ ಕಾರಣಗಳಲ್ಲೊಂದಾಗಿದ್ದಾರೆ. ಮಹಿಳೆಯರು ತಮ್ಮ ಸಮಸ್ಯೆಗಳನ್ನು ಕುಟುಂಬದ ಪುರುಷರ ಬಳಿಯೇ ಹೇಳಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಸ್ಪಂದಿಸುವಲ್ಲಿ, ಪ್ರತಿಕ್ರಿಯಿಸುವಲ್ಲಿ ಪುರುಷರು ಸೂಕ್ಷ್ಮವಾಗಿರಬೇಕಾಗುತ್ತದೆ. ಗಂಡ, ಮಗ,ತಂದೆ, ಅಣ್ಣ – ಯಾವುದೇ ಸಂಬಂಧವಿರಲಿ; ಕುಟುಂದ ಮಹಿಳೆಯರ ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೂಕ್ಷ್ಮವಾಗಿ ಮತ್ತು ಜವಾಬ್ದಾರಿಯಿಂದ ವರ್ತಿಸುವುದನ್ನು ರೂಢಿಸಿಕೊಳ್ಳಬೇಕು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org