ಸಂದರ್ಶನ: ಒತ್ತಡವು ಸ್ತನ್ಯಪಾನದ ಮೇಲೆ ಪರಿಣಾಮ ಬೀರುತ್ತದೆಯೇ?

ಮಗುವಿಗೆ ಹಾಲುಣಿಸುವ ದಿನಗಳಲ್ಲಿ ಮಹಿಳೆಯು ಎದುರಿಸುವ ಸವಾಲುಗಳು ಮತ್ತು ಸಮಸ್ಯೆಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಹಾಲೂಡುವ ತಾಯಂದಿರು ಅನುಭವಿಸುವ ಈ ಒತ್ತಡವು ಸ್ತನ್ಯಪಾನದ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಸ್ಥಿತಿಯನ್ನು ನಿರ್ವಹಿಸಲು ಕುಟುಂಬದವರು ಹಾಲೂಡುವ ತಾಯಿಗೆ ಸೂಕ್ತ ಬೆಂಬಲ ನೀಡಬೇಕು ಮತ್ತು ನೆರವಾಗಬೇಕು ಎಂದು ಲ್ಯಾಕ್ಟೇಷನ್ ಕನ್ಸಲ್ಟೆಂಟ್  ‘ತರು ಜಿಂದಾಲ್’ ಹೇಳುತ್ತಾರೆ.

“ತಾಯ್ತನವು” ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗುತ್ತದೆ. ಮಹಿಳೆಯು ತಾಯಿಯಾದ ದಿನದಿಂದ ಆಕೆಯ ಜೀವನಶೈಲಿಯಲ್ಲಿಯೂ ಬದಲಾವಣೆ ಉಂಟಾಗುತ್ತದೆ. ತಾಯ್ತನದ ಈ ಹಂತ, ಪರಿವರ್ತನೆಯ ಹಂತ. ಪ್ರತಿಯೊಬ್ಬ ಮಹಿಳೆಗೂ ಗರ್ಭಧಾರಣೆ ಹಾಗೂ ತಾಯ್ತನದ ಅನುಭವವು ವಿಭಿನ್ನವಾಗಿರುತ್ತದೆ. ಮಗುವಿಗೆ ಹಾಲುಣಿಸುವ ಪ್ರಕ್ರಿಯೆ ಕೂಡಾ ಈ ಭಿನ್ನ ಅನುಭವದ ಕಾರಣಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ತಾಯಂದಿರಿಗೆ ಎದೆ ಹಾಲೂಡಿಸುವ ಕುರಿತು ಸಾಕಷ್ಟು ತಿಳುವಳಿಕೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಮೊದಲನೆಯ ಅನುಭವವೇ ಅಹಿತಕರವಾಗಿಬಿಟ್ಟರೆ, ಕ್ರಮೇಣ ಅದು ಮಾನಸಿಕ ಒತ್ತಡಕ್ಕೆ ದಾರಿ ಮಾಡಿಕೊಡುತ್ತದೆ. ಈ ಒತ್ತಡ ತೀವ್ರಗೊಂಡು ಆಘಾತಕಾರಿಯಾಗಿ ಪರಿಣಮಿಸುವುದೂ ಉಂಟು.

ವೈಟ್ ಸ್ವಾನ್ ಫೌಂಡೇಷನ್ ಸಂಸ್ಥೆಯ ಶ್ರೀರಂಜಿತಾ ಜೆಯೂರ್ಕರ್, ಗೈನಕಾಲಿಜಿಸ್ಟ್ ಹಾಗೂ ಲ್ಯಾಕ್ಟೇಶನ್ ಕನ್ಸಲ್ಟೆಂಟ್ ಆಗಿರುವ ಡಾ.ತರುಸ್ನೇಹ ಜಿಂದಾಲ್ ಅವರೊಡನೆ, ಸ್ತನ್ಯಪಾನ ಹಾಗೂ ಮಾನಸಿಕ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಮಾಹಿತಿಪೂರ್ಣ ಸಂದರ್ಶನ ನಡೆಸಿದ್ದು, ಅದನ್ನಿಲ್ಲಿ ನೀಡಲಾಗಿದೆ:

ಬಹಳಷ್ಟು ಜನ ಎದೆ ಹಾಲುಣಿಸುವ ಪ್ರಕ್ರಿಯೆಯು ಸ್ವಾಭಾವಿಕವಾದದ್ದು ಎಂದು ತಿಳಿದಿದ್ದಾರೆ. ಮತ್ತು ಈ ಅನುಭವವನ್ನು ತಾಯಂದಿರು ಸಂತೋಷದಿಂದ ಸ್ವೀಕರಿಸುತ್ತಾರೆ ಎಂದು ಯೋಚಿಸುತ್ತಾರೆ. ಇದು ನಿಜವೇ?

ಒಂದು ಹಂತದವರೆಗೆ ಇದು ಸಹಜಪ್ರಕ್ರಿಯೆಯೇ ಆಗಿದೆ. ಬಹುತೇಕ ತಾಯಂದಿರು ಎದೆ ಹಾಲುಣಿಸುವುದನ್ನು ಇಷ್ಟಪಡುತ್ತಾರೆ ಮತ್ತು ಈ ಅನುಭವವನ್ನು ಸಂತೋಷದಿಂದಲೇ ಸ್ವೀಕರಿಸುತ್ತಾರೆ. ಆದರೆ ಅವರಲ್ಲಿ ಬಹುತೇಕರು ಇನ್ನೂ ದೈಹಿಕವಾಗಿ ಹಾಲೂಡಲು ಸಮರ್ಥರಾಗಿರುವುದಿಲ್ಲ. ಅವರಲ್ಲಿ ಹಾಲಿನ ಉತ್ಪಾದನೆ ಆಗಿರುವುದಿಲ್ಲ. ಆದ್ದರಿಂದ ಹಾಲೂಡುವ ಅವರ ಬಯಕೆ ನೋವಿನೊಂದಿಗೆ ಮುಕ್ತಾಯವಾಗುತ್ತದೆ. ವೈದ್ಯರ ಚಿಕಿತ್ಸೆ, ಸೂಕ್ತ ಮಾರ್ಗದರ್ಶನ, ಹಾಗೂ ಪರಿಣಿತರ ಸಲಹೆ ಸೂಚನೆಗಳಿಲ್ಲದೆ ಇದನ್ನು ಅನುಭವಿಸಬೇಕಾಗುತ್ತದೆ. ಮಕ್ಕಳಿಗೆ ಹಾಲೂಡಿಸುವ ಬಗ್ಗೆಯೇ ಸರಿಯಾದ ತಿಳುವಳಿಕೆ ಇಲ್ಲದೆ ಕೆಲವು ತಾಯಂದಿರು ಸಮಸ್ಯೆ ಅನುಭವಿಸುತ್ತಾರೆ. ಸ್ತನಗಳ ಊದುವಿಕೆ, ಗಾಯ, ರಕ್ತ ಸೋರುವುದೇ ಮೊದಲಾದ ತೊಂದರೆಗಳನ್ನು ಅನುಭವಿಸುತ್ತಾರೆ. ಅವರು ತಮ್ಮ ಮಕ್ಕಳಿಗೆ ಹಾಲೂಡಲು ಬಯಸುತ್ತಿದ್ದರೂ ಉಣಿಸಲು ಸಾಧ್ಯವಾಗದೆ ಹತಾಶರಾಗುತ್ತಾರೆ.

ಎದೆ ಹಾಲೂಡುವಿಕೆ ಒತ್ತಡದಾಯಕವಾಗಿರುತ್ತದೆಯೇ?

ಯಾವುದೇ ರೀತಿಯ ಪೂರ್ವಸಿದ್ಧತೆಗಳಿಲ್ಲದೆ, ಮೊದಲ ಬಾರಿ ತಾಯಿಯಾದವರಲ್ಲಿ ಹಾಲುಣಿಸುವಿಕೆಯು ತೀವ್ರ ಒತ್ತಡವನ್ನು ಉಂಟುಮಾಡುತ್ತದೆ. ನ್ಯೂಕ್ಲಿಯಾರ್ ಕುಟುಂಬಗಳೇ ಹೆಚ್ಚಾಗಿರುವ ಇಂದಿನ ಸಂದರ್ಭದಲ್ಲಿ ತಮ್ಮ ಸಂಬಂಧಿಗಳ, ಕುಟುಂಬದ ಹಿರಿಯರ ಸಹಕಾರ ದೊರಕುವುದೂ ಕಷ್ಟವಾಗಿರುತ್ತದೆ. ಗಂಡನಾದವನು ಇದು ತನಗೆ ಸಂಬಂಧಪಟ್ಟ ವಿಷಯವೇ ಅಲ್ಲವೆಂಬಂತೆ ಸಂಪೂರ್ಣ ಹೊರಗಿರುತ್ತಾನೆ. ಈ ಮೂಲಕ ಸಹಾಯಕ್ಕೆ ಇರುವ ಪ್ರಮುಖ ಆಧಾರವೂ ಕಳಚಿಹೋದಂತೆ ಆಗುತ್ತದೆ.

ಇನ್ನು, ನಮ್ಮ ಉದ್ಯೋಗಸ್ಥಳಗಳು ಎದೆ ಹಾಲೂಡಲು ಪ್ರಶಸ್ತವಾಗಿರುವುದಿಲ್ಲ. ಅದಕ್ಕೆ ಸೂಕ್ತ ಜಾಗದ ವ್ಯವಸ್ಥೆಯೂ ಇರುವುದಿಲ್ಲ. ಬಹುತೇಕವಾಗಿ ಹಾಲೂಡುವ ತಾಯಂದಿರ ಕುರಿತು ಸಹಾನುಭೂತಿಯೇ ಇರುವುದಿಲ್ಲ ಅವರಿಗೆ ಒಂದೋ ಕೆಲಸ ಬಿಟ್ಟು ಹಾಲುಣಿಸುವಂತೆ, ಇಲ್ಲವೇ ಹಾಲುಣಿಸುವುದನ್ನು ಬಿಟ್ಟು ಕೆಲಸ ಮಾಡುವಂತೆ ಸೂಚಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಲಸ ಮಾಡದೆ ಇರುವುದನ್ನು ಆಯ್ಕೆ ಮಾಡಿಕೊಂಡರೆ, ಆದಾಯದ ಕೊರತೆ ಉಂಟಾಗುತ್ತದೆ; ಮತ್ತು ಅದು ಕೂಡಾ ಒತ್ತಡಕ್ಕೆ ಕಾರಣವಾಗುತ್ತದೆ.

ಎದೆ ಹಾಲುಣಿಸುವುದು (ಅಥವಾ ಉಣಿಸದೆ ಇರುವುದು) ಮಹಿಳೆಯ ಮಾನಸಿಕ ಸ್ವಾಸ್ಥ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ?

ಹಾಲುಣಿಸುವ ಸಂದರ್ಭದಲ್ಲಿ ಉತ್ಪತ್ತಿಯಾಗುವ “ಆಕ್ಸಿಟೋಸಿನ್” ಹಾರ್ಮೋನುಗಳು ಮಹಿಳೆಯರಲ್ಲಿ ನೆಮ್ಮದಿಯ ಭಾವನೆಯನ್ನು ಉಂಟುಮಾಡುತ್ತದೆ. ಇದು ಅವಳಲ್ಲಿ  ಒತ್ತಡಗಳನ್ನು ಕಡಿಮೆ ಮಾಡಿ ಮಮಕಾರ, ಬಾಂಧವ್ಯ ಮತ್ತು ಸಂತೋಷವೇ ಮೊದಲಾದ ಸುಮಧುರ ಭಾವನೆಗಳನ್ನು ಮೂಡಿಸುತ್ತದೆ. ಹಾಲುಣಿಸಲು ಸಾಧ್ಯವಾಗದೆ ಹೋಗುವ ಸಂದರ್ಭದಲ್ಲಿ ಈ ಭಾವನೆಗಳು ಅವಳಿಂದ ದೂರವಾಗುತ್ತವೆ. ಇದರಿಂದ ದೈಹಿಕ ಸಮಸ್ಯೆಗಳು ಉಂಟಾಗಬಹುದು.  ಎದೆ ಹಾಲುಣಿಸಲು ಸಾಧ್ಯವಾಗದೆ ಇರುವ ಹತಾಶ ಮನಸ್ಥಿತಿಯು ಸಂಕುಚಿತ ಮನೋಭಾವ, ಕೀಳರಿಮೆ ಮುಂತಾದ ಮನೋವಿಕಾರಗಳಿಗೂ ಕಾರಣವಾಗಬಹುದು.

ಎದೆ ಹಾಲುಣಿಸಲು ಕಷ್ಟಪಡುತ್ತಿರುವ ಮಹಿಳೆಯರ ಪಾಡು ಎಂಥದ್ದು? ಇದರ ಭಾವನಾತ್ಮಕ ಪರಿಣಾಮಗಳೇನು ?

ತಮ್ಮ ಮಗುವಿಗೆ ಸರಿಯಾಗಿ ಹಾಲುಣಿಸಲು ಸಾಧ್ಯವಾಗುತ್ತಿಲ್ಲ ಎಂದು ನೊಂದುಕೊಳ್ಳುವ ಹಲವು ತಾಯಂದಿರನ್ನು ನಾನು ನೋಡಿದ್ದೇನೆ. ಆ ಸಮಯದಲ್ಲಿ ಸೂಕ್ತ ಬೆಂಬಲ ಸಿಗದೆ ಹೋದರೆ, ಅವರ ಮಾನಸಿಕ ಸ್ವಾಸ್ಥ್ಯದ ಮೇಲೆ ಅದು ತೀವ್ರ ಪರಿಣಾಮ ಬೀರುತ್ತದೆ.

ಎದೆ ಹಾಲುಣಿಸಲು ಬಯಸದ  ಮಹಿಳೆಯರು ತಮ್ಮ ಸುತ್ತಲಿನವರಿಂದ ಯಾವ ರೀತಿಯ ನಿಂದನೆಗಳನ್ನು ಎದುರಿಸುತ್ತಾರೆ?

ತಾಯಂದಿರು ಹಾಲುಣಿಸದೆ ಇರುವುದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹಲವಾರು ಕಾರಣಗಳಿರಬಹುದು. ತಮ್ಮ ಅನುಕೂಲಕ್ಕಾಗಿ, ತಾವು ಸ್ವತಂತ್ರವಾಗಿರಲು ಮಗುವಿಗೆ ಬಾಟಲ್ ಮೂಲಕ ಹಾಲುಣಿಸಲು ಬಯಸಬಹುದು. ಇಂತಹ ಮಹಿಳೆಯರು ಸಾಮಾನ್ಯವಾಗಿ ಸಮಾಜದಲ್ಲಿ ನಿಂದನೆಗೆ ಒಳಗಾಗುತ್ತಾರೆ. ಇದು ಅವರ ಘನತೆಗೆ ಧಕ್ಕೆಯನ್ನು ಉಂಟುಮಾಡುತ್ತದೆ. ಈ ಬಗೆಯ ಪ್ರತಿಕ್ರಿಯೆಗಳಿಂದ ಮಹಿಳೆಯು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾಳೆ. ಅವಳಲ್ಲಿ ಅಪರಾಧಿಪ್ರಜ್ಞೆ ಬೆಳೆಯುತ್ತದೆ. ಇದು ಆಕೆಯ ದೈಹಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ಪರಿಣಾಮವಾಗಿ, ಮೊದಲು ಆಕೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಒತ್ತಡವು ಮೆದುಳಿನಿಂದ ಆಕ್ಸಿಟೋನ್ ಹಾರ್ಮೋನ್ ಬಿಡುಗಡೆಯಾಗದಂತೆ ತಡೆಯುತ್ತದೆ. ಇದು ಆಕೆಯಿಂದ ಹಿತಕರ ಭಾವನೆಗಳನ್ನು ಕಸಿಯುತ್ತದೆ ಮತ್ತು ವ್ಯಗ್ರಳನ್ನಾಗಿಸುತ್ತದೆ. ಆದ್ದರಿಂದ ಹೊಸ ತಾಯಂದಿರಿಗೆ ಅವರ ಆಯ್ಕೆಗಳು ಉಂಟುಮಾಡುವ ಪರಿಣಾಮಗಳ ಕುರಿತು ತಿಳಿಸಿ ಹೇಳುವುದು ಅತ್ಯಗತ್ಯ. ಅವರು ತಮ್ಮ ಮಗುವಿಗೆ ಎದೆ ಹಾಲುಣಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ನಿಭಾಯಿಸಲು ಮಾನಸಿಕವಾಗಿ ಸಿದ್ಧವಾಗಿರಬೇಕಾಗುತ್ತದೆ.

ಕೆಲವು ತಾಯಂದಿರಲ್ಲಿ ಮಗುವಿಗೆ ಬೇಕಾಗುವಷ್ಟು ಹಾಲು ಉತ್ಪತ್ತಿಯಾಗುವುದಿಲ್ಲ. ಆಗ ಏನು ಮಾಡಬೇಕು ?

ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿನ ಕೆಲವು ಶಿಷ್ಟಾಚಾರಗಳಿಂದಾಗಿ, ಹೆರಿಗೆಯಾದ ಕೂಡಲೇ ಮಗುವನ್ನು ತಾಯಿಯಿಂದ ಬೇರ್ಪಡಿಸಲಾಗುತ್ತದೆ. ಕೆಲವೊಮ್ಮೆ ಆ ಕ್ಷಣದಲ್ಲಿ ತಾಯಿಗೆ ಮಗುವನ್ನು ಮುಟ್ಟಲು ಬಿಡುವುದಿಲ್ಲ. ಆಸ್ಪತ್ರೆಯ ನಿಯಮಾವಳಿಗಳ ಪ್ರಕಾರ ಕೆಲವು ಪ್ರಕ್ರಿಯೆಗಳನ್ನು ಪೂರೈಸಲು ಮಗುವನ್ನು ಕರೆದೊಯ್ಯಲಾಗುತ್ತದೆ. ಇದರ ಪರಿಣಾಮವಾಗಿ ಸಹಜವಾಗಿ ನಡೆಯಬೇಕಿರುವ ‘ಹಾಲೊಡೆಯುವ’ ಕ್ರಿಯೆ ನಡೆಯುವುದಿಲ್ಲ.

ಹೆರಿಗೆಯಾದ ನಂತರ, ಒಂದು ಗಂಟೆ ಅವಧಿಯೊಳಗೆ ತಾಯಿಯ ಮೊಲೆಯಲ್ಲಿ ಹಾಲೊಡೆಯುತ್ತದೆ (ಸ್ರವಿಸಲು ಆರಂಭವಾಗುತ್ತದೆ). ಆದರೆ ಮೇಲೆ ಹೇಳಿದ ಕಾರಣಗಳಿಂದಾಗಿ ಮಗು ಬಳಿ ಇರದೆ, ಹಾಲೊಡೆಯುವ ಪ್ರಕ್ರಿಯೆ ತಡವಾಗುತ್ತದೆ. ಸಿಝೇರಿಯನ್ ಆದ ಮಹಿಳೆಯರಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು.

ಮಗುವಿನ ಜನನ ಹೇಗೇ ಆಗಿರಲಿ, ಪ್ರಾರಂಭದಲ್ಲಿಯೇ ಮಾಡುವ ಈ ಒಂದು ತಪ್ಪಿನಿಂದಾಗಿ ಆ ಮಹಿಳೆಯಲ್ಲಿ ಬೇಸರ, ಹತಾಶೆಯ ಮನೋಭಾವ ಮೂಡುತ್ತದೆ.

ಈ ನಿಟ್ಟಿನಲ್ಲಿ ಆಸ್ಪತ್ರೆಯ ನಿಯಮಗಳು, ಶಿಷ್ಟಾಚಾರಗಳು ಸಡಿಲಗೊಳ್ಳಬೇಕೆಂಬುದು ನನ್ನ ಅನ್ನಿಸಿಕೆ. ಇದರಿಂದ ನಾವು ತಾಯಂದಿರ ಮಾನಸಿಕ ಒತ್ತಡವನ್ನು ಭಾಗಷಃ ಕಡಿಮೆ ಮಾಡಬಹುದು. ಆಸ್ಪತ್ರೆಗಳು “ಎದೆ ಹಾಲೂಡುವ” ಪ್ರಕ್ರಿಯೆಗೆ ಮಹತ್ವ ನೀಡಬೇಕು. ಅದಕ್ಕಾಗಿ, ಹೆರಿಗೆಯಾದ ಕೂಡಲೇ ಮಗುವನ್ನು ತಾಯಿಯ ಬಳಿಯೇ ಬಿಡಬೇಕು. ಮತ್ತು ತಾಯಿಯು ತನ್ನ ಮಗುವಿಗೆ ಎದೆ ಹಾಲುಣಿಸಲು ಪ್ರೋತ್ಸಾಹಿಸಬೇಕು.

ಎದೆ ಹಾಲುಣಿಸುವ ತಾಯಿಯ ಮಾನಸಿಕ ಸ್ವಾಸ್ಥ್ಯ ಕ್ಷೇಮವಾಗಿರುವಂತೆ ಕುಟುಂಬ ವರ್ಗ ಹಾಗೂ ಆಕೆಯ ಸಂಗಾತಿಯು ಹೇಗೆ ನೆರವಾಗಬೇಕು ?

ಕುಟುಂಬದವರು ಅಥವಾ ಪತಿಯು ಸಣ್ಣಪುಟ್ಟ ಸಹಾಯಗಳ ಮೂಲಕ ಆಕೆಗೆ ನೆರವಾಗಬೇಕು. ಬಟ್ಟೆ ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು ಅಥವಾ ಮಗುವನ್ನು ಸಮಾಧಾನಗೊಳಿಸುವುದು, ಮಲಗಿಸುವುದು ಮುಂತಾದ ಕಾರ್ಯಗಳಲ್ಲಿ ಅವಳಿಗೆ ನೆರವಾಗಬೇಕು. ಸೂಕ್ತ ಬೆಂಬಲದ ಕೊರತೆಯಿಂದಾಗಿ ಹಾಲೂಡುವ ತಾಯಿಯ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಹೆಚ್ಚಿನ ಕೆಲಸಕಾರ್ಯಗಳು ಮತ್ತು ಕಡಿಮೆ ನಿದ್ರೆಯಿಂದಾಗಿ ಅವಳು ದಣಿಯುತ್ತಾಳೆ. ಇದರಿಂದ ಅವಳು ಹಾಲುಣಿಸುವುದನ್ನು ಬೇಗನೆ ನಿಲ್ಲಿಸಿಬಿಡಬಹುದು. ಹಾಗೂ ಎದೆಹಾಲೂಡುವ ಬದಲು ಪರ್ಯಾಯ ವ್ಯವಸ್ಥೆ ಮಾಡಲು ಪ್ರಯತ್ನಿಸಬಹುದು. ಈ ತೀರ್ಮಾನವು ತಾಯಿ ಹಾಗೂ ಮಗು ಇಬ್ಬರ ದೃಷ್ಟಿಕೋನದಿಂದಲೂ ಆರೋಗ್ಯಕರವಲ್ಲ.

ಹಾಗಾಗದಂತೆ ತಡೆಯುವಲ್ಲಿ ಪತಿಯ ಪಾತ್ರ ಗಮನಾರ್ಹವಾದದ್ದು. ಕುಟುಂಬದವರು ಅದರ ಬಗ್ಗೆ ಅವನಿಗೆ ಅರಿವಿಲ್ಲ, ಅವನಿಂದ ನೆರವು ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿ ಅವನನ್ನು ದೂರವಿಡಬಹುದು. ಇಂತಹ ಸಂದರ್ಭದಲ್ಲಿ ಅವಳಿಗೆ ತನ್ನ ಸಂಗಾತಿಯ ನೆರವು ಅಗತ್ಯವಾಗಿರುತ್ತದೆ. ಆದರೆ ಅವಳು  ಕುಟುಂಬದ ಸದಸ್ಯರ ಹಸ್ತಕ್ಷೇಪದಿಂದಾಗಿ ಅದರಿಂದ ವಂಚಿತಳಾಗುತ್ತಾಳೆ. ತಂದೆಯೂ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡು ನೆರವಾದರೆ, ಮಹಿಳೆಯು ನಿಶ್ಚಿಂತೆಯಿಂದ ಎದೆ ಹಾಲುಣಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತಾಳೆ. ಮತ್ತು ಅದರ ಸಕಾರಾತ್ಮಕ ಫಲಿತಾಂಶವನ್ನು ತಾಯಿ – ಮಗು ಇಬ್ಬರೂ ಅನುಭವಿಸುತ್ತಾರೆ.

ತರು ಜಿಂದಾಲ್ Lactation Matters ಎಂಬ Facebook page ಅನ್ನು ನಿರ್ವಹಿಸುವ ಮೂಲಕ ತಾಯಂದಿರಲ್ಲಿ ಸ್ತನಪಾನದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಎದೆ ಹಾಲುಣಿಸುವ ತಾಯಂದಿರಿಗೆ ಬೆಂಬಲ ನೀಡಲು ಒಂದು ವಾಟ್ಸಪ್ ಗ್ರೂಪ್ ಕೂಡಾ ನಿರ್ವಹಿಸುತ್ತಿದ್ದಾರೆ. ಅವರನ್ನು tarujindal@yahoo.co.uk - ಮೇಲ್ ಐಡಿ ಮೂಲಕ ಸಂಪರ್ಕಿಸಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org